samachara
www.samachara.com
‘ಜನರೇಷನ್‌ ಐಡೆಂಟಿಟಿ’: ಹಿಟ್ಲರ್‌ಗೆ ಜೈ- ಧ್ವೇಷಕ್ಕೆ ಸೈ; ಇದು ಫ್ರಾನ್ಸ್‌ ‘ಕೋಮುವಾದ’ದ ಹೊಸ ನೆತ್ತರು!
COVER STORY

‘ಜನರೇಷನ್‌ ಐಡೆಂಟಿಟಿ’: ಹಿಟ್ಲರ್‌ಗೆ ಜೈ- ಧ್ವೇಷಕ್ಕೆ ಸೈ; ಇದು ಫ್ರಾನ್ಸ್‌ ‘ಕೋಮುವಾದ’ದ ಹೊಸ ನೆತ್ತರು!

ಫ್ರಾನ್ಸ್‌ನ ಲಿಲ್ಲೆಯಲ್ಲಿರುವ ಕಚೇರಿಯೊಳಕ್ಕೆ ಹೊಕ್ಕ ಪತ್ರಕರ್ತರ ತಂಡವೊಂದು ಹಿಡನ್‌ ಕ್ಯಾಮೆರಾಗಳ ದೃಶ್ಯಾವಳಿಗಳ ಸಮೇತ ಇದೀಗ ಹೊರಬಿದ್ದಿದೆ. ಸಂಘಟನೆ ಹೇಳುವುದಕ್ಕೂ, ನಡೆದುಕೊಳ್ಳುತ್ತಿರುವುದಕ್ಕೂ ವ್ಯತ್ಯಾಸಗಳಿವೆ ಎಂಬುದನ್ನು ಬಯಲಿಗೆಳೆದಿದೆ.

ಫ್ರಾನ್ಸ್ ‘ಯೆಲ್ಲೋ ವೆಸ್ಟ್’ ಪ್ರತಿಭಟನೆಯಲ್ಲಿ ಮುಳುಗೇಳುತ್ತಿದೆ. ಇದೇ ಹೊತ್ತಲ್ಲಿ ಅಲ್‌ಜಝೀರಾ ‘ಜನರೇಷನ್‌ ಐಡೆಂಟಿಟಿ’ ಎಂಬ ಸಂಘಟನೆಯ ಬಲಪಂಥೀಯ ತೀವ್ರಗಾಮಿ ಮನಸ್ಥಿತಿಯನ್ನು ತನಿಖಾ ವರದಿ ಮೂಲಕ ಹೊರಹಾಕಿದೆ. ಸುಮಾರು ಆರು ತಿಂಗಳ ಕಾಲ, ಸಂಘಟನೆಯೊಳಕ್ಕೆ ತಮ್ಮ ಸದಸ್ಯರನ್ನು ಸೇರಿಸಿ, ರಹಸ್ಯ ಕ್ಯಾಮರಾಗಳ ಮೂಲಕ ಈ ತನಿಖಾ ವರದಿಯನ್ನು ಹೊರತರಲಾಗಿದೆ.

ಅದು ಜನರೇಷನ್‌ ಐಡೆಂಟಿಟಿ (ಜಿಐ):

‘ಜನರೇಷನ್‌ ಐಡೆಂಟಿಟಿ (ಜಿಐ)’ ಎನ್ನುವುದು ಯುರೋಪ್‌ನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬಲಪಂಥೀಯ ಸಂಘಟನೆ. ಕೇವಲ 6 ವರ್ಷಗಳ ಕೆಳಗೆ 2012ರಲ್ಲಿ ಫ್ರಾನ್ಸ್‌ನಲ್ಲಿ ಆರಂಭಗೊಂಡ ಈ ಸಂಘಟನೆಯ ಬೇರುಗಳಿವತ್ತು ಇಟಲಿ, ಆಸ್ಟ್ರಿಯಾ, ಜರ್ಮನಿ ಮತ್ತು ಬ್ರಿಟನ್‌ನಂಥ ದೇಶಗಳ ನೆಲದಲ್ಲಿಯೂ ಇಳಿದು ಹೋಗಿದೆ. ಇಲ್ಲೆಲ್ಲಾ ಪ್ರತ್ಯೇಕ ಕಚೇರಿಗಳು, ವೆಬ್‌ಸೈಟ್‌ಗಳನ್ನು ನಿರ್ವಹಣೆ ಮಾಡುತ್ತಾ ಪಕ್ಕಾ ವೃತ್ತಿಪರ ಸಂಘಟನೆಯಾಗಿ ಬೆಳೆಯುತ್ತಿದೆ.

