ರೇಲಾ ಹೊಗಳಿದ ವೈದ್ಯಕೀಯ ಶಿಕ್ಷಣ ಸಚಿವರೆ, ರಾಜ್ಯದ ಆಸ್ಪತ್ರೆಗಳ ಕಡೆಗೂ ಒಮ್ಮೆ ನೋಡಿ
COVER STORY

ರೇಲಾ ಹೊಗಳಿದ ವೈದ್ಯಕೀಯ ಶಿಕ್ಷಣ ಸಚಿವರೆ, ರಾಜ್ಯದ ಆಸ್ಪತ್ರೆಗಳ ಕಡೆಗೂ ಒಮ್ಮೆ ನೋಡಿ

ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಕೋಮು ಸಾಮರಸ್ಯದ ಮಾತಾಡಿರುವ ಸಚಿವ ಡಿ.ಕೆ. ಶಿವಕುಮಾರ್‌ ರಾಜ್ಯದ ಆಸ್ಪತ್ರೆಗಳನ್ನು ಮಾದರಿಯಾಗಿಸುವ ನಿಟ್ಟಿನಲ್ಲಿ ಈಗ ಕೆಲಸ ಮಾಡಬೇಕಿದೆ.

ಶಿವಕುಮಾರ ಸ್ವಾಮೀಜಿಯ ಆರೋಗ್ಯ ವಿಚಾರಿಸಲು ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್‌ ರೇಲಾ ಆಸ್ಪತ್ರೆ ಹಾಗೂ ಡಾ. ಮೊಹಮ್ಮದ್‌ ರೇಲಾ ಅವರನ್ನು ಹೊಗಳಿದ್ದಾರೆ. ಸ್ವಾಮೀಜಿಗೆ ಶಸ್ತ್ರ ಚಿಕಿತ್ಸೆ ನಡೆಸಿದ ಮುಸ್ಲಿಂ ವೈದ್ಯರ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್‌ ಕೋಮು ಸಾಮರಸ್ಯದ ಮಾತನ್ನಾಡಿದ್ದಾರೆ.

“ನಾವು ಜಾತಿ ಧರ್ಮ ಎಂದೆಲ್ಲಾ ಮಾತಾಡುತ್ತೇವೆ. ಆದರೆ, ಸ್ವಾಮೀಜಿಗೆ ಚಿಕಿತ್ಸೆ ನೀಡಿದ್ದು ಮುಸ್ಲಿಂ ವೈದ್ಯರು. ಅವರ ಹೆಸರಿನಲ್ಲಿ ನಿರ್ಮಿಸಿರುವ ಆಸ್ಪತ್ರೆಯಲ್ಲಿ ಗುಣಮಟ್ಟದ ಸೇವೆ ನೀಡುತ್ತಿದ್ದಾರೆ. 450 ಹಾಸಿಗೆ ಸಾಮರ್ಥ್ಯವಿರುವ ರೇಲಾ ಆಸ್ಪತ್ರೆಯಲ್ಲಿ 150 ಐಸಿಯು ಹಾಸಿಗೆಗಳಿವೆ. ಇಂಥ ಆಸ್ಪತ್ರೆಯನ್ನು ನಾನು ಕರ್ನಾಟಕದಲ್ಲಿ ನೋಡೇ ಇಲ್ಲ” ಎಂದಿದ್ದಾರೆ ಡಿ.ಕೆ. ಶಿವಕುಮಾರ್‌.

