4 ತಿಂಗಳಿಗಾಗಿ ಹೊಸ ಅವತಾರ; ಲಜ್ಜೆ ಬಿಟ್ಟು ಹೆಜ್ಜೆ ಹಾಕಲು ಬಂದ ‘ಬ್ರಿಗೇಡ್‌ ಬಾಯ್ಸ್‌ 2.0’!
COVER STORY

4 ತಿಂಗಳಿಗಾಗಿ ಹೊಸ ಅವತಾರ; ಲಜ್ಜೆ ಬಿಟ್ಟು ಹೆಜ್ಜೆ ಹಾಕಲು ಬಂದ ‘ಬ್ರಿಗೇಡ್‌ ಬಾಯ್ಸ್‌ 2.0’!

ಮೋದಿಯಿಂದಾಗಿ ಚೀನಾ ಭಾರತದ ಮುಂದೆ ಅಂಬೆಗಾಲಿಟ್ಟು ನಡೆಯುವ ಸ್ಥಿತಿ ಬಂದಿದೆ ಎಂಬ ಸೂಲಿಬೆಲೆ ಹಸಿ ಹಸಿ ಸುಳ್ಳುಗಳನ್ನು ಹೇಳುತ್ತಿರುವ ವೃತ್ತಿಪರ ಸಂಕಲನಗೊಂಡ ವಿಡಿಯೋಗಳು ಯೂಟ್ಯೂಬ್‌ ಮೊದಲಾದೆಡೆ ಹರಿದಾಡುತ್ತಿವೆ.

ಚುನಾವಣೆಗಳು ಬಂದಾಗ ಒಂದಷ್ಟು ಕಸುಬಿಗಳು ಹುಟ್ಟಿಕೊಳ್ಳುತ್ತಾರೆ. ಚುನಾವಣೆ ಕಳೆದಾಗ ನಾಪತ್ತೆಯಾಗುವ ಅವರು ಒಂದಷ್ಟು ಬೇರೆ ಕೆಲಸಗಳನ್ನು ಮಾಡುತ್ತಾರೆ. ಮತ್ತೆ ಇನ್ನೊಂದು ಚುನಾವಣೆ ಬಂದಾಗ ಅವರೆಲ್ಲಾ ಪುನಃ ಧುತ್ತೆಂದು ಪ್ರತ್ಯಕ್ಷರಾಗುತ್ತಾರೆ.

ಎಲ್ಲಾ ಪಕ್ಷಗಳ ಆಪ್ತ ಕೂಟದಲ್ಲೂ ಇಂಥಹ ವ್ಯಕ್ತಿಗಳಿದ್ದಾರೆ. ಈ ಸಾಲಿನಲ್ಲಿ ಕರ್ನಾಟಕದ ಪಾಲಿಗೆ ಕಾಣಿಸಿಕೊಳ್ಳುವ ಮೊದಲ ಹೆಸರು ಚಕ್ರವರ್ತಿ ಸೂಲಿಬೆಲೆ ಅಲಿಯಾಸ್‌ ಚಕ್ರವರ್ತಿ ಮಿಥುನ್‌ ಮತ್ತು ನರೇಶ್‌ ಶೆಣೈ; ಆರ್‌ಟಿಐ ಕಾರ್ಯಕರ್ತ ವಿನಾಯಕ್‌ ಬಾಳಿಗಾ ಕೊಲೆ ಪ್ರಕರಣದ ಆರೋಪಿ.

