samachara
www.samachara.com
ಸಂಪುಟ- ಸರಕಾರ- ವಾಸ್ತು ಪ್ರಕಾರ: ಜೆಡಿಎಸ್‌ ಪಾಲಿಗೆ ಇದು ‘ಶೂನ್ಯ’ ಮಾಸ!
COVER STORY

ಸಂಪುಟ- ಸರಕಾರ- ವಾಸ್ತು ಪ್ರಕಾರ: ಜೆಡಿಎಸ್‌ ಪಾಲಿಗೆ ಇದು ‘ಶೂನ್ಯ’ ಮಾಸ!

ವಾಸ್ತು ಪ್ರಕಾರ ನಡೆಯುತ್ತಿರುವ ಸಮ್ಮಿಶ್ರ ಸರಕಾರದ ಸಂಪುಟ ವಿಸ್ತರಣೆ ಕಾಂಗ್ರೆಸ್‌ನ ಕೆಲವರಿಗೆ ಖುಷಿ ತಂದಿದ್ದರೆ, ಜೆಡಿಎಸ್‌ ಪಾಲಿಗೆ ಈ ಡಿಸೆಂಬರ್‌ ‘ಶೂನ್ಯ’ವಾಗಿದೆ.

ಕೊನೆಗೂ ಸಚಿವ ಸಂಪುಟ ವಿಸ್ತರಣೆಗೆ ಶನಿವಾರ ಸಂಜೆ ಸಮಯ ನಿಗದಿಯಾಗಿದೆ. ಕಾಂಗ್ರೆಸ್‌ನ 8 ಮಂದಿ ಶಾಸಕರು ರಾಜಭವನದ ಗಾಜಿನ ಮನೆಯಲ್ಲಿ ಸಮ್ಮಿಶ್ರ ಸರಕಾರದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಶನಿವಾರ ನಿಗದಿಯಾಗಿರುವ ಈ ಪ್ರಮಾಣ ವಚನ ಸ್ವೀಕಾರ ಕೇವಲ ಕಾಂಗ್ರೆಸ್‌ ಪಾಲಿನ ಸಂಪುಟ ವಿಸ್ತರಣೆಯಷ್ಟೇ. ಜೆಡಿಎಸ್‌ನ ಎರಡು ಸಚಿವ ಸ್ಥಾನಗಳ ವಿಸ್ತರಣೆಯನ್ನು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಸಂಕ್ರಾಂತಿವರೆಗೆ ಮುಂದೂಡಿದ್ದಾರೆ.

ನಂಬಿಕೆ, ದೈವ ನಂಬಿಕೆ, ವಾಸ್ತು ನಂಬಿಕೆ, ಜೋತಿಷ್ಯ -ಇವೆಲ್ಲವನ್ನೂ ರಾಜಕೀಯವಾಗಿಯೂ ಬಳಸಿಕೊಳ್ಳುವ ಚತುರ ರಾಜಕಾರಣಿ ದೇವೇಗೌಡ. ಇಂಥ ನಂಬಿಕೆಗಳನ್ನು ಮುಂದಿಟ್ಟುಕೊಂಡೇ ಈ ಹಿಂದೆ ಸಚಿವ ಸಂಪುಟ ವಿಸ್ತರಣೆಯ ಕಸರತ್ತನ್ನು ತಿಂಗಳುಗಟ್ಟಲೆ ಮುಂದೂಡಿದ ಜೆಡಿಎಸ್‌ ಈಗ ತನ್ನೆರಡು ಸಚಿವ ಸ್ಥಾನಗಳ ಹಂಚಿಕೆಯನ್ನು ಮತ್ತೆ ಜನವರಿವರೆಗೆ ಮುಂದೂಡಿದೆ. ಈ ಮೂಲಕ ದೊಡ್ಡಗೌಡರ ನಂಬಿಕೆ ರಾಜಕೀಯವಾಗಿಯೂ ಲಾಭವಾಗುತ್ತಿದೆ.

