samachara
www.samachara.com
ವೈರಲ್ ವಿಡಿಯೋ ಬೆನ್ನತ್ತಿ: ಮೋದಿ ಕಂಡು ಟರ್ಕಿ ಪ್ರಥಮ ಮಹಿಳೆ ಎಮಿನ ಮುಖ ತಿರುಗಿಸಿದ್ದು ಯಾಕೆ?
COVER STORY

ವೈರಲ್ ವಿಡಿಯೋ ಬೆನ್ನತ್ತಿ: ಮೋದಿ ಕಂಡು ಟರ್ಕಿ ಪ್ರಥಮ ಮಹಿಳೆ ಎಮಿನ ಮುಖ ತಿರುಗಿಸಿದ್ದು ಯಾಕೆ?

ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ವರ್ಷದಲ್ಲಿಯೇ ಎಮಿನ ಎರ್ಡೊಗನ್ ಪತಿ, ಹೋರಾಟಗಾರ, ಕವಿ ರೆಸೆಪ್ ತಯ್ಯೀಪ್ ಎರ್ಡೊಗನ್ (Recep Tayyip Erdoğan) ಟರ್ಕಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು ಎಂಬುದು ವಿಶೇಷ. 

ಈಕೆಯ ಹೆಸರು ಎಮಿನ ಎರ್ಡೊಗನ್ (Emine Erdoğan). ಟರ್ಕಿಯ ಪ್ರಥಮ ಮಹಿಳೆ; ವರ್ಷ 63. ನವೆಂಬರ್‌ನಲ್ಲಿ ನಡೆದ ಜಿ-20 ಸಮಿತ್‌ನ ಕೊನೆಯಲ್ಲಿ 'ಗ್ರೂಪ್‌ ಫೊಟೋ' ತೆಗೆಯುವ ಸಮಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಗೆ 'ಮುಖ ತಿರುಗಿಸಿ' ಸುದ್ದಿಯಾಗಿದ್ದಾರೆ. ಎಮಿನ ಕಡೆಗೆ ಜಗತ್ತು ಗಮನ ಹರಿಸಲು ಕಾರಣವಾದ ವಿಡಿಯೋ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ವೈರಲ್ ಆಗಿದೆ ಮತ್ತು ಚರ್ಚೆಗಳನ್ನು ಹುಟ್ಟುಹಾಕಿದೆ, ಟ್ರಾಲಿಂಗ್‌ಗೆ ಆಹಾರವಾಗಿದೆ.

2014ರಲ್ಲಿ ಜಾತ್ಯಾತೀತ, ಸಾರ್ವಭೌಮ, ಸಮಾಜವಾದಿ, ಪ್ರಜಾಸತ್ತಾತ್ಮಕ ಗಣರಾಜ್ಯದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ವರ್ಷದಲ್ಲಿಯೇ- ಎಮಿನ ಎರ್ಡೊಗನ್ ಪತಿ, ಹೋರಾಟಗಾರ, ಕವಿ ರೆಸೆಪ್ ತಯ್ಯೀಪ್ ಎರ್ಡೊಗನ್ (Recep Tayyip Erdoğan) ಟರ್ಕಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಈ ಸಮಯದಲ್ಲಿ ಮಿಸಸ್‌ ಎರ್ಡೊಗನ್ ಬಗ್ಗೆ ಬೇರೆಯದ್ದೇ ಆಗಿರುವ ಇಮೇಜ್‌ ಟರ್ಕಿಯಲ್ಲಿತ್ತು.

"ಇಲ್ಲಿನ ಪ್ರಭಾವಿ ಟರ್ಕರು- ಎರ್ಡೊಗನ್ ರೀತಿಯ ಧಾರ್ಮಿಕರು ಹಾಗೂ ಅವರ ನಂಬಿಕೆ ವಿರುದ್ಧವಾಗಿರುವ ಎಲ್ಲವನ್ನೂ ವಿರೋಧಿಸುವ ಜಾತ್ಯಾತೀತವಾದಿಗಳು- ಈಕೆ ಹೇಳಿದ್ದನ್ನು ಕೇಳಿಕೊಂಡು ಮನೆಯಲ್ಲಿರುವ ಪ್ರಥಮ ಮಹಿಳೆಯಾಗಿ ಉಳಿಯುತ್ತಾರೆ ಎಂದು ಆಶಿಸಿದ್ದರು," ಎಂದು 'ದಿ ಎಕನಾಮಿಸ್ಟ್‌' ಎಮಿನ ಎರ್ಡೊಗನ್ ಬಗೆಗಿನ ವರದಿಯೊಂದನ್ನು ಆರಂಭಿಸುತ್ತದೆ. ಎರ್ಡೊಗನ್ ಟರ್ಕಿ ಪ್ರಧಾನಿಯಾಗಿ 18ನೇ ತಿಂಗಳಿನಲ್ಲಿ ಪ್ರಕಟವಾದ ಈ ಲೇಖನದಲ್ಲಿ, ಎಲ್ಲರ ಆಶಯಗಳಿಗೆ ವಿರುದ್ಧವಾಗಿ, "ಮಿಸಸ್‌ ಎರ್ಡೊಗನ್ ಇತ್ತೀಚಿನ ದಶಕಗಳಲ್ಲಿ ಟರ್ಕಿ ಕಂಡ ಪ್ರಥಮ ಮಹಿಳೆಯ ಪೈಕಿ ಅತ್ಯಂತ ಹೆಚ್ಚು ಜನಪ್ರಿಯರು ಹಾಗೂ ಪ್ರಭಾವಶಾಲಿಯಾಗಿದ್ದಾರೆ,'' ಎಂದು ಹೊಗಳುತ್ತದೆ. ಇದಕ್ಕೆ ಹಿನ್ನೆಲೆಯಲ್ಲಿ, ಮಿಸಸ್‌ ಎರ್ಡೊಗನ್ ಪಾಕಿಸ್ತಾನದ ಪ್ರವಾಹದ ಸಮಯದಲ್ಲಿ ಸ್ಪಂದಿಸಿದ ರೀತಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಂದಿರುವ ಸಂಪರ್ಕಗಳೂ ಇವೆ.

