ಬಂಡಾಯ ಬಿಸಿ ತಣಿಸಲು ಕೈ ಹೈಕಮಾಂಡ್‌ ಕಸರತ್ತು; ರಾಷ್ಟ್ರ ರಾಜಕಾರಣಕ್ಕೆ ರಾಜ್ಯ ಮುಖಂಡರು?
COVER STORY

ಬಂಡಾಯ ಬಿಸಿ ತಣಿಸಲು ಕೈ ಹೈಕಮಾಂಡ್‌ ಕಸರತ್ತು; ರಾಷ್ಟ್ರ ರಾಜಕಾರಣಕ್ಕೆ ರಾಜ್ಯ ಮುಖಂಡರು?

ಸಂಪುಟ ವಿಸ್ತರಣೆಯ ಹಿಂದೆಯೇ ಕಾಂಗ್ರೆಸ್‌ನಲ್ಲಿ ಎದ್ದಿರುವ ಅಸಮಾಧಾನ ಶಮನಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯ ಮುಖಂಡರಿಗೆ ರಾಷ್ಟ್ರ ರಾಜಕಾರಣದ ಆಸೆ ತೋರಿಸಲು ಮುಂದಾಗಿದೆ.

ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್‌ ಪಾಳಯದಲ್ಲಿ ಎದ್ದಿರುವ ಅಸಮಾಧಾನದ ಹೊಗೆಯನ್ನು ಆರಿಸಲು ಕೈ ಹೈಕಮಾಂಡ್‌ ಹಲವು ಕಸರತ್ತುಗಳನ್ನು ನಡೆಸುತ್ತಿದೆ. ಸಚಿವ ಸ್ಥಾನ ಕೈತಪ್ಪಿರುವುರಿಂದ ರಮೇಶ್‌ ಜಾರಕಿಹೊಳಿ ಹಾಗೂ ರಾಮಲಿಂಗಾರೆಡ್ಡಿ ನಿರೀಕ್ಷೆಗೂ ಮೀರಿ ಅಸಮಾಧಾನ ಹೊರಹಾಕುತ್ತಿರುವುದರಿಂದ ಈ ಇಬ್ಬರನ್ನು ಸಮಾಧಾನ ಪಡಿಸುವುದು ಕಾಂಗ್ರೆಸ್‌ಗೆ ಈಗ ಸವಾಲಾಗಿದೆ.

ರಾಮಲಿಂಗಾರೆಡ್ಡಿ ತಮ್ಮ ಬೆಂಬಲಿಗರ ಮೂಲಕ ಕಾಂಗ್ರೆಸ್‌ ಮೇಲೆ ಒತ್ತಡ ಹಾಕುವ ತಂತ್ರಕ್ಕೆ ಮುಂದಾಗಿದ್ದಾರೆ. ಸೋಮವಾರ ಬೆಳಿಗ್ಗೆ ಹೊಸೂರು ರಸ್ತೆ ತಡೆದು ಪ್ರತಿಭಟನೆ ಮಾಡಿರುವ ರಾಮಲಿಂಗಾರೆಡ್ಡಿ ಬೆಂಬಲಿಗರು ಕಾಂಗ್ರೆಸ್‌ ರೆಡ್ಡಿ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂಬ ಕೂಗು ಎತ್ತಿದ್ದಾರೆ. ಮತ್ತೊಂದೆಡೆ ಬಿಟಿಎಂ ಲೇಔಟ್‌ ಹಾಗೂ ಜಯನಗರದ ಬ್ಲಾಕ್‌ ಕಾಂಗ್ರೆಸ್‌ ಮುಖಂಡರು ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.

ರಮೇಶ್‌ ಜಾರಕಿಹೊಳಿ ಯಾವುದೇ ಹೊತ್ತಿನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ರಮೇಶ್‌ ಜಾರಕಿಹೊಳಿ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಹಾರುತ್ತಾರೆ ಎಂಬ ಮಾತುಗಳೂ ಇವೆ. ಆದರೆ, ಈ ಯಾವ ಸುದ್ದಿಗಳನ್ನೂ ರಮೇಶ್‌ ಜಾರಕಿಹೊಳಿ ತಳ್ಳಿ ಹಾಕಿಲ್ಲ. ಒಂದೊಮ್ಮೆ ಅಗತ್ಯ ಬಿದ್ದರೆ ರಮೇಶ್‌ ಜಾರಕಿಹೊಳಿ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಹಾರಲೂಬಹುದು ಎಂಬ ಸನ್ನಿವೇಶ ಸದ್ಯಕ್ಕೆ ಸೃಷ್ಟಿಯಾಗಿದೆ.

