samachara
www.samachara.com
ಎನ್‌ಡಿಎಗೆ ಗುಡ್‌ ಬೈ; ಉಪೇಂದ್ರ ಕುಶ್ವಾಹ ‘ಖೀರ್‌’ಗೆ ಯಾದವರ ಹಾಲು?
COVER STORY

ಎನ್‌ಡಿಎಗೆ ಗುಡ್‌ ಬೈ; ಉಪೇಂದ್ರ ಕುಶ್ವಾಹ ‘ಖೀರ್‌’ಗೆ ಯಾದವರ ಹಾಲು?

‘ಯಾದವರ ಹಾಲು ಮತ್ತು ಕುಶ್ವಾಹರ ಅಕ್ಕಿಯಿಂದ ಖೀರ್‌ ತಯಾರಿಸಲು ಸಾಧ್ಯವಿದೆ’ ಎಂದು ಹೇಳಿದವರು ಉಪೇಂದ್ರ ಕುಶ್ವಾಹ. ಬಿಹಾರದಲ್ಲಿ ಅವರ ಖೀರ್‌ಗೀಗ ಯಾದವರು ಹಾಲು ನೀಡುತ್ತಾರಾ?

ಹಲವು ದಿನಗಳ ಅನುಮಾನಕ್ಕೆ ತೆರೆ ಬಿದ್ದಿದೆ. ಬಿಹಾರದ ರಾಜಕಾರಣಿ, ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಇಂದು ಎನ್‌ಡಿಎ ಮೈತ್ರಿಕೂಟ ತೊರೆದಿದ್ದಾರೆ. ಈ ಮೂಲಕ ತೆಲುಗು ದೇಶಂ ಪಕ್ಷದ ನಂತರ ಎನ್‌ಡಿಎ ತೊರೆದ ಎರಡನೇ ಪಕ್ಷವಾಗಿ ‘ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ)‘ ಗುರುತಿಸಿಕೊಂಡಿದೆ.

2009ರಲ್ಲಿ ಆರ್‌ಎಲ್‌ಎಸ್‌ಪಿ ಪಕ್ಷ ಸ್ಥಾಪಿಸಿ 2013ರಲ್ಲಿ ಪಕ್ಷಕ್ಕೆ ಮರು ಚಾಲನೆ ನೀಡಿದ್ದವರು ಕುಶ್ವಾಹ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಅವರ ನೂತನ ಪಕ್ಷ ಕಣಕ್ಕಿಳಿದ ಮೂರರಲ್ಲಿ ಮೂರೂ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಗೆಲುವಿನ ಉಡುಗೊರೆಯಾಗಿ ಪಕ್ಷದ ಸಂಸ್ಥಾಪಕ ಉಪೇಂದ್ರ ಕುಶ್ವಾಹ ಕೇಂದ್ರ ಸಚಿವರಾಗಿದ್ದರು. ಆದರೆ ಬದಲಾದ ಸಂಬಂಧದಲ್ಲಿ ಅವರೀಗ ಎನ್‌ಡಿಎ ಮೈತ್ರಿಕೂಟ ತೊರೆದಿದ್ದಾರೆ.

2014ರ ಚುನಾವಣೆಯಲ್ಲಿ ರಾಮ್‌ವಿಲಾಸ್‌ ಪಾಸ್ವಾನ್‌ ನೇತೃತ್ವದ ಆರ್‌ಎಲ್‌ಡಿ, ಬಿಜೆಪಿ ಮತ್ತು ಆರ್‌ಎಲ್‌ಎಸ್‌ಪಿ ಜತೆಯಾಗಿ ಕಣಕ್ಕಿಳಿದಿದ್ದವು. ಆದರೆ ಮುಂದೆ ಇದಕ್ಕೆ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಬಂದು ಸೇರಿಕೊಳ್ಳುತ್ತಿದ್ದಂತೆ ಸಮೀಕರಣ ಬದಲಾಗಿತ್ತು.

