samachara
www.samachara.com
ಬೆಳಗಾವಿಯಲ್ಲಿ ವರ್ಷಕ್ಕೊಮ್ಮೆ ಅಧಿವೇಶನ: ಏಕತಾನತೆ ಮುರಿಯಲು; ಮಾದರಿ ಮೆರೆಯಲು ಇಲ್ಲಿದೆ ಅವಕಾಶ...
COVER STORY

ಬೆಳಗಾವಿಯಲ್ಲಿ ವರ್ಷಕ್ಕೊಮ್ಮೆ ಅಧಿವೇಶನ: ಏಕತಾನತೆ ಮುರಿಯಲು; ಮಾದರಿ ಮೆರೆಯಲು ಇಲ್ಲಿದೆ ಅವಕಾಶ...

ಒಂದು ಕಡೆ ಬೆಳಗಾವಿ ಕೇಂದ್ರವಾಗಿಟ್ಟುಕೊಂಡು ಕನ್ನಡ ಅಸ್ಮಿತೆ ಜಾಗೃತವಾಗಿದ್ದ ಸಮಯದಲ್ಲೇ ಕರ್ನಾಟಕ ರಾಜಕೀಯದಲ್ಲಿ ‘ಕ್ಷಿಪ್ರ ಕ್ರಾಂತಿ’ಯೊಂದು ನಡೆದು, ಎಚ್. ಡಿ. ದೇವೇಗೌಡರ ಪುತ್ರ, ಶಾಸಕ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು.

ಒಂದು ವಿಚಾರ ದಶಕಗಳ ಅಂತರದಲ್ಲಿ ಹೇಗೆ ಮರೆಗೆ ಸರಿಯುತ್ತದೆ ಮತ್ತು ಅದರ ಕಾರಣಕ್ಕೆ ಸೃಷ್ಟಿಯಾದ ಒಳ್ಳೆಯ ಸಂಪ್ರದಾಯವೊಂದು ಹೇಗೆ ಏಕತಾನತೆಗೆ ಬಂದು ನಿಲ್ಲುತ್ತದೆ ಎಂಬುದಕ್ಕೆ ಬೆಳಗಾವಿಯ ‘ಸವರ್ಣ ಸೌಧ’ದಲ್ಲಿ ಸೋಮವಾರ ಆರಂಭಗೊಂಡಿರುವ ಚಳಿಗಾಲದ ಅಧಿವೇಶನ ಸಾಕ್ಷಿ.

ಸುಮಾರು 13 ವರ್ಷಗಳ ಹಿಂದೆ ನಡೆದ ಬೆಳವಣಿಗೆ ಇದು. ಅವತ್ತಿಗೆ ಕರ್ನಾಟಕದಲ್ಲಿ ಕಾಂಗ್ರೆಸ್- ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿತ್ತು. ಹೈದ್ರಾಬಾದ್ ಕರ್ನಾಟಕ ಮೂಲದ ಧರಂ ಸಿಂಗ್ ಮುಖ್ಯಮಂತ್ರಿಯಾಗಿದ್ದರು. ಅಕ್ಟೋಬರ್ 27, 2005ರಂದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ನಿರ್ಣಯವೊಂದನ್ನು ಅಂಗೀಕರಿಸಿತು. ಬೆಳಗಾವಿ (ಖಾನಾಪುರ, ನಿಪ್ಪಾಣಿ, ಬೆಳಗಾವಿ ನಗರ), ಉತ್ತರ ಕರ್ನಾಟಕ (ಕಾರವಾರ, ಹಳಿಯಾಳ), ಬೀದರ್ (ಬಾಲ್ಕಿ, ಔರಾದ್ ಹಾಗೂ ಬಸವಕಲ್ಯಾಣ) ಜಿಲ್ಲೆಗಳ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬುದು ನಿರ್ಣಯದ ಸಾರ.