ಈ ಎರ್ಡೊಗನ್ ದಂಪತಿ ಟರ್ಕಿ ಗಣರಾಜ್ಯದ ರಾಜಕೀಯವನ್ನು ಹಲವು ವರ್ಷಗಳ ಕಾಲ ಹತ್ತಿರದಿಂದ ಬಲ್ಲವರು. ಇಸ್ತಾನ್‌ಬುಲ್‌ ಎಂಬ ಐತಿಹಾಸ ನಗರದ ಮೇಯರ್ ಆಗಿದ್ದಾಗ ರೆಸೆಪ್ ತಯ್ಯೀಪ್ ಎರ್ಡೊಗನ್ 'ಕ್ರಾಂತಿಕಾರಿ' ಪದ್ಯ ಓದಿದ ಕಾರಣಕ್ಕೆ ಅಧಿಕಾರ ಕಳೆದುಕೊಂಡಿದ್ದವರು. ಜೈಲು ಶಿಕ್ಷೆಯನ್ನೂ ಈ ಸಮಯದಲ್ಲಿ ಅನುಭವಿಸಿದ್ದರು.

ಗ್ರಾಜುಯೇಶನ್ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು 'ಐಡಿಯಲಿಸ್ಟ್ ವುಮನ್ ಅಸೋಸಿಯೇಷನ್' ಸೇರಿಕೊಂಡ ಎಮಿನಾಗೆ ಎರ್ಡೊಗನ್ ಸಿಕ್ಕಿದ ಹಿಂದೆಯೂ ದೊಡ್ಡ ಕತೆ ಇದೆ. ಇಬ್ಬರ ಕುಟುಂಬ ಮದುವೆಗೆ ಒಪ್ಪದಿದ್ದಾಗ ಊಟ ಬಿಟ್ಟು ರೆಸೆಪ್ ಎಂಬ ಕವಿ ಮನಸ್ಸಿನ ರಾಜಕಾರಣಿ ಕೊನೆಗೂ ಮದುವೆಯಾದರು ಎಂದು ವರದಿಗಳು ಹೇಳುತ್ತವೆ.

ಸಿರಿಯಾದ ನಿರಾಶ್ರಿತ ಮಕ್ಕಳ ಜತೆ ಎರ್ಡೊಗನ್ ದಂಪತಿ. ಈ ಪುಟ್ಟ ಬಾಲಕಿಯ ಟ್ವೀಟ್‌ ಒಂದು ವೈರಲ್ ಆಗಿತ್ತು. 
ಸಿರಿಯಾದ ನಿರಾಶ್ರಿತ ಮಕ್ಕಳ ಜತೆ ಎರ್ಡೊಗನ್ ದಂಪತಿ. ಈ ಪುಟ್ಟ ಬಾಲಕಿಯ ಟ್ವೀಟ್‌ ಒಂದು ವೈರಲ್ ಆಗಿತ್ತು. 
/ಟಿಆರ್‌ಟಿ ವರ್ಲ್ಡ್‌. 

