samachara
www.samachara.com
ಅಣ್ಣ ಟಾಪರ್‌; ತಮ್ಮ ಪಾಪರ್‌: 46,000 ಕೋಟಿ ರೂಪಾಯಿ ಸಾಲದ ಸುಳಿಯಲ್ಲಿ ಅನಿಲ್‌ ಅಂಬಾನಿ!
COVER STORY

ಅಣ್ಣ ಟಾಪರ್‌; ತಮ್ಮ ಪಾಪರ್‌: 46,000 ಕೋಟಿ ರೂಪಾಯಿ ಸಾಲದ ಸುಳಿಯಲ್ಲಿ ಅನಿಲ್‌ ಅಂಬಾನಿ!

ಡಿಸೆಂಬರ್‌ 15ಕ್ಕೂ ಮೊದಲು ಎರಿಕ್ಸನ್‌‌ಗೆ 550 ಕೋಟಿ ರೂಪಾಯಿಗಳ ಬಾಕಿಯನ್ನು ‘ಆರ್‌ಕಾಂ’ ಪಾವತಿ ಮಾಡಬೇಕಿತ್ತು. ಆದರೆ ನಿಗದಿತ ದಿನಾಂಕಕ್ಕೆ ಮೊದಲು ಪಾವತಿ ಮಾಡದೆ ಅನಿಲ್‌ ಅಂಬಾನಿಯೀಗ ನ್ಯಾಯಾಂಗ ನಿಂದನೆ ಪ್ರಕರಣವನ್ನು ಎದುರಿಸಬೇಕಾಗಿ ಬಂದಿದೆ.

ಅಣ್ಣ ಮುಖೇಶ್‌ ಅಂಬಾನಿ ಈಗಷ್ಟೇ ಮಗಳ ಮದುವೆ ಮುಗಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ ಅವರು ತಮ್ಮ ಮಗಳು ಇಶಾ ಅಂಬಾನಿ ಮದುವೆಗೆ ಸುಮಾರು 700 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಒಂದೆಡೆ ಅಣ್ಣ ಹೀಗೊಂದು ಅದ್ಧೂರಿ ಮದುವೆಯಲ್ಲಿ ಮಿಂದೇಳುತ್ತಿದ್ದರೆ ಇತ್ತ ತಮ್ಮ ಅನಿಲ್‌ ಅಂಬಾನಿ ಹಣವಿಲ್ಲದ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ.

ರಿಲಯನ್ಸ್‌ ಉದ್ಯಮಗಳ ಸಮೂಹದ ಸಂಸ್ಥಾಪಕ ಧೀರೂಭಾಯಿ ಅಂಬಾನಿಯ ಕುಟುಂಬ ಇದ್ಭಾಗವಾದಾಗ ಕಿರಿಯ ಪುತ್ರ ಅನಿಲ್‌ ಅಂಬಾನಿ ಸಮ ಪಾಲನ್ನು ಪಡೆದುಕೊಂಡಿದ್ದರು. 2007ರಲ್ಲಿ ಅಣ್ಣನ ಜತೆ ಶ್ರೀಮಂತಿಕೆಯ ಸ್ಪರ್ಧೆಯಲ್ಲಿದ್ದ ಅವರದ್ದು 45 ಬಿಲಿಯನ್‌ ಡಾಲರ್‌ ಆಸ್ತಿ ಇದೆ ಎಂದಿತ್ತು ಫೋರ್ಬ್ಸ್‌ ಇಂಡಿಯಾದ ಶ್ರೀಮಂತರ ಪಟ್ಟಿ. ಆಗ ಅನಿಲ್‌ ಅಂಬಾನಿಯಿಂದ ತುಸುವೇ ಮುಂದಿದ್ದ ಮುಖೇಶ್‌ ಅಂಬಾನಿ ಬಳಿ 49 ಬಿಲಿಯನ್‌ ಡಾಲರ್‌ ಆಸ್ತಿ ಇದೆ ಎಂದು ಫೋರ್ಬ್ಸ್‌ ಅಂದಾಜಿಸಿತ್ತು. ಇವತ್ತು 2018ರಲ್ಲಿ ನಿಂತು ನೋಡಿದಾಗ ಮುಖೇಶ್‌ ಅಂಬಾನಿ 47.3 ಬಿಲಿಯನ್‌ ಡಾಲರ್‌ಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ ಅನಿಲ್‌ ಅಂಬಾನಿ ಕೇವಲ 2.44 ಬಿಲಿಯನ್‌ ಡಾಲರ್‌ ಆಸ್ತಿಯೊಂದಿಗೆ 66ನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಸ್ಥಾನಗಳ ಕುಸಿತ, ಕರಗಿದ ಆಸ್ತಿಗಿಂತ ಹೆಚ್ಚಾಗಿ ಅವರಿವತ್ತು ಬೆಟ್ಟದಷ್ಟು ಸಾಲವನ್ನು ತಲೆ ಮೇಲೆ ಹೊತ್ತು ಕೊಂಡಿದ್ದಾರೆ.

