samachara
www.samachara.com
ರಫೇಲ್‌ಗೆ ‘ಕ್ಲಿಯರೆನ್ಸ್‌’:  ಅನುಮಾನ ಹುಟ್ಟಿಸಿದ ಪ್ಯಾರಾ ನಂಬರ್ 25ರಲ್ಲಿ ಏನಿದೆ?
COVER STORY

ರಫೇಲ್‌ಗೆ ‘ಕ್ಲಿಯರೆನ್ಸ್‌’: ಅನುಮಾನ ಹುಟ್ಟಿಸಿದ ಪ್ಯಾರಾ ನಂಬರ್ 25ರಲ್ಲಿ ಏನಿದೆ?

ನ್ಯಾಯಾಲಯ ಯಾವ ಸಿಎಜಿ ವರದಿ ಬಗ್ಗೆ ಹೇಳುತ್ತಿದೆ ಎಂಬುದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಅಧಿಕಾರಿಗಳು ಹೇಳುವ ಪ್ರಕಾರ ಇಲ್ಲಿಯವರೆಗೆ ರಫೇಲ್‌ ಡೀಲ್‌ ಬಗ್ಗೆ ಯಾವುದೇ ಸಿಎಜಿ ವರದಿ ಸಲ್ಲಿಕೆಯಾಗಿಲ್ಲ.

ರಫೇಲ್‌ ಡೀಲ್‌ನ ಪ್ರಮುಖ ಅಂಶಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿ, ಸಲ್ಲಿಸಿದ್ದ ಅರ್ಜಿಗಳನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ ವಜಾಗೊಳಿಸುವುದರೊಂದಿಗೆ ‘ನಮಗೆ ಕ್ಲೀನ್ ಚಿಟ್‌ ‘ಸಿಕ್ಕಿದೆ ಸರಕಾರ ಮತ್ತು ಬಿಜೆಪಿ ಹೇಳುತ್ತಿವೆ.

ಅವರುಗಳ ಸಂಭ್ರಮದ ಮಧ್ಯೆ, ಸುಪ್ರಿಂ ಕೋರ್ಟ್‌ನ ಆದೇಶದ ಪ್ಯಾರಾಗ್ರಾಫ್‌ 25ರಲ್ಲಿ ಉಲ್ಲೇಖಿಸಿದ ಅಂಶಗಳ ಸುತ್ತ ನಿಗೂಢ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ರಫೇಲ್‌ ಡೀಲ್‌ಗೆ ಸಂಬಂಧಿಸಿದಂತೆ ‘ಕಂಟ್ರೋಲರ್‌ ಆಂಡ್‌ ಅಡಿಟರ್‌ ಜನರಲ್‌ ಆಫ್‌ ಇಂಡಿಯಾ’ (ಸಿಎಜಿ)ದ ವರದಿಯನ್ನು ಸಂಸತ್‌ನ ‘ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿ (ಪಿಎಸಿ)‘ ಪರಿಶೀಲನೆಗೆ ಒಳಪಡಿಸಿದೆ ಎಂದು ಈ ಪ್ಯಾರಾ ಹೇಳುತ್ತದೆ.

ಆದರೆ, ಶುಕ್ರವಾರ ರಾತ್ರಿವರೆಗೂ ಯಾರೊಬ್ಬರೂ ರಫೇಲ್‌ ಡೀಲ್‌ಗೆ ಸಂಬಂಧಿಸಿದಂತೆ ಸಿಎಜಿ ವರದಿಯನ್ನು ಕಣ್ಣಿಂದ ನೋಡಿಲ್ಲ. ನಿಯಮಗಳ ಪ್ರಕಾರ, ಮೊದಲು ಸಿಎಜಿ ವರದಿಯನ್ನು ಸಂಸತ್‌ನಲ್ಲಿ ಮಂಡಿಸಬೇಕಾಗಿದ್ದು ಅದರ ಬಳಿಕ ಇದನ್ನು ಪಿಎಸಿ ಪರಿಶೀಲನೆಗೆ ಒಳಪಡಿಸಬೇಕು. ಆದರೆ ನಮಗೆ ವರದಿಯೇ ಬಂದಿಲ್ಲ ಎಂದಿದ್ದಾರೆ ಪಿಎಸಿ ಸದಸ್ಯರು.