ಸೀಟು ಹಂಚಿಕೆಯ ವೈಮನಸ್ಸು:

2019ರ ಚುನಾವಣೆ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದ ಪಕ್ಷಗಳ ಸೀಟು ಹಂಚಿಕೆಯ ಚರ್ಚೆ ಜಾರಿಯಲ್ಲಿತ್ತು. ಈ ಸಂದರ್ಭದಲ್ಲಿ ಹೆಚ್ಚಿನ ಸ್ಥಾನಗಳಿಗಾಗಿ ಉಪೇಂದ್ರ ಖುಶ್ವಾಹ ಬೇಡಿಕೆ ಇಟ್ಟಿದ್ದರು. ಇದರ ನಡುವೆಯೇ ಅಕ್ಟೋಬರ್‌ನಲ್ಲಿ ಬಿಹಾರಕ್ಕೆ ಬಂದಿದ್ದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದರು. ಇದರಲ್ಲಿ ಅವರು ಈ ಬಾರಿ ಜೆಡಿಯು ಮತ್ತು ಬಿಜೆಪಿ ಸಮಾನ ಸ್ಥಾನಗಳಲ್ಲಿ ಚುನಾವಣೆಗೆ ಕಣಕ್ಕಿಳಿಯಲಿವೆ. ಈ ಕಾರಣಕ್ಕೆ ಉಳಿದ ಸಣ್ಣ ಪಕ್ಷಗಳು ಸೀಟು ಕಡಿತಕ್ಕೆ ಸಿದ್ಧವಾಗಿರಬೇಕು ಎಂಬ ಅರ್ಥದ ಮಾತುಗಳನ್ನಾಡಿದ್ದರು.

ಇದರಿಂದ ಕ್ರುದ್ಧರಾಗಿದ್ದ ಕುಶ್ವಾಹ ಅಂದೇ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ರನ್ನು ಭೇಟಿಯಾಗಿದ್ದರು. ಈ ಮೂಲಕ ಎನ್‌ಡಿಎಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ಜತೆಗೆ ತಮ್ಮ ಖೀರ್‌ ಹೇಳಿಕೆ ಮೂಲಕ ತಮ್ಮ ತಲೆಯಲ್ಲಿ ಏನಿದೆ ಎಂಬುದನ್ನೂ ಅವರು ಹೊರಗೆ ಹಾಕಿದ್ದರು.

ಆರ್‌ಜೆಡಿ ನಾಯಕ ತೇಜಸ್ವೀ ಯಾದವ್‌ - ಉಪೇಂದ್ರ ಕುಶ್ವಾಹ ಭೇಟಿ.
ಆರ್‌ಜೆಡಿ ನಾಯಕ ತೇಜಸ್ವೀ ಯಾದವ್‌ - ಉಪೇಂದ್ರ ಕುಶ್ವಾಹ ಭೇಟಿ.
/ನ್ಯೂಸ್‌ಜಿಝ್

ಖೀರ್‌ ರಾಜಕಾರಣ:

ಎನ್‌ಡಿಎ ಮೈತ್ರಿಕೂಟ ತೊರೆಯುವ ಮುನ್ಸೂಚನೆಯನ್ನು ಅವರು ‘ಖೀರ್‌’ ಹೇಳಿಕೆಯ ಮೂಲಕ ನೀಡಿದ್ದರು. ‘ಯಾದವರ ಹಾಲು ಮತ್ತು ಕುಶ್ವಾಹರ ಅಕ್ಕಿಯಿಂದ ಖೀರ್‌ ತಯಾರಿಸಲು ಸಾಧ್ಯವಿದೆ’ ಎಂದಿದ್ದರು. ಈ ಮೂಲಕ ಆರ್‌ಜೆಡಿ ಪಾಳಯ ಸೇರಲು ಹಿಂದೇಟು ಹಾಕುವುದಿಲ್ಲ ಎಂಬ ಸೂಚನೆ ನೀಡಿದ್ದರು. ಅದರಂತೆ ಅವರೀಗ ಎನ್‌ಡಿಎ ತೊರೆದಿದ್ದಾರೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಅವರು, “ತನಗೆ ಪ್ರಧಾನಿಯವರ ನಾಯಕತ್ವದಿಂದ ಮೋಸವಾದಂತೆ, ದ್ರೋಹ ಬಗೆದಂತೆ ಭಾಸವಾಗುತ್ತಿದೆ,” ಎಂದಿದ್ದಾರೆ. ಅಷ್ಟೇ ಅಲ್ಲದೆ “ಸರಕಾರ ಆರ್‌ಎಸ್‌ಎಸ್‌ ಅಜೆಂಡಾದ ಜತೆ ಅಧಿಕಾರ ನಡೆಸುತ್ತಿದೆ. ಇದು ಸಂವಿಧಾನ ವಿರೋಧಿ ಮತ್ತು ಸಾಮಾಜಿಕ ನ್ಯಾಯಕ್ಕೂ ವಿರುದ್ಧವಾಗಿದೆ,” ಎಂದಿದ್ದಾರೆ. ಸಂವಿಧಾನದಲ್ಲಿ ಪ್ರತಿಪಾದಿಸಿದ ಸಾಮಾಜಿಕ ನ್ಯಾಯಾಕ್ಕಾಗಿ ನಾವು ಎನ್‌ಡಿಎಗೆ ಬೆಂಬಲಿಸಿದ್ದೆವು. ಆದರೆ ಅದರಿಂದ ಬಿಜೆಪಿ ದೂರ ಸರಿಯುತ್ತಿದೆ ಎಂದವರು ದೂರಿದ್ದಾರೆ. ಅಷ್ಟೇ ಅಲ್ಲದೆ ನಿತೀಶ್‌ ಕುಮಾರ್‌ ಜತೆ ಸೇರಿ ಬಿಜೆಪಿ ತಮಗೆ ಅವಮಾನಿಸಿದೆ, ತಮ್ಮ ಪಕ್ಷವನ್ನು ಮುಗಿಸಲು ಯತ್ನಿಸಿದೆ ಎಂದೂ ಆರೋಪಿಸಿದ್ದರು.

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿರುವ ಅವರು ‘ಇನ್ನು ಮುಂದೆ ಆರ್‌ಎಲ್‌ಎಸ್‌ಪಿ ಎನ್‌ಡಿಎಎ ಭಾಗವಾಗಿರುವುದಿಲ್ಲ. ಆಯ್ಕೆಗಳು ಮುಕ್ತವಾಗಿವೆ’ ಎಂದಿದ್ದಾರೆ. ಅವರ ಈ ಮಾತುಗಳು ಸಹಜವಾಗಿ ಆರ್‌ಎಲ್‌ಎಸ್‌ಪಿ ವಿರೋಧಿ ಪಾಳಯ ಸೇರುವ ಸಾಧ್ಯತೆಯತ್ತ ಬೊಟ್ಟು ಮಾಡುತ್ತಿವೆ.

ಜಾತಿ ಲೆಕ್ಕಾಚಾರ:

ಉಪೇಂದ್ರ ಅವರ ‘ಕುಶ್ವಾಹ’ ಎಂಬುದು ಬಿಹಾರದಲ್ಲಿರುವ ಒಂದು ಸಮುದಾಯ; ಈ ಸಮುದಾಯ ಮುಖ್ಯವಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದೆ. ಕುರ್ಮಿ ಮತ್ತು ಕೊಯಿರಿ ಎಂಬ ಎರಡು ಪ್ರಮುಖ ಪಂಗಡಗಳು ಇದರಲ್ಲಿ ಬರುತ್ತವೆ. ಬಿಹಾರದಲ್ಲಿ ಕುರ್ಮಿಗಳ ಜನಸಂಖ್ಯೆ ಅಂದಾಜಿ ಶೇಕಡಾ 4ರಷ್ಟಿದ್ದರೆ, ಉಪೇಂದ್ರ ಕುಶ್ವಾಹರ ಉಪಜಾತಿ ಕೊಯಿರಿಗಳು ಶೇಕಡಾ 7ರಷ್ಟಿದ್ದಾರೆ. ಸೀಮಿತ ಪ್ರದೇಶದಲ್ಲಷ್ಟೇ ಈ ಸಮುದಾಯದವರು ಕಾಣ ಸಿಗುತ್ತಾರೆ.

