samachara
www.samachara.com
ಕಾಮ್ರೇಡ್‌ಗೆ #ಮೀಟೂ ಏಟು: ಶ್ರೀರಾಮ ರೆಡ್ಡಿ ವಿರುದ್ಧ ಶಿಸ್ತು ಕ್ರಮ; ಇದು ಸಿಪಿಐ (ಎಂ) ಆಂತರಿಕ ವಿಚಾರ!
COVER STORY

ಕಾಮ್ರೇಡ್‌ಗೆ #ಮೀಟೂ ಏಟು: ಶ್ರೀರಾಮ ರೆಡ್ಡಿ ವಿರುದ್ಧ ಶಿಸ್ತು ಕ್ರಮ; ಇದು ಸಿಪಿಐ (ಎಂ) ಆಂತರಿಕ ವಿಚಾರ!

ಇತ್ತೀಚೆಗೆ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಮೀ ಟೂ ಅಭಿಯಾನ. ಹೆಚ್ಚು ಕಡಿಮೆ ಇದೇ ಮಾದರಿಯ ಬೆಳವಣಿಗೆಯೊಂದು ಸಿಪಿಐ (ಎಂ) ಒಳಗೂ ನಡೆದಿದೆ ಎಂಬುದು ಈಗ ಲಭ್ಯವಾಗುತ್ತಿರುವ ಮಾಹಿತಿ.

ಕಮ್ಯೂನಿಸ್ಟ್‌ ಪಕ್ಷ ಆಫ್‌ ಇಂಡಿಯಾ (ಮಾರ್ಕ್ಸಿಸ್ಟ್‌) ಕರ್ನಾಟಕದ ರಾಜ್ಯ ಸಮಿತಿಯ ಕಾರ್ಯದರ್ಶಿ, ಮಾಜಿ ಶಾಸಕ ಜಿ. ವಿ. ಶ್ರೀರಾಮರೆಡ್ಡಿ ವಿರುದ್ಧ ಪಕ್ಷದ ಕೇಂದ್ರ ಸಮಿತಿ ಶಿಸ್ತು ಕ್ರಮ ಜರುಗಿಸಿದೆ.

ಡಿ. 15-16ರಂದು ದಿಲ್ಲಿಯಲ್ಲಿ ನಡೆದ ಕೇಂದ್ರ ಸಮಿತಿಯ ಸಭೆಯಲ್ಲಿ ಇಂತಹದೊಂದು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಗುರುವಾರ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ ಸಿಪಿಐ (ಎಂ), ‘ಗಂಭೀರ ದುರ್ನಡತೆಗಳ’ಗಳ ಕಾರಣಕ್ಕೆ ಪಕ್ಷದ ಕೇಂದ್ರ ಸಮಿತಿ ಸದಸ್ಯರೂ ಆದ ಶ್ರೀರಾಮ ರೆಡ್ಡಿ ಅವರನ್ನು ಪಕ್ಷದ ಎಲ್ಲಾ ಚುನಾಯಿತ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ ಎಂದು ಹೇಳಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡದ ಪಕ್ಷ, ‘ಡಿ. 18ರಂದು ರಾಜ್ಯ ಸಮಿತಿ ಸಭೆಯನ್ನು ನಡೆಸಲಾಯಿತು. ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ನಾಲ್ಕು ಪಾಲಿಟ್ ಬ್ಯುರೋ ಸದಸ್ಯರು ಉಪಸ್ಥಿತರಿದ್ದರು. ಈ ಸಮಯದಲ್ಲಿ ಕಾ. ಯು. ಬಸವರಾಜ್ ಅವರನ್ನು ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.’ ಎಂದು ತಿಳಿಸಿದೆ.

