samachara
www.samachara.com
ಇಂಜಿನಿಯರಿಂಗ್‌ ಕರಾಮತ್ತು: ದೇವೇಗೌಡ ಅಡಿಗಲ್ಲಿಟ್ಟ ಅತೀ ಉದ್ದದ ಸೇತುವೆ ಇಂದು ಉದ್ಘಾಟನೆ
COVER STORY

ಇಂಜಿನಿಯರಿಂಗ್‌ ಕರಾಮತ್ತು: ದೇವೇಗೌಡ ಅಡಿಗಲ್ಲಿಟ್ಟ ಅತೀ ಉದ್ದದ ಸೇತುವೆ ಇಂದು ಉದ್ಘಾಟನೆ

ಇಲ್ಲಿಯವರೆಗೆ ಕೇರಳದ ವೆಂಬನಾಡ್‌ ಸೇತುವೆ ಅತೀ ಉದ್ದದ ರೈಲ್ವೇ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದು 4.62 ಕಿಲೋಮೀಟರ್ ಉದ್ದವಿತ್ತು. ಈ ದಾಖಲೆಯನ್ನೀಗ ಬೊಗಿಬೀಲ್‌ ಸೇತುವೆ ಮುರಿದಿದೆ.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು 21 ವರ್ಷಗಳ ಕೆಳಗೆ ಶಿಲಾನ್ಯಾಸ ನೆರವೇರಿಸಿದ್ದ ಅಸ್ಸಾಂ- ಅರುಣಾಚಲ ಪ್ರದೇಶ ಮಧ್ಯದ ಬೊಗಿಬೀಲ್‌ ಸೇತುವೆ ಉದ್ಘಾಟನೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ದೇಶದ ಅತೀ ಉದ್ದದ ರೈಲ್ವೇ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉದ್ಘಾಟಿಸಲಿದ್ದಾರೆ.

5,900 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 5 ಕಿಲೋಮೀಟರ್‌ (4.94ಕಿ.ಮೀ) ಉದ್ದದ ಸೇತುವೆಯನ್ನು ರೈಲ್ವೇ ಇಲಾಖೆ ನಿರ್ಮಾಣ ಮಾಡಿದೆ. ಈ ಸೇತುವೆ ನಿರ್ಮಾಣದಿಂದ ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ನಡುವಿನ ಸಂಪರ್ಕದ ಅವಧಿ 4 ಗಂಟೆಗಳಷ್ಟು ಕಡಿತಗೊಳ್ಳಲಿದೆ. ದೆಹಲಿಯಿಂದ ದಿಬ್ರುಗರ್‌ ನಡುವಿನ ಪ್ರಯಾಣದ ಅವಧಿ ಮೂರು ಗಂಟೆ ಕಡಿಮೆಯಾಗಲಿದೆ.

ಬ್ರಹ್ಮಪುತ್ರಾ ನದಿಗೆ ಕಟ್ಟಲಾಗಿರುವ ಈ ಸೇತುವೆ ಎರಡು ಅಂತಸ್ತಿನ ಸೇತುವೆಯಾಗಿದೆ. ಕೆಳಗಡೆ ಎರಡು ಲೈನ್‌ ರೈಲ್ವೇ ಮಾರ್ಗವಿದ್ದರೆ ಮೇಲುಗಡೆ ಮೂರು ಲೈನ್‌ ರಸ್ತೆ ಮಾರ್ಗವಿದೆ. ಭಾರೀ ತೂಕದ ಮಿಲಿಟರಿ ಟ್ಯಾಂಕ್‌ಗಳೂ ಈ ರಸ್ತೆ ಮೂಲಕ ಹಾದು ಹೋಗಬಹುದಾದಷ್ಟು ಸೇತುವೆ ಬಲಿಷ್ಠವಾಗಿದೆ. ಇದು ಸೇನೆಗೆ ತುಂಬಾ ಉಪಯೋಗಕ್ಕೆ ಬರಲಿದೆ.

ಇಲ್ಲಿಯವರೆಗೆ ಕೇರಳದ ವೆಂಬನಾಡ್‌ ಸೇತುವೆ ಅತೀ ಉದ್ದದ ರೈಲ್ವೇ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದು 4.62 ಕಿಲೋಮೀಟರ್ ಉದ್ದವಿತ್ತು. ಈ ದಾಖಲೆಯನ್ನೀಗ ಬೊಗಿಬೀಲ್‌ ಸೇತುವೆ ಮುರಿದಿದೆ.

