samachara
www.samachara.com
ಕೃಷಿ ಬಿಕ್ಕಟ್ಟಿಗೆ ಮೊದಲ ಪರಿಹಾರ; ರೈತರ ಮಾಸಿಕ ಆದಾಯ (ತಿಂಗಳ ಸಂಬಳ)ಕ್ಕೆ ವ್ಯವಸ್ಥೆ ಮಾಡಿ!
COVER STORY

ಕೃಷಿ ಬಿಕ್ಕಟ್ಟಿಗೆ ಮೊದಲ ಪರಿಹಾರ; ರೈತರ ಮಾಸಿಕ ಆದಾಯ (ತಿಂಗಳ ಸಂಬಳ)ಕ್ಕೆ ವ್ಯವಸ್ಥೆ ಮಾಡಿ!

ಮೊದಲು ನಡೆಯುವ ಮತ ಮಹಾಸಮರದಲ್ಲಿ ರೈತರನ್ನು ಕೇಂದ್ರವಾಗಿಟ್ಟುಕೊಂಡು ಒಂದಷ್ಟು ಚಟುವಟಿಕೆಗಳು ನಡೆಯಬೇಕಿದೆ. ಅದಕ್ಕಾಗಿ ಈಗ ಎದ್ದಿರುವ ಚರ್ಚೆಯನ್ನು ವಿಸ್ತರಿಸುವುದು ಈ ಹೊತ್ತಿಗೆ ಅತ್ಯಂತ ಅಗತ್ಯವಾಗಿರುವ ವಿಚಾರ ಕೂಡ.

ಅಮೆರಿಕಾ ಮೂಲದ ‘ರಾಯ್ಟರ್ಸ್‌’ ಸುದ್ದಿ ಸಂಸ್ಥೆ ‘ಸರಕಾರದ ಮೂಲ’ಗಳನ್ನು ಉಲ್ಲೇಖಿಸಿ ಪ್ರಕಟಿಸಿದ ಒಂದು ‘ವಿಶ್ಲೇಷಣೆ’ ಭಾರತದ ರಾಜಕೀಯವನ್ನು ರೈತರ ಸುತ್ತ ತಂದಿಟ್ಟಿದೆ. ‘ಮುಂದಿನ ಲೋಕಸಭೆ ಚುನಾವಣೆ ಒಳಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರಕಾರ ರೈತರ ಸಾಲ ಮನ್ನಾ ಮಾಡಬಹುದು’ ಎಂಬ ಟಿವಿ ಚರ್ಚೆಗಳಿಗೆ ಇದು ನಾಂದಿ ಹಾಡಿದೆ; ದೇಶದ ಕೃಷಿ ಕ್ಷೇತ್ರದ ಕುರಿತು ಚರ್ಚೆಗಳು ನಡೆದುಕೊಂಡು ಬರುತ್ತಿರುವ ಸಮಯದಲ್ಲಿ ಇದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆ.

ಮುಂದಿನ ವರ್ಷದ ಇಷ್ಟೊತ್ತಿಗೆ ಹೊಸ ಸರಕಾರ ದೇಶದಲ್ಲಿ ಅಸ್ತಿತ್ವಕ್ಕೆ ಬಂದಿರುತ್ತದೆ. ಅದಕ್ಕೂ ಮೊದಲು ನಡೆಯುವ ಮತ ಮಹಾಸಮರದಲ್ಲಿ ರೈತರನ್ನು ಕೇಂದ್ರವಾಗಿಟ್ಟುಕೊಂಡು ಒಂದಷ್ಟು ಚಟುವಟಿಕೆಗಳು ನಡೆಯಬೇಕಿದೆ. ಅದಕ್ಕಾಗಿ ಈಗ ಎದ್ದಿರುವ ಚರ್ಚೆಯನ್ನು ವಿಸ್ತರಿಸುವುದು ಈ ಹೊತ್ತಿಗೆ ಅತ್ಯಂತ ಅಗತ್ಯವಾಗಿರುವ ವಿಚಾರ ಕೂಡ.

