ಗೋತ್ರ ಆಯಿತು, ಈಗ ರಾಷ್ಟ್ರೀಯತೆ ಪ್ರಶ್ನೆ; ಸೋಲಿನ ಕಹಿಯಿಂದ ವೈಯಕ್ತಿಕ ಟೀಕೆಗಿಳಿದ ಬಿಜೆಪಿ
COVER STORY

ಗೋತ್ರ ಆಯಿತು, ಈಗ ರಾಷ್ಟ್ರೀಯತೆ ಪ್ರಶ್ನೆ; ಸೋಲಿನ ಕಹಿಯಿಂದ ವೈಯಕ್ತಿಕ ಟೀಕೆಗಿಳಿದ ಬಿಜೆಪಿ

‘ವಿದೇಶಿ ಸ್ತ್ರೀ’ ಎಂದು ಸೋನಿಯಾ ಗಾಂಧಿಯನ್ನು ಜರಿಯುವ ಜತೆಗೆ, ರಾಹುಲ್‌ ಗಾಂಧಿಯ ರಾಷ್ಟ್ರಭಕ್ತಿಯನ್ನೂ ಪ್ರಶ್ನಿಸುವ ಹೊಸ ರಾಜಕೀಯ ತಂತ್ರಕ್ಕೆ ಬಿಜೆಪಿ ಮುಂದಾಗಿದೆ.

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಸೋಲು ಬಿಜೆಪಿಯನ್ನು ಇನ್ನಿಲ್ಲದ ತಳಮಳಕ್ಕೆ ಈಡುಮಾಡಿದೆ. ಸೋಲಿನ ಕಹಿಯಿಂದ ಕಂಗೆಟ್ಟಿರುವ ಬಿಜೆಪಿ ಮುಖಂಡರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯ ಪೂರ್ವಾಪರ ಕೆದಕುತ್ತಿದ್ದಾರೆ. ಚುನಾವಣೆಯ ಸೋಲಿನ ಗಾಯಕ್ಕೆ ರಾಹುಲ್‌ ಗಾಂಧಿ ವಿರುದ್ಧ ವೈಯಕ್ತಿಕ ಟೀಕೆಯ ಮುಲಾಮು ಹಚ್ಚಿಕೊಳ್ಳಲು ಬಿಜೆಪಿ ಮುಂದಾಗಿದೆ.

ಇಷ್ಟು ದಿನ ರಾಹುಲ್‌ ಗಾಂಧಿ ಗೋತ್ರ ಹಿಡಿದು ಮೂದಲಿಸುತ್ತಿದ್ದ ಬಿಜೆಪಿ ವಿಧಾನಸಭಾ ಚುನಾವಣೆಗಳ ಸೋಲಿನ ನಂತರ ರಾಹುಲ್‌ ರಾಷ್ಟ್ರೀಯತೆ ಹಾಗೂ ದೇಶಭಕ್ತಿಯ ವಿಚಾರಗಳನ್ನು ಮುಂದಿಟ್ಟುಕೊಂಡು ವೈಯಕ್ತಿಕ ದಾಳಿಗಿಳಿದಿದೆ. ರಾಹುಲ್‌ ಗಾಂಧಿ ತಾಯಿ ಸೋನಿಯಾ ಗಾಂಧಿ ಅವರ ಮೂಲವನ್ನು ಹಿಡಿದು ರಾಹುಲ್‌ ಗಾಂಧಿ ರಾಷ್ಟ್ರಭಕ್ತಿಯನ್ನು ಅಳೆಯಲು ಹೊರಟಿದೆ ಬಿಜೆಪಿ.

“ವಿದೇಶಿ ಸ್ತ್ರೀಗೆ ಜನಿಸಿದ ಮಗ ದೇಶಭಕ್ತನಾಗಲು ಅಥವಾ ದೇಶದ ಹಿತ ಕಾಯಲು ಸಾಧ್ಯವಿಲ್ಲ” ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಕೈಲಾಸ್‌ ವಿಜಯವರ್ಗೀಯ ಶನಿವಾರ ಟ್ವೀಟ್‌ ಮಾಡಿದ್ದರು. ಕೈಲಾಸ್ ಟೀಕೆಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಟ್ವೀಟ್‌ ಅನ್ನು ಡಿಲೀಟ್‌ ಮಾಡಲಾಗಿದೆ. ಆದರೆ, ಕೈಲಾಸ್‌ ಮಾಡಿದ್ದ ಟ್ವೀಟ್‌ನ ಸ್ಕ್ರೀನ್‌ಶಾಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕೈಲಾಸ್ ವಿಜಯವರ್ಗೀಯ ಟ್ವೀಟ್‌ಗೆ ತಿರುಗೇಟು ನೀಡಿರುವ ಕಾಂಗ್ರೆಸ್‌ ವಕ್ತಾರೆ ಪ್ರಿಯಾಂಕಾ ಚತುರ್ವೇದಿ, “ಮಧ್ಯಪ್ರದೇಶದ ಸೋಲಿನಿಂದಾದ ಪೆಟ್ಟಿಗೆ ಇವರಿಗೆ ಮಾನಸಿಕ ಚಿಕಿತ್ಸೆ ಅಗತ್ಯವಿದೆ. ಭಗವಂತ ಇವರಿಗೆ ಮಾನಸಿಕ ಅಸ್ವಸ್ಥತೆಗೆ ಸನ್ಮತಿ ನೀಡಲಿ” ಎಂದು ಟ್ವೀಟ್ ಮಾಡಿದ್ದಾರೆ.

