samachara
www.samachara.com
‘ಅಯ್ಯೋ ರಾಮ!’: ಅಡ್ವಾಣಿಯನ್ನೇ ಮರೆತ ಮೋದಿಗೆ ದೇವೇಗೌಡರೆಲ್ಲಿ ನೆನಪಾಗುತ್ತಾರೆ?
COVER STORY

‘ಅಯ್ಯೋ ರಾಮ!’: ಅಡ್ವಾಣಿಯನ್ನೇ ಮರೆತ ಮೋದಿಗೆ ದೇವೇಗೌಡರೆಲ್ಲಿ ನೆನಪಾಗುತ್ತಾರೆ?

ತಿರುಗುತ್ತಿರುವ ಕಾಲದ ಚಕ್ರದಲ್ಲಿ ಯಾರೂ ಒಂದೇ ಕಡೆ ಉಳಿಯಲಂತೂ ಸಾಧ್ಯವಿಲ್ಲ, ಮೋದಿಯೂ ಕೂಡಾ.

ಪ್ರಧಾನಮಂತ್ರಿ ನರೇಂದ್ರ ಮೋದಿ ತೆರದ ಜೀಪ್‌ನಲ್ಲಿ 4.9 ಕಿ.ಮೀ. ನಿಂತು ಪ್ರಯಾಣ ಮಾಡಿ ಎಡಕ್ಕೂ ಬಲಕ್ಕೂ ಕೈ ಬೀಸುತ್ತಾ ದೇಶದ ಅತೀ ಉದ್ದದ ರೈಲು- ರಸ್ತೆ ಸೇತುವೆಯನ್ನು ಮಂಗಳವಾರ ಉದ್ಘಾಟನೆ ಮಾಡಿದ್ದಾರೆ. ಇದು ದೇಶದ ಅತೀ ಉದ್ದದ ರೈಲು- ರಸ್ತೆ ಸೇತುವೆ ಎಂಬ ಕಾರಣಕ್ಕೆ ಈ ಸೇತುವೆಯ ಬಗ್ಗೆ ಸುಮಾರು ಒಂದು ವಾರದಿಂದಲೇ ಸುದ್ದಿ ಸದ್ದಾಗುತ್ತಿದೆ.

ಜನಪ್ರಿಯತೆಯನ್ನು ಅತಿಯಾಗಿಯೇ ಮೇಮೇಲೆ ಹೇರಿಕೊಳ್ಳುವ ಮೋದಿ ಸಹಜವಾಗಿಯೇ ತೆರೆದ ಜೀಪ್‌ನಲ್ಲಿ ಸಾಗುತ್ತಾ ಜನರಿಲ್ಲದ ಕಡೆಯೂ ಅತ್ತಿಂದಿತ್ತ ಕೈ ಬೀಸುತ್ತಾ ತಮ್ಮ ಬೆನ್ನ ಹಿಂದಿದ್ದ ಕ್ಯಾಮೆರಾಗಳಿಗೆ ಫೋಸ್‌ ಕೊಟ್ಟಿದ್ದಾರೆ. ಹಾಗೆಯೇ ಉದ್ಘಾಟನೆಯ ಭಾಷಣದಲ್ಲಿ ಈ ಸೇತುವೆ ಕಾಮಗಾರಿ ಮುಗಿಯಲು ಹೆಚ್ಚು ಸಮಯ ಹಿಡಿದ ಬಗ್ಗೆ ಹಿಂದಿದ್ದ ಸರಕಾರವನ್ನು ಮೂದಲಿಸಿದ್ದಾರೆ.

ಅತ್ತ ಬ್ರಹ್ಮಪುತ್ರಾ ನದಿಯ ಮೇಲಿನ ಸೇತುವೆಯಲ್ಲಿ ಮೋದಿ ಕೈ ಬೀಸುತ್ತಿದ್ದರೆ ಇತ್ತ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಮೋದಿ ನಡೆಯ ವಿರುದ್ಧ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. “ಅಯ್ಯೋ ರಾಮ, ನಾವು ಮಾಡಿದ ಕೆಲಸವನ್ನ ಯಾರಪ್ಪಾ ನೆನೆಸ್ತಾರೆ” ಎಂದಿರುವ ದೇವೇಗೌಡರು ತಾವು ಮಾಡಿರುವ ಕೆಲಸವನ್ನು ಜನ ಮರೆತಿದ್ದಾರೆ ಎಂಬ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.

