samachara
www.samachara.com
ಪಂಚ ರಾಜ್ಯಗಳ ಫಲಿತಾಂಶ: ಹೇಳದೆ ಉಳಿದ ಆಯಾಮಗಳು ಹೀಗಿವೆ...
COVER STORY

ಪಂಚ ರಾಜ್ಯಗಳ ಫಲಿತಾಂಶ: ಹೇಳದೆ ಉಳಿದ ಆಯಾಮಗಳು ಹೀಗಿವೆ...

ಸೋತಿರುವ ಬಿಜೆಪಿಗಷ್ಟೇ ಅಲ್ಲ ಉತ್ತರ ಭಾರತದ ಮೂರು ನಿರ್ಣಾಯಕ ರಾಜ್ಯಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ಗೂ ಇದು ಆತ್ಮವಿಮರ್ಶೆಯ ಕಾಲ, ಜತೆಗೆ ಬಹುದಿನಗಳ ಕಾಲ ಅದುಮಿಟ್ಟ ಸಂಭ್ರಮವನ್ನು ಆಚರಿಸುವ ಅವಕಾಶ. 

ಲೋಕಸಭೆ ಚುನಾವಣೆಯನ್ನು ಎದುರಿಗೆ ಇಟ್ಟುಕೊಂಡು ನಡೆದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಫಲಿತಾಂಶ ಸ್ಪಷ್ಟ ಸಂದೇಶವನ್ನು ತನ್ನದೇ ಆದ ಭಾಷೆಯಲ್ಲಿ ರವಾನಿಸಿದೆ.

'ಈ ದೇಶದ ಜನ ಅತಿರೇಕಗಳನ್ನು ಸಹಿಸುವುದಿಲ್ಲ & ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷಗಳೇ ಇಲ್ಲದೆ, ಆಡಳಿತ ಪಕ್ಷವೊಂದೇ ನಡೆಸುವ ಸರ್ವಾಧಿಕಾರಿ ಆಡಳಿತವನ್ನು ಒಪ್ಪುವುದಿಲ್ಲ' ಎಂಬುದು ಐದೂ ರಾಜ್ಯಗಳು ಬಿಡಿ ಬಿಡಿಯಾಗಿ ನೀಡಿರುವ ಫಲಿತಾಂಶದ ಹೈಲೈಟ್ಸ್‌. ಇಡೀ ದೇಶವನ್ನು ಅಚ್ಚರಿಗೆ, ಹೊಸ ಸಾಧ್ಯತೆಗಳಿಗೆ, ಆತ್ಮ ವಿಮರ್ಶೆಗೆ, ಆಡಳಿತ ಪಕ್ಷವನ್ನು ಆತಂಕಕ್ಕೆ, ಪುರಾತನ ಪಕ್ಷ ಕಾಂಗ್ರೆಸ್‌ನ್ನು ಸಂಭ್ರಮಕ್ಕೆ ದೂಡಿರುವುದು ಫಲಿತಾಂಶ ಸೃಷ್ಟಸಿದ ರಾಜಕೀಯ ಭಾವ ಪ್ರಪಂಚ.

ಆರಂಭ- ಮಧ್ಯದಲ್ಲಿ ಎಂಪಿ ಟ್ವಿಸ್ಟ್:

ಮಂಗಳವಾರ ಮತ ಎಣಿಕೆ ಆರಂಭವಾಗಿದ್ದು ಎಂಟು ಗಂಟೆ ಸುಮಾರಿಗೆ. ಅಲ್ಲಿಂದ ಮುಂದಿನ ಒಂದು ಗಂಟೆಗಳ ಅಂತರದಲ್ಲಿ ಪಂಚ ರಾಜ್ಯಗಳ ಫಲಿತಾಂಶದತ್ತ ದೇಶದ ಒಂದು ದೊಡ್ಡ ವರ್ಗ ಗಮನಹರಿಸಲು ಶುರುಮಾಡಿತು. ಮಧ್ಯ ಪ್ರದೇಶ, ರಾಜಸ್ತಾನ ಹಾಗೂ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಆರಂಭಿಕ ಮುನ್ನಡೆ ಕಾಯ್ದುಕೊಂಡಿತು. ಮಿಝೋರಾಂ ಹಾಗೂ ತೆಲಂಗಾಣದ ಜನ ಎರಡೂ ರಾಷ್ಟ್ರೀಯ ಪಕ್ಷಗಳನ್ನು ದೂರ ಇಟ್ಟಿದ್ದಾರೆ ಎಂಬುದನ್ನು ಆರಂಭದ 'ಟ್ರೆಂಡ್‌' ಮುನ್ಸೂಚನೆ ನೀಡಿತು.