ಕಮ್ಯುನಿಸ್ಟ್ ಪರಂಪರೆಯ ಪಕ್ಷಗಳಲ್ಲಿ ‘ಕಾರ್ಯದರ್ಶಿ’ ಹುದ್ದೆ ಅತ್ಯಂತ ಪ್ರಭಾವಿ ಸ್ಥಾನ. (ಬಿಜೆಪಿ, ಕಾಂಗ್ರೆಸ್ ರೀತಿಯ ಸಾಂಪ್ರದಾಯಿಕ ಪಕ್ಷಗಳಲ್ಲಿ ಅಧ್ಯಕ್ಷ ಗಾಧಿ ಇರುವ ಹಾಗೆ). ‘ವ್ಯಕ್ತಿಗಿಂತ ಸಮೂಹ ಮುಖ್ಯ’ ಎಂದು ಎಡ ಪಕ್ಷಗಳು ಹೇಳಿದರೂ, ವಾಸ್ತವದಲ್ಲಿ ಈ ಹುದ್ದೆಗಳು ಪಕ್ಷದ ಕಾರ್ಯಕರ್ತರ ಭವಿಷ್ಯವನ್ನು ನಿರ್ಧರಿಸುವಷ್ಟು ಪ್ರಭಾವಶಾಲಿಯಾಗಿರುತ್ತವೆ. ಸಿಪಿಐ (ಎಂ) ದೇಶದ ಶ್ರೀಮಂತ ರಾಜಕೀಯ ಪಕ್ಷಗಳಲ್ಲೊಂದು. ಹೀಗಿರುವಾಗ ಇದರ ರಾಜ್ಯ ಸಮಿತಿ ಕಾರ್ಯದರ್ಶಿ ಹುದ್ದೆಯ ವಿಚಾರದಲ್ಲಿ ನಡೆದ ಬೆಳವಣಿಗೆ ಸಹಜವಾಗಿಯೇ ಗಮನ ಸೆಳೆಯುತ್ತಿದೆ.

ಕರ್ನಾಟಕ ರಾಜ್ಯ ಸಮಿತಿಯ ಕಾರ್ಯದರ್ಶಿ ಸ್ಥಾನಕ್ಕೆ 7 ವರ್ಷಗಳ ಹಿಂದೆ ‘ಚುನಾಯಿತ’ರಾದವರು ಕಾ. ಜಿ. ವಿ. ಶ್ರೀರಾಮ ರೆಡ್ಡಿ. ಅದಾದ ನಂತರ ನಡೆದ ಎರಡು ಚುನಾವಣೆಗಳಲ್ಲಿ ಅವರು ಮರು ಆಯ್ಕೆಯಾಗಿದ್ದರು. ಹಾಗೆ ನೋಡಿದರೆ, ಸಿಪಿಐ (ಎಂ) ಪಕ್ಷದ ನಿಯಮದ ಪ್ರಕಾರ 9 ವರ್ಷಗಳಿಗಿಂತ (ಅಥವಾ ಮೂರು ಸಾರಿ) ಹೆಚ್ಚು ಕಾಲ ಒಂದೇ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ಇಲ್ಲ. ಹೇಗಿದ್ದರೂ ಇನ್ನೆರಡು ವರ್ಷಕ್ಕೆ ಜಿ. ವಿ. ಶ್ರೀರಾಮ ರೆಡ್ಡಿ ಅನಿವಾರ್ಯವಾಗಿ ಹೊರಬೀಳುತ್ತಿದ್ದರು. ಹೀಗಿರುವಾಗ ಇಂತಹದೊಂದು ಪ್ರಮುಖ ತೀರ್ಮಾನವನ್ನು ಕೇಂದ್ರ ಸಮಿತಿ ಯಾಕೆ ತೆಗೆದುಕೊಂಡಿತು?

ಈ ಕುರಿತು ‘ಸಮಾಚಾರ’ ಇನ್ನಷ್ಟು ಆಳಕ್ಕಿಳಿದಾಗ ಸಿಕ್ಕಿದ ಮಾಹಿತಿ ರಾಜಕೀಯ ಪಕ್ಷವೊಂದರೊಳಗೆ ನಡೆದ ‘ಆಂತರಿಕ ಬೆಳವಣಿಗೆ’ಯ ಮೀ ಟೂ ಆಯಾಮ ಹಾಗೂ ನೈತಿಕ ಸಂಘರ್ಷದಲ್ಲಿರುವ ಗುಂಪುಗಳ ಕತೆ ತೆರೆದುಕೊಳ್ಳುತ್ತದೆ.

ಮೀ ಟೂ ಆಯಾಮ:

ಇತ್ತೀಚೆಗೆ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಮೀ ಟೂ ಅಭಿಯಾನ. ವೃತ್ತಿ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ವಿರೋಧಿಸಿ ಹುಟ್ಟಿಕೊಂಡ ಪ್ರತಿರೋಧ ಸಾಮಾಜಿಕವಾಗಿ ಹೆಸರು ಮಾಡಿದ ಹಲವು ಗಂಡಸರಿಗೆ ಮರ್ಮಾಘಾತ ನೀಡಿತ್ತು. ಹೆಚ್ಚು ಕಡಿಮೆ ಇದೇ ಮಾದರಿಯ ಬೆಳವಣಿಗೆಯೊಂದು ಸಿಪಿಐ (ಎಂ) ಒಳಗೂ ನಡೆದಿದೆ ಎಂಬುದು ಈಗ ಲಭ್ಯವಾಗುತ್ತಿರುವ ಮಾಹಿತಿ.