ಅಸ್ಸಾಂ ಒಪ್ಪಂದ ಮತ್ತು ಸೇತುವೆ:

ಅಸ್ಸಾಂನಲ್ಲಿ ವಿದ್ಯಾರ್ಥಿ ಚಳವಳಿ ತೀವ್ರಗೊಂಡಿದ್ದ ಸಂದರ್ಭದಲ್ಲಿ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಮತ್ತು ಪ್ರಫುಲ್ಲ ಕುಮಾರ್‌ ಮಹಾಂತ ನೇತೃತ್ವದ ವಿದ್ಯಾರ್ಥಿ ಚಳವಳಿ ನಾಯಕರ ಜತೆ 1985ರಲ್ಲಿ ನಡೆದ ಅಸ್ಸಾಂ ಒಪ್ಪಂದದಲ್ಲಿ ಈ ಸೇತುವೆಯನ್ನು ಪ್ರಸ್ತಾಪಿಸಲಾಗಿತ್ತು. ಮುಂದೆ 1997-98ರಲ್ಲಿ ಈ ಯೋಜನೆ ಮಂಜೂರುಗೊಂಡಿತ್ತು. ಅಂದಿನ ಪ್ರಧಾನಿ ಎಚ್‌.ಡಿ. ದೇವೇಗೌಡರು ಜನವರಿ 22, 1997ರಲ್ಲಿ ಈ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಮುಂದೆ ಏಪ್ರಿಲ್‌ 21, 2002ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಇದರ ಕಾಮಗಾರಿ ಆರಂಭಗೊಂಡಿತ್ತು.

ಅಂದುಕೊಂಡಂತೆ ನಡೆದಿದ್ದರೆ ಸೇತುವೆ ನಿರ್ಮಾಣ 2007ರಲ್ಲೇ ಪೂರ್ಣಗೊಳ್ಳಬೇಕಿತ್ತು. ಆದರೆ ವರ್ಷದ ಹೆಚ್ಚಿನ ಅವಧಿಯಲ್ಲಿ ಬ್ರಹ್ಮಪುತ್ರಾ ನದಿ ತುಂಬಿ ಹರಿಯುವುದರಿಂದ ನವೆಂಬರ್‌ ಮತ್ತು ಮಾರ್ಚ್ ನಡುವೆ ಮಾತ್ರ ಕಾಮಗಾರಿ ಮಾಡಲು ಸಾಧ್ಯವಾಗುತ್ತಿತ್ತು. ಹೀಗಾಗಿ ಇದರ ನಿರ್ಮಾಣ ತಡವಾಯಿತು. ಇದೀಗ ಕೊನೆಗೂ ಹಲವು ಅಂತಿಮ ಗಡುವುಗಳನ್ನು ದಾಟಿ 21 ವರ್ಷಗಳ ನಂತರ ಸೇತುವೆ ಉದ್ಘಾಟನೆ ಭಾಗ್ಯ ಕಾಣುತ್ತಿದೆ. ಆರಂಭದಲ್ಲಿ 1,767 ಕೋಟಿ ರೂಪಾಯಿಗಳ ಯೋಜನೆ ಇದಾಗಿತ್ತು. ಸಮಯ ಕಳೆದಂತೆ ನಿರ್ಮಾಣ ಕಾಮಗಾರಿ 5,800 ಕೋಟಿ ರೂಪಾಯಿಗಳನ್ನು ಬೇಡಿತ್ತು.

ಹೀಗೆ ಪೂರ್ಣಗೊಂಡ ಸೇತುವೆ 120 ವರ್ಷಗಳ ಆಯಸ್ಸನ್ನು ಹೊಂದಿದೆ. ಇಡೀ ಸೇತುವೆಯನ್ನು ವೆಲ್ಡ್‌ ಮಾಡಲಾಗಿದ್ದು, ಯುರೋಪ್‌ನ ವೆಲ್ಡಿಂಗ್‌ ಗುಣಮಟ್ಟವನ್ನು ಕಾಯ್ದುುಕೊಳ್ಳಲಾಗಿದೆ. ರೈಲ್ವೇ ಟ್ರಾಕ್‌ ಮತ್ತು ರಸ್ತೆ ಮಾರ್ಗ ಎರಡೂ ಇರುವ ದೇಶದ ಮೊದಲ ಸೇತುವೆ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.

