samachara
www.samachara.com
ಶಬರಿಮಲೆಗೆ ಮಹಿಳೆಯರ ಪ್ರವೇಶ; ಸಾಂಕೇತಿಕ ಸಮಾನತೆಯನ್ನು ಮೀರಬೇಕಿರುವುದು ಎಲ್ಲಿ?
COVER STORY

ಶಬರಿಮಲೆಗೆ ಮಹಿಳೆಯರ ಪ್ರವೇಶ; ಸಾಂಕೇತಿಕ ಸಮಾನತೆಯನ್ನು ಮೀರಬೇಕಿರುವುದು ಎಲ್ಲಿ?

ದೇಗುಲ ಪ್ರವೇಶದ ಸಾಂಕೇತಿಕ ಸಮಾನತೆಗಿಂತಲೂ ಇಂದು ಮನೆ ಮನಗಳಲ್ಲಿ ಸಮಾನತೆಯ ಮನೋಭಾವ ಬೆಳೆಯಬೇಕಿದೆ.

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಚೆನ್ನೈನ ಮಹಿಳಾ ಸಂಘಟನೆಯ ಸದಸ್ಯೆಯರು ಶಬರಿಮಲೆ ಪ್ರವೇಶಿಸಲು ಬೆಟ್ಟದ ಬುಡದಲ್ಲಿ ಕಾದು ಕುಳಿತಿದ್ದಾರೆ. ಅತ್ತ ಎಂದಿನಂತೆ ಉಗ್ರ ಪ್ರತಿಭಟನೆ ನಡೆಸಲು ಭಕ್ತರ ದಂಡು ಸಜ್ಜಾಗಿದೆ. ಬಿಗಿ ಭದ್ರತೆಯ ಸಂಪ್ರದಾಯ ನಡೆಸಲು ಪೊಲೀಸ್‌ ಪಡೆಯೂ ನಿಯೋಜನೆಗೊಂಡಿದೆ. ಆದರೆ, ಮಹಿಳೆಯರಿಗೆ ಈ ಬಾರಿಯೂ ಶಬರಿಮಲೆ ಪ್ರವೇಶ ಸಿಗುವುದು ಅನುಮಾನ.

ಎಲ್ಲಾ ವಯೋಮಾನದ ಮಹಿಳೆಯರಿಗೂ ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಅವಕಾಶ ಕೊಡಬೇಕೆಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿ ಇಲ್ಲಿಗೆ ಸುಮಾರು ಮೂರು ತಿಂಗಳಾಗಿದೆ. ಧಾರ್ಮಿಕ ನಂಬಿಕೆಗಳ ಹಾಗೂ ಪುರೋಹಿತರ ಮೇಲಾಟಕ್ಕೆ ದೇಶದ ಸರ್ವೋಚ್ಛ ನ್ಯಾಯಾಲಯದ ತೀರ್ಪೂ ಬಲ ಕಳೆದುಕೊಂಡಿದೆ. ಮಹಿಳೆಯರು ಶಬರಿಮಲೆ ಪ್ರವೇಶಕ್ಕೆ ಮುಂದಾದಾಗಲೆಲ್ಲಾ ‘ಭಕ್ತ ಸಮೂಹ’ ಉಗ್ರ ಪ್ರತಿಭಟನೆಯನ್ನು ನಡೆಸುತ್ತಲೇ ಬಂದಿದೆ. ಆದರೂ ಸಮಾನತೆಯನ್ನು ಸಾಧಿಸಿಯೇ ಸಿದ್ಧ ಎಂದು ಮಹಿಳೆಯರು ದೇಗುಲ ಪ್ರವೇಶದ ಪ್ರಯತ್ನಗಳನ್ನು ಮುಂದುವರಿಸುತ್ತಲೇ ಇದ್ದಾರೆ.

