samachara
www.samachara.com
‘ಸಿಖ್ ಗಲಭೆಯಿಂದ ಗೋ ಶಾಲೆವರೆಗೆ’: ಮಧ್ಯ ಪ್ರದೇಶ ಕಾಂಗ್ರೆಸ್ ಕೈಯಲ್ಲಿ ‘ಕಮಲ’ನಾಥ್!
COVER STORY

‘ಸಿಖ್ ಗಲಭೆಯಿಂದ ಗೋ ಶಾಲೆವರೆಗೆ’: ಮಧ್ಯ ಪ್ರದೇಶ ಕಾಂಗ್ರೆಸ್ ಕೈಯಲ್ಲಿ ‘ಕಮಲ’ನಾಥ್!

1980ರಲ್ಲಿ ಛಿಂದ್ವಾರದಲ್ಲಿ ಕಮಲ್‌ನಾಥ್‌ ಚುನಾವಣೆಗೆ ನಿಂತಾಗ ಸ್ವತಃ ಇಂದಿರಾ ಗಾಂಧಿ ಪ್ರಚಾರಕ್ಕೆ ಬಂದಿದ್ದರು. ಬಂದವರೇ, “ಈತ ನನ್ನ ಮೂರನೇ ಮಗ. ಈತನಿಗೆ ಮತ ಹಾಕಿ ಗೆಲ್ಲಿಸಿ,” ಎಂದು ಮನವಿ ಮಾಡಿಕೊಂಡಿದ್ದರು.

ಏಪ್ರಿಲ್‌ 26, 2018.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹುಬ್ಬೇರಿಸುವ ತೀರ್ಮಾನವೊಂದನ್ನು ತೆಗೆದುಕೊಂಡಿದ್ದರು. ಡಿಸೆಂಬರ್‌ನಲ್ಲಿ ಚುನಾವಣೆ ಎದುರಿಸಬೇಕಾಗಿದ್ದ ಮಧ್ಯ ಪ್ರದೇಶ ರಾಜ್ಯದ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರನ್ನಾಗಿ 72 ವರ್ಷದ ಹಿರಿಯ ನಾಯಕ ಕಮಲ್‌ನಾಥ್‌ರನ್ನು ನೇಮಿಸಿದ್ದರು. ಕಮಲ್‌ನಾಥ್‌ ಹೇಳಿ ಕೇಳಿ ದೆಹಲಿ ರಾಜಕಾರಣಿ. 1980ರಿಂದ ಆರಂಭವಾಗಿ 1994ರ ಚುನಾವಣೆ ಒಂದನ್ನು ಹೊರತುಪಡಿಸಿದರೆ ಮಿಕ್ಕೆಲ್ಲಾ ಲೋಕಸಭೆ ಚುನಾವಣೆಗಳಲ್ಲೂ ಅವರು ಗೆಲುವು ಸಾಧಿಸಿದವರು. 9 ಬಾರಿ ಲೋಕಸಭೆ ಸದಸ್ಯರಾಗಿ, ಮೂರು ಬಾರಿ ಕೇಂದ್ರ ಸಚಿವರಾಗಿ, ಹಲವು ಹುದ್ದೆಗಳನ್ನು ನಿಭಾಯಿಸುತ್ತಾ 38 ವರ್ಷಗಳಿಂದ ದೆಹಲಿಯಲ್ಲೇ ಬೀಡು ಬಿಟ್ಟ ಕಮಲ್‌ನಾಥ್‌ ಸದ್ಯಕ್ಕೆ ಲೋಕಸಭೆಯ ಅತ್ಯಂತ ಅನುಭವಿ ಹಿರಿಯ ರಾಜಕಾರಣಿ. ಇಂಥಹದ್ದೊಂದು ಹಿನ್ನೆಲೆ ಇರುವ ಕಮಲ್‌ನಾಥ್‌ರನ್ನು ಮಧ್ಯ ಪ್ರದೇಶಕ್ಕೆ ಅಟ್ಟಿದ್ದರು ರಾಹುಲ್‌ ಗಾಂಧಿ. ಈ ಮೂಲಕ ಅವರು ಎಲ್ಲರನ್ನೂ ಅಚ್ಚರಿಗೆ ಕೆಡವಿದ್ದರು.