ದೇಶದುದ್ದಕ್ಕೂ ಕೋಮು ಸಾಮರಸ್ಯ ಹದಗೆಡುತ್ತಿರುವ ದಿನಗಳಲ್ಲಿ ಡಿ.ಕೆ. ಶಿವಕುಮಾರ್‌ ಸಾಮರಸ್ಯದ ಮಾತಾಡಿರುವುದು ಹಾಗೂ ಡಾ. ರೇಲಾ ಹಾಗೂ ಅವರ ಆಸ್ಪತ್ರೆಯನ್ನು ಹೊಗಳಿದ್ದೇನೋ ಸರಿ. ಕರ್ನಾಟಕ ಸರಕಾರದ ಭಾಗವಾಗಿ, ಖುದ್ದು ವೈದ್ಯಕೀಯ ಶಿಕ್ಷಣ ಸಚಿವರಾಗಿ ರೇಲಾ ಆಸ್ಪತ್ರೆಯಂಥ ಆಸ್ಪತ್ರೆ ಕರ್ನಾಟಕದಲ್ಲಿ ಇಲ್ಲ ಎಂಬುದನ್ನು ಅವರು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ರಾಜ್ಯದಲ್ಲಿನ ದೊಡ್ಡಾಸ್ಪತ್ರೆಗಳನ್ನು ಉನ್ನತೀಕರಿಸುವ ಹಾಗೂ ಮಾದರಿ ಎನ್ನುವಂಥ ವೈದ್ಯಕೀಯ ಸೇವೆಯನ್ನು ನಾಡಿನ ಜನತೆಗೆ ಒದಗಿಸುವ ಹೊಣೆಗಾರಿಕೆಯೂ ಈಗ ಅವರ ಮೇಲಿದೆ.

20 ವರ್ಷಗಳ ಹಿಂದೆ ಲಂಡನ್‌ನ ಕಿಂಗ್ಸ್‌ ಕಾಲೇಜು ಆಸ್ಪತ್ರೆಯಲ್ಲಿ 5 ದಿನದ ಐರಿಷ್‌ ಮಗುವಿಗೆ ಯಕೃತ್‌ ಕಸಿ (ಲಿವರ್‌ ಟ್ರಾನ್ಸ್‌ಪ್ಲಾಂಟ್‌) ಶಸ್ತ್ರ ಚಿಕಿತ್ಸೆ ನಡೆಸಿದ್ದ ವೈದ್ಯ ಡಾ. ಮೊಹಮ್ಮದ್‌ ರೇಲಾ ಈಗ 111 ವರ್ಷದ ವಯಸ್ಸಿನ ಶಿವಕುಮಾರ ಸ್ವಾಮೀಜಿಗೆ ಯಕೃತ್‌ ಕಸಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. 5 ದಿನದ ಮಗುವಿಗೆ ಶಸ್ತ್ರ ಚಿಕಿತ್ಸೆ ನಡೆಸಿ ದಾಖಲೆ ನಿರ್ಮಿಸಿದ್ದ ವೈದ್ಯ ಮೊಹಮ್ಮದ್‌ ರೇಲಾ ಈಗ 111 ವರ್ಷದ ಸ್ವಾಮೀಜಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಮತ್ತೊಂದು ದಾಖಲೆ ಬರೆದಿದ್ದಾರೆ. ಯಕೃತ್‌ ಕಸಿಯ ವಿಶೇಷ ತಜ್ಞರಾಗಿರುವ ಡಾ. ರೇಲಾ ಲಂಡನ್‌ನ ಕಿಂಗ್ಸ್‌ ಕಾಲೇಜು ಆಸ್ಪತ್ರೆಯ ಪ್ರಾಧ್ಯಾಪಕರಾಗಿದ್ದವರು.

5 ದಿನದ ಮಗುವಾಗಿದ್ದಾಗ ತನಗೆ ಯಕೃತ್‌ ಕಸಿ ಶಸ್ತ್ರ ಚಿಕಿತ್ಸೆ ನಡೆಸಿದ್ದ ಡಾ. ರೇಲಾ ಜತೆಗೆ 20 ವರ್ಷದ ಬಳಿಕ ಬಬೆನ್‌ ಸ್ಚುಖೆ
5 ದಿನದ ಮಗುವಾಗಿದ್ದಾಗ ತನಗೆ ಯಕೃತ್‌ ಕಸಿ ಶಸ್ತ್ರ ಚಿಕಿತ್ಸೆ ನಡೆಸಿದ್ದ ಡಾ. ರೇಲಾ ಜತೆಗೆ 20 ವರ್ಷದ ಬಳಿಕ ಬಬೆನ್‌ ಸ್ಚುಖೆ
Image Courtesy : Nicholas Bowman / Sunday Mirror