ಶಬರಿಮಲೆ ವಿಚಾರ ಈಗ ರಾಜಕೀಯವೂ ಆಗಿರುವುದರಿಂದ ಮಹಿಳೆಯರ ವಿರುದ್ಧ ಮಹಿಳೆಯರನ್ನೇ ಬೀದಿಗಿಳಿಸಿರುವ ಹಿಂದೂಪರ ಸಂಘಟನೆಗಳು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಯಾವುದೇ ಭೀತಿ ಇಲ್ಲದೇ ಕಾನೂನು ಕೈಗೆತ್ತಿಕೊಳ್ಳುತ್ತಿವೆ. ಶಬರಿಮಲೆಯಲ್ಲಿ ಪಕ್ಷ ಬೇಧವಿಲ್ಲದೆ ಈ ಕೆಲಸ ನಡೆಯುತ್ತಿದೆ. ಕೇರಳ ಸರಕಾರವೂ ಶಬರಿಮಲೆ ವಿಚಾರದಲ್ಲಿ ಅಗತ್ಯಕ್ಕಿಂತಲೂ ಹೆಚ್ಚೇ ಸೌಮ್ಯವಾಗಿ ನಡೆದುಕೊಳ್ಳುತ್ತಿದೆ.

Also read: ಮಹಿಳೆಯರ ಹಣಿಯಲು ಮಹಿಳೆಯರೇ ಗುರಾಣಿ; ಸುಪ್ರೀಂ ತೀರ್ಪಿನ ವಿರುದ್ಧ ಬೀದಿಗಿಳಿದವರು ಯಾರು?

ಶಬರಿಮಲೆಗೆ ಮಹಿಳೆಯರ ಪ್ರವೇಶವಾದರೆ ದೇಶದಲ್ಲಿ ಏಕಾಏಕಿ ಮಹಿಳಾ ಸಮಾನತೆ ಸಾಧ್ಯವಾಗುತ್ತದೆ ಎಂದೇನಿಲ್ಲ. ಶಬರಿಮಲೆ ಅಯ್ಯಪ್ಪ ದರ್ಶನ ಮಹಿಳೆಯರ ಧಾರ್ಮಿಕ ಸಮಾನತೆಯ ಸಾಂಕೇತಿಕತೆ ಮಾತ್ರ. ಹೆಣ್ಣನ್ನು ಗಂಡಿಗೆ ಸಮಾನವಾಗಿ ನೋಡುವ ವಿಶಾಲತೆ ಹಿಂದೂ ಧರ್ಮದಲ್ಲಿ ಹಿಂದೂ ಇರಲಿಲ್ಲ, ಇಂದೂ ಇಲ್ಲ.

‘ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ ಪುತ್ರಸ್ತು ಸ್ಥವಿರೇ ತಸ್ಮಾತ್ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂದು ಹೆಣ್ಣಿನ ಇಡೀ ಜೀವನದ ಸ್ವಾತಂತ್ರ್ಯದ ಕೀಲಿ ಕೈಯನ್ನು ಗಂಡಿಗೆ ನೀಡಿರುವ ಮನುಸ್ಮೃತಿಯನ್ನು ದೇಶದ ಸಂವಿಧಾನವಾಗಿಸಲು ಹೊರಟಿರುವ ‘ಭಕ್ತ ಗಣ’ ಸ್ತ್ರೀಯನ್ನು ಸಮಾನವಾಗಿ ನೋಡುವ ಕಣ್ಣು, ಹೃದಯಗಳನ್ನೇ ಕಳೆದುಕೊಂಡಿದೆ. ಧಾರ್ಮಿಕ, ಸಾಮಾಜಿಕ ನಂಬಿಕೆಗಳ ಹೆಸರಿನಲ್ಲಿ ಹಿಂದಿನಿಂದಲೂ ಹೆಣ್ಣನ್ನು ನಿಕೃಷ್ಟವಾಗಿಯೇ ಕಾಣುತ್ತಾ ಬರಲಾಗುತ್ತಿದೆ.

