samachara
www.samachara.com
ಮೊದಲ ಸೋಲನ್ನೇ ಕೊನೆ ಮಾಡಿಕೊಂಡ ‘ದುಬೈ ಶೇಖರ’; ಯಾರು ಈ ಕಲ್ವಕುಂಟ್ಲ ಚಂದ್ರಶೇಖರ ರಾವ್‌?
COVER STORY

ಮೊದಲ ಸೋಲನ್ನೇ ಕೊನೆ ಮಾಡಿಕೊಂಡ ‘ದುಬೈ ಶೇಖರ’; ಯಾರು ಈ ಕಲ್ವಕುಂಟ್ಲ ಚಂದ್ರಶೇಖರ ರಾವ್‌?

ಸೋಲಿನ ಭೀತಿಯಲ್ಲಿ ಅವಧಿಗೂ ಮುನ್ನಾ ವಿಧಾನಸಭೆ ವಿಸರ್ಜಿಸಿದ್ದ ಕೆಸಿಆರ್‌ ಮತ್ತೆ ಅಧಿಕಾರಕ್ಕೇರುವಷ್ಟು ಸ್ಥಾನಗಳನ್ನು ತೆಲಂಗಾಣದಲ್ಲಿ ಪಡೆದಿದ್ದಾರೆ.

ಒಂದು ಕಾಲದಲ್ಲಿ ಆತ ಆಂಧ್ರಪ್ರದೇಶದಿಂದ ದುಬೈಗೆ ಕೆಲಸಗಾರರನ್ನು ಕಳಿಸಿಕೊಡುವ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದ ‘ದುಬೈ ಶೇಖರ್’. ನಂತರದ ದಿನಗಳಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ಪಟ್ಟು ಹಿಡಿದು ಹನ್ನೊಂದು ದಿನಗಳ ಕಾಲ ಉಪವಾಸ ಕುಳಿತ ‘ಹೋರಾಟಗಾರ’!. ತೆಲಂಗಾಣ ರಾಜ್ಯ ರಚನೆಯಾಗುವ ಹೊತ್ತಿಗೆ, “ದಲಿತರೊಬ್ಬರನ್ನು ತೆಲಂಗಾಣದ ಮೊದಲ ಮುಖ್ಯಮಂತ್ರಿಯಾಗಿ ಮಾಡುತ್ತೇನೆ” ಎಂದು ಹಗಲುಗನಸು ತೋರಿಸಿದ ‘ಹಸಿ ಸುಳ್ಳುಕೋರ’. ಕಲ್ವಕುಂಟ್ಲ ಚಂದ್ರಶೇಖರ ರಾವ್‌ (ಕೆಸಿಆರ್‌) ಎಂಬ ರಾಜಕಾರಣಿಯ ಬದುಕಿನ ಪುಟಗಳನ್ನು ಹಿಂದಕ್ಕೆ ತಿರುವಿ ಹಾಕಿದರೆ ತಕ್ಷಣಕ್ಕೆ ಕಾಣುವ ತುಣುಕುಗಳಿವು.

2014ರಲ್ಲಿ ಪ್ರತ್ಯೇಕ ರಾಜ್ಯವಾಗಿ ರಚನೆಗೊಂಡ ನಂತರ ವಿಧಾನಸಭೆಗೆ ಎರಡನೇ ಬಾರಿಗೆ ನಡೆದ ಚುನಾವಣೆಯಲ್ಲಿ ಕೆಸಿಆರ್‌ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಮತ್ತೆ ಅಧಿಕಾರಕ್ಕೆ ಬಂದಿದೆ. ಅವಧಿಗೂ ಮುನ್ನಾ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿದ ಕೆಸಿಆರ್‌ ಮುಖ್ಯಮಂತ್ರಿ ಗಾದಿಯಲ್ಲಿಯೇ ಮುಂದುವರಿಯಲಿದ್ದಾರೆ.

1954ರ ಫೆಬ್ರುವರಿ 17ರಂದು ಮೇದಕ್‌ ಜಿಲ್ಲೆಯ ಚಿಂತಮಡಕದಲ್ಲಿ ಜನಿಸಿದ ವೇಲಮ ಸಮುದಾಯದ ಕೆಸಿಆರ್‌ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ತೆಲುಗು ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದವರು. ಪ್ರತ್ಯೇಕ ತೆಲಂಗಾಣಕ್ಕಾಗಿ ರಾಜೀನಾಮೆ, ಉಪವಾಸಗಳ ಮೂಲಕವೇ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಕೆಸಿಆರ್‌ ಆರಂಭದಲ್ಲಿ ಯುವ ಕಾಂಗ್ರೆಸ್‌ನಲ್ಲಿದ್ದವರು.

