samachara
www.samachara.com
ಜಾನ್ಸನ್‌& ಜಾನ್ಸನ್‌ ಬೇಬಿ ಪೌಡರ್‌ನಿಂದ ನಿಜಕ್ಕೂ ಕ್ಯಾನ್ಸರ್‌ ಬರುತ್ತಾ?
COVER STORY

ಜಾನ್ಸನ್‌& ಜಾನ್ಸನ್‌ ಬೇಬಿ ಪೌಡರ್‌ನಿಂದ ನಿಜಕ್ಕೂ ಕ್ಯಾನ್ಸರ್‌ ಬರುತ್ತಾ?

ಹಲವು ವರ್ಷಗಳಿಂದ ಟಾಲ್ಕ್‌ ಎಂಬ ವಸ್ತುವನ್ನು ಈ ಪೌಡರ್‌ನಲ್ಲಿ ಬಳಸಲಾಗುತ್ತಿದೆ. ಈ ಪೌಂಡರ್‌ನ್ನು ದೀರ್ಘ ಕಾಲ ಬಳಸಿದ ಮಹಿಳೆಯರು ಅಂಡಾಶಯದ ಕ್ಯಾನ್ಸರ್‌ಗೆ ಗುರಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮನೆಯೊಂದರಲ್ಲಿ ಮಗು ಹುಟ್ಟಿದರೆ ಅಲ್ಲಿಗೆ ಮೊದಲು ಬರುವ ವಸ್ತು ಜಾನ್ಸನ್‌ ಬೇಬಿ ಪೌಡರ್‌. ವಿಶಿಷ್ಟ ಪರಿಮಳ, ವಿಭಿನ್ನ ಬ್ರ್ಯಾಂಡ್‌ ಪ್ರಮೋಷನ್‌ಗಳಿಂದಾಗಿ ‘ಜಾನ್ಸನ್‌ ಆಂಡ್‌ ಜಾನ್ಸನ್‌’ ಕಂಪನಿಯ ಉತ್ಪನ್ನಗಳು ಮನೆ ಮನದೊಳಗೆ ಇಳಿದು ಹೋಗಿವೆ. ಇದೇ ಕಂಪನಿಯ ಬೇಬಿ ಪೌಡರ್‌ನಿಂದ ಕ್ಯಾನ್ಸರ್‌ ಬರುತ್ತದೆ ಎಂಬ ಹೊಸ (ಕಂಪನಿಯ ಉತ್ಪನ್ನಗಳ ಬಗ್ಗೆ ಸರಣಿ ಆರೋಪಗಳಿವೆ) ಆರೋಪ ಹುಟ್ಟಿಕೊಂಡಿದೆ.

ಹಲವು ವರ್ಷಗಳಿಂದ ಟಾಲ್ಕ್‌ ಎಂಬ ವಸ್ತುವನ್ನು ಈ ಪೌಡರ್‌ನಲ್ಲಿ ಬಳಸಲಾಗುತ್ತಿದೆ. ಈ ಪೌಂಡರ್‌ನ್ನು ದೀರ್ಘ ಕಾಲ ಬಳಸಿದ ಮಹಿಳೆಯರು ಅಂಡಾಶಯದ ಕ್ಯಾನ್ಸರ್‌ಗೆ ಗುರಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದೇ ಕಾರಣಕ್ಕೆ ಜುಲೈನಲ್ಲಿ ಜಾನ್ಸನ್‌ ಆಂಡ್‌ ಜಾನ್ಸನ್‌ ಸಂಸ್ಥೆ 4.69 ಬಿಲಿಯನ್‌ ಡಾಲರ್‌ ಪರಿಹಾರವನ್ನೂ ತೆತ್ತಿದೆ.

