samachara
www.samachara.com
ಅಮೆರಿಕಾ ‘ಕಾಂಗ್ರೆಸ್’ ರಾಜಕಾರಣಿಗಳ ‘ತಂತ್ರ-ಅಜ್ಞಾನ’ವನ್ನು ಬಯಲಿಗಿಟ್ಟ ಗೂಗಲ್ ಸಿಇಓ ವಿಚಾರಣೆ!
COVER STORY

ಅಮೆರಿಕಾ ‘ಕಾಂಗ್ರೆಸ್’ ರಾಜಕಾರಣಿಗಳ ‘ತಂತ್ರ-ಅಜ್ಞಾನ’ವನ್ನು ಬಯಲಿಗಿಟ್ಟ ಗೂಗಲ್ ಸಿಇಓ ವಿಚಾರಣೆ!

ಇಡೀ ವಿಚಾರಣೆಯುದ್ದಕ್ಕೂ ತಂತ್ರಜ್ಞಾನವನ್ನು ಆಧಾರವಾಗಿಟ್ಟುಕೊಂಡ ಕಂಪನಿಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಪ್ರಶ್ನೆ ಕೇಳುವವರು ಅರ್ಥವೇ ಮಾಡಿಕೊಂಡಂತೆ ಕಾಣಿಸಲಿಲ್ಲ.

ಗೂಗಲ್‌ ಸಿಇಒ ಸುಂದರ್‌ ಪಿಚೈ ಮಂಗಳವಾರ ಅಮೆರಿಕಾದ ಕ್ಯಾಪಿಟಲ್‌ ಹಿಲ್‌ನಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಅಲ್ಲಿ ಅವರಿಗೆ ಅಮೆರಿಕಾದ ಜನಪ್ರತಿನಿಧಿ ಸಭೆಯ ನ್ಯಾಯಾಂಗ ಸಮಿತಿಯಿಂದ ಹಲವು ಪ್ರಶ್ನೆಗಳು ಎದುರಾಯಿತು. ಗೂಗಲ್ ಕಂಪನಿಯ ಡಾಟಾ ಪ್ರೈವಸಿ, ತಪ್ಪು ಮಾಹಿತಿ, ಚೀನಾಕ್ಕೆ ಸಂಬಂಧಿಸಿದ ಸರ್ಚ್‌ ಎಂಜಿನ್‌ ನಿರ್ಮಾಣ ಮತ್ತು ಸರ್ಚ್ ಇಂಜಿನ್ ಕನ್ಸರ್ವೇಟಿವ್ ಪಕ್ಷದ ಬಳಕೆದಾರರ ಪರವಾಗಿದೆ ಎಂಬ ರಿಪಬ್ಲಿಕನ್‌ ಪಕ್ಷದ ಸದಸ್ಯರ ಆರೋಪಗಳಿಗೆ ಅವರು ಉತ್ತರಿಸಿದರು.

ಮೊದಲಿಗೆ ಅಮೆರಿಕಾ ಕಂಪನಿ ತನ್ನ ಕಾರ್ಯನಿರ್ವಹಣೆಯಲ್ಲಿ ಸ್ವಾತಂತ್ರ್ಯದ ತತ್ವವನ್ನು ಪ್ರತಿಪಾದಿಸುತ್ತಿವೆಯಾ ಅಥವಾ ನಿಯಂತ್ರಣದ ಮಾರ್ಗವನ್ನು ಹೊಂದಿದೆಯಾ ಎಂಬ ಪ್ರಶ್ನೆ ಎದುರಾಯಿತು. “ಗೂಗಲ್‌ ಮುಕ್ತ ಜಗತ್ತಿನ ಪರವಾಗಿದೆ ಎಂದು ನಾವು ತಿಳಿದುಕೊಳ್ಳಲು ಬಯಸುತ್ತಿದ್ದೇವೆ . ಸ್ಪರ್ಧಾತ್ಮಕ ವಿರೋಧಿ ನಡವಳಿಕೆ, ರಾಜಕೀಯ ಪಕ್ಷಪಾತ ಮತ್ತು ಸೆನ್ಸಾರ್‌ಶಿಪ್‌ ವಿಧಿಸುತ್ತಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ,” ಎಂದು ಸದನದ ನಾಯಕ ಕೆವಿನ್ ಮೆಕ್‌ಕಾರ್ತಿ ಪ್ರಶ್ನೆಗಳಿಗೆ ಮುನ್ನಡಿ ಬರೆದರೆ.