ಇದಕ್ಕೂ ಮುಂಚೆಯೇ; ಅಂದರೆ, 1983ರಲ್ಲಿ ಬೆಳಗಾವಿ ನಗರ ಸಭೆ ಆರಂಭಗೊಂಡ ದಿನದಿಂದಲೂ ಇಂತಹ ನಿರ್ಣಯಗಳನ್ನು ತೆಗೆದುಕೊಳ್ಳುತ್ತಲೇ ಬರಲಾಗಿತ್ತು. ಇದೇ ಕಾರಣಕ್ಕೆ ಬೆಳಗಾವಿಯಲ್ಲಿ 1986ರಲ್ಲಿ ಒಮ್ಮೆ ದೊಡ್ಡಮಟ್ಟದ ಗಲಾಟೆ ನಡೆದಿತ್ತು. ನಂತರ ಪೊಲೀಸರ ಗೋಲಿಬಾರ್‌ಗೆ ಜನ ಬಲಿಯಾಗಿದ್ದರು. ಇಂತಹದೊಂದು ಹಿನ್ನೆಲೆಯ ರಾಜಕೀಯ ವ್ಯವಸ್ಥೆಯಲ್ಲಿ ಮತ್ತೆ 2005ರಲ್ಲಿ ಎಂಇಎಸ್‌ ನಿರ್ಣಯ ತೆಗೆದುಕೊಳ್ಳುತ್ತಿದ್ದಂತೆ ಕರ್ನಾಟಕದ ಗಮನ ಬೆಳಗಾವಿ ಗಡಿ ವಿವಾದದ ಕಡೆಗೆ ಕೊಂಚ ಸೀರಿಯಸ್ ಆಗಿಯೇ ಸೆಳೆಯಿತು.

ಅಂದು ಬಿಸಿಸಿಯ ಮೇಯರ್‌ ಆಗಿದ್ದ ವಿಜಯ್ ಮೋರೆ ಮುಖಕ್ಕೆ ಮಸಿ ಬಳೆದ ಪ್ರಕರಣದ ಸಾಕ್ಷಿ ಈ ಚಿತ್ರ. 
ಅಂದು ಬಿಸಿಸಿಯ ಮೇಯರ್‌ ಆಗಿದ್ದ ವಿಜಯ್ ಮೋರೆ ಮುಖಕ್ಕೆ ಮಸಿ ಬಳೆದ ಪ್ರಕರಣದ ಸಾಕ್ಷಿ ಈ ಚಿತ್ರ. 
ಒನ್ ಇಂಡಿಯಾ. 

ಪರಿಣಾಮ, ಬೆಳಗಾವಿ ನಗರಸಭೆ ನಿರ್ಣಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಡಿಯಲ್ಲಿ ಪ್ರತಿಭಟನೆಗಳು ಆರಂಭಗೊಂಡವು. ಬೆಂಗಳೂರಿನ ಶಾಸಕ ಭವನದಲ್ಲಿ ಬೆಳಗಾವಿಯ ಅಂದಿನ ಪಾಲಿಕೆ ಮೇಯರ್ ವಿಜಯ್ ಮೋರೆ ಮುಖಕ್ಕೆ ಸಂಘಟನೆಯ ಸುಮಾರು 15 ಕಾರ್ಯಕರ್ತರು ಮಸಿ ಬಳಿದರು. ಸಾಹಿತಿ ಅನಂತ ಮೂರ್ತಿ, ಚಿದಾನಂದ ಮೂರ್ತಿ ಮತ್ತಿತರು ಘಟನೆಯನ್ನು ಖಂಡಿಸಿದರೆ, ತೇಜಸ್ವಿ ಸಮರ್ಥಿಸಿಕೊಂಡರು. ಬೆಂಗಳೂರಿನಲ್ಲಿ ನಡೆದ ಈ ಘಟನೆ ಒಟ್ಟಾರೆ ಬೆಳಗಾವಿ ಗಡಿ ವಿವಾದಕ್ಕೆ ಹೊಸ ಆಯಾಮವನ್ನೇ ನೀಡಿತು. ಸರಣಿ ಪ್ರತಿಭಟನೆಗಳಿಗೆ ನಾಂದಿ ಹಾಡಿತು. ಧರಂ ಸಿಂಗ್ ಸರಕಾರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಿತು.

ಹೀಗೆ, ಒಂದು ಕಡೆ ಬೆಳಗಾವಿ ಕೇಂದ್ರವಾಗಿಟ್ಟುಕೊಂಡು ಕನ್ನಡ ಅಸ್ಮಿತೆ ಜಾಗೃತವಾಗಿದ್ದ ಸಮಯದಲ್ಲೇ ಕರ್ನಾಟಕ ರಾಜಕೀಯದಲ್ಲಿ ‘ಕ್ಷಿಪ್ರ ಕ್ರಾಂತಿ’ಯೊಂದು ನಡೆದು, ಎಚ್. ಡಿ. ದೇವೇಗೌಡರ ಪುತ್ರ, ಶಾಸಕ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಇನ್ನೂ ಕೆಂಡವಾಗಿಯೇ ಇದ್ದ ಬೆಳಗಾವಿಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಅಲ್ಲಿಯೇ ಮೊದಲ ಅಧಿವೇಶನ ನಡೆಸುವ ತೀರ್ಮಾನ ತೆಗೆದುಕೊಂಡರು.