ಹೀಗೆ, ಹೋರಾಟ- ರಾಜಕೀಯ ಜೀವನದಲ್ಲಿ ಸಾಗಿ ಬರುತ್ತಿದ್ದಾಗಲೇ ಎರ್ಡೊಗನ್ ಜೈಲು ಪಾಲಾಗಿದ್ದು ಮತ್ತು ಮಿಸಸ್‌ ಎರ್ಡೊಗನ್ ಇಡೀ ಟರ್ಕಿಗೆ ಪರಿಚಯವಾಗಿದ್ದು. ಈ ಸಮಯದಲ್ಲಿ ಎಮಿನ ಸ್ವಂತ ಪಕ್ಷ ಆರಂಭಿಸಿ, ಟರ್ಕಿಯನ್ನು ಯುರೋಪಿಯನ್ ಯೂನಿಯನ್ ಜತೆಗೆ ಕೊಂಡೊಯ್ಯವ ಆಲೋಚನೆಯನ್ನು ಮುಂದಿಟ್ಟರು. ಜನ ಸ್ಪಂದನೆ ಸಿಕ್ಕ ಪರಿಣಾಮ ಎರ್ಡೊಗನ್ ದೇಶದ ಅಧ್ಯಕ್ಷರಾದರು, ಎಮಿನ ಎರ್ಡೊಗನ್ 'ಪ್ರಥಮ ಮಹಿಳೆ'ಯಾದರು. ಆಗಾಗ ಸುದ್ದಿಯಾಗುತ್ತಿದ್ದ ಎಮಿನ ಈಗ ಭಾರತದ ಪ್ರಧಾನಿಯನ್ನು ಸರಿಯಾಗಿ ಎದುರುಗೊಳ್ಳದ ಕಾರಣಕ್ಕೆ ಸದ್ದು ಮಾಡುತ್ತಿದ್ದಾರೆ.

ಹೋರಾಟದ ರಾಜಕೀಯ ಹಿನ್ನೆಲೆಯಿಂದ ಬಂದಿರುವ 63 ವರ್ಷದ ಹಿರಿಯ ಮಹಿಳೆ ಎಮಿನ ಎರ್ಡೊಗನ್ ಯಾಕೆ ಭಾರತದ ಪ್ರಧಾನಿ ಎದುರಿಗಿದ್ದರೂ ಮುಖ ತಿರುಗಿಸಿಕೊಂಡರು? ಅದೂ ಅಂತಾರಾಷ್ಟ್ರೀಯ ವೇದಿಕೆಯಲ್ಲಿ...

“ಜನ ಟ್ವಿಟರ್‌ನಲ್ಲಿ ಅಧ್ಯಕ್ಷ ಎರ್ಡೊಗನ್ ಹಾಗೂ ಎಮಿನ ಎರ್ಡೊಗನ್‌ರನ್ನು ಹೊಗಳುತ್ತಿದ್ದಾರೆ. ಭಾರತದಲ್ಲಿ ಮುಸ್ಲಿಮರು ಎರಡನೇ ದೊಡ್ಡ ಜನಸಂಖ್ಯೆ ಹೊಂದಿದ್ದಾರೆ. ಹೀಗಿದ್ದೂ ಮೋದಿ ಸರಕಾರ ಅವರ ಮೇಲೆ ದಾಳಿಗಳಿಗೆ ಕಾರಣವಾಗಿದೆ. ಹೀಗಾಗಿ ಮೋದಿಗೆ ಇಂತಹದೊಂದು ತಣ್ಣನೆಯ ಪ್ರತಿಕ್ರಿಯೆ ಬೇಕಿತ್ತು,’’ ಎಂದು ‘ದಿ ಗ್ಲೋಬಲ್ ವಿಲೇಜ್‌ ಸ್ಪೇಸ್‌’ ಘಟನೆಗೆ ಕಾರಣ ಹುಡುಕುವ ಪ್ರಯತ್ನ ಮಾಡಿದೆ.

ನಿಜ ಕಾರಣ ಅದೇನೇ ಇರಲಿ; ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಸಮಯ ಕಳೆದಿದ್ದು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ. ಸುಮಾರು 84 ವಿದೇಶಿ ಪ್ರವಾಸಗಳನ್ನು ಅವರು ಯಶಸ್ವಿಯಾಗಿ ಜನರ ತೆರಿಗೆಯ 1960 ಕೋಟಿ ರೂಪಾಯಿಗಳಲ್ಲಿ ಮುಗಿಸಿದ್ದಾರೆ. ಪ್ರಧಾನಿಯ ಸುತ್ತಾಟಗಳಿಂದ ದೇಶಕ್ಕೆ ದೊಡ್ಡ ಅನುಕೂಲವಾಗಿದೆ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಹಾಗಾಗಿ ಪ್ರಧಾನಿ ಸಾಧನೆಗಳನ್ನು ಜನರಿಗೆ ತಲುಪಿಸಲು ಮತ್ತೆ 4630 ಕೋಟಿ ರೂಪಾಯಿಯನ್ನು ಜಾಹೀರಾತುಗಳಿಗೆ ವೆಚ್ಚ ಮಾಡಲಾಗಿದೆ. ಹೀಗಿದ್ದೂ, ಜಿ-20ಯಂತಹ ಪ್ರಮುಖ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಟರ್ಕಿಯಂತಹ ಪುಟ್ಟ ದೇಶವೊಂದರ ‘ಪ್ರಥಮ ಮಹಿಳೆ’ ಮೋದಿ ಅವರಿಗೆ ಮುಖ ಕೊಟ್ಟು ಮಾತನಾಡದೆ ಹೋಗಿದ್ದಾರೆ. ನಷ್ಟ ಯಾರಿಗೆ?