samachara
www.samachara.com
ಟಾಟಾ ಸ್ಟೀಲ್ಸ್ ಭೂಮಿ ಬುಡಕಟ್ಟು ಜನರಿಗೆ: ನಕ್ಸಲ್ ಏರಿಯಾದಲ್ಲಿ ಮಾತು ಉಳಿಸಿಕೊಂಡ ಕಾಂಗ್ರೆಸ್!
COVER STORY

ಟಾಟಾ ಸ್ಟೀಲ್ಸ್ ಭೂಮಿ ಬುಡಕಟ್ಟು ಜನರಿಗೆ: ನಕ್ಸಲ್ ಏರಿಯಾದಲ್ಲಿ ಮಾತು ಉಳಿಸಿಕೊಂಡ ಕಾಂಗ್ರೆಸ್!

ಪರಭಾರೆ ಮಾಡಿ ಐದು ವರ್ಷಗಳ ಒಳಗೆ ಕೈಗಾರಿಕೆಗಳು ನಿರ್ಮಾಣವಾಗದ ಜಮೀನನ್ನು ರೈತರಿಗೆ ವಾಪಸ್‌ ನೀಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಭರವಸೆ ನೀಡಿತ್ತು.

ಅಪರೂಪದ ಬೆಳವಣಿಗೆಯಲ್ಲಿ ನಕ್ಸಲ್‌ ವಶದಲ್ಲಿರುವ ಛತ್ತೀಸ್‌ಗಢದ ಬಸ್ತಾರ್‌ ಜಿಲ್ಲೆಯಲ್ಲಿ ಕೈಗಾರಿಕೆಗೆಂದು ವಶಪಡಿಸಿಕೊಂಡಿದ್ದ ಜಮೀನನ್ನು ರೈತರಿಗೆ ಮರಳಿ ನೀಡಲು ಅಲ್ಲಿನ ಸರಕಾರ ಮುಂದಾಗಿದೆ. ನೂತನ ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌ ಈ ಸಂಬಂಧ ಕೆಲಸ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬಸ್ತಾರ್‌ ಜಿಲ್ಲೆಯ ಲೊಹಂದಿಗುಡ ಪ್ರದೇಶದಲ್ಲಿ ಉಕ್ಕು ಉತ್ಪಾದನಾ ಘಟಕವನ್ನು ಸ್ಥಾಪಿಸುವ ಸಂಬಂಧ 2005ರಲ್ಲಿ ಟಾಟಾ ಸ್ಟೀಲ್‌ ಜತೆ ಅಂದಿನ ಬಿಜೆಪಿ ಸರಕಾರ ಒಪ್ಪಂದವೊಂದನ್ನು ಮಾಡಿಕೊಂಡಿತ್ತು. ಒಪ್ಪಂದದಂತೆ 19,500 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣ ಪ್ರಮಾಣದ ಉಕ್ಕಿನ ಕಾರ್ಖಾನೆಯನ್ನು ಟಾಟಾ ಸಂಸ್ಥೆ ಅಲ್ಲಿ ಸ್ಥಾಪಿಸಬೇಕಾಗಿತ್ತು.

ಕೈಗಾರಿಕೆ ಸ್ಥಾಪನೆಗಾಗಿ 2008ರಲ್ಲಿ ಜಮೀನು ಪರಭಾರೆಗೆ ರಾಜ್ಯ ಸರಕಾರ ಚಾಲನೆ ನೀಡಿತು. ಇದಕ್ಕೆ ಸ್ಥಳೀಯ ರೈತರಿಂದ ತೀವ್ರ ವಿರೋಧ ಕೇಳಿ ಬಂತು. ಸಾಮಾಜಿಕ ಹೋರಾಟಗಾರರು ಸರಕಾರದ ಕ್ರಮವನ್ನು ಶೋಷಣೆ ಎಂದು ಜರೆದರು. ಹೀಗಿದ್ದೂ ಬುಡಕಟ್ಟು ಜನಾಂಗಗಳು ವಾಸವಾಗಿದ್ದ 10 ಗ್ರಾಮಗಳ 1,764 ಹೆಕ್ಟೇರ್‌ ಜಮೀನನ್ನು ಸರಕಾರ ವಶಕ್ಕೆ ಪಡೆದುಕೊಂಡಿತು. ಪ್ರತಿರೋಧದ ನಡುವೆಯೂ 1,707ರಲ್ಲಿ 1,165 ಜನ ರೈತರು ಪರಿಹಾರ ಪಡೆದು ಸುಮ್ಮನಾದರು.