ಆದರೆ ಇದಕ್ಕೊಂದು ಸರಳ ಕಾರಣವಿತ್ತು. ನಮ್ಮಲ್ಲಿ ಕಾಂಗ್ರೆಸ್‌ಗೆ ಡಿ. ಕೆ. ಶಿವಕುಮಾರ್‌ ಇದ್ದಂತೆ, ಮಧ್ಯ ಪ್ರದೇಶದಲ್ಲಿ ಕಮಲ್‌ನಾಥ್‌ ಹಣಬಲ ಮತ್ತು ತೋಳ್ಬಲ ಎರಡೂ ಇರುವ ಅಪರೂಪದ ರಾಜಕಾರಣಿ. ಆದರೆ ಡಿಕೆಶಿ ಹೆಸರು ರಾಜ್ಯದಾದ್ಯಂತ ಕೇಳುತ್ತಿದ್ದರೆ, ಕಮಲ್‌ನಾಥ್‌ ಹೆಸರು ಅವರ ಸ್ವಕ್ಷೇತ್ರ ಛಿಂದ್ವಾರದಿಂದ ಹೊರಗೆ ಕೇಳಿಸಿದ್ದು ತೀರಾ ಕಡಿಮೆ. ಹೀಗೊಂದು ಇತಿಹಾಸವನ್ನು ಬೆನ್ನಿಗಿಟ್ಟುಕೊಂಡ ರಾಜಕಾರಣಿಯೊಬ್ಬರು ಇವತ್ತು ಮುಖ್ಯಮಂತ್ರಿ ಗಾದಿಯ ಬಾಗಿಲಲ್ಲಿ ನಿಂತಿದ್ದಾರೆ. ಆದರೆ ಇಷ್ಟು ಮಾತ್ರ ಹೇಳಿದರೆ ಅವರ ಬಗ್ಗೆ ಏನೂ ಹೇಳಿದಂತಾಗುವುದಿಲ್ಲ. ನಿಜವಾದ ಕಮಲ್‌ನಾಥ್‌ ನೋಡಬೇಕೆಂದರೆ 1984ನೇ ಇಸವಿಗೆ ಭೇಟಿ ನೀಡಬೇಕು.

ಸಂಜಯ್‌ ಗಾಂಧಿ ಆಪ್ತರಾಗಿದ್ದ ಕಮಲ್‌ನಾಥ್‌; ಅವರ ಆ ಕಡೆ ಪಕ್ಕದಲ್ಲಿರುವವರು ಜಗದೀಶ್‌ ಟೈಟ್ಲರ್.
ಸಂಜಯ್‌ ಗಾಂಧಿ ಆಪ್ತರಾಗಿದ್ದ ಕಮಲ್‌ನಾಥ್‌; ಅವರ ಆ ಕಡೆ ಪಕ್ಕದಲ್ಲಿರುವವರು ಜಗದೀಶ್‌ ಟೈಟ್ಲರ್.
/ಡೈಲಿಮೇಲ್‌

ಸಿಖ್ ನರಮೇಧ:

1984ರ ಜೂನ್‌ 1ರಂದು ‘ಆಪರೇಷನ್‌ ಬ್ಲೂಸ್ಟಾರ್‌’ಗೆ ಆದೇಶ ನೀಡಿದ್ದರು ಅಂದಿನ ಪ್ರಧಾನಿ ಇಂದಿರಾ ಗಾಂಧಿ. ಇದಾಗಿ ಕೆಲವೇ ತಿಂಗಳಿಗೆ ಅಂದರೆ ಅಕ್ಟೋಬರ್ 31ರಂದು ಅಂಗರಕ್ಷಕರಿಬ್ಬರು ಅವರನ್ನು ಗುಂಡಿಕ್ಕಿ ಹತ್ಯೆ ನಡೆಸಿದರು. ಮುಂದಿನ 72 ಗಂಟೆಗಳ ಕಾಲ ದೆಹಲಿ ಹೊತ್ತಿ ಉರಿದಿತ್ತು. 2,733 ಸಿಖ್ಖರು ಬೀದಿ ಹೆಣವಾಗಿದ್ದರು. ಉದ್ರಿಕ್ತ ಜನರು ಸಿಖ್ಖರನ್ನು ಕಂಡ ಕಂಡಲ್ಲಿ ಕೊಂದು ಹಾಕಿದ್ದರು. ಅಂತಹ ಉದ್ರಿಕ್ತ ಜನರ ಒಂದು ಗುಂಪನ್ನು ಕಮಲ್‌ನಾಥ್‌ ಮುನ್ನಡೆಸುತ್ತಿದ್ದರು ಎಂಬ ಆರೋಪ ಅವರ ಮೇಲೆ ಕೇಳಿ ಬಂದಿತ್ತು.

ಅವತ್ತಿಗೆ ಕಮಲ್‌ನಾಥ್‌ ಯುವ ರಾಜಕಾರಣಿ; ಕೇವಲ 38 ವರ್ಷ ವಯಸ್ಸು. 1980ರಲ್ಲಿ ಗೆದ್ದು ಮೊದಲ ಬಾರಿಗೆ ಅವರು ಲೋಕಸಭೆ ಸದಸ್ಯರಾಗಿದ್ದರು. ಸಿಖ್‌ ಗಲಭೆ ನಡೆದ ದಿನ ಅವರು ದೆಹಲಿಯ ರಾಕಬ್‌ ಗಂಜ್‌ ಗುರುದ್ವಾರದ ಮುಂಭಾಗ ಗುಂಪೊಂದಕ್ಕೆ ದಾಳಿ ನೀಡಲು ಪ್ರೇರಣೆ ನೀಡುತ್ತಿದ್ದರು ಎಂಬುದಾಗಿ ಘಟನೆಯ ಬಗ್ಗೆ ತನಿಖೆಗೆ ಇಳಿದಿದ್ದ ರಂಗನಾಥ್‌ ಮಿಶ್ರಾ ಆಯೋಗದ ವರದಿ ಹೇಳುತ್ತಿತ್ತು. ಆದರೆ ಕಮಲ್‌ನಾಥ್‌ ಎಂದೂ ವಿಚಾರಣೆಗೆ ಗುರಿಯಾಗಲಿಲ್ಲ. ಬದಲಿಗೆ ತಾನು ಗುಂಪನ್ನು ಚದುರಿಸುತ್ತಿದ್ದೆ ಎಂದೇ ಹೇಳುತ್ತಾ ಬಂದಿದ್ದಾರೆ.