ಮನೆಯಿಂದ ಆರಂಭವಾಗುವ ಹೆಣ್ಣಿನ ಅಸಮಾನತೆ, ಶಾಲೆ, ಕಾಲೇಜು, ಕಚೇರಿಗಳಲ್ಲೂ ಮುಂದುವರಿಯುತ್ತದೆ. ಮುಟ್ಟು, ಹೆರಿಗೆ, ಸಂಸಾರ ತಾಪತ್ರಯಗಳ ಕಾರಣಕ್ಕೆ ಮಹಿಳೆಯರು ಕಚೇರಿಯ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸುವುದಿಲ್ಲ ಎಂಬ ಕಾರಣ ಮುಂದಿಟ್ಟು ಹಲವು ಕಂಪನಿಗಳು ಮಹಿಳೆಯರಿಗೆ ಉದ್ಯೋಗ ನೀಡುವುದನ್ನೇ ನಿರಾಕರಿಸುವ ಸನ್ನಿವೇಶ ಈಗ ಸೃಷ್ಟಿಯಾಗಿದೆ. ಇದೇ ಕಾರಣಕ್ಕೆ ಅರ್ಹತೆ ಇದ್ದರೂ ಸೂಕ್ತ ಅವಕಾಶಗಳಿಲ್ಲದೆ ಮನೆಯಲ್ಲೇ ಕೂರಬೇಕಾದ ಸ್ಥಿತಿಯಲ್ಲಿ ಇಂದಿನ ಹಲವು ಮಹಿಳೆಯರಿದ್ದಾರೆ.

ಮುಟ್ಟಾದ ಮಹಿಳೆ ದೇವರ ಪೂಜೆಗೆ ಅರ್ಹವಲ್ಲ ಎಂಬ ಕಾರಣಕ್ಕೆ ಮಹಿಳೆಯರನ್ನು ಧಾರ್ಮಿಕ ಆಚರಣೆಗಳಿಂದ ದೂರ ಇಡುತ್ತಾ ಬರಲಾಗುತ್ತಿದೆ. ಮುಟ್ಟಿನ ಕುರಿತ ಈ ಮನೋಭಾವದ ವಿರುದ್ಧ 2015ರಲ್ಲಿ ‘ಹ್ಯಾಪಿ ಟು ಬ್ಲೀಡ್‌’ ಅಭಿಯಾನ ಭಾರತದಲ್ಲಿ ಆರಂಭವಾಗಿತ್ತು. ಮುಟ್ಟಿನ ಬಗ್ಗೆ ಇರುವ ಪೂರ್ವಗ್ರಹ ಕಳಚಲು ಈ ಅಭಿಯಾನದ ಮೂಲಕ ಪ್ರಯತ್ನಿಸಲಾಗಿತ್ತು.

‘ಮಹಿಳೆಯರು ಶಬರಿಮಲೆಯ ಅಯ್ಯಪ್ಪ ದೇವಾಲಯ ಪ್ರವೇಶಿಸುವುದು ನಿಷಿದ್ಧವಿದೆ. ಮುಟ್ಟು ಶೋಧಕ ಯಂತ್ರವೊಂದು ಅನ್ವೇಷಣೆಯಾದರೆ, ಅದನ್ನು ನಾವು ದೇವಾಲಯದಲ್ಲಿ ಅಳವಡಿಸಿದರೆ, ಆ ದಿನ ಮಹಿಳೆಯರು ದೇವಾಲಯ ಪ್ರವೇಶಿಸಬಹುದೇನೋ’ ಎಂದು ಟ್ರವಾಂಕೋರ್‌ ದೇವಸ್ವಂ ಬೋರ್ಡ್‌ನ ಅಧ್ಯಕ್ಷ ಪ್ರಯಾರ್‌ ಗೋಪಾಲಕೃಷ್ಣನ್‍ ಹೇಳಿದ್ದರು. ಈ ಹೇಳಿಕೆಗೆ ಮಹಿಳೆಯರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದರೊಂದಿಗೆ ಮುಟ್ಟಿಗಂಟಿರುವ ‘ಮೈಲಿಗೆ’ ಎಂಬ ಕೊಳೆ ತೊಳೆಯುವ ಅಭಿಯಾನವೂ ಆರಂಭವಾಗಿತ್ತು.