ತೆಲುಗು ದೇಶಂ ಸಖ್ಯ

ಚಂದ್ರಬಾಬು ನಾಯ್ಡು ಜತೆಗೆ ಕೆಸಿಆರ್‌
ಚಂದ್ರಬಾಬು ನಾಯ್ಡು ಜತೆಗೆ ಕೆಸಿಆರ್‌

1983ರಲ್ಲಿ ಎನ್‌.ಟಿ. ರಾಮರಾವ್‌ ಅವರ ತೆಲುಗು ದೇಶಂ ಪಕ್ಷಕ್ಕೆ (ಟಿಡಿಪಿ) ಸೇರಿದ ಕೆಸಿಆರ್‌ ಅದೇ ವರ್ಷ ಸಿದ್ದಿಪೇಟ್‌ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ ಕಾಂಗ್ರೆಸ್‌ ಅಭ್ಯರ್ಥಿ ಎ. ಮದನ್‌ ಮೋಹನ್‌ ವಿರುದ್ಧ 887 ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದರು. ಮೊದಲ ಸೋಲೇ ಕೊನೆ, ಆ ಬಳಿಕ ಕೆಸಿಆರ್‌ ಎಂದೂ, ಯಾವ ಚುನಾವಣೆಗಳಲ್ಲೂ ಸೋಲು ಕಾಣಲಿಲ್ಲ. 1985ರಲ್ಲಿ ಅದೇ ಸಿದ್ದಿಪೇಟ್‌ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್‌ ಅಭ್ಯರ್ಥಿ ಟಿ. ಮಹೇಂದರ್‌ ರೆಡ್ಡಿ ವಿರುದ್ಧ 16,156 ಮತಗಳ ಅಂತರದಲ್ಲಿ ಗೆದ್ದ ಕೆಸಿಆರ್‌ ಅಲ್ಲಿಂದ ಇಲ್ಲಿಯವರೆಗೆ ಸ್ಪರ್ಧಿಸಿದ ಎಲ್ಲಾ ಚುನಾವಣೆಗಳಲ್ಲೂ ಕಂಡಿರುವುದು ಗೆಲುವನ್ನು ಮಾತ್ರ.

1985, 1989, 1994 ಮತ್ತು 1999 – ಹೀಗೆ ಸತತ ನಾಲ್ಕು ಬಾರಿ ಟಿಡಿಪಿ ಪಕ್ಷದಿಂದ ಗೆದ್ದ ಕೆಸಿಆರ್‌ 1987-88ರ ಅವಧಿಯಲ್ಲಿ ಎನ್‌.ಟಿ. ರಾವರಾವ್‌ ಸಂಪುಟದಲ್ಲಿ, ‘ಬರ ನಿರ್ವಹಣಾ ಸಚಿವ’ರಾಗಿ ಕೆಲಸ ಮಾಡಿದ್ದರು. 1996ರಲ್ಲಿ ಎನ್‌. ಚಂದ್ರಬಾಬು ನಾಯ್ಡು ಸಂಪುಟದಲ್ಲಿ ಸಾರಿಗೆ ಸಚಿವರಾಗಿದ್ದರು. ಆದರೆ, ಅಲ್ಲಿಂದ ಮುಂದೆ ಕೆಸಿಆರ್‌ ಮತ್ತು ಚಂದ್ರಬಾಬು ನಾಯ್ಡು ಸಂಬಂಧ ಹಳಸುತ್ತಾ ಬಂತು. 2000-01ರಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಕೆಸಿಆರ್ ವಿಧಾನಸಭೆಯ ಉಪ ಸಭಾಪತಿ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಈ ಕಾರಣಕ್ಕೆ ಎನ್‌. ಚಂದ್ರಬಾಬು ನಾಯ್ಡು ವಿರುದ್ಧ ಸಿಟ್ಟಾಗಿದ್ದ ಕೆಸಿಆರ್‌ 2001ರ ಏಪ್ರಿಲ್‌ 27ರಂದು ಉಪ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ ಟಿಡಿಪಿ ಪಕ್ಷದಿಂದ ಹೊರ ಬಂದ ಕೆಸಿಅರ್‌ ತೆಲಂಗಾಣ ರಾಷ್ಟ್ರ ಸಮಿತಿ ಸ್ಥಾಪಿಸಿದರು.

