ರಫೇಲ್‌ ಡೀಲ್‌ ‘ವ್ಯಾಕರಣ ದೋಷ’; ಸುಳ್ಳು ಮತ್ತು ಸತ್ಯದ ನಡುವಿನ ಗೆರೆ ಎಷ್ಟು ತೆಳುವು?
COVER STORY

ರಫೇಲ್‌ ಡೀಲ್‌ ‘ವ್ಯಾಕರಣ ದೋಷ’; ಸುಳ್ಳು ಮತ್ತು ಸತ್ಯದ ನಡುವಿನ ಗೆರೆ ಎಷ್ಟು ತೆಳುವು?

ರಫೇಲ್‌ ಡೀಲ್‌ ವಿಚಾರದಲ್ಲಿ ಈಗಾಗಲೇ ಸುಪ್ರೀಂಕೋರ್ಟ್‌ ದಿಕ್ಕು ತಪ್ಪಿಸಿರುವ ಆರೋಪ ಹೊತ್ತಿರುವ ಬಿಜೆಪಿ, ಈಗ ‘ಜೇಟ್ಲಿ ಸ್ಪಷ್ಟನೆ’ಯ ಮೂಲಕ ದೇಶದ ಜನರ ದಿಕ್ಕು ತಪ್ಪಿಸಲು ಹೊರಟಿರುವಂತಿದೆ.

ಸುಪ್ರೀಂಕೋರ್ಟ್‌ನಲ್ಲೇನೋ ಸದ್ಯಕ್ಕೆ ರಫೇಲ್‌ ಡೀಲ್‌ ವಿಚಾರದಲ್ಲಿ ಬಿಜೆಪಿ ಸರಕಾರಕ್ಕೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ. ಆದರೆ, ಬಿಜೆಪಿ ಸರಕಾರ ರಫೇಲ್‌ ಬೆಲೆ ಕುರಿತು ಸಲ್ಲಿಸಿರುವ ಮುಚ್ಚಿದ ಲಕೋಟೆಯ ಮಾಹಿತಿಯ ಮೂಲಕ ಸುಪ್ರೀಂಕೋರ್ಟ್‌ನ ದಿಕ್ಕು ತಪ್ಪಿಸಿದೆ ಎಂದು ಕಾಂಗ್ರೆಸ್‌ ಗಂಭೀರ ಆರೋಪ ಮಾಡಿದೆ. ಇತ್ತ ರಫೇಲ್‌ ವಿಚಾರದಲ್ಲಿ ಕಾಂಗ್ರೆಸ್‌ ಹೇಳುತ್ತಿರುವುದೆಲ್ಲವೂ ಸುಳ್ಳು ಎನ್ನುತ್ತಿದೆ ಬಿಜೆಪಿ.

ರಫೇಲ್‌ ಒಪ್ಪಂದದ ದರ ನಿಗದಿ, ಸಿಎಜಿ ವರದಿ, ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವಿಚಾರಗಳಲ್ಲಿ ಕೇಂದ್ರ ಸರಕಾರ ಹಾಗೂ ಬಿಜೆಪಿ ಮುಖಂಡರು ಗೊಂದಲಗಳನ್ನು ಬಿತ್ತುತ್ತಾ ಬರುತ್ತಿದ್ದಾರೆ. ಸುಪ್ರೀಂಕೋರ್ಟ್‌ ತೀರ್ಪನ್ನು ಬಿಜೆಪಿ ಸರಕಾರಕ್ಕೆ ಸಿಕ್ಕ ಜಯ ಎಂದು ಬಿಂಬಿಸಿಕೊಳ್ಳುತ್ತಿರುವ ಕಮಲ ಪಕ್ಷದ ಮುಖಂಡರು ರಫೇಲ್‌ ಅಸ್ತ್ರಕ್ಕೆ ವಿರುದ್ಧವಾಗಿ ಬೋಫೋರ್ಸ್‌ ಪ್ರತ್ಯಸ್ತ್ರ ಬಳಸುತ್ತಿದ್ದಾರೆ.