ತನ್ನ ಬಳಿಯಲ್ಲಿ ಸಾವಿರಾರು ಕಾರ್ಯಕರ್ತರಿದ್ದಾರೆ ಮತ್ತು ಸಾವಿರಾರು ಜನ ಆನ್‌ಲೈನ್‌ ಬೆಂಬಲಿಗರಿದ್ದಾರೆ ಎನ್ನುತ್ತದೆ ಸಂಘಟನೆ. ಶ್ವೇತ ವರ್ಣದ ಯುರೋಪಿಯನ್ನರ ಅಸ್ಮಿತೆ ಮತ್ತು ಸಂಸ್ಕೃತಿಯ ಪರವಾಗಿ ಹೋರಾಡುತ್ತೇವೆ ಎಂದು ಹೇಳುವ ಈ ಸಂಘಟನೆ, ವಲಸಿಗರು ಮತ್ತು ಇಸ್ಲಾಮೀಕರಣದಿಂದ ಯುರೋಪ್‌ನಲ್ಲಿ ‘ಮಹಾ ಬದಲಾವಣೆಯಾಗಿದೆ’ ಎಂದು ಪ್ರತಿಪಾದಿಸುತ್ತಿದೆ.

ಹೆಸರಿಗೆ ನಮ್ಮದು ಅಹಿಂಸಾತ್ಮಕ, ಜನಾಂಗೀಯ ವಿರೋಧಿಯಲ್ಲದ ದೇಶಭಕ್ತಿಯ ಹೋರಾಟ ಎಂಬುದಾಗಿ ಸಂಘಟನೆ ಹೇಳಿಕೊಳ್ಳುತ್ತದೆ. ಆದರೆ ಅಂತರಾಳ ಬೇರೆಯೇ ಇದೆ ಎಂಬುದನ್ನು ಜನರ ಮುಂದಿಟ್ಟಿದೆ ‘ಅಲ್‌ ಜಝೀರಾ’ದ ತನಿಖಾ ವರದಿ.

ಇದಕ್ಕಾಗಿ ಪತ್ರಕರ್ತರ ತಂಡವೊಂದು 6 ತಿಂಗಳು ಶ್ರಮವಹಿಸಿದೆ. ಗೌಪ್ಯವಾಗಿ ಫ್ರಾನ್ಸ್‌ನ ಲಿಲ್ಲೆಯಲ್ಲಿರುವ ಕಚೇರಿಯೊಳಕ್ಕೆ ಹೊಕ್ಕ ಪತ್ರಕರ್ತರ ತಂಡವೊಂದು ಹಿಡನ್‌ ಕ್ಯಾಮೆರಾಗಳ ದೃಶ್ಯಾವಳಿಗಳ ಸಮೇತ ಇದೀಗ ಹೊರಬಿದ್ದಿದೆ. ಈ ದಾಖಲೆಗಳನ್ನು ಇಟ್ಟುಕೊಂಡು, ಸಂಘಟನೆ ಹೇಳುವುದಕ್ಕೂ ಅದು ನಡೆದುಕೊಳ್ಳುತ್ತಿರುವುದಕ್ಕೂ ತುಂಬಾ ವ್ಯತ್ಯಾಸಗಳಿವೆ ಎಂಬುದನ್ನು ಸಾಕ್ಷಿ ಸಮೇತ ಬಯಲಿಗೆಳೆದಿದೆ.

ಮಸೀದಿಯಿಂದ ಡಿಫೆಂಡ್‌ ಯುರೋಪ್‌:

ತನಿಖೆಗೆ ಇಳಿದಾಗ ಸಂಘಟನೆಯ ಸದಸ್ಯರು ಮುಸ್ಲಿಮರ ವಿರುದ್ಧ ಜನಾಂಗೀಯ ದಾಳಿಗಳನ್ನು ನಡೆಸುತ್ತಿರುವುದು, ಸರಣಿ ಹಲ್ಲೆಗೈಯುತ್ತಿರುವುದು ತಿಳಿದು ಬಂದಿದೆ. ಮಾತ್ರವಲ್ಲದೆ ನಾಝಿ ಸೆಲ್ಯೂಟ್‌ನ ಸಂಪ್ರದಾಯವೂ ಸಂಘಟನೆಯಲ್ಲಿದೆ. ಸದಸ್ಯರು ‘ಹಿಟ್ಲ್‌ರ್‌ಗೆ ಜೈ’ ಎಂದು ಘೋಷಣೆ ಕೂಗುವ ಪರಿಪಾಠವನ್ನೂ ಇಟ್ಟುಕೊಂಡಿದ್ದಾರೆ. ಇಂತವರ ಕ್ರೂರ ಹಿಂಸಾತ್ಮಕ ಮನಸ್ಥಿತಿ ಹಿಟ್ಲರ್ ಹಾದಿಯನ್ನೇ ತುಳಿಯುವ ಲಕ್ಷಣಗಳು ತೋರಿಸಿವೆ.

