samachara
www.samachara.com
‘ಮಾತಲ್ಲೇ ಐಸಿಸ್ ಮಣಿಸಿದ ಟ್ರಂಪ್’; ನಿರ್ಣಾಯಕ ಹಂತದಲ್ಲಿ ಯುದ್ಧಭೂಮಿಯಿಂದ ಹೊರಬಿದ್ದ ಅಮೆರಿಕಾ!
COVER STORY

‘ಮಾತಲ್ಲೇ ಐಸಿಸ್ ಮಣಿಸಿದ ಟ್ರಂಪ್’; ನಿರ್ಣಾಯಕ ಹಂತದಲ್ಲಿ ಯುದ್ಧಭೂಮಿಯಿಂದ ಹೊರಬಿದ್ದ ಅಮೆರಿಕಾ!

ಐಸಿಲ್‌ (ಐಸಿಸ್‌) ವಿರುದ್ಧ ಅಮೆರಿಕಾ ಜಯ ಗಳಿಸಿದ್ದು ಯಾವಾಗ ಎಂಬ ಪ್ರಶ್ನೆಯನ್ನು ಟ್ರಂಪ್‌ ಹೇಳಿಕೆ ಹುಟ್ಟುಹಾಕಿದೆ. 

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೊಮ್ಮೆ ಎಲ್ಲರ ಹುಬ್ಬೇರಿಸಿದ್ದಾರೆ. ಐಸಿಸ್‌ (ಇವತ್ತಿಗೆ ಐಸಿಲ್‌) ವಿರುದ್ಧ ಜಯ ಸಾಧಿಸಿದ್ದೇವೆ ಎಂದು ಏಕಪಕ್ಷೀಯವಾಗಿ ಘೋಷಿಸಿರುವ ಅವರು ಸಿರಿಯಾದಿಂದ ಅಮೆರಿಕಾದ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿರುವುದಾಗಿ ಘೋಷಿಸಿದ್ದಾರೆ.

“ನಾವು ಸಿರಿಯಾದಲ್ಲಿ ದೀರ್ಘ ಕಾಲ ಹೋರಾಟ ಮಾಡಿದ್ದೇವೆ. ನಾನು ಸರಿ ಸುಮಾರು ಎರಡು ವರ್ಷದಿಂದ ಅಧ್ಯಕ್ಷನಾಗಿದ್ದೇನೆ. ನಾವು ಐಸಿಸ್‌ ವಿರುದ್ಧ ಜಯಗಳಿಸಿದ್ದೇವೆ. ನಾವು ಅವರನ್ನು ಕೆಟ್ಟದಾಗಿ ಸೋಲಿಸಿದ್ದೇವೆ. ಅವರ ಕೈಯಲ್ಲಿದ್ದ ಭೂಮಿಯನ್ನು ಕಿತ್ತುಕೊಂಡಿದ್ದೇವೆ ಮತ್ತು ಇದು ನಮ್ಮ ತುಕಡಿಗಳನ್ನು ತವರಿಗೆ ವಾಪಸ್‌ ಕರೆಸಿಕೊಳ್ಳುವ ಸಮಯ,” ಎಂದಿದ್ದಾರೆ ಟ್ರಂಪ್. ಈ ಮೂಲಕ ಸಿರಿಯಾ ನೆಲದಲ್ಲಿದ್ದ 2,000 ಸೈನಿಕರನ್ನು ಅವರು ಹಿಂದಕ್ಕೆ ಕರೆಸಿಕೊಳ್ಳುವ ಬಹುದೊಡ್ಡ ತೀರ್ಮಾನ ತೆಗೆದುಕೊಂಡಿದ್ದಾರೆ.

ಆದರೆ ಐಸಿಲ್‌ ವಿರುದ್ಧ ಜಯ ಗಳಿಸಿದ್ದು ಯಾವಾಗ ಎಂಬ ಪ್ರಶ್ನೆಯನ್ನು ಅಮೆರಿಕಾ ಅಧ್ಯಕ್ಷರ ಘೋಷಣೆ ಹುಟ್ಟುಹಾಕಿದೆ. ಅಲ್ಲಿನ ತಜ್ಞರ ವರದಿಗಳೇ ಇದಕ್ಕೆ ತದ್ವಿರುದ್ಧವಾಗಿರುವಾಗ ಅವರ ಈ ಘೋಷಣೆಎಲ್ಲರನ್ನೂ ಅಚ್ಚರಿಗೆ ದೂಡಿದೆ.