ಸೇತುವೆ ಮೇಲೆ ಕ್ಯಾಮೆರಾಗಳಿಗೆ ಫೋಸ್‌ ನೀಡಿದ ಮೋದಿ
ಸೇತುವೆ ಮೇಲೆ ಕ್ಯಾಮೆರಾಗಳಿಗೆ ಫೋಸ್‌ ನೀಡಿದ ಮೋದಿ

“ಕಾಶ್ಮೀರ ರೈಲು, ದೆಹಲಿ ಮೊಟ್ರೊ, ಈಗ ಉದ್ಘಾಟನೆಯಾದ ಸೇತುವೆಗೆ ನಾನು ಪ್ರಧಾನಿಯಾಗಿದ್ದ ಕಾಲದಲ್ಲಿ ಹಣ ಮಂಜೂರು ಮಾಡಿ, ಕೆಲಸ ಶುರು ಮಾಡಿಸಿದ್ದೆ. ಅನೇಕರು ಅದನ್ನೆಲ್ಲಾ ಮರೆತಿದ್ದಾರೆ. ಈಗ ಯಾರು ಅದನ್ನೆಲ್ಲಾ ನೆನಪಿಸಿಕೊಳ್ಳುತ್ತಾರೆ?” ಎಂದಿದ್ದಾರೆ.

“ದೇವೇಗೌಡ ಬಾಂಬೆ ಕರ್ನಾಟಕಕ್ಕೆ ಏನೂ ಮಾಡಿಲ್ಲ ಎಂದು ಕೆಲವರು ಮಾತನಾಡುತ್ತಾರೆ. ಅವರು ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಅನಗವಾಡಿ ಸೇತುವೆ ನೋಡಿಕೊಂಡು ಬರಲಿ. ಹಾಸನ- ಮೈಸೂರು ಯೋಜನೆಯನ್ನು 13 ತಿಂಗಳಿಗೆ ಮುಗಿಸಿದ್ದೆ. ನನ್ನ ಕಾಲದಲ್ಲಿ ಇಂಥ ಎಷ್ಟೋ ಕೆಲಸಗಳು ನಡೆದಿವೆ. ಆದರೆ, ಯಾರೂ ಈಗ ಅದನ್ನೆಲ್ಲಾ ನೆನಪಿಸಿಕೊಳ್ಳುವುದಿಲ್ಲ” ಎಂದು ದೇವೇಗೌಡರು ಬೇಸರ ಹೊರ ಹಾಕಿದ್ದಾರೆ.

1997ರಲ್ಲಿ ದೇವೇಗೌಡ ಪ್ರಧಾನಿಯಾಗಿದ್ದ ಸಮಯದಲ್ಲಿ ಬೋಗಿಬೀಲ್‌ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಸೇತುವೆಗೆ ಅಡಿಗಲ್ಲಿಟ್ಟ ಮಾಜಿ ಪ್ರಧಾನಿ ದೇವೇಗೌಡರನ್ನು ಸೌಜನ್ಯಕ್ಕಾದರೂ ಮೋದಿ ಸರಕಾರ ಉದ್ಘಾಟನೆಗೆ ಕರೆಯಬಹುದಿತ್ತು. ಆದರೆ, ಸೇತುವೆ ಉದ್ಘಾಟನೆಯಲ್ಲೂ ಒನ್‌ ಮ್ಯಾನ್ ಶೋ ನಡೆಸಿದ ಮೋದಿ ಸೇತುವೆ ನಿರ್ಮಾಣದ ಸಂಪೂರ್ಣ ಕ್ರೆಡಿಟ್‌ ಅನ್ನು ತಾವೇ ತೆಗೆದುಕೊಳ್ಳಬೇಕೆಂಬ ಹಾಗೆ ನಡೆದುಕೊಂಡಿದ್ದಾರೆ.

