samachara
www.samachara.com
2019ರವರೆಗೂ ಉರಿಯಲಿದೆಯೇ ಅಡ್ಡಗೋಡೆ ಮೇಲಿನ ಬಿಎಸ್‌ಪಿ- ಎಸ್‌ಪಿ  ಬುಡ್ಡಿ ದೀಪ?
COVER STORY

2019ರವರೆಗೂ ಉರಿಯಲಿದೆಯೇ ಅಡ್ಡಗೋಡೆ ಮೇಲಿನ ಬಿಎಸ್‌ಪಿ- ಎಸ್‌ಪಿ ಬುಡ್ಡಿ ದೀಪ?

ಬಿಎಸ್‌ಪಿ-ಎಸ್‌ಪಿ ಪಕ್ಷಗಳು ಎಡ ಮೈತ್ರಿಕೂಟದಿಂದ ದೂರ ಉಳಿದರೆ ಕಾಂಗ್ರೆಸ್‌ಗೆ ಆಗುವ ನಷ್ಟವೇ ಬಿಜೆಪಿಗೆ ಲಾಭವಾಗಿ ಪರಿಣಮಿಸುವ ಸಾಧ್ಯತೆ ಇದೆ.

ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದ ದಿನವಾದ ಕಳೆದ ಮಂಗಳವಾರ (ಡಿ.11) ಮಧ್ಯಪ್ರದೇಶ ಹಾಗೂ ರಾಜಸ್ತಾನದ ಅಂತಿಮ ಫಲಿತಾಂಶ ಬರುವುದು ತಡವಾಯಿತು. ಅದರಲ್ಲೂ ಗಜಪ್ರಸವದಂತೆ ನಡೆದ ಮಧ್ಯಪ್ರದೇಶದ ಫಲಿತಾಂಶ ಅಂತಿಮಗೊಂಡಿದ್ದು ಮರುದಿನ ಬೆಳಿಗ್ಗೆ. ಮಂಗಳವಾರ ಸಂಜೆಯ ವೇಳೆಗೆ ಮಧ್ಯಪ್ರದೇಶದಲ್ಲಿ ಯಾರು ಅಧಿಕಾರ ಹಿಡಿಯುತ್ತಾರೆಂಬ ಕುತೂಹಲದ ಮುಂದೆ ಭಾರತದ ಮಟ್ಟಿಗೆ ಉಳಿದೆಲ್ಲಾ ಸುದ್ದಿಗಳೂ ಗೌಣವಾದವು.

ಮಂಗಳವಾರ ಮಧ್ಯಾಹ್ನದ ವೇಳೆಗೇ ತೆಲಂಗಾಣದಲ್ಲಿ ಟಿಆರ್‌ಎಸ್‌ ಹಾಗೂ ಮಿಝೋರಾಂನಲ್ಲಿ ಎಂಎನ್‌ಎಫ್‌ ಪಕ್ಷಗಳು ಬಹುಮತ ಪಡೆದಿದ್ದರಿಂದ ರಾಷ್ಟ್ರೀಯ ನಾಯಕರು ಈ ಎರಡು ಪಕ್ಷಗಳ ಮುಖಂಡರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದನೆ ಹೇಳುವುದು ನಡೆದಿತ್ತು. ಉಳಿದ ಮೂರು ರಾಜ್ಯಗಳ ಪೈಕಿ ಸಂಜೆ ವೇಳೆಗೆ ಎರಡು ರಾಜ್ಯಗಳಲ್ಲಂತೂ ಕಾಂಗ್ರೆಸ್‌ ಗೆಲುವು ಬಹುತೇಕ ಖಚಿತವಾಗಿತ್ತು. ಎಐಸಿಸಿ ಕಚೇರಿಯಲ್ಲಿ ರಾತ್ರಿ ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಎರಡು ರಾಜ್ಯಗಳಲ್ಲಿ ಗೆಲುವು ಘೋಷಿಸಿಕೊಂಡು, ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‌ ಪಕ್ಷವೇ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು.