ಅವರ ಈ ವಾದವನ್ನು ಸುಳ್ಳು ಎಂದು ಅಂದಿನ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿಗಾಗರರಾಗಿದ್ದ ಸಂಜಯ್‌ ಸೂರಿ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ವರದಿಗಾರರಾಗಿ ಸಿಖ್‌ ಗಲಭೆಯನ್ನು ಎದುರುಗೊಂಡಿದ್ದ ಅವರು ‘1984: ದಿ ಆಂಡಿ ಸಿಖ್‌ ವಾಯ್ಲೆನ್ಸ್‌ ಆಂಡ್‌ ಆಫ್ಟರ್‌’ ಎಂಬ ಪುಸ್ತಕದಲ್ಲಿ ಕಮಲ್‌ನಾಥ್‌ ಬಗ್ಗೆ ವಿವರವಾಗಿ ಬರೆದಿದ್ದಾರೆ. ಅದರಲ್ಲವರು “ತಾನು ರಾಕಬ್‌ ಗಂಜ್‌ ಗುರುದ್ವಾರದ ಮುಂಭಾಗ ಹೋದಾಗ ಇಬ್ಬರು ಸಿಖ್ಖರನ್ನು ಆಗಷ್ಟೇ ಜೀವಂತವಾಗಿ ಸುಡಲಾಗಿತ್ತು. ಅಲ್ಲೇ ದೂರದಲ್ಲಿ ಕಮಲ್‌ನಾಥ್‌ ಕೆಂಪು ಗೂಟದ ಕಾರ್‌ ಪಕ್ಕ ಬಿಳಿ ಜುಬ್ಬಾ ಪೈಜಾಮ ತೊಟ್ಟು ನಿಂತಿದ್ದರು,” ಎಂಬುದಾಗಿ ಬರೆದಿದ್ದಾರೆ. ಈ ಮೂಲಕ ಗುಂಪನ್ನು ಚದುರಿಸಿದ್ದೆ ಎನ್ನುವ ಕಮಲ್‌ನಾಥ್‌ ಮಾತು ಸುಳ್ಳು ಎಂದು ಅವರು ಪ್ರತಿಪಾದಿಸಿದ್ದಾರೆ.

ಅದೇನೇ ಇರಲಿ; ಪಿಳ್ಳೆ ನೆವ ಹೇಳಿ ಕಮಲ್‌ನಾಥ್‌ ವಿಚಾರಣೆ, ನಂತರದ ಕ್ರಮಗಳಿಂದೆಲ್ಲಾ ತಪ್ಪಿಸಿಕೊಂಡರು. ಆದರೆ ಈ ಘಟನೆ ಅವರ ರಾಜಕೀಯ ಪಯಣಕ್ಕೆ ಭದ್ರ ಬುನಾದಿಯಾಯಿತು. ರಾಜಕೀಯ ಗ್ರಾಫ್‌ ಮೇಲೇರತೊಡಗಿತು. ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಗಾಂಧಿ ಕುಟುಂಬದ ನಂಬಿಕಸ್ಥ ವ್ಯಕ್ತಿಯಾಗಿ ಅವರು ಗುರುತಿಸಿಕೊಂಡರು.

ಹಾಗೆ ನೋಡಿದರೆ ಕಮಲ್‌ನಾಥ್‌ ಮತ್ತು ಸಂಜಯ್‌ ಗಾಂಧಿ ಒಟ್ಟಿಗೆ - ನಿಜವಾದ ಶ್ರೀಮಂತ, ಅಧಿಕಾರ ಕೇಂದ್ರದಲ್ಲಿರುವವರ ಮಕ್ಕಳು ಮಾತ್ರ ಓದುವ - ಡೆಹ್ರಾಡೂನ್‌ನ ‘ದಿ ಡೂನ್‌ ಸ್ಕೂಲ್‌’ನಲ್ಲಿ ಓದಿದವರು. ಕಾಲೇಜು ದಿನಗಳಲ್ಲೇ ಸಂಜಯ್‌ ಗಾಂಧಿ - ಕಮಲ್‌ನಾಥ್‌ ಗೆಳೆಯರಾಗಿದ್ದರು. ಮುಂದೆ ಸಂಜಯ್‌ ಗಾಂಧಿ ಎಂಬ ಹೆಸರು ಭಾರತದ ರಾಜಕಾರಣದಲ್ಲಿ ರಾರಾಜಿಸುತ್ತಿದ್ದಾಗ ಅವರ ನಂಬಿಕಸ್ಥ ಗೆಳೆಯನಾಗಿ ಕಮಲ್‌ನಾಥ್‌ ಗುರುತಿಸಿಕೊಂಡಿದ್ದರು. ಇಂದಿರಾ ಗಾಂಧಿಗೂ ಅವರ ಮೇಲೆ ಅಂಥಹದ್ದೇ ಅಕ್ಕರೆ ಇತ್ತು. ಅದಕ್ಕೆ ಉದಾಹರಣೆಯಾಗಿ 1980ರಲ್ಲಿ ಛಿಂದ್ವಾರದಲ್ಲಿ ಕಮಲ್‌ನಾಥ್‌ ಚುನಾವಣೆಗೆ ನಿಂತಾಗ ಸ್ವತಃ ಇಂದಿರಾ ಗಾಂಧಿ ಪ್ರಚಾರಕ್ಕೆ ಬಂದಿದ್ದರು. ಬಂದವರೇ, “ಈತ ನನ್ನ ಮೂರನೇ ಮಗ. ಈತನಿಗೆ ಮತ ಹಾಕಿ ಗೆಲ್ಲಿಸಿ,” ಎಂದು ಮನವಿ ಮಾಡಿಕೊಂಡಿದ್ದರು. ಆ ಚುನಾವಣೆಯಲ್ಲಿ ಅವರು ಜಯವನ್ನೂ ಸಾಧಿಸಿದರು.