ಸಂಘಟನೆ ಕೇವಲ ಇಷ್ಟಕ್ಕೆ ಸೀಮಿತಗೊಂಡಿಲ್ಲ. ಚಾಣಾಕ್ಷ ತಂತ್ರಗಳನ್ನು ಹೆಣೆದಿರುವ ಜಿಐ ಸದಸ್ಯರು, 2017ರ ಫ್ರಾನ್ಸ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲೊಪ್ಪಿಕೊಂಡ ಮರಿನ್‌ ಲೀ ಪೆನ್‌ ಪಕ್ಷದೊಳಗೆ ಸೇರಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಸಂಘಟನೆ ಬಲಗೊಳ್ಳುತ್ತಿದೆ. ಹೀಗೊಂದು ಸಂಘಟನೆ ಹುಟ್ಟಿದ್ದೇ ಅಚ್ಚರಿ ಮತ್ತು ಬೆರಗು ಮೂಡಿಸುವಂತಿದೆ.

2017ರ ಫ್ರಾನ್ಸ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲೊಪ್ಪಿಕೊಂಡ ಬಲಪಂಥೀಯ ನ್ಯಾಷನಲ್‌ ರ್ಯಾಲಿ ಪಕ್ಷದ ಮರಿನ್‌ ಲೀ ಪೆನ್‌.
2017ರ ಫ್ರಾನ್ಸ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲೊಪ್ಪಿಕೊಂಡ ಬಲಪಂಥೀಯ ನ್ಯಾಷನಲ್‌ ರ್ಯಾಲಿ ಪಕ್ಷದ ಮರಿನ್‌ ಲೀ ಪೆನ್‌.
/ದಿ ಗಾರ್ಡಿಯನ್

ಮೊದಲೇ ಹೇಳಿದಂತೆ ಇಂಥಹದ್ದೊಂದು ಹೋರಾಟ ಆರಂಭವಾಗಿದ್ದು 2012ರಲ್ಲಿ. ಡಜನ್‌ನಷ್ಟಿದ್ದ ಸಂಘಟನೆಯ ಸದಸ್ಯರು ಪಶ್ಚಿಮ ಫ್ರಾನ್ಸ್‌ನಲ್ಲಿ ಮಸೀದಿಯೊಂದನ್ನು ವಶಕ್ಕೆ ಪಡೆಯುತ್ತಾರೆ. ಕೊನೆಗೆ ಆರು ಗಂಟೆಗಳ ಕಾರ್ಯಾಚರಣೆಯ ನಂತರ ಅವರನ್ನು ಮಸೀದಿಯಿಂದ ಪೊಲೀಸರು ಹೊರ ಹಾಕುತ್ತಾರೆ. ಹೀಗೊಂದು ಕಾರ್ಯಾಚರಣೆ ನಡೆಸಿದ ಮರುದಿನ ಬಹು ಸಂಸ್ಕೃತಿಯ ವಿರುದ್ಧವೇ ಸಮರ ಸಾರುತ್ತದೆ ಜಿಐ. ಮಾತ್ರವಲ್ಲ ಮುಸ್ಲಿಮರ ವಲಸೆ ಬಗ್ಗೆ ರಾಷ್ಟ್ರೀಯ ಜನಮತಸಂಗ್ರಹ ನಡೆಯಬೇಕು ಎಂಬ ಕರೆ ನೀಡುತ್ತದೆ.