ಪಟಿಯಾಲದ ವಿದ್ಯಾರ್ಥಿನಿ ನಿಖಿತಾ ಆಜಾದ್‌ ಫೇಸ್‌ಬುಕ್‌ನಲ್ಲಿ ಹೊತ್ತಿಸಿದ್ದ ‘Happy To Bleed’ ಕಿಡಿಯಿಂದ ಸಾವಿರಾರು ಮಹಿಳೆಯರು ಮುಟ್ಟಿನ ಬಗ್ಗೆ ಮೂಗುಮುರಿಯುವುದರ ವಿರುದ್ಧ ಎದ್ದು ನಿಂತಿದ್ದರು. ಮುಟ್ಟಿನ ಬಗೆಗಿರುವ ಮೈಲಿಗೆ ಎಂಬ ಅಂಟಿನಿಂದ ರೋಸಿಹೋಗಿದ್ದ ಸಾವಿರಾರು ಮಹಿಳೆಯರು ಈ ಆಂದೋಲನಕ್ಕೆ ಇನ್ನಿಲ್ಲದಂತೆ ಬೆಂಬಲ ಸೂಚಿಸಿದ್ದರು. ಪೇಪರ್‌, ನ್ಯಾಪ್‌ಕಿನ್‌ಗಳ ಮೇಲೆ ಬರೆದ ‘Happy To Bleed’ ಘೋಷಣೆಯೊಂದಿಗೆ ತಮ್ಮ ಚಿತ್ರಗಳನ್ನು ಫೇಸ್‌ಬುಕ್‌ ಗೋಡೆಗೆ ತೂಗು ಹಾಕಿದ್ದರು. ಈ ಅಭಿಯಾನ ಒಂದಷ್ಟು ಸದ್ದು ಮಾಡಿತ್ತು. ಆದರೆ, ಮನಸ್ಥಿತಿಗಳು ಮಾತ್ರ ಬದಲಾಗಲಿಲ್ಲ. ಇಂದಿಗೂ ಮುಟ್ಟಿನ ಬಗ್ಗೆ ಅಪವಿತ್ರದ ಭಾವನೆಯೇ ಹಲವರಲ್ಲಿದೆ.

ಮಹಿಳೆಯರು ಈಗ ಶಬರಿಮಲೆ ದೇಗುಲ ಪ್ರವೇಶಕ್ಕೆ ಪ್ರಯತ್ನಿಸುತ್ತಿರುವುದು ಸುಮಾರು ಎಂಟು ದಶಕಗಳ ಹಿಂದೆ ಅಸ್ಪೃಶ್ಯರು ದೇಗುಲ ಪ್ರವೇಶಕ್ಕೆ ಯತ್ನಿಸಿದ ಘಟನೆಯ ಮರುಕಳಿಕೆಯಂತೆಯೇ ಕಾಣುತ್ತಿದೆ. ಅಂಬೇಡ್ಕರ್‌ ನೇತೃತ್ವದಲ್ಲಿ 1930ರಲ್ಲಿ ದಲಿತರು ನಾಸಿಕ್‌ನ ಕಾಲಾರಾಮ ಮಂದಿರ ಪ್ರವೇಶಕ್ಕೆ ಮುಂದಾಗಿದ್ದಾಗಲೂ ಸನಾತನಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ದಲಿತರು ಪ್ರವೇಶಿಸದಂತೆ ಸಂಪ್ರದಾಯವಾದಿಗಳು ದೇಗುಲಕ್ಕೆ ಬೀಗ ಜಡಿದಿದ್ದರು.

