samachara
www.samachara.com
ಆರ್ಥಿಕತೆ ಮೇಲೆ ‘ಬಹುಸಂಖ್ಯಾತತ್ವ’ದ ಪರಿಣಾಮ; ಆರ್‌ಬಿಐ ಮಾಜಿ ಗವರ್ನರ್‌ ಬಿಚ್ಚಿಟ್ಟ ಒಳನೋಟ
COVER STORY

ಆರ್ಥಿಕತೆ ಮೇಲೆ ‘ಬಹುಸಂಖ್ಯಾತತ್ವ’ದ ಪರಿಣಾಮ; ಆರ್‌ಬಿಐ ಮಾಜಿ ಗವರ್ನರ್‌ ಬಿಚ್ಚಿಟ್ಟ ಒಳನೋಟ

“ಬಹುಸಂಖ್ಯಾತತ್ವ ಒಂದು ಕಡೆ ದೇಶದ ಒಂದು ವರ್ಗದ ಜನರನ್ನು ಒಗ್ಗೂಡಿಸುತ್ತಿರುವಂತೆ ಕಾಣುತ್ತದೆ. ಆದರೆ, ಇದು ದೇಶವನ್ನು ಸಂಘರ್ಷದ ದೊಡ್ಡ ಭಾಗಗಳನ್ನಾಗಿ ಒಡೆಯಲಿದೆ...

“2017ರಲ್ಲಿ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳು ಆರ್ಥಿಕತೆ ಅಭಿವೃದ್ಧಿಯ ಗ್ರಾಫ್‌ನಲ್ಲಿ ಮೇಲೇರುತ್ತಿದ್ದರೆ ಭಾರತದ ಆರ್ಥಿಕತೆಯ ಗ್ರಾಫ್‌ ಕೆಳಗಿಳಿಯುತ್ತಿತ್ತು. ಇದಕ್ಕೆ ಕಾರಣ ನೋಟು ರದ್ಧತಿ ಎಂಬ ಕೆಟ್ಟ ನಿರ್ಧಾರ” ಎಂದಿದ್ದಾರೆ ಆರ್ಥಿಕ ತಜ್ಞ ಹಾಗೂ ಆರ್‌ಬಿಐನ ಮಾಜಿ ಗವರ್ನರ್‌ ಆರ್‌. ರಘುರಾಮ್‌ ರಾಜನ್‌.

“ನೋಟು ರದ್ಧತಿ ಒಳ್ಳೆಯ ಆಲೋಚನೆಯಲ್ಲ ಎಂದು ನಾನು ಮೊದಲೇ ಹೇಳಿದ್ದೆ. ಆದರೂ ನೋಟು ರದ್ಧು ಮಾಡಲಾಯಿತು. ಇದರ ಕೆಟ್ಟ ಪರಿಣಾಮ ಭಾರತದ ಆರ್ಥಿಕತೆಯ ಮೇಲಾಗಿದೆ” ಎಂದು ರಾಜನ್‌ ‘ಎನ್‌ಡಿಟಿವಿ’ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಸುಮಾರು ಒಂದು ಗಂಟೆಯ ಕಾಲ ಎನ್‌ಡಿಟಿವಿಯ ಪ್ರಣಯ್‌ ರಾಯ್‌ ಜತೆಗೆ ಮಾತನಾಡಿರುವ ರಾಜನ್‌ ದೇಶದ ಆರ್ಥಿಕತೆ ಹಾಗೂ ನಿರುದ್ಯೋಗ ಸಮಸ್ಯೆಗಳಿಗೆ ಕಾರಣಗಳನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ.

“ಬಹುಸಂಖ್ಯಾತತ್ವ (Majoritarianism) ಸಮಾಜವನ್ನು ಒಡೆಯುತ್ತದೆ. ಇದು ಭಾರತದಲ್ಲಿ ಹಿಂದುತ್ವದ ರೂಪದಲ್ಲಿದೆ. ಇಂಥ ಬಹುಸಂಖ್ಯಾತತ್ವ ಎಲ್ಲರನ್ನೂ ಒಳಗೊಳ್ಳುವುದಿಲ್ಲ. ಅಲ್ಪಸಂಖ್ಯಾತರಾದ ಕ್ರೈಸ್ತರು, ಮುಸ್ಲಿಮರನ್ನು ಹೊರಗಿಟ್ಟೇ ನೋಡಲಾಗುತ್ತದೆ. ಇಂಥ ಬಹುಸಂಖ್ಯಾತತ್ವ ಒಂದು ಕಡೆ ದೇಶದ ಒಂದು ವರ್ಗದ ಜನರನ್ನು ಒಗ್ಗೂಡಿಸುತ್ತಿರುವಂತೆ ಕಾಣುತ್ತದೆ. ಆದರೆ, ಇದು ದೇಶವನ್ನು ಸಂಘರ್ಷದ ದೊಡ್ಡ ಭಾಗಗಳನ್ನಾಗಿ ಒಡೆಯಲಿದೆ. ಇದರ ಕೊನೆಯ ಘಟ್ಟ ನಾಗರಿಕ ಯುದ್ಧಕ್ಕೆ ಕಿಚ್ಚು ಹಚ್ಚಬಹುದು. ಇದಕ್ಕೆ ಯುಗೋಸ್ಲಾವಿಯಾದ ಉದಾಹರಣೆ ನಮ್ಮ ಮುಂದಿದೆ” ಎಂದು ರಾಜನ್‌ ಹೇಳಿದ್ದಾರೆ.

