ಎನ್‌ಕೌಂಟರ್‌ಗಳಿಲ್ಲದ ರಾಜ್ಯದಲ್ಲಿ ಶೂಟೌಟ್ ಹೇಳಿಕೆ; ಇದು ಕುಮಾರಸ್ವಾಮಿ ಹಳೇ ಚಾಳಿ!
COVER STORY

ಎನ್‌ಕೌಂಟರ್‌ಗಳಿಲ್ಲದ ರಾಜ್ಯದಲ್ಲಿ ಶೂಟೌಟ್ ಹೇಳಿಕೆ; ಇದು ಕುಮಾರಸ್ವಾಮಿ ಹಳೇ ಚಾಳಿ!

ಕುಮಾರಸ್ವಾಮಿ ಕೊಲೆಗಡುಕರನ್ನು ಎನ್‌ಕೌಂಟರ್‌ ಮಾಡಿ ಎಂದು ಹೇಳುತ್ತಿರುವುದು ಇದೇ ಮೊದಲೇನಲ್ಲ. 2017ರ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಜೆಡಿಎಸ್‌ನ ಮಾಜಿ ಕಾರ್ಪೊರೇಟರ್ ಗೋವಿಂದೇಗೌಡ ಕೊಲೆಯಾಗಿತ್ತು. ಆ ಕೊಲೆಗೆ ಪ್ರತಿಕ್ರಿಯಿಸಿದ್ದ...

ಮಂಡ್ಯದ ಜೆಡಿಎಸ್ ಮುಖಂಡ ಟಿ. ಪ್ರಕಾಶ್ ಕೊಲೆಯ ಬಳಿಕ ಮಾಧ್ಯಮಗಳ ಕ್ಯಾಮೆರಾ ಮುಂದೆಯೇ ಫೋನ್ನಲ್ಲಿ ಮಾತನಾಡುತ್ತಾ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, “ಕೊಲೆ ಮಾಡಿದವರನ್ನು ಶೂಟೌಟ್ ಮಾಡಿ, ತಲೆಕೆಡಿಸಿಕೊಳ್ಳಬೇಡಿ” ಎಂದು ಪೊಲೀಸ್ ಅಧಿಕಾರಿಗೆ ಹೇಳುತ್ತಿರುವ ವಿಡಿಯೊ ವಿವಾದ ಸೃಷ್ಟಿಸಿದೆ. ಮುಖ್ಯಮಂತ್ರಿಯೊಬ್ಬರು ತಮ್ಮ ಪಕ್ಷದ ಮುಖಂಡನ ಕೊಲೆಗೆ ಆರೋಪಿಗಳನ್ನು ನಿರ್ದಯವಾಗಿ ಶೂಟೌಟ್ ಮಾಡಿ ಎಂದು ಆದೇಶಿಸುತ್ತಿರುವುದು ಎಷ್ಟು ಸರಿ ಎಂಬ ಚರ್ಚೆ ಎದ್ದಿದೆ.

ವರ್ಷಾಂತ್ಯದಲ್ಲಿ ಗಟ್ಟಿ ಸುದ್ದಿಗಳಿಲ್ಲದೆ ಪರದಾಡುತ್ತಿರುವ ಸಮಯದಲ್ಲಿ ತಮ್ಮ ಈ ಮಾತು ರಾಷ್ಟ್ರೀಯ ಮಟ್ಟದಲ್ಲಿ ವಿವಾದದ ಕೇಂದ್ರಕ್ಕೆ ಬಂದಾಗ, “ಕೊಲೆಯಾದ ಪ್ರಕಾಶ್ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಕಾನೂನು ಪ್ರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಈ ಪ್ರಕರಣ ಕುರಿತು ಮಾಹಿತಿ ಪಡೆಯುವ ಸಂದರ್ಭದಲ್ಲಿ ಬಳಸಿದ ಪದ ಭಾವನಾತ್ಮಕ ಪ್ರತಿಕ್ರಿಯೆಯೇ ಹೊರತು, ಆದೇಶವಲ್ಲ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

