ರಫೇಲ್‌ ‘ಟೇಕ್‌ ಆಫ್‌’ಗೆ ಸುಪ್ರಿಂ ಕೋರ್ಟ್‌ ‘ಕ್ಲಿಯರೆನ್ಸ್‌’; ಯಾಕೆ ಹೀಗೆ?
COVER STORY

ರಫೇಲ್‌ ‘ಟೇಕ್‌ ಆಫ್‌’ಗೆ ಸುಪ್ರಿಂ ಕೋರ್ಟ್‌ ‘ಕ್ಲಿಯರೆನ್ಸ್‌’; ಯಾಕೆ ಹೀಗೆ?

ರಫೇಲ್‌ ಖರೀದಿಯಲ್ಲಿ ನ್ಯಾಯಾಂಗದ ಮಧ್ಯ ಪ್ರವೇಶ ಅನಗತ್ಯ ಎನ್ನುವ ಮೂಲಕ ಸುಪ್ರೀಂಕೋರ್ಟ್‌, ತಾತ್ಕಾಲಿಕವಾಗಿ ಪ್ರಧಾನಿ ಮೋದಿ ಮೇಲಿದ್ದ ಕಳಂಕವನ್ನು ತೊಳೆದಿದೆ.

“ರಫೇಲ್‌ ಒಪ್ಪಂದದಲ್ಲಿ ನ್ಯಾಯಾಂಗದ ಮಧ್ಯ ಪ್ರವೇಶ ಸಾಧ್ಯವಿಲ್ಲ” - ಇಡೀ ದೇಶ ಕುತೂಹಲದಿಂದ ಕಾಯುತ್ತಿದ್ದ ರಫೇಲ್‌ ಒಪ್ಪಂದದ ತನಿಖೆಯ ಬಗ್ಗೆ ಸುಪ್ರೀಂಕೋರ್ಟ್ ಶುಕ್ರವಾರ ಬೆಳಿಗ್ಗೆ ಹೇಳಿರುವ ಮಾತಿದು. ದೇಶದ ಬಹುದೊಡ್ಡ ಹಗರಣ ಎಂದು ವಿಪಕ್ಷಗಳು ಕೇಂದ್ರ ಸರಕಾರವನ್ನು ಜಾಡಿಸಿದ್ದ ವಿವಾದವೊಂದಕ್ಕೆ ಸುಪ್ರೀಂಕೋರ್ಟ್‌ ಈಗ ತಣ್ಣಗೆ ತೆರೆ ಎಳೆದಿದೆ.

“ರಫೇಲ್‌ ಒಪ್ಪಂದ ಕುರಿತಂತೆ ನಾವು ಸಾಕಷ್ಟು ಅಧ್ಯಯನ ನಡೆಸಿದ್ದೇವೆ. ಈ ಬಗ್ಗೆ ವಾಯುಪಡೆಯ ಹಿರಿಯ ಅಧಿಕಾರಿಗಳೊಂದಿಗೂ ಮಾತನಾಡಿದ್ದೇವೆ. ಒಪ್ಪಂದ ಪ್ರಕ್ರಿಯೆಯ ಮೇಲೆ ಅನುಮಾನ ಪಡುವಂಥದ್ದು ಏನೂ ಇಲ್ಲ,” ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ ಅಭಿಪ್ರಾಯ ಪಟ್ಟಿದ್ದಾರೆ.

ಶುಕ್ರವಾರದ ನಾಟಕೀಯ ಬೆಳವಣಿಗೆಯಲ್ಲಿ ರಫೇಲ್‌ ಒಪ್ಪಂದ ಪ್ರಶ್ನಿಸಿದ್ದ ಎಲ್ಲಾ ಅರ್ಜಿಗಳನ್ನೂ ಸುಪ್ರೀಂಕೋರ್ಟ್‌ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ, ಸಂಜಯ್‌ ಕಿಶನ್‌ ಕೌಲ್‌ ಮತ್ತು ಕೆ.ಎಂ. ಜೋಸೆಫ್‌ ಅವರಿದ್ದ ನ್ಯಾಯಪೀಠ ರಫೇಲ್‌ ಒಪ್ಪಂದದಲ್ಲಿ ನ್ಯಾಯಾಂಗದ ಮಧ್ಯಪ್ರವೇಶಕ್ಕೆ ಅಸಮ್ಮತಿ ವ್ಯಕ್ತಪಡಿಸಿದೆ.