ಫ್ರಾನ್ಸ್‌ ಪ್ರಯೋಗಶಾಲೆ:

ಹಲವು ದೇಶಗಳಲ್ಲಿ ಸಂಘಟನೆ ಪ್ರಬಲವಾಗಿದ್ದೂ ಅದು ಫ್ರಾನ್ಸ್‌ನ್ನು ತನ್ನ ಪ್ರಯೋಗ ಶಾಲೆಯಾಗಿ ಮಾಡಿಕೊಂಡಿದೆ. ಇದಕ್ಕೆ ಕಾರಣ ಇಲ್ಲಿರುವ ಮುಸ್ಲಿಂ ಜನಸಂಖ್ಯೆ ಎನ್ನುತ್ತಾರೆ ಫ್ರಾನ್ಸ್‌ನ ರಾಜಕೀಯ ವಿಮರ್ಶಕ ರಾಬೊನ್‌ ಡಿ ಏಂಜೆಲೋ. 6.7 ಕೋಟಿ ಜನಸಂಖ್ಯೆ ಇರುವ ಫ್ರಾನ್ಸ್‌ನಲ್ಲಿ ಸುಮಾರು 70 ಲಕ್ಷದಷ್ಟು ಮುಸ್ಲಿಮರಿದ್ದಾರೆ. ಫ್ರಾನ್ಸ್‌ನ್ನು ತಮ್ಮ ನೆಲೆಯಾಗಿ ಮಾಡಿಕೊಳ್ಳಲು ಜಿಐ ಸಂಘಟನೆ ಸದಸ್ಯರು ನಿರ್ಧರಿಸಿದ್ದರ ಹಿಂದೆಯೂ ಒಂದು ಕಾರಣವಿದೆ.

2015ರಲ್ಲಿ ಚಾರ್ಲಿ ಹೆಬ್ಡೋ ಪತ್ರಿಕೆ ಮೇಲೆ ಮುಸ್ಲಿಂ ಮೂಲಭೂತವಾದಿಗಳು ಫ್ರಾನ್ಸ್‌ನಲ್ಲಿ ದಾಳಿ ನಡೆಸುತ್ತಾರೆ. ಇದರಲ್ಲಿ 12 ಜನ ಸಾವನ್ನಪ್ಪುತ್ತಾರೆ. ಮುಂದೆ ಬಟಕ್ಲಾನ್‌ ಥಿಯೇಟರ್‌ ಮೇಲೆ ನಡೆದ ದಾಳಿಯಲ್ಲಿ 130 ಜನರು ಅಸುನೀಗಿದರೆ, 19 ಟನ್‌ ಕಾರ್ಗೊ ಟ್ರಕ್‌ನ್ನು ಬ್ಯಾಸ್ಟ್ಐಲ್‌ ಡೇ ಕಾರ್ಯಕ್ರಮದ ಮೇಲೆ ಹರಿಸಿ 86 ಜನರನ್ನು ಕೊಲೆ ಮಾಡಲಾಗುತ್ತದೆ. ಮುಸ್ಲಿಂ ಮೂಒಲಭೂತವಾದಿಗಳಿಂದ ನಡೆದ ಈ ಕೃತ್ಯವನ್ನೇ ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತದೆ ಜಿಐ.

ವಲಸಿಗರ ಪರವಾಗಿದ್ದ ಎನ್‌ಜಿಒ ಒಂದರ ಮೇಲೆ ಜಿಐ ಬಾವುಟ ಹಾರಿಸಿ ಪ್ರತಿಭಟನಾಕಾರರು.
ವಲಸಿಗರ ಪರವಾಗಿದ್ದ ಎನ್‌ಜಿಒ ಒಂದರ ಮೇಲೆ ಜಿಐ ಬಾವುಟ ಹಾರಿಸಿ ಪ್ರತಿಭಟನಾಕಾರರು.

ಪ್ರಚಾರಕ್ಕಾಗಿ ಪ್ರಹಸನ:

ಮುಖ್ಯವಾಗಿ ಈ ಸಂಘಟನೆ ಸದಸ್ಯರು ಸಾಂಪ್ರದಾಯಿಕ ಬಲಪಂಥೀಯ ಸಂಘಟನೆಯ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಕ್ಷಣಿಕ ಆಲೋಚನೆಗಳು ತಮ್ಮನ್ನು ಅಧಿಕಾರದತ್ತ ಕೊಂಡೊಯ್ಯಲಾರವು ಎಂಬುದನ್ನು ಅರಿತಿರುವ ಅವರು ದೀರ್ಘವಾದ ಯೋಜನೆಯನ್ನು ಇಟ್ಟುಕೊಂಡೇ ಅಖಾಡಕ್ಕಿಳಿದಿದ್ದಾರೆ. ಇದರ ಮಧ್ಯದಲ್ಲಿ ತಮ್ಮ ಮೇಲಿನ ಆರೋಪಗಳು ಹೋರಾಟದ ದಿಕ್ಕನ್ನೇ ತಪ್ಪಿಸುತ್ತವೆ ಎಂಬ ಭಯದಲ್ಲಿ ಸದಸ್ಯರ ಮೇಲೆ ಕೇಸುಗಳು ಬೀಳದಂತೆ, ವಿವಾದಕ್ಕೆ ಕಾರಣವಾಗದಂತೆ ಕಾಪಾಡುತ್ತಿದ್ದಾರೆ.