ಕಳೆದ 10 ವರ್ಷಗಳಲ್ಲಿ ಈ ದೇಶದ ಸುಮಾರು 3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘ಭಯೋತ್ಪಾದನೆ ವಿರುದ್ಧ ಸಮರ’ಕ್ಕೆ ಈ ದೇಶದಲ್ಲಿ 21 ವರ್ಷಗಳಲ್ಲಿ (1994-2016) ಮಡಿದ ಸೈನಿಕರ ಸಂಖ್ಯೆ 9,720. ಇದೊಂದು ಅಂಕಿ ಅಂಶದ ಹೋಲಿಕೆ ಸಾಕು, ಭಾರತದ ಕೃಷಿ ಕ್ಷೇತ್ರದ ಅಂತರಾಳದ ಬಿಕ್ಕಟ್ಟಿನ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಲು. ಈ ಹಿನ್ನೆಲೆಯಲ್ಲಿ ಸಾಲ ಮನ್ನಾ ಸಾಧ್ಯತೆಯನ್ನು ರಾಜಕೀಯ ಪರಿಣಾಮಗಳ ಆಚೆಗೆ ಕೊಂಡೊಯ್ಯಲೇಬೇಕಿದೆ.

ಹಿಂದಿ ಭಾಷಿಕರನ್ನು ದೊಡ್ಡ ಸಂಖ್ಯೆಯಲ್ಲಿ ಹೊಂದಿರುವ ಮೂರು ರಾಜ್ಯಗಳಲ್ಲಿ ಬಿಜೆಪಿ ಸೋಲಲು, ಅಲ್ಲಿ ಪ್ರಭಾವವನ್ನು ಹೊಂದಿರುವ ಗ್ರಾಮೀಣ ಭಾಗ ಶೇ. 70ರಷ್ಟು ರೈತರು ಕಾರಣ ಎಂಬುದು ಆರಂಭಿಕ ವಿಶ್ಲೇಷಣೆಗಳು. ಹೀಗಾಗಿಯೇ, ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಗ್ರಾಮೀಣ ಭಾಗದ ಬೆಂಬಲವನ್ನು ನಿರೀಕ್ಷಿಸುವ ಸಾಧ್ಯತೆಯನ್ನು ವರದಿಗಳು ಹೇಳುತ್ತಿವೆ.

ರೈತರ ಸಾಲ ಮನ್ನಾ ವಿಚಾರ ಬಂದಾಗ ಇತ್ತೀಚಿನ ದಿನಗಳಲ್ಲಿ ದೇಶದ ಗಮನ ಸೆಳೆದ ರಾಜ್ಯ ಕರ್ನಾಟಕ. ಕಳೆದ ವರ್ಷದ ಅಂತರದಲ್ಲಿ ಎರಡೆರಡು ಸರಕಾರಗಳು ರೈತರ ಸಾಲ ಮನ್ನಾ ಯೋಜನೆಗಳನ್ನು ಜಾರಿಗೆ ತಂದಿವೆ. ಹಾಗಂತ ಇಲ್ಲಿನ ರೈತರು ಒಂದೇ ಪಕ್ಷಕ್ಕೆ ಅಧಿಕಾರವನ್ನೇನೂ ನೀಡಿಲ್ಲ. ಯಾಕೆಂದರೆ, ಸಾಲ ಮನ್ನಾ ಯೋಜನೆ ಜಾರಿಗೆ ಬಂದರೂ ಹಲವು ರೈತರಿಗೆ ಸರಕಾರದ ಯೋಜನೆಯ ಫಲ ಇನ್ನೂ ಸಿಕ್ಕಿಲ್ಲ. ಒಂದು ವೇಳೆ ಎಲ್ಲಾ ರೈತರಿಗೆ ಸಿಕ್ಕರೂ ಕೃಷಿ ಕ್ಷೇತ್ರದ ಒಟ್ಟಾರೆ ಬಿಕ್ಕಟ್ಟಿಗೆ ಪರಿಹಾರ ಸಿಗಲು ಸಾಧ್ಯವೂ ಇಲ್ಲ. ಸಾಲ ಮನ್ನಾ ತಾತ್ಕಾಲಿಕವಾಗಿ ಗಮನ ಸೆಳೆಯುತ್ತದಾದರೂ, ಅದು ರಾಜಕೀಯ ಫಲ ನೀಡೇ ಬಿಡುತ್ತದೆ ಎನ್ನಲು ಸಾಧ್ಯವಿಲ್ಲ. ಕಾರಣ, ಕೃಷಿ ಕ್ಷೇತ್ರದ ಒಳಗಿರುವ ಹುಣ್ಣುಗಳು. ಅವುಗಳಿವತ್ತು ವ್ರಣಗಳ ರೂಪವನ್ನು ಪಡೆದುಕೊಂಡಿವೆ.