ಹಳೆಯ ಬೇಡಿಕೆಗೆ ಮರು ಜೀವ

ತೆಲಂಗಾಣ ರಾಷ್ಟ್ರ ಸಮಿತಿ ಸ್ಥಾಪನೆಯೊಂದಿಗೆ ಹಲವು ದಶಕಗಳ ಬೇಡಿಕೆಯಾಗಿದ್ದ ತೆಲಂಗಾಣ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನೂ ಮುಂದಿಟ್ಟುಕೊಂಡು ರಾಜಕೀಯದೊಂದಿಗೆ ಹೋರಾಟದ ಹಾದಿಯನ್ನೂ ಹಿಡಿದ ಕೆಸಿಆರ್‌ ಅಲ್ಲಿಂದ ಮುಂದೆ ಬಾಯಿ ತೆಗೆದಾಗೆಲ್ಲಾ ಆಡಿದ್ದು ಪ್ರತ್ಯೇಕ ತೆಲಂಗಾಣದ ಮಾತನ್ನೇ. ಆಂಧ್ರಪ್ರದೇಶದಲ್ಲಿ ಟಿಡಿಪಿಯನ್ನು ಮಣಿಸಲು ಕಾಂಗ್ರೆಸ್‌ನ ವೈ.ಎಸ್‌. ರಾಜಶೇಖರ್‌ ರೆಡ್ಡಿ ಜತೆಗೆ ಕೈ ಜೋಡಿಸಿದ ಕೆಸಿಆರ್‌ 2004ರಲ್ಲಿ ಟಿಡಿಪಿ ಅಧಿಕಾರಕ್ಕೆ ಬರದಂತೆ ತಡೆಯುವಲ್ಲಿ ಸಫಲರಾಗಿದ್ದರು. 2004ರಲ್ಲಿ ಆಂಧ್ರಪ್ರದೇಶದಲ್ಲಿ ವೈಎಸ್ಆರ್‌ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದರೆ ಕೆಸಿಆರ್‌ ಕೇಂದ್ರ ಸಂಪುಟ ಸೇರಿ ಕಾರ್ಮಿಕ ಸಚಿವರಾದರು.

ಕೆಸಿಆರ್‌ ಪ್ರಮುಖ ಬೇಡಿಕೆಯಾಗಿದ್ದ ಪ್ರತ್ಯೇಕ ತೆಲಂಗಾಣ ರಚನೆ ವೈಎಸ್‌ಆರ್‌ಗೆ ಇಷ್ಟವಿರಲಿಲ್ಲ. ತೆಲಂಗಾಣ ಪ್ರತ್ಯೇಕ ರಾಜ್ಯವಾದರೆ ಕಾಂಗ್ರೆಸ್‌ಗೆ ಅದರಿಂದ ನಷ್ಟವೇ ಹೆಚ್ಚು ಎಂಬುದನ್ನು ವೈಎಸ್‌ಆರ್‌ ಕಾಂಗ್ರೆಸ್‌ ಹೈಕಮಾಂಡ್‌ ಗಮನಕ್ಕೆ ತಂದಿದ್ದರು. ಅಲ್ಲದೆ ಕೆಸಿಆರ್‌ ದೆಹಲಿಯಲ್ಲಿದ್ದ ದಿನಗಳಲ್ಲಿ ಟಿಆರ್‌ಎಸ್‌ ಪಕ್ಷವನ್ನೇ ಒಡೆಯುವ ತಂತ್ರವನ್ನು ವೈಎಸ್‌ಆರ್‌ ಪ್ರಯೋಗಿಸಿದ್ದರು.