ಹಾಗೆ ನೋಡಿದರೆ ಕರ್ನಾಟಕದಲ್ಲಿ ಎನ್‌ಕೌಂಟರ್‌ಗಳು ನಡೆಯುವುದು ಅಪರೂಪ. 2017ರ ಅಕ್ಟೋಬರ್ 30ರಂದು ಭೀಮಾತೀರದ ಹಂತಕ ಧರ್ಮರಾಜ ಚಡಚಣ ಎನ್‌ಕೌಂಟರ್‌ ಬಳಿಕ ರಾಜ್ಯದಲ್ಲಿ ಎನ್‌ಕೌಂಟರ್‌ಗಳು ನಡೆದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಎನ್‌ಕೌಂಟರ್‌ಗಳು ನಡೆದರೂ ಅದರ ಬೆನ್ನಿಗೇ ನಕಲಿ ಎನ್‌ಕೌಂಟರ್ ಎಂಬ ಆರೋಪಗಳು ಸುತ್ತಿಕೊಳ್ಳುವುದರಿಂದ ಪೊಲೀಸರೂ ಎನ್‌ಕೌಂಟರ್‌ ನಿರ್ಧಾರಕ್ಕೆ ಬರುವುದು ಕೂಡಾ ಅಪರೂಪವಾಗುತ್ತಿದೆ. ಆರು ವರ್ಷಗಳ ಹಿಂದೆ ರೌಡಿ ಬೆತ್ತನಗೆರೆ ಸೀನನ ಎನ್‌ಕೌಂಟರ್‌ ನಡೆದಿದ್ದು ಬಿಟ್ಟರೆ ಮತ್ತೆ ಬೆಂಗಳೂರಿನಲ್ಲಿ ಎನ್‌ಕೌಂಟರ್‌ಗಳಾಗಿಲ್ಲ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಮುಂದೆ ಕರ್ನಾಟಕ ಮಾನವ ಹಕ್ಕುಗಳ ವಿಚಾರದಲ್ಲಿ ಸಹಿಸಿಕೊಳ್ಳಬಹುದಾದ ರಾಜ್ಯ.

ಎಷ್ಟೇ ನಟೋರಿಯಸ್ ರೌಡಿಗಳಾದರೂ ಕಾಲಿಗೆ ಗುಂಡು ಹಾರಿಸುವವರೆಗೆ ತಮ್ಮ ಗರಿಷ್ಠ ‘ಅಧಿಕಾರ’ ಪ್ರಯೋಗಿಸುವ ರಾಜ್ಯ ಪೊಲೀಸರು ಎನ್ಕೌಂಟರ್ ನಿರ್ಧಾರಕ್ಕೆ ಬರುವುದು ಕಡಿಮೆ. ಎನ್‌ಕೌಂಟರ್‌ಗಳು ನಡೆಯುತ್ತಿಲ್ಲ ಎಂಬ ಕಾರಣಕ್ಕೆ ರಾಜ್ಯದಲ್ಲಿ ಅಪರಾಧ ಚಟುವಟಿಕೆಗಳೇನೂ ಕಡಿಮೆಯಾಗಿವೆ ಎಂದೇನಿಲ್ಲ. ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋ (ಎನ್‌ಸಿಆರ್‌ಬಿ) ವಾರ್ಷಿಕ ವರದಿಗಳಲ್ಲಿ ಕರ್ನಾಟಕ ಐದರಿಂದ ಮೂರನೇ ಸ್ಥಾನವನ್ನು ಕಾಯ್ದುಕೊಂಡೇ ಬಂದಿರುವುದು ಇದಕ್ಕೆ ಉದಾಹರಣೆ.

ಐಪಿಸಿ ಅಡಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾದ ನಗರಗಳ ಪೈಕಿ ರಾಜ್ಯ ರಾಜಧಾನಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ ಎಂದು 2016ರ ಎನ್‌ಸಿಆರ್‌ಬಿ ವಾರ್ಷಿಕ ವರದಿ ಹೇಳಿತ್ತು. ಪೊಲೀಸರ ಅನುಪಾತ, ಬೆಳೆಯುತ್ತಿರುವ ನಗರ ವ್ಯಾಪ್ತಿ, ಅಪರಾಧ ಪತ್ತೆಗಾಗಿ ಇನ್ನೂ ಎಲ್ಲಾ ಪ್ರದೇಶಗಳಲ್ಲೂ ಆಧುನಿಕ ವ್ಯವಸ್ಥೆ ಜಾರಿಗೆ ಬಂದಿಲ್ಲದಿರುವುದು ಕೂಡಾ ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಕಾರಣ ಎಂಬುದು ಪೊಲೀಸರ ಸಬೂಬು. ಆದರೆ, ತಡೆಗಟ್ಟಲು ಸಾಧ್ಯವಿರುವ ಅಪರಾಧಗಳನ್ನು ನಿಯಂತ್ರಿಸಲೂ ಪೊಲೀಸ್‌ ವ್ಯವಸ್ಥೆ ವಿಫಲವಾಗಿದೆ ಎಂಬುದೂ ಸತ್ಯ.