ರಾತ್ರಿ ಇಡೀ ನಡೆದ ರಾಜಕೀಯ ಬೆಳವಣಿಗೆಗಳು ಬುಧವಾರ ಬೆಳಿಗ್ಗೆ ಹೊತ್ತಿಗೆ ಮೂರು ರಾಜ್ಯಗಳು ಕಾಂಗ್ರೆಸ್‌ ಕೈಗೆ ಎಂಬುದನ್ನು ಸ್ಪಷ್ಟಗೊಳಿಸಿದ್ದವು. ಎಡಪಕ್ಷಗಳ ಮೈತ್ರಿಕೂಟದ ಮುಖಂಡರು ಕಾಂಗ್ರೆಸ್‌ಗೆ ಶುಭಾಶಯ ಕೋರಿದ್ದರು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಬಹುಮತ ಪಡೆದ ಸುದ್ದಿ ಹೊರ ಬಿದ್ದ ನಂತರ ಮಾಧ್ಯಮಗಳ ಮುಂದೆ ಬಂದ ಬಿಎಸ್‌ಪಿ ನಾಯಕಿ ಮಾಯಾವತಿ ಕಾಂಗ್ರೆಸ್‌ಗೆ ಬಿಎಸ್‌ಪಿ ಬೆಂಬಲ ಇರುವುದನ್ನು ಘೋಷಿಸಿದ್ದರು. ಆದರೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಟ್ವೀಟ್‌ನ ಮೂಲಕವೇ ತಮ್ಮ ಪಕ್ಷದ ಬೆಂಬಲ ಸೂಚಿಸಿದ್ದರು.

ಪಂಚರಾಜ್ಯಗಳಲ್ಲಿನ ಸೋಲು ಬಿಜೆಪಿಯ ಮಟ್ಟಿಗೆ ಹೀನಾಯ ಎನ್ನಬಹುದಾದ ಸೋಲು. ಈ ಹಿಂದೆ ಅಧಿಕಾರದಲ್ಲಿದ್ದ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದು ನೋಡಿದರೆ ಕೇಂದ್ರದಲ್ಲಿರುವ ಮೋದಿ ಸರಕಾರದ ವಿರುದ್ಧವೂ ಇಂಥದ್ದೇ ಆಡಳಿತ ವಿರೋಧಿ ಅಲೆ ಇದೆಯೇ ಎಂಬ ಪ್ರಶ್ನೆ ಕಮಲ ಪಾಳಯದಲ್ಲೇ ಏಳುವಂತೆ ಮಾಡಿತ್ತು ಈ ಫಲಿತಾಂಶ. ಈ ಸೋಲಿನ ಕಹಿ ಕೇವಲ ಬಿಜೆಪಿಯನ್ನಷ್ಟೇ ಕಾಡಲಿಲ್ಲ, ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷಗಳಿಗೂ ಈ ಕಹಿಯ ಬಿಸಿ ತಟ್ಟಿತ್ತು. ಮೂರು ರಾಜ್ಯಗಳಲ್ಲಿ ಹೆಚ್ಚಿನ ಸ್ಥಾನಗಳ ನಿರೀಕ್ಷೆಯಲ್ಲಿದ್ದ ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷಗಳಿಗೆ ಈ ಫಲಿತಾಂಶ ನಿರಾಸೆ ತಂದಿತ್ತು.

ಚುನಾವಣೆ ಘೋಷಣೆಯಾದ ಸಂದರ್ಭದಿಂದಲೂ ಈ ಎರಡೂ ಪಕ್ಷಗಳು ಎರಡೂ ರಾಷ್ಟ್ರೀಯ ಪಕ್ಷಗಳಿಂದ ಅಂತರ ಕಾಯ್ದುಕೊಂಡೇ ಬರುತ್ತಿವೆ. ಬಿಎಸ್‌ಪಿಯಂತೂ ಈ ಚುನಾವಣೆಯಲ್ಲಿ ತಾನು ಕಾಂಗ್ರೆಸ್‌ ಜೊತೆಗೆ ಇರುವುದಿಲ್ಲ ಎಂಬುದನ್ನು ಮೊದಲೇ ಘೋಷಿಸಿಕೊಂಡಿತ್ತು. ಹೆಚ್ಚೂ ಕಡಿಮೆ ಇಂಥದ್ದೇ ಅಂತರವನ್ನು ಸಮಾಜವಾದಿ ಪಕ್ಷ ಕೂಡಾ ಕಾಯ್ದುಕೊಂಡಿತ್ತು. ಆದರೆ, ಎರಡೂ ಪಕ್ಷಗಳ ಈ ಅಂತರ ಕಾಂಗ್ರೆಸ್‌ ಗೆಲುವಿನ ಮೇಲೆ ಹೆಚ್ಚೇನೂ ಪರಿಣಾಮ ಬೀರಲಿಲ್ಲ.