ಉತ್ತರ ಕೊಡಲು ಆರಂಭಿಸಿದ ಚೆನ್ನೈ ಮೂಲದ ಪಿಚೈ, ಪದೇ ಪದೇ ಸಂಸ್ಥೆ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರತಿಪಾದಿಸಿದರು. ‘ನಾನು ರಾಜಕೀಯ ಪಕ್ಷಪಾತವಿಲ್ಲದೆ ಸಂಸ್ಥೆಯನ್ನು ಮುನ್ನಡೆಸುತ್ತೇನೆ. ಸಂಸ್ಥೆಯೂ ಅದೇ ರೀತಿ ಕೆಲಸ ಮಾಡುತ್ತದೆ,’ ಎಂದರು.

ಆದರೆ ಇದನ್ನು ಒಪ್ಪದ ರಿಪಬ್ಲಿಕನ್‌ ಪಕ್ಷದ ಸದಸ್ಯರು, ಪದೇ ಪದೇ ಪಿಚೈಗೆ ಕನ್ಸರ್ವೇಟಿವ್‌ ಪಕ್ಷದ ರಾಜಕಾರಣಿಗಳು ಮತ್ತ ಅವರ ಚಿಂತನೆಗಳ ನಡುವೆ ಸಂಸ್ಥೆ ತಾರತಮ್ಯ ಎಸಗುತ್ತದೆಯೇ ಎಂದು ಪ್ರಶ್ನಿಸಿದರು. ಆದರೆ ಇದನ್ನು ಪಿಚೈ ಅಲ್ಲಗಳೆದರೂ, ‘ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಗ್ಗೆ ಗೂಗಲ್‌ನಲ್ಲಿ ಸರ್ಚ್‌ ಮಾಡಿದಾಗ ತಾರತಮ್ಯದ ಫಲಿತಾಂಶಗಳು ಬರುತ್ತವೆ’ ಎಂದು ಮಗದೊಮ್ಮೆ ಆರೋಪಿಸಿದರು. ಆಗ ಪಿಚೈ ‘ನಾನು ಇದರ ಬಗ್ಗೆ ಗಮನ ಹರಿಸಲು ಸಂತೋಷ ಪಡುತ್ತೇನೆ’ ಎಂದು ತಿಳಿಸಿದರು.

ಆದರೆ ಇಡೀ ವಿಚಾರಣೆಯುದ್ದಕ್ಕೂ ತಂತ್ರಜ್ಞಾನವನ್ನು ಆಧಾರವಾಗಿಟ್ಟುಕೊಂಡ ಕಂಪನಿಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಪ್ರಶ್ನೆ ಕೇಳುವವರು ಅರ್ಥವೇ ಮಾಡಿಕೊಂಡಂತೆ ಕಾಣಿಸಲಿಲ್ಲ. ಅದರಲ್ಲೂ ರಿಪಬ್ಲಿಕನ್ನರು ಯಾವುದೇ ಸಾಕ್ಷ್ಯಗಳಿಲ್ಲದೆ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು. ಫ್ರಿಂಜ್‌ ಮೀಡಿಯಾಗಳನ್ನೇ ಆಧಾರವಾಗಿಟ್ಟುಕೊಂಡು ಸಂಸ್ಥೆ ರಾಜಕೀಯ ಪಕ್ಷಪಾತಿಯಾಗಿದೆ ಎಂದು ವಾದಿಸಿದರು. ಇದಕ್ಕೆಲ್ಲಾ ಪಿಚೈ ಸುದೀರ್ಘ ವಿವರಣೆಗಳನ್ನು ನೀಡಬೇಕಾಯಿತು.

ಇದೇ ವೇಳೆ ಚೀನಾಕ್ಕೆ ಸಂಸ್ಥೆ ಹೊಸ ಸರ್ಜ್‌ ಇಂಜಿನ್‌ಗೆ ಬಿಡುಗಡೆ ಮಾಡಲಿದೆಯಾ ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ಉತ್ತರಿಸಿದ ಪಿಚೈ, “ಸದ್ಯ ಅಂಥಹ ಯಾವುದೇ ಉದ್ದೇಶವಿಲ್ಲ. ಆದರೆ ಕಂಪನಿಯಲ್ಲಿ ಸುಮಾರು 100 ಜನ ಇದಕ್ಕಾಗಿ ಕೆಲಸ ಮಾಡುತ್ತಿದ್ದಾರೆ,” ಎಂದು ವಿವರಿಸಿದರು.