ಆದರೆ ಇಲ್ಲಿ ಟಾಟಾ ಸ್ಟೀಲ್‌ ಪ್ರಾಜೆಕ್ಟ್‌ ಆರಂಭಗೊಳ್ಳಲಿಲ್ಲ. 2016ರಲ್ಲಿ ಟಾಟಾ ಸಂಸ್ಥೆ ತಾನು ಈ ಯೋಜನೆಯನ್ನು ಜಾರಿಗೊಳಿಸುತ್ತಿಲ್ಲ ಎಂದು ಅಧಿಕೃತವಾಗಿ ಘೋಷಿಸಿತು. ಜನರ ಪ್ರತಿಭಟನೆ, ಜಮೀನು ಪರಭಾರೆ ಪ್ರಕ್ರಿಯೆಯಲ್ಲಿನ ವಿಳಂಬ ಮತ್ತು ನಕ್ಸಲರ ಬೆದರಿಕೆಗಳಿಂದ ಯೋಜನೆಯಿಂದ ದೂರ ಸರಿಯುತ್ತಿರುವುದಾಗಿ ಕಂಪನಿ ಘೋಷಿಸಿತು.

ಕಂಪನಿ ಯೋಜನೆಯಿಂದ ಹಿಂದೆ ಸರಿದರೂ ಜಮೀನು ಮಾತ್ರ ರೈತರ ಕೈ ಸೇರಿರಲಿಲ್ಲ. ಬದಲಿಗೆ ಬಿಜೆಪಿ ಸರಕಾರ ಈ ಜಮೀನು ಭೂಮಿ ಬ್ಯಾಂಕ್‌ಗೆ ಸೇರ್ಪಡೆಯಾಗಲಿದೆ ಎಂದಿತು. ಮುಂದೆ ಯಾರಾದರೂ ಕೈಗಾರಿಕೆ ಸ್ಥಾಪನೆಗೆ ಬಂದರೆ ಅವರಿಗೆ ಈ ಜಮೀನು ನೀಡಲಾಗುವುದು ಎಂದು ಹೇಳಿತು.

ಸರಕಾರದ ಈ ತೀರ್ಮಾನವನ್ನು ವಿರೋಧಿಸಿದ್ದ ಕಾಂಗ್ರೆಸ್‌, ಪರಭಾರೆ ಮಾಡಿ ಐದು ವರ್ಷಗಳವರೆಗೆ ಕೈಗಾರಿಕೆಗಳು ನಿರ್ಮಾಣವಾಗದ ಜಮೀನನ್ನು ರೈತರಿಗೆ ವಾಪಸ್‌ ನೀಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಇದೀಗ ಕೃಷಿ ಸಾಲ ಮನ್ನಾದ ನಂತರ ಈ ಜಮೀನುಗಳನ್ನು ರೈತರ ಕೈಗೆ ಮರಳಿಸುವ ಕೆಲಸಕ್ಕೆ ಸರಕಾರ ಕೈ ಹಾಕಿದೆ. ನೂತನ ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌ ಅಧಿಕಾರಿಗಳಿಗೆ ಈ ಸಂಬಂಧ ಪ್ರಕ್ರಿಯೆ ಆರಂಭಿಸುವಂತೆ ಸೂಚನೆ ನೀಡಿದ್ದಾರೆ. ಮತ್ತು ಹಸ್ತಾಂತರ ಕಾರ್ಯ ಯೋಜನೆಯನ್ನು ಮುಂದಿನ ಸಂಪುಟ ಸಭೆಯ ಮೊದಲು ನೀಡುವಂತೆ ಸೂಚಿಸಿದ್ದಾರೆ.

ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌
ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌
/ದಿ ಕ್ವಿಂಟ್‌

ಒಂದೊಮ್ಮೆ ಇದು ಪೂರ್ಣಗೊಂಡಿದ್ದೇ ಆದರೆ ಇದೊಂದು ಐತಿಹಾಸಿಕ ಬೆಳವಣಿಗೆ ಎಂದು ಹಿರಿಯ ಕಾಂಗ್ರೆಸ್‌ ನಾಯಕರು ಪ್ರತಿಕ್ರಿಯೆ ನೀಡಿರುವುದಾಗಿ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ. “ನೀವು ಭಾರತದಲ್ಲಿ ಭೂ ಹೋರಾಟಗಳ ಇತಿಹಾಸವನ್ನು ನೋಡಿದರೆ ಈ ತರಹದ್ದು ತೀರಾ ಅಪರೂಪ. ಅದಕ್ಕೆ ಸಿಂಗೂರ್, ಭಟ್ಟಾ ಪಾರ್ಸೂಲ್‌ ಕೂಡ ಹೊರತಲ್ಲ. ಬಸ್ತಾರ್‌ನಲ್ಲಿ ಈ ಭೂಮಿ ಸ್ವಾಧೀನಕ್ಕೆ ಬಲವಾದ ವಿರೋಧವಿತ್ತು ಮತ್ತು ಈ ಕಾರಣಕ್ಕೆ ಅನೇಕ ಯುವಕರು ಸರ್ಕಾರದ ಬಗ್ಗೆ ಅಸಮಾಧಾನಗೊಂಡಿದ್ದರು ಎಂಬ ವರದಿಗಳಿವೆ. ಇದೀಗ ಜಮೀನು ವಾಪಸ್‌ ಪ್ರಕ್ರಿಯೆ ಕಾಂಗ್ರೆಸ್ ಸರಕಾರಕ್ಕೆ ರೈತರ ಬಗೆಗಿರುವ ಸಹಾನುಭೂತಿಯನ್ನು ತೋರಿಸುತ್ತಿದೆ. ಈ ಮೂಲಕ ಮತ್ತು ಛತ್ತೀಸ್‌ಗಢಕ್ಕೆ ಮಾತ್ರವಲ್ಲದೆ ದೇಶದ ಉಳಿದ ಭಾಗಗಳಿಗೂ ಕಾಂಗ್ರೆಸ್‌ ರೈತ ಪರವಾದ ಸಂದೇಶವನ್ನು ತವಾನಿಸುತ್ತಿದೆ,” ಎಂದಿದ್ದಾರೆ.

“ನಕ್ಸಲ್‌ವಾದವನ್ನು ಜನಪರ ಯೋಜನೆಗಳ ಮೂಲಕ ನೂತನ ಕಾಂಗ್ರೆಸ್‌ ಸರಕಾರ ಹೇಗೆ ಎದುರಿಸಲಿದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ,” ಎಂದು ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ರುಚಿರ್‌ ಗರ್ಗ್‌ ಹೇಳಿದ್ದಾರೆ.

ನಕ್ಸಲ್‌ ಚಳವಳಿಗೆ ದೇಶದ ಆಂತರಿಕ ಭದ್ರತೆಯ ಅಪಾಯಗಳ ಪಟ್ಟಿಯಲ್ಲಿ ಮೊದಲ ಸ್ಥಾನ ನೀಡಿತ್ತು ಯುಪಿಎ ಸರಕಾರ ಮತ್ತು ಅಂದಿನ ಗೃಹ ಸಚಿವ ಪಿ. ಚಿದಂಬರಂ. ಇದೀಗ ಅದೇ ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರವೊಂದು ನಕ್ಸಲ್ ಬೇಡಿಕೆಗಳನ್ನು ತನ್ನ ಪರಿಹಾರಗಳ ಪಟ್ಟಿಯಲ್ಲಿ ಸೇರಿಸಿಕೊಂಡಿದೆ. ಭೂ ವಾಪಾಸಾತಿ ಕ್ರಮ ಈ ಕಾರಣಕ್ಕೆ ಗಮನ ಸೆಳೆಯುತ್ತಿದೆ, ಬದಲಾದ ಮನಸ್ಥಿತಿಯನ್ನು ದೇಶದ ಮುಂದಿಟ್ಟಿದೆ.