ಪಂಚರಾಜ್ಯಗಳ ಫಲಿತಾಂಶಕ್ಕೂ ಹಿಂದಿನ ದಿನ ದೆಹಲಿಯಲ್ಲಿ ನಡೆದ ಮಹಾಮೈತ್ರಿಕೂಟದ ಸಭೆಗೂ ಈ ಎರಡೂ ಪಕ್ಷಗಳ ಮುಖಂಡರು ಗೈರಾಗಿದ್ದರು. ಆದರೆ, ಬಿಎಸ್‌ಪಿ ಹಾಗೂ ಸಮಾಜವಾದಿ ಪಕ್ಷಗಳ ಸಿದ್ಧಾಂತ ಹಾಗೂ ಎಡಪಕ್ಷಗಳ ಮೈತ್ರಿಕೂಟದ ಸಿದ್ಧಾಂತ ಒಂದೇ. ಅವರೂ ನಮ್ಮೊಂದಿಗಿದ್ದಾರೆ ಎಂದು ರಾಹುಲ್‌ ಗಾಂಧಿ ಸಮರ್ಥಿಸಿಕೊಂಡೇ ಬರುತ್ತಿದ್ದಾರೆ. ಆದರೆ, ಅದಕ್ಕೆ ಹೌದು ಎಂಬಂತೆ ತಲೆಯಾಡಿಸುವ ಕೆಲಸವನ್ನೂ ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷಗಳು ಮಾಡುತ್ತಿಲ್ಲ!

Also read: 21 ಪಕ್ಷಗಳ ‘ವಿಪಕ್ಷ ಮೈತ್ರಿಕೂಟ’ ಸಜ್ಜು; ಬಿಜೆಪಿ ಮಣಿಸುವ ತಂತ್ರಕ್ಕಾಗಿ ಮಹಾಮೈತ್ರಿ ಸಭೆ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿತ ಸ್ಥಾನಗಳು ಬರದಿದ್ದರೂ ಬಿಜೆಪಿ ಅಧಿಕಾರಕ್ಕೆ ಬರಬಾರದೆಂಬ ಉದ್ದೇಶದಿಂದ ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಕಾಂಗ್ರೆಸ್ ಬೆಂಬಲ ನೀಡಿತ್ತು. ಮುಖ್ಯಮಂತ್ರಿಯಾಗಿ ಎಚ್‌.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಎಡಪಕ್ಷಗಳ ಒಗ್ಗಟ್ಟು ಕಾಣಿಸಿಕೊಂಡಿತ್ತು. ರಾಷ್ಟ್ರದ ಎಲ್ಲಾ ಎಡಪಕ್ಷಗಳ ಮುಖಂಡರು ಈ ವೇದಿಕೆಯಲ್ಲಿ ಕೈ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದ್ದರು.

ಆದರೆ, ಪಂಚರಾಜ್ಯಗಳ ಚುನಾವಣೆಯ ಹೊತ್ತಿಗೆ ಬಿಎಸ್‌ಪಿ ತಾನು ಕಾಂಗ್ರೆಸ್‌ ಜತೆಗಿಲ್ಲ ಎಂಬುದನ್ನು ಬಹಿರಂಗವಾಗಿಯೇ ಹೇಳಿಕೊಂಡಿತ್ತು. ಸಮಾಜವಾದಿ ಪಕ್ಷವೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ನಡೆದುಕೊಂಡಿತ್ತು. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಬಿಟ್ಟ ಬಿಎಸ್‌ಪಿ ಮಧ್ಯಪ್ರದೇಶದ ಪ್ರಾದೇಶಿಕ ಪಕ್ಷಗಳ ಜತೆಗೆ ಸ್ವತಂತ್ರವಾಗಿ ಸ್ಪರ್ಧೆಗಿಳಿಯುವ ನಿರ್ಧಾರ ಪ್ರಕಟಿಸಿತ್ತು. ಮಹಾಮೈತ್ರಿ ಕೂಟದ ಮೊದಲ ಅಪಸ್ವರ ಒಳಮನೆಯಿಂದ ನಡುಮನೆಗೆ ಬಂದಿದ್ದೇ ಆವಾಗ.

ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಎಡ ಮೈತ್ರಿಕೂಟದ ಎಲ್ಲಾ ಮುಖಂಡರೂ ಒಟ್ಟೊಟ್ಟಿಗೆ ಬಸ್‌ ಏರಿದ್ದರೆ, ಬಿಎಸ್‌ಪಿ- ಸಮಾಜವಾದಿ ಪಕ್ಷದ ಮುಖಂಡರು ಮಾತ್ರ ಬಸ್‌ ಮಿಸ್‌ ಮಾಡಿಕೊಂಡಿದ್ದಾರೆ. ಅಖಿಲೇಶ್‌ ಯಾದವ್‌ ತಮ್ಮ ಪರವಾಗಿ ಸಮಾಜವಾದಿ ಪಕ್ಷದ ರಾಜ್ಯ ಮುಖಂಡರು ಈ ಸಮಾರಂಭಗಳಲ್ಲಿ ಭಾಗವಹಿಸುತ್ತಾರೆ ಎಂದು ಸಣ್ಣದೊಂದು ಟ್ವೀಟ್‌ ಮಾಡಿದರೆ, ಮಾಯಾವತಿ ಈ ಬಗ್ಗೆ ಏನೂ ಹೇಳಿಲ್ಲ.

ಬಿಎಸ್‌ಪಿ ಹಾಗೂ ಸಮಾಜವಾದಿ ಪಕ್ಷದ ಈ ನಡೆ ಸಹಜವಾಗಿಯೇ ರಾಷ್ಟ್ರದ ಗಮನ ಸೆಳೆದಿದೆ. ಮಹಾಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿಸಿಕೊಂಡಿದೆ ಎನ್ನಲು ಇದು ಬಿಜೆಪಿ ಬಾಯಿಗಂತೂ ಆಹಾರವಾಗಲಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಬಗ್ಗೆ ಹಿಂದೂಪರ ಸಂಘಟನೆಗಳ ಒಳಗಿರುವವರಿಗೇ ಅನುಮಾನಗಳಿವೆ. ಮೋದಿ ಅಲೆ, ರಾಮಮಂದಿರ ಜಪ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಪಂಚರಾಜ್ಯ ಚುನಾವಣೆಯ ಫಲಿತಾಂಶದ ಬಳಿಕ ಬಿಜೆಪಿ ಮುಖಂಡರೇ ಒಪ್ಪಿಕೊಂಡಿದ್ದಾರೆ. ಇಂಥ ಹೊತ್ತಿನಲ್ಲಿ ಎಡ ಮೈತ್ರಿಕೂಟವನ್ನು ಒಡೆಯುವುದು ಕೂಡಾ ಬಿಜೆಪಿ ‘ರಣತಂತ್ರ’ಗಳಲ್ಲಿ ಒಂದಾಗಿರಲಿದೆ ಎಂಬುದು ಗುಟ್ಟೇನೂ ಅಲ್ಲ.

2019ರ ಚುನಾವಣೆಯಲ್ಲಿ ಗೆಲ್ಲಲು ಹಿಂದುತ್ವ, ಮೋದಿ ಮುಖಮೌಲ್ಯದ ಜತೆಗೆ ಸಾಧ್ಯವಾದಷ್ಟು ಮಟ್ಟಿಗೆ ಹಿಂದುಳಿದ ವರ್ಗಗಳ ಓಲೈಕೆಯೂ ಬಿಜೆಪಿಗೆ ಅನಿವಾರ್ಯವಾಗಲಿದೆ. ಬಿಎಸ್‌ಪಿ ಅಥವಾ ಸಮಾಜವಾದಿ ಪಕ್ಷಗಳು ಬಿಜೆಪಿ ಜತೆಗೆ ಹೋಗುವುದು ಸದ್ಯದ ಮಟ್ಟಿಗೆ ಅನುಮಾನ. ಈ ಹಂತದಲ್ಲಿ ಈ ಎರಡೂ ಪಕ್ಷಗಳು ಕಾಂಗ್ರೆಸ್‌ನಿಂದ ದೂರ ಉಳಿದರೆ ಕಾಂಗ್ರೆಸ್‌ಗೆ ಆಗುವ ನಷ್ಟವೇ ಬಿಜೆಪಿಗೆ ಲಾಭವಾಗಿ ಪರಿಣಮಿಸುವ ಸಾಧ್ಯತೆ ಇದೆ. ಆದರೆ, 2019ರ ಚುನಾವಣೆವರೆಗೂ ಬಿಎಸ್‌ಪಿ- ಎಸ್‌ಪಿ ಹೀಗೇ ಅಡ್ಡಗೋಡೆಯ ಮೇಲೆ ದೀಪ ಇರಿಸಲಿವೆಯೋ, ಚುನಾವಣೆಗೂ ಮುನ್ನಾ ಸ್ವತಂತ್ರ ಸ್ಪರ್ಧೆ ಘೋಷಿಸಲಿವೆಯೋ ಅಥವಾ ಎಡ ಮೈತ್ರಿಕೂಟದೊಂದಿಗೆ ಒಂದಾಗಲಿವೆಯೇ ಕಾದುನೋಡಬೇಕು.