ಒಂದು ಕಾಲದಲ್ಲಿ ರಾಮಚಂದ್ರಾಪುರ ಮಠ ಹಮ್ಮಿಕೊಂಡಿದ್ದ ಗೋಯಾತ್ರೆಯಲ್ಲಿ ಒಂದು ಸಾವಿರ ರೂಪಾಯಿಗೆ ಭಾಷಣ ಮಾಡುತ್ತಿದ್ದವರು ಚಕ್ರವರ್ತಿ ಸೂಲಿಬೆಲೆ. ಮುಂದೆ ‘ಜಾಗೋ ಭಾರತ್‌’ ಎಂಬ ವೇಷ ತೊಟ್ಟಿದ್ದರು. ಅವತ್ತಿಗೆ ಬಾಬಾ ರಾಮ್‌ದೇವ್‌ ಪತಂಜಲಿ ಕಡೆಯಿಂದ ತಮ್ಮ ‘ಭಾರತ್ ಸ್ವಾಭಿಮಾನ್ ಟ್ರಸ್ಟಿ’ಗೆ ಸೂಲಿಬೆಲೆ ಹಣ ಪಡೆಯುತ್ತಿದ್ದರು ಎನ್ನುತ್ತಾರೆ ಇವರ ಒಂದು ಕಾಲದ ಒಡನಾಡಿಗಳು. ಇದೇ ರಾಮ್‌ದೇವ್‌ ಮೂಲಕವೇ ಸೂಲಿಬೆಲೆ ಪ್ರಧಾನಿ ಸಂಪರ್ಕ ಸಾಧಿಸಿದರು ಎನ್ನುವ ಮಾಹಿತಿಗಳಿವೆ.

‘ನಮೋ ಬ್ರಿಗೇಡ್‌’:

ಅಲ್ಲಿಂದ ಅವರ ವರಸೆಗಳು ಪೂರ್ತಿಯಾಗಿ ಬದಲಾದವು. ಕಾಲಕ್ಕೆ ತಕ್ಕಂತೆ ಒಂದೊಂದು ಅವತಾರಗಳನ್ನು ಎತ್ತಲು ಆರಂಭಿಸಿದರು. ಕರ್ನಾಟಕ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸೂಲಿಬೆಲೆ ತಂಡದಿಂದ ನಿರಂತರ ಅಂತರವನ್ನು ಕಾಯ್ದುಕೊಂಡೇ ಬಂದಿದೆ. ಹೀಗಿರುವಾಗಲೂ ಅವರು ತಮ್ಮ ಮೋದಿಯ ಸಂಪರ್ಕ ಬಳಸಿಕೊಂಡು 2014ರ ಲೋಕಸಭೆ ಚುನಾವಣೆಗೂ ಮುನ್ನ ನರೇಶ್‌ ಶೆಣೈ ಜತೆ ಸೇರಿ ‘ನಮೋ ಬ್ರಿಗೇಡ್‌’ ಹುಟ್ಟುಹಾಕಿದ್ದರು.

ಅವತ್ತಿಗೆ ‘ಭ್ರಷ್ಟಾಚಾರ ಮುಕ್ತ ಭಾರತ’ ಮೋದಿಯ ಘೋಷ ವಾಕ್ಯವಾಗಿತ್ತು. ಆದರೆ ಈ ಭ್ರಷ್ಟಾಚಾರದ ಮಾತುಗಳು ಯಡಿಯೂರಪ್ಪ, ಜನಾರ್ಧನ ರೆಡ್ಡಿಯಂಥಹ ವ್ಯಕ್ತಿಗಳನ್ನು ಹೊಂದಿದ್ದ ಕರ್ನಾಟಕ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಿತ್ತು. ಹಾಗಾಗಿ ಬಿಜೆಪಿಗಿಂತ ಹೆಚ್ಚಾಗಿ ನರೇಂದ್ರ ಮೋದಿಗಾಗಿ, ವ್ಯಕ್ತಿ ಕೇಂದ್ರಿತ ರಾಜಕಿಯೇತರ ಸಂಘಟನೆ ರೂಪದಲ್ಲಿ ಇದು ಜನ್ಮ ತಾಳಿತ್ತು. ಮೋದಿಯನ್ನು ಪ್ರಧಾನಿ ಹುದ್ದೆಗೆ ಕೂರಿಸುವ ಉದ್ದೇಶ ಇಟ್ಟುಕೊಂಡು ಪ್ರಚಾರಕ್ಕೆ ಇಳಿದವರು ತಮ್ಮ ಪ್ರಯತ್ನದಲ್ಲಿ ಸಫಲಗೊಂಡಿದ್ದರು. ‘ಬ್ರ್ಯಾಂಡ್‌ ಮೋದಿ’ ಪ್ರತಿಷ್ಠಾಪಿಸಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದ ಕರ್ನಾಟಕದಲ್ಲಿಯೂ ಬಿಜೆಪಿಯ 17 ಸಂಸದರು ಗೆಲ್ಲುವಂತೆ ಮಾಡುವಲ್ಲಿ ಶ್ರಮಿಸಿದ್ದರು.