ಹಾಗೆ ನೋಡಿದರೆ ಕರ್ನಾಟಕದ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಂಪನ್ಮೂಲದ ಕೊರತೆಯೇನೂ ಇಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಐದು ವರ್ಷದ ಅವಧಿಯಲ್ಲಿ ಇಲಾಖೆಯ ಕಾಲೇಜುಗಳು ಹಾಗೂ ಆಸ್ಪತ್ರೆಗಳ ಮೂಲಸೌಕರ್ಯಕ್ಕಾಗಿ ಖರ್ಚು ಮಾಡಿರುವ ಹಣ 1,488 ಕೋಟಿ ರೂಪಾಯಿ. 2018-19ನೇ ಸಾಲಿನ ಬಜೆಟ್‌ನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಮೀಸಲಿಟ್ಟಿರುವ ಹಣ 2,177 ಕೋಟಿ ರೂಪಾಯಿ. ಕೋಟಿ ಕೋಟಿ ಲೆಕ್ಕದಲ್ಲಿ ಹೊಸದಾಗಿ ದೊಡ್ಡ ದೊಡ್ಡ ಕಟ್ಟಡಗಳು ನಿರ್ಮಾಣವಾಗುತ್ತಿರುವುದೇನೋ ನಿಜ. ಆದರೆ, ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಒದಗಿಸಲು ಇಲಾಖೆ ಸೋಲುತ್ತಿರುವುದೇಕೆ?

ಯಾರೇ ಗಣ್ಯ ವ್ಯಕ್ತಿಗಳು ಅನಾರೋಗ್ಯಕ್ಕೆ ತುತ್ತಾದರೂ ಆರೋಗ್ಯ ಇಲಾಖೆ ಅಥವಾ ವೈದ್ಯಕೀಯ ಶಿಕ್ಷಣ ಇಲಾಖೆಯ ದೊಡ್ಡಾಸ್ಪತ್ರೆಗಳನ್ನು ಸೇರದೆ ಖಾಸಗಿ ಆಸ್ಪತ್ರೆ ಸೇರುವುದೇಕೆ? ಶಿವಕುಮಾರ ಸ್ವಾಮೀಜಿ ಕೂಡಾ ಇಷ್ಟು ದಿನ ಚಿಕಿತ್ಸೆ ಪಡೆಯುತ್ತಿದ್ದುದು ಬಿಜಿಎಸ್‌ ಗ್ಲೋಬಲ್‌ ಖಾಸಗಿ ಆಸ್ಪತ್ರೆಯಲ್ಲೇ. ಖುದ್ದು ಶಾಸಕರು, ಸಚಿವರು, ಮುಖ್ಯಮಂತ್ರಿಗಳು ಕೂಡಾ ಚಿಕಿತ್ಸೆಗಾಗಿ ವಿದೇಶಿ ಆಸ್ಪತ್ರೆಗಳ ಕಡೆಗೆ ಮುಖ ಮಾಡುತ್ತಾರೆ. ಅಂದಮೇಲೆ ಗಣ್ಯರಿಗೆ ಚಿಕಿತ್ಸೆ ನೀಡುವ ಮಟ್ಟಕ್ಕೆ ನಮ್ಮಲ್ಲಿನ ಸರಕಾರಿ ಆಸ್ಪತ್ರೆಗಳ ಗುಣಮಟ್ಟ ಸುಧಾರಿಸಿಲ್ಲ ಎಂದೇ ಅರ್ಥ.

