samachara
www.samachara.com
ಕಾರವಾರದ ಈ ‘ಹವಳ ದಿಬ್ಬ’ಗಳನ್ನು ಕರ್ನಾಟಕ ಜನ ಯಾಕೆ ಉಳಿಸಿಕೊಳ್ಳಬೇಕು?
COVER STORY

ಕಾರವಾರದ ಈ ‘ಹವಳ ದಿಬ್ಬ’ಗಳನ್ನು ಕರ್ನಾಟಕ ಜನ ಯಾಕೆ ಉಳಿಸಿಕೊಳ್ಳಬೇಕು?

ಹವಳದ ದಿಬ್ಬಗಳು ಇದ್ದಲ್ಲಿ ಆ ಜಾಗದಲ್ಲಿ ಜೀವ ವೈವಿಧ್ಯಗಳು ಇರುತ್ತವೆ. ಜಗತ್ತಿನಲ್ಲಿ ಮಳೆಯ ಕಾಡುಗಳನ್ನು ಬಿಟ್ಟರೆ ಅತೀ ಹೆಚ್ಚಿನ ಜೀವ ವೈವಿಧ್ಯಗಳು ಇರುವುದು ಹವಳದ ದಿಬ್ಬಗಳಲ್ಲಿ.

ಹವಳದ ದಿಬ್ಬಗಳ ಬಗ್ಗೆ ಕೇಳಿರುತ್ತೀರಿ. ಅಸ್ಟ್ರೇಲಿಯಾದ ‘ಗ್ರೇಟ್‌ ಬ್ಯಾರಿಯರ್‌ ರೀಫ್‌’ ಎಂಬ ಹವಳದ ದಿಬ್ಬ ಜಗದ್ವಿಖ್ಯಾತಿ ಪಡೆದಿದೆ. ಈಗ ಅಂಥಹದ್ದೇ ಹವಳದ ದಿಬ್ಬವೊಂದು ಕಾರವಾರ ಸಮೀಪದ ಅರಬ್ಬೀ ಸಮುದ್ರದಲ್ಲಿ ಬೆಳೆಯುತ್ತಿದೆ. ಇಲ್ಲಿನ ದೇವಗಡ ದ್ವೀಪ (ಲೈಟ್‌ಹೌಸ್‌)ದ ಸಮೀಪ ಈ ಹವಳದ ಪ್ರಬೇಧಗಳು ಸೃಷ್ಟಿಯಾಗಿವೆ.

ಇಲ್ಲಿ 2006ರಲ್ಲಿ ಇರಾನ್‌ನಿಂದ ಕಾರವಾರಕ್ಕೆ ಕಚ್ಚಾತೈಲ ತುಂಬಿಕೊಂಡು ಬಂದಿದ್ದ ‘ಎಂ.ಎನ್‌. ಓಶಿಯನ್ ಸರಯ’ ಎಂಬ ಹೆಸರಿನ ಹಡಗು ಮುಳುಗಡೆಯಾಗಿತ್ತು. ಮುಂದೆ ಹಡಗಿನ ಅರ್ಧ ಭಾಗವನ್ನು ಮೇಲೆತ್ತಲಾಗಿತ್ತು. ಇನ್ನರ್ಧ ಭಾಗ ಸಮುದ್ರದೊಳಗೆಯೇ ಉಳಿದುಕೊಂಡಿತ್ತು.

ಇದೀಗ ಈ ಹಡಗಿನ ಅವಶೇಷಗಳ ಮೇಲೆ ಹವಳಗಳು ಬೆಳೆಯುತ್ತಿರುವುದು ಪತ್ತೆಯಾಗಿದೆ. ಇತ್ತೀಚೆಗೆ ದೇವಗಡ ದ್ವೀಪದಲ್ಲಿ ಮುರ್ಡೇಶ್ವರದ ‘ನೇತ್ರಾಣಿ ಅಡ್ವೆಂಚರ್ಸ್‌ ತಂಡ’ದ ಸದಸ್ಯರು ಸ್ಕೂಬಾ ಡೈವ್‌ ಮಾಡಿದ್ದರು. ಈ ಸಂದರ್ಭದಲ್ಲಿ 15 ಮೀಟರ್‌ ಸಮುದ್ರದಾಳದಲ್ಲಿ ಹವಳ ಬೆಳೆದಿರುವುದನ್ನು ಗಮಿನಿಸಿದ್ದಾರೆ. ಮಾತ್ರವಲ್ಲ ಇದರ ಚಿತ್ರಗಳನ್ನೂ ತೆಗೆದುಕೊಂಡಿದ್ದಾರೆ.