ಕಳೆದ ವಾರ ಈ ಸಂಬಂಧ ವರದಿ ಮಾಡಿದ್ದ ರಾಯ್ಟರ್ಸ್‌, ‘1970ರಿಂದಲೇ ತನ್ನ ಪೌಡರ್‌ನಲ್ಲಿ ಸಣ್ಣ ಪ್ರಮಾಣದ ಅಸ್ಬೆಸ್ಟೋಸ್ (ಕಲ್ನಾರು) ಎಂಬ ಕ್ಯಾನ್ಸರ್‌ ಕಾರಕ ಇದೆ ಎಂಬುದು ಜಾನ್ಸನ್‌ ಆಂಡ್‌ ಜಾನ್ಸನ್‌ ಕಂಪನಿಗೆ ಗೊತ್ತಿತ್ತು’ ಎಂಬುದಾಗಿ ಹೇಳಿತ್ತು. ಆದರೆ ಟಾಲ್ಕ್‌, ಕಲ್ನಾರು ಮತ್ತು ಕ್ಯಾನ್ಸರ್‌ ಒಂದಕ್ಕೊಂದು ಸಂಬಂಧ ಹೊಂದಿದೆ ಎಂಬುದನ್ನು ಕೋರ್ಟ್‌ನಲ್ಲಿ ಸಾಬೀತು ಪಡಿಸಬಹುದು. ಈ ಮೂಲಕ ಜಾನ್ಸನ್‌ ಆಂಡ್‌ ಜಾನ್ಸನ್‌ ಕ್ಯಾನ್ಸರ್‌ ಕಾರಕ ಎಂದು ಹೇಳಬಹುದು. ಆದರೆ ಪ್ರಯೋಗಾಲಯದಲ್ಲಿ ಕಷ್ಟ ಎನ್ನುತ್ತಿದ್ದಾರೆ ತಜ್ಞರು. ಇದಕ್ಕೆ ಇದರದ್ದೇ ಹಲವು ಕಾರಣಗಳಿವೆ.

ಟಾಲ್ಕ್‌ ಮತ್ತು ಕ್ಯಾನ್ಸರ್‌:

ಟಾಲ್ಕ್‌ ಎನ್ನುವುದು ನೈಸರ್ಗಿಕವಾಗಿ ಸಿಗುವ ಒಂದು ಖನಿಜ. ರೂಪಾಂತರಗೊಂಡ ಬಂಡೆಗಳಲ್ಲಿ ಇದು ಜಗತ್ತಿನಾದ್ಯಂತ ಕಾಣ ಸಿಗುತ್ತದೆ. ಈ ಖನಿಜದ ವಿಶೇಷವೆಂದರೆ ಇದು ತುಂಬಾ ಮೆದುವಾದುದು ಮತ್ತು ಹಗುರವಾದುದು. ಇದನ್ನು ಹುಡಿ ಮಾಡಿದಾಗ ಇದಕ್ಕೆ ಟಾಲ್ಕಂ ಪೌಡರ್‌ ಎಂದು ಕರೆಯುತ್ತಾರೆ. ತೇವಾಂಶವನ್ನು ಹೀರಿಕೊಳ್ಳುವುದಲ್ಲದೆ, ಇದು ಘರ್ಷಣೆಯನ್ನು ಕಡಿಮೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಡೈಪರ್‌ ಅಲರ್ಜಿಗಳು ಮತ್ತು ಇತರ ಚರ್ಮ ಸಂಬಂಧಿತ ಅಲರ್ಜಿ ಮತ್ತು ಕಿರಿಕಿಗಳನ್ನು ಇದು ತಡೆಗಟ್ಟಲು ಸಹಾಯ ಮಾಡುತ್ತದೆ.