ಸರಕಾರದ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳೇನಿದ್ದರೂ ಬಡಪಾಯಿಗಳಿಗಾಗಿ ಮಾತ್ರ ಎನ್ನುವಂತಾಗಿದೆ. ಈ ಆಸ್ಪತ್ರೆಗಳು ವೈದ್ಯಕೀಯ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಪ್ರಯೋಗಕ್ಕಾಗಿ ಬಡಪಾಯಿ ರೋಗಿಗಳನ್ನು ಕೂಡಿ ಹಾಕಿಕೊಳ್ಳುವ ಪ್ರಯೋಗಾಲಯಗಳಾಗುತ್ತಿರುವುದೇ ಹೆಚ್ಚು. ಗುಣಮಟ್ಟದ ಸೇವೆಯನ್ನು ನೀಡುವ ವಿಶ್ವಾಸವನ್ನು ಸರಕಾರಿ ಆಸ್ಪತ್ರೆಗಳ ವೈದ್ಯರೂ ಕೊಡುತ್ತಿಲ್ಲ, ಗುಣಮಟ್ಟ ಸುಧಾರಿಸುವ ಭರವಸೆಯನ್ನು ಸರಕಾರದಲ್ಲಿರುವ ಸಚಿವರೂ ಕೊಡುತ್ತಿಲ್ಲ.

ಜಯದೇವ, ಕಿದ್ವಾಯಿ ಸೇರಿದಂತೆ 7 ಸೂಪರ್‌ ಸ್ಪೆಷಾಲಿಟಿ ಸ್ವಾಯತ್ತ ಆಸ್ಪತ್ರೆಗಳು ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿವೆ. ಬೆಂಗಳೂರು ಮೆಡಿಕಲ್‌ ಕಾಲೇಜು, ಕಿಮ್ಸ್‌ ಸೇರಿದಂತೆ 10 ದೊಡ್ಡ ದೊಡ್ಡ ಸ್ವಾಯತ್ತ ವೈದ್ಯಕೀಯ ಕಾಲೇಜುಗಳೂ ರಾಜ್ಯದಲ್ಲಿವೆ. ವರ್ಷದಿಂದ ವರ್ಷಕ್ಕೆ ಬೇರೆ ಬೇರೆ ಜಿಲ್ಲಾ ಕೇಂದ್ರಗಳಿಗೆ ವಿಸ್ತರಣೆಯಾಗುತ್ತಿರುವ ವೈದ್ಯಕೀಯ ಶಿಕ್ಷಣ ಕಾಲೇಜುಗಳು ಜನ ಸಾಮಾನ್ಯರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ನೀಡುವ ನಿಟ್ಟಿನಲ್ಲಿ ಬೆಳೆಯುತ್ತಿಲ್ಲ.

ಬೆಂಗಳೂರು ಮೆಡಿಕಲ್‌ ಕಾಲೇಜಿನ ಹೊಸ ಕಟ್ಟಡ
ಬೆಂಗಳೂರು ಮೆಡಿಕಲ್‌ ಕಾಲೇಜಿನ ಹೊಸ ಕಟ್ಟಡ

ಬಡವರಷ್ಟೇ ಅಲ್ಲ ಬಹುತೇಕ ಮಧ್ಯಮ ವರ್ಗದ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಎಂಬುದು ಈಗ ಮರೀಚಿಕೆಯಾಗಿದೆ. ರಸ್ತೆ ಬದಿ ಸತ್ತರೂ ಪರವಾಗಿಲ್ಲ ಸರಕಾರಿ ಆಸ್ಪತ್ರೆಗೆ ಬರುವುದಿಲ್ಲ ಎಂದು ಜನ ಸಾಮಾನ್ಯರು ಸರಕಾರಿ ಆಸ್ಪತ್ರೆಗಳ ಬಗ್ಗೆ ಮೂಗುಮುರಿಯಲು ಕಾರಣವೇ ಸೇವೆಯಲ್ಲಿನ ಕಳಪೆ ಗುಣಮಟ್ಟ. ಸರಕಾರಿ ಆಸ್ಪತ್ರೆಗಳಲ್ಲಿ ಖಾಯಂ ವೈದ್ಯರು ಹಾಗೂ ಸಿಬ್ಬಂದಿ ಕೊರತೆ, ಸುಸಜ್ಜಿತ ಆಧುನಿಕ ಉಪಕರಣಗಳ ಕೊರತೆ, ಸರಕಾರಿ ವೈದ್ಯರಲ್ಲಿ ಕುಗ್ಗುತ್ತಿರುವ ಸೇವಾ ಮನೋಭಾವ ಹಾಗೂ ಸರಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಖಾಸಗಿ ಆಸ್ಪತ್ರೆಗಳು ಲಾಭ ಮಾಡಿಕೊಳ್ಳಲು ಅನುಕೂಲ ಮಾಡಿಕೊಟ್ಟಂತಾಗಿದೆ.

ಸರಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಸೇವೆ ಸಿಗದ ಕಾರಣಕ್ಕೆ ನಗರಗಳ ಬಹುತೇಕರು ಆರೋಗ್ಯ ವಿಮೆ ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಚಿಕಿತ್ಸೆಗೆ ದಾಖಲಾದ ರೋಗಿಯ ಹೆಸರಿನಲ್ಲಿ ಆರೋಗ್ಯ ವಿಮೆ ಇರುವುದು ಗೊತ್ತಾದರೆ ಇಲ್ಲಸಲ್ಲದ ಕಾಯಿಲೆಗಳ ನೆಪದಲ್ಲಿ ಅನಗತ್ಯ ಚಿಕಿತ್ಸೆ, ಶಸ್ತ್ರ ಚಿಕಿತ್ಸೆಗಳನ್ನು ಮಾಡಿ ವಿಮೆಯ ಸಂಪೂರ್ಣ ಹಣವನ್ನು ಬಳಿದುಕೊಳ್ಳುವ ಮಟ್ಟಕ್ಕೆ ಬಹುತೇಕ ಖಾಸಗಿ ಆಸ್ಪತ್ರೆಗಳು ಇಳಿದಿವೆ. ಆರೋಗ್ಯ ವಿಮಾ ಕಂಪೆನಿಗಳು ಹಾಗೂ ಖಾಸಗಿ ಆಸ್ಪತ್ರೆಗಳು ಹೀಗೆ ಜನ ಸಾಮಾನ್ಯರ ಜೀವದ ಜತೆಗೆ ಆಟವಾಡುವುದು ಹೆಚ್ಚಾಗಿದೆ.

ಇಂಥ ಸಂದರ್ಭದಲ್ಲಿ ನೆರೆಯ ರಾಜ್ಯದ ಖಾಸಗಿ ಆಸ್ಪತ್ರೆಯ ಬಗ್ಗೆ ವೈದ್ಯಕೀಯ ಶಿಕ್ಷಣ ಖಾತೆಯ ಹೊಣೆ ಹೊತ್ತಿರುವ ಡಿ.ಕೆ. ಶಿವಕುಮಾರ್‌ ಉದಾರವಾದ ಮಾತನ್ನಾಡಿದ್ದಾರೆ. ಅದೇ ವೇಳೆಗೆ ರೇಲಾ ಆಸ್ಪತ್ರೆಯಂಥ ಮಾದರಿ ಸರಕಾರಿ ಆಸ್ಪತ್ರೆಗಳು ಕರ್ನಾಟಕದಲ್ಲೂ ಇರಬೇಕೆಂಬ ಬಗ್ಗೆ ಡಿ.ಕೆ. ಶಿವಕುಮಾರ್‌ ಗಮನ ಹರಿಸಬೇಕಿದೆ. ಮೈತ್ರಿ ಸರಕಾರದ ಪ್ರಭಾವಿ ಸಚಿವ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ತಮ್ಮ ಕೈಯಲ್ಲೇ ಇಟ್ಟುಕೊಂಡಿರುವ ಡಿ.ಕೆ. ಶಿವಕುಮಾರ್‌ ಈ ಬಗ್ಗೆ ಗಂಭೀರವಾಗಿ ಯೋಚಿಸಿದರೆ ಮುಂದೊಂದು ದಿನ ರೇಲಾ ಮಾದರಿಯ ಸರಿಕಾರಿ ಆಸ್ಪತ್ರೆಗಳನ್ನು ರಾಜ್ಯದಲ್ಲೂ ಕಾಣುವಂತಾಗಬಹುದು.