ಈ ಸೇತುವೆಯನ್ನು ಈಶಾನ್ಯ ಭಾರತದ ಜೀವನಾಡಿ ಎಂದೇ ಕರೆಯಲಾಗಿದೆ. ಈ ಸೇತುವೆ ನಿರ್ಮಾಣದಿಂದ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ನಡುವಿನ ಸಂಪರ್ಕದ ದೂರ 165 ಕಿಲೋಮೀಟರ್‌ಗಳಷ್ಟು ಕಡಿಮೆಯಾಗಲಿದ್ದು ಪ್ರತಿದಿನ 10 ಲಕ್ಷ ರೂಪಾಯಿ ವೆಚ್ಚದ ಇಂಧನ ಉಳಿತಾಯವಾಗಲಿದೆ. ಇದರ ಜತೆಗೆ ಅಸ್ಸಾಂನ ತಿನ್ಸುಕಿಯಾ ಮತ್ತು ಅರುಣಾಚಲ ಪ್ರದೇಶದ ನಹರ್ಲಗನ್‌ ನಗರಗಳ ನಡುವಿನ ರೈಲ್ವೇ ಪ್ರಯಾಣದ ಅವಧಿ ಸುಮಾರು 10 ಗಂಟೆಗಳಷ್ಟು ಕಡಿಮೆಯಾಗಲಿದೆ. ಈ ಸೇತುವೆ ಅಸ್ಸಾಂನ ದಿಬ್ರುಗರ್‌ ಜಿಲ್ಲೆಯನ್ನು ಅರುಣಾಚಲ ಪ್ರದೇಶದ ದೇಮಜಿ ಜಿಲ್ಲೆಯ ಸಿಲಾಪಥರ್‌ ಜತೆ ಸಂಪರ್ಕಿಸುತ್ತದೆ. ಇಲ್ಲಿಯ ಹಲವು ಹಳ್ಳಿಗಳಿಗೆಲ್ಲಾ ಇದರಿಂದ ಉಪಯೋಗವಾಗಲಿದೆ.

ಇದೆಲ್ಲದಿಕ್ಕಿಂತ ಹೆಚ್ಚಾಗಿ ಸೇನೆಗ ತನ್ನ ವಾಹನಗಳು, ಸಮಾಗ್ರಿಗಳನ್ನು ಚೀನಾ ಗಡಿಗೆ ಸಾಗಿಸಲು ಬಹಳ ಅನುಕೂಲವಾಗಲಿದೆ. ಇಂಥಹ ಅಪರೂಪದ ಸೇತುವೆಯ ನಿರ್ಮಾಣ ಕೊನೆಗೊಂಡು ನೇಳೆಗೆ ಉದ್ಘಾಟನೆಯೂ ಮುಗಿಯಲಿದೆ. ಆದರೆ ಸೇತುವೆಗೆ ಯಾರ ಹೆಸರಿಡಬೇಕು ಎಂಬುದು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಅಟಲ್‌ ಬಿಹಾರಿ ವಾಜಪೇಯಿ ಹೆಸರಿಡಬೇಕು ಎಂದು ಹೊರಟಿದ್ದರೆ ಸ್ಥಳೀಯ ಚುಟಿಯಾ ಸಮುದಾಯ ತಮ್ಮ ರಾಣಿ ಸತಿ ಸಾಧಿನಿ ಹೆಸರಿಗಾಗಿ ಪಟ್ಟು ಹಿಡಿದು ಕೂತಿದೆ. ಇದರ ನಡುವೆ ಇನ್ನೊಂದಷ್ಟು ಜನರು ತಮ್ಮದೇ ಆದ ಹೆಸರುಗಳನ್ನು ಮುಂದಿಟ್ಟಿದ್ದಾರೆ. ಹೀಗಾಗಿ ಸೇತುವೆಯ ನಾಮಕರಣ ಪ್ರಕ್ರಿಯೆ ಇನ್ನೂ ಅಂತಿಮಗೊಂಡಿಲ್ಲ.

ಇಂಜಿನಿಯರಿಂಗ್‌ ಕರಾಮತ್ತು: ದೇವೇಗೌಡ ಅಡಿಗಲ್ಲಿಟ್ಟ ಅತೀ ಉದ್ದದ ಸೇತುವೆ ಇಂದು ಉದ್ಘಾಟನೆ

ಚಿತ್ರ ಕೃಪೆ: ಅಸ್ಸಾಂ ಟೈಮ್ಸ್‌, ಶಿಲ್ಲಾಂಗ್‌ ಟೈಮ್ಸ್‌, ದಿ ಕ್ವಿಂಟ್‌, ಐಐಟಿ ಗುವಾಹಟಿ