ಸದ್ಯ ಕಾಂಗ್ರೆಸ್‌ನಲ್ಲಿ ಅಸಮಾಧಾನ ಹಾಗೂ ಬಂಡಾಯದ ಬಾವುಟ ಹಾರಿಸುತ್ತಿರುವ ಈ ಇಬ್ಬರು ಮುಖಂಡರನ್ನು ಸಮಾಧಾನಗೊಳಿಸುವುದು ಕಾಂಗ್ರೆಸ್‌ ಹೈಕಮಾಂಡ್‌ ಮುಂದಿರುವ ಬಿಕ್ಕಟ್ಟು. ಈ ಬಿಕ್ಕಟ್ಟನ್ನು ಬಗೆಹರಿಸಲು ಕಾಂಗ್ರೆಸ್‌ ಹೈಕಮಾಂಡ್‌ ಕರ್ನಾಟಕ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಸೋಮವಾರ ಸಂಜೆ ಬೆಂಗಳೂರಿಗೆ ಕಳಿಸುತ್ತಿದೆ. ಸಚಿವ ಸ್ಥಾನ ಕೈತಪ್ಪಿರುವ ಅಸಮಾಧಾನದಲ್ಲಿರುವ ರಾಜ್ಯ ಕಾಂಗ್ರೆಸ್‌ ಮುಖಂಡರನ್ನು ಸಮಾಧಾನ ಪಡಿಸುವ ಹೊಣೆ ಸದ್ಯ ಕೆ.ಸಿ. ವೇಣುಗೋಪಾಲ್‌ ಹೆಗಲಿಗೆ ಬಿದ್ದಿದೆ.

ರಮೇಶ್‌ ಜಾರಕಿಹೊಳಿ ಅಸಮಾಧಾನ ಶಮನಕ್ಕಾಗಿ ರಮೇಶ್‌ ಅವರನ್ನು ಎಐಸಿಸಿ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸುವ ಹಾಗೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಕಣಕ್ಕಿಳಿಸುವ ಲೆಕ್ಕಾಚಾರ ಕಾಂಗ್ರೆಸ್‌ ಹೈಕಮಾಂಡ್‌ ಮುಂದಿದೆ ಎನ್ನಲಾಗಿದೆ. ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದ ಸತೀಶ್‌ ಜಾರಕಿಹೊಳಿ ಜೂನ್‌ ತಿಂಗಳಲ್ಲಿ ಎಐಸಿಸಿ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈಗ ಆ ಜಾಗಕ್ಕೆ ರಮೇಶ್‌ ಅವರನ್ನು ತಂದು ಕೂರಿಸುವ ಲೆಕ್ಕಾಚಾರ ಕಾಂಗ್ರೆಸ್‌ ಹೈಕಮಾಂಡ್‌ನದ್ದು ಎನ್ನಲಾಗುತ್ತಿದೆ.

ರಮೇಸ್‌ ಜಾರಕಿಹೊಳಿ ಬಂಡಾಯದ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, “ರಮೇಶ್‌ ಜಾರಕಿಹೊಳಿ ಒತ್ತಡ ತಂತ್ರಕ್ಕೆ ಮಣಿಯುವುದಿಲ್ಲ. ಪಕ್ಷದಲ್ಲಿ ಅಧಿಕಾರಕ್ಕಿಂತ ಪಕ್ಷವನ್ನು ಬೆಳೆಸುವ, ಬಲಗೊಳಿಸುವ ಕೆಲಸದ ಕಡೆಗೆ ಮುಖಂಡರು ಮುಂದಾಗಬೇಕು. ಸದ್ಯಕ್ಕೆ ಎದುರಾಗಿರುವ ಬಿಕ್ಕಟ್ಟನ್ನು ಶಮನಗೊಳಿಸುತ್ತೇವೆ” ಎಂದಿದ್ದಾರೆ.

“ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಕೆಲವರಿಗೆ ಬೇಸರ ಆಗಿರುವುದು ಸಹಜ. ಪಕ್ಷಕ್ಕೆ ನಿಷ್ಠರಾಗಿ ಉಳಿದು ತಾಳ್ಮೆಯಿಂದ ಅವಕಾಶಕ್ಕಾಗಿ ಕಾದವರನ್ನು ಕಾಂಗ್ರೆಸ್ ಪಕ್ಷ ಎಂದೂ ನಿರಾಶೆಗೊಳಿಸಿಲ್ಲ. ಪಕ್ಷದ ಹಿತ ನಮ್ಮೆಲ್ಲರ ಮೊದಲ‌ ಆದ್ಯತೆಯಾಗಿರಲಿ” ಎಂದು ಮೈತ್ರಿ ಸರಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.

