samachara
www.samachara.com
 ರಾಮಮಂದಿರಕ್ಕಾಗಿ ಭಾನುವಾರ; ಕೇಂದ್ರದ ಮೇಲೆ ಒತ್ತಡ ಹೇರಲು ‘ವಾರಾಂತ್ಯ’ ಸಮಾವೇಶ!
COVER STORY

ರಾಮಮಂದಿರಕ್ಕಾಗಿ ಭಾನುವಾರ; ಕೇಂದ್ರದ ಮೇಲೆ ಒತ್ತಡ ಹೇರಲು ‘ವಾರಾಂತ್ಯ’ ಸಮಾವೇಶ!

ರಾಮಮಂದಿರ ನಿರ್ಮಾಣ 2014ರ ಚುನಾವಣಾ ವಸ್ತುವಾದಂತೆ, 2019ರ ಚುನಾವಣಾ ವಸ್ತುವೂ ಆಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ.

Team Samachara

ಹೆಚ್ಚೂ ಕಡಿಮೆ ಕಳೆದ ಒಂದು ತಿಂಗಳಿನಿಂದ ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಹಿಂದುತ್ವ ಸಂಘಟನೆಗಳು ಪ್ರತಿ ಭಾನುವಾರ ಹಲವೆಡೆ ರ್ಯಾಲಿಗಳನ್ನು ನಡೆಸುತ್ತಿವೆ. ಜಿಲ್ಲಾ ಕೇಂದ್ರಗಳಿಂದ ಹಿಡಿದು ರಾಷ್ಟ್ರ ರಾಜಧಾನಿವರೆಗೆ ರಾಮಮಂದಿರ ನಿರ್ಮಾಣವನ್ನು ಗುರಿಯಾಗಿಸಿಕೊಂಡ ಮೆರವಣಿಗೆಗಳು ನಡೆಯುತ್ತಿವೆ. ಸ್ವಾಮೀಜಿಗಳನ್ನು ಕಲೆ ಹಾಕಿಕೊಂಡು ಅವರ ಬಾಯಿಯಿಂದ ರಾಮಮಂದಿರ ನಿರ್ಮಾಣಕ್ಕಾಗಿ ಒತ್ತಾಯ ಮಾಡುವುದನ್ನು ಹಿಂದುತ್ವ ಸಂಘಟನೆಗಳು ಮಾಡುತ್ತಿವೆ.

ಇದೇ ಚಳಿಗಾಲದ ಅಧಿವೇಶನದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಸಂಸತ್‌ನಲ್ಲಿ ನಿರ್ಣಯ ಅಂಗೀಕಾರವಾಗಬೇಕು. ಇಲ್ಲವೇ ರಾಮಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರಕಾರ ಸುಗ್ರೀವಾಜ್ಞೆ ತರಬೇಕು ಎಂಬ ಒತ್ತಾಯ ಹಿಂದುತ್ವ ಸಂಘಟನೆಗಳದ್ದು. ಆದರೆ, ಸುಪ್ರೀಂಕೋರ್ಟ್‌ ಅಂಗಳದಲ್ಲಿರುವ ಅಯೋಧ್ಯೆಯ ವಿವಾದಿತ ಜಾಗದ ಪ್ರಕರಣದ ವಿಚಾರಣೆಯ ದಿನಾಂಕ ನಿಗದಿಯಾಗಲು ಜನವರಿವರೆಗೆ ಕಾಯಬೇಕಿದೆ.