ಆದರೆ ಚುನಾವಣೆ ಬಳಿಕ ಸಂಘಟನೆ ವಿಸರ್ಜಿಸುತ್ತೇವೆ ಎಂದವರು ನಮೋ ಹೆಸರಿಗೆ ಯುವ ಸೇರಿಸಿ ‘ಯುವ ಬ್ರಿಗೇಡ್‌’ ಕಟ್ಟಿದರು. ಇದರ ನಡುವೆಯೇ ಬಿಜೆಪಿ ಕಾರ್ಯಕರ್ತರಾಗಿದ್ದ, ಆರ್‌ಟಿಐ ಆಕ್ಟಿವಿಸ್ಟ್‌ ವಿನಾಯಕ್‌ ಬಾಳಿಗಾ ಮಂಗಳೂರಿನಲ್ಲಿ ಕೊಲೆಯಾದರು. ಈ ಪ್ರಕರಣದಲ್ಲಿ ನಮೋ ಬ್ರಿಗೇಡ್‌ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ನರೇಶ್‌ ಶೆಣೈ ಜೈಲು ಪಾಲಾದರು. ಆದರೂ ಇವರಿಬ್ಬರ ಸ್ನೇಹಕ್ಕೆ ಅದೇನು ಅಡ್ಡಿ ಬರಲಿಲ್ಲ. ಕ್ಯಾಮರಾ ಮುಂದೆ ತಮ್ಮ ‘ಲಜ್ಜೆ ಬಿಟ್ಟು’ ಸೂಲಿಬೆಲೆ ಜೈಲಿನ ಬಾಗಿಲಿಗೆ ತೆರಳಿ ಗೆಳೆಯ ಶೆಣೈರನ್ನು ಕರೆದುಕೊಂಡು ಬಂದರು. ಮುಂದೆ ಶೆಣೈ ಅವರೆಂದೂ ತೀರಾ ಬಹಿರಂಗವಾಗಿ ಕಾಣಿಸಿಕೊಳ್ಳಲಿಲ್ಲ. ಅವರ ಆಪ್ತ ವೇದವ್ಯಾಸ್‌ ಕಾಮತ್‌ ಮಂಗಳೂರು ದಕ್ಷಿಣದಲ್ಲಿ ಬಿಜೆಪಿಯಿಂದ ಚುನಾವಣೆಗೂ ನಿಂತಾಗಲೂ ಅನಿವಾರ್ಯವಾಗಿ ಅಂತರವನ್ನು ಶೆಣೈ ಕಾಯ್ದುಕೊಳ್ಳಬೇಕಾಯಿತು. ಆದರೆ ಸೂಲಿಬೆಲೆ ಹಾಗಲ್ಲ.

ಸೆಪ್ಟೆಂಬರ್‌ 19, 2016ರಲ್ಲಿ ಮಂಗಳೂರು ಜಿಲ್ಲಾ ಕಾರಾಗೃಹದಿಂದ ನರೇಶ್‌ ಶೆಣೈರನ್ನು ಕರೆದುಕೊಂಡು ಬರುತ್ತಿರುವ ಚಕ್ರವರ್ತಿ ಸೂಲಿಬೆಲೆ.
ಸೆಪ್ಟೆಂಬರ್‌ 19, 2016ರಲ್ಲಿ ಮಂಗಳೂರು ಜಿಲ್ಲಾ ಕಾರಾಗೃಹದಿಂದ ನರೇಶ್‌ ಶೆಣೈರನ್ನು ಕರೆದುಕೊಂಡು ಬರುತ್ತಿರುವ ಚಕ್ರವರ್ತಿ ಸೂಲಿಬೆಲೆ.
/ರಾಮಚಂದ್ರ ಭಟ್‌

ಚುನಾವಣೆಯ ಕೆಲಸ ಮುಗಿದ ನಂತರ ಖಾಲಿ ಕುಳಿತುಕೊಳ್ಳದೆ ‘ಅಕ್ಕ ನಿವೇದಿತಾ ಸಮ್ಮೇಳನ’ ಎಂದು ಶುರುವಿಟ್ಟುಕೊಂಡರು. ಡಿಮಾನಟೈಸೇಷನ್‌ ಘೋಷಣೆಯಾದಾಗ ‘ಅರ್ಥ ಕ್ರಾಂತಿ’ ಎಂದು ಭಾಷಣ ಆರಂಭಿಸಿದರು. ವಿವೇಕ ಮಾಲೆ, ರಾಕ್‌ ಡೇ, ಚಿಕಾಗೋ ಭಾಷಣಕ್ಕೆ 125 ವರ್ಷ, ಕಲ್ಯಾಣಿ ಸ್ವಚ್ಛತೆ ಎಂದೆಲ್ಲಾ ಆಗಾಗ ತಮ್ಮ ವರಸೆಗಳನ್ನು ಬದಲಾಯಿಸುತ್ತಾ ಬಂದವರು ಇದೀಗ 2019ರ ಚುನಾವಣೆಗೂ ಮೊದಲು ಜಾಗೃತರಾಗಿದ್ದಾರೆ. ಮತ್ತೆ ಮೋದಿ ಭಜನೆ ಆರಂಭಿಸಿದ್ದಾರೆ. ಈ ಬಾರಿ ಇದಕ್ಕೆ ‘ಟೀಮ್‌ ಮೋದಿ’ ಎಂದು ಹೆಸರಿಟ್ಟಿದ್ದಾರೆ.

‘ಟೀಮ್‌ ಮೋದಿ’:

“ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸುವುದಷ್ಟೇ ಇದರ ಉದ್ದೇಶ,” ಎನ್ನುತ್ತಾರೆ ಚಕ್ರವರ್ತಿ ಸೂಲಿಬೆಲೆ. ‘ಸಮಾಚಾರ’ದ ಜತೆ ಮಾತನಾಡಿದ ಅವರು ಇದು ಸಂಪೂರ್ಣ ರಾಜಕೀಯೇತರ ಸಂಘಟನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಸಂಸದರ ಪರವಾಗಿಯೂ ನಾವಿಲ್ಲ. ಕೇವಲ ಮೋದಿಯವರಿಗಾಗಿ ನಾವು ಪ್ರಚಾರ ಮಾಡಲಿದ್ದೇವೆ ಎಂದು ಅವರು ವಿವರಿಸಿದ್ದಾರೆ.

ಇದಕ್ಕೆ ಚಾಲನೆ ನೀಡುವ ಸಂದರ್ಭ ಡಿಸೆಂಬರ್‌ 16ರಂದು ಬೈಕ್‌ ರ್ಯಾಲಿಗೆ ಕರೆ ನೀಡಲಾಗಿತ್ತು. ಹಲವು ಕಾರಣಗಳಿಗೆ ಕೆಲವು ಕಡೆ ಈ ಬೈಕ್‌ ರ್ಯಾಲಿಗೆ ಅವಕಾಶ ನಿರಾಕರಿಸಿದಾಗ ಇದಕ್ಕೆ ಕೆಲವು ಕಡೆ ಅವಕಾಶ ನಿರಾಕರಿಸಿದಾಗ “ಲಜ್ಜೆ ಬಿಟ್ಟು ಹೆಜ್ಜೆ ಹಾಕಿ” ಎಂದು ಕರೆ ನೀಡಿದ್ದರು ಟೀಮ್‌ ಮೋದಿಯ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ ಮತ್ತು ವಿನಾಯಕ್‌ ಬಾಳಿಗಾ ಕೊಲೆ ಪ್ರಕರಣದ ಆರೋಪಿ ನರೇಶ್‌ ಶೆಣೈ. ಸದ್ಯಕ್ಕೆ ಸಂಘಟನೆಯಲ್ಲಿ ಯಾರಿಗೂ ಯಾವುದೇ ಜವಾಬ್ದಾರಿಗಳನ್ನು ನೀಡಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಬುದ್ಧಿ ಜೀವಿಗಳ ಜತೆಯೆಲ್ಲಾ ಮಾತುಕತೆ ಮಾಡಿ ಯಾರಿಗೆ ಯಾವ ಜವಾಬ್ದಾರಿ ನೀಡಬೇಕು ಎಂಬ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ಸೂಲಿಬೆಲೆ ತಿಳಿಸಿದ್ದಾರೆ. ನರೇಶ್‌ ಶೆಣೈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, “ಮೋದಿ ಬೇಕು ಎನ್ನುವ ಯಾರು ಬೇಕಾದರೂ ನಮ್ಮ ಜತೆ ಸೇರಿಕೊಳ್ಳಬಹುದು. ಯಾರನ್ನೂ ನಾವು ಬರುವುದು ಬೇಡ ಎನ್ನುವುದಿಲ್ಲ,” ಎಂದಿದ್ದಾರೆ. “ನರೇಶ್‌ ಶೆಣೈ ನಮ್ಮ ಜತೆ ಇರಲೂಬಹುದು” ಎಂದಿದ್ದಾರೆ.

ಆದರೆ ಅದಾಗಲೇ ಆರ್ಥಿಕ ಚಾಣಾಕ್ಷ, ನಮೋ ಬ್ರಿಗೇಡ್‌ ಕಾಲದಲ್ಲಿ ಕೀ ಪಂಚ್‌, ಟೋಪಿ, ಟೀ ಶರ್ಟ್‌ಗಳನ್ನು ಮಾರಾಟ ಮಾಡಿದ್ದ ನರೇಶ್‌ ಶೆಣೈ ತಾವಾಗಿಯೇ ಇದರ ಜತೆ ಗುರುತಿಸಿಕೊಂಡಿದ್ದಾರೆ. ಬೈಕ್‌ ಮೇಲೆ ಟೀಮ್‌ ಮೋದಿಯ ಸ್ಟಿಕರ್‌ಗಳು ಬಂದು ಬಿದ್ದಿವೆ. ಬೈಕ್‌ನ ಸ್ಟಿಕ್ಕರ್‌, ಮೊಬೈಲ್‌ ಕೇಸ್‌ ಮೊದಲಾದವುಗಳು ಬೇಕಾದರೆ ಸಂಪರ್ಕಿಸಿ ಎಂದು ಅವರು ಫೇಸ್‌ಬುಕ್‌ನಲ್ಲಿ ಕರೆ ನೀಡಿದ್ದಾರೆ.

ಒಂದೆಡೆ ಈ ಬೆಳವಣಿಗೆಗಳು ನಡೆಯುತ್ತಿದ್ದರೆ, ಬ್ರಿಗೇಟ್‌ ಬಾಯ್‌ಗಳ ಈ ಲಜ್ಜೆ ಬಿಡುವ ಮಾತುಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ, ವಿಡಂಬನೆಗಳೂ ಕೇಳಿ ಬಂದಿವೆ. ಇದರಾಚೆಗೂ ಇವರು ಮೋದಿ ಪರ ಪ್ರಚಾರಕ್ಕೆ ಲಜ್ಜೆ ಬಿಟ್ಟು ಇಳಿದಿದ್ದಾರೆ. ಸೂಲಿಬೆಲೆ ತಮ್ಮ ಎಂದಿನ ದಾಟಿಯಲ್ಲಿ ಜನರನ್ನು ಸೆಳೆಯಲು ಸುಳ್ಳಿನ ಸರಮಾಲೆಗಳ ಭಾಷಣಗಳನ್ನು ಆರಂಭಿಸಿದ್ದಾರೆ. ಮೋದಿಯಿಂದಾಗಿ ದೇಶದ ಮನೆ ಮನೆಗಳಲ್ಲೂ ಟಾಯ್ಲೆಟ್‌ ಬರುವಂತಾಗಿದೆ, ಚೀನಾ ಭಾರತದ ಮುಂದೆ ಅಂಬೆಗಾಲಿಟ್ಟು ನಡೆಯುವ ಸ್ಥಿತಿ ಬಂದಿದೆ ಎಂಬ ಹಸಿ ಹಸಿ ಸುಳ್ಳುಗಳನ್ನು ಹೇಳುತ್ತಿರುವ ವೃತ್ತಿಪರ ಸಂಕಲನಗೊಂಡ ವಿಡಿಯೋಗಳು ಯೂಟ್ಯೂಬ್‌ ಮೊದಲಾದೆಡೆ ಹರಿದಾಡುತ್ತಿವೆ. ಟೀಮ್‌ ಮೋದಿಯ ಪೋಸ್ಟರ್‌ಗಳಲ್ಲಂತೂ 2014ಕ್ಕಿಂತ ಇವತ್ತು ಪೆಟ್ರೋಲ್‌ ದರ ಕಡಿಮೆ ಇದೆ ಎಂಬ ಅರ್ಧ ಸತ್ಯಗಳನ್ನು ಹರಡಲಾಗುತ್ತಿದೆ.