ಆದರೆ ಏನೇ ಮಾಡಿದರೂ ಸಂಘಟನೆಗೆ ಪ್ರಚಾರ ಬೇಕೇ ಬೇಕು. ಈ ಕಾರಣಕ್ಕೆ ಪ್ರಚಾರಕ್ಕಾಗಿ ಒಂದಷ್ಟು ಸ್ಟಂಟ್‌ಗಳನ್ನು ನಡೆಸಿಕೊಂಡು ಜನರ ಗಮನ ಸೆಳೆಯುತ್ತಿದ್ದಾರೆ. ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗುವ ವಿಷಯ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಬೆಂಬಲಿಗರನ್ನು ಸಂಪಾದಿಸಿಕೊಳ್ಳುವ ಸುಲಭ ತಂತ್ರವನ್ನು ಸಂಘಟನೆ ನಾಯಕರು ಅನುಸರಿಸುತ್ತಿದ್ದಾರೆ.

ಉದಾಹರಣೆಗೆ 2017ರಲ್ಲಿ ತಂಡ ಡಿಫೆನ್ಸ್‌ ಯುರೋಪ್‌ ಎಂಬ ಯೋಜನೆಯನ್ನು ಸಂಘಟನೆ ಹಮ್ಮಿಕೊಂಡಿತ್ತು. ಮೆಡಿಟರೇನಿಯನ್‌ ಸಮುದ್ರ ದಾಟಿ ಬರುವ ನಿರಾಶ್ರಿತರನ್ನು ರಕ್ಷಿಸುತ್ತಿದ್ದ ಹಡಗುಗಳಿಗೆ ತೊಂದರೆ ನೀಡುವುದು ಯೋಜನೆಯ ಕಾರ್ಯಸ್ವರೂಪವಾಗಿತ್ತು. ಇದನ್ನು ಜನರ ಮುಂದಿಟ್ಟು ಮೂರೇ ವಾರದಲ್ಲಿ ಸಂಘಟನೆ 50,000 ಯೂರೋಗಳನ್ನು ಸಂಗ್ರಹಿಸಿತ್ತು.

ಸಂಘಟನೆ ಸದಸ್ಯರು ಏಪ್ರಿಲ್‌ನಲ್ಲಿ 100 ಜನ ಒಟ್ಟಾಗಿ ಸೇರಿ ವಲಸಿಗರು ಬಳಸುತ್ತಿದ್ದ ಫ್ರಾನ್ಸ್‌ ಇಟಲಿ ಗಡಿಯನ್ನು ಮುಚ್ಚಿದರು. ಹಿಮ ಮಾರ್ಗದಲ್ಲಿ ಕೆಂಬಣ್ಣದ ಹೊಗೆಯನ್ನು ಹಾರಿ ಬಿಟ್ಟು ಅವುಗಳ ಫೋಟೋಶೂಟ್‌ ನಡೆಸಿ, ಅಲ್ಲೊಂದು ಬೋರ್ಡ್‌ ನೆಟ್ಟಿದ್ದರು. ಯುರೋಪನ್ನು ನಿಮ್ಮ ತಾಯ್ನಾಡು ಮಾಡಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಮನೆಗೆ ಮರಳಿ ಎಂಬುದಾಗಿ ಅದು ಹೇಳುತ್ತಿತ್ತು.

ಏಪ್ರಿಲ್‌ನಲ್ಲಿ ನಡೆದ ‘ಡಿಫೆಂಡ್‌ ಯುರೋಫ್‌ ಆಲ್ಪ್ಸ್‌’ ಕಾರ್ಯಾಚರಣೆ.
ಏಪ್ರಿಲ್‌ನಲ್ಲಿ ನಡೆದ ‘ಡಿಫೆಂಡ್‌ ಯುರೋಫ್‌ ಆಲ್ಪ್ಸ್‌’ ಕಾರ್ಯಾಚರಣೆ.
/ಜನರೇಷನ್‌ ಐಡೆಂಟಿಟಿ ಡಾಟ್‌ ಆರ್ಗ್‌ ಡಾಟ್‌ ಯುಕೆ

