samachara
www.samachara.com
ದಶಕದ ಬಳಿಕ ಮಿಝೋರಾಂ ಗೆದ್ದ ಎಂಎನ್‌ಎಫ್‌; ಗಡಿರಾಜ್ಯದಲ್ಲಿ ಕಾಂಗ್ರೆಸ್‌ಗೆ ಮುಖಭಂಗ ಯಾಕಾಯ್ತು?
COVER STORY

ದಶಕದ ಬಳಿಕ ಮಿಝೋರಾಂ ಗೆದ್ದ ಎಂಎನ್‌ಎಫ್‌; ಗಡಿರಾಜ್ಯದಲ್ಲಿ ಕಾಂಗ್ರೆಸ್‌ಗೆ ಮುಖಭಂಗ ಯಾಕಾಯ್ತು?

ಎರಡೂ ರಾಷ್ಟ್ರೀಯ ಪಕ್ಷಗಳ ಅಬ್ಬರದ ನಡುವೆಯೂ ಮಿಝೋರಾಂನಲ್ಲಿ ಎಂಎನ್‌ಎಫ್‌ ತಣ್ಣಗೆ ತನ್ನ ಗೆಲುವಿನ ಪತಾಕೆ ಹಾರಿಸಿದೆ. ಯಾವುದಿದು ಎಂಎನ್‌ಎಫ್‌? ಏನಿದರ ಹಿನ್ನೆಲೆ?

ಮಿಝೋರಾಂನಲ್ಲಿ ದಶಕದ ಬಳಿಕ ಮಿಝೋ ನ್ಯಾಷನಲ್‌ ಫ್ರಂಟ್‌ (ಎಂಎನ್‌ಎಫ್‌) ಮತ್ತೆ ಅಧಿಕಾರಕ್ಕೆ ಬಂದಿದೆ. ಆಡಳಿತ ವಿರೋಧಿ ಅಲೆಯಿಂದಾಗಿ 2008ರಲ್ಲಿ ಅಧಿಕಾರ ಕಳೆದುಕೊಂಡಿದ್ದ ಎಂಎನ್‌ಎಫ್‌ ಈಗ ಭರ್ಜರಿ ಜಯ ಸಾಧಿಸಿದೆ. ಒಟ್ಟು 40 ಸ್ಥಾನಗಳಿರುವ ಮಿಝೋರಾಂನಲ್ಲಿ ಎಂಎನ್‌ಎಫ್‌ 26 ಸ್ಥಾನಗಳನ್ನು ಗೆದ್ದಿದೆ. 2008 ಮತ್ತು 2013ರಲ್ಲಿ ಸತತವಾಗಿ ಜಯ ಗಳಿಸಿದ್ದ ಕಾಂಗ್ರೆಸ್‌ ಈ ಬಾರಿ 5 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿದೆ.

ಮಿಝೋರಾಂನಲ್ಲಿ 5 ಬಾರಿ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್‌ನ ಲಾಲ್‌ಥನ್ಹಾವ್ಲ ಈ ಬಾರಿ ಎರಡು ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಇಲ್ಲಿ ಕಾಂಗ್ರೆಸ್‌ನ ಆಡಳಿತದ ವಿರುದ್ಧ ಜನ ವಿರೋಧ ಹೆಚ್ಚಾಗಿತ್ತು. ಖುದ್ದು ಕಾಂಗ್ರೆಸ್‌ನ ಮುಖ್ಯಮಂತ್ರಿಗೇ ಇಲ್ಲಿ ಸೋಲಿನ ಭೀತಿ ಆವರಿಸಿತ್ತು. ಆದರೆ, ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲೂ ಲಾಲ್‌ಥನ್ಹಾವ್ಲ ಸೋಲುಂಡಿದ್ದಾರೆ. ಪ್ರಾದೇಶಿಕ ಪಕ್ಷ ಎಂಎನ್ಎಫ್‌ಗೆ ಜನ ಮತ್ತೆ ಅಧಿಕಾರ ಕೊಟ್ಟಿದ್ದಾರೆ.