ಅಮೆರಿಕಾದಲ್ಲಿ ತೆರೆದ ಗಣಿಗಳಿಂದ ಇದನ್ನು ಸಂಗ್ರಹಿಸುತ್ತಾರೆ. ನೈಸರ್ಗಿಕವಾಗಿ ಹೀಗೆ ತೆಗೆಯುವಾಗ ಟಾಲ್ಕ್‌ ಮತ್ತು ಅಸ್ಬೆಸ್ಟೋಸ್‌ (ಕಲ್ನಾರು) ಒಟ್ಟಾಗಿರುತ್ತವೆ. ಸಮಸ್ಯೆಯ ಮೂಲ ಇರುವುದೇ ಇಲ್ಲಿ.

ಕಲ್ನಾರು ತನ್ನ ಗುಣದಲ್ಲೇ ಕ್ಯಾನ್ಸರ್‌ ಕಾರಕ. ಇದನ್ನು ಸಾಮಾನ್ಯವಾಗಿ ಕಟ್ಟಡಗಳಲ್ಲಿ ಬಳಸುತ್ತಾರೆ. ಗಟ್ಟಿ ಮತ್ತು ಉಷ್ಣ ಪ್ರತಿರೋಧಕ ಗುಣವನ್ನು ಇದು ಹೊಂದಿರುವುದೇ ಇದಕ್ಕೆ ಕಾರಣ. ಆದರೆ ಅತಿಯಾಗಿ ಇದರ ಧೂಳನ್ನು ಕುಡಿಯುವುದರಿಂದ ಶ್ವಾಸಕೋಶಗಳಿಗೆ ತೊಂದರೆಯಾಗುತ್ತದೆ ಎಂಬುದು 20ನೇ ಶತನಮಾನದ ಆರಂಭದಲ್ಲಿ ತಿಳಿಯುತ್ತಿದ್ದಂತೆ ನಿರ್ಮಾಣ ಸಂಬಂಧಿ ವಸ್ತುಗಳಿಂದ ಕಲ್ನಾರನ್ನು ನಿಷೇಧಿಸಲಾಯಿತು.

ದೀರ್ಘ ಕಾಲ ಕಲ್ನಾರನ್ನು ಬಳಸುವುದರಿಂದ ಆರೋಗ್ಯ ಸಮಸ್ಯೆಗಳು ತಲೆದೋರುತ್ತವೆ ಎಂಬುದು ದಾಖಲೆ ಸಮೇತ ಋಜುವಾತಾಗಿದೆ. ಆದರೆ ಟಾಲ್ಕಂ ಪೌಡರ್‌ ಬಳಸುವವರು ಈ ಕಲ್ನಾರನ್ನು ಎದುರಿಸುವ ವಿಧಾನವೇ ಬೇರೆ. ಒಂದೊಮ್ಮೆ ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಬೇಬಿ ಪೌಡರ್‌ ಬಳಸಿದರೆ ದಶಕಗಳ ಕಾಲ ಕಡಿಮೆ ಪ್ರಮಾಣದಲ್ಲಿ ಈ ಕಲ್ನಾರನ್ನು ಬಳಸಿದಂತಾಗುತ್ತದೆ. ಹೀಗಿರುವಾಗ ನಿಧಾನವಾಗಿ ಈ ಕಲ್ನಾರು ದೇಹದ ಮೇಲೆ ಬೀಳುವ ಪರಿಣಾಮವನ್ನು ಸಾಬೀತು ಮಾಡುವುದು ಕಷ್ಟವಾಗುತ್ತದೆ.

ಬೇಬಿ ಪೌಡರ್‌ನಲ್ಲಿದೆಯೇ ಕಲ್ನಾರು?

