samachara
www.samachara.com
‘ನನಗೆ ಯಾವ ಜಾತಿಯೂ ಇಲ್ಲ’ ಎಂಬ ಎಚ್‌ಡಿಕೆ ಹೇಳಿಕೆ ಯಾಕೆ ವಿಶ್ವಾಸಾರ್ಹವಲ್ಲ?
COVER STORY

‘ನನಗೆ ಯಾವ ಜಾತಿಯೂ ಇಲ್ಲ’ ಎಂಬ ಎಚ್‌ಡಿಕೆ ಹೇಳಿಕೆ ಯಾಕೆ ವಿಶ್ವಾಸಾರ್ಹವಲ್ಲ?

ಜಾತಿ, ಧರ್ಮದ ಆಧಾರದಲ್ಲಿ ಏನೆಲ್ಲಾ ರಾಜಕಾರಣ ಮಾಡಿದರೂ, ಅಧಿಕಾರಕ್ಕೆ ಬಂದ ಮೇಲೆ ಜಾತಿ, ಧರ್ಮಗಳಿಗೆ ಅಂಟದಂತೆ ಆಡಳಿತ ನಡೆಸಬೇಕಾದ ಬದ್ಧತೆ ಇಂದಿನ ನಾಯಕರಲ್ಲಿಲ್ಲ.

“ನನಗೆ ಯಾವ ಜಾತಿಯೂ ಇಲ್ಲ” ಎಂದಿದ್ದಾರೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ. ಜಾತಿ ಆಧಾರಿತ ರಾಜಕಾರಣವನ್ನೇ ಹಾಸಿ ಹೊದ್ದು ಮಲಗಿರುವ ರಾಜ್ಯ ರಾಜಕಾರಣದಲ್ಲಿ ಸಿಎಂ ಈ ಹೇಳಿಕೆಯನ್ನು ‘ಕ್ರಾಂತಿಕಾರಿ’ ಎಂದು ಜನ ಸ್ವೀಕರಿಸುವುದು ಕಷ್ಟ ಇದೆ. ಅದಕ್ಕೆ ಸಕಾರಣಗಳೂ ಇವೆ.

ಕಾಂಗ್ರೆಸ್‌ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ಆರಂಭದ ದಿನಗಳಿಂದ ಇಲ್ಲಿಯವರೆಗೂ ಕುಮಾರಸ್ವಾಮಿ ಅವರ ಮಠ– ಮಂದಿರಗಳ ಸುತ್ತಾಟ ಜಾತಿ ವ್ಯವಸ್ಥೆಯನ್ನು ಸುಪ್ತವಾಗಿ ಆರಾದಿಸಿವೆ. ಅವರ ಪಕ್ಷ ‘ಜಾತ್ಯತೀತ ಜನತಾ ದಳ’ ಕೂಡ ಜಾತಿ ಆಧಾರಿತ ರಾಜಕಾರಣಕ್ಕೇ ಬ್ರಾಂಡ್‌ ಆಗಿದೆ. ಇದರಿಂದ ಕಳಚಿಕೊಳ್ಳಲು ಕ್ರಿಯಾತ್ಮಕ ನಡೆಗಳ ಅಗತ್ಯವಿದೆಯೇ ಹೊರತು, ಹೇಳಿಕೆಗಳು ಪರಿಣಾಮ ಬೀರುವುದಿಲ್ಲ.

ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಲಿಂಗಾಯತ ಸಮುದಾಯದ ಅಧಿಕಾರಿಗಳನ್ನು ಆಯಕಟ್ಟಿನ ಜಾಗಕ್ಕೆ ತಂದು ಕೂರಿಸಲಾಗಿತ್ತು. ಶಾಸಕಾಂಗ ಮಾತ್ರವಲ್ಲ, ಕಾರ್ಯಾಂಗವೂ ಜಾತಿ ಆಧಾರದಲ್ಲಿ ನಡೆಯುವುದು ಎದ್ದು ಕಂಡಿದ್ದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೇ. ಲಿಂಗಾಯತರನ್ನು ಬಿಟ್ಟು ಉಳಿದ ಎಲ್ಲಾ ಜಾತಿ, ಸಮುದಾಯಗಳೂ ರಾಜಕೀಯದಲ್ಲೂ, ಅಧಿಕಾರಿ ವರ್ಗದಲ್ಲೂ ಸೈಡ್‌ಲೈನ್‌ ಆದ ಕಾಲ ಅದು. ಆದರೆ, ಮುಂದೆ ಸಿದ್ದರಾಮಯ್ಯ ಅಧಿಕಾರಕ್ಕೆ ಬರುವ ಹೊತ್ತಿಗೆ ಆಯಕಟ್ಟಿನ ಜಾಗಗಳಿಗೆ ಹಿಂದುಳಿದ ಸಮುದಾಯಗಳು ಬಂದಿದ್ದವು.