ತಮ್ಮನ್ನು ಸೇತುವೆ ಉದ್ಘಾಟನೆಗೆ ಆಹ್ವಾನಿಸದ ಬಗ್ಗೆ ದೇವೇಗೌಡರೇನೋ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಆದರೆ, ಮೋದಿ ತಮ್ಮ ಜತೆಗೇ ಇರುವ ಬಿಜೆಪಿಯ ಹಿರಿಯ ಮುಖಂಡ ಎಲ್‌.ಕೆ. ಅಡ್ವಾಣಿ ಅವರನ್ನೇ ಸೈಡ್‌ ಲೈನ್‌ ಮಾಡುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ. ಈ ಹಿಂದೆ ಹಲವು ವೇದಿಕೆಗಳನ್ನು ಅಡ್ವಾಣಿ ಅವರನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ನಡೆಸಿಕೊಂಡಿರುವ ಮೋದಿ, ಮೊನ್ನೆ ಕೂಡಾ ತನ್ನ ಹಳೆಯ ವರ್ತನೆಯನ್ನು ಪುನರಾವರ್ನತೆ ಮಾಡಿದ್ದಾರೆ.

ಮೋದಿ ಎದುರು ಕೈ ಜೋಡಿಸಿ ನಿಂತಿರುವ ಅಡ್ವಾಣಿ
ಮೋದಿ ಎದುರು ಕೈ ಜೋಡಿಸಿ ನಿಂತಿರುವ ಅಡ್ವಾಣಿ

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನೆನಪಿಗೆ ನೂರು ರೂಪಾಯಿಯ ನಾಣ್ಯ ಬಿಡುಗಡೆ ಸಮಾರಂಭಕ್ಕೆ ಆಹ್ವಾನಿಸಲಾಗಿದ್ದ ಬಿಜೆಪಿಯ ಹಿರಿಯ ಮುಖಂಡ ಅಡ್ವಾಣಿ ಜತೆಗೆ ತೋರಿಕೆಗೆಂಬಂತೆ ಮಾತನಾಡಿದ ಮೋದಿ ನಡೆಯನ್ನು ಹಲವರು ವಿರೋಧಿಸಿದ್ದಾರೆ. ಜೀವಂತವಾಗಿರದ ಬಿಜೆಪಿ ಮುಖಂಡ ವಾಜಪೇಯಿ ಬಗ್ಗೆ 15 ನಿಮಿಷಕ್ಕೂ ಹೆಚ್ಚು ಹೊತ್ತು ಮಾತನಾಡಿದ ಮೋದಿ, ಜೀವಂತವಿರುವ ಹಿರಿಯ ಬಿಜೆಪಿ ಮುಖಂಡ ಅಡ್ವಾಣಿ ಜತೆಗೆ ಕಾರ್ಯಕ್ರಮ ಮುಗಿಸಿ ಎದ್ದು ಹೊರಡುವ ವೇಳೆಗೆ 10 ಸೆಂಕೆಡ್‌ಗೂ ಕಡಿಮೆ ನಾಮಕಾವಸ್ಥೆಯ ಮಾತುಕತೆ ನಡೆಸಿದ್ದಾರೆ.

ಮೋದಿ ಅಡ್ವಾಣಿ ಅವರನ್ನು ಮೂಲೆ ಗುಂಪು ಮಾಡಿರುವುದು ಇದೇ ಮೊದಲೇನಲ್ಲ. ವಿಧಾನಸಭೆಯ ಹಲವು ಪ್ರಚಾರ ಸಭೆಗಳಲ್ಲಿ, ಹಲವು ರಾಷ್ಟ್ರೀಯ ಕಾರ್ಯಕ್ರಮಗಳ ವೇದಿಕೆಯಲ್ಲಿ, ಪಕ್ಷದ ಸಮಾವೇಶಗಳಲ್ಲಿ – ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಮೋದಿ ಅಡ್ವಾಣಿ ಅವರನ್ನು ಕಡೆಗಣಿಸುತ್ತಲೇ ಬರುತ್ತಿದ್ದಾರೆ. ಒಂದು ಕಾಲದಲ್ಲಿ ಅಡ್ವಾಣಿ ಮೈಕ್‌ಗೆ ಸ್ಪೀಕರ್‌ ಹಿಡಿದು ನಿಲ್ಲುತ್ತಿದ್ದ ಇದೇ ಮೋದಿ ಈಗ ಬಿಜೆಪಿಯ ಹಿರಿಯ ಅಡ್ವಾಣಿಗೆ ಕೊಡುತ್ತಿರುವುದು ಕಡೆಗಣನೆಯ ಮರ್ಯಾದೆ.