ಮುಂಜಾನೆ ಕಳೆದು ಬಿಸಿಲು ತಲೆಗೇರುವ ಹೊತ್ತಿಗೆ, ಮಧ್ಯ ಪ್ರದೇಶದ ಮತ ಎಣಿಕೆ ಅಕ್ಷರಶಃ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನಿಜವಾದ ಜಿದ್ದಾಜಿದ್ದಿನ ಕಣವಾಗಿದೆ ಎಂಬುದನ್ನು ಸ್ಪಷ್ಟಪಡಿಸಿತು. ಆರಂಭಿಕ ಸೂಚ್ಯಂಕಗಳು ಉಳಿದ ರಾಜ್ಯಗಳಲ್ಲಿ ಮುಂದುವರಿದರೆ, ಮಧ್ಯ ಪ್ರದೇಶದ ಫಲಿತಾಂಶ ಮಾತ್ರ ಟಿ-20 ಮ್ಯಾಚ್‌ ನೆನಪಿಸಲು ಆರಂಭಿಸಿತು. ಒಮ್ಮೆ ಬಿಜೆಪಿ ಮೇಲೇದರೆ, ಮರುಕ್ಷಣ ಕಾಂಗ್ರೆಸ್ ಮೇಲೇರುತ್ತಿತ್ತು.

ಇಡೀ ದಿನ ಹೀಗೇ ಸಾಗಿದ ಫಲಿತಾಂಶ ಅಂಕಿಸಂಖ್ಯೆಯ ಆಟ ಮಧ್ಯರಾತ್ರಿಯವರೆಗೂ ನಡೆಯಿತು. ಅಂತಿಮ ಫಲಿತಾಂಶ ಹೊರಬೀಳುವ ಹೊತ್ತಿಗೆ ನಡುರಾತ್ರಿ ದಾಟಿತ್ತು. ಆದರೆ, ಬಿಜೆಪಿಗಿಂತ ಹೆಚ್ಚಿನ ಸ್ಥಾನಗಳನ್ನಂತೂ ತಾನು ಗಳಿಸುವ ವಿಶ್ವಾಸ ಹೊಂದಿದ್ದ ಕಾಂಗ್ರೆಸ್‌ ರಾತ್ರಿ 10.30ರ ಹೊತ್ತಿಗೆ ಸರಕಾರ ರಚನೆಗೆ ಅವಕಾಶ ನೀಡುವಂತೆ ಕೋರಿ ಮಧ್ಯಪ್ರದೇಶದ ರಾಜ್ಯಪಾಲರಿಗೆ ಮನವಿ ಪತ್ರ ಕಳಿಸಿತ್ತು. ಬಹುಮತ ಪಡೆದ ಏಕೈಕ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್‌ಗೆ ಎಲ್ಲಾ ಸ್ವತಂತ್ರ ಅಭ್ಯರ್ಥಿಗಳ ಬೆಂಬಲವಿದೆ ಎಂದು ಘೋಷಿಸಿಕೊಂಡಿದ್ದ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಕಮಲ್‌ನಾಥ್‌ ರಾಜಭವನಕ್ಕೆ ಮನವಿ ಪತ್ರ ಕಳಿಸಿದ್ದರು.