 ಗೋತ್ರ ಆಯಿತು, ಈಗ ರಾಷ್ಟ್ರೀಯತೆ ಪ್ರಶ್ನೆ; ಸೋಲಿನ ಕಹಿಯಿಂದ ವೈಯಕ್ತಿಕ ಟೀಕೆಗಿಳಿದ ಬಿಜೆಪಿ

ಗುಜರಾತ್‌ ವಿಧಾನಸಭಾ ಚುನಾವಣೆಯ ಹೊತ್ತಿಗೇ ರಾಹುಲ್‌ ಗಾಂಧಿ ಸಾಫ್ಟ್‌ ಹಿಂದುತ್ವದ ಪ್ರಯೋಗಕ್ಕೆ ಮುಂದಾಗಿದ್ದರು. ಆರಂಭದಲ್ಲಿ ರಾಹುಲ್‌ ಗಾಂಧಿಯ ಈ ಚುನಾವಣಾ ತಂತ್ರವನ್ನು ಲಘುವಾಗಿ ತೆಗೆದುಕೊಂಡಿದ್ದ ಬಿಜೆಪಿ ಮುಂದೆ ಈ ತಂತ್ರದ ಗಂಭೀರತೆ ಅರಿವು ರಾಹುಲ್‌ ವಿರುದ್ಧದ ದಾಳಿಗೆ ಮುಂದಾಯಿತು.

ರಾಹುಲ್‌ ಗಾಂಧಿಯ ಸಾಫ್ಟ್‌ ಹಿಂದುತ್ವದ ತಂತ್ರಕ್ಕೆ ಪ್ರತಿತಂತ್ರ ರೂಪಿಸಿದ ಬಿಜೆಪಿ ರಾಹುಲ್‌ ಗಾಂಧಿ ಯಾವ ಬಗೆಯ ಹಿಂದು, ರಾಹುಲ್‌ ಯಾವ ಗೋತ್ರದ ಬ್ರಾಹ್ಮಣ ಎಂಬ ಪ್ರಶ್ನೆಗಳನ್ನು ಎಬ್ಬಿಸಿತ್ತು. ಆದರೆ, ರಾಹುಲ್‌ ಹಾಗೂ ಕಾಂಗ್ರೆಸ್‌ ಪ್ರಭಾವಕ್ಕೆ ಬಿಜೆಪಿಯ ಈ ಪ್ರತಿತಂತ್ರಗಳು ಫಲಿಸಿದಂತೆ ಕಾಣುತ್ತಿಲ್ಲ. ಇದಕ್ಕೆ ಇತ್ತೀಚಿನ ಉದಾಹರಣೆ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸಿಕ್ಕ ಗೆಲುವು.

ಇಷ್ಟೂ ದಿನ ರಾಹುಲ್‌ ಗಾಂಧಿಯ ಹಿಂದುತ್ವ, ಗೋತ್ರದ ವಿಚಾರದಲ್ಲಿ ಮೂದಲಿಕೆ ನಡೆಸುತ್ತಿದ್ದ ಬಿಜೆಪಿಗೆ ಪಂಚ ರಾಜ್ಯಗಳ ಚುನಾವಣೆಯ ಸೋಲು ತೀವ್ರ ಅಸಮಾಧಾನವನ್ನು ತಂದಿದೆ. ಈ ಸೋಲಿನ ಅಸಮಾಧಾನಕ್ಕೆ ತಾತ್ಕಾಲಿಕ ನೆಮ್ಮದಿ ಕೊಡುವಂತೆ ರಫೇಲ್‌ ಒಪ್ಪಂದದ ವಿಚಾರದಲ್ಲಿ ಸುಪ್ರೀಂಕೋರ್ಟ್‌ ಮೋದಿ ನೇತೃತ್ವದ ಸರಕಾರಕ್ಕೆ ಕ್ಲೀನ್‌ ಚಿಟ್‌ ನೀಡಿತ್ತು.

ಸುಪ್ರೀಂಕೋರ್ಟ್‌ ತೀರ್ಪಿನಿಂದ ಸುಧಾರಿಸಿಕೊಂಡ ಬಿಜೆಪಿ ನೇರವಾಗಿ ರಾಹುಲ್‌ ಗಾಂಧಿಯ ವಿರುದ್ಧ ಮುಗಿಬಿದ್ದಿತ್ತು. ರಾಹುಲ್‌ ಗಾಂಧಿ ಸುಳ್ಳು ಆರೋಪಗಳನ್ನು ಮಾಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಕಳೆದಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿತ್ತು. ಅದರ ಬೆನ್ನಲ್ಲೇ ಬಿಜೆಪಿ ಈಗ 'ವಿದೇಶಿ ಸ್ತ್ರೀ' ಎಂದು ಸೋನಿಯಾ ಗಾಂಧಿಯನ್ನು ಜರಿಯುವ ಜತೆಗೆ, ರಾಹುಲ್‌ ಗಾಂಧಿಯ ರಾಷ್ಟ್ರಭಕ್ತಿಯನ್ನೂ ಪ್ರಶ್ನಿಸುವ ಹೊಸ ರಾಜಕೀಯ ತಂತ್ರಕ್ಕೆ ಮುಂದಾಗಿದೆ. ಬಿಜೆಪಿಯ ಈ ಹೊಸ ಅಸ್ತ್ರ 2019ರ ಲೋಕಸಭಾ ಚುನಾವಣೆಯ ವೇಳೆಗೆ ಕಾಂಗ್ರೆಸ್‌ ಹಾಗೂ ರಾಹುಲ್‌ ಗೆಲುವಿನ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಲಿದೆ ಎಂಬುದನ್ನು ಕಾದು ನೋಡಬೇಕು.