samachara
www.samachara.com
ಡಿಮಾನಟೈಸೇಷನ್‌ ಇಫೆಕ್ಟ್‌: ಬ್ಯಾಂಕ್‌ ಗ್ರಾಹಕರಿಗೆ 10,391 ಕೋಟಿ ರೂ. ದಂಡದ ಹೊಡೆತ!
COVER STORY

ಡಿಮಾನಟೈಸೇಷನ್‌ ಇಫೆಕ್ಟ್‌: ಬ್ಯಾಂಕ್‌ ಗ್ರಾಹಕರಿಗೆ 10,391 ಕೋಟಿ ರೂ. ದಂಡದ ಹೊಡೆತ!

ಕಳೆದ ಮೂರುವರೆ ವರ್ಷಗಳಲ್ಲಿ ಸಾರ್ವಜನಿಕ ರಂಗದ ಬ್ಯಾಂಕ್‌ಗಳು ಗ್ರಾಹಕರಿಂದ ದಂಡದ ರೂಪದಲ್ಲಿ 10,391 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿವೆ.

ನರೇಂದ್ರ ಮೋದಿ ಸರಕಾರದ ‘ಡಿಮಾನಟೈಸೇಷನ್‌’ ಎಂಬ ಆರ್ಥಿಕ ನಿರ್ಧಾರ ಜನರ ಮೇಲೆ ಬೀರಿದ ಪರಿಣಾಮಗಳಿಗೆ ಹೊಸ ಅಂಕಿ ಅಂಶಗಳು ಬ್ಯಾಂಕಿಂಗ್‌ ವಲಯದಿಂದ ಸಿಕ್ಕಿವೆ.

ಕಳೆದ ಮೂರುವರೆ ವರ್ಷಗಳಲ್ಲಿ ಸಾರ್ವಜನಿಕ ರಂಗದ ಬ್ಯಾಂಕ್‌ಗಳು ಗ್ರಾಹಕರಿಂದ ದಂಡದ ರೂಪದಲ್ಲಿ 10,391 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿವೆ ಎಂದು ಸಂಸತ್‌ನಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಹಣಕಾಸು ಇಲಾಖೆ ಉತ್ತರ ನೀಡಿದೆ. ಇದರಲ್ಲಿ ಬ್ಯಾಂಕ್‌ ಖಾತೆಯಲ್ಲಿ ಕನಿಷ್ಠ ಮೊತ್ತ ನಿರ್ವಹಣೆ ಮಾಡದ ಕಾರಣಕ್ಕೆ ಸಂಗ್ರಹಿಸಿದ ಮೊತ್ತವೇ ದೊಡ್ಡ ಪ್ರಮಾಣದಲ್ಲಿದೆ. ಇನ್ನುಳಿದ ಮೊತ್ತವನ್ನು ಎಟಿಎಂಗಳ ದಂಡದಿಂದ ಸಂಗ್ರಹಿಸಲಾಗಿದೆ. ತಿಂಗಳ ಮಿತಿಯನ್ನು ಮೀರಿ ಹಣ ಡ್ರಾ ಮಾಡಿದವರು ಈ ದಂಡವನ್ನು ಬ್ಯಾಂಕ್‌ಗಳಿಗೆ ಕಟ್ಟಿದ್ದಾರೆ.