ಹೀಗೊಂದು ಪ್ರಚಾರ ತಂತ್ರ, ಬಗಲಲ್ಲಿ ಧ್ವೇಷ ಸಿದ್ಧಾಂತವನ್ನು ಇಟ್ಟುಕೊಂಡು ಇಂದು ಸಂಘಟನೆ ನಾಗಾಲೋಟದಲ್ಲಿ ಬೆಳೆಯುತ್ತಿದೆ. ಜತೆಗೆ ಅದಕ್ಕೊಂದು ಸಾಂಸ್ಥಿಕ ರೂಪ ನೀಡುವ ಕೆಲಸವೂ ಜಾರಿಯಲ್ಲಿದೆ. ಅದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ ಈ ಘಟನೆ.

ಅರೆಲಿನ್‌ ವರ್ಸೆಲ್‌ ಎಂಬ ಜಿಐ ಸದಸ್ಯ ಲಿಲ್ಲೆಯಲ್ಲೇ ಸಿಟಾಡೆಲ್‌ ಎಂಬ ಬಾರೊಂದನ್ನು ನಡೆಸುತ್ತಿದ್ದಾನೆ. ಇದು ಸಂಘಟನೆ ಸದಸ್ಯರಿಗಾಗಿಯೇ ಇರುವ ಬಾರ್‌. ಈ ಬಾರ್‌ನಲ್ಲೇ ಬಾಕ್ಸಿಂಗ್‌ ಕ್ಲಬ್‌, ಲೈಬ್ರರಿ ಮತ್ತು ಸಿನೆಮಾ ಕ್ಲಬ್‌ ಎಲ್ಲವೂ ಇದೆ. ಸಂಘಟನೆ ಸದಸ್ಯರಿಗೆ ಸಮಯ ಕಳೆಯಲೊಂದು ಬಾರ್, ಮನೋರಂಜನೆಗಾಗಿ ಸಿನಿಮಾ ಕ್ಲಬ್‌, ತಂಡವನ್ನು ಒಟ್ಟುಗೂಡಿಸಲೊಂದು ಸ್ಥಳ, ಸಮರ ಕಲೆಗಳ ಹೆಸರಿನಲ್ಲಿ ಬಾಕ್ಸಿಂಗ್‌ ಮತ್ತು ತಲೆಗೆ ಸಿದ್ಧಾಂತಗಳನ್ನು ತುಂಬಲು ಗ್ರಂಥಾಲಯ; ಹೀಗೆ ಪಕ್ಕಾ ವೃತ್ತಿಪರತೆಯನ್ನು ಇಲ್ಲಿ ಮೆರೆಯಲಾಗಿದೆ. ಪರಿಣಾಮ ಒಂದೇ ವರ್ಷದಲ್ಲಿ 300 ಇದ್ದ ಸದಸ್ಯರ ಸಂಖ್ಯೆ 800 ದಾಟಿತ್ತು.

ಇದನ್ನು ನಡೆಸುವ ವರ್ಸೆಲ್‌ ಕ್ರಿಮಿನಲ್‌ ಅಪರಾಧವೊಂದರಲ್ಲಿ ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರ ಬಂದವ. ಇವತ್ತು ಆತ ಈ ಬಾರ್‌ನಲ್ಲಿ ಕುಳಿತುಕೊಂಡು ಫ್ರಾನ್ಸ್‌ನ ಬೇರೆ ಬೇರೆ ಭಾಗದಿಂದ ಸದಸ್ಯರನ್ನು ನೇಮಕ ಮಾಡಿಕೊಳ್ಳುವ, ಸಂಘಟನೆ ಬೆಳೆಸುವ, ವಿಸ್ತರಿಸುವ ಮಾತುಗಳನ್ನಾಡುತ್ತಿದ್ದಾನೆ. ಪ್ರಚಾರಕ್ಕಾಗಿ ಆಸ್ಥೆಯಿಂದ ಪತ್ರಕರ್ತರನ್ನು ಸಂಘಟನೆ ಒಳಕ್ಕೆ ಸೇರಿಸಿಕೊಳ್ಳುತ್ತಿದ್ದಾನೆ. ಆತ ಒಮ್ಮೆ ಕೆನಡಾದ ಟಿವಿ ಪತ್ರಕರ್ತರಿಗೆ ಸಂದರ್ಶನವೊಂದನ್ನು ನೀಡುತ್ತಾನೆ. ಅದರಲ್ಲಿ ಆತ ಮಾತನಾಡಿದ ರೀತಿಯೇ ಒಟ್ಟು ಸಂಘಟನೆಯ ಕೈಗನ್ನಡಿ ಎಂಬಂತಿತ್ತು.