“ಆರ್‌ಬಿಐ, ಸಿಬಿಐ, ಸೆಬಿ, ಜಾರಿ ನಿರ್ದೇಶನಾಲಯಗಳ ಸ್ವಾಯತ್ತತೆಯಲ್ಲಿ ಸರಕಾರದ ಹಸ್ತಕ್ಷೇಪ ಸರಿಯಲ್ಲ. ಸರಕಾರದ ಸ್ವಾಯತ್ತ ಸಂಸ್ಥೆಗಳು ಸ್ವತಂತ್ರವಾಗಿ ಕೆಲಸ ಮಾಡಲು ಸರಕಾರ ಅವಕಾಶ ಕೊಡಬೇಕು. ಸರಕಾರದ ಹಸ್ತಕ್ಷೇಪದಿಂದ ಈ ಸಂಸ್ಥೆಗಳ ವಿಶ್ವಾಸಾರ್ಹತೆಗೆ ಧಕ್ಕೆ ಬಂದಿದೆ. ದೇಶದ ಆರ್ಥಿಕತೆಯ ಮೇಲೂ ಇದು ಪರಿಣಾಮ ಬೀರುತ್ತದೆ” ಎಂದಿದ್ದಾರೆ.

“ಜಾಗತೀಕರಣದ ಪ್ರಯೋಜನ ಎಲ್ಲರಿಗೂ ಸಿಕ್ಕಿದೆ ಎನ್ನಲು ಸಾಧ್ಯವಿಲ್ಲ. ಜಾಗತೀಕರಣದ ಪ್ರಯೋಜನವಾಗಿರುವುದು ಮೇಲ್ವರ್ಗಕ್ಕೇ ಹೊರತು ಮಧ್ಯಮ ವರ್ಗ ಅಥವಾ ಬಡವರಿಗಲ್ಲ. ಜಾಗತಿಕವಾಗಿ ಉದ್ಯೋಗದ ಬಗ್ಗೆ ಅಭದ್ರತೆ, ಭವಿಷ್ಯದ ಆತಂಕಗಳು ಈಗ ಹೆಚ್ಚಾಗಿವೆ. ಇದಕ್ಕೆ ಕಾರಣ ಜಾಗತೀಕರಣ ಹಾಗೂ ಉದಾರೀಕರಣ” ಎಂದಿದ್ದಾರೆ ರಾಜನ್‌.

“ವಯಸ್ಸಾದ ಹಸುಗಳಿಂದ ರೈತರಿಗೆ ಹೊರೆಯಾಗುವುದು ಸಹಜ. ಗೋಹತ್ಯೆ ನಿಷೇಧಿಸಬೇಕೆಂದರೆ ಗೋವುಗಳ ಆಹಾರ, ಆರೋಗ್ಯ ನೋಡಿಕೊಳ್ಳಲು ಅಗತ್ಯವಿರುವಷ್ಟು ಗೋಶಾಲೆಗಳನ್ನು ತೆರೆಯಬೇಕು. ಆದರೆ, ಅದಕ್ಕೆ ಹಣ ನೀಡುವವರು ಯಾರು?. ಭಾರತದಲ್ಲಿ ಸಾಲ ವ್ಯವಸ್ಥೆ ಸರಿ ಹೋಗಬೇಕೆಂದರೆ ಮರುಪಾವತಿಯ ಸಾಮರ್ಥ್ಯ ನೋಡಿ ಸಾಲ ಕೊಡಬೇಕು. ಸಾಲ ವಸೂಲಾತಿ ಪ್ರಕ್ರಿಯೆಯನ್ನು ನ್ಯಾಯಾಲಯದ ಇತ್ಯರ್ಥ್ಯದ ಹೊರಗೆ ತರಬೇಕು. ಬ್ಯಾಂಕರ್‌ಗಳು ಹೊಂದಾಣಿಗೆ ಸಿದ್ಧವಿರಬೇಕು. ದೊಡ್ಡ ಪ್ರಕರಣಗಳ ಮೇಲೆ ನ್ಯಾಷನಲ್‌ ಕಂಪನಿ ಲಾ ಟ್ರಿಬ್ಯುನಲ್‌ ನಿಗಾ ವಹಿಸಬೇಕು” ಎಂದು ರಾಜನ್‌ ಹೇಳಿದ್ದಾರೆ.