ಮೂರನೇ ಮಗ ಕಮಲ್‌ನಾಥ್‌ ಪರ ಪ್ರಚಾರ ಮುಗಿಸಿ ಕೆಳಗಿಳಿಯುತ್ತಿರುವ ಇಂದಿರಾ ಗಾಂಧಿ.
ಮೂರನೇ ಮಗ ಕಮಲ್‌ನಾಥ್‌ ಪರ ಪ್ರಚಾರ ಮುಗಿಸಿ ಕೆಳಗಿಳಿಯುತ್ತಿರುವ ಇಂದಿರಾ ಗಾಂಧಿ.
/ಹಿತ್ಕಾರಿಣಿ

ಆದರೆ ಅದೇ ಅವಧಿಯಲ್ಲಿ ತಮ್ಮ ತಾಯಿಯಂತಿದ್ದ ಇಂದಿರಾ ಗಾಂಧಿಯನ್ನು ಕಮಲ್‌ನಾಥ್‌ ಕಳೆದುಕೊಂಡರು. ಅಷ್ಟೊತ್ತಿಗಾಗಲೇ ಗಾಂಧಿ ಕುಟುಂಬದಲ್ಲಿ ಪ್ರಮುಖ ಸ್ಥಾನವನ್ನು ಅವರು ಸಂಪಾದಿಸಿದ್ದರು. ಮುಂದೆ ರಾಜೀವ್‌ ಗಾಂಧಿ ಪ್ರಧಾನಿಯಾದಾಗಲೂ ಅವರು ಪಕ್ಕದಲ್ಲೇ ನಿಂತಿರುತ್ತಿದ್ದರು. ಯುಪಿಎ-2ರ ಅವಧಿಯಲ್ಲಿ ಮಿತ್ರ ಪಕ್ಷಗಳನ್ನು ನಿಭಾಯಿಸುವ ಮಹತ್ವದ ಜವಾಬ್ದಾರಿಯನ್ನು ಸೋನಿಯಾ ಗಾಂಧಿ ಕಮಲ್‌ನಾಥ್‌ ಹೆಗಲೇರಿಸಿದ್ದರು. ಇದೀಗ ರಾಹುಲ್‌ ಗಾಂಧಿ ಆಪ್ತಕೂಟದಲ್ಲೂ ಕಮಲ್‌ನಾಥ್‌ ಸ್ಥಾನ ಪಡೆದಿದ್ದಾರೆ.

ಇಂಥಹದ್ದೊಂದು ಆಪ್ತ ಸಂಬಂಧ, ಜತೆಗೆ ರಾಜಕಾರಣ ಮಾಡಲು ಬೇಕಾದ ಚಾಣಾಕ್ಷತೆ, ಹಣಬಲ ಎಲ್ಲವೂ ಕಮಲ್‌ನಾಥ್‌ ಬಳಿಯಲ್ಲಿತ್ತು. ಹೀಗಿದ್ದೂ ಅವರನ್ನು ಮಧ್ಯ ಪ್ರದೇಶ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಮಾಡಿದಾಗ ಎಲ್ಲರೂ ತಮಾಷೆ ಮಾಡಲಾರಂಭಿಸಿದರು. ಅವುಗಳಲ್ಲೇ ಒಂದು ‘ಡೂನ್‌ ಸ್ಕೂಲ್‌ ಜೋಕ್‌’.