ಅಯೋಧ್ಯೆ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಸದ್ಯಕ್ಕೆ ಸರಕಾರ ಏನೂ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ಮುಖಂಡರೂ ಹೇಳಿಕೆಗಳನ್ನು ಕೊಡುತ್ತಲೇ ಇದ್ದಾರೆ. ಆದರೆ, ರಾಮಮಂದಿರ ನಿರ್ಮಾಣಕ್ಕಾಗಿ ಹಿರಿಯ ಸ್ವಾಮೀಜಿಗಳನ್ನು ಉಪವಾಸಕ್ಕೆ ಕೂರಿಸುವ ಉದ್ದೇಶವನ್ನೂ ಹಿಂದುತ್ವ ಸಂಘಟನೆಗಳು ಹೊಂದಿರುವಂತಿದೆ. ಇದಕ್ಕಾಗಿ ಈಗಾಗಲೇ ಸ್ವಾಮೀಜಿಗಳನ್ನು ಅಣಿಗೊಳಿಸುವ ಕಾರ್ಯವೂ ನಡೆದಿದೆ. ಒಂದು ವೇಳೆ ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ಕೇಂದ್ರದ ಬಿಜೆಪಿ ಸರಕಾರ ಮೌನವನ್ನೇ ಮುಂದುವರಿಸಿದರೆ ಸ್ವಾಮೀಜಿಗಳ ಉಪವಾಸ ಪ್ರಯೋಗವೂ ನಡೆಯಲಿದೆ.

Also read: ‘ಅಯೋಧ್ಯೆ ವಿವಾದ ನ್ಯಾಯಾಲಯದಲ್ಲಿದೆ’; ಮಂದಿರ ನಿರ್ಮಾಣಕ್ಕೀಗ ಸುಗ್ರೀವಾಜ್ಞೆ ಅಸಾಧ್ಯ ಎಂದ ಬಿಜೆಪಿ

ಈ ಭಾನುವಾರವೂ ದೆಹಲಿಯ ರಾಮಲೀಲಾ ಮೈದಾನದಲ್ಲಿ ವಿಎಚ್‌ಪಿ ಸಮಾವೇಶ ಆಯೋಜಿಸಿದೆ. ಸಮಾವೇಶದ ವೇದಿಕೆಯಲ್ಲಿ ಮಾತನಾಡಿರುವ ಹಿರಿಯ ಆರ್‌ಎಸ್‌ಎಸ್‌ ಮುಖಂಡ ಸುರೇಶ್‌ ಭಯ್ಯಾಜಿ ಜೋಶಿ, ಬಿಜೆಪಿಯನ್ನು ಹೆಸರಿಸದೆ ಕೇಂದ್ರದ ವಿರುದ್ಧ 'ಸೌಮ್ಯದಾಳಿ' ನಡೆಸಿದ್ದಾರೆ. “ಇಂದು ಅಧಿಕಾರದಲ್ಲಿರುವವರು ರಾಮಮಂದಿರ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ರಾಮಮಂದಿರ ನಿರ್ಮಾಣದ ಒತ್ತಾಯವನ್ನು ಆಲಿಸಬೇಕು” ಎಂದು ಸುರೇಶ್‌ ಹೇಳಿದ್ದಾರೆ.

“ರಾಮಮಂದಿರ ನಿರ್ಮಾಣಕ್ಕಾಗಿ ನಾವು ಭಿಕ್ಷೆ ಬೇಡುತ್ತಿಲ್ಲ. ನಾವು ನಮ್ಮ ಭಾವನೆಗಳನ್ನು ಹೇಳಿಕೊಳ್ಳುತ್ತಿದ್ದೇವೆ. ದೇಶ ರಾಮ ರಾಜ್ಯವಾಗಬೇಕೆಂದು ದೇಶದ ಜನತೆ ಬಯಸಿದೆ” ಎಂದಿರುವ ಅವರು, ರಾಮಮಂದಿರ ನಿರ್ಮಾಣಕ್ಕಾಗಿ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಗೆ ಆಗ್ರಹಿಸಿದ್ದಾರೆ.

