samachara
www.samachara.com
Tv9 ಪತ್ತೇದಾರಿ ವರದಿಗೆ ಡ್ರೈವರ್ ತಿಮ್ಮೇಗೌಡ ಸಾಕ್ಷಿ; ನಬೀಲಾಗೆ ‘ಗಾಲಿ’ ನೀಡಿದವರು ಯಾರು?
COVER STORY

Tv9 ಪತ್ತೇದಾರಿ ವರದಿಗೆ ಡ್ರೈವರ್ ತಿಮ್ಮೇಗೌಡ ಸಾಕ್ಷಿ; ನಬೀಲಾಗೆ ‘ಗಾಲಿ’ ನೀಡಿದವರು ಯಾರು?

ಇಲ್ಲಿ ಮಾತ್ರವಲ್ಲ, ರಾಜ್ಯದ ಯಾವುದೇ ತಾಲೂಕು ಕೇಂದ್ರಕ್ಕೆ ಭೇಟಿ ನೀಡಿದರೂ ಹತ್ತಿರದಲ್ಲಿ ಒಂದು ಕಲ್ಲು ಗಣಿಗಾರಿಕೆ ಕಾಣಸಿಗುತ್ತದೆ. ಇವೆಲ್ಲವೂ ‘ಅಕ್ರಮವಾ?’, ಎಂದರೆ...

Team Samachara

ಬೆಂಗಳೂರಿನ ಹೊರವಲಯದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಕುರಿತು ವರದಿ ಮಾಡಲು ಸ್ಥಳಕ್ಕೆ ಹೋದ ಟಿವಿ 9 ಪತ್ರಕರ್ತೆಗೆ 'ಗಾಲಿ ನೀಡಿದ್ದಾರೆ'; ಹಾಗಂತ ಶಿವಕುಮಾರ ಸ್ವಾಮೀಜಿ ಅನಾರೋಗ್ಯದ ನಿರಂತರ ಸುದ್ದಿ ಭರಾಟೆ ನಡುವೆಯೂ ಟಿವಿ 9 ಕರ್ನಾಟಕ ವರದಿ ಆರೋಪಿಸಿದೆ.

'ಬೆಂಗಳೂರಿನ ಹೊರವಲಯದಲ್ಲಿ ಮಿನಿ ಬಳ್ಳಾರಿಯಂತೆ ಗಣಿಗಾರಿಕೆ ನಡೆಯುತ್ತಿದೆ. ಸರಕಾರ ಮತ್ತು ಪೊಲೀಸರು ಮಂಡಕ್ಕಿ ತಿನ್ನುತ್ತಿದ್ದಾರಾ?' ಎಂದು ಟಿವಿ9 ಕರ್ನಾಟಕ ವರದಿಯಲ್ಲಿ ಪ್ರಶ್ನಿಸಿದೆ.

ಅದು ಕಲ್ಲು ಗಣಿಗಾರಿಕೆ:

ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಿಂದ ಸುಮಾರು 43 ಕಿ. ಮೀ ದೂರದಲ್ಲಿರುವ ಬನ್ನೇರುಘಟ್ಟದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇಲ್ಲಿನ ಬಿಲವಾರದಹಳ್ಳಿ, ಶ್ಯಾನುಭೋಗನಹಳ್ಳಿ, ಕುಲುಮೆಪಾಳ್ಯ ಸೇರಿದಂತೆ ಆಸುಪಾಸಿನಲ್ಲಿ ಪ್ರಕೃತಿ ಒಡಲು ಬಗೆದು ಕಲ್ಲುಗಳನ್ನು 'ಅಭಿವೃದ್ಧಿ'ಗೆ ಬಳಸಲಾಗುತ್ತಿದೆ. ಇಲ್ಲಿ ಮಾತ್ರವಲ್ಲ, ರಾಜ್ಯದ ಯಾವುದೇ ತಾಲೂಕು ಕೇಂದ್ರಕ್ಕೆ ಭೇಟಿ ನೀಡಿದರೂ ಹತ್ತಿರದಲ್ಲಿ ಒಂದು ಕಲ್ಲು ಗಣಿಗಾರಿಕೆ ಕಾಣಸಿಗುತ್ತದೆ.