“ನಮ್ಮ ಸರಕಾರದ ಒಪ್ಪಂದದಲ್ಲಿ ಮಧ್ಯವರ್ತಿಗಳಿಲ್ಲ. ಮಧ್ಯವರ್ತಿಗಳಿಲ್ಲದ ಒಪ್ಪಂದದ ಬಗ್ಗೆ ಕಾಂಗ್ರೆಸ್‌ ನಿರಾಸೆಗೊಂಡಿದೆ. ಬಿಜೆಪಿ ಸರಕಾರದ ರಕ್ಷಣಾ ಒಪ್ಪಂದಗಳಲ್ಲಿ ‘ಕ್ವಟ್ರೋಚ್ಚಿ ಮಾಮಾ’ ಅಥವಾ ‘ಕ್ರಿಶ್ಚಿಯನ್ ಮೈಕಲ್’ ಇಲ್ಲದಿರುವುದರಿಂದ ಕಾಂಗ್ರೆಸ್‌ಗೆ ಸುಪ್ರೀಂಕೋರ್ಟ್‌ ತೀರ್ಪು ಕೂಡಾ ಸುಳ್ಳಾಗಿ ಕಾಣುತ್ತಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಆರೋಪಗಳನ್ನು ಮೂದಲಿಸಿದ್ದಾರೆ.

“ರಫೇಲ್‌ ಒಪ್ಪಂದದಲ್ಲಿನ ಬೆಲೆಯ ವಿಚಾರವಾಗಿ ಸರಕಾರ ಸುಪ್ರೀಂಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿದೆ. ಸರಕಾರ ನೀಡಿರುವ ಸುಳ್ಳು ಮಾಹಿತಿಯ ಆಧಾರದ ಮೇಲೇ ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ಹೀಗಾಗಿ ಸುಪ್ರೀಂಕೋರ್ಟ್‌ ತೀರ್ಪನ್ನು ಮರುಪರಿಶೀಲಿಸಬೇಕು ಹಾಗೂ ಸುಳ್ಳು ಮಾಹಿತಿ ನೀಡಿ ನ್ಯಾಯಾಂಗ ನಿಂದನೆ ಮಾಡಿದ ಸರಕಾರದ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಕಾಂಗ್ರೆಸ್‌ ಮುಖಂಡ ಆನಂದ್‌ ಶರ್ಮಾ ಆಗ್ರಹಿಸಿದ್ದಾರೆ.

Also read: ರಫೇಲ್‌ಗೆ ‘ಕ್ಲಿಯರೆನ್ಸ್‌’: ಅನುಮಾನ ಹುಟ್ಟಿಸಿದ ಪ್ಯಾರಾ ನಂಬರ್ 25ರಲ್ಲಿ ಏನಿದೆ?

ರಫೇಲ್‌ ಒಪ್ಪಂದ ಕುರಿತಂತೆ ಸಿಎಜಿ ವರದಿಯನ್ನು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಪರಿಶೀಲನೆಗೆ ಒಳಪಡಿಸಿದೆ ಎಂದು ಸುಪ್ರೀಂಕೋರ್ಟ್‌ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ನಿಯಮಗಳ ಪ್ರಕಾರ ಸಿಎಜಿ ವರದಿಯನ್ನು ಮೊದಲು ಸಂಸತ್‌ನಲ್ಲಿ ಮಂಡಿಸಿ ನಂತರ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಪರಿಶೀಲನೆಗೆ ಕಳಿಸಬೇಕು. ಆದರೆ, ಇಂಥ ಯಾವುದೇ ವರದಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಗಮನಕ್ಕೆ ಬಂದಿಲ್ಲ ಎಂಬ ಅಂಶ ಈಗ ಬಹಿರಂಗವಾಗಿದೆ.

ಸಿಎಜಿ ಹಾಗೂ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಗಮನಕ್ಕೆ ಬರದ ವರದಿಯನ್ನು ಈಗಾಗಲೇ ಸಲ್ಲಿಸಲಾಗಿದೆ ಎಂದು ಸರಕಾರ ಸುಪ್ರೀಂಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿದೆ ಎಂಬುದು ಕಾಂಗ್ರೆಸ್‌ನ ಗಂಭೀರ ಆರೋಪ. “ಸಿಎಜಿ ಬಳಿಯಲ್ಲಿ ರಫೇಲ್‌ ಒಪ್ಪಂದದ ಯಾವುದೇ ವರದಿ ಇಲ್ಲ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಯಾವುದೇ ವರದಿಗಳನ್ನು ಪರಿಶೀಲಿಸಿಲ್ಲ” ಎಂದು ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಹೇಳಿದ್ದಾರೆ.