ಹೀಗಿದ್ದೂ ಆದೇಶದ 25ನೇ ಪ್ಯಾರದಲ್ಲಿ ಮೂವರು ನ್ಯಾಯಮೂರ್ತಿಗಳಿದ್ದ ಪೀಠದ ಮುಖ್ಯಸ್ಥರಾದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ, “ನಮ್ಮ ಮುಂದೆ ಇರಿಸಲಾಗಿರುವ ಮಾಹಿತಿಗಳಲ್ಲಿ ಯುದ್ಧ ವಿಮಾನದ ಬೇಸಿಕ್‌ ಬೆಲೆಗಳನ್ನು ಹೊರತುಪಡಿಸಿ ಬೆಲೆಯ ವಿವರಗಳನ್ನು ಸರಕಾರ ಬಹಿರಂಗಪಡಿಸಿಲ್ಲ. ಎರಡೂ ದೇಶಗಳ ನಡುವಿನ ಒಪ್ಪಂದದ ಉಲ್ಲಂಘನೆಗಿಂತ ಹೆಚ್ಚಾಗಿ ದೇಶದ ಭದ್ರತೆಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಸಂಸತ್‌ಗೂ ಈ ವಿವರಗಳನ್ನು ನೀಡಿಲ್ಲ.”

“ಹೀಗಿದ್ದೂ ಬೆಲೆಯ ವಿವರಗಳನ್ನುಸಿಎಜಿಯವರೊಂದಿಗೆ ಹಂಚಿಕೊಳ್ಳಲಾಗಿದೆ ಮತ್ತು ಸಿಎಜಿ ಹಾಗೂ ಅವರ ವರದಿಯು ಪಿಎಸಿಯಿಂದ ಪರಿಶೀಲಿಸಲ್ಪಟ್ಟಿದೆ. ವರದಿಯ ಒಂದು ಪರಿಷ್ಕೃತ ಭಾಗವನ್ನು ಮಾತ್ರ ಸಂಸತ್ತಿನ ಮುಂದೆ ಇಡಲಾಗಿದೆ ಮತ್ತು ಅದು ಸಾರ್ವಜನಿಕರಿಗೆ ಲಭ್ಯವಿದೆ,” ಎಂದು ಹೇಳಿದ್ದಾರೆ.

ನಿಗೂಢತೆಗೆ ಕಾರಣವಾದ ತೀರ್ಪಿನ ಒಂದು ಪ್ಯಾರ. 
ನಿಗೂಢತೆಗೆ ಕಾರಣವಾದ ತೀರ್ಪಿನ ಒಂದು ಪ್ಯಾರ. 

ಆದರೆ ರಾತ್ರಿಯವರೆಗೂ ನ್ಯಾಯಾಲಯ ಯಾವ ಸಿಎಜಿ ವರದಿ ಬಗ್ಗೆ ಹೇಳುತ್ತಿದೆ ಎಂಬುದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಅಧಿಕಾರಿಗಳು ಹೇಳುವ ಪ್ರಕಾರ ಇಲ್ಲಿಯವರೆಗೆ ರಫೇಲ್‌ ಡೀಲ್‌ ಬಗ್ಗೆ ಯಾವುದೇ ಸಿಎಜಿ ವರದಿ ಸಲ್ಲಿಕೆಯಾಗಿಲ್ಲ. ಬಜೆಟ್‌ ಅಧಿವೇಶನ ಆರಂಭವಾಗುವುದಕ್ಕೂ ಮೊದಲು ಜನವರಿ ಅಂತ್ಯದಲ್ಲಿ ಇದನ್ನು ಸಂಸತ್‌ನಲ್ಲಿ ಮಂಡಿಸಲಾಗುತ್ತದೆ. ಸಿಎಜಿ ಅಧಿಕಾರಿಗಳಲ್ಲದೆ ಇಬ್ಬರು ಪಿಎಸಿ ಸದಸ್ಯರೂ ನಾವು ಅಂಥಹ ಯಾವುದೇ ವರದಿಯನ್ನು ಪಡೆದುಕೊಂಡಿಲ್ಲ ಎಂದು ‘ದಿ ಟೆಲಿಗ್ರಾಫ್‌’ಗೆ ಹೇಳಿಕೆ ನೀಡಿದ್ದಾರೆ.