ಹೀಗಿದ್ದೂ ನೈರ್ಮಲ್ಯದ ದೃಷ್ಟಿಯಿಂದ ದೀರ್ಘ ಕಾಲ ಜಾನ್ಸನ್‌ ಆಂಡ್‌ ಜಾನ್ಸನ್‌ ಬೇಬಿ ಪೌಡರ್‌ನ್ನು ದೀರ್ಘ ಕಾಲ ಬಳಸಿದ ಮಹಿಳೆಯರು ಇದರಲ್ಲಿ ಕಲ್ನಾರು ಇರುವುದರಿಂದ ಅಂಡಾಶಯದ ಕಾನ್ಸರ್‌ಗೆ ತುತ್ತಾಗಿದ್ದೇವೆ ಎಂದು ದೂರಿ ಅಮೆರಿಕಾದಲ್ಲಿ ನ್ಯಾಯಾಲಯ ಮೆಟ್ಟಿಲೇರಿದ್ದರು. ಜುಲೈನಲ್ಲಿ ನ್ಯಾಯಾಧೀಶರು ಇದಕ್ಕೆ ಸಮ್ಮತಿ ಸೂಚಿಸಿ ಕಂಪನಿ 4 ಬಿಲಿಯನ್‌ ಡಾಲರ್‌ಗೂ ಹೆಚ್ಚು ಪರಿಹಾರ ನೀಡುವಂತೆ ಸೂಚಿಸಿದ್ದರು.

ಆದರೆ ವಿಜ್ಞಾನಿಗಳ ವರದಿ ಭಿನ್ನವಾಗಿತ್ತು. ಇಡೀ ಪ್ರಕರಣದ ಪ್ರಮುಖ ಅಂಶವೆಂದರೆ ಪೌಡರ್‌ನಲ್ಲಿ ಕಲ್ನಾರು ಇದೆಯಾ ಇಲ್ವಾ ಎನ್ನುವುದು. ಒಂದೊಮ್ಮೆ ಇದ್ದರೆ ಅದು ಕ್ಯಾನ್ಸರ್‌ ತರುವಷ್ಟರ ಪ್ರಮಾಣದಲ್ಲಿದೆಯೇ ಎಂಬುದನ್ನು ಇನ್ನೊಂದು ಪ್ರಶ್ನೆ. ಆದರೆ ಇದಕ್ಕೆ ಸ್ಪಷ್ಟವಾದ ಉತ್ತರವನ್ನು ಯಾರೂ ನೀಡಿಲ್ಲ.

ಟಾಲ್ಕ್‌ ಕಲ್ನಾರಿನ ಜತೆಗೆ ಇರುವುದು ಹೌದಾದರೆ, ಕಲ್ನಾರು ಕ್ಯಾನ್ಸರ್‌ ಕಾರಕವಾಗಿರುವುದರಿಂದ ಜಾನ್ಸನ್‌ ಆಂಡ್‌ ಜಾನ್ಸನ್‌ ತನ್ನ ಆಂತರಿಕ ಪರೀಕ್ಷೆಗಳ ಮಾಹಿತಿಗಳನ್ನು ಎಫ್‌ಡಿಎ ಮತ್ತು ಜನರ ಮುಂದಿಡಬೇಕಿತ್ತು ಎಂದು ಒಮ್ಮೆ ರಾಯ್ಟರ್ಸ್‌ ವಾದಿಸಿತ್ತು. ಆದರೆ ತನ್ನ ಪೌಡರ್‌ಗಳಲ್ಲಿರುವ ಕಲ್ನಾರಿನ ಪ್ರಮಾಣ ಎಷ್ಟು ಎಂಬುದನ್ನು ಬಹಿರಂಗಗೊಳಿಸುವ ಕೆಲಸಕ್ಕೆ ಕಂಪನಿ ಎಂದೂ ಮುಂದಾಗಿಲ್ಲ.