ಈ ಮಧ್ಯೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಲೊಪ್ಪಿಕೊಂಡಿದ್ದರು. ಜನತೆ ನೀಡಿರುವ ಜನಾದೇಶವನ್ನು ಗೌರವಿಸುವುದಾಗಿ ಮೋದಿ ಟ್ವೀಟ್‌ ಮಾಡಿದ್ದರು. ಆದರೆ, ಅಮಿತ್‌ ಶಾ ಸೇರಿದಂತೆ ಉಳಿದ ಯಾವೊಬ್ಬ ಪ್ರಮುಖ ಬಿಜೆಪಿ ನಾಯಕರೂ ಸೋಲಿನ ಬಗ್ಗೆ ಮೌನ ಮುರಿಯಲಿಲ್ಲ. ಮಧ್ಯರಾತ್ರಿ 2.38ಕ್ಕೆ ಸುದ್ದಿಗೋಷ್ಠಿ ನಡೆಸಿದ ಕಮಲ್‌ನಾಥ್‌, “ನಮಗೆ ಸ್ಪಷ್ಟ ಬಹುಮತ ಸಿಕ್ಕಿದೆ” ಎಂದು ಘೋಷಿಸಿದರು. ಆದರೆ, ಆ ಹೊತ್ತಿಗೆ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಕಾಂಗ್ರೆಸ್‌ 114 ಸ್ಥಾನಗಳಲ್ಲಷ್ಟೇ ಮುಂದಿತ್ತು.

'ಕ್ವೀನ್ ರಾಜೆ'ಗೆ ವಿಶ್ರಾಂತಿ:

ದಿಲ್ಲಿಯಲ್ಲಿರುವ ಐಶಾರಾಮಿ ಮನೆಯಲ್ಲಿ ವಸುಂಧರಾ ರಾಜೇ. 
ದಿಲ್ಲಿಯಲ್ಲಿರುವ ಐಶಾರಾಮಿ ಮನೆಯಲ್ಲಿ ವಸುಂಧರಾ ರಾಜೇ. 

ರಾಜಸ್ತಾನದ ಫಲಿತಾಂಶ ನಿರೀಕ್ಷೆಯಂತೆಯೇ ಮಹಾರಾಣಿಯ ಮನಸ್ಥಿತಿಯಲ್ಲಿ ಮುಖ್ಯಮಂತ್ರಿ ಹುದ್ದೆ ನಿಭಾಯಿಸುತ್ತಿದ್ದ ವಸುಂಧರಾ ರಾಜೇಗೆ ಅವರಿಗೆ ವಿಶ್ರಾಂತಿ ನೀಡಿತು. ಒಟ್ಟು 199 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಉತ್ತರ ಭಾರತದ ಬೃಹತ್ ರಾಜ್ಯ ಇದು. ಅಂತಿಮ ಫಲಿತಾಂಶ ಹೊರಬಿದ್ದಾಗ 102 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಗಳಿಸುವ ಮೂಲಕ ಅಧಿಕಾರ ಹಿಡಿದಿದೆ. ಬಿಜೆಪಿಯನ್ನು ರಾಜಸ್ತಾನದ ಜನ 72 ಸ್ಥಾನಕ್ಕೆ ಸೀಮಿತಗೊಳಿಸಿದ್ದಾರೆ. ಐದು ವರ್ಷಗಳ ಹಿಂದೆ ಅತ್ಯಂತ ಹೀನಾಯ ಸ್ಥಿತಿಯನ್ನು ಇಲ್ಲಿನ ಪ್ರದೇಶ ಕಾಂಗ್ರೆಸ್ ಕಂಡಿತ್ತು. ಲೋಕಸಭಾ ಚುನಾವಣೆಯಲ್ಲಿ ಇರುವ 25 ಸ್ಥಾನಗಳನ್ನೂ ಬಿಜೆಪಿ ತೆಕ್ಕೆಗೆ ಹಾಕಿಕೊಂಡಿತ್ತು. ಇಂತಹ ಸ್ಥಿತಿಯಲ್ಲಿ ಯುವ ನಾಯಕ ಸಚಿನ್ ಪೈಲಟ್ ಪಕ್ಷವನ್ನು ಕಟ್ಟುವ ಕೆಲಸವನ್ನು ತಳಮಟ್ಟದಿಂದ ಆರಂಭಿಸಿದರು.