ಅದು ಮೊದಲ ಅಧಿವೇಶನ:

ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿಯೇ ಬರುವ ಬೆಳಗಾವಿಯಲ್ಲಿ ಚಳಿ ಮೈ ಕೊರೆಸುತ್ತದೆ. ಅದು ಸೆ. 25, 2006ರ ದಿನ. ಬೆಳಗಾವಿಯ ಕರ್ನಾಟಕ ಲಿಂಗಾಯತ ಎಜುಕೇಷನ್‌ ಸೊಸೈಟಿ (ಕೆಎಲ್‌ಇ) ಕಾಲೇಜಿನ ಜೀರಿಗೆ ಆಡಿಟೋರಿಯಂ ಉತ್ತರ ಕರ್ನಾಟಕದಲ್ಲಿ ನಡೆಸಲು ಉದ್ದೇಶಿಸಿದ ಸರಕಾರದ ಚಳಿಗಾಲದ ಅಧಿವೇಶನದಕ್ಕೆ ಸಜ್ಜಾಗಿ ನಿಂತಿತ್ತು.

“ಹೆಚ್ಚು ಕಡಿಮೆ 15 ದಿನಗಳನ್ನು ತೆಗೆದುಕೊಂಡಿರಬಹುದು ಸಿದ್ಧತೆಗೆ. ಸರಕಾರ ಒಂದೇ ವೇಗದಲ್ಲಿ ಅಧಿವೇಶನಕ್ಕೆ ಬೆಳಗಾವಿಯನ್ನು ಸಜ್ಜುಗೊಳಿಸಿತು. ಅದರ ಒಟ್ಟು ಶ್ರಮದಲ್ಲಿ ಅರ್ಧದಷ್ಟು ಹೊಣೆಗಾರಿಕೆ ತೆಗೆದುಕೊಂಡವರು ಕೆಎಲ್‌ಇ ಅಧ್ಯಕ್ಷರಾಗಿದ್ದ ಪ್ರಭಾಕರ್ ಕೋರೆ. ಕಾಂಗ್ರೆಸ್‌ನಲ್ಲಿದ್ದ ಕೋರೆ ತಮ್ಮ ಕಾಲೇಜಿನಲ್ಲಿಯೇ ಎಲ್ಲಾ ವ್ಯವಸ್ಥೆ ಮಾಡಿದರು. ವಿದ್ಯಾರ್ಥಿಗಳ ಹಾಸ್ಟೆಲ್‌ಗಳಲ್ಲಿ ಪತ್ರಕರ್ತರಿಗೆ, ಅಧಿಕಾರಿಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು,’’ ಎಂದು ನೆನೆಪಿಸಿಕೊಳ್ಳುತ್ತಾರೆ ಅಂದು ದಿನಪತ್ರಿಕೆಯೊಂದರ ರಾಜಕೀಯ ವರದಿಗಾರರಾಗಿದ್ದ ಹಿರಿಯ ಪತ್ರಕರ್ತರೊಬ್ಬರು.

ಬೆಳಗಾವಿಯ ಮೊದಲ ಅಧಿವೇಶವನ್ನು ‘ಕವರ್’ ಮಾಡಿದ ಪತ್ರಕರ್ತರಿಗೆ ಇವತ್ತಿಗೂ ಆ ನೆನಪುಗಳು ಹಸಿರಾಗಿವೆ. “ವ್ಯವಸ್ಥೆ ಹೇಗಿತ್ತು ಎಂದರೆ ಒಂದು ಹೋಟೆಲ್‌ಗೆ ಹೇಳಿದ್ದರು. ಯಾರೇ ಪತ್ರಕರ್ತರು ಅಲ್ಲಿ ಹೋಗಿ ಏನೇ ತೆಗೆದುಕೊಂಡರೂ ಎಲ್ಲವೂ ಫ್ರೀ. ರಮ್‌ ಕುಡಿಯುತ್ತಿದ್ದರು ಐದು ದಿನ ಸ್ಕಾಚ್ ಕುಡಿದರು. ಕೆಲವರು ಪಾರ್ಸಲ್ ಕೂಡ ತಂದರು,’’ ಎಂದು ನೆನಪಿಸಿಕೊಳ್ಳುತ್ತಾರೆ ಇನ್ನೊಬ್ಬ ಹಿರಿಯ ಸಂಪಾದಕರು.