‘ನ್ಯೂಯಾರ್ಕ್‌ ಟೈಮ್ಸ್‌’ ಪ್ರಕಾರ ಅಮೆರಿಕಾದ ಆಹಾರ ಮತ್ತು ಔಷಧ ಇಲಾಖೆ (ಎಫ್‌ಡಿಎ) 2010ರಲ್ಲಿ ಎಲ್ಲಾ ಟಾಲ್ಕ್‌ ವಾಣಿಜ್ಯ ಉತ್ಪನ್ನಗಳನ್ನು ಪರೀಕ್ಷೆಗೆ ಒಳಪಡಿಸಿತ್ತು. ಈ ಸಂದರ್ಭದಲ್ಲಿ ಯಾವುದೇ ಉತ್ಪನ್ನಗಳಲ್ಲಿ ಕಲ್ನಾರು ಪತ್ತೆಯಾಗಿರಲಿಲ್ಲ. ಆದರೆ ಕೋರ್ಟ್‌ಗೆ ದೂರು ನೀಡಿದ ವಕೀಲರ ಪರವಾಗಿ ಪರೀಕ್ಷೆ ನಡೆಸಿದ ಖಾಸಗಿ ತಜ್ಞರು ಟಾಲ್ಕ್‌ ಉತ್ಪನ್ನಗಳಲ್ಲಿ ಕಲ್ನಾರನ್ನು ಪತ್ತೆ ಹಚ್ಚಿದ್ದರು.

‘ಎಫ್‌ಡಿಎ’ ಸಾಮಾನ್ಯವಾಗಿ ಗ್ರಾಹಕರ ಎಲ್ಲಾ ಉತ್ಪನ್ನಗಳನ್ನು ನಿರಂತರವಾಗಿ ಸುರಕ್ಷತೆಯ ದೃಷ್ಟಿಯಿಂದ ಪರೀಕ್ಷೆಗೆ ಒಳಪಡಿಸುವುದಿಲ್ಲ. ಕಾರಣ ಇವು ಯಾವುದೇ ರೋಗ, ಗಾಯವನ್ನು ವಾಸಿಗೊಳಿಸುವ ಔಷಧಗಳಲ್ಲ. ಹೀಗಾಗಿ ಔಷಧಗಳಿಗೆ ಅನ್ವಯವಾಗುವ ನಿಯಮಗಳು ಇವುಗಳಿಗೆ ಅನ್ವಯವಾಗುವುದಿಲ್ಲ. ಬದಲಿಗೆ ಇದನ್ನು ಪರ್ಸನಲ್‌ ಕೇರ್‌ ಪ್ರೊಡಕ್ಟ್‌ ಕೌನ್ಸಿಲ್‌ ಪರೀಕ್ಷೆಗೆ ಒಳಪಡಿಸುತ್ತದೆ. ಆದರೆ ಇವರು ಹೇಳುವುದೇ ಬೇರೆ. 1976ರಿಂದ ಯಾವುದೇ ಟಾಲ್ಕ್‌ ಉತ್ಪನ್ನಗಳಲ್ಲಿ ಕಲ್ನಾರು ಇರುವುದಿಲ್ಲ ಎನ್ನುತ್ತಾರೆ ಇವರು.

ಮತ್ತೊಂದು ಸಮಸ್ಯೆ ಎಂದರೆ ಕಲ್ಲಿದ್ದಲು ಗಣಿ, ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಕಾರ್ಮಿಕರು ಈ ಕಲ್ನಾರಿನ ಜತೆ ಬದುಕನ್ನು ಕಳೆದು ಕ್ಯಾನ್ಸರ್‌ಗೆ ತುತ್ತಾಗುವುದಿದೆ. ಕಾರಣ ಇವರು ಹೆಚ್ಚಿನ ಪ್ರಮಾಣದಲ್ಲಿ ಕಲ್ನಾರಿನ ಧೂಳನ್ನು ತಿನ್ನುತ್ತಿರುತ್ತಾರೆ. ಈಗ ಟಾಲ್ಕ್‌ ಪೌಡರ್‌ನ ವಿಚಾರಕ್ಕೆ ಬರುವುದಾದರೆ, ಇದರಲ್ಲಿ ಎಷ್ಟರ ಪ್ರಮಾಣದಲ್ಲಿ ಕಲ್ನಾರು ಇದೆ ಎನ್ನುವುದು ಮೊದಲ ಪ್ರಶ್ನೆಯಾದರೆ, ಎಷ್ಟರ ಪ್ರಮಾಣದಲ್ಲಿ ಇದ್ದರೆ ಹಾನಿಕಾರಕ ಎಂಬುದು ಎರಡನೇ ಪ್ರಶ್ನೆ. ಎರಡೂ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳು ಲಭ್ಯವಿಲ್ಲ.

ಕ್ಯಾನ್ಸರ್‌ ಬರಬಾರದು ಎಂದಾದರೆ ಪೌಡರ್‌ನಲ್ಲಿ ಕಲ್ನಾರಿನ ಪ್ರಮಾಣ ಎಷ್ಟರ ಮಟ್ಟಿಗೆ ಇರಬೇಕು ಎಂಬುದನ್ನು ತಿಳಿಸುವುದು ಅಸಾಧ್ಯ. ಉದಾಹರಣೆಗೆ ಜನನಾಂಗಗಳ ಮೇಲೆ ಟಾಲ್ಕ್ ಪೌಡರ್‌ನ್ನು ದೀರ್ಘ ಕಾಲ ನಿರಂತವಾಗಿ ಬಳಸಿದವರ ಮೇಲೆ ಪರೀಕ್ಷೆಗಳನ್ನು ನಡೆಸಿದಾಗ ವಿಭಿನ್ನ ಉತ್ತರಗಳು ಸಿಕ್ಕಿವೆ. ಕೆಲವು ಪರೀಕ್ಷೆಯಲ್ಲಿ ಪೌಡರ್‌ ಬಳಕೆಯಿಂದ ಕ್ಯಾನ್ಸರ್‌ಮ ಅಪಾಯ ಏರಿಕೆಯಾಗಿದ್ದು ಕಂಡು ಬಂದಿದ್ದರೆ, ಇನ್ನು ಕೆಲವು ಪರೀಕ್ಷೆಗಳಲ್ಲಿ ಟಾಲ್ಕ್‌ ಪೌಡರ್‌ಗೂ ಕ್ಯಾನ್ಸರ್‌ಗೂ ಸಂಬಂಧ ಕಲ್ಪಿಸಲು ಸಾಧ್ಯವಾಗಿಲ್ಲ. ಇನ್ನೊಂದು ಕಡೆ ಅಮೆರಿಕಾದ ಕ್ಯಾನ್ಸರ್‌ ಸೊಸೈಟಿ (ಎಸಿಎಸ್‌) ಈ ಬಗ್ಗೆ ಅಧ್ಯಯನಕ್ಕೆ ಇಳಿದಾಗಲೂ ಸಂಕೀರ್ಣತೆಗಳು ಕಾಣಿಸಿಕೊಂಡಿವೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರ ಅಭಿಪ್ರಾಯಗಳು ಇಲ್ಲಿ ಬಹಳ ಮುಖ್ಯವಾಗುತ್ತವೆ. 10 ವರ್ಷದ ಹಿಂದೆ ನೀವು ಎಷ್ಟರ ಪ್ರಮಾಣದಲ್ಲಿ ಟಾಲ್ಕ್‌ ಪೌಡರ್‌ ಬಳಸುತ್ತಿದ್ರಿ? ನಿರಂತರವಾಗಿ ಬಳಸುತ್ತಿದ್ರಾ ಎಂಬುದು ಹೆಚ್ಚಿನವರಿಗೆ ನೆನಪಿರುವುದಿಲ್ಲ. ಕೆಲವೊಮ್ಮೆ ಬಳಕೆದಾರರಲ್ಲಿ ಭಿನ್ನತೆಗಳಿರುತ್ತವೆ.

ಈ ಎಲ್ಲಾ ಆಧಾರದ ಮೇಲೆ ಸದ್ಯ ನ್ಯಾಷನಲ್‌ ಕ್ಯಾನ್ಸರ್‌ ಇನ್ಸ್‌ಟ್ಯೂಟ್‌ ಮತ್ತು ಎಸಿಎಸ್‌ ಒಂದು ತೀರ್ಮಾನಕ್ಕೆ ಬಂದಿವೆ. ‘ಸಂಶೋಧನೆ ನಡೆಯುತ್ತಿದೆ ಮತ್ತು ಇಲ್ಲಿಯವರೆಗಿನ ಸಂಶೋಧನೆಯಲ್ಲಿ ಕ್ಯಾನ್ಸರ್‌ನ ಅಪಾಯ ಅತೀ ಸಣ್ಣ ಪ್ರಮಾಣದಲ್ಲಿ ಏರಿಕೆಯಾದ ಬಗ್ಗೆಯೂ ಯಾವುದೇ ಸೂಚನೆಗಳು ಕಾಣಿಸಿಕೊಂಡಿಲ್ಲ’ ಎಂದು ಹೇಳಿದೆ.

ಹೀಗಿರುವಾಗ ನ್ಯಾಯಾಲಯ ನಿರ್ಧಾರವೊಂದನ್ನು ಹೇಗೆ ತೆಗೆದುಕೊಳ್ಳುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಕೋರ್ಟ್‌ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಒಂದೋ ಟಾಲ್ಕಂ ಪೌಡರ್‌ ಬಳಕೆಯಿಂದ ಕ್ಯಾನ್ಸರ್‌ ಬರುತ್ತದೆ ಅಥವಾ ಇಲ್ಲ. ಆದರೆ ವಿಜ್ಞಾನ ಇನ್ನೂ ಒಂದು ತೀರ್ಮಾನಕ್ಕೆ ಬರಲು ಒದ್ದಾಡುತ್ತಿದೆ. ಇದಕ್ಕಾಗಿ ಹೆಚ್ಚಿನ ನಿಖರ ಅಂಕಿ ಸಂಖ್ಯೆಗಳು ಬೇಕಾಗುತ್ತವೆ. ಜತೆಗೆ ಕ್ಯಾನ್ಸರ್‌ಗೆ ಟಾಲ್ಕ್‌ ಅಲ್ಲದೇ ಬೇರೆ ಬೇರೆ ಕಾರಣಗಳೂ ಇರಬಹುದು. ಹೀಗಾಗಿ ಇದರಿಂದಲೇ ಕ್ಯಾನ್ಸರ್‌ ಹುಟ್ಟಿಕೊಂಡಿತು ಎಂಬುದು ಹೇಳುವುದು ಪ್ರಸ್ತುತ ಅಸಾಧ್ಯವೆಂದೇ ಪರಿಗಣಿಸಲಾಗಿದೆ.

ಸದ್ಯಕ್ಕೆ ಈ ಎಲ್ಲಾ ಗೊಂದಲಗಳ ಮಧ್ಯದಲ್ಲಿ ಮಕ್ಕಳಿಗೆ ಅಮೆರಿಕಾದ ಪೀಡಿಯಾಟ್ರಿಕ್‌ ಅಕಾಡೆಮಿ ಎಣ್ಣೆಯ ಲೇಪನವನ್ನು ಬಳಸುವಂತೆ ಸೂಚಿಸಿದೆ. ವಯಸ್ಕರಿಗೆ ಚರ್ಮದ ಕಿರಿಕಿರಿಗೆ ಜೋಳವನ್ನಾಧರಿಸಿ ಪೌಡರ್‌ ಬಳಸುವಂತೆ ಸಲಹೆ ನೀಡಿದೆ. ಸರಿಯಾದ ಉತ್ತರ ಸಿಕ್ಕ ಬಳಿಕ ಜಾನ್ಸನ್‌ ಆಂಡ್‌ ಜಾನ್ಸನ್‌ ಬಳಕೆ ಬಗ್ಗೆ ಯೋಚನೆ ಮಾಡಬಹುದು ಎಂಬುದು ಇವರ ಪರೋಕ್ಷ ಸೂಚನೆ.