ಸುಪ್ರೀಂಕೋರ್ಟ್‌ನ ಈ ನಿರ್ಧಾರದಿಂದ ರಫೇಲ್‌ ಒಪ್ಪಂದದ ಬಹುಕೋಟಿ ಹಗರಣದ ಆರೋಪ ಹೊತ್ತಿದ್ದ ಪ್ರಧಾನಿ ನರೇಂದ್ರ ಮೋದಿ ತಾತ್ಕಾಲಿಕವಾಗಿ ಕಳಂಕ ಮುಕ್ತರಾಗಿದ್ದಾರೆ. 2019ರ ಚುನಾವಣೆಗೂ ರಫೇಲ್‌ ಹಗರಣದ ಅಸ್ತ್ರವನ್ನು ಪ್ರಯೋಗಿಸಲು ಸಿದ್ಧವಾಗಿದ್ದ ಕಾಂಗ್ರೆಸ್‌ನ ಬತ್ತಳಿಕೆಯಿಂದ ಒಂದು ಪ್ರಬಲ ಅಸ್ತ್ರವೊಂದು ಸದ್ಯಕ್ಕೆ ಕಳಚಿಕೊಂಡಂತಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಹೊತ್ತಿಗೇ ರಫೇಲ್‌ ಒಪ್ಪಂದದ ಬಗ್ಗೆ ರಾಹುಲ್‌ ಗಾಂಧಿ ‘ಅಸ್ಪಷ್ಟ’ವಾಗಿ ಮಾತನಾಡಲು ಶುರು ಮಾಡಿದ್ದರು. “ದೇಶದ ದೊಡ್ಡ ಹಗರಣವೊಂದು ತೆರೆಮರೆಯಲ್ಲೇ ಉಳಿದಿದೆ. ಎಚ್‌ಎಎಲ್‌ ಅನ್ನು ಬೈಪಾಸ್‌ ಮಾಡುವ ಮೂಲಕ ರಿಲಯನ್ಸ್‌ಗೆ ಅನುಕೂಲ ಮಾಡಿಕೊಡಲಾಗುತ್ತಿದೆ” ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದರು.

Join Samachara official: CLICK HERE

Also read: ‘ಇನ್ ಡೀಟೆಲ್’: 21ನೇ ಶತಮಾನದ ಮೆಘಾ ಡೀಲ್; ಏನಿದು ರಫೇಲ್‌?

ಮುಂದಿನ ಕೆಲ ತಿಂಗಳಲ್ಲಿ ರಫೇಲ್‌ ಒಪ್ಪಂದದ ಅಂತರಂಗ ಹಂತ ಹಂತವಾಗಿ ಬಯಲಾಗುತ್ತಾ ಹೋಯಿತು. ಯುಪಿಎ ಸರಕಾರದ ಅವಧಿಯಲ್ಲಿ 2012ರಲ್ಲಿ ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್ಸ್‌ ಕಂಪೆನಿಯ ಜತೆಗೆ 126 ರಫೇಲ್‌ ಯುದ್ಧ ವಿಮಾನಗಳ ಖರೀದಿಗೆ 54,000 ಕೋಟಿ ರೂಪಾಯಿಯ ಒಪ್ಪಂದವಾಗಿತ್ತು. ಆದರೆ, ಮೋದಿ ಅಧಿಕಾರಕ್ಕೆ ಬಂದ ಬಳಿಕ ಹಳೆಯ ಒಪ್ಪಂದ ರದ್ದುಪಡಿಸಿ 126 ರಫೇಲ್‌ ಯುದ್ಧ ವಿಮಾನಗಳ ಬದಲಿಗೆ 36 ರಫೇಲ್‌ ಯುದ್ಧ ವಿಮಾಗಳನ್ನು 58,000 ಕೋಟಿ ರೂಪಾಯಿಗೆ ಖರೀದಿಸುವ ಘೋಷಣೆಯಾಯಿತು. ಈ ಹೊಸ ಒಪ್ಪಂದಕ್ಕೆ 2016ರ ಸೆಪ್ಟೆಂಬರ್‌ 23ರಂದು ಅಂತಿಮ ಸಹಿ ಬಿದ್ದಿತ್ತು.

Also read: ಫ್ರೆಂಚ್ ಮೀಡಿಯಾ EXCLUSIVE: ಮೋದಿ, ಅಂಬಾನಿ ರಫೇಲ್ ಬಲೆ ಹೆಣೆದಿದ್ದು ಹೇಗೆ?