ವ್ಯವಹಾರದಲ್ಲಿ ನಷ್ಟಕ್ಕೆ ಒಳಗಾದವರಿಗೂ ಸಾಲ ತೆಗೆದುಕೊಂಡು ಮೋಸ ಮಾಡುವವರಿಗೂ ಸಾಕಷ್ಟು ವ್ಯತ್ಯಾಸವಿದೆ. ನಷ್ಟಕ್ಕೆ ಒಳಗಾದವರನ್ನೆಲ್ಲಾ ಜೈಲಿಗೆ ಹಾಕುತ್ತಾ ಹೋದರೆ ವ್ಯವಹಾರದ ರಿಸ್ಕ್‌ ತೆಗೆದುಕೊಳ್ಳಲು ಯಾರೂ ಮುಂದೆ ಬರುವುದಿಲ್ಲ.
- ರಘುರಾಮ್‌ ರಾಜನ್‌, ಆರ್‌ಬಿಐ ಮಾಜಿ ಗವರ್ನರ್‌

“ಆರ್‌ಬಿಐ ಮತ್ತು ಕೇಂದ್ರ ಸರಕಾರದ ನಡುವೆ ಹಣಕಾಸಿನ ವಿಚಾರವಾಗಿ ಸಂಘರ್ಷ ಇದ್ದೇ ಇರುತ್ತದೆ. ಹೆಚ್ಚಿನ ಪಾವತಿಗಾಗಿ ಕೇಂದ್ರ ಸರಕಾರ ಆರ್‌ಬಿಐ ಮೇಲೆ ಒತ್ತಡ ಹೇರುತ್ತಲೇ ಇರುತ್ತದೆ. ನಾನು ಆರ್‌ಬಿಐ ಗವರ್ನರ್‌ ಆಗಿದ್ದಾಗ ಗರಿಷ್ಠ ಲಾಭಾಂಶವನ್ನು ಕೇಂದ್ರ ಸರಕಾರಕ್ಕೆ ಪಾವತಿ ಮಾಡಲಾಗಿತ್ತು. ಆದರೆ, ಸರಕಾರ ಲಾಭಾಂಶಕ್ಕಿಂತಲೂ ಹೆಚ್ಚಿನ ಪಾವತಿಯನ್ನು ಬಯಸುತ್ತದೆ” ಎಂದಿದ್ದಾರೆ ರಾಜನ್‌.

“ಜಿಎಸ್‌ಟಿಯಿಂದ ದೀರ್ಘಾವಧಿಯ ಪ್ರಯೋಜನವಿದೆ. ಆದರೆ, ಅದರಿಂದ ತಕ್ಷಣಕ್ಕೆ ತೊಂದರೆಗಳಾದವು. ನೋಟು ರದ್ದತಿಯ ಬಗ್ಗೆ ನನ್ನನ್ನು ಕೇಳಲಾಗಿತ್ತು. ಆಗ ನಾನು ಅದೊಂದು ಕೆಟ್ಟ ಆಲೋಚನೆ ಎಂದು ಹೇಳಿದ್ದೆ. ನಿರುದ್ಯೋಗ ಕೂಡ ಈಗ ಭಾರತದ ದೊಡ್ಡ ಸಮಸ್ಯೆ. ಉದ್ಯೋಗ ಬೆಳವಣಿಗೆಯ ದರ ಭಾರತದಲ್ಲಿ ಶೇಕಡ 7ರಷ್ಟಿದೆ. ರೈಲ್ವೆ ಇಲಾಖೆಯ 90 ಸಾವಿರ ಹುದ್ದೆಗಳಿಗೆ 2.5 ಕೋಟಿ ಜನ ಅರ್ಜಿ ಹಾಕುತ್ತಾರೆ ಎಂದರೆ ಭಾರತದ ನಿರುದ್ಯೋಗದ ಸಮಸ್ಯೆಯ ಗಂಭೀರತೆ ಎಂಥದ್ದು ಎಂಬುದು ಗೊತ್ತಾಗುತ್ತದೆ” ಎಂದು ರಾಜನ್‌ ಆತಂಕ ವ್ಯಕ್ತಪಡಿಸಿದ್ದಾರೆ.

“ಕೃಷಿ ಸಂಕಷ್ಟ, ಇಂಧನ ವಲಯ ಹಾಗೂ ಬ್ಯಾಂಕಿಂಗ್‌ ಕ್ಷೇತ್ರ ಪ್ರಸ್ತುತ ಭಾರತದ ಮುಖ್ಯ ಆರ್ಥಿಕ ಸಮಸ್ಯೆಗಳು. ಕೃಷಿ ವಲಯದ ಸಂಕಷ್ಟಗಳನ್ನು ಪರಿಹರಿಸಿಕೊಳ್ಳದೆ ಆರ್ಥಿಕತೆ ಸುಸ್ಥಿರಗೊಳ್ಳಲು ಸಾಧ್ಯವಿಲ್ಲ. ಉದ್ಯೋಗದಲ್ಲಿ ಮಹಿಳೆಯರ ಪಾಲುದಾರಿಕೆ ಕಡಿಮೆಯಾಗಿರುವುದು ಕೂಡಾ ಗಂಭೀರ ಸಮಸ್ಯೆ. ಮಹಿಳೆಯರಿಗಾಗಿ ಅವಕಾಶಗಳನ್ನು ಸೃಷ್ಟಿಸುವಲ್ಲಿ ಭಾರತ ಹಿಂದುಳಿದಿದೆ” ಎಂದಿದ್ದಾರೆ.