ಖಾತೆಗಳಲ್ಲಿ ಕನಿಷ್ಠ ಮೊತ್ತವನ್ನು ನಿರ್ವಹಣೆ ಮಾಡದವರಿಗೆ ಎಸ್‌ಬಿಐ 2012ರ ವರೆಗೆ ದಂಡ ವಿಧಿಸುತ್ತಿತ್ತು. ನಂತರ ಈ ನಿರ್ಧಾರವನ್ನು ಮಾರ್ಚ್‌ 31, 2016ರವರೆಗೆ ಬ್ಯಾಂಕ್‌ ಕೈ ಬಿಟ್ಟಿತ್ತು. ಆದರೆ ಅನಾಣ್ಯೀಕರಣದ ನಂತರ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ ‘ಎಸ್‌ಬಿಐ’ ಇದರಿಂದ ಹೊರಬರಲು ಏಪ್ರಿಲ್‌ 1, 2017ರಲ್ಲಿ ಖಾತೆಗಳಲ್ಲಿ ಕನಿಷ್ಠ ಮೊತ್ತ ನಿರ್ವಹಣೆ ಮಾಡದವರ ಮೇಲೆ ದಂಡ ಹಾಕುವ ಕ್ರಮಕ್ಕೆ ಮುಂದಾಯಿತು. ಆರಂಭದಲ್ಲಿ ದೊಡ್ಡ ಮೊತ್ತದ ಹಣವನ್ನು ಮಿನಿಮಮ್‌ ಬ್ಯಾಲೆನ್ಸ್‌ ಎಂಬುದಾಗಿ ಬ್ಯಾಂಕ್‌ ನಮೂದಿಸಿತ್ತು. ನಂತರ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಮೊತ್ತವನ್ನು ಅಕ್ಟೋಬರ್‌ 1, 2017ರಲ್ಲಿ ಕಡಿತಗೊಳಿಸಲಾಯಿತು.

ಹೀಗಿದ್ದೂ ಗ್ರಾಹಕರು ಕನಿಷ್ಠ ಮೊತ್ತವನ್ನು ಬ್ಯಾಂಕ್‌ ಖಾತೆಯಲ್ಲಿ ಉಳಿಸಲು ವಿಫಲವಾಗಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ಬರೋಬ್ಬರಿ 2,894 ಕೋಟಿ ರೂಪಾಯಿಗಳನ್ನು ದಂಡದ ರೂಪದಲ್ಲಿ ಕಟ್ಟಿದ್ದಾರೆ. ಇದೇ ವೇಳೆ ಉಳಿದ ಬ್ಯಾಂಕ್‌ಗಳೂ ಖಾತೆಯಲ್ಲಿ ಕನಿಷ್ಠ ಮೊತ್ತ ಇರದಿದ್ದರೆ ದಂಡ ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಿದ್ದವು. ಕೆಲವು ಬ್ಯಾಂಕ್‌ಗಳಲ್ಲಿ ಮೊದಲೇ ಈ ನಿಯಮ ಜಾರಿಯಲ್ಲಿತ್ತು. ಹೀಗೆ ಒಟ್ಟಾರೆ ಮೂರುವರೆ ವರ್ಷದಲ್ಲಿ ಎಲ್ಲಾ ಬ್ಯಾಂಕ್‌ಗಳು ಸೇರಿ 6,246 ಕೋಟಿ ರೂಪಾಯಿಗಳ ದಂಡವನ್ನು ಗ್ರಾಹಕರಿಂದ ಕಿತ್ತುಕೊಂಡಿವೆ.

ಅತೀ ಹೆಚ್ಚು ದಂಡ ವಸೂಲಿ ಮಾಡಿದ ಬ್ಯಾಂಕ್‌ಗಳಲ್ಲಿ ಹಗರಣಕ್ಕೆ ಹೆಸರುವಾಸಿಯಾದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ 493 ಕೋಟಿ ರೂಪಾಯಿ, ಕೆನರಾ ಬ್ಯಾಂಕ್‌ 352 ಕೋಟಿ ರೂ., ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ 348 ಕೋಟಿ ರೂ., ಬ್ಯಾಂಕ್‌ ಆಫ್‌ ಬರೋಡಾ 328 ಕೋಟಿ ರೂ.ಗಳನ್ನು ಸ್ಥಾನ ಪಡೆದಿವೆ. ಸ್ಟೇಟ್‌ ಬ್ಯಾಂಕ್‌ ಸೇರಿ ಕೆಲವು ಬ್ಯಾಂಕ್‌ಗಳಂತೂ ತಮ್ಮ ತ್ರೈಮಾಸಿಕ ಲಾಭಕ್ಕಿಂತ ಹೆಚ್ಚಾಗಿ ದಂಡವನ್ನೇ ಸಂಗ್ರಹಿಸಿವೆ.