ಎರಡೂ ಪಕ್ಷಗಳ ಮುಖಂಡರ ಆರೋಪ- ಪ್ರತ್ಯಾರೋಪಗಳ ಬೆನ್ನಲ್ಲೇ ಬಿಜೆಪಿ ಮುಖಂಡ ಹಾಗೂ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಫೇಸ್‌ಬುಕ್‌ ಬ್ಲಾಗ್‌ನಲ್ಲಿ ಸ್ಪಷ್ಟನೆಯ ದೀರ್ಘ ಬರಹ ಪೋಸ್ಟ್‌ ಮಾಡಿದ್ದಾರೆ. “ರಫೇಲ್‌ ಬಗ್ಗೆ ಕಾಂಗ್ರೆಸ್‌ ಹೇಳುತ್ತಿರುವುದೆಲ್ಲವೂ ಸುಳ್ಳು, ಸುಳ್ಳು ಮತ್ತು ಸುಳ್ಳು” ಎಂದು ಜೇಟ್ಲಿ ಹೇಳಿದ್ದಾರೆ.

ರಫೇಲ್‌ ಒಪ್ಪಂದದ ಬೆಲೆ ಮಾಹಿತಿ ಈಗಾಗಲೇ ಸಿಎಜಿ ಜತೆಗೆ ಹಂಚಿಕೊಳ್ಳಲಾಗಿದೆ ಹಾಗೂ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಿಂದ ಪರಿಶೀಲನೆಯಾಗಿದೆ ಎಂದು ಸುಪ್ರೀಂಕೋರ್ಟ್‌ ತೀರ್ಪಿನಲ್ಲಿದೆ. ಆದರೆ, ರಫೇಲ್‌ ಒಪ್ಪಂದದ ಲೆಕ್ಕಪತ್ರ ಪರಿಶೀಲನೆ ಇನ್ನೂ ಸಿಎಜಿ ಮುಂದೆ ಬಾಕಿ ಇದೆ ಎಂದು ಜೇಟ್ಲಿ ಹೇಳಿದ್ದಾರೆ.

“ಸಿಎಜಿ ಪರಿಶೀಲನೆಯ ನಂತರ ವರದಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಂದೆ ಬರಲಿದೆ. ಸುಪ್ರೀಂಕೋರ್ಟ್‌ ತೀರ್ಪಿನಲ್ಲಿ ಉಲ್ಲೇಖವಾಗಿರುವ ಅಂಶದಲ್ಲಿ ಈ ವಿಚಾರವಾಗಿ ಸಣ್ಣ ತಾಂತ್ರಿಕ ತಿದ್ದುಪಡಿ ಅಗತ್ಯವಿದೆ. ಈ ಬಗ್ಗೆ ಯಾರು ಬೇಕಾದರೂ ಸುಪ್ರೀಂಕೋರ್ಟ್‌ಗೆ ತಿದ್ದುಪಡಿಗಾಗಿ ಮನವಿ ಸಲ್ಲಿಸಬಹುದು. ಆದರೆ, ಇದನ್ನೇ ದೊಡ್ಡದು ಮಾಡಿ ಸುಳ್ಳನ್ನು ಹಬ್ಬಲಾಗುತ್ತಿದೆ” ಎಂದು ಜೇಟ್ಲಿ ಆರೋಪಿಸಿದ್ದಾರೆ. ಈ ವಿಚಾರವಾಗಿ ಜಂಟಿ ಸಂಸದೀಯ ಸಮಿತಿಯ ತನಿಖೆ ಅಗತ್ಯವಿಲ್ಲ ಎಂದೂ ಜೇಟ್ಲಿ ಹೇಳಿದ್ದಾರೆ.

ತಾಂತ್ರಿಕ ತಿದ್ದುಪಡಿಗಳ ಸ್ಪಷ್ಟನೆ ನೀಡಿರುವ ಜೇಟ್ಲಿ, ಸರಕಾರದಿಂದ ತಪ್ಪು ಮಾಹಿತಿ ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾದ ಬಗ್ಗೆ ಏನನ್ನೂ ಹೇಳಿಲ್ಲ. ಮೊದಲು ಸುಳ್ಳುಗಳ ಮೇಲೆ ಸುಳ್ಳು ಹೇಳುತ್ತಿದ್ದ ಕಾಂಗ್ರೆಸ್‌ ಈಗ ನ್ಯಾಯಾಲಯದ ತೀರ್ಪಿನ ಪ್ರತಿಯ ತಾಂತ್ರಿಕ ದೋಷವೊಂದನ್ನು ಮುಂದಿಟ್ಟುಕೊಂಡು ಸುಳ್ಳು ಹೇಳಲು ಶುರು ಮಾಡಿದೆ ಎಂದಿದ್ದಾರೆ ಜೇಟ್ಲಿ.