“ಇದು ಸುಮಾರು 20 ವರ್ಷಗಳ ಹಿಂದಿನ ಪ್ರಕರಣ ಇರಬಹುದು. ಅವತ್ತು ಏನೋ ನಡೆದಿತ್ತು. ಅದು ಸಮ್ಮತವೂ ಆಗಿರಬಹುದು. ಆದರೆ ಅದರ ಪರಿಣಾಮ ಇವತ್ತು ಅನುಭವಿಸುವಂತಾಗಿದೆ,’’ ಎನ್ನುತ್ತಾರೆ ಸಿಪಿಐ (ಎಂ) ಕರ್ನಾಟಕದ ಸಮೂಹ ಸಂಘಟನೆಯೊಂದರ ಪ್ರಮುಖ ಹುದ್ದೆಯಲ್ಲಿದ್ದವರೊಬ್ಬರು. ಪಕ್ಷದ ‘ಆಂತರಿಕ ಬೆಳವಣಿಗೆ’ಗಳ ಕುರಿತು ಮಾಹಿತಿ ಇವರಿಗಿದೆ. “ಕಾ. ರೆಡ್ಡಿ ವಿಚಾರದಲ್ಲಿ ಶಿಸ್ತು ಕ್ರಮ ತೆಗೆದುಕೊಂಡ ಮಾಹಿತಿ ಇಲ್ಲ. ಆದರೆ ದೂರು ಕೇಂದ್ರ ಸಮಿತಿಗೆ ಹೋಗಿತ್ತು. ಅಲ್ಲೊಂದು ಸಮಿತಿಯಾಗಿತ್ತು ಎಂಬುದು ಗೊತ್ತಿತ್ತು. ಶ್ರೀರಾಮ ರೆಡ್ಡಿ ಕಡೆಯವರು ತಮ್ಮ ವಿರೋಧಿ ಗುಂಪಿನ ಐದಾರು ಜನರ ವಿರುದ್ಧ ಇಂತಹದ್ದೇ ಆರೋಪ ಮಾಡಿದ್ದಾರೆ. ಕೆಲವು ಸಭೆಗಳಲ್ಲಿ ಜೋರು ಜೋರು ಮಾತುಕತೆಗಳು ನಡೆದಿವೆ’’ ಎಂದು ಅವರು ಮಾಹಿತಿ ನೀಡುತ್ತಾರೆ.

ಹಾಗೆ ನೋಡಿದರೆ, ಜಿ. ವಿ. ಶ್ರೀರಾಮ ರೆಡ್ಡಿ ವಿರುದ್ಧ ಪಕ್ಷದೊಳಗೆ ಶಿಸ್ತು ಕ್ರಮ ಜರುಗಿಸಿರುವುದು ಮೊದಲ ಸಾರಿ ಏನಲ್ಲ. “ಅದು 1997 ಇರಬಹುದು. ಈ ಸಮಯದಲ್ಲಿ ಕಾ. ರೆಡ್ಡಿ ಹಾಗೂ ಸಮೂಹ ಸಂಘಟನೆಯಲ್ಲಿದ್ದ ಇನ್ನೊಬ್ಬ ಮಹಿಳೆಯ ವಿಚಾರದಲ್ಲಿ ಪಕ್ಷ ಎಚ್ಚರಿಕೆ ನೀಡಿತ್ತು. ಇದಾದ ನಂತರ ಅವರ ನಡತೆಗಳ ಕುರಿತು ಸಾಕಷ್ಟು ದೂರುಗಳು ಬಂದಿದ್ದವು. ಅದರಲ್ಲಿ ಕೆಲವು ಮಹಿಳೆಯರು ಲೈಂಗಿಕ ದೌರ್ಜನ್ಯದ ಕುರಿತು ಮಾಡಿದ ಆರೋಪಗಳನ್ನು ಪಕ್ಷ ಗಂಭೀರವಾಗಿ ಪರಿಗಣಿಸಿತು. ಇದಕ್ಕಾಗಿ ಆಂತರಿಕ ತನಿಖಾ ಸಮಿತಿಯನ್ನು ರಚಿಸಿದ್ದೆವು. ಅದರ ತೀರ್ಪು ಈಗ ಹೊರಬಿದ್ದಿದೆ,’’ ಎನ್ನುತ್ತಾರೆ ಸಿಪಿಐ (ಎಂ) ರಾಜ್ಯ ಸಮಿತಿ ಸದಸ್ಯರೊಬ್ಬರು. ಇಂತಹ ಬೆಳವಣಿಗೆಗಳು ಹಿಂದೆಯೂ ನಡೆದಿತ್ತು, ಮುಂದೆಯೂ ನಡೆಯುತ್ತವೆ. ಪಕ್ಷ ಅಶಿಸ್ತನ್ನು ಸಹಿಸುವುದಿಲ್ಲ ಎಂದವರು ಬೆಳವಣಿಗೆಯ ಸಾಧಕಗಳನ್ನು ಸಮರ್ಥಿಸಿಕೊಳ್ಳುತ್ತಾರೆ.