ಅದು ಡೂನ್‌ ಸ್ಕೂಲ್‌ ಜೋಕ್‌:

ಕಮಲ್‌ನಾಥ್‌ ಮೂಲತಃ ಉತ್ತರ ಪ್ರದೇಶದವರು. ಕಾನ್ಪುರದಲ್ಲಿ 18 ನವೆಂಬರ್‌ 1946ರಲ್ಲಿ ಹುಟ್ಟಿದ ಅವರು ‘ದಿ ಡೂನ್‌ ಸ್ಕೂಲ್‌’ನಲ್ಲಿ ಆರಂಭಿಕ ವಿದ್ಯಾಭ್ಯಾಸ ಮುಗಿಸಿ ಮುಂದೆ ಕೊಲ್ಕೊತ್ತಾದ ಕ್ಸೇವಿಯರ್‌ ಕಾಲೇಜಿನಿಂದ ಬಿ.ಕಾಂ ಪದವಿ ಪಡೆದುಕೊಂಡಿದ್ದರು. ಹೀಗಾಗಿ ಮಧ್ಯ ಪ್ರದೇಶಕ್ಕೆ ಅವರು ಹೊರಗಿನವರಾಗಿದ್ದರು. ಜತೆಗೆ ಲೋಕಸಭೆ ಹೆಸರಿನಲ್ಲಿ ಅವರು ದೆಹಲಿಯಲ್ಲೇ ನೆಲೆನಿಂತಿದ್ದರಿಂದ ರಾಜ್ಯದಲ್ಲಿ ಅವರಿಗೆ ಹೇಳಿಕೊಳ್ಳುವಂತ ಹೆಸರಾಗಲಿ, ಜನಪ್ರಿಯತೆಯಾಗಲಿ ಇರಲಿಲ್ಲ. ಹೀಗಾಗಿ ಅವರ ನೇಮಕ ಎಲ್ಲರಿಗೂ ಅಚ್ಚರಿಯಾಗಿ ಕಂಡಿತ್ತು. ಈ ಕಾರಣಕ್ಕೆ ಡೂನ್‌ ಸ್ಕೂಲ್‌ ಜೋಕ್‌ ಹರಿದಾಡಲಾರಂಭಿಸಿತು.

ಸ್ವತಃ ಡೂನ್‌ ಸ್ಕೂಲ್‌ನಿಂದ ಬಂದ ರಾಹುಲ್‌ ಗಾಂಧಿ ಇದೇ ಶಾಲೆಯಲ್ಲಿ ಕಲಿತ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ರಿಗೆ ಪಂಜಾಬ್‌ ಹೊಣೆ ನೀಡಿ ಯಶಸ್ವಿಯಾಗಿದ್ದರು. ಹಾಗಾಗಿ ಮಧ್ಯ ಪ್ರದೇಶದಲ್ಲಿ ಅಧಿಕಾರಕ್ಕೇರಲು ಡೂನ್‌ ಸ್ಕೂಲ್‌ ಹಳೆ ವಿದ್ಯಾರ್ಥಿಗಳಿಗೋಸ್ಕರ ಗಾಂಧಿ ಹುಡುಕಾಡುತ್ತಿದ್ದರು. ಆಗ ಸಿಕ್ಕಿದವರೇ ಕಮಲ್‌ನಾಥ್‌ ಎಂಬುದಾಗಿ ಎಲ್ಲರೂ ಅವರು ರಾಜ್ಯಕ್ಕೆ ಮರಳಿದ್ದನ್ನು ಗೇಲಿ ಮಾಡುತ್ತಿದ್ದರು.

ಹಾಗಂಥ ಇದೇನು ನೈಜ ಕಾರಣವಾಗಿರಲಿಲ್ಲ. ಜತೆಗೆ ವಿರೋಧಿಗಳು ಗೇಲಿ ಮಾಡುವಂಥ ಕೆಟ್ಟ ನಿರ್ಧಾರವೂ ಆದಾಗಿರಲಿಲ್ಲ. ಹಾಗೆ ನೋಡಿದರೆ ಜ್ಯೋತಿರಾದಿತ್ಯ ಸಿಂಧ್ಯ ಕೂಡ ಡೂನ್‌ ಸ್ಕೂಲ್‌ನಿಂದ ಬಂದವರೇ. ಆದರೆ ಇಲ್ಲಿ ಕಮಲ್‌ನಾಥ್‌ ಆಯ್ಕೆಗೆ ಅವರ ಹಣ ಬಲ ಮುಖ್ಯವಾಗಿತ್ತು.

