samachara
www.samachara.com
ಮತ್ತೆ ಮೌನ ಮುರಿದ ‘ಚೇಂಜಿಂಗ್ ಇಂಡಿಯಾ’: ಡಾ. ಮನಮೋಹನ್ ಸಿಂಗ್ ಹೊಸ ಪುಸ್ತಕದಲ್ಲೇನಿದೆ?
COVER STORY

ಮತ್ತೆ ಮೌನ ಮುರಿದ ‘ಚೇಂಜಿಂಗ್ ಇಂಡಿಯಾ’: ಡಾ. ಮನಮೋಹನ್ ಸಿಂಗ್ ಹೊಸ ಪುಸ್ತಕದಲ್ಲೇನಿದೆ?

ಇದೀಗ ಮನಮೋಹನ್ ಸಿಂಗ್, ‘ಚೇಂಜಿಂಗ್ ಇಂಡಿಯಾ’ ಎಂಬ ಪುಸ್ತಕದ ಬಿಡುಗಡೆಯನ್ನು ನೆಪವಾಗಿಟ್ಟುಕೊಂಡು ತಮ್ಮ ಮಾತುಗಳನ್ನು ಇನ್ನಷ್ಟು ವಿಸ್ತರಿಸಿದ್ದಾರೆ.

''ನಾನು 'ಆಕಸ್ಮಿಕ ಪ್ರಧಾನಿ' ಮಾತ್ರ ಅಲ್ಲ 'ಆಕಸ್ಮಿಕ ಹಣಕಾಸು ಸಚಿವ' ಕೂಡ" ಎನ್ನುವ ಮೂಲಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತೊಮ್ಮೆ ದೇಶದ ರಾಜಕೀಯ ಚರ್ಚೆಯ ಕೇಂದ್ರಕ್ಕೆ ಬಂದಿದ್ದಾರೆ.

ಮಂಗಳವಾರ ದಿಲ್ಲಿಯಲ್ಲಿ ಡಾ. ಮನಮೋಹನ್ ಸಿಂಗ್ ತಮ್ಮ 'ಚೇಂಜಿಂಗ್ ಇಂಡಿಯಾ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಖಾಸಗಿ ಅನ್ನಿಸುವ ಹಲವು ಸ್ವಾರಸ್ಯಕರ ರಾಜಕೀಯ ಘಟನಾವಳಿಗಳನ್ನು ಹಂಚಿಕೊಂಡಿದ್ದಾರೆ. ಜತೆಗೆ, ಇದೇ ವೇದಿಕೆಯನ್ನು ಬಳಸಿಕೊಂಡು ಪ್ರತಿಪಕ್ಷ ಬಿಜೆಪಿಯ ಜನಪ್ರಿಯ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

ಬದಲಾವಣೆಗೆ ಆರ್ಥಿಕ ಆಯಾಮ:

ದೇಶದಲ್ಲಿ ಬದಲಾವಣೆಯ ಅಲೆಯನ್ನು ಎಬ್ಬಿಸಿ 2014ರಲ್ಲಿ ಅಧಿಕಾರಕ್ಕ ಬಂದವರು ನರೇಂದ್ರ ಮೋದಿ. ಅದಕ್ಕೂ ಮುಂಚೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ, ಅಂದು ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್‌ರ 'ಮೌನ'ವನ್ನು ಹಲವು ಬಾರಿ ತರಾಟೆಗೆ ತೆಗೆದುಕೊಂಡಿದ್ದರು. ಬಿಜೆಪಿಯ 'ಟ್ರಾಲ್‌ ಆರ್ಮಿ', ಮೌನ ಮೋಹನ್ ಸಿಂಗ್ ಎಂಬ ಹೊಸ ಪದಪುಂಜವೊಂದನ್ನು ಹುಟ್ಟುಹಾಕಿತ್ತು. ಒಂದು ವರ್ಗ ವೈಯಕ್ತಿಕ ಮಟ್ಟದಲ್ಲಿ ಮನಮೋಹನ್ ಸಿಂಗ್‌ ತೇಜೋವಧೆ ನಡೆಸಿತ್ತು. ಇದೆಲ್ಲಾ ನಡೆದು ರಾಜಕೀಯ ಪಲ್ಲಟಗೊಂಡು ಅಧಿಕಾರ ಕಳೆದುಕೊಂಡು ಪ್ರತಿಪಕ್ಷದ ಸ್ಥಾನಕ್ಕಾಗಿ ಕಾಂಗ್ರೆಸ್ ಒದ್ದಾಡುವ ಪರಿಸ್ಥಿತಿ ಬಂದಿತ್ತು. ಆದರೆ ಮನ ಮೋಹನ್ ಸಿಂಗ್ ಮೌನ ಮುರಿದಿರಲಿಲ್ಲ.