“ಪಕ್ಷದ ಎಲ್ಲಾ ಶಾಸಕರು, ಸಚಿವರು, ಮಾಜಿಗಳು ತಮ್ಮ ಸಂಬಳ ಹಾಗೂ ಪಿಂಚಣಿಯನ್ನು ಪಕ್ಷಕ್ಕೆ ನೀಡುತ್ತಾರೆ. ಪಕ್ಷ ಅವರಿಗೆ ತಿಂಗಳ ಖರ್ಚಿಗೆ ಹಣ ನೀಡುತ್ತದೆ. ಶ್ರೀರಾಮ ರೆಡ್ಡಿ ಶಾಸಕರಾಗಿದ್ದವರು. ಅವರಿಗೆ ಪಿಂಚಣಿ ಬರುತ್ತದೆ. ಆದರೆ ಅದರ ಲೆಕ್ಕವನ್ನು ಅವರು ಪಕ್ಷಕ್ಕೆ ನೀಡಿದ ಉದಾಹರಣೆ ಇಲ್ಲ. ಕೇವಲ ಒಂದು ಘಟನೆ ಅಂತಲ್ಲ, ಸಾಕಷ್ಟು ವಿಚಾರಗಳ ಕಾರಣಕ್ಕೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ,’’ ಎನ್ನುತ್ತಾರೆ ರೆಡ್ಡಿ ಅವರನ್ನು ಬಾಗೇಪಲ್ಲಿಯಲ್ಲಿ ಹತ್ತಿರದಿಂದ ಬಲ್ಲ ಒಬ್ಬರು.

1985ರಿಂದ 2018ರವರೆಗೆ 8 ಬಾರಿ ಬಾಗೇಪಲ್ಲಿ ಕ್ಷೇತ್ರದಿಂದ ಚುನಾವಣೆಗೆ ಕಣಕ್ಕಿಳಿದಿರುವ ಹಿನ್ನಲೆ ರೆಡ್ಡಿಗಿದೆ. 1994 ಮತ್ತು 2004ರಲ್ಲಿ ಎರಡು ಬಾರಿ ಅವರು ವಿಧಾನಸಭೆಗೆ ಪ್ರವೇಶ ಪಡೆದಿದ್ದಾರೆ. 2018ರಲ್ಲಿ ಮನೆ ಮನೆಗೆ ತೆರಳಿ ಹಣ ಸಂಗ್ರಹಿಸಿ ಗೆಲ್ಲಲೇಬೇಕೆಂದು ಕಣಕ್ಕಿಳಿದಿದ್ದ ಶ್ರೀರಾಮರೆಡ್ಡಿ ಕಾಂಗ್ರೆಸ್‌ನ ಸುಬ್ಬಾ ರೆಡ್ಡಿ ವಿರುದ್ಧ ಸುಮಾರು 14 ಸಾವಿರ ಮತಗಳ ಅಂತರದಿಂದ ಸೋಲೊಪ್ಪಿಕೊಂಡಿದ್ದರು.

‘ಪಕ್ಷದಲ್ಲಿ ಹಲವು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ, ಅಕ್ರಮ ಭೂ ವ್ಯವಹಾರಗಳು, ಮೋಸದ ಹಣಕಾಸು ವಹಿವಾಟು ಮತ್ತು ಪರಿಶೀಲಿಸದ ಮೂಲಗಳಿಂದ ದೇಣಿಗೆಗಳನ್ನು ಸ್ವೀಕರಿಸಿರುವ ಆರೋಪಗಳು ಅವರ ಮೇಲಿವೆ. ಪಕ್ಷದ ಮೂಲಗಳ ಪ್ರಕಾರ ಅವರ ಮೇಲೆ ಆರೋಪಗಳು ಇತ್ತೀಚೆಗೆ ಕೇಳಿ ಬಂದಿದ್ದಾದರೂ, ಕೆಲವು ಪ್ರಕರಣಗಳು ಹಲವು ವರ್ಷಗಳಷ್ಟು ಹಳೆಯದಾಗಿವೆ’ ಎಂದು ‘ದಿ ವೈರ್’ ಆರೋಪಿಸಿದೆ.