ಇಂಥಹ ಸುಳ್ಳುಗಳನ್ನು ಹೇಳುತ್ತಲೇ, ‘ಕರ್ನಾಟಕದಿಂದ 20ಕ್ಕೂ ಹೆಚ್ಚು ಸಂಸದರನ್ನು ಕಳುಹಿಸಿಬೇಕಾಗಿದೆ, ದೇಶದಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳು ಗೆಲ್ಲಬೇಕಾಗಿದೆ’ ಎಂದಿದ್ದಾರೆ ಸೂಲಿಬೆಲೆ. ಈ ಸಂಘಟನೆ ಕೂಡ ತಾತ್ಕಾಲಿಕ ಎಂದಿರುವ ಅವರು ಇದು ಕೇವಲ 4 ತಿಂಗಳ ಕೆಲಸ ಎಂದಿದ್ದಾರೆ. ಅದಕ್ಕಾಗಿ ಅವರು ವೆಬ್‌ಸೈಟ್‌ನಲ್ಲೇ ಟೈಮರ್‌ ಅಳವಡಿಸಿ ಬಿಟ್ಟಿದ್ದಾರೆ. ಸದ್ಯ ಇವರ ಸಂಘಟನೆ ಇನ್ನು ಜೀವಂತವಿರುವುದು 116 ದಿನ ಮಾತ್ರ ಎಂದು ಈ ಜಾಲತಾಣ ತೋರಿಸುತ್ತಿದೆ.

ಅಲ್ಲಿಗೆ ಕಾಲ ಕಾಲಕ್ಕೆ ಬೇರೆ ಬೇರೆ ಅವತಾರ ತಾಳುವ ಸೂಲಿಬೆಲೆ ಪಾಲಿಗೆ ಇದು ಇನ್ನೊಂದು ಅವತಾರ ಅಷ್ಟೇ. ಅದಕ್ಕಾಗಿ ಎಂದಿನಂತೆ ಸುಳ್ಳು ಮಿಶ್ರಿತ ನವಿರಾದ ಭಾಷಣಗಳ ಜತೆ ಸೂಲಿಬೆಲೆ ಸಿದ್ಧವಾಗಿದ್ದಾರೆ. ಅವರೇ ಹೇಳಿದ ಪ್ರಕಾರ ನರೇಶ್‌ ಶೆಣೈ ಕೂಡ ಇದರಲ್ಲಿ ಜತೆಯಾಗಲುಬಹುದು. ಸದ್ಯಕ್ಕೆ ಎಲ್ಲವನ್ನೂ ನೋಡಲು ನೀವು ತಯಾರಾಗಿರಿ. ಯಾಕಂದ್ರೆ ಬ್ರಿಗೇಡ್‌ ಬಾಯ್ಸ್‌ ಮತ್ತೆ ಬಂದಿದ್ದಾರೆ, ಹೊಸ ಅವತಾರದಲ್ಲಿ.

Also read: 'ದಿ ಸ್ಟೋರಿ ಆಫ್ ಬ್ರಿಗೇಡ್ ಬ್ರದರ್ಸ್': ಅಂದು ಇಂದು ಎಂದೆಂದಿಗೂ...