samachara
www.samachara.com
ಕಾರ್ಮಿಕರ ಕೊರತೆ, ಹೋಂ ಸ್ಟೇ ಆದಾಯ; ಕೊಡಗಿನಲ್ಲಿ ಕುಗ್ಗುತ್ತಿದೆ ಭತ್ತದ ಬೇಸಾಯ
COVER STORY

ಕಾರ್ಮಿಕರ ಕೊರತೆ, ಹೋಂ ಸ್ಟೇ ಆದಾಯ; ಕೊಡಗಿನಲ್ಲಿ ಕುಗ್ಗುತ್ತಿದೆ ಭತ್ತದ ಬೇಸಾಯ

ಕಾಫಿ ಬೆಳೆ ಹಾಗೂ ಹೋಂ ಸ್ಟೇ ಕಡೆಗೆ ಕೊಡಗಿನ ರೈತರ ಆಸಕ್ತಿ ಹೆಚ್ಚಾಗಿರುವುದರಿಂದ ಕೊಡಗಿನಲ್ಲಿ ಭತ್ತದ ಕೃಷಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

ಪುಟ್ಟ ಜಿಲ್ಲೆ ಕೊಡಗು ಕಾಫಿಯ ಕಣಜ ಎಂದೇ ಹೆಸರು ಪಡೆದಿದೆ. ದೇಶದಲ್ಲಿ ಪ್ರತಿವರ್ಷ ಸುಮಾರು 3.5 ಲಕ್ಷ ಟನ್ ಕಾಫಿ ಉತ್ಪಾದನೆಯಾದರೆ, ಆ ಪೈಕಿ ಕೊಡಗಿನ ಉತ್ಪಾದನೆಯೇ 1.2 ಲಕ್ಷ ಟನ್. ಪೂರಕ ಹವಾಗುಣ ಮತ್ತು ಮಣ್ಣಿನ ಸತ್ವದಿಂದಾಗಿ ಪುಟ್ಟ ಜಿಲ್ಲೆಯಾಗಿದ್ದರೂ ಕಾಫಿ ಬೆಳೆಯುವಲ್ಲಿ ಇತರೆ ಕಾಫಿ ಬೆಳೆಯುವ ಜಿಲ್ಲೆಗಳನ್ನೂ ಕೊಡಗು ಮೀರಿಸಿದೆ.

ಕಾಫಿ ಜಿಲ್ಲೆಯ ಪ್ರಮುಖ ಬೆಳೆಯಾದರೂ ಗಣನೀಯ ಪ್ರಮಾಣದಲ್ಲಿ ಭತ್ತವನ್ನೂ ಬೆಳೆಯಲಾಗುತ್ತಿತ್ತು. ಆದರೆ, ವರ್ಷದಿಂದ ವರ್ಷಕ್ಕೆ ಕೊಡಗಿನಲ್ಲಿ ಭತ್ತದ ಬೆಳೆ ಬೆಳೆಯುವುದು ಕಡಿಮೆಯಾಗಿದೆ. ಭತ್ತದ ಗದ್ದೆಗಳಲ್ಲಿ ಕೆಲಸ ಮಾಡಲು ಕೃಷಿ ಕೂಲಿ ಕಾರ್ಮಿಕರ ಕೊರತೆ ಹಾಗೂ ಗದ್ದೆಗಳ ಜಾಗದಲ್ಲಿ ಈಗ ಹೋಂ ಸ್ಟೇಗಳು ತಲೆ ಎತ್ತಿರುವುದು ಭತ್ತದ ಬೇಸಾಯವನ್ನು ಕುಗ್ಗಿಸಿದೆ.

ಜಿಲ್ಲೆಯ ಶೇಕಡ 70 ಕ್ಕೂ ಅಧಿಕ ಭೂಭಾಗ ಅರಣ್ಯವಿದ್ದು ಉಳಿದ ಪ್ರದೇಶದಲ್ಲಿ ಮುಖ್ಯವಾಗಿ ಕಾಫಿ, ಭತ್ತ ಹಾಗೂ ಮುಸುಕಿನ ಜೋಳ ಬೆಳೆಯಲಾಗುತ್ತಿದೆ. ಮಡಿಕೇರಿ ತಾಲ್ಲೂಕಿನ 6,500 ಹೆಕ್ಟೇರ್, ಸೋಮವಾರಪೇಟೆ ತಾಲ್ಲೂಕಿನ 10,100 ಹೆಕ್ಟೇರ್‌ ಮತ್ತು ವೀರಾಜಪೇಟೆ ತಾಲ್ಲೂಕಿನ 14,123 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿದೆ. ಉಳಿದಂತೆ ಸೋಮವಾರಪೇಟೆ ತಾಲ್ಲೂಕಿನ 4,500 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳವನ್ನೂ ಬೆಳೆಯಲಾಗುತ್ತಿದೆ.