ತಂದೆ ಧೀರೂಭಾಯಿ ಅಂಬಾನಿ ಜತೆ ಮುಖೇಶ್‌ ಅಂಬಾನಿ ಮತ್ತು ಅನಿಲ್‌ ಅಂಬಾನಿ
ತಂದೆ ಧೀರೂಭಾಯಿ ಅಂಬಾನಿ ಜತೆ ಮುಖೇಶ್‌ ಅಂಬಾನಿ ಮತ್ತು ಅನಿಲ್‌ ಅಂಬಾನಿ
/ಗುಡ್‌ಟೈಮ್ಸ್‌

ಅನಿಲ್ ಅಂಬಾನಿಯ ಆಸ್ತಿಯ ಹೆಚ್ಚಿನ ಪಾಲು ‘ರಿಲಯನ್ಸ್‌ ಕಮ್ಯುನಿಕೇಷನ್ಸ್‌ (ಆರ್‌ಕಾಂ)‘ನಲ್ಲಿ ಹೊಂದಿದ್ದ ಶೇಕಡಾ 66ರಷ್ಟು ಶೇರುಗಳಿಂದ ಬಂದಿತ್ತು. ಆದರೆ ಇವತ್ತು ಆರ್‌ಕಾಂ ಸಾಲದ ಸುಳಿಯಲ್ಲಿದೆ. ಕೆಲವು ದಿನಗಳ ಹಿಂದೆ ಅವರನ್ನು ಸಾಲದ ಸುಳಿಯಿಂದ ಹೊರತರುವ ಪ್ರಯತ್ನಕ್ಕೆ ಮುಖೇಶ್‌ ಅಂಬಾನಿ ಕೈ ಹಾಕಿದ್ದರು. ಅವರ ಒಡೆತನದ ಜಿಯೋ ಇನ್ಫೊಕಾಮ್‌ ಆರ್‌ಕಾಂ ಆಸ್ತಿಗಳ ಖರೀದಿಗೆ ಮುಂದೆ ಬಂದಿತ್ತು. ಇದರಿಂದ ಸಾಲವನ್ನು ಕಟ್ಟಿ ಬ್ಯಾಂಕ್ರಪ್ಟಿ ಪ್ರಕ್ರಿಯೆಯಿಂದ ಬಚಾವಾಗಬಹುದು ಎಂದು ಅನಿಲ್‌ ಅಂಬಾನಿ ಅಂದುಕೊಂಡಿದ್ದರು. ಆದರೆ ಇದಕ್ಕೆ ಟೆಲಿಕಾಂ ಇಲಾಖೆ ಅಡ್ಡಗಾಲು ಹಾಕಿದೆ. ಆರ್‌ಕಾಂ ಬಳಿಯಲ್ಲಿರುವ ಸ್ಪೆಕ್ಟ್ರಂ ಮಾರಾಟಕ್ಕೆ ಸೋಮವಾರ ಬೆಳಿಗ್ಗೆ ಅನುಮೋದನೆ ನೀಡುವುದಾಗಿ ಟೆಲಿಕಾಂ ಇಲಾಖೆ ಸುಪ್ರೀಂ ಕೋರ್ಟ್‌ಗೆ ಹೇಳಿತ್ತು. ಆದರೆ 1,400 ಕೋಟಿ ರೂಪಾಯಿ ಮತ್ತು 2,947.68 ಕೋಟಿ ರೂಪಾಯಿಗಳ ದಂಡವನ್ನು ಸರಕಾರಕ್ಕೆ ಆರ್‌ಕಾಂ ಪಾವತಿಸಬೇಕಿರುವುದರಿಂದ ಇದರ ಮಾರಾಟ ಸಾಧ್ಯವಿಲ್ಲ ಎಂದು ಇಲಾಖೆ ಹೇಳಿದೆ.