ಕನ್ನಡ ಚಳವಳಿಯ ಭಾಗವಾಗಿದ್ದು, ಅವತ್ತಿಗೆ ‘ಸಂಜೆ ವಾಣಿ’ ಪತ್ರಿಕೆಯ ಹೊಣೆಹೊತ್ತುಕೊಂಡಿದ್ದ ಎಸ್. ಕೆ. ದಿನೇಶ್ ಕುಮಾರ್ ಕೂಡ ಈ ಮೊದಲ ಅಧಿವೇಶನವನ್ನು ಹತ್ತಿರದಿಂದ ನೋಡಿದವರಲ್ಲಿ ಒಬ್ಬರು.

“ಒಂದು ಒಳ್ಳೆಯ ಮೀಡಿಯಾ ರೂಮ್ ಇತ್ತು. ಕಲಾಪ ಮುಗಿಯುತ್ತಿದ್ದಂತೆ ಓಡಿ ಬಂದು ಬರೆದು ಕಳುಹಿಸುತ್ತಿದ್ದೆವು. ಅವತ್ತಿಗೆ ಅಲ್ಲಿ ನೀಡಿದ್ದ ವ್ಯವಸ್ಥೆ ಅಷ್ಟು ಅತ್ಯಾಧುನಿಕವಾಗಿತ್ತು. ಸಂಜೆ ಸಚಿವರು ಪಾರ್ಟಿ ಕೊಡುತ್ತಿದ್ದರು. ಕನ್ನಡ, ಬೆಳಗಾವಿ ಸುತ್ತ ಚರ್ಚೆಗಳು ನಡೆಯುತ್ತಿದ್ದವು. ಹಾಗೆ ನೋಡಿದರೆ, ಮೊದಲ ಅಧಿವೇಶನ ಮತ್ತು ಅದರ ಹಿನ್ನೆಲೆಯಲ್ಲಿ ನಡೆದ ಘಟನಾವಳಿಗಳೇ ಮಹಾರಾಷ್ಟ್ರದ ಗಡಿ ವಿವಾದ ಮತ್ತೆ ಇವತ್ತಿನವರೆಗೆ ತಲೆ ಏಳದಂತೆ ತಡೆದವು ಅನ್ನಿಸುತ್ತದೆ,’’ ಎನ್ನುತ್ತಾರೆ ದಿನೇಶ್ ಕುಮಾರ್.

ನಿರ್ಣಯ ಎಂಬ ಹ್ಯಾಂಗೋವರ್:

ದೂರದ ಬೆಂಗಳೂರಿನಿಂದ ಬಂದ ಆಡಳಿತ ಯಂತ್ರ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಅಂದು ಬೆಳಗಾವಿಯಲ್ಲಿ ಅಧಿವೇಶನವನ್ನು ಯಶಸ್ವಿಯಾಗಿ ಮುಗಿಸಿತ್ತು. ಉತ್ತರ ಕರ್ನಾಟಕ ಅಭಿವೃದ್ಧಿ, ಗಡಿ ಜಿಲ್ಲೆಗಳ ಸರಕಾರಿ ಕೆಲಸಗಳ ವೇಗಕ್ಕಾಗಿ ಸುವರ್ಣ ಸೌಧಕ್ಕೆ ಕಾಯಕಲ್ಪ ಹೀಗೆ ಹಲವು ನಿರ್ಣಯಗಳನ್ನು ಅವತ್ತು ತೆಗೆದುಕೊಂಡಿತು.

ಇವೆಲ್ಲಾ ಏನಾದವು? ಆರು ವರ್ಷಗಳ ನಂತರ 2012ರಲ್ಲಿ ವಿಧಾನಸೌಧವನ್ನೇ ಹೋಲುವ ಸುವರ್ಣ ಸೌಧವೇನೋ ಬೆಳಗಾವಿಯಲ್ಲಿ ಉದ್ಘಾಟನೆಗೊಂಡಿತು. ಆದರೆ ಸರಕಾರ ಯಂತ್ರ ಮಾತ್ರ ಬೆಂಗಳೂರನ್ನೇ ಕೇಂದ್ರವಾಗಿಟ್ಟುಕೊಂಡು ಕಾರ್ಯಾಚರಣೆ ನಡೆಸುತ್ತಿದೆ. ಮಹಾರಾಷ್ಟ್ರದ ಗಡಿ ವಿವಾದ ತೆರೆಮರೆಗೆ ಸರಿದಿದೆ ಎಂಬುದನ್ನು ಬಿಟ್ಟರೆ, ಕನ್ನಡದ ಪರ ನಿಂತ ಬೆಳಗಾವಿ ಹಾಗೂ ಉತ್ತರ ಕರ್ನಾಟಕದ ಜನರಿಗೆ ಅಧಿಕಾರ ವಿಕೇಂದ್ರಿಕರಣ ಎಂಬುದು ಇನ್ನೂ ಮರೀಚಿಕೆಯಾಗಿಯೇ ಇದೆ. ಮೊದಲ ಅಧಿವೇಶದ ಹ್ಯಾಂಗೋವರ್ ಇಳಿದಷ್ಟೆ ವೇಗವಾಗಿ ಅದರ ಹಿಂದಿದ್ದ ಆಶಯಗಳೂ ಇಳಿದು ಹೋಗಿವೆ. ಹೀಗಾಗಿ, ಸೋಮವಾರ ಆರಂಭಗೊಂಡಿರುವ ಚಳಿಗಾಲದ ಅಧಿವೇಶನ ಮತ್ತದೇ ಏಕತಾನತೆಯ ನೆಲೆಗೆ ಬಂದು ನಿಂತಿದೆ.