ಪ್ರತ್ಯೇಕ ತೆಲಂಗಾಣ ರಚನೆ ಮಾಡುವುದಾಗಿ ಚುನಾವಣೆಗೂ ಮುನ್ನಾ ಕಾಂಗ್ರೆಸ್‌ ನೀಡಿದ್ದ ಭರವಸೆಯನ್ನು ಈಡೇರಿಸಲಿಲ್ಲ ಎಂಬ ಕಾರಣಕ್ಕೆ ಕೆಸಿಆರ್‌ 2006ರಲ್ಲಿ ಯುಪಿಎ ಹಾಗೂ ವೈಎಸ್‌ಆರ್‌ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್‌ ಪಡೆದು ರಾಜೀನಾಮೆ ನೀಡಿದರು. ಅಲ್ಲದೆ 2006ರಲ್ಲಿ ಟಿಆರ್‌ಎಸ್‌ ಪಕ್ಷದ ಶಾಸಕರ ವಿರುದ್ಧ ಕೇಳಿ ಬಂದಿದ್ದ ಮಾನವ ಕಳ್ಳ ಸಾಗಣೆ ಆರೋಪಕ್ಕೆ ವೈಎಸ್‌ಆರ್‌ ಕುತಂತ್ರವೇ ಕಾರಣ ಎಂಬ ಕಾರಣಕ್ಕೆ ಕೆಸಿಆರ್ ವೈಎಸ್‌ಆರ್‌ ವಿರುದ್ಧ ಸಿಟ್ಟಾಗಿದ್ದರು. ಟಿಆರ್‌ಎಸ್‌ನ ಸಂಸದರು, ಶಾಸಕರ ರಾಜೀನಾಮೆ ಕೊಡಿಸಿದ ಕೆಸಿಆರ್‌ ಆ ಹೊತ್ತಿಗೆ ಆಂಧ್ರಪ್ರದೇಶದಲ್ಲಿ ಜೋರಾಗಿದ್ದ ವೈಆರ್‌ಎಸ್‌ ಪ್ರಭಾವ ಕುಗ್ಗಿಸಲು ಟಿಡಿಪಿ ಜತೆಗೆ ಕೈ ಜೋಡಿಸಿದರು. ವೈಎಸ್‌ಆರ್‌ ಪ್ರಭಾವ ಕುಗ್ಗಿಸುವುದು ಆಗ ಚಂದ್ರಬಾಬು ನಾಯ್ಡುಗೂ ಅನಿವಾರ್ಯವಾಗಿತ್ತು. ಹೀಗಾಗಿ ಈ ಹಿಂದೆ ಕೆಸಿಆರ್‌ ಜತೆಗೆ ಕಡಿದುಕೊಂಡಿದ್ದ ಸಂಬಂಧವನ್ನು ನಾಯ್ಡು ಮತ್ತೆ ಬೆಳೆಸಿದರು.

ವೈಎಸ್‌ಆರ್‌ ಸಾವು ಮತ್ತು ಕೆಸಿಆರ್‌ ಉಪವಾಸ!

ಪ್ರತ್ಯೇಕ ತೆಲಂಗಾಣ ರಚನೆಗಾಗಿ ಉಪವಾಸ ಕುಳಿತು ಆಸ್ಪತ್ರೆಸೇರಿದ್ದ ಕೆಸಿಆರ್‌
ಪ್ರತ್ಯೇಕ ತೆಲಂಗಾಣ ರಚನೆಗಾಗಿ ಉಪವಾಸ ಕುಳಿತು ಆಸ್ಪತ್ರೆಸೇರಿದ್ದ ಕೆಸಿಆರ್‌

2009ರ ಸೆಪ್ಟೆಂಬರ್‌ನಲ್ಲಿ ವೈಎಸ್‌ಆರ್‌ ಸಾವಿನ ಸಂದರ್ಭದಲ್ಲಿ ಆಂಧ್ರಪ್ರದೇಶದಲ್ಲಿ ನಿರ್ಮಾಣವಾದ ರಾಜಕೀಯ ನಿರ್ವಾತದ ಪ್ರಯೋಜನ ಪಡೆಯಲು ಮುಂದಾದ ಕೆಸಿಆರ್‌ 2009ರ ನವೆಂಬರ್‌ 29ರಲ್ಲಿ ಪ್ರತ್ಯೇಕ ತೆಲಂಗಾಣಕ್ಕಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಕೆಸಿಆರ್‌ ಉಪವಾಸಕ್ಕೆ ಮಣಿದ ಕೇಂದ್ರದ ಯುಪಿಎ ಸರಕಾರ 2009ರ ಡಿಸೆಂಬರ್‌ 9ರಂದು ಪ್ರತ್ಯೇಕ ತೆಲಂಗಾಣ ರಚನೆಯನ್ನು ಘೋಷಿಸಿತು.