ದಶಕದ ಹಿಂದೆ ಜಿಲ್ಲೆಯಲ್ಲಿ 36 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಕೃಷಿ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಈಗ ಜಿಲ್ಲೆಯ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯಲಾಗುತ್ತಿದೆ. 10 ವರ್ಷದಲ್ಲಿ ಸುಮಾರು 6 ಸಾವಿರ ಹೆಕ್ಟೇರ್‌ ಭತ್ತ ಬೆಳೆಯುವ ಪ್ರದೇಶ ಕಡಿಮೆಯಾಗಿದೆ.

ಜಿಲ್ಲೆಯಲ್ಲಿ ಸಾಕಷ್ಟು ಹಿಂದಿನಿಂದಲೂ ರೈತರು ಭತ್ತ ಬೆಳೆಯುವ ಕೃಷಿ ಪರಂಪರೆ ಇದೆ. ಮನೆಗೆ ಅಗತ್ಯವಿರುವಷ್ಟು ಅಕ್ಕಿಗಾಗಿ ಹಾಗೂ ಹುತ್ತರಿ ಹಬ್ಬದ ಆಚರಣೆಗಾಗಿ ಕೊಡಗಿನಲ್ಲಿ ಆಹಾರ ಮತ್ತು ಸಂಸ್ಕೃತಿಯ ಭಾಗವಾಗಿ ಭತ್ತ ಬೆಳೆಯಲಾಗುತ್ತಿದೆ. ಆದರೆ, ಕಾಲ ಕಳೆದಂತೆ ಕೊಡಗಿನಲ್ಲಿ ಕಾಫಿ ಕೃಷಿಗೇ ಕೂಲಿ ಕಾರ್ಮಿಕರು ಸಿಗುವುದು ಕಷ್ಟವಾಗುತ್ತಿರುವುದರಿಂದ ಭತ್ತದ ಬೆಳೆಯ ಕಡೆಗೆ ರೈತರ ಆಸಕ್ತಿ ಕಡಿಮೆಯಾಗಿದೆ.

ಕಾಫಿ ತೋಟಗಳಲ್ಲಿ ವರ್ಷವಿಡೀ ಕಾರ್ಮಿಕರಿಗೆ ಕೆಲಸ ಇರುತ್ತದೆ. ಕಾಫಿ ಕೊಯ್ಲಿನ ಸಂದರ್ಭದಲ್ಲಿ ಉತ್ತರ ಕರ್ನಾಟಕ, ಅಸ್ಸಾಂ, ಬಿಹಾರದ ಕಡೆಯಿಂದ ಕೂಲಿ ಕಾರ್ಮಿಕರನ್ನು ಕರೆ ತರಲಾಗುತ್ತದೆ. ಇದಕ್ಕಾಗೇ ಏಜೆಂಟ್‌ಗಳಿದ್ದಾರೆ. ಉತ್ತರ ಭಾರತದ ಕಾರ್ಮಿಕರಂತೆ ಬಾಂಗ್ಲಾದೇಶೀಯರೂ ಕಾಫಿ ತೋಟಗಳಲ್ಲಿ ಸೇರಿ ಹೋಗಿದ್ದಾರೆ.

ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು
ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು
- ಸಾಂದರ್ಭಿಕ ಚಿತ್ರ

ಕಾಫಿ ತೋಟಗಳಿಗೇ ಕಾರ್ಮಿಕರ ಕೊರತೆ ಎದುರಾಗಿರುವುದರಿಂದ ಗದ್ದೆ ಕೆಲಸಕ್ಕೆ ಜನ ಸಿಗದೆ ರೈತರು ಭತ್ತದ ಬೆಳೆಯನ್ನು ಕಡಿಮೆ ಮಾಡುತ್ತಿದ್ದಾರೆ. ಕಾಫಿ ತೋಟಗಳಲ್ಲಿ ಈಗ ಹೆಣ್ಣಾಳಿಗೆ ದಿನವೊಂದಕ್ಕೆ 250 ರೂಪಾಯಿ ಮತ್ತು ಗಂಡಾಳಿಗೆ 350 ಕೂಲಿ ಇದೆ. ಇದಕ್ಕಿಂತ ಹೆಚ್ಚಿನ ಕೂಲಿ ಕೊಟ್ಟರೂ ಭತ್ತದ ಗದ್ದೆಯಲ್ಲಿ ಕೆಲಸ ಮಾಡಲು ಕೂಲಿ ಕಾರ್ಮಿಕರು ಸಿಗುವುದಿಲ್ಲ ಎಂಬುದು ಕೊಡಗಿನ ರೈತರ ಅಳಲು.

ಅಲ್ಲದೆ ಕೊಡಗು ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಅಧಿಕವಾಗಿದೆ. ರೈತನ ವರ್ಷದ ಶ್ರಮವನ್ನು ಆನೆಗಳ ಹಿಂಡು ಒಂದೇ ರಾತ್ರಿಯ ಹಾಳು ಮಾಡುತ್ತವೆ. ಅನೇಕ ರೈತರು ಮರಗಳ ಮೇಲೆ ಅಟ್ಟಣೆ ಕಟ್ಟಿಕೊಂಡು ರಾತ್ರಿಇಡೀ ಕಾವಲು ಕಾಯ್ದು ಬೆಳೆ ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ.

ಕೊಡಗಿನ ಮಣ್ಣಿಗೆ ಸೂಕ್ತ ಎಂಬ ಕಾರಣಕ್ಕೆ ಜಿಲ್ಲೆಯ ಬಹುತೇಕ ಗದ್ದೆಗಳಲ್ಲಿ ಇಂಟಾನ್ ಭತ್ತ ಬೆಳೆಯಲಾಗುತ್ತಿದೆ. ಆದರೆ, ಮಾರುಕಟ್ಟೆಯಲ್ಲಿ ಇಂಟಾನ್ ಅಕ್ಕಿಗೆ ಬೆಲೆ ಕಡಿಮೆ. ಅಲ್ಲದೆ ಇಂಟಾನ್‌ ಅಕ್ಕಿಗೆ ಬೇಡಿಕೆಯೂ ಕಡಿಮೆ. ಈ ಎಲ್ಲಾ ಕಾರಣಗಳಿಂದ ಭತ್ತದ ಗದ್ದೆಗಳು ದಿನದಿಂದ ದಿನಕ್ಕೆ ಪಾಳು ಬೀಳುತ್ತಿವೆ.

ಕೊಡವ ಮತ್ತು ಒಕ್ಕಲಿಗ ಗೌಡರು ಸದ್ಯ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭತ್ತದ ಗದ್ದೆಗಳನ್ನು ಹೊಂದಿದ್ದಾರೆ. ಹುತ್ತರಿ ಹಬ್ಬದಂದು ಕದಿರು ತಂದು ಮನೆಯಲ್ಲಿಡುವುದು ಕೊಡಗಿನ ಸಂಪ್ರದಾಯ. ಈ ಹಬ್ಬ ಆಚರಿಸುವ ಸಲುವಾಗಿ ಕೊಡವ ಮತ್ತು ಒಕ್ಕಲಿಗ ಗೌಡ ಕುಟುಂಬಗಳು ಇನ್ನೂ ಭತ್ತದ ಕೃಷಿ ಉಳಿಸಿಕೊಂಡಿವೆ.

ಕೊಡಗಿನಲ್ಲಿ ಶ್ರೀಮಂತ ರೈತರು ಯಂತ್ರೋಪಕರಣ ಬಳಸಿ, ಯಾಂತ್ರೀಕೃತ ಕೃಷಿ ಮಾಡುತಿದ್ದಾರಾದರು ಅಂಥವರ ಸಂಖ್ಯೆ ತುಂಬಾ ಕಡಿಮೆ ಇದೆ. ಶ್ರೀಮಂತ ರೈತರು ಕೂಡಾ ಇದೀಗ ಕಾಫಿ ಕೃಷಿಯತ್ತ ಒಲವು ತೋರುತ್ತಿರುವುದರಿಂದ ಭತ್ತದ ಬೆಳೆ ಕಡಿಮೆಯಾಗುತ್ತಿದೆ.