ಒಂದೊಮ್ಮೆ ಸಿಎಜಿ ವರದಿ ಸರಕಾರಕ್ಕೆ ತಲುಪಿ, ಅದರ ವಿಷಯಗಳನ್ನು ಸಂಸತ್‌ನ ಗಮನಕ್ಕೆ ತರದೆ ನ್ಯಾಯಾಲಯದ ಜತೆ ಹಂಚಿಕೊಂಡಿದ್ದರೆ ಇಲ್ಲಿ ಹಲವು ಪ್ರಶ್ನೆಗಳು ಉದ್ಭವವಾಗುತ್ತವೆ.

ಮೊದಲಿಗೆ ಸಿಎಜಿ ಎನ್ನುವುದು ಸರಕಾರದ ಅತ್ಯುನ್ನತ ಲೆಕ್ಕಪತ್ರಗಳನ್ನು ನೋಡಿಕೊಳ್ಳುವ ಸಂಸ್ಥೆಯಾಗಿದ್ದು ನೇರವಾಗಿ ರಾಷ್ಟ್ರಪತಿಗಳಿಗೆ ರಿಪೋರ್ಟ್‌ ಮಾಡಿಕೊಳ್ಳುತ್ತದೆ. ರಾಷ್ಟ್ರಪತಿಗಳಿಗೆ ಸಲ್ಲಿಕೆ ಮಾಡಿದ ನಂತರ ಅವರು ಅದನ್ನು ಸಂಸತ್‌ನ ಉಭಯ ಸದನಗಳ ಮುಂದಿಡಬೇಕು. ನಂತರ ಈ ವರದಿ ಪಿಎಸಿಗೆ ಹೋಗುತ್ತದೆ. ಸಿಎಜಿ ವರದಿಯ ಕೆಲವು ಭಾಗಗಳನ್ನು ಆಳವಾದ ಪರೀಕ್ಷೆಗೆ ಒಳಪಡಿಸಿ ತನ್ನದೇ ಆದ ವರದಿಯನ್ನು ಪಿಎಸಿ ಸಂಸತ್‌ನ ಮುಂದಿಡುತ್ತದೆ. ಇದು ಸಂಪ್ರದಾಯ.

ಅದರೆ ಶುಕ್ರವಾರದ ಕೋರ್ಟ್‌ ಆದೇಶ ನೋಡಿ ಸಿಎಜಿ ಅಧಿಕಾರಿಗಳೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಪ್ರಕಾರ ಇನ್ನೂ ‘ಎಕ್ಸಿಟ್‌ ಕಾನ್ಫರೆನ್ಸ್‌’ ಸಭೆಯನ್ನೇ ಕರೆಯಲಾಗಿಲ್ಲ. ವರದಿಯನ್ನು ಪೂರ್ಣಗೊಳಿಸುವ ಮುನ್ನ ‘ಎಕ್ಸಿಟ್‌ ಕಾನ್ಫರೆನ್ಸ್‌’ ಕರೆಯಲಾಗುತ್ತದೆ. ಇದರಲ್ಲಿ ಆಯಾ ಇಲಾಖೆಗಳು ತಮ್ಮ ಅಂತಿಮ ವಾದವನ್ನು ಮಂಡಿಸಬೇಕು ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಕೆ ಮಾಡಬೇಕು. ಇದಾದ ಬಳಿಕ ವರದಿ ಸಲ್ಲಿಸಲು ಸಿಎಜಿಗೆ ಕನಿಷ್ಠ ಒಂದು ತಿಂಗಳಾದರೂ ಬೇಕಾಗುತ್ತದೆ.