“ತೆಲಂಗಾಣ ಪ್ರತ್ಯೇಕ ರಾಜ್ಯವಾದರೆ ದಲಿತರೊಬ್ಬರನ್ನು ಮುಖ್ಯಮಂತ್ರಿಯಾಗಿ ಮಾಡುತ್ತೇನೆ” ಎಂದು 2013ರ ಆಗಸ್ಟ್‌ನಲ್ಲಿ ಕೆಸಿಆರ್‌ ಘೋಷಣೆ ಮಾಡಿದ್ದರು. ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ಸಲಹಾ ಸಮಿತಿ ರಚನೆಯ ಬಗ್ಗೆ ಮಾತನಾಡಲು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಕೆಸಿಆರ್‌ ಇಂಥದ್ದೊಂದು ಕನಸನ್ನು ತೆಲಂಗಾಣ ಭಾಗದ ದಲಿತರಲ್ಲಿ ಬಿತ್ತಿದ್ದರು.

Also read: ರೋಹಿತ್‌ ವೇಮುಲ ಮರೆತ ತೆಲಂಗಾಣ ಚುನಾವಣೆ; ದಲಿತರು ಈಗ ವಿಪಕ್ಷಗಳಿಗೂ ಬೇಕಾಗಿಲ್ಲ

2014ರ ಫೆಬ್ರುವರಿಯಲ್ಲಿ ಸಂಸತ್‌ನಲ್ಲಿ ಆಂಧ್ರಪ್ರದೇಶ ಪುನರ್‌ವಿಂಗಡಣೆ ಮಸೂದೆ ಮಂಡನೆಯಾಯಿತು. ರಾಷ್ಟ್ರಪತಿ ಅಂಕಿತ ಬಿದ್ದು 2014ರ ಮಾರ್ಚ್‌ 1ರಂದು ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಅಸ್ತಿತ್ವಕ್ಕೆ ಬಂತು. 2014ರ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಟಿಆರ್‌ಎಸ್‌ ಪಕ್ಷ 63 ಸ್ಥಾನಗಳನ್ನು ಪಡೆಯುವ ಮೂಲಕ ಹೊಸ ರಾಜ್ಯದಲ್ಲಿ ಅಧಿಕಾರದ ಬಾವುಟ ಹಾರಿಸಿತು. ತೆಲಂಗಾಣ ಪ್ರತ್ಯೇಕ ರಾಜ್ಯವಾದರೆ ದಲಿತರೊಬ್ಬರನ್ನು ರಾಜ್ಯದ ಮೊದಲ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇನೆ ಎಂದಿದ್ದ ಕೆಸಿಆರ್‌ ಆ ಮಾತನ್ನು ಮರೆತು ಜೂನ್‌ 2 2014ರಲ್ಲಿ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕೆಸಿಆರ್ ರಾಜಕೀಯ ಜೀವನ ಹಾಗೂ ತೆಲಂಗಾಣ ರಾಜ್ಯ ರಚನೆಯ ಪ್ರಕ್ರಿಯೆಗಳು ಒಂದನ್ನು ಬಿಟ್ಟು ಮತ್ತೊಂದನ್ನು ಹೇಳಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಬೆಸೆದುಕೊಂಡಿವೆ. ವೈರುಧ್ಯಗಳು, ವಿವಾದಗಳು ಏನೇ ಇದ್ದರೂ ಇತಿಹಾಸ ಕೆಸಿಆರ್‌ ಅವರನ್ನು ಗುರುತಿಸುವುದು ಪ್ರತ್ಯೇಲ ತೆಲಂಗಾಣದ ಮೊದಲ ಮುಖ್ಯಮಂತ್ರಿ ಎಂದೇ. ಉಪವಾಸ ಕುಳಿತು ಪ್ರತ್ಯೇಕ ತೆಲಂಗಾಣ ರಚನೆಗೆ ಕಾರಣವಾಗಿದ್ದೇ ಕೆಸಿಆರ್‌ ಬದುಕಿನ ದೊಡ್ಡ ಸಾಧನೆಯಾಗಿತ್ತು. ಇದೀಗ ಎರಡನೇ ಬಾರಿ ಗೆಲ್ಲುವ ಮೂಲಕ ಕೆಸಿಆರ್‌ ಸಾಧನೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ.

Join Samachara Official. CLICK HERE