ಯುಪಿಎ ಅಧಿಕಾರಾವಧಿಯಲ್ಲಿ ಹೆಚ್ಚು ರಫೇಲ್‌ ಯುದ್ಧ ವಿಮಾನಗಳ ಖರೀದಿಗೆ ಕಡಿಮೆ ಬೆಲೆಯ ಒಪ್ಪಂದವಾಗಿದ್ದರೆ, ಹೊಸ ಒಪ್ಪಂದದಲ್ಲಿ ಕಡಿಮೆ ಯುದ್ಧ ವಿಮಾನಗಳಿಗೆ ಅತಿ ಹೆಚ್ಚಿನ ಬೆಲೆ ತೆರಲಾಗುತ್ತಿದೆ. ಅಲ್ಲದೆ ಭಾರತದಲ್ಲಿ ರಫೇಲ್‌ ಜೋಡಣೆಯ ಒಪ್ಪಂದದಿಂದ ಎಚ್‌ಎಎಲ್‌ ಅನ್ನು ಕೈಬಿಟ್ಟು, ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಡಿಫೆನ್ಸ್‌ ಕಂಪೆನಿಗೆ ವಹಿಸಿ ಅಂಬಾನಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು.

ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್‌ ರಫೇಲ್‌ ಹಗರಣವನ್ನೇ ಪ್ರಮುಖ ಅಸ್ತ್ರವಾಗಿ ಪ್ರಯೋಗಿಸುತ್ತಾ ಹೋಯಿತು. ಬಹುಶಃ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಇದೂ ಕೂಡಾ ಪ್ರಮುಖ ಕಾರಣವಾಗಿರಬಹುದು. ಮೋದಿ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬುದನ್ನು ಹೇಳಲು ರಾಹುಲ್‌ ಗಾಂಧಿ ಪದೇ ಪದೇ ಬಳಸಿಕೊಳ್ಳುತ್ತಿದ್ದುದು ರಫೇಲ್‌ ಒಪ್ಪಂದದ ಉದಾಹರಣೆಯನ್ನೇ.

Also read: ದಯವಿಟ್ಟು ಗಮನಿಸಿ, ನೀವು ಪ್ರಯಾಣಿಸುತ್ತಿರುವ ರಫೇಲ್ ವಿಮಾನವು ಸುಪ್ರಿಂ ಕೋರ್ಟ್‌ನಲ್ಲಿ ಲ್ಯಾಂಡ್ ಆಗುತ್ತಿದೆ...

ಯಶ್ವಂತ್‌ ಸಿನ್ಹಾ, ಅರುಣ್‌ ಶೌರಿ, ಪ್ರಶಾಂತ್‌ ಭೂಷಣ್‌, ವಕೀಲ ಮನೋಹರ್‌ ಲಾಲ್‌ ಶರ್ಮಾ ಮತ್ತು ಎಎಪಿ ಮುಖಂಡ ಸಂಜಯ್‌ ಸಿಂಗ್‌ ಮೋದಿ ಸರಕಾರದ ಹೊಸ ರಫೇಲ್‌ ಖರೀದಿ ಒಪ್ಪಂದವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಿದ್ದ ಸುಪ್ರೀಂಕೋರ್ಟ್‌ ಕೇಂದ್ರ ಸರಕಾರದಿಂದ ಒಪ್ಪಂದ ಕುರಿತ ಮಾಹಿತಿ ಕೇಳಿತ್ತು. ಆವರೆಗೆ ಗೌಪ್ಯತಾ ಕಾಯ್ದೆ, ರಕ್ಷಣಾ ಇಲಾಖೆಯ ವಿಚಾರ ಎಂಬ ಕಾರಣಗಳನ್ನು ನೀಡಿ, ರಾಷ್ಟ್ರೀಯ ಭದ್ರತೆಯ ನೆಪ ಮುಂದಿಟ್ಟು ಮಾಹಿತಿ ನೀಡಲು ನಿರಾಕರಿಸುತ್ತಿದ್ದ ಕೇಂದ್ರ ಸರಕಾರ ಮೊದಲ ಬಾರಿಗೆ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್‌ಗೆ ರಫೇಲ್‌ ಒಪ್ಪಂದದ ಮಾಹಿತಿ ಸಲ್ಲಿಸಿತ್ತು.