ಈ ಬಾರಿ ರಾಜ್ಯದಲ್ಲಿನ ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲು ಬಿಜೆಪಿ ಯತ್ನಿಸಿತ್ತಾದರೂ ಅದು ಫಲ ಕೊಟ್ಟಿಲ್ಲ. ನರೇಂದ್ರ ಮೋದಿ ಭಾಷಣ, ಅಮಿತ್‌ ಷಾ ‘ರಣತಂತ್ರ’ಗಳು ಇಲ್ಲಿ ಬಿಜೆಪಿಗೆ ನೆರವಿಗೆ ಬಂದಿಲ್ಲ. ಪರಿಣಾಮ ಮಿಝೋರಾಂನಲ್ಲಿ ಬಿಜೆಪಿ ಒಂದು ಕ್ಷೇತ್ರದಲ್ಲಿ ಗೆಲ್ಲಲು ಮಾತ್ರ ಸಾಧ್ಯವಾಗಿದೆ.

ಸ್ವಾತಂತ್ರ್ಯಾನಂತರ ಅಸ್ಸಾಂ ಸರಕಾರದ ಅಡಿಯಲ್ಲಿದ್ದ ಲುಷಾಯ್‌ ಗುಡ್ಡಗಾಡು ಜಿಲ್ಲಾ ವಲಯವನ್ನು 1972ರಲ್ಲಿ ಮಿಝೋರಾಂ ಎಂಬ ಹೆಸರಿನೊಂದಿಗೆ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲಾಗಿತ್ತು. ಮಿಝೋರಾಂ ಸ್ವತಂತ್ರ್ಯ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದಿದ್ದು 1986ರಲ್ಲಿ. ಆರಂಭದಿಂದಲೂ ಮಿಝೋರಾಂನಲ್ಲಿ ಎಂಎನ್‌ಎಫ್‌ ಬಿಟ್ಟರೆ ಕಾಂಗ್ರೆಸ್‌, ಕಾಂಗ್ರೆಸ್‌ ಬಿಟ್ಟರೆ ಎಂಎನ್‌ಎಫ್‌ ಮಾತ್ರ ಅಧಿಕಾರ ಹಿಡಿಯಲು ಸಾಧ್ಯವಾಗಿದೆ.

ಮೂಲದಲ್ಲಿ ಬಂಡುಕೋರ ಸಂಘಟನೆಯಾಗಿದ್ದ ಎಂಎನ್‌ಎಫ್‌ ರಾಜಕೀಯ ಪಕ್ಷವಾಗಿ ಅಸ್ತಿತ್ವಕ್ಕೆ ಬಂದಿದ್ದು 1961ರ ಅಕ್ಟೋಬರ್‌ 22ರಂದು. ಆವರೆಗೆ ಸಂಘಟನೆ ಮಿಝೋ ನ್ಯಾಷನಲ್‌ ಫಾಮೆನ್‌ ಫ್ರಂಟ್‌ (ಎಂಎನ್‌ಎಫ್‌ಎಫ್‌) ಹೆಸರಿನಲ್ಲಿತ್ತು. 1959ರಲ್ಲಿ ಮಿಜೋರಾಂನಲ್ಲಿ ತೀವ್ರ ಕ್ಷಾಮ ಹಾಗೂ ಪ್ಲೇಗ್ ಕಾಣಿಸಿಕೊಂಡಿತ್ತು. ಸರಕಾರ ಈ ಕ್ಷಾಮ ಹಾಗೂ ಪ್ಲೇಗ್‌ನ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸದ ವಿರುದ್ಧ ಮಿಝೋರಾಂ ಜನತೆ ದಂಗೆ ಎದ್ದಿದ್ದರು. ಆ ದಂಗೆಯನ್ನು ಮುನ್ನಡೆಸಿದ್ದು ಎಂಎನ್‌ಎಫ್‌ಎಫ್‌.