ಅಧಿಕಾರಕ್ಕೆ ಬರುವವರೆಗೂ ಎಷ್ಟೇ ಜಾತಿ, ಧರ್ಮದ ಆಧಾರದಲ್ಲಿ ರಾಜಕಾರಣ ಮಾಡಿದರೂ, ಅಧಿಕಾರಕ್ಕೆ ಬಂದ ಮೇಲೆ ಜಾತಿ, ಧರ್ಮಗಳಿಗೆ ಅಂಟಿಯೂ ಅಂಟದಂತೆ ಇದ್ದು ಆಡಳಿತ ನಡೆಸಬೇಕಾದ ಬದ್ಧತೆ ಇಂದಿನ ನಾಯಕರಲ್ಲಿ ಕಾಣುತ್ತಿಲ್ಲ. ಇದಕ್ಕೆ ಕುಮಾರಸ್ವಾಮಿಯೂ ಹೊರತಾಗಿಲ್ಲ. ಅವರ ಹಿಂದಿನವರಲ್ಲೂ ಅಂತಹದೊಂದು ಮಾದರಿ ಕಂಡಿರಲಿಲ್ಲ.

ಸ್ವಾತಂತ್ರ್ಯ ಬಂದ ಮೊದಲ ಐದು ವರ್ಷದ ನಂತರ ಕರ್ನಾಟಕದಲ್ಲಿ ನಡೆದಿರುವುದೆಲ್ಲವೂ ಜಾತಿ ಆಧಾರಿತ ಕಾರಣವೇ. ಕೆ.ಸಿ. ರೆಡ್ಡಿ, ಕೆಂಗಲ್‌ ಹನುಮಂತಯ್ಯ ಅವರನ್ನು ಬಿಟ್ಟರೆ ಮುಂದಿನ ಸುಮಾರು ಎರಡು ದಶಕಗಳ ಕಾಲ ನಡೆದಿದ್ದೆಲ್ಲವೂ ಲಿಂಗಾಯತ ಪಾರಮ್ಯದ ಜಾತಿ ರಾಜಕಾರಣ. ಭಾರತದಲ್ಲಿ, ಅದರಲ್ಲೂ ಕರ್ನಾಟಕದ ರಾಜಕೀಯಕ್ಕೆ ಬಂದರೆ ಸ್ವಾತಂತ್ರ್ಯಾನಂತರದ ಕೆಲವು ವರ್ಷಗಳನ್ನು ಬಿಟ್ಟರೆ ಮುಂದಿನ ರಾಜಕೀಯ ಅಧ್ಯಾಯಗಳೆಲ್ಲವೂ ಜಾತಿ ಬಿಟ್ಟು ಮುಂದೆ ಸಾಗುವುದಿಲ್ಲ.

ರಾಜ್ಯದಲ್ಲಿ ವೀರೇಂದ್ರ ಪಾಟೀಲ್‌ ನಂತರದ ರಾಜಕಾರಣದಲ್ಲಿ ಜಾತಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಲೇ ಬಂದಿದೆ. ಅದರಲ್ಲೂ ಪಕ್ಷಗಳಲ್ಲಿ ಸ್ಥಾನ ಪಡೆಯುವುದರಿಂದ ಹಿಡಿದು, ಚುನಾವಣೆಗೆ ಟಿಕೆಟ್‌ ಪಡೆಯಲು, ಮತದಾರರನ್ನು ಸೆಳೆಯಲು ಹಾಗೂ ರಾಜಕೀಯದಲ್ಲಿ ಬೆಳೆಯಲು ಲಿಂಗಾಯತ, ಒಕ್ಕಲಿಗ ಸಮುದಾಯಗಳ ಪ್ರಭಾವ ಬೇಕೇಬೇಕು ಎಂಬ ಮಟ್ಟಕ್ಕೆ ಜಾತಿಯ ವ್ಯಸನ ರಾಜಕಾರಣದಲ್ಲಿ ಬೆಳದಿದೆ.