‘ಡಿಮಾನಟೈಸೇಷನ್‌’ ನಿರ್ಧಾರ ಮಿನಿಮಮ್‌ ಬ್ಯಾಲೆನ್ಸ್‌ಗೆ ಮಾತ್ರ ಹೊಡೆತ ನೀಡಿಲ್ಲ. ಅನಾಣ್ಯೀಕರಣದಿಂದಾಗಿ ಬ್ಯಾಂಕ್‌ಗಳ ಎಟಿಎಂಗಳಲ್ಲಿ ನಗದು ಕೊರತೆ, ದಿನದ ವಿತ್‌ ಡ್ರಾ ಮಿತಿ ಇಳಿಕೆಯಿಂದ ಜನರು ಬೇಕಾದಷ್ಟು ಹಣ ಡ್ರಾ ಮಾಡಲು ಸಾಧ್ಯವಾಗಿರಲಿಲ್ಲ. ಇದರಿಂದ ಅನಿವಾರ್ಯವಾಗಿ ಮಿತಿಗಿಂತ ಹೆಚ್ಚಾಗಿ ಎಟಿಎಂ ಬಳಸಬೇಕಾಗಿ ಬಂದಿತ್ತು. ಇದೀಗ ಇದಕ್ಕೂ ಗ್ರಾಹಕರು ದೊಡ್ಡ ಮೊತ್ತದ ದಂಡ ತೆತ್ತಿದ್ದಾರೆ.

ನಿಗದಿತ ಉಚಿತ ಬಳಕೆಯ ಮಿತಿಯ ನಂತರ ಹೆಚ್ಚುವರಿ ಎಟಿಎಂ ಬಳಸಿದರೆ ಬ್ಯಾಂಕ್‌ಗಳು ದಂಡ ವಿಧಿಸುವ ಪರಿಪಾಠವನ್ನು ಹೊಂದಿವೆ. ಡಿಮಾನಟೈಸೇಷನ್‌ ನಂತರ ಈ ದಂಡ ವಿಧಿಸುವ ಘಟನೆಗಳು ಹೆಚ್ಚಾಗಿದ್ದು ಕಳೆದ ಮೂರುವರೆ ವರ್ಷಗಳಲ್ಲಿ ಸಾರ್ವಜನಿಕ ರಂಗದ ಬ್ಯಾಂಕ್‌ಗಳು 4,145 ಕೋಟಿ ರೂಪಾಯಿಗಳನ್ನು ಎಟಿಎಂ ದಂಡವಾಗಿ ವಸೂಲಿ ಮಾಡಿವೆ. ಇಲ್ಲೂ ಸ್ಟೇಟ್‌ಬ್ಯಾಂಕ್‌ ಆಫ್‌ ಇಂಡಿಯಾ ಮೊದಲ ಸ್ಥಾನದಲ್ಲಿದ್ದು ಬರೋಬ್ಬರಿ 1,554 ಕೋಟಿ ರೂಪಾಯಿಗಳನ್ನು ಗ್ರಾಹಕರಿಂದ ದಂಡವಾಗಿ ಸಂಗ್ರಹ ಮಾಡಿದೆ. ಬ್ಯಾಂಕ್‌ ಆಫ್‌ ಇಂಡಿಯಾ 464 ಕೋಟಿ ರೂ., ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ 323 ಕೋಟಿ ರೂ., ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ 241 ಕೋಟಿ ರೂ., ಮತ್ತು ಬ್ಯಾಂಕ್‌ ಆಫ್‌ ಬರೋಡಾ 183 ಕೋಟಿ ರೂಪಾಯಿಗಳೊಂದಿಗೆ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿವೆ.