ಶ್ರೀಮಂತ ರಾಜಕಾರಣಿ ಕಮಲ್‌ನಾಥ್‌.
ಶ್ರೀಮಂತ ರಾಜಕಾರಣಿ ಕಮಲ್‌ನಾಥ್‌.
/ಇಂಡಿಯಾ ಟುಡೇ

2011ರಲ್ಲಿ ಕೇಂದ್ರದ ಶ್ರೀಮಂತ ಸಚಿವ ಎಂದು ಗುರುತಿಸಿಕೊಂಡಿದ್ದ ಕಮಲ್‌ನಾಥ್‌ 263 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದರು. ಅವರು ಮತ್ತು ಅವರ ಕುಟುಂಬಸ್ಥರು 25 ಕಂಪನಿಗಳಲ್ಲಿ ಅವತ್ತಿಗೆ ಷೇರುಗಳನ್ನು ಹೊಂದಿದ್ದರು. ಬಾಲಿಯಲ್ಲಿ ಹೋಟೆಲ್‌ ಉದ್ಯಮದಿಂದ ವೈಮಾನಿಕ ಸಂಸ್ಥೆಗಳವರೆಗೆ ಅವರು ತಮ್ಮ ವಾಣಿಜ್ಯ ವ್ಯವಹಾರವನ್ನು ಇಂದಿಗೂ ಇಟ್ಟುಕೊಂಡಿದ್ದಾರೆ. ಕೇಂದ್ರ ವಾಣಿಜ್ಯ ಖಾತೆ ಸಚಿವರಾಗಿದ್ದ ಅವರು ಉದ್ಯಮಿಗಳ ಜತೆ ಆಪ್ತ ಸಂಬಂಧವನ್ನು ಹೊಂದಿದ್ದಾರೆ. ಎಲ್ಲಿವರೆಗೆ ಎಂದರೆ ಪ್ರಧಾನಿ ಪಕ್ಕದಲ್ಲೇ ಕಾಣಿಸಿಕೊಳ್ಳುವ ಗೌತಮ್‌ ಅದಾನಿಯೂ ಇವರ ಜಾಲದಲ್ಲಿದ್ದಾರೆ. ಸಂಕಷ್ಟದ ದಿನಗಳನ್ನು ಎದುರಿಸುತ್ತಿರುವ ಪಕ್ಷಕ್ಕೆ ಅವರು ನಿಧಿ ತರಬಲ್ಲರು ಎಂಬ ಒಂದೇ ಕಾರಣಕ್ಕೆ ಅವರನ್ನು ಮಧ್ಯ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.

ನೇಮಕವನ್ನು ಸಮರ್ಥಿಸಿಕೊಳ್ಳುವಂತೆ ಅವರು ತಮ್ಮ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿಭಾಯಿಸಿದರು. ರಾಜಸ್ಥಾನದಲ್ಲಿ ಕಾಂಗ್ರೆಸ್‌ ಗೆದ್ದೇ ಗೆಲ್ಲುತ್ತದೆ ಎಂದು ಗೊತ್ತಿದ್ದರೂ ಅಲ್ಲಿ ಪಕ್ಷ ಹಣದ ಕೊರತೆ ಅನುಭವಿಸುತ್ತಿತ್ತು. ಎಲ್ಲಿವರೆಗೆ ಎಂದರೆ ಬಹಿರಂಗವಾಗಿ ಹೇಳುವಷ್ಟು ಪಕ್ಷದ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ಆದರೆ ಮಧ್ಯ ಪ್ರದೇಶದಲ್ಲಿ ಹಾಗಾಗಲಿಲ್ಲ. ಚುನಾವಣೆಯಲ್ಲಿ ಹಣದ ಕೊರತೆಯಾಗದಂತೆ ಅವರು ನೋಡಿಕೊಂಡರು.

ಆದರೆ ಅವರು ಅಷ್ಟನ್ನು ಮಾತ್ರ ಮಾಡಲಿಲ್ಲ. ಅವರು ಅಷ್ಟೇ ಮಾಡಿದ್ದರೆ ಇಂದು ಮುಖ್ಯಮಂತ್ರಿ ಗಾದಿಯ ಸಮೀಪ ಬರುವುದು ಸಾಧ್ಯವಿರಲಿಲ್ಲ. ಮಧ್ಯ ಪ್ರದೇಶಕ್ಕೆ ಬಂದಿಳಿದ ಕಮಲ್‌ನಾಥ್‌ ತಾವೆಂಥ ರಾಜಕಾರಣಿ ಎಂಬುದನ್ನು ಹೊರ ಹಾಕಿದರು. ಕಮಲ್‌ನಾಥ್‌ ಏನು ಮಾಡಬಹುದು ಎಂಬ ನಿರೀಕ್ಷೆ ಇತ್ತೋ ಅದನ್ನು ಮೀರಿ ದಾಳ ಉರುಳಿಸಿದರು. ತಮ್ಮ ಮೊದಲ ಪ್ರವಾಸದಲ್ಲಿ ಮೂರು ದೇವಸ್ಥಾನಗಳಿಗೆ ತೆರಳಿ ಅಡ್ಡಡ್ಡ ಬಿದ್ದರು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿ ಗ್ರಾಮಗಳಲ್ಲಿ ಗೋಶಾಲೆ ಆರಂಭಿಸುವುದಾಗಿ ಘೋಷಿಸಿದರು. ಬಿಜೆಪಿಯ ಗೋ ರಾಜಕಾರಣವನ್ನು ಕೈವಶ ಮಾಡಿಕೊಂಡವರು, ಹಿಂದೂ ವಿರೋಧಿ ಎಂಬ ಆರೋಪಗಳನ್ನು ತೊಡೆದು ಹಾಕಲು ಸಾಕಷ್ಟು ಶ್ರಮಿಸಿದರು. ತಮ್ಮ ಕ್ಷೇತ್ರದಲ್ಲಿ ತಾವು ಕಟ್ಟಿದ ಹನುಮಂತನ ದೇವಸ್ಥಾನದ ಚಿತ್ರಗಳನ್ನು ಫ್ಲೆಕ್ಸ್‌ಗಳಲ್ಲಿ ಮುದ್ರಣವಾಗುವಂತೆ ನೋಡಿಕೊಂಡರು. ತಮ್ಮ ಕಚೇರಿಯ ಗೋಡೆಗಳ ತುಂಬಾ ಹಿಂದೂ ದೇವ ದೇವತೆಗಳ ಚಿತ್ರಗಳು ರಾರಾಜಿಸಿದವು. ರಾಹುಲ್‌ ಗಾಂಧಿ ರಾಜ್ಯಕ್ಕಾಗಮಿಸುವ ದಿನ ಅವರು ಶಿವಲಿಂಗಕ್ಕೆ ಪೂಜೆ ಮಾಡುವ ಫ್ಲೆಕ್ಸ್‌ಗಳನ್ನು ರ್ಯಾಲಿಯ ದಾರಿಯುದ್ದಕ್ಕೂ ಹಾಕಿದರು. ‘ಸಾಫ್ಟ್‌ ಹಿಂದುತ್ವ’ ಕೈ ಹಿಡಿಯಿತು.