ಸಮ್ಮಿಶ್ರ ಸರಕಾರ ರಚನೆಯಾದಾಗಿನಿಂದಲೂ ಸಚಿವ ಸ್ಥಾನದ ಹಂಚಿಕೆ ಕಸರತ್ತಿನ ರೀತಿಯಲ್ಲೇ ನಡೆದಿದೆ. ಶಾಸಕರಾಗಿ ಆಯ್ಕೆಯಾಗಿರುವ ಎಲ್ಲರೂ ಈಗ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದವರೂ ಸಚಿವರಾಗಲು ಹಪಹಪಿಸುತ್ತಿದ್ದಾರೆ. ಹಣಬಲ, ಜಾತಿಬಲ ಹಾಗೂ ಪಕ್ಷದ ನಾಯಕರ ಕೃಪಾಪೋಷಣೆಯಲ್ಲಿರುವ ಶಾಸಕರು ಸಚಿವರಾಗಿ ಬಡ್ತಿ ಪಡೆಯುವ ಕಾಲಘಟ್ಟದಲ್ಲಿ ಸದ್ಯದ ರಾಜಕೀಯ ನಿಂತಿದೆ. ಆದರೆ, ಎಲ್ಲಾ ಶಾಸಕರ ಆಸೆಯನ್ನು ಈಡೇರಿಸುವುದು ವಾಸ್ತವದಲ್ಲಿ ಅಸಾಧ್ಯ.

ತಿಂಗಳ ಹಿಂದೆ ಸಂಪುಟ ವಿಸ್ತರಣೆಯ ಪ್ರಸ್ತಾವ ಬಂದಾಗ ಸಚಿವ ಸ್ಥಾನದ ಆಕಾಂಕ್ಷಿಗಳ ಅಸಮಾಧಾನವನ್ನು ತಣಿಸುವುದು ಕಾಂಗ್ರೆಸ್‌ ಮುಖಂಡರಿಗೆ ದೊಡ್ಡ ತಲೆನೋವಾಗಿತ್ತು. ಜಾರಕಿಹೊಳಿ ಸೋದರರು ಇನ್ನೇನು ತಮ್ಮ ಬೆಂಬಲಿಗ ಶಾಸಕರೊಂದಿಗೆ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರೇ ಬಿಡುತ್ತಾರೆ ಎಂಬ ಮಟ್ಟಿಗೆ ರಾಜಕೀಯ ಸನ್ನಿವೇಶ ಸೃಷ್ಟಿಯಾಗಿತ್ತು. ಆದರೆ, ಅದ್ಯಾವುದೂ ಆಗದೆ ರಮೇಶ್‌ ಜಾರಕಿಹೊಳಿ ಅವರನ್ನು ಸಚಿವ ಸ್ಥಾನದಿಂದ ಕೈ ಬಿಟ್ಟು ಸತೀಶ್‌ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಸಮ್ಮಿಶ್ರ ಸರಕಾರಕ್ಕೆ ಬೆಂಬಲ ನೀಡಿದ್ದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ (ಕೆಪಿಜೆಪಿ) ರಾಣೆಬೆನ್ನೂರು ಶಾಸಕ ಆರ್‌. ಶಂಕರ್‌ ಅವರನ್ನೂ ಸಂಪುಟದಿಂದ ಕೈಬಿಡಲಾಗಿದೆ. ವಿಧಾನ ಪರಿಷತ್ ಸದಸ್ಯೆ ಜಯಮಾಲಾ ಅವರನ್ನೂ ಸಂಪುಟದಿಂದ ಕೈ ಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಹೀಗೆ ಕೆಲವರನ್ನು ಸಂಪುಟದಿಂದ ಕೈ ಬಿಟ್ಟು ಹಲವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಕಸರತ್ತನ್ನು ಕಾಂಗ್ರೆಸ್‌ ನಡೆಸಿದ್ದರೆ, ಜೆಡಿಎಸ್‌ ತನ್ನ ಬಳಿ ಇರುವ ಎರಡು ಸಚಿವ ಸ್ಥಾನಗಳನ್ನು ಸದ್ಯಕ್ಕಂತೂ ಮುಟ್ಟದಿರಲು ನಿರ್ಧರಿಸಿದೆ. ಕೇವಲ ಕಾಂಗ್ರೆಸ್‌ನಲ್ಲಿ ಮಾತ್ರವಲ್ಲ ಜೆಡಿಎಸ್ ಒಳಗೂ ಸಚಿವ ಸ್ಥಾನದ ಆಕಾಂಕ್ಷಿಗಳು ಸಾಕಷ್ಟು ಮಂದಿ ಇದ್ದಾರೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ಗೂ ಅಧಿಕಾರದ ಪಾಲು ಸಿಗುವಲ್ಲಿ ತಮ್ಮ ಪಾತ್ರವೇ ಪ್ರಮುಖವಾದುದು ಎಂದು ಭಾವಿಸಿರುವ ಜೆಡಿಎಸ್‌ ಶಾಸಕರೂ ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಆದರೆ, ಎಲ್ಲಾ ಶಾಸಕರನ್ನು ಕೇವಲ ಸಚಿವ ಸ್ಥಾನದ ಮೂಲಕ ಸಮಾಧಾನ ಪಡಿಸಲು ಸಾಧ್ಯವಿಲ್ಲ.

ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅತೃಪ್ತರನ್ನು ಓಲೈಸುವುದು ಕಷ್ಟವಾಗಲಿದೆ ಎಂಬ ಕಾರಣಕ್ಕಾಗಿಯೇ ತಿಂಗಳಿಂದ ತಿಂಗಳಿಗೆ ಈ ಕಸರತ್ತನ್ನು ಮುಂದೂಡಿಕೊಂಡೇ ಬರಲಾಗುತ್ತಿತ್ತು. ಸೆಪ್ಟೆಂಬರ್‌ ವೇಳೆಗೆ ಸಂಪುಟ ವಿಸ್ತರಣೆಯ ಮಾತು ಬಂದಾಗ ಇದೇ ದೇವೇಗೌಡರು ಪಿತೃಪಕ್ಷದ ನೆಪವೊಡ್ಡಿ ತಿಂಗಳಮಟ್ಟಿಗೆ ಸಂಪುಟ ಸಂಕಟವನ್ನು ಮುಂದೂಡಿದ್ದರು. ಅಕ್ಟೋಬರ್‌ನಲ್ಲಿ ಸಂಪುಟ ವಿಸ್ತರಣೆಯ ಬಗ್ಗೆ ಮಾತು ಬಂದಾಗ ಬೆಳಗಾವಿ ಅಧಿವೇಶನದ ಕಾರಣ ನೀಡಲಾಗಿತ್ತು. ಬೆಳಗಾವಿ ಅಧಿವೇಶನದ ನಂತರ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂಬ ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿಯ ಮಾತಿನಂತೆ ಶನಿವಾರ ಹೊಸ ಸಚಿವರ ಪ್ರಮಾಣ ವಚನ ಸ್ವೀಕಾರದ ಸಿದ್ಧತೆ ನಡೆದಿದೆ.