ಕಾರವಾರ ಸಮೀಪದಲ್ಲಿರುವ ದೇವಗಡ ದ್ವೀಪ.
ಕಾರವಾರ ಸಮೀಪದಲ್ಲಿರುವ ದೇವಗಡ ದ್ವೀಪ.
/ಮೈ ಟ್ರಿಪ್‌ ಅಡ್ವೈಸರ್ಸ್‌

ಈ ಚಿತ್ರಗಳನ್ನು ನೋಡಿ ಕರ್ನಾಟಕ ವಿವಿಯ ಸ್ನಾತಕೋತ್ತರ ಸಾಗರ ಜೀವ ವಿಜ್ಞಾನ ಕೇಂದ್ರದ ಅಧ್ಯಕ್ಷ ಜಗನ್ನಾಥ ರಾಥೋಡ್‌ ಹವಳ ಬೆಳೆದಿರುವುದನ್ನು ಖಚಿತಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

‘ಇದು ಗಟ್ಟಿ ಹವಳವಾಗಿದ್ದು, ಕಾರವಾರ ಭಾಗದಲ್ಲಿ ಪತ್ತೆಯಾಗಿದ್ದು ಇದೇ ಮೊದಲು. ಹೊನ್ನಾವರ ತಾಲ್ಲೂಕಿನ ಮಂಕಿ ಸಮೀಪದ ಸಮುದ್ರದಲ್ಲಿ ಮೆದು ಹವಳ ಈ ಹಿಂದೆ ಕಂಡುಬಂದಿತ್ತು. ಸಾಧಾರಣವಾಗಿ ಈ ಜೀವಿಗಳು ಮೂರರಿಂದ ನಾಲ್ಕು ವರ್ಷಗಳ ಅವಧಿಯಲ್ಲಿ ಸಂಪೂರ್ಣವಾಗಿ ಬೆಳೆಯುತ್ತವೆ. ಅವುಗಳ ಜತೆಗೆ ಬೇರೆ ಬೇರೆ ರೀತಿಯ ಜೀವಿಗಳೂ ವಾಸ ಮಾಡುತ್ತವೆ. ಹಾಗಾಗಿ ಈ ಭಾಗದಲ್ಲಿ ಜೀವವೈವಿಧ್ಯ ಇರುವುದು ಖಚಿತವಾಗುತ್ತದೆ,’ ಎಂದು ಅವರು ವಿವರಿಸಿದ್ದಾರೆ.

ಹವಳದ ದಿಬ್ಬಗಳು ಮತ್ತು ಜೀವ ವೈವಿಧ್ಯ:

ಹವಳದ ದಿಬ್ಬಗಳು ಇದ್ದಲ್ಲಿ ಆ ಜಾಗದಲ್ಲಿ ಜೀವ ವೈವಿಧ್ಯಗಳು ಇರುತ್ತವೆ. ಜಗತ್ತಿನಲ್ಲಿ ಮಳೆಯ ಕಾಡುಗಳನ್ನು ಬಿಟ್ಟರೆ ಅತೀ ಹೆಚ್ಚಿನ ಜೀವ ವೈವಿಧ್ಯಗಳು ಇರುವುದು ಹವಳದ ದಿಬ್ಬಗಳಲ್ಲಿ. ಮಳೆಯ ಕಾಡುಗಳು ಭೂಮಿಯ ಮೇಲೆಯಾದರೆ, ಹವಳದ ದಿಬ್ಬಗಳು ಸಮುದ್ರದಾಳದಲ್ಲಿ ಎನ್ನುವುದಷ್ಟೇ ವ್ಯತ್ಯಾಸ.

ಆದರೆ ಸದ್ಯ ಮಾಲಿನ್ಯ, ಅತಿಯಾದ ಮೀನುಗಾರಿಕೆಯಿಂದ ಈ ಹವಳದ ದಿಬ್ಬಗಳು ನಶಿಸುತ್ತಿವೆ. ಹೀಗಾಗಿ ಇದನ್ನು ರಕ್ಷಿಸಬೇಕು ಎಂಬ ಕೂಗು ವಿಶ್ವದಾದ್ಯಂತ ಕೇಳಿ ಬರುತ್ತಿದೆ. ಗ್ರೇಟ್‌ ಬ್ಯಾರಿಯರ್‌ ರೀಫ್‌ ಫೌಂಡೇಷನ್‌, ರೀಫ್‌ ಬಾಲ್‌ ಫೌಂಡೇಷನ್‌ ಮೊದಲಾದ ಸಂಸ್ಥೆಗಳು ಸಾಗರದಾಳದ ಜೀವ ಪ್ರಬೇಧದ ರಕ್ಷಣೆಗಾಗಿ ಕೃತಕ ಹವಳದ ದಿಬ್ಬಗಳ ರಚನೆಯಲ್ಲಿ ತೊಡಗಿಸಿಕೊಂಡಿವೆ.