ಬೆನ್ನಿಗೆ ಕೃಷಿಕರ ಸಮಸ್ಯೆಗಳನ್ನು ಅವರು ಕೈಗೆತ್ತಿಕೊಂಡರು. ಅದಕ್ಕೂ ಮೊದಲು ರಾಜ್ಯದಲ್ಲಿ ಸರಕಾರ ಗೋಲಿಬಾರ್‌ ನಡೆಸಿತ್ತು. ಜತೆಗೆ ಕೃಷಿಕರ ಪರ ಕೇಂದ್ರ ಸಚಿವರಾಗಿದ್ದಾಗ ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಎಂಬ ಅಭಿಪ್ರಾಯ ಕಮಲ್‌ನಾಥ್‌ ಮೇಲೆಯೂ ಇತ್ತು. ಎರಡನ್ನೂ ಒಟ್ಟುಗೂಡಿಸಿ ಶಿವರಾಜ್‌ ಸಿಂಗ್‌ ಚೌಹಾಣ್‌ ವಿರುದ್ಧ ಕಮಲ್‌ನಾಥ್‌ ಬಾಣ ಹೂಡಿದರು.

ಒಡೆದ ಮನೆಯಾಗಿದ್ದ ರಾಜ್ಯ ಕಾಂಗ್ರೆಸ್‌ನ್ನು ಒಟ್ಟು ಗೂಡಿಸಿದರು. ಅವರ ಬೇಡಿಕೆಯ ಮೇರೆಗೋ, ಅವರಾಗಿಯೋ ಗೊತ್ತಿಲ್ಲ; 10 ವರ್ಷ ಮಧ್ಯ ಪ್ರದೇಶವನ್ನು ಆಳಿದ ದಿಗ್ವಿಜಯ್‌ ಸಿಂಗ್‌ ಪ್ರಚಾರದಿಂದ ಸಂಪೂರ್ಣವಾಗಿ ದೂರ ಉಳಿದು ಬಿಟ್ಟರು. ಅದು ಕಾಂಗ್ರೆಸ್‌ಗೆ ನಿಜವಾಗಿಯೂ ಲಾಭ ತಂದುಕೊಟ್ಟಿತು. ಎಸ್‌ಸಿ, ಎಸ್‌ಟಿ ಕಾಯ್ದೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ದಲಿತರು ಹೋರಾಟ ನಡೆಸಿದಾಗ ಅದನ್ನು ಬೆಂಬಲಿಸಿದ ಕಮಲ್‌ನಾಥ್‌ ‘ಬಿಜೆಪಿಗೆ ದಲಿತರ ಬಗ್ಗೆ ಕಾಳಜಿಯಿಲ್ಲ’ ಎಂದು ಬಿಟ್ಟರು. ಹೀಗೆ ಬಂದ ಅವಕಾಶಗಳನ್ನೆಲ್ಲಾ ಅವರು ಬಳಸಿಕೊಂಡರು. ಅದಕ್ಕೆ ಅವರದ್ದೇ ಆದ ಕಾರಣಗಳಿದ್ದವು.

ಅವರಿಗೆ ಮಧ್ಯ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷತೆ ನೀಡಿದಾಗ ಹೊರಗಿನವರು ಎಂಬ ಆರೋಪ ಕೇಳಿ ಬಂತು. ಬ್ರಾಹ್ಮಣರಾಗಿರುವ ಕಮಲ್‌ನಾಥ್‌ಗೆ ಯಾವುದೇ ಜಾತಿ ಬೆಂಬಲವೂ ಇರಲಿಲ್ಲ. ಇದ್ದಿದ್ದು ಹಣ ಬಲ ಮಾತ್ರ. ಹೀಗಿರುವಾಗ ಅವರು ರಾಜಕೀಯ ತಂತ್ರಗಳನ್ನು ಹೆಣೆಯಲೇ ಬೇಕಿತ್ತು. ಬಿಜೆಪಿಗೆ ಸಮಸ್ಯೆಯಾಗಿದ್ದೇ ಇಲ್ಲಿ.