“ಕರ್ನಾಟಕದಲ್ಲಿ ಜಾತಿ ಆಧಾರದ ರಾಜಕಾರಣಕ್ಕೆ ಆದಿ ಅಂತ್ಯ ಎಂಬುದು ಇಲ್ಲ. ಕರ್ನಾಟಕ ಏಕೀಕರಣವಾಗಬಾರದು ಎಂದು ಮೈಸೂರು ಪ್ರಾಂತ್ಯದ ಒಕ್ಕಲಿಗ ಮುಖಂಡರು ಪಟ್ಟು ಹಿಡಿದಿದ್ದೂ ಜಾತಿ ರಾಜಕಾರಣದ ಕಾರಣಕ್ಕೇ. ಉತ್ತರ ಕರ್ನಾಟಕ ಮೈಸೂರು ಪ್ರಾಂತ್ಯದೊಳಗೆ ಸೇರಿ ಹೋದರೆ ಲಿಂಗಾಯತ ಸಮುದಾಯದ ಎದುರು ಒಕ್ಕಲಿಗರ ಪ್ರಭಾವ ಕುಗ್ಗುತ್ತದೆ ಎಂಬ ಕಾರಣಕ್ಕೆ ಒಕ್ಕಲಿಗ ಮುಖಂಡರು ಆಗ ಏಕೀಕರಣವನ್ನೇ ವಿರೋಧಿಸಿದ್ದರು. ಒಕ್ಕಲಿಗ ಸಮುದಾಯಕ್ಕೇ ಸೇರಿದ ಕುವೆಂಪು, ಶಾಂತವೇರಿ ಗೋಪಾಲಗೌಡ, ಕೆಂಗಲ್‌ ಹನುಮಂತಯ್ಯ ಮುಂತಾದವರು ಏಕೀಕರಣದ ಪರವಾಗಿ ಇದ್ದಿದ್ದರಿಂದ ಒಕ್ಕಲಿಗರ ವಿರೋಧದ ನಡುವೆಯೂ ಕರ್ನಾಟಕ ಏಕೀಕರಣಕ್ಕೆ ಮೈಸೂರು ಪ್ರಾಂತ್ಯದ ಸಮ್ಮತಿಯೂ ಸಿಕ್ಕಂತಾಯಿತು” ಎನ್ನುತ್ತಾರೆ ಮೈತ್ರಿ ಸರಕಾರವನ್ನು ಆರಂಭದಿಂದಲೂ ಟೀಕಿಸುತ್ತಲೇ ಬಂದಿರುವ ಹಿರಿಯ ರಾಜಕೀಯ ವಿಶ್ಲೇಷಕ ಎಸ್‌. ಮಹದೇವ ಪ್ರಕಾಶ್‌.

ಕರ್ನಾಟಕ ಏಕೀಕರಣದ ನಂತರ ಎಸ್‌. ನಿಜಲಿಂಗಪ್ಪ, ಬಿ.ಡಿ. ಜತ್ತಿ, ಎಸ್‌.ಆರ್‌. ಕಂಠಿ, ವೀರೇಂದ್ರ ಪಾಟೀಲ್‌ - ಹೀಗೆ ಲಿಂಗಾಯತರೇ ರಾಜ್ಯದ ಮುಖ್ಯಮಂತ್ರಿಯಾಗುತ್ತಾ ಬಂದರು. ಈ ಲಿಂಗಾಯತ ಪಾರಮ್ಯವನ್ನು ಒಡೆಯಲು ದೇವರಾಜ ಅರಸು ಪ್ರಯೋಗಿಸಿದ ಅಸ್ತ್ರ ಹಿಂದುಳಿದ ವರ್ಗಗಳ ಕಲ್ಯಾಣ. ಲಿಂಗಾಯತರ ಹಿಡಿತದಲ್ಲಿದ್ದ ರಾಜಕೀಯ ಅಧಿಕಾರವನ್ನು ಕಸಿದುಕೊಳ್ಳಲು ಹಿಂದುಳಿದವರು, ಪರಿಶಿಷ್ಟರು, ಮುಸ್ಲಿಮರ ಹೆಸರಿನಲ್ಲಿ ಅರಸು ರಾಜಕಾರಣ ಮಾಡಿದರು. ಮುಂದೆ ಸಿದ್ದರಾಮಯ್ಯ ಕೂಡಾ ಪ್ರಯೋಗಿಸಿದ್ದು ಇದೇ ಅಸ್ತ್ರವನ್ನು. ಆದರೆ, ಸಿದ್ದರಾಮಯ್ಯ ಅಧಿಕಾರಕ್ಕೆ ಬರುವ ಕಾಲಕ್ಕೆ ಈ ಅಸ್ತ್ರದ ಹೆಸರು ‘ಅಹಿಂದ’ ಆಗಿತ್ತು!