ಜತೆಗೆ, ಹಿರಿಯ ನಾಯಕ ಅಶೋಕ್ ಗೆಹಲೋಟ್ ಕೂಡ ತಮ್ಮ ಗ್ರಾಮೀಣ ಭಾಗಗಳಲ್ಲಿ ಹೊಂದಿದ್ದ ಜನಪ್ರಿಯತೆಯನ್ನು ಬಳಸಿಕೊಂಡು ಚುನಾವಣೆಯನ್ನು ಎದುರಿಸಿದರು. ಒಬ್ಬರು ಹಿರಿ- ಕಿರಿಯ ನಾಯಕರ ಶ್ರಮ ಈಗ ಮಹಾರಾಣಿ ರಾಜೇಯನ್ನು ಮನೆಗೆ ಕಳುಹಿಸಿ, ಅಧಿಕಾರಕ್ಕೆ ಕಾಂಗ್ರೆಸ್‌ ಪಕ್ಷವನ್ನು ತಂದಿಟ್ಟಿದೆ. ಈಗಿರುವುದು ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು? ಸಚಿನ್ ಪೈಲಟ್ ಹಾಗೂ ಅಶೋಕ್ ಗೆಹಲೋಟ್ ಇಬ್ಬರೂ; 'ತೀರ್ಮಾನವನ್ನು ರಾಹುಲ್ ಗಾಂಧಿ ತೆಗೆದುಕೊಳ್ಳುತ್ತಾರೆ' ಅಂತಿದ್ದಾರಾದರೂ, ಮುಖ್ಯಮಂತ್ರಿ ಪದವಿ ಏರುವ ಮನಸ್ಸು ಇಬ್ಬರಿಗೂ ಇದೆ. ಹೀಗಾಗಿ ಮುಂದಿನ ಕೆಲವು ದಿನಗಳ ಕಾಲಾವಕಾಶವನ್ನು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡ ನಂತರವೇ ಮುಖ್ಯಮಂತ್ರಿ ಯಾರು ಎಂಬ ಅಂತಿಮ ನಿರ್ಣಯ ಹೊರಬೀಳಬೇಕಿದೆ. ಅಲ್ಲೀವರೆಗೆ ರಾಜಸ್ತಾನದ ಜನ ಹೊಸ ಸರಕಾರ ರಚನೆ ಪ್ರಕ್ರಿಯೆ ಜತೆಗೆ ಉಳಿಯಬೇಕಿದೆ.

ಕೆಸಿಆರ್‌ ಮತ್ತೊಂದು ಆಟ:

ತೆಲಂಗಾಣದಲ್ಲಿ ಹೊರಗಿನ 'ಪೈಲಟ್‌- ಪೊಯೆಟ್- ಪ್ರೊಫೆಸರ್‌'ಗಳಿಗಿಂತ ನಮ್ಮವರೇ ಆದ 'ದುಬೈ ಶೇಖರ' ಸಾಕು ಅಂದಿದ್ದಾರೆ ಜನ. ರಾಷ್ಟ್ರೀಯ ಪಕ್ಷವಾದರೂ ಬಿಜೆಪಿಗೆ ಅಂತಹ ನೆಲೆಯನ್ನು ಇನ್ನೂ ತೆಲಂಗಾಣದಲ್ಲಿ ಜನ ನೀಡಿಲ್ಲ. ಕಾಂಗ್ರೆಸ್ ಮೈತ್ರಿ ಮೂಲಕ ಅಧಿಕಾರ ನಡೆಸಲು ಮುಂದಾದರೂ ಅದಕ್ಕೂ ಜನ ಆಸ್ಪದ ನೀಡಿಲ್ಲ. ಹೊಸ ರಾಜ್ಯವನ್ನು ಕಟ್ಟಿಕೊಂಡು ಹೋಮ ಹವನ ಅಂತ ಕಳೆದ ಕೆ. ಚಂದ್ರಶೇಖರ್ ರಾವ್ ಮೇಲಿನ ಅಭಿಮಾನವನ್ನು ಈ ಬಾರಿಯೂ ಮತಗಳಾಗಿ ನೀಡಿದ್ದಾರೆ ಜನ.