2014 ರಿಂದ 2018ರವರೆಗೆ:

2014ರಲ್ಲಿ ಮೊದಲ ಬಾರಿಗೆ ಅಮೆರಿಕಾ ಸಿರಿಯಾ ನೆಲದ ಮೇಲೆ ವೈಮಾನಿಕ ದಾಳಿ ಆರಂಭಿಸಿತ್ತು. ಬಳಿಕ ತನ್ನ ಸೈನಿಕರನ್ನು ನೆಲದ ಮೇಲೆ ಇಳಿಸಿತ್ತು. ಅಮೆರಿಕಾ ಮತ್ತು ಸ್ಥಳೀಯ ಸಂಘಟನೆಗಳ ಹೋರಾಟದಿಂದಾಗಿ ಒಂದು ಕಾಲದಲ್ಲ ಸಿರಿಯಾ ಮತ್ತು ಇರಾಕ್‌ನ ದೊಡ್ಡ ಪ್ರದೇಶವನ್ನು ಆಳುತ್ತಿದ್ದ ಐಸಿಲ್‌ ಇವತ್ತು ಸಣ್ಣ ಪ್ರದೇಶಕ್ಕೆ ಸೀಮಿತವಾಗಿದೆ. ಆದರೆ ಸೋಲಿಸಿದ್ದೇವೆ ಎನ್ನುವ ಮಾತು ಸತ್ಯಕ್ಕೆ ದೂರವಾದುದು.

ಸಿರಿಯಾ ನೆಲದಲ್ಲಿ ಅಮೆರಿಕಾ ಸೈನಿಕರು.
ಸಿರಿಯಾ ನೆಲದಲ್ಲಿ ಅಮೆರಿಕಾ ಸೈನಿಕರು.
/ಅಲ್‌ಜಝೀರಾ

ಹೀಗಿರುವಾಗಲೇ ಟ್ರಂಪ್‌ ಜಯಭೇರಿ ಘೋಷಣೆ ಮಾಡಿರುವುದು, ಸೈನಿಕರನ್ನು ಹಿಂದಕ್ಕೆ ಪಡೆಯುವ ನಿರ್ಧಾರಕ್ಕೆ ಬಂದಿರುವುದು ಹಲವರಲ್ಲಿ ಆಕ್ರೋಶ ಹುಟ್ಟುಹಾಕಿದೆ. ಘೋಷಣೆ ಬೆನ್ನಲ್ಲೇ ಕಾಂಗ್ರೆಸ್‌ ಸದಸ್ಯರು ಮತ್ತು ಹಿರಿಯ ರಿಪಬ್ಲಿಕನ್ ಸದಸ್ಯರು ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುವಂತೆ ಅವರನ್ನು ಒತ್ತಾಯಿಸಿದ್ದಾರೆ.

ತಮ್ಮ ನಿರ್ಧಾರ ಘೋಷಣೆಗೂ ಮುನ್ನ ಟ್ರಂಪ್‌ ನ್ಯಾಟೋ ಮಿತ್ರ ರಾಷ್ಟ್ರ ಟರ್ಕಿ ಅಧ್ಯಕ್ಷ ರೆಸಿಪ್‌ ತಯ್ಯಿಪ್‌ ಎರ್ಡೋಗನ್‌ ಅವರಿಗೆ ಫೋನಾಯಿಸಿದ್ದರು. ಆದರೆ ಅವರ ಬಳಿಯಲ್ಲಿ ಈ ವಿಷಯವನ್ನು ಚರ್ಚಿಸದೆ ಏಕಪಕ್ಷೀಯವಾಗಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಂಕೀರ್ಣ ಸಿರಿಯಾ:

ಸಿರಿಯಾದ ರಾಜಕೀಯ ಸಂಕೀರ್ಣವಾದುದು. ಅಲ್ಲಿನ ಅಧ್ಯಕ್ಷ ಬಷರ್‌ ಅಲ್‌ ಅಸದ್‌ ವಿರುದ್ಧ ಹಲವು ಸಂಘಟನೆಗಳು ಹೋರಾಡುತ್ತಿವೆ. ಇವುಗಳಿಗೆ ಅಮೆರಿಕಾ ಬೆಂಬಲ ನೀಡಿದರೆ, ರಷ್ಯಾ ಅಸಾದ್‌ ಬೆನ್ನಿಗೆ ನಿಂತಿದೆ. ಇವರೆಲ್ಲರ ಮಧ್ಯೆ ತನ್ನ ಪ್ರತ್ಯೇಕ ರಾಷ್ಟ್ರದ ಕನಸು ಕಾಣುತ್ತಿದೆ ಐಸಿಲ್‌. ಅಮೆರಿಕಾ ಬೆಂಬಲಿತ ಸಂಘಟನೆಗಳು ಅಸಾದ್‌ ಜತೆಗೇ ಈ ಐಸಿಲ್‌ ವಿರುದ್ಧವೂ ಸಮರ ಸಾರಿದೆ. ಆದರೆ ಒಂದಷ್ಟು ಅಮೆರಿಕಾ ಬೆಂಬಲಿತ ಸಂಘಟನೆಗಳ ಬಗ್ಗೆ ಅದರ ಮಿತ್ರ ರಾಷ್ಟ್ರಗಳಿಗೆ ಅಸಮಧಾನವಿದೆ. ಅವುಗಳಲ್ಲೇ ಒಂದು ಹೆಸರು ಸಿರಿಯನ್‌ ಡೆಮಾಕ್ರಾಟಿಕ್‌ ಫೋರ್ಸಸ್‌ (ಎಸ್‌ಡಿಆರ್‌).

ಕುರ್ದಿಶ್‌ ಮತ್ತು ಅರಬ್‌ ಮೈತ್ರಿಯ ಭಾಗವಾಗಿ ಹುಟ್ಟಿಕೊಂಡಿರುವ ಸಿರಿಯನ್‌ ಡೆಮಾಕ್ರಾಟಿಕ್‌ ಫೋರ್ಸಸ್‌ (ಎಸ್‌ಡಿಆರ್‌) ಐಸಿಲ್‌ ವಿರುದ್ಧದ ಹೋರಾಟದಲ್ಲಿ ಅಮೆರಿಕಾದ ಜತೆ ಕೈ ಜೋಡಿಸಿತ್ತು. ಇದು ಟರ್ಕಿಯನ್ನು ಕೆರಳಿಸಿತ್ತು. ಜತೆಗೆ ಅಮೆರಿಕಾ ಬೆಂಬಲಿತ ಕುರ್ದಿಶ್‌ ಪೀಪಲ್ಸ್‌ ಪ್ರೊಟೆಕ್ಷನ್‌ ಯೂನಿಟ್‌ (ವೈಪಿಜಿ) ಗಳನ್ನು ಇದರದ್ದೇ ಮುಂದುವರಿದ ಭಾಗ ಎಂದು ಎರ್ಡೋಗನ್‌ ಸರಕಾರ ಪರಿಗಣಿಸಿತ್ತು. ಈ ಹಿನ್ನೆಲೆಯಲ್ಲಿ ಮಂಬಿಜ್‌ ನಗರದಿಂದ ‘ವೈಪಿಜಿ’ ಹೊರ ಹಾಕಲು ಅಮೆರಿಕಾದ ಜತೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಇದನ್ನು ಜಾರಿಗೆ ತರುವಲ್ಲಿ ಅಮೆರಿಕಾ ವಿಳಂಬ ಮಾಡುತ್ತಿದೆ ಎಂಬುದು ಟರ್ಕಿಯನ್ನು ಕೆರಳಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಮೆರಿಕಾದ ನ್ಯಾಟೋ ಮಿತ್ರ ರಾಷ್ಟ್ರ ತನ್ನ ದಕ್ಷಿಣದ ಗಡಿಯಿಂದ ಸಿರಿಯಾದ ನೆಲದೊಳಕ್ಕೆ ಸೇನೆಯನ್ನು ನುಗ್ಗಿಸುವುದಾಗಿ ಇತ್ತೀಚೆಗೆ ಎಚ್ಚರಿಸಿತ್ತು. ಈ ಕಾರಣಕ್ಕೆ ಟ್ರಂಪ್‌ ನಡೆ ಟರ್ಕಿಗೆ ನೀಡಿದ ಕೊಡುಗೆ ಎಂಬ ಚರ್ಚೆಗಳು ನಡೆಯುತ್ತಿವೆ.