ಇವೆಲ್ಲವೂ 'ಅಕ್ರಮವಾ?', ಎಂದರೆ, "ಅಕ್ರಮ ಅಲ್ಲ. ಕಲ್ಲು ಗಣಿಗಾರಿಕೆ ಹಾಗೂ ಕ್ರಷರ್‌ಗೆ ಪರವಾನಗಿ ತೆಗೆದುಕೊಂಡಿರುತ್ತಾರೆ. ಕೆಲವು ಮಾರ್ಗಸೂಚಿಗಳನ್ನು ಗಾಳಿ ತೂರುತ್ತಾರೆ ಅಷ್ಟೆ,'' ಎನ್ನುತ್ತವೆ ಖನಿಜ ಭವನದ ಮೂಲಗಳು.

ಹಿಂದೆ ಬಳ್ಳಾರಿಯಲ್ಲಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಸೀಮಿತವಾಗಿ ನಡೆದಿದ್ದು ಕಬ್ಬಿಣದ ಅದಿರಿನ ಗಣಿಗಾರಿಕೆ. ಕಡಿಮೆ ಸಮಯದಲ್ಲಿ, ಸೀಮಿತ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆದ ಇದನ್ನು ಮಟ್ಟಹಾಕುವ ದೊಡ್ಡ ಪ್ರಯತ್ನ ನಡೆಯಿತು.

ಆದರೆ ಕಲ್ಲು ಗಣಿಗಾರಿಕೆ ಎಂಬುದು ನಿರಂತರವಾಗಿ, ರಾಜ್ಯಾದ್ಯಂತ ಬಿಡಿಬಿಡಿಯಾಗಿ ನಡೆದುಕೊಂಡು ಬರುತ್ತಿದೆ. ಈ ಕುರಿತು ಗಮನ ಹರಿಸುವುದು ಆಯಾ ಜಿಲ್ಲಾಧಿಕಾರಿಗಳ ನೇರ ಹೊಣೆಗಾರಿಕೆಯಾದರೂ, ನಾನಾ ಇಲಾಖೆಗಳ ಸಿಕ್ಕುಗಳು ಹಾಗೂ ಕಾರ್ಯಕ್ಷಮತೆಯ ಕೊರತೆಯ ಕಾರಣಕ್ಕೆ ಕಲ್ಲು ಗಣಿಗಾರಿಕೆ ಅಕ್ರಮ ಸ್ವರೂಪ ಪಡೆದುಕೊಂಡಿದೆ. ಟಿವಿ 9 ಕರ್ನಾಟಕ ಹೇಳುವಂತೆ, ಬನ್ನೇರುಘಟ್ಟ ಮಾತ್ರ ಅಲ್ಲ, ಅಂತಹ ನೂರಾರು ‘ಮಿನಿ ಬಳ್ಳಾರಿ’ಗಳನ್ನು ಇದು ನಿರ್ಮಿಸಿದೆ.

25 ನಿಮಿಷದಲ್ಲಿ ತನಿಖಾ ವರದಿ:

ಹಿನ್ನೆಲೆ ಹೀಗಿರುವಾಗ, ಟಿವಿ9 ಕರ್ನಾಟಕ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಒಂದು ಕಲ್ಲು ಗಣಿಗಾರಿಕೆಯ ಅಕ್ರಮಗಳನ್ನು ವರದಿ ಮಾಡಲು ತನ್ನ ಸೋದರ ಸಂಸ್ಥೆ ನ್ಯೂಸ್‌9 ಪತ್ರಕರ್ತೆಯನ್ನು ಕಳುಹಿಸಿದೆ. ಲೋಗೋ ಹಿಡಿದುಕೊಂಡು ಸ್ಥಳಕ್ಕೆ ತೆರಳಿದ ನಬೀಲಾ ಜಮಾಲುದ್ದೀನ್‌ಗೆ ಪ್ರಕೃತಿ ಒಡಲು ಬಗೆದ ಬಗೆ ಅರಿವಿಗೆ ಬಂದಿದೆ. ಇದನ್ನೆಲ್ಲಾ ರೆಕಾರ್ಡ್‌ ಮಾಡಿಕೊಂಡು ವಾಪಾಸ್ ಬರುವ ಹೊತ್ತಿಗೆ ಕ್ವಾರಿ ಮಾಲೀಕರ ಕಡೆಯವರು ಬೆದರಿಕೆ ಹಾಕಿದ್ದಾರೆ, ಅವ್ಯಾಚ್ಯವಾಗಿ ನಿಂದಿಸಿದ್ದಾರೆ. ಅವರ ನಿಂದನೆ ಹೇಗಿತ್ತು ಎಂಬುದನ್ನು ನಬೀಲಾ ವಿವರಿಸಿದ್ದು ಹೀಗೆ. (ವಿಡಿಯೋದ 7.10 ಸೆಕೆಂಡ್‌ಗಳಿಗೆ ನೇರವಾಗಿ ಜಂಪ್‌ ಮಾಡಿ)

ತನ್ನ ಪತ್ರಕರ್ತೆಯ ಮೇಲೆ ನಡೆದ ಈ ಹಲ್ಲೆಯನ್ನು ಖಂಡಿಸಿದ ಟಿವಿ 9 ಕರ್ನಾಟಕ, 'ಇದು ಸುಡಾನ್‌ ಅಲ್ಲ, ಅಫಘಾನಿಸ್ತಾವೂ ಅಲ್ಲ. ಬೆಂಗಳೂರಿನ ಹೊರವಲಯದಲ್ಲಿಯೇ ಇಷ್ಟು ದೊಡ್ಡ ಮಟ್ಟದ ಗೂಂಡಾಗಿರಿ ನಡೆಯುತ್ತಿದೆ' ಎಂದು ಆರೋಪಿಸಿತು. ಸುಡಾನ್‌, ಅಫಘಾನಿಸ್ತಾನದಲ್ಲಿ ವರದಿಗಾರರ ಸ್ಥಿತಿಯ ಬಗ್ಗೆ ಏನು ಹೇಳಲು ಹೋಯಿತು ವಾಹಿನಿ? ಅದರ ಬಗ್ಗೆ ಹೆಚ್ಚಿನ ವಿವರಗಳಿಗೆ ಹೋಗದೆ, ಮತ್ತೆ ನಬೀಲಾ ಸ್ಟೋರಿಗೆ ಮರಳಿದ ವಾಹಿನಿಯ ಸ್ಕ್ರಿಪ್ಟ್, ಡ್ರೈವರ್ ತಿಮ್ಮೇಗೌಡರ ಸಾಕ್ಷಿಯನ್ನು ಮುಂದಿಟ್ಟಿತು.