ಇಷ್ಟಕ್ಕೂ ಈ ಕ್ಷೇತ್ರದ ಸಮಸ್ಯೆಯ ಸ್ವರೂಪವಾದರೂ ಹೇಗಿದೆ?; ಕರ್ನಾಟಕ ಕೃಷಿ ಬೆಲೆ ಆಯೋಗ 2017ರ ಡಿಸೆಂಬರ್‌ನಲ್ಲಿ ತಂದ ‘ಪರ್ಸ್‌ಪೆಕ್ಟಿವ್ ರಿಪೋರ್ಟ್’ ಈ ಕುರಿತು ಗಾಬರಿಯಾಗುವಂತಹ ಒಳನೋಟಗಳನ್ನು ನೀಡುತ್ತದೆ.

ಶಿವಮೊಗ್ಗ, ದಾವಣಗೆರೆ, ರಾಯಚೂರು ಜಿಲ್ಲೆಗಳ ಹಳ್ಳಿಗಳಲ್ಲಿ ಒಂದು ಎಕರೆ ಭತ್ತ ಬೆಳೆಯುವ ಕೃಷಿ ಕುಟುಂಬವೊಂದರ ಮಹಿಳೆಯೊಬ್ಬರಿಗೆ ಒಂದು ಖಾರೀಫ್ ಬೆಳೆಯಿಂದ ಸಿಗುವ ಆದಾಯ 179 ರೂಪಾಯಿಗಳು. ಅಂದರೆ ವರ್ಷದಲ್ಲಿ ಎರಡು ಬೆಳೆ ತೆಗೆದರೆ ವಾರ್ಷಿಕ ಆದಾಯ 358 ರೂಪಾಯಿಗಳು! ಇನ್ನು, ಪುರುಷ ರೈತಾಪಿಗಳಿಗೆ ಒಂದು ಎಕರೆ ಪ್ರದೇಶದ ಖಾರೀಪ್ ಬೆಳೆಯಿಂದ ಸಿಗುವ ಆದಾಯದ ಕತೆ ಕೂಡ ಹೆಚ್ಚು ಕಡಿಮೆ ಇಷ್ಟೆ ಇದೆ. (ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಕೃಷಿ ಆದಾಯದ ಚಿತ್ರಣ ಹೇಗಿದೆ ಎಂಬುದರ ಸಂಪೂರ್ಣ ವಿವರ ಸರಕಾರದ ವರದಿಯಲ್ಲಿದೆ.) ಇದು ತಳಮಟ್ಟದ ಪರಿಸ್ಥಿತಿ.

ಕೃಷಿಯನ್ನು ನಂಬಿಕೊಂಡು ರೈತರು ಬದುಕಬೇಕು, ದೇಶದ ಜನರ ಹೊಟ್ಟೆ ತುಂಬಿಸಲು ಆಹಾರ ಧಾನ್ಯಗಳನ್ನು ಬೆವರಿಳಿಸಿಕೊಂಡು ಬೆಳೆಯಬೇಕು. ಆದರೆ ರೈತಾಪಿ ಕುಟುಂಬದ ಮನೆಯ ಕಟ್ಟಕಡೆಯ ಹೆಂಗಸು ತನ್ನ ಶ್ರಮಕ್ಕೆ ಸಿಗುವ 179 ರೂಪಾಯಿಗಳ ಪ್ರತಿಫಲದಲ್ಲಿ 6 ತಿಂಗಳು ಸಂಸಾರ ನೂಕಬೇಕು. ಯಾವುದೇ ಆಯಾಮದಿಂದ ನೋಡಿದರೂ ಮಾನವೀಯ ಅನ್ನಿಸದ ಇಂತಹದೊಂದು ಸಾಮಾಜಿಕ ಸಂರಚನೆಯನ್ನು ಕೃಷಿ ಕ್ಷೇತ್ರ ಇವತ್ತು ಹೊಂದಿದೆ. ಇದನ್ನು ಸರಿ ಮಾಡಲು ಸಾಲ ಮನ್ನಾ ಜಾರಿಯಾದರೆ ಸಾಕಾ?