ಸುಪ್ರೀಂಕೋರ್ಟ್‌ ಕಣ್ಗಾವಲಿನಲ್ಲಿ ರಫೇಲ್‌ ಒಪ್ಪಂದದ ತನಿಖೆಯನ್ನು ಸಿಬಿಐ ನಡೆಸಬೇಕೆಂದು ವಿಪಕ್ಷಗಳ ಆಗ್ರಹ ಹೆಚ್ಚಾಗಿತ್ತು. ಆದರೆ, ಖುದ್ದು ಸುಪ್ರೀಂಕೋರ್ಟ್‌ ಈಗ ಯುದ್ಧ ವಿಮಾನಗಳ ಖರೀದಿ ವಿಚಾರದಲ್ಲಿ ತನ್ನ ಮಧ್ಯಪ್ರವೇಶ ಸಾಧ್ಯವಿಲ್ಲ ಎಂದಿದೆ. ಖರೀದಿ ಒಪ್ಪಂದದ ಬಗ್ಗೆ ಅನುಮಾನ ವ್ಯಕ್ತಪಡಿಸಲು ಈ ಹಂತದಲ್ಲಿ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಆದರೆ, ಹಳೆಯ ಒಪ್ಪಂದದ ಖರೀದಿ ಮೌಲ್ಯ ಹಾಗೂ ಹೊಸ ಒಪ್ಪಂದದ ಖರೀದಿ ಮೌಲ್ಯದ ಬಗ್ಗೆ ಸುಪ್ರೀಂಕೋರ್ಟ್‌ ತಾರ್ಕಿಕ ಅಂಶಗಳನ್ನು ಮುಂದಿಟ್ಟಿಲ್ಲ. 36 ರಫೇಲ್‌ ಯುದ್ಧ ವಿಮಾನಗಳ ಖರೀದಿ ಒಪ್ಪಂದವನ್ನು ‘ಸೂಕ್ಷ್ಮ ವಿಚಾರ’ ಎಂದು ಕರೆದಿರುವ ನ್ಯಾಯಪೀಠ ಈ ವಿಚಾರದ ತನಿಖೆಯ ಉಸ್ತುವಾರಿ ವಹಿಸಲು ಹಿಂದೇಟು ಹಾಕಿದೆ.

Also read: ‘ರಫೇಲ್ ಅಕಾ ಮೋದಿ ಬೋಫೋರ್ಸ್‌’: ಹಗರಣ ಅರ್ಥಮಾಡಿಕೊಳ್ಳಲು ಮುಂದಿಟ್ಟ ಆ 22 ಅಂಶಗಳು...

“ನನ್ನ ಅಭಿಪ್ರಾಯದಲ್ಲಿ ಸುಪ್ರೀಂಕೋರ್ಟ್‌ನ ಈ ನಿರ್ಧಾರ ಸಂಪೂರ್ಣ ತಪ್ಪು” ಎಂದು ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಹೇಳಿದ್ದಾರೆ. “ಮೋದಿ ಸರಕಾರಕ್ಕೆ ಇದು ಒಂದುಮಟ್ಟದ ಸಮಾಧಾನ ಅಷ್ಟೇ. ನಾವು ಎತ್ತಿದ್ದ ಹಲವು ವಿಚಾರಗಳನ್ನು ಸುಪ್ರೀಂಕೋರ್ಟ್‌ ಪರಿಗಣಿಸಿಲ್ಲ. ತೀರ್ಪಿನ ಬಗ್ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸುವ ಬಗ್ಗೆ ಚಿಂತನೆ ನಡೆದಿದೆ” ಎಂದು ಭೂಷಣ್‌ ಹೇಳಿದ್ದಾರೆ.

ರಫೇಲ್‌ ಖರೀದಿ ಒಪ್ಪಂದದಲ್ಲಿ ನ್ಯಾಯಾಂಗದ ಮಧ್ಯಪ್ರವೇಶ ಅನಗತ್ಯ ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್‌, ಮಿಗ್-21 ಯುದ್ಧ ವಿಮಾನ ಖರೀದಿಯ ಬಳಿಕ ದಶಕಗಳ ನಂತರ ಭಾರತೀಯ ವಾಯು ಸೇನೆಗೆ ಹೊಸ ಯುದ್ಧ ವಿಮಾನಗಳ ಸೇರ್ಪಡೆಗೆ ಹಾದಿ ಮಾಡಿಕೊಟ್ಟಿದೆ. ಸುಪ್ರೀಂಕೋರ್ಟ್‌ನ ಈ ತೀರ್ಪು ವಿಧಾನಸಭಾ ಚುನಾವಣೆಯ ಸೋಲಿನ ಭಾರದಲ್ಲಿದ್ದ ಬಿಜೆಪಿಗೆ ಸದ್ಯಕ್ಕಂತೂ ನೆಮ್ಮದಿ ನೀಡಿದೆ.