ಅದರಲ್ಲಿ ಆತ ತಾನು 5 ತಿಂಗಳು ಜೈಲು ಶಿಕ್ಷೆ ಅನುಭವಿಸಿ ಬಂದ ಒಂದು ಸಣ್ಣ ಕುರುಹನ್ನೂ ಬಿಟ್ಟುಕೊಡುವುದಿಲ್ಲ. ಬದಲಿಗೆ ತಾನೊಬ್ಬ ವೃತ್ತಿಪರ ರಾಜಕಾರಣಿಯಂತೆ ಕಾಣಿಸಿಕೊಳ್ಳುತ್ತಾನೆ. ಸಂದರ್ಶನದಲ್ಲಿ ‘ಯುರೋಪ್‌ ಮೇಲೆ ಆಕ್ರಮಣ ನಡೆದಿದೆ’ ಎಂಬ ಭಾವನಾತ್ಮಕ ಮಾತುಗಳನ್ನಾಡುತ್ತಾನೆ. ‘ನಮ್ಮದು ಯುವ ನೇತಾರರನ್ನು ಉತ್ಪಾದಿಸುವ ಗಂಭೀರ ರಾಜಕೀಯ ಚಳುವಳಿ’ ಎಂದು ವಿವರಿಸುತ್ತಾನೆ. ಹೀಗೆ ಹೇಳುತ್ತಲೇ ಹೊಸ ಪರಿಕಲ್ಪನೆಯೊಂದನ್ನು ಬಿತ್ತುತ್ತಾನೆ. ಅದರ ಹೆಸರು ‘ರೆಮಿಗ್ರೇಷನ್‌’; ಮೂಲ ಯುರೋಪ್‌ನವರಲ್ಲದ ಜನರನ್ನು ಅವರವರ ತವರಿಗೆ ವಾಪಸ್‌ ಕಳುಹಿಸಬೇಕು ಎಂಬುದೇ ತಮ್ಮ ಬೇಡಿಕೆ ಎಂಬುದನ್ನು ಸ್ಪಷ್ಟವಾಗಿ ಟಿವಿ ಮಾಧ್ಯಮಗಳ ಮೂಲಕ ಆತ ದಾಟಿಸುತ್ತಾನೆ.

ರೆಮಿಗ್ರೇಷನ್‌:

ಈ ‘ರೆಮಿಗ್ರೇಷನ್‌’ (ಒಳನುಸುಳುವಿಕೆಯ ವಿರುದ್ಧ ಪದ) ಪರಿಕಲ್ಪನೆಯನ್ನೇ ತನ್ನ ಮೂಲಸೆಲೆಯಾಗಿ ಸಂಘಟನೆ ಇಟ್ಟುಕೊಂಡಿದೆ. ಇದೊಂತರ ಭಾವೋದ್ರಿಕ್ತ ಮತ್ತು ‘ಜನಾಂಗೀಯ ಶುದ್ಧೀಕರಣ’ದ ಇನ್ನೊಂದು ರೂಪ ಎನ್ನುತ್ತಾರೆ ಈ ತನಿಖಾ ವರದಿ ಹೊರ ತಂದ ಮಥಿಯಾಸ್‌ ಡೆಸ್ಟಲ್‌.

ಹಲವು ದೇಶಗಳನ್ನು ವ್ಯಾಪಿಸಿಕೊಂಡಿರುವ ಜಿಐ ಪ್ರಚಾರದ ವೈಖರಿ ಹೀಗಿದೆ. ಬುರ್ಖಾ ಯಾಕೆ ಬ್ಯಾನ್ ಮಾಡಬಾರದು ಎಂಬುದನ್ನು ಹೋಲಿಕೆಗಳನ್ನೇ ಆಧಾರವಾಗಿ ಇದು ಮುಂದಿಟ್ಟ ಪೋಸ್ಟರ್ ಇದು. 
ಹಲವು ದೇಶಗಳನ್ನು ವ್ಯಾಪಿಸಿಕೊಂಡಿರುವ ಜಿಐ ಪ್ರಚಾರದ ವೈಖರಿ ಹೀಗಿದೆ. ಬುರ್ಖಾ ಯಾಕೆ ಬ್ಯಾನ್ ಮಾಡಬಾರದು ಎಂಬುದನ್ನು ಹೋಲಿಕೆಗಳನ್ನೇ ಆಧಾರವಾಗಿ ಇದು ಮುಂದಿಟ್ಟ ಪೋಸ್ಟರ್ ಇದು. 
/ಜನರೇಷನ್‌ ಐಡೆಂಟಿಟಿ ಡಾಟ್‌ ಆರ್ಗ್‌ ಡಾಟ್‌ ಯುಕೆ