ಒಟ್ಟು 119 ಸ್ಥಾನಗಳನ್ನು ಹೊಂದಿರುವ ತೆಲಂಗಾಣದಲ್ಲಿ ಎಲ್ಲಾ ಸಮೀಕ್ಷೆಗಳನ್ನು ಮೀರಿ ಟಿಆರ್‌ಎಸ್‌ 87 ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಕಾಂಗ್ರೆಸ್ ನೇತೃತ್ವದ ಮಿತ್ರಕೂಟ 22 ಸ್ಥಾನಗಳಿಗೆ ಸೀಮಿತವಾಗುವ ಮೂಲಕ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲಿದೆ. ಬಿಜೆಪಿ ಒಂದು ಕ್ಷೇತ್ರದಲ್ಲಿ ಖಾತೆ ತೆಗೆದಿದೆ ಅಷ್ಟೆ.

ಈಶಾನ್ಯ ಭಾರತದ ಬುದ್ದಿವಂತರು:

ಮಿಝೋರಾಂ ಜನ ತಾವು ಬುದ್ದಿವಂತರು ಎಂಬುದನ್ನು ಸಂಕಷ್ಟಗಳ ನಡುವೆಯೂ ಸಾಬೀತುಪಡಿಸಿದ್ದಾರೆ. ಈಶಾನ್ಯ ಭಾರತದ ಪುಟ್ಟ ರಾಜ್ಯದಲ್ಲಿ ಪ್ರತ್ಯೇಕ ರಾಷ್ಟ್ರದ ಸಶಸ್ತ್ರ ಹೋರಾಟ ಸಾಕಷ್ಟು ರಕ್ತ ಹರಿಸಿತ್ತು. ಕಾಡಿನಲ್ಲಿ ಬಂದೂಕು ಹಿಡಿದವರನ್ನು ಚುನಾವಣೆಯಲ್ಲಿ ಅಧಿಕಾರ ನೀಡಿ, ಅವರು ತಪ್ಪು ಮಾಡಿದಾಗ ಮನೆಗೆ ಕಳುಹಿಸಿದ್ದರು ಇಲ್ಲಿನ ಜನ. ಇದೀಗ ಮತ್ತೆ ಬಂಡುಕೋರ ಹಿನ್ನೆಲೆಯ ರಾಜಕೀಯ ಪಕ್ಷ ಎಂಎನ್‌ಎಫ್‌ಗೆ ಅಧಿಕಾರ ನೀಡಿದ್ದಾರೆ.

ಒಂದು ಕಡೆ ರಾಷ್ಟ್ರೀಯ ಪಕ್ಷಗಳನ್ನು ದೂರವಿಟ್ಟ ಮಿಝೋರಾಂ ತನ್ನ ಭವಿಷ್ಯವನ್ನು ತಾನೇ ಸ್ವತಂತ್ರವಾಗಿ ಕಂಡುಕೊಳ್ಳುವ ಸ್ವಾಭಿಮಾನವನ್ನು ತೋರಿಸಿದೆ.