ಇದರ ನಡುವೆಯೇ ಕಳೆದ ತಿಂಗಳು ಕೆಲವು ನಿವೃತ್ತ ಅಧಿಕಾರಿಗಳು ರಫೇಲ್‌ ಡೀಲ್‌ ಮತ್ತು ಡಿಮಾನಟೈಸೇಷನ್‌ಗೆ ಸಂಬಂಧಿಸಿದಂತೆ ಸಿಎಜಿ ವರದಿಯ ಸಲ್ಲಿಕೆಯಲ್ಲಾಗುತ್ತಿರುವ ‘ನ್ಯಾಯವಲ್ಲದ ಮತ್ತು ಅಸಮರ್ಥನಿಯ ವಿಳಂಬ’ದ ಬಗ್ಗೆ ದೂರಿದ್ದರು. ಇದರ ನಡುವೆ ಸಿಎಜಿ ವರದಿ ಸಲ್ಲಿಕೆಯಾಗಿದೆ ಎಂದು ಆದೇಶದಲ್ಲಿ ಹೇಳಿರುವುದರಿಂದ ಪಿಎಸಿ ಸದಸ್ಯ ಬಿ ಮಹ್ತಾಬ್‌, ಇಲ್ಲಿಯವರೆಗೆ ನನಗೆ ಆ ರೀತಿಯ ಯಾವುದೇ ವರದಿಗಳ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. “ನ್ಯಾಯಾಲಯ ತನ್ನ ಮುಂದಿರುವ ದಾಖಲೆಗಳನ್ನು ಉಲ್ಲೇಖಿಸಿರುವುದರಿಂದ, ಸರಕಾರ ಹೀಗೆ ಹೇಗೆ ಹೇಳಲು ಸಾಧ್ಯ ಎಂಬುದು ಪ್ರಶ್ನೆಯಾಗಿದೆ. ಸರಕಾರಕ್ಕೆ ಸಿಎಜಿ ವರದಿಯನ್ನು ತೋರಿಸಲಾಗಿದೆಯೇ?” ಎಂದವರು ಪ್ರಶ್ನಿಸಿದ್ದಾರೆ.

ಜತೆಗೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಕಾಂಗ್ರೆಸ್‌ ಹಿರಿಯ ನಾಯಕ ಮತ್ತು ಪಿಎಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, “ನಾನು ಇಂದು ಉಪ ಸಿಎಜಿಗೆ, 'ಇದು ಹೇಗೆ ಸಂಭವಿಸಿತು? ವರದಿ ಎಲ್ಲಿದೆ; ನೀವು ಯಾವುದಾದರೂ ಮಾಹಿತಿಯನ್ನು ಪಡೆದುಕೊಂಡಿದ್ದೀರಾ?’ ಎಂದು ಕೇಳಿದೆ. ನಾನು ಯಾವುದೇ ವರದಿಗೆ ಸಹಿ ಮಾಡಿಲ್ಲ, ಅದನ್ನು ಸಂಸತ್ತಿನಲ್ಲಿ ಮಂಡಿಸಲಾಗಿಲ್ಲ. ಒಂದೊಮ್ಮೆ ಅದನ್ನು ಸಂಸತ್ತಿನಲ್ಲಿ ಮಂಡಿಸದಿದ್ದರೆ, ಅದರ ಬಗ್ಗೆ ಯಾರೂ ಮಾತನಾಡಕೂಡದು,” ಎಂದು ಗುಡುಗಿದ್ದಾರೆ. ಜತೆಗೆ “ಸಿಎಜಿ ಬಳಿಯಲ್ಲಿ ಯಾವುದೇ ವರದಿ ಇಲ್ಲ. ಪಿಎಸಿ ಯಾವುದೇ ವರದಿಗಳನ್ನು ಪರಿಶೀಲಿಸಿಲ್ಲ. ಇದು ವಿಚಿತ್ರವಾಗಿದೆ,” ಎಂದು ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಇದೇ ದಾಟಿಯಲ್ಲಿ ಅರ್ಜಿದಾರರಾದ ಪ್ರಶಾಂತ್‌ ಭೂಷಣ್, ಅರುಣ್‌ ಶೌರಿ ಮತ್ತು ಯಶವಂತ್‌ ಸಿನ್ಹಾ ಕೂಡ ಮಾತನಾಡಿದ್ದಾರೆ.