ಈ ದಂಡ ಮೊತ್ತಕ್ಕೆ ತನ್ನಲ್ಲಿರುವ ಆಸ್ತಿ ಮತ್ತು ಆರ್‌ಕಾಂನ ಸಹ ಸಂಸ್ಥೆ ‘ರಿಲಯನ್ಸ್‌ ರಿಯಾಲ್ಟಿ’ಯನ್ನು ಆರ್‌ಕಾಂ ಗ್ಯಾರಂಟಿಯಾಗಿ ನೀಡಿತ್ತು. ಈ ಹಿನ್ನೆಲೆಯಲ್ಲಿ ತಾನು ಆಸ್ತಿ ಖರೀದಿಸಿದರೆ ಸಂಸ್ಥೆಯ ಹಿಂದಿನ ದಂಡ ಮೊತ್ತವನ್ನು ತನ್ನ ಮೇಲೆ ಹೇರಬಾರದು ಎಂದು ಜಿಯೋ ಸರಕಾರಕ್ಕೆ ಮನವಿ ಸಲ್ಲಿಸಿತ್ತು. ಈ ಹಿನ್ನಲೆಯಲ್ಲಿ ಸ್ಪೆಕ್ಟ್ರಂ ಮಾರಾಟಕ್ಕೆ ಟೆಲಿಕಾಂ ಇಲಾಖೆ ಅಡ್ಡಗಾಲು ಹಾಕಿದೆ.

ಆದರೆ ಈ ಡೀಲ್‌ನ್ನೇ ನಂಬಿ ಕುಳಿತುಕೊಂಡಿದ್ದ ಅನಿಲ್‌ ಅಂಬಾನಿಗೆ ಈಗ ದಾರಿ ಕಾಣದಾಗಿದೆ. ಅವರೀಗಾಗಲೇ ಡಿಸೆಂಬರ್‌ 15ಕ್ಕೂ ಮೊದಲು ಎರಿಕ್ಸನ್‌‌ಗೆ 550 ಕೋಟಿ ರೂಪಾಯಿಗಳ ಬಾಕಿಯನ್ನು ಪಾವತಿ ಮಾಡಬೇಕಿತ್ತು. ಆದರೆ ನಿಗದಿತ ದಿನಾಂಕಕ್ಕೆ ಮೊದಲು ಪಾವತಿ ಮಾಡದೆ ಅವರೀಗ ನ್ಯಾಯಾಂಗ ನಿಂದನೆ ಪ್ರಕರಣವನ್ನು ಎದುರಿಸಬೇಕಾಗಿ ಬಂದಿದೆ.

ಇದೊಂದೇ ಅಲ್ಲ ಒಟ್ಟಾರೆ ಆರ್‌ಕಾಂ 46,000 ಕೋಟಿ ರೂಪಾಯಿಗಳ ಸಾಲದ ಹೊರೆಯನ್ನು ಹೊತ್ತುಕೊಂಡಿದ್ದು ತುರ್ತಾಗಿ ಎಚ್‌ಎಸ್‌ಬಿಸಿ ಡೈಸಿ ಇನ್ವಸ್ಟ್‌ಮೆಂಟ್ಸ್‌ ಸೇರಿದಂತೆ ರಿಲಯನ್ಸ್‌ ಇನ್‌ಫ್ರಾಟೆಲ್‌ನ ಶೇರುದಾರರಿಗೆ 232 ಕೋಟಿ ರೂಪಾಯಿಗಳನ್ನು ನೀಡಬೇಕಿದೆ.