ಮಾಹಿತಿ ಗೌಪ್ಯತೆ:

ತನ್ನ ಬಳಕೆದಾರರಿಂದ ಗೂಗಲ್‌ ಎಷ್ಟರ ಮಟ್ಟಿಗೆ ಮಾಹಿತಿಗಳನ್ನು ಕಲೆ ಹಾಕುತ್ತದೆ ಎಂಬ ಪ್ರಶ್ನೆಯೂ ಇದೇ ಸಂದರ್ಭದಲ್ಲಿ ಎದುರಾಯಿತು. ಅದರಲ್ಲೂ ಮುಖ್ಯವಾಗಿ ಆಂಡ್ರಾಯ್ಡ್‌ನಿಂದ ಎಷ್ಟು ಮಾಹಿತಿಗಳನ್ನು ಪಡೆದುಕೊಳ್ಳುತ್ತೀರಿ ಎಂದು ನೇರವಾಗಿ ಗೂಗಲ್‌ ಮುಖ್ಯಸ್ಥರನ್ನೇ ಕೇಳಲಾಯಿತು. ಇದಕ್ಕೆ ಸಿಇಒ, ಗೂಗಲ್‌ ತುಂಬಾ ಮಾಹಿತಿಗಳನ್ನು ಸಂಗ್ರಹಿಸುತ್ತದೆ. ಆದರೆ ಈ ಖಾಸಗಿ ಮಾಹಿತಿಗಳನ್ನು ತುಂಬಾ ಹತ್ತಿರದಿಂದ ರಕ್ಷಣೆ ಮಾಡಲಾಗುತ್ತಿದ್ದು, ಗೂಗಲ್‌ನ ಎಲ್ಲಾ ಸಿಬ್ಬಂದಿಗಳ ಕೈಗೂ ಇದು ಸಿಗುವುದಿಲ್ಲ ಎಂದು ವಿವರಿಸಿದರು.

ಬಳಕೆದಾರರಿಗೆ ಎಷ್ಟು ಮಾಹಿತಿಯನ್ನು ಗೂಗಲ್‌ಗೆ ಬಿಟ್ಟುಕೊಡಬೇಕು ಎಂಬುದನ್ನು ಎಚ್ಚರಿಸುತ್ತಿದ್ದೀರಾ ಎಂಬ ಪ್ರಶ್ನೆಗೆ, ಕಳೆದ ತಿಂಗಳಲ್ಲಿ 1.6 ಕೋಟಿ ಜನರು ತಮ್ಮ ಪ್ರೈವಸಿ ಸೆಟ್ಟಿಂಗ್‌ಗಳನ್ನು ಬದಲಾಯಿಸಿದ್ದಾರೆ ಎಂದರು. ಈ ಬಗ್ಗೆ ಸಂಸ್ಥೆ ಕಡೆಯಿಂದ ಹೆಚ್ಚಿನ ಕ್ರಮಗಳಾಗಬೇಕಿದ್ದು, ಬಳಕೆದಾರರಿಗೆ ಸುಲಭವಾಗಿ ಇವು ದಕ್ಕುವಂತಿರಬೇಕು ಎಂದು ಸಮಿತಿ ಸೂಚನೆ ನೀಡಿತು.

ಇನ್ನು ಲೋಕೇಷನ್‌ ಪಡೆದುಕೊಳ್ಳುವ ಬಗ್ಗೆಯೂ ವಿವರ ಪಿಚೈ, "ಇದು (ಜಿಪಿಎಸ್‌ ಸೇವೆಗಳು) ಸಂಕೀರ್ಣ ವಿಷಯ, ಜನರು ಹೇಗೆ ಇಂಟರ್‌ನೆಟ್‌ ಬಳಸುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕು ಎಂಬ ಒಂದೇ ಕಾರಣಕ್ಕೆ ನಾವಿದನ್ನು ಬಳಸುತ್ತಿದ್ದೇವೆ,” ಎಂದರು.