ಇದು ಕೇವಲ ಸಾರ್ವಜನಿಕ ಬ್ಯಾಂಕ್‌ಗಳ ಕತೆ ಮಾತ್ರ . ಇದೇ ಅವಧಿಯಲ್ಲಿ ದೊಡ್ಡ ಮೊತ್ತದ ದಂಡದ ಹಣವನ್ನು ಖಾಸಗಿ ಬ್ಯಾಂಕ್‌ಗಳು ಸಂಗ್ರಹಿಸಿವೆ. ಅವುಗಳ ವಿವರಗಳು ಮಾತ್ರ ಲಭ್ಯವಿಲ್ಲ ಅಷ್ಟೇ.

ಲೋಕಸಭಾ ಸದಸ್ಯ ದಿವ್ಯೇಂದು ಅಧಿಕಾರಿ ಮಂಗಳವಾರ ಕೇಳಿದ ಪ್ರಶ್ನೆಗೆ ಹಣಕಾಸು ಇಲಾಖೆ ಈ ಉತ್ತರ ನೀಡಿದೆ. ಆರ್‌ಬಿಐ ನಿರ್ದೇಶನದ ಪ್ರಕಾರ ಮುಂಬೈ, ನವದೆಹಲಿ, ಚೆನ್ನೈ, ಕೊಲ್ಕೊತ್ತಾ, ಬೆಂಗಳೂರು ಮತ್ತು ಹೈದರಾಬಾದ್‌ನಂಥ ಆರು ಮೆಟ್ರೊ ನಗರದಗಳಲ್ಲಿ ಕನಿಷ್ಠ ಮೂರು ಬಾರಿ ಬೇರೆ ಬ್ಯಾಂಕ್‌ಗಳ ಎಟಿಎಂ ಬಳಕೆಗೆ ಅವಕಾಶವಿದೆ. ಮತ್ತು ಎಲ್ಲಾ ಸ್ಥಳಗಳಲ್ಲಿ ಕನಿಷ್ಠ 5 ಬಾರಿ ತನ್ನ ಬ್ಯಾಂಕ್‌ನ ಎಟಿಎಂಗಳ ಉಚಿತ ಬಳಕೆಗೆ ಬ್ಯಾಂಕ್‌ಗಳು ಅವಕಾಶ ನೀಡಬೇಕು ಎಂಬ ನಿಯಮವಿದೆ. ಇದನ್ನು ಮೀರಿದರೆ ಬ್ಯಾಂಕ್‌ಗಳು ಗ್ರಾಹಕರಿಗೆ ದಂಡ ವಿಧಿಸುತ್ತಿವೆ.

ಪ್ರತೀ ವ್ಯವಹಾರಕ್ಕೆ ಗರಿಷ್ಠ 20 ರೂವರೆಗೆ ದಂಡ ವಿಧಿಸಲು ಅವಕಾಶವಿದೆ. ಹೀಗೆ ದಂಡ ಸಂಗ್ರಹಿಸಿಯೇ ಬ್ಯಾಂಕ್‌ಗಳು 4,145 ಕೋಟಿ ರೂಪಾಯಿ ಖಮಾಯಿಸಿವೆ. ಜತೆಗೆ ಮಿನಿಮಮ್‌ ಬ್ಯಾಲೆನ್ಸ್‌ ನಿಯಮವೂ ಸೇರಿ 10,391 ಕೋಟಿ ರೂಪಾಯಿಗಳನ್ನು ಜೇಬಿಗಿಳಿಸಿವೆ. ಥ್ಯಾಂಕ್ಸ್‌ ಟು ಡಿಮಾನಟೈಸೇಷನ್‌; ಥ್ಯಾಂಕ್ಸ್‌ ಟು ನರೇಂದ್ರ ಮೋದಿ!