ಇನ್ನೊಂದು ಕಡೆ ಅಮೆರಿಕಾದ ನಿರ್ಧಾರವನ್ನು ಬ್ರಿಟನ್‌ ವಿರೋಧಿಸಿದೆ. ಐಸಿಲ್‌ನ್ನು ಸಿರಿಯಾದಲ್ಲಿ ಸೋಲಿಸಲಾಗಿದೆ ಎಂಬುದನ್ನು ಅದು ತಳ್ಳಿ ಹಾಕಿದೆ. ಅತ್ತ ಇಸ್ರೇ‌ಲ್ ಪ್ರಧಾನಿ ಬೆಂಜಮಿನ್‌ ನೇತನ್ಯಾಹು, ಟ್ರಂಪ್‌ ಹೇಳಿಕೆಯನ್ನು ಇಸ್ರೇಲ್‌ ಅಧ್ಯಯನಕ್ಕೊಳಪಡಿಸಲಿದೆ ಎಂದಿದ್ದಾರೆ. ಅಮೆರಿಕಾ ಸೇನೆಯನ್ನು ಹಿಂತೆಗೆದುಕೊಂಡಿದ್ದರಿಂದ ಸಿರಿಯಾ ಅಧ್ಯಕ್ಷ ಬಷರ್‌ ಅಲ್‌ ಅಸದ್‌ ಮಿತ್ರರಾದ ರಷ್ಯಾ ಮತ್ತು ಇರಾನ್‌‌ ಕೈ ಮತ್ತಷ್ಟು ಬಲಗೊಂಡಿದೆ ಎಂಬ ಟೀಕೆಗಳೂ ಕೇಳಿ ಬಂದಿವೆ.

ಜತೆಗೆ “ಈ ನಿರ್ಧಾರದಿಂದ ಐಸಿಲ್‌ ವಿರುದ್ಧದ ಹೋರಾಟವನ್ನು ಕುರ್ದಿಶ್‌ ಪಡೆಗಳು ನಿಲ್ಲಿಸಲಿವೆ. ಕಾರಣ ಗಡಿ ದಾಟಿ ಟರ್ಕಿ ಪಡೆಗಳು ಸಿರಿಯಾಕ್ಕೆ ಕಾಲಿಡಲಿವೆ. ಇದರಿಂದ ನಿಜವಾಗಿಯೂ ಐಸಿಲ್‌ಗೆ ಹೆಚ್ಚಿನ ಲಾಭವಾಗುತ್ತದೆ,” ಎಂದು ರಿಪಬ್ಲಿಕ್‌ ಪಕ್ಷದ ಸೆನೆಟರ್‌ ಮಾರ್ಕೊ ರುಬಿಯೋ ಅಭಿಪ್ರಾಯ ಪಟ್ಟಿದ್ದಾರೆ.

ಅಂದಾಜಿನ ಪ್ರಕಾರ, ಒಂದು ಕಾಲದಲ್ಲಿ ಐಸಿಲ್‌ ಸುಮಾರು 1 ಲಕ್ಷ ಚದರ ಕಿಲೋಮೀಟರ್‌ ಪ್ರದೇಶದ ಮೇಲೆ ಹಿಡಿತ ಹೊಂದಿತ್ತು. ಇವುಗಳಲ್ಲಿ 80 ಲಕ್ಷ ಜನರು ವಾಸಿಸುತ್ತಿದ್ದರು. ಅವತ್ತಿಗೆ 1 ಬಿಲಿಯನ್‌ ಡಾಲರ್‌ (ಸುಮಾರು 7 ಸಾವಿರ ಕೋಟಿ ರೂ.) ಆದಾಯವನ್ನು ಈ ಸಂಘಟನೆ ಹೊಂದಿತ್ತು. ಆದರೆ ಇವತ್ತು ತನ್ನ ಹಿಡಿತದಲ್ಲಿದ್ದ ಶೇಕಡಾ 95 ಭಾಗವನ್ನು ಐಸಿಲ್‌ ಕಳೆದುಕೊಂಡಿದೆ. ಹೀಗಿದ್ದೂ ಇವತ್ತಿಗೆ ಕನಿಷ್ಠ 2,500 ಐಸಿಲ್‌ ಬಂಡುಕೋರರು ಉಳಿದಿರಬಹುದು ಎಂದು ಅಂದಾಜಿಸಲಾಗಿದೆ. ಇಂತಹ ನಿರ್ಣಾಯಕ ಘಟ್ಟದಲ್ಲಿ ಹೋರಾಟದಿಂದ ಟ್ರಂಪ್‌ ಹಿಂದೆ ಸರಿದಿದ್ದಾರೆ. ಇದರ ಪರಿಣಾಮಗಳೇನು ಎಂಬುದನ್ನು ಭವಿಷ್ಯದ ದಿನಗಳಲ್ಲಿ ಗೊತ್ತಾಗಲಿದೆ.