ಇಂತಹ ಕಾರಣಗಳಿಗಾಗಿ ರಾಜಕೀಯ ಪಕ್ಷವೊಂದು ತನ್ನದೇ ನಾಯಕನ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲದ ಈ ಸಮಯದಲ್ಲಿ ಸಿಪಿಐ (ಎಂ)ನಲ್ಲಿ ನಡೆದ ಈ ಬೆಳವಣಿಗೆ ಗಮನಾರ್ಹ.

ಸದ್ಯ, ಪಕ್ಷದ ರೈತ ಸಮೂಹ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಯು. ಬಸವರಾಜ್ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಪಕ್ಷದಲ್ಲಿ 30 ವರ್ಷಗಳಿಂದ ಸಕ್ರಿಯರಾಗಿರುವವರು. ದೇವದಾಸಿಗಳ ಪರ ಹೋರಾಟ ನಡೆಸಿದ ಹಿನ್ನೆಲೆ ಇವರಿಗಿದೆ. ಸ್ಟೂಡೆಂಟ್‌ ಫೆಡರೇಷನ್‌ ಆಫ್‌ ಇಂಡಿಯಾ (ಎಸ್‌ಎಫ್‌ಐ) ಮೂಲಕ ಅವರು ತಮ್ಮ ರಾಜಕೀಯ ಪಯಣ ಆರಂಭಿಸಿದ ಅವರು ಮುಂದೆ ಪಕ್ಷದ ಕೃಷಿ ಸಂಘಟನೆ ಆಲ್‌ ಇಂಡಿಯಾ ಕಿಸಾನ್‌ ಸಭಾದಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿ ಇದೀಗ ಕರ್ನಾಟಕದಲ್ಲಿ ಪಕ್ಷದ ಮುಖ್ಯಸ್ಥರಾಗಿದ್ದಾರೆ. “ಇವರು ಶ್ರೀರಾಮ ರೆಡ್ಡಿ ಅವರ ಆಪ್ತ ವಲಯದಲ್ಲಿದ್ದ ಮತ್ತೊಬ್ಬ ಕಾಮ್ರೆಡ್. ಸ್ವಂತಿಕೆ ಇಲ್ಲ,’’ ಎಂಬುದು ಇವರ ಮೇಲಿರುವ ಬಹುದೊಡ್ಡ ಆರೋಪ.

ಕಮ್ಯೂನಿಸ್ಟ್‌ ಪಕ್ಷದ ಕರ್ನಾಟಕ ರಾಜ್ಯ ಸಮಿತಿ ಕಾರ್ಯದರ್ಶಿ ಯು. ಬಸವರಾಜ್.
ಕಮ್ಯೂನಿಸ್ಟ್‌ ಪಕ್ಷದ ಕರ್ನಾಟಕ ರಾಜ್ಯ ಸಮಿತಿ ಕಾರ್ಯದರ್ಶಿ ಯು. ಬಸವರಾಜ್.
/ದಿ ಹಿಂದೂ

ಕರ್ನಾಟಕದಲ್ಲಿ ಸಿಪಿಐ (ಎಂ) ಪಕ್ಷದ ಸದಸ್ಯತ್ವ ಸುಮಾರು ಒಂದು ಲಕ್ಷದಷ್ಟಿದೆ. ಇದರ ಸಮೂಹ ಸಂಘಟನೆಗಳ ಸದಸ್ಯತ್ವ ಸುಮಾರು 9- 10 ಲಕ್ಷದಷ್ಟಿದೆ. “ಕರ್ನಾಟಕದಲ್ಲಿ ಅತ್ಯಂತ ಕ್ರೀಯಾಶೀಲ ಯುವ ಜನರ ತಂಡ ಇದೆ. ಆದರೆ ಇದನ್ನು ಮುನ್ನಡೆಸಲು ಯೋಗ್ಯ ನಾಯಕತ್ವ ಇಲ್ಲ,’’ ಎಂಬುದು ಕೇಂದ್ರ ಸಮಿತಿಯ ತಿಳಿವಳಿಕೆಯಾಗಿದ್ದ ಹೊತ್ತಿನಲ್ಲೇ ದೊಡ್ಡ ಸಮೂಹವನ್ನು ಮುನ್ನಡೆಸಲು ‘ಯೋಗ್ಯ’ರು ಬೇಕು ಎಂದು ಪಕ್ಷ ತೀರ್ಮಾನಿಸಿದೆ. ‘ಗಂಭೀರ ದುರ್ನಡತೆ’ ಹೊಂದಿರುವವರನ್ನು ಹೊಣೆಮುಕ್ತಗೊಳಿಸಿದೆ. ಮುಂದೆ?