ರಮೇಶ್‌ ಜಾರಕಿಹೊಳಿ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆಸಿಕೊಳ್ಳುವ ಚಿಂತನೆಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಇದೆ. ಆದರೆ, ಇದಕ್ಕೆ ರಮೇಶ್‌ ಜಾರಕಿಹೊಳಿ ಒಪ್ಪುವುದು ಕಷ್ಟವಿದೆ. ಎಐಸಿಸಿ ಕಾರ್ಯದರ್ಶಿ ಎಂಬ ‘ನಾನ್‌ ಎಕ್ಸಿಕ್ಯೂಟಿವ್‌’ ಹುದ್ದೆ ಈ ಹಿಂದೆ ಸತೀಶ್‌ ಜಾರಕಿಹೊಳಿ ಅವರಿಗೇ ಇಷ್ಟವಿರಲಿಲ್ಲ. ಅಂಥದ್ದರಲ್ಲಿ ಈಗ ಆ ಹುದ್ದೆಯ ಆಸೆ ತೋರಿಸಿ ರಮೇಶ್‌ ಜಾರಕಿಹೊಳಿ ಬಂಡಾಯವನ್ನು ತಣಿಸುವುದು ಅಷ್ಟು ಸುಲಭವಿಲ್ಲ.

ರಮೇಶ್‌ ಜಾರಕಿಹೊಳಿ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆಸಿಕೊಳ್ಳುವ ಆಲೋಚನೆಯಲ್ಲಿರುವ ಕಾಂಗ್ರೆಸ್‌ ಹೈಕಮಾಂಡ್‌ ಬೆಂಗಳೂರು ಭಾಗದ ಹಿರಿಯ ಪ್ರಭಾವಿ ಕಾಂಗ್ರೆಸ್‌ ಮುಖಂಡ ರಾಮಲಿಂಗಾರೆಡ್ಡಿ ಅವರ ಶಮನವನ್ನು ತಣಿಸಲು ಯಾವ ಕ್ರಮಕ್ಕೆ ಮುಂದಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರಾಮಲಿಂಗಾರೆಡ್ಡಿ ಅವರನ್ನೂ ರಾಷ್ಟ್ರ ರಾಜಕಾರಣಕ್ಕೆ ಕರೆಸಿಕೊಳ್ಳುವ ಇರಾದೆಯನ್ನು ಕಾಂಗ್ರೆಸ್‌ ಹೈಕಮಾಂಡ್‌ ತೋರಿದರೆ ಅದಕ್ಕೂ ರಾಮಲಿಂಗಾರೆಡ್ಡಿ ಒಪ್ಪುವುದು ಕಷ್ಟವಿದೆ.

ಸದ್ಯ ರಾಮಲಿಂಗಾರೆಡ್ಡಿ ತಮಗೆ ಅಥವಾ ತಮ್ಮ ಮಗಳಿಗೆ ಸಚಿವ ಸ್ಥಾನ ಕೈತಪ್ಪಿದ ಬೇಸರಕ್ಕಿಂತ ರಾಜ್ಯ ಕಾಂಗ್ರೆಸ್‌ನಲ್ಲಿ ‘ತಮಗಾದವರ’ ಬಗ್ಗೆ ಹೆಚ್ಚು ಅಸಮಾಧಾನ ಹೊಂದಿದ್ದಾರೆ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ ರಮೇಶ್‌ ಜಾರಕಿಹೊಳಿ ಅಥವಾ ರಾಮಲಿಂಗಾರೆಡ್ಡಿ ಇಬ್ಬರೂ ಕಾಂಗ್ರೆಸ್‌ ಬಿಡುವುದು ದೂರದ ಮಾತು. ಆದರೆ, ಉತ್ತರದಲ್ಲಿ ರಮೇಶ್‌ ಜಾರಕಿಹೊಳಿ ಹಾಗೂ ದಕ್ಷಿಣದಲ್ಲಿ ರಾಮಲಿಂಗಾರೆಡ್ಡಿ ಅಸಮಾಧಾನವನ್ನು ಕಾಂಗ್ರೆಸ್‌ ಶಮನಗೊಳಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷ ಸಂಘಟನೆಗೆ ದೊಡ್ಡ ಹೊಡೆತ ಬೀಳುವುದಂತೂ ಸುಳ್ಳಲ್ಲ.