ಇದೇ ಹೊತ್ತಲ್ಲಿ ಕಾರವಾರದ ಕರಾವಳಿಯಲ್ಲಿ ಹವಳದ ದಿಬ್ಬಗಳು ನೈಸರ್ಗಿಕವಾಗಿ ಹುಟ್ಟಿಕೊಂಡಿವೆ. “ಸಮುದ್ರದಾಳದಲ್ಲಿ ಬೃಹತ್‌ ವಸ್ತುಗಳು ಮುಳುಗಿದಾಗ ಅವುಗಳನ್ನು ಆಶ್ರಯಿಸಿ ಸೂಕ್ಷ್ಮ ಜೀವಿಗಳು ಬೆಳೆಯುತ್ತವೆ. ಜೀವ ವಿಜ್ಞಾನದ ಪ್ರಕಾರ ಇವುಗಳು ಸಾಗರ ಜೀವಿಗಳಿಗೆ ಆಹಾರದ ಕಣಜದಂತೆ ಕೆಲಸ ಮಾಡುತ್ತವೆ. ಪರಿಣಾಮ ಇದನ್ನು ಆಶ್ರಯಿಸಿ ನಾನಾ ಬಗೆಯ ಮೀನುಗಳು ಸ್ಥಳಕ್ಕೆ ಬರುತ್ತವೆ. ಹೀಗೆ ಜೀವ ವೈವಿದ್ಯ ಬೆಳೆಯುತ್ತಾ ಹೋಗುತ್ತದೆ,” ಎಂದು ಜೀವಶಾಸ್ತ್ರ ವಿಜ್ಞಾನಿ ಡಾ. ಶಿವಕುಮಾರ್‌ ಹರಗಿ ‘ವಿಜಯ ಕರ್ನಾಟಕ’ಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಹವಳದ ದಿಬ್ಬಗಳಲ್ಲಿ  ಜೀವ ವೈವಿಧ್ಯ.
ಹವಳದ ದಿಬ್ಬಗಳಲ್ಲಿ ಜೀವ ವೈವಿಧ್ಯ.
/Thrillophilia

ಸಾಗರದ ಆಳದಲ್ಲಿ ಬದುಕು:

ಸಾಗರದ ಆಳದಲ್ಲಿ ಕಂಡುಬರುವ ಹವಳಗಳು ಒಂದು ರೀತಿಯ ಹುಳುಗಳು. ಇವು ಮನುಷ್ಯರಂತೆ ಸಂಘ ಜೀವಿಗಳು. ಕೆಲವೊಂದು ಪ್ರಭೇದಗಳು ಮಾತ್ರ ಒಂಟಿಯಾಗಿಯೂ ಜೀವಿಸುತ್ತವೆ. ಇವುಗಳು ಬದುಕಲು ದಿಬ್ಬಗಳನ್ನು ಕಟ್ಟುತ್ತಾ ಹೋಗುತ್ತವೆ. 18 ರಿಂದ 33 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇರುವ ಸಮುದ್ರದ ಮೇಲ್ಭಾಗದಿಂದ ಗರಿಷ್ಠ 60 ಮೀಟರ್‌ ಆಳದವರೆಗೆ ಇವುಗಳು ವಾಸಿಸುತ್ತವೆ.

ಸಾಗರದ ಜೀವ ವೈವಿಧ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಈ ಹವಳ ದ್ವೀಪಗಳ ರಕ್ಷಣೆ ಅತ್ಯಂತ ಮಹತ್ವದ್ದು. ಒಂದು ಅಂದಾಜಿನ ಪ್ರಕಾರ ಇದೇ ರೀತಿಯ ವಾತಾವರಣ ಇದ್ದಲ್ಲಿ 2050ರ ವೇಳೆಗೆ ಶೇಕಡಾ 70 ರಷ್ಟು ಹವಳದ ದಿಬ್ಬಗಳು ನಶಿಸಿ ಹೋಗುತ್ತವೆ ಎನ್ನುತ್ತಾರೆ ತಜ್ಞರು. ಅಂಥಹದ್ದರಲ್ಲಿ ಇದೀಗ ಕಾರವಾರದಲ್ಲಿ ಈ ಹವಳದ ದಿಬ್ಬಗಳು ಕಾಣಿಸಿಕೊಂಡಿವೆ. ಅಪರೂಪದ ಈ ದಿಬ್ಬಗಳನ್ನು ಉಳಿಸುವ ಜವಬ್ದಾರಿ ಈಗ ಸರಕಾರದ ಮೇಲಿದೆ. ಅದಕ್ಕಾಗಿ ಹವಳದ ದಿಬ್ಬಗಳು ಮತ್ತು ಮಹತ್ವವನ್ನು ಅರ್ಥಮಾಡಿಕೊಳ್ಳಬೇಕಿದೆ.