ಆದರೆ, ಜೆಡಿಎಸ್‌ ತನ್ನ ಎರಡು ಸಚಿವ ಸ್ಥಾನಗಳ ಭರ್ತಿಯ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಶುಕ್ರವಾರ ರಾತ್ರಿ ದೇವೇಗೌಡರ ಪದ್ಮನಾಭನಗರ ನಿವಾಸದಲ್ಲಿ ನಡೆದ ಜೆಡಿಎಸ್‌ ಪ್ರಮುಖರ ಸಭೆಯಲ್ಲಿ ಈ ಎರಡು ಸ್ಥಾನಗಳ ಭರ್ತಿಗೆ ಸಂಕ್ರಾಂತಿ ವೇಳೆಗೆ ಸಮಯ ನಿಗದಿ ಮಾಡಲು ನಿರ್ಧರಿಸಲಾಗಿದೆ ಎಂಬ ಮಾತುಗಳಿವೆ. ದೇವೇಗೌಡರು ಡಿಸೆಂಬರ್‌ ತಿಂಗಳ ಶೂನ್ಯಮಾಸದ ನೆಪವೊಡ್ಡಿ ಜೆಡಿಎಸ್‌ನ ಎರಡು ಸ್ಥಾನಗಳ ಭರ್ತಿ ವಿಚಾರವನ್ನು ತಾತ್ಕಾಲಿಕವಾಗಿ ತಿಂಗಳ ಮಟ್ಟಿಗೆ ಮುಂದೂಡಿದ್ದಾರೆ.

ಜೆಡಿಎಸ್‌ನಿಂದ ಕೇವಲ ವಿಧಾನಸಭಾ ಸದಸ್ಯರಲ್ಲದೆ, ವಿಧಾನ ಪರಿಷತ್‌ ಸದಸ್ಯರೂ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್‌ನಿಂದ ಸಚಿವ ಸ್ಥಾನಕ್ಕೆ ವಿಧಾನ ಪರಿಷತ್‌ ಸದಸ್ಯ ಬಿ.ಎಂ. ಫಾರೂಕ್‌ ಮತ್ತು ಸಕಲೇಶಪುರ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬಂದಿದ್ದವು. ಆದರೆ, ಇದೇ ಹೆಸರುಗಳನ್ನು ಜೆಡಿಎಸ್‌ ಅಂತಿಮಗೊಳಿಸಲಿದೆಯೇ ಅಥವಾ ಹೊಸಬರು ಸಚಿವರಾಗಲಿದ್ದಾರೆ ಎಂಬುದನ್ನು ತೆನೆಹೊತ್ತ ಪಕ್ಷ ಇನ್ನೂ ಗುಟ್ಟಾಗಿಯೇ ಇಟ್ಟಿದೆ.

ಸಮ್ಮಿಶ್ರ ಸರಕಾರದ ಪಾಲು ಹಂಚಿಕೆ ಲೆಕ್ಕಾಚಾರದ ಪ್ರಕಾರ ಎರಡು ಸಚಿವ ಸ್ಥಾನದ ಜತೆಗೆ 10 ನಿಗಮ- ಮಂಡಳಿ ಮತ್ತು 4 ಸಂಸದೀಯ ಕಾರ್ಯದರ್ಶಿ ಸ್ಥಾನಗಳು ಜೆಡಿಎಸ್‌ ಬಳಿ ಇವೆ. ಈ ಸ್ಥಾನಗಳನ್ನು ಜೆಡಿಎಸ್‌ ಯಾರ್ಯಾರಿಗೆ ಹಂಚಲಿದೆ, ಯಾರು ಸಂಪುಟ ಸೇರುತ್ತಾರೆ, ಯಾರು ಯಾವ ನಿಗಮ- ಮಂಡಳಿಗಳಿಗೆ ನೇಮಕವಾಗುತ್ತಾರೆ ಎಂಬ ಕುತೂಹಲವನ್ನು ಸುಮಾರು ಒಂದು ತಿಂಗಳಮಟ್ಟಿಗಂತೂ ದೇವೇಗೌಡರು ಮುಂದಕ್ಕೆ ಹಾಕಿದ್ದಾರೆ.

Also read: ‘ದೊಡ್ಡಗೌಡರ ದೈವಭಕ್ತಿ’: ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ರೇವಣ್ಣ ಸಂಖ್ಯಾಶಾಸ್ತ್ರ!