ರಫೇಲ್‌ ಖರೀದಿಯ ಬೆಲೆಯ ಕುರಿತಂತೆ ಸಿಎಜಿ ವರದಿ ಹಾಗೂ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಪರಿಶೀಲನೆ ವಿಚಾರದಲ್ಲಿ ಸರಕಾರ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದೆ ಎಂಬುದನ್ನು ಜೇಟ್ಲಿ ನೇರವಾಗಿ ಒಪ್ಪಿಕೊಳ್ಳದಿದ್ದರೂ, ತೀರ್ಪಿನ ಪ್ರತಿಯಲ್ಲಿ ದೋಷವಿರುವುದನ್ನು ಒಪ್ಪಿಕೊಂಡಿದ್ದಾರೆ. ಸರಕಾರವೇ ನೀಡಿರುವ ಮಾಹಿತಿಯ ಆಧಾರದ ಮೇಲೆ ಸುಪ್ರೀಂಕೋರ್ಟ್ ತೀರ್ಪು ನೀಡಿರುವುದರಿಂದ ನೀಡಿರುವ ಮಾಹಿತಿಯೇ ತಪ್ಪಾಗಿದ್ದರೆ ತೀರ್ಪು ಕೂಡಾ ತಪ್ಪಾಗಿರಲಿದೆ ಎಂಬುದು ಕಾಂಗ್ರೆಸ್ ವಾದ.

ಸುಪ್ರೀಂಕೋರ್ಟ್‌ ಈ ಸುಳ್ಳು ಮಾಹಿತಿಯ ಆರೋಪವನ್ನು ಗಂಭೀರವಾಗಿ ತೆಗೆದುಕೊಂಡು ತೀರ್ಪನ್ನು ಮರುಪರಿಶೀಲನೆಗೆ ಪರಿಗಣಿಸಿದರೆ ಮುಚ್ಚಿದ ಲಕೋಟೆಯ ಸತ್ಯಾಸತ್ಯಗಳು ನ್ಯಾಯಾಲಯದ ಗಮನಕ್ಕಾದರೂ ಸ್ಪಷ್ಟವಾಗಿ ಬರಲಿವೆ. ಸದ್ಯಕ್ಕಂತೂ ಕೇಂದ್ರ ಸರಕಾರ ಮುಚ್ಚಿದ ಲಕೋಟೆಯ ಮಾಹಿತಿ ಹಾಗೂ ಸಿಎಜಿ, ಪಿಎಸಿಗಳ ಉಲ್ಲೇಖದೊಂದಿಗೆ ನ್ಯಾಯಾಲಯವನ್ನೇ ದಿಕ್ಕು ತಪ್ಪಿಸಿದಂತೆ ಕಾಣುತ್ತಿದೆ.

ಮೇಲ್ಮೋಟಕ್ಕೆ ಇದು ಸುಪ್ರೀಂಕೋರ್ಟ್‌ ತೀರ್ಪಿನ ಸಣ್ಣ ವ್ಯಾಕರಣ ದೋಷದ ಹಗ್ಗಜಗ್ಗಾಟದಂತೆ ಕಾಣುತ್ತಿದೆ. ಇದೇ ದೋಷ ಸರಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಮುಚ್ಚಿದ ಲಕೋಟೆಯ ಮಾಹಿತಿಯಲ್ಲಿದ್ದರೆ, ನ್ಯಾಯಾಲಯಕ್ಕೆ ‘ವಾಸ್ತವವಾಂಶ’ವನ್ನು ಮರೆಮಾಚಿದ ಗಂಭೀರ ಆರೋಪವನ್ನಂತೂ ಕೇಂದ್ರ ಸರಕಾರ ಹೊರಬೇಕಿದೆ.

Also read: ‘ಇನ್ ಡೀಟೆಲ್’: 21ನೇ ಶತಮಾನದ ಮೆಘಾ ಡೀಲ್; ಏನಿದು ರಫೇಲ್‌?