‘ನಾನೇ ಬಾಸ್‌’ ಎನ್ನುತ್ತಿದ್ದಾರಾ ಕಮಲ್‌ನಾಥ್‌?
‘ನಾನೇ ಬಾಸ್‌’ ಎನ್ನುತ್ತಿದ್ದಾರಾ ಕಮಲ್‌ನಾಥ್‌?
/ಇಂಡಿಯಾ ಟುಡೇ

ಗ್ವಾಲಿಯರ್‌ ರಾಜಮನೆತನಕ್ಕೆ ಸೇರಿದ ಜ್ಯೋತಿರಾದಿತ್ಯ ಸಿಂಧ್ಯ ಕಾಂಗ್ರೆಸ್‌ ಸಿಎಂ ಅಭ್ಯರ್ಥಿಯಾದರೆ ‘ರಾಜ (ಸಿಂಧ್ಯ ) ವರ್ಸಸ್‌ ಸಾಮಾನ್ಯ ವ್ಯಕ್ತಿ (ಚೌಹಾಣ್‌)‘ ನಡುವಿನ ಹೋರಾಟ ಇದು ಎಂದು ಬಿಂಬಿಸಲು ಬಿಜೆಪಿ ಸಜ್ಜಾಗಿತ್ತು. ಆದರೆ ಆಗಿದ್ದೇ ಬೇರೆ ಕಮಲ್‌ನಾಥ್‌ ಬಂದರು. ಕಮಲ್‌ನಾಥ್‌ ರಾಜಕೀಯ ನಡೆಗಳು, ಹಣಕಾಸು ಜಾಲವನ್ನು ಬಿಜೆಪಿಗೆ ಎದುರಿಸುವುದು ಕಷ್ಟವಾಯ್ತು.

ಪರಿಣಾಮ ಅವರಿವತ್ತು ಮುಖ್ಯಮಂತ್ರಿ ಹುದ್ದೆಯ ಸಮೀಪ ಬಂದು ನಿಂತಿದ್ದಾರೆ. ‘ಕಮಲ್‌ನಾಥ್‌ ಏನೇ ಮಾಡಿದರೂ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಬಹುದು. ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರಲು ಸಾಧ್ಯವಿಲ್ಲ’ ಎಂಬ ವಿಶ್ಲೇಷಣೆಗಳಿದ್ದವು. ಆದರೆ ಕಮಲ್‌ನಾಥ್‌ ಅಧಿಕಾರದ ತೀರಾ ಸಮೀಪಕ್ಕೆ ಪಕ್ಷವನ್ನು ಎಳೆದು ತಂದಿದ್ದಾರೆ. ಜತೆಗೆ ಮುಖ್ಯಮಂತ್ರಿ ಗಾದಿಗೂ ಟವಲ್‌ ಹಾಕಿದ್ದಾರೆ. ಚುನಾವಣೆ ಫಲಿತಾಂಶ ಹೊರ ಬೀಳುವ ಮುನ್ನವೇ ಸೋಮವಾರದಂದೇ ಕಾಂಗ್ರೆಸ್‌ ಕಚೇರಿ ಸಮೀಪವೇ ತಮ್ಮ ಫ್ಲೆಕ್ಸ್‌ಗಳನ್ನು, ಭಾವಿ ಮುಖ್ಯಮಂತ್ರಿಗೆ ಅಭಿನಂದನಾ ಸಂದೇಶಗಳು ರಾರಾಜಿಸುವಂತೆ ನೋಡಿಕೊಂಡಿದ್ದಾರೆ. ಕಮಲ್‌ನಾಥ್‌ ಅಂದರೇನೇ ಹಾಗೆ; ತಂತ್ರಗಾರ. ಎಲ್ಲರೂ ಒಂದು ಆಲೋಚನೆ ಮಾಡುತ್ತಿದ್ದರೆ ಅವರು ಇನ್ನೊಂದು ಆಲೋಚನೆ ಮಾಡುತ್ತಿರುತ್ತಾರೆ. ಬಿಜೆಪಿಯನ್ನು ಸೋಲಿಸಿದ ಅವರು ಇದೀಗ ಮುಖ್ಯಮಂತ್ರಿ ರೇಸ್‌ನಲ್ಲಿ ಹಿರಿಯ ತಲೆ ದಿಗ್ವಿಜಯ್‌ ಸಿಂಗ್‌ ಹಾಗೂ ಯುವ ನಾಯಕ ಜ್ಯೋತಿರಾದಿತ್ಯ ಸಿಂಧ್ಯರನ್ನು ಕೆಡವಿದ್ದಾರೆ. ಸದ್ಯಕ್ಕೆ ಮಧ್ಯ ಪ್ರದೇಶ ಸಿಎಂ ಗಾದಿಯ ಓಟದಲ್ಲಿ ಉಳಿದವರೊಬ್ಬರೇ; ಕಮಲ್‌ನಾಥ್‌!

ಚಿತ್ರ ಕೃಪೆ: ಇಂಡಿಯಾ ಟುಡೇ

To join Samachara CLICK HERE.