‘ಪೈಗಮ್‌ ಇ ಖೀರ್‌’ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಖೀರ್‌ ಕಲಸುತ್ತಿರುವ ಕುಶ್ವಾಹ
‘ಪೈಗಮ್‌ ಇ ಖೀರ್‌’ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಖೀರ್‌ ಕಲಸುತ್ತಿರುವ ಕುಶ್ವಾಹ
/ಡಿಎನ್‌ಎ

ವಿಧಾನಸಭೆ ಚುನಾವಣೆಗೆ ಬಂದಾಗ 22-25 ಕ್ಷೇತ್ರಗಳು ಇವರ ಹಿಡಿತಲ್ಲಿವೆ. ಲೋಕ ಸಭಾ ಚುನಾವಣೆಗೆ ಬಂದಾಗ 3-4 ಕ್ಷೇತ್ರಗಳಲ್ಲಿ ಈ ಸಮುದಾಯದವರ ಪ್ರಾಬಲ್ಯ ಇದೆ. ಆದರೆ ಹಲವು ಕ್ಷೇತ್ರಗಳಲ್ಲಿ ಇವರ ಸಮುದಾಯದ ಮತಗಳು ಫಲಿತಾಂಶವನ್ನು ಬುಡಮೇಲು ಮಾಡುವ ಸಾಮರ್ಥ್ಯ ಹೊಂದಿವೆ. ಹೀಗಾಗಿ ಈ ಮತಗಳು ಬಿಹಾರದಲ್ಲಿ ಶೇಕಡಾ 12ರಷ್ಟಿರುವ ಅತೀ ದೊಡ್ಡ ಯಾದವ ಸಮುದಾಯದ ಮತಗಳ ಜತೆ ಸೇರಿದರೆ ಚುನಾವಣೆಯ ಫಲಿತಾಂಶಗಳೇ ಅದಲು ಬದಲಾಗಬಹುದು.

ಈ ಕಾರಣಕ್ಕೆ ರಾಜಕೀಯ ಖೀರ್‌ ತಯಾರಿಸಲು ಅವರೀಗ ಅಕ್ಕಿ ಹಿಡಿದುಕೊಂಡು ಯಾದವರ ಹಾಲಿಗಾಗಿ ಕಾಯುತ್ತಿದ್ದಾರೆ. ಬಿಹಾರದಲ್ಲಿ ರಚನೆಯಾಗಿರುವ ಕಾಂಗ್ರೆಸ್‌, ಆರ್‌ಜೆಡಿ ಮತ್ತು ಶರದ್‌ ಯಾದವ್‌ ಅವರ ನೂತನ 'ಲೋಕತಾಂತ್ರಿಕ್‌ ಜನಶಕ್ತಿ ಪಕ್ಷ’ಗಳ ಮೈತ್ರಿಕೂಟವನ್ನು ಸೇರುವ ಹವಣಿಕೆಯಲ್ಲಿ ಅವರಿದ್ದಾರೆ. ಈ ನಿಟ್ಟಿನಲ್ಲಿ ಅವರಿಂದು ಸಂಜೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿಯವರನ್ನು ಭೇಟಿಯಾಗಲಿದ್ದಾರೆ. ಕುಶ್ವಾಹರಿಗೆ ಖೀರ್‌ ತಯಾರಿಸಲು ಹಾಲು ಸಿಗುತ್ತಾ? ಕಾದು ನೋಡಬೇಕಿದೆ.