ತಪ್ಪು ಮಾಹಿತಿ ತಡೆಗೆ ಕ್ರಮ:

ತಪ್ಪು ಮಾಹಿತಿಗಳು ಮತ್ತು ಧ್ವೇಷದ ಭಾಷಣವನ್ನು ಗೂಗಲ್ ಹೇಗೆ ನಿಯಂತ್ರಿಸುತ್ತದೆ ಎಂಬುದಾಗಿ ಸಿಇಒ ಅವರನ್ನು ಪ್ರಶ್ನಿಸಲಾಯಿತು. ಯೂಟ್ಯೂಬ್‌ನಲ್ಲಿ ನಾಝಿ ಸಿದ್ಧಾಂತವನ್ನು ಹರಡುವ ವಿಡಿಯೋಗಳಿವೆ ಎಂಬ ‘ವಾಷಿಂಗ್ಟನ್‌ ಪೋಸ್ಟ್‌’ನ ವರದಿ ಉಲ್ಲೇಖಿಸಿ ಪ್ರಶ್ನೆ ತೂರಿ ಬಂತು. ‘ಬಿಳಿಯರು ಸರ್ವಶ್ರೇಷ್ಠ ಮತ್ತು ಬಲಪಂಥೀಯ ತೀವ್ರವಾದಿ ಚಟುವಟಿಕೆಯನ್ನು ತಡೆಯಲು ಗೂಗಲ್‌ ಏನು ಮಾಡುತ್ತಿದೆ’ ಎಂದು ಪಿಚೈ ಬಳಿ ಕೇಳಿದರು. ಇದಕ್ಕಾಗಿ ನಮ್ಮದೇ ಆದ ಪಾಲಿಸಿಗಳಿವೆ. ಒಂದೊಮ್ಮೆ ಉಲ್ಲಂಘನೆಗಳು ನಡೆದರೆ ಅಂಥಹ ವಿಷಯವನ್ನು ತೆಗೆದು ಹಾಕುತ್ತೇವೆ ಎಂದವರು ತೇಲಿಸಿದರು.

ಆದರೆ ಬಳಕೆದಾರರಿಗೆ ಈ ನಾಝಿ ಸಿದ್ಧಾಂತದ ವಿಡಿಯೋಗಳನ್ನು ನೋಡುವಂತೆ ಯೂಟ್ಯೂಬ್‌ ಅಲ್ಗೊರಿದಮ್‌ ಪ್ರೇರೇಪಿಸುತ್ತಿದೆ ಎಂಬುದನ್ನು ಗಮನಕ್ಕೆ ತಂದಾಗ, ಈ ಬಗ್ಗೆ ಕಂಪನಿ ಇನ್ನೂ ಸುಧಾರಣೆಯಾಗಬೇಕಿದೆ ಎಂದು ಪಿಚೈ ಉತ್ತರಿಸಿದರು. ನಾವು ತಪ್ಪು ಮಾಹಿತಿಗಳನ್ನು ತೆಗದು ಹಾಕುವ ಸಂಬಂಧ ಕೆಲಸ ಮಾಡುತ್ತಿದ್ದೇವೆ. ಈ ಸಂಬಂಧ ಕಳೆದೊಂದು ವರ್ಷದಲ್ಲಿ ಉತ್ತಮ ಪ್ರಗತಿಯಾಗಿದೆ. ಇನ್ನೂ ಕೆಲಸಗಳು ಬಾಕಿ ಉಳಿದಿವೆ ಎಂದವರು ಸಮಿತಿಯ ಗಮನಕ್ಕೆ ತಂದರು.

ಇತ್ತೀಚೆಗೆ ಫೇಸ್‌ಬುಕ್ ಸಿಇಓ ಮಾರ್ಕ್‌ ಝುಕರ್‌ಬರ್ಗ್‌ ಕೂಡ ಇಂತಹದ್ದೇ ಕಾಂಗ್ರೆಸ್ ಕಮಿಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಇದೀಗ ಗೂಗಲ್ ಸರದಿ. ಅಮೆರಿಕಾದಲ್ಲಿ ಅಂತರ್ಜಾಲದ ದೈತ್ಯ ಸಂಸ್ಥೆಗಳನ್ನು ಜನ ಆಯ್ಕೆ ಮಾಡಿದ ರಾಜಕಾರಣಿಗಳ ಮುಂದೆ ಮಂಡಿಯೂರುವಂತೆ ಮಾಡುವ ಅವಕಾಶ ಇದೆ. ಆದರೆ ಇದನ್ನು ಅಲ್ಲಿನ ಜನಪ್ರತಿನಿಧಿಗಳು ಸೂಕ್ತವಾಗಿ ಬಳಕೆ ಮಾಡುತ್ತಿಲ್ಲ ಎಂಬ ಅನುಮಾನವನ್ನು ಈ ವಿಚಾರಣೆ ಹುಟ್ಟುಹಾಕಿದೆ.

Join Samachara official. CLICK HERE