1966ರಿಂದ ಎಂಎನ್‌ಎಫ್‌ ಶಶ್ತ್ರಸಜ್ಜಿತ ಹೋರಾಟಕ್ಕೆ ಮುಂದಾಯಿತು. ಪು ಲಾಲ್‌ಡೆಂಗ ನೇತೃತ್ವದಲ್ಲಿ ಸರಕಾರದ ವಿರುದ್ಧ ನಿಂತ ಎಂಎನ್‌ಎಫ್‌ ಮುಂದಿನ ಎರಡು ದಶಕಗಳ ಕಾಲ ಮಿಝೋರಾಂ ಅನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು. ಅಂತಿಮವಾಗಿ ಶಸ್ತ್ರ ತ್ಯಜಿಸಿ 1986ರಲ್ಲಿ ಕೇಂದ್ರ ಸರಕಾರದೊಂದಿಗೆ ಶಾಂತಿ ಮಾತುಕತೆ ಬಂದ ಎಂಎನ್‌ಎಫ್‌, ಅದೇ ವರ್ಷ ಚುನಾವಣಾ ಕಣಕ್ಕೂ ಇಳಿಯಿತು. ಭೂಗತ ವಾಸ ಮುಗಿಸಿ ಶಸ್ತ್ರಾಸ್ತ್ರ ಹೋರಾಟದಿಂದ ಚುನಾವಣಾ ರಾಜಕೀಯಕ್ಕೆ ಬಂದ ಎಂಎನ್‌ಎಫ್‌ನ ಹೋರಾಟಗಾರರು ಕೆಲವರು ಕಾಂಗ್ರೆಸ್‌ ಪಕ್ಷ ಸೇರಿದರೆ ಹಲವರು ಎಂಎನ್‌ಎಫ್‌ನಲ್ಲೇ ಉಳಿದರು.

1986ರಿಂದ 88ರವರೆಗೆ ಪು ಲಾಲ್‌ಡೆಂಗ ಮುಖ್ಯಮಂತ್ರಿಯಾದರೆ, 1998ರಿಂದ 2008ರವರೆಗೆ ಝೋರಮ್‌ಥಂಗ ಎಂಎನ್‌ಎಫ್‌ ಪಕ್ಷದಿಂದ ಮುಖ್ಯಮಂತ್ರಿಯಾಗಿದ್ದರು. ಈಗ ಮತ್ತೆ ಎಂಎನ್‌ಎಫ್‌ ಬಹುಮತ ಪಡೆದಿರುವುದರಿಂದ ಝೋರಮ್‌ಥಂಗ ಮತ್ತೆ ಮುಖ್ಯಮಂತ್ರಿ ಹುದ್ದೆಗೇರುವ ಅವಕಾಶ ಸಿಕ್ಕಂತಾಗಿದೆ. ಆದರೆ, ತಮಗೆ 84 ವರ್ಷ ವಯಸ್ಸಾಗಿರುವ ಕಾರಣ ಝೋರಮ್‌ಥಂಗ ಅಧಿಕಾರವನ್ನು ಪಕ್ಷದ ಉಪಾಧ್ಯಕ್ಷ ಆರ್‌. ಲಾಲ್‌ಥಂಗ್‌ಲಿಯಾಂಗ ಅವರಿಗೆ ವಹಿಸುವ ಸಾಧ್ಯತೆಯೂ ಇದೆ.

ಮಿಝೋರಾಂನಲ್ಲಿ ಹೋರಾಟದ ಮೂಲಕವೇ ರಾಜಕೀಯ ಅಸ್ತಿತ್ವ ಉಳಿಸಿಕೊಂಡಿರುವ ಎಂಎನ್‌ಎಫ್‌ ಮತ್ತೆ ಪೂರ್ಣ ಬಹುಮತದ ಮೂಲಕ ಮತ್ತೆ ಅಧಿಕಾರಕ್ಕೆ ಬಂದಿದೆ. ದೇಶದ ಗಡಿಯಂಚಿನ ಗುಡ್ಡಗಾಡು ರಾಜ್ಯವಾದ ಮಿಝೋರಾಂನಲ್ಲಿ ಎಂಎನ್‌ಎಫ್‌ ಈ ಹಿಂದೆ ಆಡಳಿತ ವಿರೋಧಿ ಅಲೆಯನ್ನು ನೋಡಿದೆ. ಹೀಗಾಗಿ ಇಲ್ಲಿನ ಜನರಿಗೆ ಸಮರ್ಥವಾದ ಆಡಳಿತ ನೀಡುವ ಹೊಣೆ ಎಂಎನ್‌ಎಫ್‌ ಮೇಲಿದೆ. ಎರಡೂ ರಾಷ್ಟ್ರೀಯ ಪಕ್ಷಗಳ ಅಬ್ಬರದ ನಡುವೆಯೂ ಮಿಝೋರಾಂನಲ್ಲಿ ಎಂಎನ್‌ಎಫ್‌ ತಣ್ಣಗೆ ತನ್ನ ಗೆಲುವಿನ ಪತಾಕೆ ಹಾರಿಸಿದೆ.