ವಿಶೇಷ ಅಂದರೆ, ಟಿವಿ 9 ಕರ್ನಾಟಕ ಈ ವರದಿಗಾರಿಕೆಯನ್ನು 'ಜನರ ಸೇವೆ' ಎಂದು ಕರೆದುಕೊಂಡಿತು. ದಶಕಗಳ ಕಾಲ ತಾನು ಸಲ್ಲಿಸಿದ ಸೇವೆಯ ಮೇಲೆ ನಡೆದ ದಾಳಿ ಇದು ಎಂದು ಹೇಳಿತು. ದಿಟ್ಟತನದ ಪತ್ರಿಕೋದ್ಯಮಕ್ಕೆ ಎರಗಿ ಬಂದಿರುವ ಸಂಕಷ್ಟವನ್ನು ಮುಖ್ಯಮಂತ್ರಿ, ಗೃಹಸಚಿವರು ನೋಡಿ ಎಂದು ಆಗ್ರಹಿಸಿತು. ಪರಿಣಾಮ, ಜಿಲ್ಲಾಧಿಕಾರಿ ವಿಜಯ ಶಂಕರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗಣಿಗಾರಿಕೆ ಹಾಗೂ ಕ್ರಷರ್ ಸ್ಥಗಿತಕ್ಕೆ ಆದೇಶಿಸಿದ್ದಾರೆ. ಬೆದರಿಕೆ ಹಾಕಿದವರ ವಿರುದ್ಧ ದೂರು ದಾಖಲಾಗಿದೆ. ಪ್ರಕರಣದ ವಿಚಾರಣೆ ಆರಂಭವಾಗಿದೆ.

“ಈ ಭಾಗದಲ್ಲಿ ಕಲ್ಲು ಗಣಿಗಾರಿಕೆ ನಡೆದುಕೊಂಡು ಬರುತ್ತಲೇ ಇದೆ. ಇದೇ ಮೊದಲ ಬಾರಿಗೆ ವರದಿಯೊಂದು ಇಲ್ಲಿಂದ ಹೊರಬಂದಿದೆ. ಎಲ್ಲಾ ಪ್ರಮುಖ ಮಾಧ್ಯಮಗಳಿಗೂ ಬನ್ನೇರುಘಟ್ಟದಲ್ಲಿ ವರದಿಗಾರರು ಇದ್ದರೂ, ಯಾರೂ ವರದಿ ಮಾಡಿರಲಿಲ್ಲ. ನ್ಯೂಸ್ 9 ವರದಿಗಾರ್ತಿ ಒಳ್ಳೆಯ ಕೆಲಸ ಮಾಡಿದ್ದಾರೆ,’’ ಎನ್ನುತ್ತಾರೆ ಕನ್ನಡ ಸುದ್ದಿ ವಾಹಿನಿಯ ಸ್ಥಳೀಯ ವರದಿಗಾರರೊಬ್ಬರು.

ಟಿವಿ9 ನ ಮೊದಲ ಹೆಜ್ಜೆಗೆ ಮೆಚ್ಚುಗೆ ವ್ಯಕ್ತವಾಗಿದೆ. ನಬೀಲಾ ಹಾಗೂ ಟಿವಿ 9 ಕರ್ನಾಟಕ ಇನ್ನೊಂದು ಹೆಜ್ಜೆ ಮುಂದಿಟ್ಟರೆ, ರಾಜ್ಯದ ಕಲ್ಲು ಗಣಿಗಾರಿಕೆಯ ಅಕ್ರಮಗಳ ಬಗ್ಗೆ ನಿರಂತರ ಸುದ್ದಿಯನ್ನು ಪ್ರಸಾರ ಮಾಡಬಹುದು. ಅಭಿಯಾನವೊಂದನ್ನು ರೂಪಿಸಬಹುದು. ಆ ಮೂಲಕ ಅಗತ್ಯವಾಗಿ ಬದಲಾಗಬೇಕಿರುವ ಕೆಲವು ಕಾನೂನನ್ನು ಬದಲಿಸಲು ಜನಾಭಿಪ್ರಾಯ ರೂಪಿಸಬಹುದು. ಅದಕ್ಕಾಗಿ, ಇಷ್ಟೊತ್ತಿಗಾಗಲೇ ಟಿವಿ 9 ಕರ್ನಾಟಕದ ಓಬಿ ವ್ಯಾನು ರೇಸ್‌ಕೋರ್ಸ್‌ ರಸ್ತೆಯಲ್ಲಿರುವ 'ಖನಿಜ ಭವನ'ವನ್ನು ತಲುಪಿರಬೇಕಿತ್ತು, ಅಷ್ಟೆ.