ಸಾಲ ಮನ್ನಾ ಮಾತ್ರವೇ ಕೃಷಿ ಕ್ಷೇತ್ರದ ಬಿಕ್ಕಟ್ಟುಗಳನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಕೃಷಿ ತಜ್ಞರಿಂದ ಹಿಡಿದು ಈ ದೇಶದ ಸಾಮಾನ್ಯ ರೈತರೂ ಹೇಳುತ್ತಾರೆ. ಹಾಗಿದ್ದೂ ಸರಕಾರಗಳು ಕೃಷಿ ಬಿಕ್ಕಟ್ಟಿನ ವಿಚಾರ ಯಾವುದೇ ಕಾರಣಕ್ಕೆ ಮುನ್ನೆಲೆಗೆ ಬಂದರೂ, ಸಾಲ ಮನ್ನಾ ಎಂಬ ಅಸ್ತ್ರವನ್ನು ತೂರಿ ಬಿಡುತ್ತವೆ. ಇದು ಅತ್ಯಂತ ಸುಲಭ ಹಾಗೂ ಪರಿಣಾಮಕಾರಿ ಎಂಬುದನ್ನು ಈ ಕಾಲಘಟ್ಟದ ರಾಜಕಾರಣಿಗಳು ಅರ್ಥ ಮಾಡಿಕೊಂಡಿದ್ದಾರೆ. ಸಾಲ ಮನ್ನಾ ತಾತ್ಕಾಲಿಕ ನೆಲೆಯಲ್ಲಿ ಸಮಸ್ಯೆಯನ್ನು ಅಡಗಿಸಿಡುತ್ತದೆ ಮಾತ್ರವಲ್ಲ, ಕಡಿಮೆ ಅಂತರದಲ್ಲಿ ಚುನಾವಣೆಗಳಿದ್ದರೆ ಒಂದಷ್ಟು ಫಲವನ್ನೂ ನೀಡುತ್ತದೆ. ಹಾಗಂತ, ಸಾಲ ಮನ್ನಾ ಯೋಜನೆಯ ಕಾರಣಕ್ಕೆ ಗ್ರಾಮೀಣ ಭಾಗದ ರೈತರು ಸರಕಾರಗಳನ್ನು ಖಂಡಿತಾ ಬೆಂಬಲಿಸುತ್ತಾರೆ ಅಂತೇನೂ ಅಲ್ಲ. ಹಾಗಿದ್ದರೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮರು ಆಯ್ಕೆಯಾಗಬೇಕಿತ್ತು. ಸಮಸ್ಯೆಯ ಮೂಲಕ್ಕೆ ಪರಿಹಾರ ನೀಡದೆ, ಮೇಲ್ಮಟ್ಟದದಲ್ಲಿ ಸಾಲ ಮನ್ನಾ ಎಂಬ ಮುಲಾಮು ದೊಡ್ಡ ಕೆಲಸ ಮಾಡುವುದಿಲ್ಲ ಎಂಬುದಕ್ಕೆ ಇದು ಸಾಕ್ಷಿ. ಇಷ್ಟಕ್ಕೂ ಕೃಷಿ ಕ್ಷೇತ್ರದ ಬಿಕ್ಕಟ್ಟುಗಳಿಗೆ ಪರಿಹಾರ ಏನು?