2019ರ ಚುನಾವಣೆಗೂ ಮುನ್ನಾ ರಾಮಮಂದಿರ ನಿರ್ಮಾಣ ವಿಚಾರವನ್ನು ಹಿಂದುತ್ವ ಸಂಘಟನೆಗಳು ಮುನ್ನೆಲೆಗೆ ತರುತ್ತಿದ್ದರೆ, ಬಿಜೆಪಿ ದಕ್ಷಿಣ ಭಾರತದ ಶಬರಿಮಲೆಯನ್ನು ಚುನಾವಣಾ ವಿಚಾರವಾಗಿ ಬಳಸಿಕೊಳ್ಳಲು ಹೆಚ್ಚು ಉತ್ಸುಕವಾಗಿದೆ. ಉತ್ತರ ಭಾರತಕ್ಕೆ ರಾಮಮಂದಿರ ಹಾಗೂ ದಕ್ಷಿಣ ಭಾರತಕ್ಕೆ ಶಬರಿಮಲೆ ವಿಚಾರವನ್ನು ಮುಂದಿಟ್ಟುಕೊಂಡು ಧಾರ್ಮಿಕ ಭಾವನೆಗಳ ಆಧಾರದಲ್ಲಿ ಮತ ಪಡೆಯುವ ರಾಜಕೀಯ ಸೂತ್ರವನ್ನು ಬಿಜೆಪಿ ಈಗಾಗಲೇ ಸಿದ್ಧಪಡಿಸಿಕೊಂಡಿದೆ.

ಸುಪ್ರೀಂಕೋರ್ಟ್‌ನಲ್ಲಿ ಅಯೋಧ್ಯೆಯ ವಿವಾದಿತ ಜಾಗದ ಪ್ರಕರಣ ಇತ್ಯರ್ಥವಾಗುವುದಕ್ಕೂ ಮೊದಲು ಚುನಾವಣೆ ಘೋಷಣೆಯಾದರೆ ರಾಮಮಂದಿರ ನಿರ್ಮಾಣ ಮಾಡಿಯೇ ಸಿದ್ಧ ಎಂದು ಜನರ ಮುಂದೆ ಹೋಗಲು ಮತ್ತೆ ಬಿಜೆಪಿಗೆ ಅನುಕೂಲವಾದಂತಾಗುತ್ತದೆ. ಅದಕ್ಕೂ ಮೊದಲು ರಾಮಮಂದಿರ ನಿರ್ಮಾಣ ವಿಚಾರದ ಬಗ್ಗೆ ಮೌನವನ್ನೇ ಮುಂದುವರಿಸುವ ತಂತ್ರಕ್ಕೆ ಬಿಜೆಪಿ ಶರಣಾಗಿರುವಂತಿದೆ.

ಹಿಂದುತ್ವ ಸಂಘಟನೆಗಳೇನೋ ರಾಮಮಂದಿರ ನಿರ್ಮಾಣ ನಮ್ಮ ಬೇಡಿಕೆಯಲ್ಲ ಅದು ನಮ್ಮ ಭಾವನೆ ಎನ್ನುತ್ತಿವೆ. ಇದಕ್ಕಾಗಿ ಮನೆ ಮನೆಗಳಿಂದ ಹಿಂದೂಗಳನ್ನು 'ಜಾಗೃತ'ಗೊಳಿಸುವ ಕೆಲಸದಿಂದ ಹಿಡಿದು ಹಿರಿಯ, ಪ್ರಭಾವಿ ಸ್ವಾಮೀಜಿಗಳಿಂದ ಉಪವಾಸದ ಬೆದರಿಕೆ ಹಾಕಿಸುವವರೆಗೂ ಹಿಂದುತ್ವ ಸಂಘಟನೆಗಳು ರಾಮಮಂದಿರ ನಿರ್ಮಾಣದ ವಿಚಾರವನ್ನು ಜಪಿಸುತ್ತಿವೆ. ಆದರೆ, ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ತನ್ನ ಅಂತಿಮ ನಿಲುವು ಏನೆಂಬುದನ್ನು ಬಿಜೆಪಿ ಸದ್ಯಕ್ಕಂತೂ ಬಹಿರಂಗಗೊಳಿಸಿಲ್ಲ. ರಾಮಮಂದಿರ ನಿರ್ಮಾಣ 2014ರ ಚುನಾವಣಾ ವಸ್ತುವಾದಂತೆ, 2019ರ ಚುನಾವಣಾ ವಸ್ತುವೂ ಆಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ.