samachara
www.samachara.com
‘ಬದುಕಿ, ಬದುಕಲು ಬಿಡಿ’: ನಟ ನಾಸಿರುದ್ದೀನ್‌ ಶಾ ಹೊರಹಾಕಿದ ಸಿಟ್ಟಿನ ಅಂತರಾಳ ಇಷ್ಟೆ...
COVER STORY

‘ಬದುಕಿ, ಬದುಕಲು ಬಿಡಿ’: ನಟ ನಾಸಿರುದ್ದೀನ್‌ ಶಾ ಹೊರಹಾಕಿದ ಸಿಟ್ಟಿನ ಅಂತರಾಳ ಇಷ್ಟೆ...

ಇದು ಮುಸ್ಲಿಂ ನಟನೊಬ್ಬ ಹಿಂದೂಗಳ ಬಗ್ಗೆ ಹೊರ ಹಾಕಿರುವ ಸಿಟ್ಟಲ್ಲ, ಇದು ದೇಶದ ಅಸಹಿಷ್ಣುತೆಯ ವಿರುದ್ಧ ಭಾರತದ ನಾಗರಿಕನೊಬ್ಬ ಹೊರ ಹಾಕಿರುವ ಸಿಟ್ಟು.

ಭಾರತದಲ್ಲಿ ಅಸಹಿಷ್ಣುತೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಬಾಲಿವುಡ್‌ನ ಹಿರಿಯ ನಟ ನಾಸಿರುದ್ದೀನ್‌ ಶಾ ಭಾರತದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಗುಂಪು ದಾಳಿಗಳ ಬಗ್ಗೆ ಆತಂಕ ಹಾಗೂ ಸಿಟ್ಟನ್ನು ಹೊರಹಾಕಿದ್ದಾರೆ. ಗೋ ರಕ್ಷಣೆಯ ಹೆಸರಿನಲ್ಲಿ ಮನುಷ್ಯತ್ವ ಮರೆಯುತ್ತಿರುವ ಹಾಗೂ ದೇಶದಲ್ಲಿ ಮುಂದಿನ ಮುಸ್ಲಿಮರ ಭವಿಷ್ಯದ ಅಭದ್ರತೆಯ ವಿಚಾರವಾಗಿ ಶಾ ದನಿ ಎತ್ತಿದ್ದಾರೆ.

“ಭಾರತದಲ್ಲಿ ಈಗಾಗಲೇ ವಿಷ ಬಿತ್ತಲಾಗಿದೆ. ಬಿತ್ತಿರುವ ಈ ವಿಷವನ್ನು ಮತ್ತೆ ಬಾಟಲಿಗೆ ತುಂಬುವುದು ಕಷ್ಟ ಸಾಧ್ಯ. ಪೊಲೀಸ್‌ ಅಧಿಕಾರಿಯ ಸಾವಿಗಿಂತಲೂ ಗೋವಿನ ಸಾವು ಹೆಚ್ಚು ಪ್ರಸ್ತುತ ಎನಿಸುವಂಥ ಸನ್ನಿವೇಶ ಈಗ ನಿರ್ಮಾಣವಾಗಿದೆ” ಎಂದು ಬುಲಂದ್‌ಶರ್‌ ಘಟನೆಯನ್ನು ಹೆಸರಿಸದೆ ಶಾ ಗೋ ರಾಜಕೀಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

“ನನ್ನ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿದಾಗ ನನಗೆ ಆತಂಕವಾಗುತ್ತದೆ. ನಾವು ಅವರಿಗೆ ಯಾವುದೇ ಧಾರ್ಮಿಕ ಶಿಕ್ಷಣ ಕೊಡಿಸಿಲ್ಲ. ಒಳಿತು ಮತ್ತು ಕೆಡುಕಿಗೆ ಧರ್ಮದ ಸಂಬಂಧವಿಲ್ಲ ಎಂದು ನಂಬಿದವನು ನಾನು. ಹೀಗಾಗಿ ನನ್ನ ಮಕ್ಕಳಿಗೆ ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು ಎಂಬುದನ್ನಷ್ಟೇ ಕಲಿಸಿದ್ದೇನೆ. ಕುರಾನ್‌ ಜತೆಗೆ ರಾಮಾಯಣ ಮತ್ತು ಮಹಾಭಾರತಗಳ ಪರಿಚಯವೂ ನನ್ನ ಮಕ್ಕಳಿಗಿದೆ” ಎಂದಿದ್ದಾರೆ ಶಾ.

“ನನಗಿರುವ ಆತಂಕ ಎಂದರೆ ನಾಳೆ ಗುಂಪೊಂದು ನನ್ನ ಮಕ್ಕಳನ್ನು ಸುತ್ತುವರಿದು, ‘ನೀನು ಹಿಂದೂ ಅಥವಾ ಮುಸ್ಲಿಂ?’ ಎಂದು ಕೇಳಿದರೆ ಅವರ ಬಳಿ ಉತ್ತರವಿಲ್ಲ. ಇಂಥ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ಸದ್ಯಕ್ಕಂತೂ ಪರಿಹಾರ ಕಾಣುತ್ತಿಲ್ಲ. ಆದರೆ, ಈ ಬಗ್ಗೆ ನನಗೆ ಭಯಕ್ಕಿಂತ ಹೆಚ್ಚಾಗಿ ಸಿಟ್ಟು ಬರುತ್ತದೆ. ಸರಿಯಾದ ದಾರಿಯಲ್ಲಿರುವ ಪ್ರತಿಯೊಬ್ಬರಿಗೂ ಈ ಬಗ್ಗೆ ಸಿಟ್ಟು ಬರಬೇಕು. ಯಾಕೆಂದರೆ ಈ ದೇಶ ನನ್ನ ಮನೆ. ನನ್ನ ಮನೆಯಿಂದ ನನ್ನನ್ನು ವಕ್ಕಲೆಬ್ಬಿಸಲು ಇವರು ಯಾರು?” ಎಂದು ಪ್ರಶ್ನಿಸಿದ್ದಾರೆ ಶಾ.

ಶಾ ಮಾತುಗಳು ಸದ್ಯದ ಭಾರತದ ಅಸಹಿಷ್ಣುತೆ, ಗೋ ರಾಜಕೀಯ ಹಾಗೂ ಗುಂಪು ದಾಳಿಗಳಿಗೆ ಕನ್ನಡಿ ಹಿಡಿಯುವಂತಿದೆ. ಶಾ ಆತಂಕ ಭಾರತದ ಅಲ್ಪಸಂಖ್ಯಾತರ ಆತಂಕವನ್ನು ಪ್ರತಿನಿಧಿಸುತ್ತಿದೆ. ಅಲ್ಲದೆ, ಭಾರತದಲ್ಲಿ ಹಿಂದೂ- ಮುಸ್ಲಿಂ ದಂಪತಿಗೆ ಹುಟ್ಟಿದ ಮಕ್ಕಳ ಭವಿಷ್ಯದ ಅತಂತ್ರತೆಯ ಬಗ್ಗೆಯೂ ಶಾ ಮಾತುಗಳು ಗಂಭೀರ ಎನಿಸುತ್ತಿವೆ.

ಚಿತ್ರತಾರೆಯರು, ಕ್ರಿಕೆಟ್‌ ಆಟಗಾರರು ಅಂತರ್‌ ಧರ್ಮೀಯ ವಿವಾಹವಾಗುವುದು ಬಾಲಿವುಡ್‌ ಹಾಗೂ ಭಾರತದ ಕ್ರಿಕೆಟ್‌ ಲೋಕದ ಮಟ್ಟಿಗೆ ಸಾಮಾನ್ಯ. ಬಾಲಿವುಡ್‌ನಲ್ಲಿ ಹಲವು ಅಂತರ್‌ ಧರ್ಮೀಯ ಮದುವೆಗಳು ನಡೆದಿವೆ, ನಡೆಯುತ್ತಿವೆ. ಆಮಿರ್‌ ಖಾನ್‌- ಕಿರಣ್‌ ರಾವ್, ಶಾರುಕ್‌ ಖಾನ್‌ – ಗೌರಿ, ಕಪೂರ್‌ ಕುಟುಂಬದಲ್ಲಂತೂ ಯಾರು ಹಿಂದೂ, ಯಾರು ಮುಸ್ಲಿಂ ಎಂದು ಗುರುತಿಸಲಾರದಷ್ಟು ಅಂತರ್‌ ಧರ್ಮೀಯ ವಿವಾಹಗಳಾಗಿವೆ. ಇದಕ್ಕೆ ಇತ್ತೀಚಿನ ಉದಾಹರಣೆ ಕರೀನಾ ಕಪೂರ್‌- ಸೈಫ್‌ ಅಲಿ ಖಾನ್‌ ಜೋಡಿ.

ಪತ್ನಿ ರತ್ನಾ ಪಾಠಕ್‌ ಮತ್ತು ಮಕ್ಕಳೊಂದಿಗೆ ನಾಸಿರುದ್ದೀನ್‌ ಶಾ
ಪತ್ನಿ ರತ್ನಾ ಪಾಠಕ್‌ ಮತ್ತು ಮಕ್ಕಳೊಂದಿಗೆ ನಾಸಿರುದ್ದೀನ್‌ ಶಾ

ನಾಸಿರುದ್ದೀನ್‌ ಶಾ ಮದುವೆಯಾಗಿರುವುದು ನಟಿ ರತ್ನಾ ಪಾಠಕ್‌ ಅವರನ್ನು. ರಂಗಭೂಮಿ ಹಾಗೂ ಸಿನಿಮಾದಲ್ಲಿ ಒಟ್ಟೊಟ್ಟಿಗೆ ಸಾಗಿ ಬಂದ ಈ ದಂಪತಿಗೆ ಒಬ್ಬ ಮಗಳು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಇಷ್ಟು ದಿನ ತಮ್ಮ ಮಕ್ಕಳ ಬಗ್ಗೆ ಹೆಚ್ಚು ಮಾತನಾಡದ ಶಾ ಈಗ ಅವರ ಭವಿಷ್ಯದ ಬಗ್ಗೆ ತಮಗಿರುವ ಆತಂಕ ಮತ್ತು ಸದ್ಯದ ಸನ್ನಿವೇಶದ ಬಗ್ಗೆ ಸಿಟ್ಟನ್ನು ಹೊರಹಾಕಿ ದೇಶದ ಅಸಹಿಷ್ಣುತೆಯ ಚರ್ಚೆಗೆ ಮತ್ತೊಮ್ಮೆ ಕಿಡಿ ತಾಕಿಸಿದ್ದಾರೆ.

ಹಾಗೆ ನೋಡಿದರೆ ಇಂಥ ಆತಂಕ ಹಾಗೂ ಅಸಹಿಷ್ಣುತೆಯ ಚರ್ಚೆ ಆರಂಭವಾಗಿರುವುದು ಇದೇ ಮೊದಲೇನಲ್ಲ. ನಟ ಆಮಿರ್ ಖಾನ್ 2015ರಲ್ಲಿ ಇಂಥದ್ದೇ ಆತಂಕವನ್ನು ಹೊರಹಾಕಿದ್ದರು. ಇಂಡಿಯನ್‌ ಎಕ್ಸ್‌ಪ್ರೆಸ್‌ ಸಮೂಹ 2015ರ ನವೆಂಬರ್‌ 23ರಂದು ಆಯೋಜಿಸಿದ್ದ ರಾಮನಾಥ್‌ ಗೋಯೆಂಕಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ್ದ ಆಮಿರ್‌, “ಭಾರತದಲ್ಲಿ ನೆಮ್ಮದಿಯಾಗಿ ಬದುಕುವ ಬಗ್ಗೆ ಆತಂಕ ಎದುರಾಗಿದೆ” ಎಂದಿದ್ದರು.

ಪತ್ನಿ ಕಿರಣ್‌ ರಾವ್‌ ಮತ್ತು ಮಗನೊಂದಿಗೆ ಆಮಿರ್‌ ಖಾನ್‌
ಪತ್ನಿ ಕಿರಣ್‌ ರಾವ್‌ ಮತ್ತು ಮಗನೊಂದಿಗೆ ಆಮಿರ್‌ ಖಾನ್‌

“ನಮ್ಮ ಮಗುವಿನ ಭವಿಷ್ಯದ ದೃಷ್ಟಿಯಿಂದ ದೇಶ ಬಿಟ್ಟು ಹೋಗುವ ಬಗ್ಗೆ ನನ್ನ ಪತ್ನಿ ಕಿರಣ್‌ ಪ್ರಸ್ತಾಪಿಸಿದ್ದರು. ಸುಮಾರು 8 ತಿಂಗಳಿಂದ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ” ಎಂದು ಆಮಿರ್ ಖಾನ್‌ ಹೇಳಿದ್ದರು. ಆಮಿರ್ ಈ ಮಾತು ಹೇಳಿದಾಗ ಕೇಂದ್ರದಲ್ಲಿ ಮೋದಿ ಸರಕಾರ ಅಸ್ಥಿತ್ವಕ್ಕೆ ಬಂದು ಒಂದೂವರೆ ವರ್ಷವಾಗಿತ್ತು. ಅದಾಗಲೇ ದೇಶದಲ್ಲಿ ಅಸಹಿಷ್ಣುತೆಯ ಹೊಗೆ ದಟ್ಟವಾಗುತ್ತಿತ್ತು.

ಈ ಹೇಳಿಕೆಯ ಬಳಿಕ ಕೇಂದ್ರ ಸರಕಾರದ ಜಾಹೀರಾತುಗಳಿಂದ ಆಮಿರ್ ಖಾನ್‌ ಅವರನ್ನು ಕೈ ಬಿಡಲಾಯಿತು. ಆಮಿರ್‌ ಖಾನ್‌ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಟೀಕೆಯ ದಾಳಿಗಳು ನಡೆದವು. ಈಗ ಅಂಥದ್ದೇ ದಾಳಿಗಳನ್ನು ನಾಸಿರುದ್ದೀನ್‌ ಶಾ ವಿರುದ್ಧವೂ ನಡೆಸಲಾಗುತ್ತಿದೆ. ಹಲವರು ಶಾ ಪರವಾಗಿದ್ದರೆ, ಹಲವರು ಶಾ ಹೇಳಿಕೆಯ ವಿರುದ್ಧ ಕಿಡಿ ಕಾರಿದ್ದಾರೆ. ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಶಾ ವಿರುದ್ಧ ಹಲವರು ಗಂಟಲು ಹರಿದುಕೊಂಡು ಟೀಕೆಯ ಮಳೆ ಸುರಿಸಿದ್ದಾರೆ.

ಹಿಂದೆ ಆಮಿರ್‌ ಖಾನ್‌ ಹೇಳಿದ್ದ ಮಾತಿಗೂ, ಈಗ ನಾಸಿರುದ್ದೀನ್‌ ಶಾ ಹೇಳಿರುವ ಮಾತಿಗೂ ಸಾಮ್ಯತೆ ಇದೆ. ಇಬ್ಬರ ಆತಂಕವೂ ಒಂದೇ ಬಗೆಯದ್ದು. ಹಿಂದೆ ಆಮಿರ್‌ ದೇಶ ಬಿಟ್ಟು ಹೋಗುವ ಬಗ್ಗೆ ಪತ್ನಿ ಪ್ರಸ್ತಾಪಿಸಿದ್ದನ್ನು ಹೇಳಿದ್ದರೆ, ಶಾ ಈ ದೇಶ ನನ್ನ ಮನೆ ಎಂದಿದ್ದಾರೆ. ಇಲ್ಲಿಯ ಪರಿಸ್ಥಿತಿಯ ಬಗ್ಗೆ ಸದ್ಯ ಭಯ- ಆತಂಕಗಳಿಗಿಂತ ಹೆಚ್ಚಾಗಿ ಅಗತ್ಯವಿರುವುದು ಸಾಸ್ವಿಕ ಸಿಟ್ಟು ಎಂಬುದನ್ನು ಶಾ ಮಾತು ಧ್ವನಿಸುತ್ತಿವೆ. ಈ ಸಿಟ್ಟು ಮುಸ್ಲಿಂ ನಟನೊಬ್ಬ ಹಿಂದೂಗಳ ಬಗ್ಗೆ ಹೊರ ಹಾಕಿರುವ ಸಿಟ್ಟಲ್ಲ, ಇದು ದೇಶದ ಅಸಹಿಷ್ಣುತೆಯ ವಿರುದ್ಧ ಭಾರತದ ನಾಗರಿಕನೊಬ್ಬ ಹೊರ ಹಾಕಿರುವ ಸಿಟ್ಟು ಎಂಬುದನ್ನು ಅಸಹಿಷ್ಣುಗಳು ಅರ್ಥ ಮಾಡಿಕೊಳ್ಳಬೇಕು.