ಹೀಗಿರುವಾಗ ಜಿಯೋ ಮತ್ತು ಕೆನಡಾದ ಬ್ರೂಕ್‌ಫೀಲ್ಡ್‌ ಜತೆ ಸೇರಿ ಒಂದಷ್ಟು ಆಸ್ತಿಗಳನ್ನು ಮಾರಾಟ ಮಾಡಿ 18,000 ಕೋಟಿ ರೂಪಾಯಿಗಳನ್ನು ಪಡೆದುಕೊಳ್ಳಬಹುದು ಎಂದು ಲೆಕ್ಕ ಹಾಕಿದ್ದರು ಅನಿಲ್‌ ಅಂಬಾನಿ. ಅವರು ಈಗಾಗಲೇ 5,000 ಕೋಟಿ ರೂಪಾಯಿಗಳಿಗೆ ಫೈಬರ್‌ ಆಸ್ತಿಗಳನ್ನು ಜಿಯೋಗೆ ಮಾರಾಟ ಮಾಡಿದ್ದಾರೆ. ಇದರ ಜತೆಗೆ ಟವರ್‌ ಮತ್ತು ಸ್ಪೆಕ್ಟ್ರಂ ಆಸ್ತಿಗಳನ್ನು ಜಿಯೋಗೆ ಮತ್ತು ಜಾಗಗಳನ್ನು ಬ್ರೂಕ್‌ಫೀಲ್ಡ್‌ಗೆ ಮಾರಾಟ ಮಾಡಲು ಮುಂದಾಗಿದ್ದರು. ಇದಕ್ಕೀಗ ಇಲಾಖೆ ಅಡ್ಡಗಾಲು ಹಾಕಿರುವುದು ಅಂಬಾನಿಯ ಸಂಕಷ್ಟಗಳನ್ನು ಹೆಚ್ಚಿಸಿದೆ.

ಇವತ್ತು ಅಣ್ಣ ಮುಖೇಶ್‌ ಅಂಬಾನಿಯ ರಿಲಯನ್ಸ್‌ ಇಂಡಸ್ಟ್ರೀಸ್‌ ಸುಮಾರು 98.7 ಬಿಲಯನ್‌ ಡಾಲರ್‌ ಬೆಲೆಬಾಳುತ್ತದೆ. ಆದರೆ ಅನಿಲ್‌ ಅಂಬಾನಿಯ ಎಲ್ಲಾ ಕಂಪನಿಗಳ ಆಸ್ತಿಗಳನ್ನು ಒಟ್ಟುಗೂಡಿಸಿದರೂ 4 ಬಿಲಿಯನ್‌ ಡಾಲರ್‌ ದಾಟುವುದಿಲ್ಲ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಹೀಗೊಂದು ಸಂಕಷ್ಟದ ಸುಳಿಯಲ್ಲಿರುವ, ನಷ್ಟದ ಹೊರೆಯನ್ನು ಹೊತ್ತುಕೊಂಡಿರುವ ಅನಿಲ್‌ ಅಂಬಾನಿ ಭಾರತ ಸೇನೆಗೆ ರಫೇಲ್‌ ಯುದ್ಧ ವಿಮಾನಗಳನ್ನು ಪೂರೈಕೆ ಮಾಡಲು ಡಸಾಲ್ಟ್‌ ಕಂಪನಿಯ ಪಾಲುದಾರಿಕೆ ಪಡೆದುಕೊಂಡಿದ್ದಾರೆ. ಇದೆಲ್ಲಾ ಅವರಿಂದ ಸಾಧ್ಯವಾ? ಅಥವಾ ಸಮಸ್ಯೆಯಿಂದ ಹೊರ ಬರಲು ಈ ಡೀಲ್‌ ಮಾಡಿಕೊಂಡಿದ್ದಾರಾ? ಕಾಲವೇ ಉತ್ತರ ಹೇಳಬೇಕಿದೆ.

ಪೂರಕ ಮಾಹಿತಿ: ಎಕಾನಾಮಿಕ್‌ ಟೈಮ್ಸ್‌.

Join Samachara Official. CLICK HERE