“ಭತ್ತ ಬೆಳೆಯುವುದು ಆರ್ಥಿಕವಾಗಿ ಲಾಭದಾಯಕವಾಗಿಲ್ಲ. ಹಾಗಾಗಿ ನನ್ನ ಎರಡು ಎಕರೆ ಗದ್ದೆಯನ್ನು 5 ವರ್ಷದ ಹಿಂದೆ ಸಂಪೂರ್ಣ ಕಾಫಿ ತೋಟ ಮಾಡಿ ಈಗ ಉತ್ತಮ ಆದಾಯ ಗಳಿಸುತ್ತಿದ್ದೇನೆ” ಎಂಬುದು ಸೋಮವಾರಪೇಟೆ ತಾಲ್ಲೂಕು ಗೌಡಳ್ಳಿಯ ಸಣ್ಣ ರೈತ ಪೂವಯ್ಯ ಅವರ ಮಾತು.

ಕೊಡಗಿನಲ್ಲಿ ಹಳ್ಳಿಹಳ್ಳಿಗಳಲ್ಲೂ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳು ಮಿತಿ ಇಲ್ಲದಂತೆ ತಲೆ ಎತ್ತುತ್ತಿವೆ. ಇಂದು ಕೊಡಗಿನಲ್ಲಿ ಸುಮಾರು ಮೂರು ಸಾವಿರದಷ್ಟು ಹೋಂ ಸ್ಟೇಗಳಿವೆ. ಇವುಗಳಲ್ಲಿ ಕೇವಲ 685 ಹೋಂ ಸ್ಟೇ ಮಾಲೀಕರು ಮಾತ್ರ ಪ್ರವಾಸೋದ್ಯಮ ಇಲಾಖೆಯೊಂದಿಗೆ ನೋಂದಣೆ ಮಾಡಿಸಿಕೊಂಡಿದ್ದಾರೆ. ಗದ್ದೆಗಳಲ್ಲಿ ಭತ್ತ ಬೆಳೆಯುವುದನ್ನು ನಿಲ್ಲಿಸಿದ ಬಳಿಕ ಅವುಗಳ ಮಾಲೀಕರು ಹೋಂ ಸ್ಟೇ ನಿರ್ಮಾಣದತ್ತ ಕೈ ಹಾಕಿದ್ದಾರೆ.

ಗದ್ದೆಗಳ ಮಾಲೀಕರು ಹೋಂ ಸ್ಟೇ ನಿರ್ಮಿಸಿ ಅನಧಿಕೃತವಾಗಿ ಅವುಗಳನ್ನು ನಡೆಸುವುದು ಕೂಡಾ ಹೆಚ್ಚಾಗಿದೆ. ಬಹುತೇಕ ಹೋಂ ಸ್ಟೇ ಮಾಲೀಕರು ಪಾಳು ಬಿದ್ದ ಗದ್ದೆಗಳಲ್ಲಿ ಈಜುಕೊಳವನ್ನೂ ನಿರ್ಮಿಸಿದ್ದಾರೆ. ಹೀಗೆ ಕೊಡಗಿನ ಗದ್ದೆಗಳು ಈಗ ಹೋಂ ಸ್ಟೇಗಳಾಗಿ ಬದಲಾಗುತ್ತಿವೆ.

ಒಂದು ಕಡೆ ಕೃಷಿ ಕೂಲಿ ಕಾರ್ಮಿಕರ ಕೊರತೆ, ಹೆಚ್ಚುತ್ತಿರುವ ಹೋಂ ಸ್ಟೇಗಳ ಕಾರಣಕ್ಕೆ ಕೊಡಗು ಜಿಲ್ಲೆಯಲ್ಲಿ ಭತ್ತದ ಕೃಷಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಇದೆ. ಭತ್ತದ ಕೃಷಿ ಕುಗ್ಗುತ್ತಿರುವ ಪ್ರಮಾಣವನ್ನು ನೋಡಿದರೆ ಮುಂದಿನ ದಶಕಗಳಲ್ಲಿ ಕೊಡಗಿನಿಂದ ಭತ್ತದ ಕೃಷಿ ಕಣ್ಮರೆಯಾದರೂ ಅಚ್ಚರಿಪಡಬೇಕಿಲ್ಲ.