ಅಡ್ವಾಣಿಗೆ ಸಹಾಯಕನಂತಿದ್ದ ಮೋದಿ
ಅಡ್ವಾಣಿಗೆ ಸಹಾಯಕನಂತಿದ್ದ ಮೋದಿ

Also read: ತಮ್ಮದೇ ಪಕ್ಷದ ಹಿರಿಯರನ್ನು ಕಂಡರೆ ಪ್ರಧಾನಿ ಮೋದಿಗೇಕೆ ಈ ಪರಿ ಅಸಮಾಧಾನ?

ಗುಜರಾತ್‌ನಲ್ಲಿ ವಲ್ಲಭಭಾಯ್‌ ಪಟೇಲ್‌ ಪ್ರತಿಮೆ ಉದ್ಘಾಟನೆ ವೇಳೆಯೂ ಮೋದಿ ಹೀಗೆಯೇ ಒನ್‌ ಮ್ಯಾನ್‌ ಶೋ ನಡೆಸಿದ್ದರು. ಗುಜರಾತ್‌ನ ರಾಜ್ಯಪಾಲ, ಬಿಜೆಪಿಯ ಹಿರಿಯ ಮುಖಂಡ ಓಂ ಪ್ರಕಾಶ್ ಕೊಹ್ಲಿ ಅವರನ್ನು ಮೋದಿ ನಿರ್ಲಕ್ಷ್ಯಿಸಿದ್ದೂ ಸುದ್ದಿಯಾಗಿತ್ತು. ಖುದ್ದು ಬಿಜೆಪಿ ಹಾಗೂ ಸಂಘ ಪರಿವಾರದ ಕೆಲವರು ಮೋದಿಯ ಈ ನಡೆಯನ್ನು ಟೀಕಿಸಿದ್ದರು. ಆದರೆ, ಇಂಥ ಟೀಕೆಗಳೆಲ್ಲಾ ಮೋದಿ ಮನಸ್ಸಿನೊಳಕ್ಕೆ ಇಳಿಯುವಂತೆ ಕಾಣುತ್ತಿಲ್ಲ.

ಕಣ್ಣ ಮುಂದೆಯೇ ಇರುವ ತಮ್ಮದೇ ಪಕ್ಷದ ಹಿರಿಯ ಮುಖಂಡರನ್ನೇ ಕಡೆಗಣಿಸುತ್ತಿರುವ ಮೋದಿಗೆ 20 ವರ್ಷದ ಹಿಂದೆ ಸೇತುವೆಗೆ ಅಡಿಗಲ್ಲಿಟ್ಟ ದೇವೇಗೌಡರು ನೆನಪಾಗದೇ ಇರುವುದು ಆಶ್ಚರ್ಯವೇನಲ್ಲ. ಅಧಿಕಾರ ಶಾಶ್ವತ ಎಂದು ಭಾವಿಸಿದ ಜಗತ್ತಿನ ಎಲ್ಲಾ ನಾಯಕರೂ ಒನ್‌ ಮ್ಯಾನ್‌ ಶೋ ನಡೆಸಲು ಹೊರಟು ಭೂತಕಾಲದ ದೂಳಿನಲ್ಲಿ ಸೇರಿಹೋಗಿದ್ದಾರೆ. ಇಂದು ಅಡ್ವಾಣಿ, ದೇವೇಗೌಡರಿಗೆ ಮೋದಿ ನೀಡುತ್ತಿರುವ ಮರ್ಯಾದೆಯನ್ನು ನಾಳೆ ಮತ್ತೊಬ್ಬ ನಾಯಕ ಮೋದಿಗೆ ನೀಡುವ ಕಾಲವೂ ಬರಬಹುದು. ತಿರುಗುತ್ತಿರುವ ಕಾಲದ ಚಕ್ರದಲ್ಲಿ ಯಾರೂ ಒಂದೇ ಕಡೆ ಉಳಿಯಲಂತೂ ಸಾಧ್ಯವಿಲ್ಲ, ಮೋದಿಯೂ ಕೂಡಾ.