ಆರ್ಟಿಕಲ್‌ 32:

ಆದೇಶದಲ್ಲಿ ಸುಪ್ರೀಂ ಕೋರ್ಟ್‌ ಪ್ರಮುಖವಾಗಿ ಆರ್ಟಿಕಲ್‌ 32ನ್ನು ಉಲ್ಲೇಖಿಸಿದೆ. ಆರ್ಟಿಕಲ್‌ 32ರನ್ನು ‘ಇಡೀ ಸಂವಿಧಾನದ ಸಾರ’ ಎಂದು ಕರೆಯುತ್ತಾರೆ ಇದರ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್‌. ತಮ್ಮ ಮೂಲಭೂತ ಹಕ್ಕುಗಳಿಗೆ ಚ್ಯುತಿಯಾದಾಗ ವ್ಯಕ್ತಿಗಳಿಗೆ ನ್ಯಾಯಾಲಯದ ಮೊರೆ ಹೋಗುವ ಅವಕಾಶವನ್ನು ಇದು ನೀಡುತ್ತದೆ. ಇದರ ಆಧಾರದಲ್ಲಿ ಸುಪ್ರೀಂ ಕೋರ್ಟ್‌ಗೆ ಭೂಷಣ್‌ ಮತ್ತು ತಂಡ ಅರ್ಜಿಗಳನ್ನು ಸಲ್ಲಿಸಿತ್ತು. ಇದೇ ಆಧಾರದ ಮೇಲೆ ನಾವು ಆದೇಶ ನೀಡುತ್ತಿದ್ದೇವೆ ಎಂದಿರುವ ನ್ಯಾಯಮೂರ್ತಿಗಳು “ಭಾರತ  ಸರಕಾರ ಖರೀದಿಸಲು ಹೊರಟಿರುವ 36 ರಕ್ಷಣಾ ಯುದ್ಧ ವಿಮಾನಗಳ ಖರೀದಿಯಂಥ ಸೂಕ್ಷ್ಮ ವಿಷಯದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶ ಮಾಡಲು ಯಾವುದೇ ಕಾರಣಗಳು ಇರುವುದು ನಮಗೆ ತಿಳಿದು ಬಂದಿಲ್ಲ. ವ್ಯಕ್ತಿಗಳ ಗ್ರಹಿಕೆಯು ಈ ನ್ಯಾಯಾಲಯದ ವಿಚಾರಣೆಗೆ ಆಧಾರವಾಗಲಾರದು ಅದರಲ್ಲೂ ವಿಶೇಷವಾಗಿ ಇಂಥಹ ಪ್ರಕರಣಗಳಲ್ಲಿ,” ಎಂದು ತೀರ್ಪು ನೀಡಿದೆ.

ಪೂರಕ ಮಾಹಿತಿ: ದಿ ಟೆಲಿಗ್ರಾಫ್‌, ಚಿತ್ರ ಕೃಪೆ: ದಿ ವೈರ್‌