ಒಂದು ಕಡೆ ಸಂಘಟನೆ ಹೊರಗಿನಿಂದ ನಮ್ಮದು ಅಹಿಂಸೆಯ ಸಂಘಟನೆ ಎಂದು ಹೇಳಿಕೊಳ್ಳುತ್ತದೆ. ಆದರೆ ಆಳದಲ್ಲಿ ಜನಾಂಗಿಯ ಧ್ವೇಷ ಬಿತ್ತುವ, ಮುಸ್ಲಿಂ ವಿರೋಧಿ ಮನಸ್ಥಿತಿಗೆ ಜನರನ್ನು ಎಳೆದು ತರುವ ಕೆಲಸ ಮಾಡುತ್ತಿದೆ. ಅಷ್ಟೇ ಅಲ್ಲ, ಅವರ ಮೇಲಿನ ದಾಳಿಗಳಿಗೂ ಪ್ರೇರಣೆ ನೀಡುತ್ತಿದೆ. ಕೆಲವು ದಾಳಿಗಳನ್ನೂ ಈಗಾಗಲೇ ಮಾಡಲಾಗಿದೆ.

2018ರ ಮೊದಲ ವಾರಾಂತ್ಯದಲ್ಲಿ ರೆಮಿ ಫಲಿಜ್‌ ಎಂಬ 30 ವರ್ಷದ ಯುವಕನ ನೇತೃತ್ವದಲ್ಲಿ ರಾತ್ರಿ ಒಂದು ಗಂಟೆ ಸುಮಾರಿಗೆ ಹೊಡೆದಾಟ ನಡೆಯುತ್ತದೆ. ಸಿಗರೇಟ್‌ ಕೇಳಿಕೊಂಡು ಲಿಲ್ಲೆ ಬಾರ್‌ಗೆ ಬಂದ ಅಪ್ರಾಪ್ತರಿಬ್ಬರಿಗೆ ಕೈಗವಸು ತೊಟ್ಟು ಮುಖ ಮೂತಿ ನೋಡದೆ ಸಂಘಟನೆ ಸದಸ್ಯರು ಹೊಡೆಯುತ್ತಾರೆ. ಯುವತಿಗೂ ಏಟುಗಳು ಬೀಳುತ್ತವೆ. ಇವೆಲ್ಲಾ ಕೇವಲ ಉದಾಹರಣೆಗಳಷ್ಟೇ. ಈ ರೀತಿಯ ಕೃತ್ಯಗಳನ್ನು ಎಸಗುವಂತೆ ಸದಸ್ಯರಿಗೆ ಉತ್ತೇಜನ ನೀಡಲಾಗುತ್ತದೆ. ಅದೇ ವೇಳೆ ಹೊರಗಿನಿಂದ ನಮ್ಮ ರೆಮಿಗ್ರೇಷನ್‌ ಸಿದ್ಧಾಂತ ಮಾತ್ರ ಎಂದು ಭಾಷಣ ಮಾಡಲಾಗುತ್ತದೆ.

ಹೀಗೊಂದು ಗೌಪ್ಯ ಮತ್ತು ಬಹಿರಂಗ ಸಿದ್ಧಾಂತವನ್ನು ತಳಹದಿಯನ್ನಾಗಿ ಇಟ್ಟುಕೊಂಡು ಫ್ರಾನ್ಸ್‌ ಅಧಿಕಾರ ಹಿಡಿಯಬೇಕು ಎಂಬ ದೂರಗಾಮಿ ಆಲೋಚನೆಯನ್ನು ಸಂಘಟನೆ ಹೊಂದಿದೆ. ಮತ್ತು ಆ ನಿಟ್ಟಿನಲ್ಲಿ ಪ್ರಬಲ ಹೆಜ್ಜೆಗಳನ್ನು ಇಡುತ್ತಿದೆ. ಈ ಮೂಲಕ ಅಧಿಕಾರವನ್ನು ಪಡೆದು, ತಮ್ಮ ಗುರಿ ಸಾಧಿಸುವ ಕನಸು ಕಾಣುತ್ತಿದೆ.

ಕೃಪೆ: ಅಲ್‌ಜಝೀರಾ