“ದೇವಾಲಯ ಪ್ರವೇಶ ಸಿಕ್ಕರೂ ಮತ್ತೆ ಪುರೋಹಿತಶಾಹಿಯ ಶ್ರೇಷ್ಠತೆಯನ್ನೇ ಒಪ್ಪಿದಂತಾಗುತ್ತದೆ. ಇದರಿಂದ ಯಾವುದೇ ವಿಮೋಚನೆ ಸಾಧ್ಯವಿಲ್ಲ. ದೇವಾಲಯ ಪ್ರವೇಶಕ್ಕಿಂತಲೂ ಶೋಷಿತರು ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾದ ಹಕ್ಕುಗಳನ್ನು ಪಡೆಯಲು, ಸಮಾನತೆ ಹಾಗೂ ಘನತೆಯಿಂದ ಬದುಕಲು ಹೋರಾಡಬೇಕು” ಎಂದು ಆಗ ಅಂಬೇಡ್ಕರ್‌ ಹೇಳಿದ್ದರು.

ಎಂಟು ದಶಕಗಳ ಹಿಂದೆ ಅಂಬೇಡ್ಕರ್‌ ಅಂದು ಹೇಳಿದ್ದ ಮಾತುಗಳು ಇಂದಿಗೂ ಪ್ರಸ್ತುತವೆನಿಸುತ್ತವೆ. ಮನೆಯಲ್ಲೇ ನಿತ್ಯ ಶೋಷಣೆ ಅನುಭವಿಸುತ್ತಿರುವ ಮಹಿಳೆಯರು ಮನೆ ಗೆದ್ದು ಮಾರು ಗೆಲ್ಲುವ ಮನಸ್ಸು ಮಾಡಬೇಕಿದೆ. ಹೆಣ್ಣೆಂದರೆ ದ್ವಿತೀಯ ದರ್ಜೆಯ ಪ್ರಜೆ ಎಂಬ ಮನೋಭಾವವನ್ನು ಮನೆಯಿಂದಲೇ ಅಳಿಸುವ ಕಡೆಗೆ ಮಹಿಳಾ ಹೋರಾಟದ ದೃಷ್ಟಿ ಹರಿಯಬೇಕಿದೆ.

ಭಾರೀ ಪ್ರತಿರೋಧದ ನಡುವೆಯೂ ಒಂದು ವೇಳೆ ಶಬರಿಮಲೆಗೆ ಮಹಿಳೆಯರ ಪ್ರವೇಶ ಸಿಕ್ಕರೂ ಅದು ಕೇವಲ ಸಾಂಕೇತಿಕ ಗೆಲುವು ಮಾತ್ರ. ಆದರೆ, ಮಹಿಳೆಯರು ನಿಜಕ್ಕೂ ಹೋರಾಡಬೇಕಿರುವುದು ಮನೆಯಲ್ಲಿನ ಅಸಮಾನತೆಯ ವಿರುದ್ಧ, ತಮ್ಮ ಸುತ್ತಮುತ್ತಲಿನ ಸಮಾಜದಲ್ಲಿರುವ ಅಸಮಾನತೆಯ ವಿರುದ್ಧ, ಕೆಲಸದ ಸ್ಥಳದಲ್ಲಿನ ಅಸಮಾನತೆಯ ವಿರುದ್ಧ. ಹೆಣ್ಣು ಮಕ್ಕಳ ಮೇಲೆ ನಿರ್ಬಂಧಗಳನ್ನು ಹೇರುವ ಬದಲು ಎಂಥದ್ದೇ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುವುದನ್ನು ಹಾಗೂ ಶೋಷಣೆಯನ್ನು ಪ್ರತಿರೋಧಿಸುವುದನ್ನು ಮನೆಯಿಂದಲೇ ಕಲಿಸಬೇಕಿದೆ. ಇದಕ್ಕಾಗಿ ಗಂಡೂ ಕೂಡಾ ಹೆಣ್ಣಿನ ಸ್ವಾತಂತ್ರ್ಯದ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ್ದಾದು ಅಗತ್ಯ.

Also read: ಶಬರಿಮಲೆ ಎಂಬ ಸ್ಥಾಪಿತ ನಂಬಿಕೆ ಮತ್ತು 250 ಕೋಟಿ ರೂ. ವಾರ್ಷಿಕ ಆದಾಯದ ಹಿಂದಿನ ಅಸಲಿ ಕತೆ!