ಹಾಗೆಂದು ಎನ್‌ಕೌಂಟರ್‌ಗಳು ಹೆಚ್ಚು ನಡೆಯುವ ರಾಜ್ಯಗಳಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ ಎಂದೂ ಹೇಳುವಂತಿಲ್ಲ. ಅತಿ ಹೆಚ್ಚು ಎನ್‌ಕೌಂಟರ್‌ಗಳು ನಡೆಯುವ ಉತ್ತರ ಪ್ರದೇಶದಲ್ಲೇ ಅತಿ ಹೆಚ್ಚು ಅಪರಾಧ ಪ್ರಕರಣಗಳೂ ದಾಖಲಾಗುತ್ತಿವೆ. ಹೀಗೆ ಎನ್‌ಕೌಂಟರ್‌ಗಳು ಹಾಗೂ ಅಪರಾಧ ಪ್ರಕರಣಗಳ ಏರಿಕೆಯ ನಡುವೆ ವೈರುದ್ಯದ ಓಲಾಟ ಇದ್ದೇ ಇದೆ. ಎನ್‌ಕೌಂಟರ್‌ಗಳ ಭಯದಿಂದ ಅಪರಾಧ ಪ್ರಕರಣಗಳು ತಗ್ಗುತ್ತವೆ ಎಂಬುದು ಕೇವಲ ಕಾನೂನಿನ ಸಮಾಜದ ಪರಿಕಲ್ಪನೆಯಂತೆ.

ಕುಮಾರಸ್ವಾಮಿ ಕೊಲೆಗಡುಕರನ್ನು ಎನ್‌ಕೌಂಟರ್‌ ಮಾಡಿ ಎಂದು ಹೇಳುತ್ತಿರುವುದು ಇದೇ ಮೊದಲೇನಲ್ಲ. 2017ರ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಜೆಡಿಎಸ್‌ನ ಮಾಜಿ ಕಾರ್ಪೊರೇಟರ್ ಗೋವಿಂದೇಗೌಡ ಕೊಲೆಯಾಗಿತ್ತು. ಆ ಕೊಲೆಗೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, “ಗೋವಿಂದೇಗೌಡ ಅವರನ್ನು ಕೊಲೆ ಮಾಡಿದವರನ್ನು ಪತ್ತೆಹಚ್ಚಿ ಎನ್‌ಕೌಂಟರ್ ಮಾಡಬೇಕು. ಆಗ ಕೊಲೆಗಡುಕರಲ್ಲಿ ಭಯ ಮೂಡುತ್ತದೆ” ಎಂದಿದ್ದರು. ಕುಮಾರಸ್ವಾಮಿ ಹಿಂದೆ ಈ ಮಾತು ಹೇಳಿದಾಗ ಅವರು ವಿರೋಧ ಪಕ್ಷದಲ್ಲಿದ್ದರು. ಆದರೆ, ಈಗ ರಾಜ್ಯದ ಅಧಿಕಾರ ಚುಕ್ಕಾಣಿಯೇ ಅವರ ಕೈಯಲ್ಲಿದೆ.

ಕುಮಾರಸ್ವಾಮಿ ಮಾಧ್ಯಮಗಳ ಕ್ಯಾಮೆರಾ ಮುಂದೆ ಬಹಿರಂಗವಾಗಿ ಶೂಟೌಟ್‌ ಮಾಡಿ ಎಂದು ಅಪ್ರಜ್ಞಾಪೂರ್ವಕವಾಗೇನೂ ಹೇಳಿದಂತಿಲ್ಲ. ಜೆಡಿಎಸ್ ಕಾರ್ಯಕರ್ತರ ತಂಟೆಗೆ ಬಂದರೆ ಸರಕಾರ ಸುಮ್ಮನಿರುವುದಿಲ್ಲ ಎಂಬ ಎಚ್ಚರಿಕೆಯನ್ನು ಕುಮಾರಸ್ವಾಮಿ ಪರೋಕ್ಷವಾಗಿ ತಲುಪಿಸಿದ್ದಾರೆ. ಅದರ ಹಿಂದೆಯೇ ಭಾವೋದ್ವೇಗದ ಮಾತು ಎಂಬ ಸ್ಪಷ್ಟನೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನವನ್ನೂ ಮಾಡಿದ್ದಾರೆ. ಹೀಗೊಂದು ಕುಮಾರಸ್ವಾಮಿ ಹಳೇ ಚಾಳಿ ಪುನರಾವರ್ತನೆಯಾಗಿದೆ ಅಷ್ಟೆ.