2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೂಡಾ ಜಾತಿ ದೊಡ್ಡ ಪಾತ್ರ ವಹಿಸಿತ್ತು. ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗರ ಪಕ್ಷವೆಂದೇ ಹೆಸರಾದ ಜೆಡಿಎಸ್‌ ಒಕ್ಕಲಿಗ ಹೃದಯಭಾಗವಾದ ಹಳೇ ಮೈಸೂರು ಪ್ರಾಂತ್ಯದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದರೆ, ಲಿಂಗಾಯತ ಸಮುದಾಯದ ಪ್ರಾಬಲ್ಯವಿರುವ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಹೊಡೆದುಕೊಂಡಿತ್ತು. ಉತ್ತರ ಕರ್ನಾಟಕದ ಹಲವು ಕಡೆ ಕಾಂಗ್ರೆಸ್‌ ಸೋಲಲು ಕಾರಣ ಪ್ರತ್ಯೇಕ ಲಿಂಗಾಯತ ಧರ್ಮ ಶಿಫಾರಸಿನ ಮೂಲಕ ಸಿದ್ದರಾಮಯ್ಯ ವೀರಶೈವ-ಲಿಂಗಾಯತರನ್ನು ಒಡೆಯುತ್ತಿದ್ದಾರೆ ಎಂದು ಎದ್ದ ಹೊಗೆ.

ರಾಜ್ಯದಲ್ಲಿ ಉಳಿದೆರಡು ಪಕ್ಷಗಳಿಗಿಂತ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಗೆದ್ದರೂ, ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯುವ ಉದ್ದೇಶದಿಂದ ಕಾಂಗ್ರೆಸ್‌- ಜೆಡಿಎಸ್‌ ಕೈ ಜೋಡಿಸಿವೆ. ಮೈತ್ರಿ ಸರಕಾರ ಅಧಿಕಾರಕ್ಕೆ ಬರುವ ವೇಳೆಯೂ ಮುನ್ನೆಲೆಗೆ ಬಂದಿದ್ದು ಒಕ್ಕಲಿಗರ ಪಾರಮ್ಯವೇ. ಒಕ್ಕಲಿಗ ಸಮುದಾಯದ ಮತ್ತೊಬ್ಬ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್‌ ಮತ್ತು ಎಚ್.ಡಿ. ಕುಮಾರಸ್ವಾಮಿ ಸರಕಾರ ರಚನೆಗೆ ಸದನದಲ್ಲಿ ಕೈಜೋಡಿಸಿದ್ದ ಚಿತ್ರ ರಾಜ್ಯದ ಜನತೆಯ ನೆನಪಿನಿಂದ ಸದ್ಯಕ್ಕಂತೂ ಅಳಿಸುವುದಿಲ್ಲ. ಇಂಥ ಹೊತ್ತಲ್ಲಿ ಕುಮಾರಸ್ವಾಮಿ ಜಾತಿ ಮೀರುವ ಮಾತನಾಡಿವುದನ್ನು ಜತೆಗೆ ಎಷ್ಟರ ಮಟ್ಟಿಗೆ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂಬುದು ಸದ್ಯದ ಪ್ರಶ್ನೆ.