samachara
www.samachara.com
ಸಿಖ್ ಗಲಭೆಗಾಗಿ ರಾಹುಲ್ ರಾಜೀನಾಮೆ; ಗೋಧ್ರೋತ್ತರ ಗಲಭೆಗೆ ಯಾರು ಹೊಣೆ?
COVER STORY

ಸಿಖ್ ಗಲಭೆಗಾಗಿ ರಾಹುಲ್ ರಾಜೀನಾಮೆ; ಗೋಧ್ರೋತ್ತರ ಗಲಭೆಗೆ ಯಾರು ಹೊಣೆ?

2002ರಲ್ಲಿ ಗುಜರಾತ್‌ನಲ್ಲಿ ನಡೆದ ಗೋಧ್ರಾ ಗಲಭೆ ವೇಳೆ ಅಲ್ಲಿನ ಮುಖ್ಯಮಂತ್ರಿಯಾಗಿದ್ದವರು ಹಾಲಿ ಪ್ರಧಾನಿ ನರೇಂದ್ರ ಮೋದಿ. ಸಿಖ್‌ ಗಲಭೆ ನಡೆದಿದ್ದು 1984ರಲ್ಲಿ. ಅವತ್ತಿಗೆ ರಾಹುಲ್‌ ಗಾಂಧಿ ವಯಸ್ಸು ಕೇವಲ 14 ವರ್ಷ; ಅಪ್ರಾಪ್ತ ವಯಸ್ಸು.

ಸಿಖ್‌ ವಿರೋಧಿ ಗಲಭೆಯಲ್ಲಿ ಕಾಂಗ್ರೆಸ್‌ ನಾಯಕ ಸಜ್ಜನ್‌ ಕುಮಾರ್‌ ಜೀವಾವಧಿ ಶಿಕ್ಷೆಗೆ ಗುರಿಯಾದ ಬೆನ್ನಿಗೆ ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿರುವ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ‘ಶಿಕ್ಷೆ ಆ ವ್ಯಕ್ತಿಗೆ ಮಾತ್ರ ಸಂಬಂಧಿಸಿದ್ದಲ್ಲ. ಅದು ಇಡೀ ಕಾಂಗ್ರೆಸ್‌ಗೆ ಅನ್ವಯವಾಗಲಿದೆ. ತೀರ್ಪಿನ ಹಿನ್ನೆಲೆಯಲ್ಲಿ ಆತ್ಮಾವಲೋಕನ ಮಾಡಿಕೊಂಡು ತಕ್ಷಣವೇ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ಒಂದು ಕಡೆಯಲ್ಲಿ ಸಿಖ್‌ ವಿರೋಧಿ ಗಲಭೆ ನಡೆದು ಬರೋಬ್ಬರಿ 34 ವರ್ಷಗಳ ನಂತರ ಒಬ್ಬೊಬ್ಬರೇ ಸರದಿಯಾಗಿ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಅದರಲ್ಲೂ ಗಲಭೆಯಲ್ಲಿ ಪಾಲ್ಗೊಂಡಿದ್ದರು ಎಂಬ ಆರೋಪಗಳನ್ನು ಎದುರಿಸಿದ್ದ ಕಮಲ್‌ನಾಥ್‌ ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನವೇ ಅವರ ಜತೆ ಜತೆಯಲ್ಲೇ ಆರೋಪಗಳನ್ನು ಎದುರಿಸಿದ್ದ ಕಾಂಗ್ರೆಸ್‌ ನಾಯಕ ಸಜ್ಜನ್‌ ಕುಮಾರ್‌ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಇಂದು ಅವರು ರಾಹುಲ್‌ ಗಾಂಧಿಯವರಿಗೆ ಪತ್ರ ಬರೆದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಸಿಖ್ ವಿರೋಧಿ ಗಲಭೆ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾದ ಕಾಂಗ್ರೆಸ್‌ ನಾಯಕ ಸಜ್ಜನ್‌ ಕುಮಾರ್‌.
ಸಿಖ್ ವಿರೋಧಿ ಗಲಭೆ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾದ ಕಾಂಗ್ರೆಸ್‌ ನಾಯಕ ಸಜ್ಜನ್‌ ಕುಮಾರ್‌.
/ಸೋಷಿಯಲ್‌ ಸೈನ್ಸ್‌ ಕಲೆಕ್ಟಿವ್‌

ಸಿಖ್‌ ಗಲಭೆಯಲ್ಲಿ ಕಾಂಗ್ರೆಸ್‌ ನಾಯಕರ ಹೆಸರುಗಳು ಕೇಳಿ ಬರುವುದು ಹೊಸದೇನೂ ಅಲ್ಲ. ಸ್ವತಃ ಕಾಂಗ್ರೆಸ್‌ ನಾಯಕ ಸಲ್ಮಾನ್‌ ಖುರ್ಷಿದ್‌ ಕಾಂಗ್ರೆಸ್‌ ಕೈಗೂ ಸಿಖ್‌ ಗಲಭೆಯ ನೆತ್ತರು ಅಂಟಿಕೊಂಡಿದೆ ಎಂದು ಬಹಿರಂಗವಾಗಿ ಹೇಳಿದ್ದರು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಸಂಬಿತ್‌ ಪಾತ್ರ ರಾಹುಲ್‌ ಗಾಂಧಿ ರಾಜೀನಾಮೆಗೆ ಆಗ್ರಹಿಸಿದ್ದಾರೆ. ರಾಜೀನಾಮೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೋ, ಎಂಪಿ ಸ್ಥಾನಕ್ಕೋ ಎಂಬುದನ್ನು ಸಾಲದ ಸುಳಿಯಲ್ಲಿರುವ ಒಎನ್‌ಜಿಸಿಯ ನಿರ್ದೇಶಕರು ಸ್ಪಷ್ಟಪಡಿಸಿಲ್ಲ.

ಅಂದಹಾಗೆ ಪಾತ್ರ ಪ್ರಸ್ತಾಪಿಸಿದ ಸಿಖ್‌ ಗಲಭೆ ನಡೆದಿದ್ದು 1984ರ ನವೆಂಬರ್‌ 1ರಿಂದ 4ರ ನಡುವೆ. ಅವತ್ತಿಗೆ ರಾಹುಲ್‌ ಗಾಂಧಿ ವಯಸ್ಸು ಕೇವಲ 14 ವರ್ಷ; ಅಪ್ರಾಪ್ತ ವಯಸ್ಸು. ಹೀಗಿದ್ದೂ ಇಂದು ರಾಹುಲ್‌ ರಾಜೀನಾಮೆಗೆ ಬಿಜೆಪಿ ವಕ್ತಾರರು ಆಗ್ರಹಿಸಿದ್ದಾರೆ.

ಹಾಗೆ ನೋಡಿದರೆ ಈ ದೇಶದಲ್ಲಿ ಸಿಖ್‌ ಗಲಭೆಯಷ್ಟೇ ಭೀಕರವಾಗಿ ನಡೆದ ಗಲಭೆ ಅಂದರೆ ಅದು ಗೋಧ್ರೋತ್ತರ ಗಲಭೆ. 2002ರಲ್ಲಿ ಗುಜರಾತ್‌ನಲ್ಲಿ ನಡೆದ ಈ ಗಲಭೆ ವೇಳೆ ಅಲ್ಲಿನ ಮುಖ್ಯಮಂತ್ರಿಯಾಗಿದ್ದವರು ಹಾಲಿ ಪ್ರಧಾನಿ ನರೇಂದ್ರ ಮೋದಿ. ಮತ್ತು ಈ ಗಲಭೆಗಳಲ್ಲಿ ಅವರ ಪಾತ್ರ ಇದೇ ಎಂಬುದನ್ನು ಹಲವು ತನಿಖಾ ವರದಿಗಳು, ತನಿಖೆಗಳು, ಆಯೋಗಗಳ ವರದಿಗಳು, ಸಾಕ್ಷಿಗಳ ಬಾಯಲ್ಲಿ ಮೇಲಿಂದ ಮೇಲೆ ಪ್ರಸ್ತಾಪವಾಗಿತ್ತು.

27 ಫೆಬ್ರವರಿಯಂದು ಕರ ಸೇವಕರಿದ್ದ ರೈಲೊಂದು ಕಿಡಿಕೇಡಿಗಳ ಬೆಂಕಿಗೆ ಆಹುತಿಯಾಗುವ ಮೂಲಕ ಗೋಧ್ರಾ ಗಲಭೆ ಆರಂಭವಾಗಿತ್ತು. ಇದರ ತನಿಖೆಗೆ ಆರಂಭದಲ್ಲಿ ಗುಜರಾತ್‌ ಸರಕಾರ ಅಲ್ಲಿನ ಹೈಕೋರ್ಟ್‌ ನ್ಯಾಯಮೂರ್ತಿ ಕೆ.ಜಿ. ಶಾ ಏಕಸದಸ್ಯ ಆಯೋಗವನ್ನು ನೇಮಿಸಿತ್ತು. ಶಾ ಜತೆ ಮೋದಿ ಹೊಂದಿದ್ದ ನಿಕಟ ಸಂಬಂಧದ ಹಿನ್ನೆಲೆ ತೀವ್ರ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ನಂತರ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜಿ.ಟಿ. ನಾನಾವತಿಯವರನ್ನು ಆಯೋಗದ ಅಧ್ಯಕ್ಷರನ್ನಾಗಿ ಮಾಡಲಾಯಿತು. ಈ ಆಯೋಗ ರೈಲಿಗೆ ಬೆಂಕಿ ಇಟ್ಟ ಕೃತ್ಯ ಪೂರ್ವ ನಿಯೋಜಿತ ಎಂಬುದನ್ನು ತಳ್ಳಿ ಹಾಕಿತ್ತು.

ಈ ಸಂದರ್ಭದಲ್ಲಿ ತನಿಖಾ ವರದಿಯಲ್ಲಿ ‘ತೆಹಲ್ಕಾ’, ಗುಜರಾತ್‌ ಸರಕಾರಿ ಅಭಿಯೋಜಕರ ಹೇಳಿಕೆಯ ವಿಡಿಯೋ ರೆಕಾರ್ಡಿಂಗ್‌ ಹೊರ ಹಾಕಿತ್ತು. ‘ಇದರಲ್ಲಿ ಶಾ ಅವರ ಮನುಷ್ಯ ಮತ್ತು ನಾನಾವತಿಗೆ ಲಂಚ ನೀಡಬಹುದಾಗಿದೆ’ ಎಂದು ಅವರು ಹೇಳಿದ್ದರು.

ಗಲಭೆ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ರಾಣಾ ರಾಜೇಂದ್ರನ್‌ ಮತ್ತು ನರೇಂದ್ರ ಮೋದಿಯವರ ಉದ್ರೇಕಕಾರಿ ಮಾತುಗಳು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಟ್ಟಿಸಿದವು ಮತ್ತು ಆ ಸಂದರ್ಭದಲ್ಲಿ ಅವರ ಸಂಪುಟದ ಸಹೋದ್ಯೋಗಿಗಳ ಮಾತುಗಳೂ ಮುಸ್ಲಿಮರ ಮೇಲಿನ ದಾಳಿಗೆ ಪ್ರಚೋದನೆ ನೀಡಿದವು ಎಂಬುದಾಗಿ ಹಲವು ಆಯೋಗಗಳು ತನಿಖೆಯ ನಂತರ ವರದಿ ನೀಡಿವೆ.

ಮುಂದೆ ಸುಪ್ರೀಂ ಕೋರ್ಟ್‌ ಈ ಘಟನೆಯ ತನಿಖೆಗೆ ಆರ್‌. ಕೆ. ರಾಘವನ್‌ ನೇತೃತ್ವದ ಎಸ್‌ಐಟಿಯನ್ನು ರಚಿಸಿತು. ಇದು ಸಲ್ಲಿಸಿದ ತನಿಖೆಯ ಸಾರಾಂಶಕ್ಕೆ ‘ಅಮಿಕಸ್‌ ಕ್ಯೂರಿ’ ರಾಜು ರಾಮಚಂದ್ರನ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ಫೆಬ್ರವರಿ 27, 2002ರಲ್ಲಿ ಸಭೆ ಕರೆದಿದ್ದ ಮೋದಿ ಹಿಂದೂಗಳಿಗೆ ದಾಳಿ ಮಾಡಲು ಅವಕಾಶ ನೀಡಬೇಕು ಎನ್ನುವಂತೆ ಹೇಳಿದ್ದರು ಎಂದು ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ಹೇಳಿಕೆ ನೀಡಿದ್ದರು. ಇದನ್ನು ಆಧಾರವಾಗಿಟ್ಟುಕೊಂಡು ಅವರನ್ನೇಕೆ ವಿಚಾರಣೆಗೆ ಒಳಪಡಿಬಾರದು ಎಂಬುದಾಗಿ ರಾಜು ರಾಮಚಂದ್ರನ್‌ ಪ್ರಶ್ನಿಸಿದ್ದರು. ಆದರೆ ಎಲ್ಲಾ ಪ್ರಯತ್ನಗಳು ಸೋತ ನಂತರ 2012ರಲ್ಲಿ ಸುಪ್ರೀಂ ಕೋರ್ಟ್‌ ನೇಮಿಸಿದ್ದ ವಿಶೇಷ ತನಿಖಾ ತಂಡ ನರೇಂದ್ರ ಮೋದಿಗೆ ಕ್ಲೀನ್‌ ಚಿಟ್‌ ನೀಡಿತ್ತು. ಮತ್ತು ರಾಜ್ಯ ಸರಕಾರ ಗಲಭೆ ತಡೆಯಲು ಸಾಕಷ್ಟು ಶ್ರಮಿಸಿಲ್ಲ ಎಂಬ ವಾದವನ್ನೂ ತಳ್ಳಿ ಹಾಕಿತ್ತು.

ಹೀಗಿರುವಾಗಲೇ ಮೋದಿ ಸಂಪುಟದಲ್ಲಿದ್ದ ಸಚಿವೆ, ಬಿಜೆಪಿ ನಾಯಕಿ ಮಾಯಾಬೆನ್‌ ಕೊಡ್ನಾನಿ ನರೋಡಾ ಪಾಟಿಯಾ ಹತ್ಯಾಕಾಂಡದಲ್ಲಿ 2012ರಲ್ಲಿ 20 ವರ್ಷ ಕಠಿಣ ಸೆರೆಮನೆವಾಸ ಶಿಕ್ಷೆಗೆ ಗುರಿಯಾದರು. ಭಾರತದ ನ್ಯಾಯಾಲಯಗಳೆಲ್ಲಾ ಮೋದಿ ಹೆಸರನ್ನು ಕೈ ಬಿಟ್ಟರೂ ಅಮೆರಿಕಾ ಸೇರಿದಂತೆ ಯುರೋಪಿಯನ್‌ ರಾಷ್ಟ್ರಗಳು ಅವರಿಗೆ ವೀಸಾಗಳನ್ನು ನಿರ್ಬಂಧಿಸಿದವು. ಹೆಚ್ಚಿನ ದೇಶಗಳು ಅವರು ಪ್ರಧಾನಿ ಆದ ಮೇಲೆಯೇ ಅವರಿಗೆ ವೀಸಾ ನೀಡಿ ಬಂದಿದ್ದವು.

ಹೀಗೆ ಗುರುತರ ಆರೋಪಗಳನ್ನು ಎದುರಿಸಿ ತಮ್ಮ ಸಹೋದ್ಯೋಗಿಯೇ ಶಿಕ್ಷೆಗೆ ಗುರಿಯಾದಾಗಲೂ ನರೇಂದ್ರ ಮೋದಿ ರಾಜೀನಾಮೆ ನೀಡಲಿಲ್ಲ. ಅಷ್ಟೇಕೆ ಕನಿಷ್ಠ ಕ್ಷಮೆಯನ್ನೂ ಕೋರಲಿಲ್ಲ. ಇಂಥಹದ್ದೊಂದು ಇತಿಹಾಸ ಇರುವ ಮನುಷ್ಯ ಇವತ್ತು ಭಾರತದ ಪ್ರಧಾನಿ ಹುದ್ದೆಯಲ್ಲಿದ್ದಾರೆ. ನಿಜಕ್ಕೂ ಸಂಬಿತ್‌ ಪಾತ್ರ ಅವರಿಗೆ ರಾಜೀನಾಮೆ ಬೇಕಿದ್ದರೆ, 1984ರಲ್ಲಿ ಅಪ್ರಾಪ್ತರಾಗಿದ್ದ ರಾಹುಲ್‌ ಗಾಂಧಿಯ ರಾಜೀನಾಮೆ ಕೇಳುವ ಮುನ್ನ ಅವರು ಒಮ್ಮೆ ತಮ್ಮ ನಾಯಕ ನರೇಂದ್ರ ಮೋದಿಯವರತ್ತಲೂ ನೋಡಬೇಕಿದೆ.