ಇಂತಹದ್ದೇ ಹಿನ್ನೆಲೆಯ ಆಂತರಿಕ ಸಶಸ್ತ್ರ ಹೋರಾಟವನ್ನು ಎದುರಿಸುತ್ತಿರುವ ಛತ್ತೀಸ್‌ಗಢದ ಜನರಿಗೆ ಬಿಜೆಪಿಯ 'ಸೆಲ್ವಾ ಜುಡಂ'ಗಿಂತ ಕಾಂಗ್ರೆಸ್‌ನ 'ಕೋಬ್ರಾ ಟೀಂ' ಸಹನೀಯ ಅನ್ನಿಸಿದೆ. ಆದಿವಾಸಿಗಳನ್ನು ನಡುವೆ ಇಟ್ಟುಕೊಂಡು ಇಲ್ಲಿ ನಡೆದುಕೊಂಡು ಬಂದ ನಕ್ಸಲ್ ವಿರೋಧಿ ಕಾರ್ಯಾಚರಣೆ, ಈ ಸಮಯದಲ್ಲಿ ಬಿಜೆಪಿ ತೆಗೆದುಕೊಂಡ ತೀರ್ಮಾನಗಳು, ಇತ್ತೀಚೆಗೆ ಮೈನಿಂಗ್ ವಿಚಾರದಲ್ಲಿ ಬಿಜೆಪಿಯ ದೂರ್ತ ನಿರ್ಧಾರಗಳು ರಾಷ್ಟ್ರೀಯ ಪಕ್ಷಕ್ಕೆ ಮುಳುವಾಗಿವೆ. ಜನ ಕಾಂಗ್ರೆಸ್‌ಗೆ ಜೈ ಎನ್ನುವ ಮೂಲಕ ಇರುವ ಅವಕಾಶದಲ್ಲಿಯೇ ಬದಲಾವಣೆಯ ಸಾಧ್ಯತೆಯನ್ನು ಕಂಡುಕೊಂಡಂತೆ ಜನಾದೇಶ ನೀಡಿದ್ದಾರೆ.

‘ನಗರ ನಕ್ಸಲ’ರನ್ನು ನಿಯಂತ್ರಿಸುವುದಾಗಿ ಬಂಧನಗಳ ಪ್ರಹಸನ ನಡೆಸಿದ ಬಿಜೆಪಿ ಛತ್ತೀಸ್‌ಗಢದಲ್ಲಿ ನಿಜಕ್ಕೂ ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ನಡೆಸಲು ವಿಫಲವಾಗಿದ್ದು ಕೂಡಾ ಇಲ್ಲಿ ಸೋಲಿಗೆ ಕಾರಣವಾಗಿದೆ. ನಕ್ಸಲ್‌ ವಿರೋಧಿ ಕಾರ್ಯಾಚರಣೆಯನ್ನು ಸಮರ್ಥವಾಗಿ ನಿಭಾಯಿಸದ ಬಿಜೆಪಿಗೆ ಛತ್ತೀಸ್‌ಗಢದ ಜನತೆ ಸೋಲಿನ ಪಾಠ ಕಲಿಸಿದ್ದಾರೆ.

ಲೋಕಸಭೆಯ ಮೇಲೆ ಪರಿಣಾಮ:

ಪಂಚ ರಾಜ್ಯಗಳ ಫಲಿತಾಂಶ ಇವರಿಬ್ಬರ ನಿದ್ದೆ ಕೆಡಿಸಿದೆ. ಬಿಜೆಪಿ ಭವಿಷ್ಯದ ಬಗ್ಗೆ ಈಗ ಚಿಂತಿಸದೆ ಬೇರೆ ದಾರಿಗಳು ಉಳಿದಿಲ್ಲ. 
ಪಂಚ ರಾಜ್ಯಗಳ ಫಲಿತಾಂಶ ಇವರಿಬ್ಬರ ನಿದ್ದೆ ಕೆಡಿಸಿದೆ. ಬಿಜೆಪಿ ಭವಿಷ್ಯದ ಬಗ್ಗೆ ಈಗ ಚಿಂತಿಸದೆ ಬೇರೆ ದಾರಿಗಳು ಉಳಿದಿಲ್ಲ. 