ಕೊನೆಯ ಅವಕಾಶ:

ಬೆಳವಾವಿಯಲ್ಲಿ ಒಂದು ಅಧಿವೇಶನ ನಡೆಸುವುದು ಎಂದರೆ, 10 ದಿನಗಳ ಅಂತರದಲ್ಲಿ ಸುಮಾರು 12- 15 ಕೋಟಿ ರೂಪಾಯಿಗಳ ಭಾರವನ್ನು ತೆರಿಗೆ ಕಟ್ಟುವವರ ತಲೆಗೆ ಕಟ್ಟುವುದು ಅಂತ ಅರ್ಥ. ಇಷ್ಟು ಖರ್ಚು ಮಾಡಿ ಅಧಿವೇಶನ ನಡೆಸುವುದು ಸಂಪ್ರದಾಯ ಪಾಲಿಸಬೇಕು ಅಂತ ಅಲ್ವಾ? ಯಾರು ಇರಲಿ ಬಿಡಲಿ, ಸಿಎಂ ಕುಮಾರಸ್ವಾಮಿ ಒಂದಷ್ಟು ಗಟ್ಟಿ ನಿರ್ಧಾರಗಳನ್ನು ಹೊರಹಾಕಲು ಈ ಚಳಿಗಾಲದ ಅಧಿವೇಶನದ ವೇದಿಕೆಯನ್ನು ಬಳಸಿಕೊಳ್ಳಬಹುದಾಗಿದೆ. ಮುಖ್ಯವಾಗಿ, ಅಧಿಕಾರ ವಿಕೇಂದ್ರಿಕರಣ, ಸುವರ್ಣ ಸೌಧಕ್ಕೆ ಕಚೇರಿ ಸ್ಥಳಾಂತರಗಳ ಬಗ್ಗೆ ಅವರೀಗಾಗಲೇ ಮಾತನಾಡಿದ್ದಾರೆ.

ಹೀಗಿರುವಾಗ, ಅಧಿಕಾರಿಗಳನ್ನು ಬೆಂಗಳೂರಿನಿಂದ ಬೇರು ಬಿಡಿಸಿ, ಬೆಳಗಾವಿಗೆ ಕಳುಹಿಸುವ ಮೊದಲ ಮಾದರಿಯೊಂದನ್ನು ತಮ್ಮ ನೇತೃತ್ವದ ಶಾಸಕಾಂಗವೇ ಯಾಕೆ ನಿರ್ಮಿಸಬಾರದು? ಅದರ ಭಾಗವಾಗಿ ಉಪ ಮುಖ್ಯಮಂತ್ರಿ ಕಚೇರಿಯನ್ನು, ರಾಜ್ಯಪಾಲರ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಿದರೆ, ಉಳಿದ ವರ್ಗಾವಣೆಗಳಿಗೂ ವೇಗ ಹಾಗೂ ಬದ್ಧತೆ ಸಿಕ್ಕಂತಾಗುತ್ತದೆ. ಉತ್ತರ ಕರ್ನಾಟಕದ ಜನರ ಹಲವು ದಿನಗಳ ಕನಸು ನೆರವೇರಿಸಿದಂತೆಯೂ ಆಗುತ್ತದೆ. ಅಧಿವೇಶನದ ವೆಚ್ಚಕ್ಕೆ ನ್ಯಾಯ ಒದಗಿಸಿದಂತೆಯೂ ಆಗುತ್ತದೆ. ಸಂಘರ್ಷದ ಹಿನ್ನೆಲೆಯಲ್ಲಿ ಹುಟ್ಟಿದ ಆಶಯವನ್ನು ಏಕತಾನತೆಯಿಂದ ಹೊರತರಲು ಇದಕ್ಕಿಂತ ಒಳ್ಳೆಯ ಅವಕಾಶ ಸಿಗಲಾರದು.