ಭಾರತದ ಕೃಷಿ ಸಮಸ್ಯೆಗೆ ಮೂಲಗಳನ್ನು ಹಾಗೂ ಅವುಗಳಿಗೆ ಪರಿಹಾರಗಳನ್ನು ದೊಡ್ಡ ಮಟ್ಟದಲ್ಲಿ ತಜ್ಞರು ದೇಶದ ಮುಂದಿಡುತ್ತಲೇ ಬಂದಿದ್ದಾರೆ. ಅದರಲ್ಲಿ ಕೃಷಿಗಾಗಿ ವಿಶೇಷ ಪ್ಯಾಕೇಜ್‌ನಿಂದ ಹಿಡಿದು ವಿಶೇಷ ಅಧಿವೇಶನದ ಅಗತ್ಯವನ್ನು ಪ್ರತಿಭಟನೆಗಳ ಮೂಲಕ ಸರಕಾರಕ್ಕೆ ಅರ್ಥ ಪಡಿಸುವ ಪ್ರಯತ್ನ ನಡೆದಿವೆ. ಕೃಷಿ ತಜ್ಞ ದೇವಿಂದರ್ ಶರ್ಮಾ 2015ರಲ್ಲಿ, ದೇಶದ ರೈತರ ಆತ್ಮಹತ್ಯೆ ತಡೆಗೆ ಪರಿಹಾರ ಪ್ಯಾಕೇಜ್‌ಗಳಾಗಲೀ, ಸಾಲ ಮನ್ನಾ ಯೋಜನೆಗಳಾಗಲಿ ಹೆಚ್ಚು ಸಹಾಯ ಮಾಡುವುದಿಲ್ಲ ಎಂದರು. ಅದಕ್ಕಿಂತ ಮುಖ್ಯವಾಗಿ ಕೃಷಿ ಬಿಕ್ಕಟ್ಟುಗಳ ಪರಿಹಾರಕ್ಕೆ ಮೊದಲ ಹೆಜ್ಜೆ ಏನಾಗಿರಬೇಕು ಎಂಬುದನ್ನು ಶರ್ಮಾ ತಿಳಿಸಿದರು. ಅವರ ವರದಿಯಲ್ಲಿ, ರೈತಾಪಿ ಜನರ ಮಾಸಿಕ ಆದಾಯ ಹೆಚ್ಚಿಸುವುದೇ ಕೃಷಿ ಬಿಕ್ಕಟ್ಟಿಗೆ ಪರಿಹಾರ ಹುಡುಕುವ ಮಾರ್ಗದಲ್ಲಿ ಮೊದಲ ಹೆಜ್ಜೆ ಎಂದು ಪ್ರತಿಪಾದಿಸಿದ್ದಾರೆ. ಅದಕ್ಕಾಗಿ ದೇಶಾದ್ಯಂತ ರೈತರ ಅಂಕಿ ಅಂಶಗಳನ್ನು, ಸರಕಾರ ವರದಿಗಳನ್ನು ಉಲ್ಲೇಖಿಸಿದ್ದಾರೆ. ಈ ಕುರಿತು ಆಸಕ್ತಿ ಇರುವವರು ಇತ್ತೀಚೆಗೆ ದೇವಿಂದರ್ ಶರ್ಮಾ ಇದೇ ವರ್ಷ ಜೂನ್‌ನಲ್ಲಿ ‘ದಿ ಡಿಪ್ಲೊಮಾಟ್‌’ಗೆ ನೀಡಿದ ಲೇಖನವನ್ನೂ ಗಮನಿಸಬಹುದು.

ಇದು ಸದ್ಯದ ರಾಜಕೀಯ ಹಾಗೂ ವಾಸ್ತವದಲ್ಲಿ ಜೀವಂತವಾಗಿರುವ ಸಮಸ್ಯೆಯ ಮೇಲ್ಮಟ್ಟದ ವಿವರಗಳು. ಲೋಕಸಭೆ ಚುನಾವಣೆಯಲ್ಲಿ ರೈತರ ಸಮಸ್ಯೆ ಹಾಗೂ ಪರಿಹಾರಗಳ ವಿಚಾರವೇ ಪ್ರಮುಖ ಚರ್ಚೆಯ ವಿಷಯವಾದರೆ, ಸಾಲ ಮನ್ನಾ ಮೀರಿದ ಪರ್ಯಾಯವನ್ನು ಜನ ಅಲೋಚನೆ ಮಾಡಲು ಇದು ಮುನ್ನುಡಿಯಾಗಲಿ ಎಂಬುದು ಆಶಯ.

Join Samachara official: CLICK HERE