ಈ ಐದೂ ರಾಜ್ಯಗಳ ಹೊರಬಿದ್ದಿರುವ ಫಲಿತಾಂಶ ಬಿಡಿ; ಪಂಚ ರಾಜ್ಯಗಳ ಚುನಾವಣೆಗೆ ಮುನ್ನವೇ 'ಲೋಕಸಭೆಯ ಮುನ್ಸೂಚನೆ' ಎಂಬ ಹಣೆಪಟ್ಟಿಯನ್ನು ಕಟ್ಟಲಾಗಿತ್ತು. ಇದೀಗ ಜನಾದೇಶ ಹೊರಬಿದ್ದಿದೆ. ಇದು ಕೇಂದ್ರ ಸರಕಾರ ತೆಗೆದುಕೊಂಡ ಅನಾಣ್ಯೀಕರಣ, ಜಿಎಸ್‌ಟಿ, ಬೆಲೆ ಏರಿಕೆಯಂತಹ ಜನರಿಗೆ ಸಮಸ್ಯೆ ತಂದೊಡ್ಡಿದ ತೀರ್ಮಾನಗಳಿಗೆ ನೀಡಿದ ಶಿಕ್ಷೆಯಾಗಿ ಕಾಣಿಸುತ್ತಿದೆ. ಇದು ಸಂಪೂರ್ಣವಾಗಿ ನಿಜವೇ ಆಗಿದ್ದರೆ, ಜನ ಸಾಮಾನ್ಯರಲ್ಲಿ ಕೇಂದ್ರ ಸರಕಾರದ ವಿರುದ್ಧ ಇರುವ 'ಸರಕಾರಿ ವಿರೋಧಿ' ಅಲೆ ಸತ್ಯವೇ ಆಗಿದ್ದರೆ, 2019ರ ಲೋಕಸಭೆ ಚುನಾವಣೆ ಬಿಜೆಪಿ ಪಾಲಿಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆಯನ್ನು ಫಲಿತಾಂಶ ಮುಂದೆ ಮಾಡಿದೆ.

ಛತ್ತೀಸ್‌ಗಢದಲ್ಲಿ 11 (10ರಲ್ಲಿ ಬಿಜೆಪಿ), ಮಧ್ಯ ಪ್ರದೇಶದಲ್ಲಿ 29 (27ರಲ್ಲಿ ಬಿಜೆಪಿ), ರಾಜಸ್ತಾನದಲ್ಲಿ 25 (ಅಷ್ಟರಲ್ಲೂ ಬಿಜೆಪಿ) ಲೋಕಸಭೆ ಸ್ಥಾನಗಳು ಬರುತ್ತವೆ. ಸದ್ಯ ಈ ಮೂರು ಹಿಂದಿ ಭಾಷಿಕ ದೊಡ್ಡ ರಾಜ್ಯಗಳಲ್ಲಿ ಬಿಜೆಪಿ ದೊಡ್ಡ ಸಂಖ್ಯೆಯ ಸ್ಥಾನಗಳನ್ನು ಹೊಂದಿದೆ. ಹೀಗಿರುವಾಗ, ಈ ಫಲಿತಾಂಶದ ಪರಿಣಾಮವನ್ನು ಬಿಜೆಪಿ ಈ 65 ಲೋಕಸಭೆ ಸ್ಥಾನಗಳಲ್ಲಿ 2019ರಲ್ಲಿ ಎದುರಿಸಬೇಕಿದೆ. ಇನ್ನು ತೆಲಂಗಾಣದಲ್ಲಿ ಇರುವ 15 ಲೋಕಸಭೆಯಲ್ಲಿ ಬಿಜೆಪಿ ಹಿಡಿತದಲ್ಲಿ ಇರುವುದು ಒಂದು ಸ್ಥಾನ ಅಷ್ಟೆ. ಮಿಝೋರಾಂನಲ್ಲಿ ಇರುವುದು ಒಂದು ಲೋಕಸಭೆ ಸ್ಥಾನವಾದ್ದರಿಂದ ದಿಲ್ಲಿ ಅಧಿಕಾರದ ಪಾಲಿನಲ್ಲಿ ದೊಡ್ಡ ಪ್ರಭಾವವನ್ನು ಈ ರಾಜ್ಯವಹಿಸುವುದು ಸಾಧ್ಯವೇ ಇಲ್ಲ.

ಆತ್ಮಾವಲೋಕನ- ದುರಂಹಕಾರ:

ಬಿಜೆಪಿಯ ಕರ್ನಾಟಕದ ನಾಯಕರಿಂದ ಹಿಡಿದು, ರಾಷ್ಟ್ರೀಯ ನಾಯಕರವರೆಗೆ, ಪಕ್ಷದ ಅಭಿಮಾನಿಗಳಿಂದ ಹಿಡಿದು ಟ್ರಾಲರ್‌ಗಳವರೆಗೆ ಪಂಚ ರಾಜ್ಯಗಳ ಚುನಾವಣೆ ಆತ್ಮವಿಮರ್ಶೆಯ ಮಾತುಗಳನ್ನು ಮೊದಲ ಬಾರಿಗೆ ಆಡುವಂತೆ ಮಾಡಿದೆ. ಆದರೆ ಅದು ಜನಾದೇಶದ ಅಂತರಾಳವನ್ನು ಹೊಕ್ಕಿ ಅರ್ಥ ಮಾಡಿಕೊಂಡಂತೆ ಕಾಣಿಸುತ್ತಿಲ್ಲ ಎಂಬುದು ಗಮನಾರ್ಹ. 'ಹಿಂದುತ್ವವನ್ನು ಸರಿಯಾಗಿ ಪಾಲಿಸದಿರುವುದು ಮೋದಿ ಎಸಗಿದ ತಪ್ಪು' ಎಂಬ ಸಂದೇಶಗಳನ್ನು ಬಿಜೆಪಿ ಪರ ವಾಟ್ಸಾಪ್‌ ಗುಂಪುಗಳಲ್ಲಿ ಹರಿಯ ಬಿಡಲಾಗಿದೆ. ಐದು ಪ್ರಮುಖ ರಾಜ್ಯಗಳ ಜನ ಹೀಗೆ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂಬುದನ್ನು ಮತ್ತದೇ ಧರ್ಮದ ಸೀಮಿತ ಚೌಕಟ್ಟಿನಲ್ಲಿ ಇಟ್ಟು, ನೋಡಿ, ಸಮಾಧಾನ ಮಾಡಿಕೊಳ್ಳುವ ಚಟಕ್ಕೆ ಬಲಿಯಾದಂತೆ ಕಾಣಿಸುತ್ತಿದೆ ಬಿಜೆಪಿಯ ತಳಮಟ್ಟದ ಪ್ರತಿಕ್ರಿಯೆಗಳು.

ಇನ್ನು, ರಾಜಸ್ತಾನದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಂತೆ ಮಾಧ್ಯಮಗಳ ಮುಂದೆ ಬಂದ ಸಚಿನ್ ಪೈಲಟ್, 'ಇದು ಕಾಂಗ್ರೆಸ್ ನಾಯಕರ ಹಾಗೂ ಕಾರ್ಯಕರ್ತರ ಗೆಲುವು' ಎಂದರು. ಬಿಜೆಪಿ ಹಾಗೂ ಅದರ ನಾಲ್ಕುವರೆ ವರ್ಷಗಳ ಆಡಳಿತವನ್ನು ಕಾಂಗ್ರೆಸ್ ಸ್ವತಂತ್ರವಾಗಿ ಎದುರಿಸಿ ಅಧಿಕಾರಕ್ಕೆ ಬಂತು ಎಂಬ ಸೀಮಿತ ತಿಳಿವಳಿಕೆ ಅವರ ಮಾತುಗಳಲ್ಲಿತ್ತು. ಇಂತಹದ್ದೇ ದುರಹಂಕಾರವೊಂದು 2014ರಲ್ಲಿ ಹೀನಾಯ ಸ್ಥಿತಿಗೆ ತಂದಿಟ್ಟಿತು ಎಂಬುದನ್ನು ಪುರಾತನ ಪಕ್ಷ ಕಾಂಗ್ರೆಸ್ ಅರ್ಥ ಮಾಡಿಕೊಂಡ ಲಕ್ಷಣಗಳು ಎರಡನೇ ಹಂತದ ನಾಯಕರಲ್ಲಿ ಕಾಣಿಸುತ್ತಿಲ್ಲ. ಇದೂ ಕೂಡ ಬಿಜೆಪಿಯ ಪೊಳ್ಳು ಆತ್ಮವಿಮರ್ಶೆಯಷ್ಟೆ ಅಪಾಯಕಾರಿ ಪ್ರಜಾಪ್ರಭುತ್ವಕ್ಕೆ. ಆದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದಿನದ ಅಂತ್ಯದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಇದು ಕಾಣಿಸಲಿಲ್ಲ ಎಂಬುದು ಸಮಾಧಾನ.