ಯಾವಾಗ ಮೋದಿ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಲ್ಲಿ ಅಮಾನ್ಯೀಕರಣ ಎಂಬ 'ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿ'ಯನ್ನು ದೇಶದ ಮೇಲೆ ಹೇರಿತೋ, ಮನಮೋಹನ್ ಸಿಂಗ್ ರಾಜ್ಯಸಭೆಯಲ್ಲಿ ಮಾತನಾಡಿದರು. ದೇಶದ ಆರ್ಥಿಕ ಪರಿಸ್ಥಿತಿ ಹೇಗೆ ಹದಗೆಡುತ್ತದೆ ಎಂದು ಅವರು ಕಟು ಶಬ್ಧಗಳಲ್ಲಿ ವಿವರಿಸಿದ್ದರು.

ಇದೀಗ ಮನಮೋಹನ್ ಸಿಂಗ್, 'ಚೇಂಜಿಂಗ್ ಇಂಡಿಯಾ' ಎಂಬ ಪುಸ್ತಕದ ಬಿಡುಗಡೆಯನ್ನು ನೆಪವಾಗಿಟ್ಟುಕೊಂಡು ತಮ್ಮ ಮಾತುಗಳನ್ನು ಇನ್ನಷ್ಟು ವಿಸ್ತರಿಸಿದ್ದಾರೆ.

ಚೇಂಜಿಂಗ್ ಇಂಡಿಯಾ' ಪುಸ್ತಕ ಒಟ್ಟು ಐದು ಸಂಪುಟಗಳನ್ನು ಒಳಗೊಂಡಿದೆ. ಭಾರತದ ರಫ್ತು ಪರಿಸ್ಥಿತಿ ಮತ್ತು ಭವಿಷ್ಯ, ವಾಣಿಜ್ಯ ಮತ್ತು ಅಭಿವೃದ್ಧಿ, ವಿದೇಶಿ ಆರ್ಥಿಕ ಪರಿಸ್ಥಿತಿ ಮತ್ತು ಸಮಾನತೆಯ ಆರ್ಥಿಕತೆಗಾಗಿ ಆಶಯ, ಮುಕ್ತ ಆರ್ಥಿಕ ನೀತಿ, ಆರ್ಥಿಕ ಸುಧಾರಣೆ- 1991 ಮತ್ತು ಅದರ ಹಿಂದಿನ ವರ್ಷಗಳು ಪುಸ್ತಕದ ಐದು ಸಂಪುಟಗಳಲ್ಲಿ ಚರ್ಚೆಗೆ ಒಳಗಾಗಿವೆ. ಸುಮಾರು 10 ಸಾವಿರ ಪುಟಗಳನ್ನು ಮೀರಿರುವ ಪುಸ್ತಕಕ್ಕಾಗಿ ಮನಮೋಹನ್ ಸಿಂಗ್ ಮೂರು ವರ್ಷಗಳನ್ನು ತೆಗೆದುಕೊಂಡಿದ್ದಾರೆ.

"ಇಂತಹದೊಂದು ಪುಸ್ತಕ ಸಾಧ್ಯವಾಗಿದ್ದು ನನ್ನ ಮೂರು ಹೆಣ್ಣು ಮಕ್ಕಳ ನಿರಂತರ ಶ್ರಮದಿಂದಾಗಿ. ನಾನು ಪ್ರಧಾನಿ ಆಗಿದ್ದಾಗ ಮಾತನಾಡುತ್ತಿರಲಿಲ್ಲ ಅಂತ ಜನ ಹೇಳುತ್ತಿದ್ದರು. ಈಗ ದೇಶದ ಆರ್ಥಿಕತೆ ಬದಲಾವಣೆಗೆ ಕಾರಣವಾದ ಹಲವು ಸನ್ನಿವೇಶಗಳನ್ನು ಇಲ್ಲಿ ವಿವರಿಸಿದ್ದೇನೆ. ನಾನು ಪ್ರಧಾನಿ ಆಗಿದ್ದಾಗ ಕನಿಷ್ಟ ಮಾಧ್ಯಮಗಳ ಜತೆ ಆದರೂ ಮಾತನಾಡುತ್ತಿದ್ದೆ. ಪ್ರತಿ ವಿದೇಶ ಪ್ರವಾಸದ ವೇಳೆ ವಿಮಾನದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದೆ,'' ಎಂದು ಮನಮೋಹನ್ ನೆನಪು ಮಾಡಿಕೊಂಡಿದ್ದಾರೆ.

ಬೆಂಗಳೂರಲ್ಲಿ ಇಂದಿರಾ ಭಾಷಣ:

ಪುಸ್ತಕ ಬಿಡುಗಡೆ ನೆಪದಲ್ಲಿ ಮನಮೋಹನ್ ಸಿಂಗ್ ದೇಶದ ಆರ್ಥಿಕತೆ ಬದಲಾವಣೆಯ ಹಲವು ಘಟನೆಗಳನ್ನು ವಿವರಿಸಿದರು. "ಅದು 1973ರ ವರ್ಷ. ದೇಶದಲ್ಲಿ ಹಣ ದುಬ್ಬರ ಹೆಚ್ಚಾಗಿತ್ತು. ಅದನ್ನು ಹತೋಟಿಗೆ ತರಲು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಪ್ರಯತ್ನಿಸುತ್ತಿದ್ದರು. ಆ ಸಮಯದಲ್ಲಿ ನನ್ನನ್ನು ಕೇಳಿದಾಗ ರಾಜಕಾರಣ ಮತ್ತು ಆರ್ಥಿಕತೆಗಳ ನಡುವೆ ಸಮನ್ವಯ ತರಲು ಸಲಹೆ ನೀಡಿದ್ದೆ. ಈ ಸಮಯದಲ್ಲಿ ಬೆಂಗಳೂರಿನ ಸಭೆಯೊಂದರಲ್ಲಿ ಮಾತನಾಡಿದ ಇಂದಿರಾಜಿ ಈ ದೇಶದ ಆರ್ಥಿಕತೆಯನ್ನು ಮೇಲೆತ್ತಲು ಸೂಕ್ತ ಬುದ್ಧಿವಂತ ವ್ಯಕ್ತಿಗಳು ಬೇಕು ಅಂದಿದ್ದರು,'' ಎಂದು ಡಾ. ಸಿಂಗ್ ಈ ಸಮಯದಲ್ಲಿ ನೆನಪು ಮಾಡಿಕೊಂಡರು.

ತಾವು ಹೇಗೆ ಆಕಸ್ಮಿಕ ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸುವಂತಾಗಿಯಿತು ಎಂಬುದನ್ನು ಅವರು ಈ ಸಮಯದಲ್ಲಿ ವಿವರಿಸಿದರು. "1991ರ ಮೇ ಅಥವಾ ಜೂನ್ ತಿಂಗಳು ಇರಬೇಕು. ಅಂದಿನ ಪ್ರಧಾನಿ ನರಸಿಂಹ ರಾವ್‌ಜಿ ಹಣಕಾಸು ಇಲಾಖೆಗೆ ಸಚಿವರನ್ನು ಹುಡುಕುತ್ತಿದ್ದರು. ನಾನು ಯುಜಿಸಿ ಅಧ್ಯಕ್ಷನಾಗಿದ್ದೆ. ಸ್ಕಾಟ್‌ಲ್ಯಾಂಡ್‌ಗೆ ಹೋದವನು ಬಂದು ಮನೆಯಲ್ಲಿ ಮಲಗಿದ್ದೆ. ಈ ಸಮಯದಲ್ಲಿ ನರಸಿಂಹ ರಾವ್‌ಜಿ ಸಲಹೆಗಾರರಾಗಿದ್ದ ಡಾ. ಅಲೆಗ್ಸಾಂಡರ್ ಕರೆ ಮಾಡಿದರು. ಪತ್ನಿ ನಿದ್ದೆ ಮಾಡುತ್ತಿದ್ದೇನೆ ಎಂದು ತಿಳಿಸಿದರೂ, ತುರ್ತು ಕೆಲಸ ಇದೆ ಎಂದು ಎಬ್ಬಿಸಿದರು. ನಾನು ಫೋನೆತ್ತಿಕೊಂಡ ನಂತರ, ಹೀಗೆ ಪ್ರಧಾನ ಮಂತ್ರಿ ಹಣಕಾಸು ಇಲಾಖೆಗೆ ನಿಮ್ಮನ್ನು ನೇಮಕ ಮಾಡಬೇಕು ಅಂತಿದ್ದಾರೆ ಅಂದರು. ಮಾರನೇ ದಿನ ನಾನು ಯುಜಿಸಿ ಕಚೇರಿಗೆ ಹೋಗಿದ್ದೆ. ಪ್ರಧಾನಿ ನರಸಿಂಹ ರಾವ್‌ಜಿ ಫೋನ್ ಮಾಡಿ, ‘ನಿನಗೆ ವಿಚಾರ ಗೊತ್ತಾಗಲಿಲ್ವಾ?. ಅಲೆಗ್ಸಾಂಡರ್ ಹೇಳಿಲ್ವಾ?’ ಎಂದರು. ನಾನು ಅಲೆಗ್ಸಾಂಡರ್ ಮಾತುಗಳನ್ನು ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ ಅಂದೆ. ತಕ್ಷಣ ಮನೆಗೆ ಹೋಗಿ ಬಟ್ಟೆ ಬದಲಾಯಿಸಿಕೊಂಡು ಬಾ. ಪ್ರಮಾಣ ವಚನ ಸ್ವೀಕರಿಸಬೇಕು ಎಂದರು. ಹೀಗೆ ನಾನು ಆಕಸ್ಮಿಕವಾಗಿ ಹಣಕಾಸು ಸಚಿವನಾದೆ,'' ಎಂದು ಸಿಂಗ್ ಹೇಳಿದರು.

ಹೀಗೆ, ಹಲವು ಘಟನೆಗಳನ್ನು ಇಟ್ಟುಕೊಂಡು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಡಾ. ಮನಮೋಹನ್ ಸಿಂಗ್ ಆಡಿದ ಮಾತುಗಳು ಈಗ ದೇಶದ ರಾಜಕೀಯ ಚರ್ಚೆಯನ್ನು ಆರ್ಥಿಕ ಆಯಾಮದ ನೆಲೆ ತಂದು ಬಿಟ್ಟಿವೆ.