samachara
www.samachara.com
ಸಾಲ ಮನ್ನಾಗೆ ಜನಪ್ರಿಯವಾಗಿರುವ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ ದಂಧೆಗೆ ಇನ್ನೆಷ್ಟು ಹೆಣ ಬೇಕು?
COVER STORY

ಸಾಲ ಮನ್ನಾಗೆ ಜನಪ್ರಿಯವಾಗಿರುವ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ ದಂಧೆಗೆ ಇನ್ನೆಷ್ಟು ಹೆಣ ಬೇಕು?

ಇವತ್ತು ಆರ್ಥಿಕವಾಗಿ ಕೆಳಮಧ್ಯಮ ವರ್ಗದಲ್ಲಿರುವವರ ಸಮಸ್ಯೆ ಇದು. ಸಾಮಾನ್ಯ ಬದುಕಿಗಾಗಿ ಸಾಲ ಮಾಡುತ್ತಾರೆ; ಅಗತ್ಯಕ್ಕಿಂತ ಹೆಚ್ಚಿನ ಬಡ್ಡಿ ಕಟ್ಟುತ್ತಾರೆ. ಒಂದೊಮ್ಮೆ ಸಾಲ ಕಟ್ಟಲಾಗದೆ ಹೋದರೆ ಆತ್ಮಹತ್ಯೆಗೆ ಶರಣಾಗುತ್ತಾರೆ. ಇದಕ್ಕೆ ಹೊಣೆ ಯಾರು?

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಹಿಂದಿನ ಜನಪ್ರಿಯ- ಜನಪರ ‘ಸಿದ್ದ ಸರಕಾರ’ ಲೆಕ್ಕಪತ್ರದಲ್ಲಿ ಮಿಸ್ ಹೊಡೆದಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ. ಇದಕ್ಕಾಗಿ ಸಿಎಜಿ ವರದಿಯನ್ನು ಆಧಾರವಾಗಿ ಮುಂದಿಟ್ಟಿರುವುದರಿಂದ ಸಹಜವಾಗಿಯೇ ಮುಖಪುಟದ ಸುದ್ದಿಯಾಗಿದೆ.

ಇದೇ ವೇಳೆಯಲ್ಲಿ ಬದುಕಿನ ಲೆಕ್ಕಪತ್ರದಲ್ಲಿ ಮಿಸ್ ಹೊಡೆದ ಕಾರಣಕ್ಕೆ ಉತ್ತರ ಕನ್ನಡ ಜಿಲ್ಲೆ ಬನವಾಸಿಯಲ್ಲಿ 21 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ‘ಆರ್ಥಿಕ ಶಿಸ್ತ’ನ್ನು ಕಾಪಾಡಲು ಸಾಧ್ಯವಾಗದ ಸರಕಾರ ತಮ್ಮ ಹೊಣೆಗಾರಿಕೆಯನ್ನು ಖಾಸಗಿ ಮೈಕ್ರೋ ಫೈನಾನ್ಸ್‌ಗಳಿಗೆ ಬಿಟ್ಟು ಕೊಟ್ಟ ಪರಿಣಾಮ ಇದು.

ನಡೆದಿದ್ದೇನು?:

ಪಕ್ಕದ ಆಂಧ್ರದಲ್ಲಿ ಮೈಕ್ರೋ ಫೈನಾನ್ಸ್‌ ದಂಧೆಯ ಸ್ವರೂಪ ತಾಳಿ ಹಲವು ಜನರ ಸಾವಿಗೆ ಕಾರಣವಾಗಿದ್ದು ಈಗ ಇತಿಹಾಸ. ಅಲ್ಲಿ, ಇಂತಹ ಮೀಟರ್ ಬಡ್ಡಿ ದಂಧೆಕೋರರ ಕಾರಣಕ್ಕೆ ಆತ್ಮಹತ್ಯೆಗಳು ಹೆಚ್ಚಾಗುತ್ತಿದ್ದಂತೆ ಕಡಿವಾಣಕ್ಕೆ ಕಾನೂನು ಕೂಡ ಅಸ್ತಿತ್ವಕ್ಕೆ ಬಂತು. ಕರ್ನಾಟಕದಲ್ಲಿ ಅದೇ ಆಂಧ್ರದಿಂದ ವಲಸೆ ಬಂದ ಕಂಪನಿಗಳ ಜತೆಗೆ ಸ್ಥಳೀಯ ದಂಧೆಕೋರ ಮೈಕ್ರೋ ಫೈನಾನ್ಸ್‌ ಕಂಪನಿಗಳು ವಹಿವಾಟು ನಡೆಸುತ್ತಿವೆ. ಇವುಗಳಲ್ಲಿ ಸಾಲ ಮಾಡಿದವರು ಈಗ ಆತ್ಮಹತ್ಯೆಯ ಹಾದಿಯಲ್ಲಿರುವ ಮುನ್ಸೂಚನೆಯೊಂದು ಮೊನ್ನೆ ಮೊನ್ನೆ ಕೊಡಗಿನಲ್ಲಿ ಸಿಕ್ಕಿತ್ತು. ಇದೀಗ ಉತ್ತರ ಕನ್ನಡ ಜಿಲ್ಲೆಯಿಂದ ಅಂತಹದ್ದೇ ಮತ್ತೊಂದು ಘಟನೆ ವರದಿಯಾಗಿದೆ.

ಇಲ್ಲಿನ ಬನವಾಸಿಯಲ್ಲಿ ‘ಸಮೃದ್ಧಿ ಸ್ವಸಹಾಯ ಸಂಘ’ದ ಹೆಸರಿನಲ್ಲಿ ಮಹಿಳೆಯರು ಸಂಘವೊಂದನ್ನು ಕಟ್ಟಿಕೊಂಡಿದ್ದಾರೆ. ಇದರಲ್ಲಿ ಅರ್ಚನಾ ಅಶೋಕ್‌ ದಾಗೀನದಾರ್‌ ಕೂಡ ಓರ್ವ ಸದಸ್ಯೆಯಾಗಿದ್ದರು; ಮಾತ್ರವಲ್ಲದೇ ಸಂಘದ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿದ್ದರು. ಅವರು ಸಂಘದ ಮೂಲಕ ಕೆಲವು ಸಮಯದ ಹಿಂದೆ 15 ಸಾವಿರ ರೂಪಾಯಿಗಳನ್ನು ಸಾಲವಾಗಿ ಪಡೆದುಕೊಂಡಿದ್ದರು. ಇದರಲ್ಲಿ 8 ಸಾವಿರ ರೂಪಾಯಿ ಸಾಲವನ್ನು ಅವರು ಇನ್ನೂ ಕಟ್ಟಬೇಕಾಗಿತ್ತು. ಯಾವುದೋ ಆರ್ಥಿಕ ಸಮಸ್ಯೆಯಿಂದ ಈ ಸಾಲ ಕಟ್ಟುವುದು ಅವರಿಗೆ ಸಾಧ್ಯವಾಗಿರಲಿಲ್ಲ.

ಹೀಗಿರುವಾಗಲೇ ನವೆಂಬರ್‌ 14ರಂದು ಸಂಘದ ಅಧ್ಯಕ್ಷೆ ಎನ್ನಲಾದ ಸುಶೀಲ ಸುಬ್ರಹ್ಮಣ್ಯ ರೆಡ್ಡಿ ಮತ್ತು ಸಂಘದ ಸದಸ್ಯೆ ವಿಜು ಚಂದ್ರಕಾಂತ್‌ ಪವಾಸ್ಕರ್‌ ಅರ್ಚನಾ ಮನೆಗೆ ಸಾಲ ವಸೂಲಿಗೆಂದು ಬಂದಿದ್ದಾರೆ. ಆದರೆ ಆಗ ಮನೆಯಲ್ಲಿ ಅರ್ಚನಾ ಇರಲಿಲ್ಲ. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಅವರ ಪುತ್ರಿ 21 ವರ್ಷದ ನಾಗಶ್ರೀ ಅಶೋಕ್‌ ದಾಗಿನದಾರ್‌ ಜತೆ ಸಂಘದ ಪ್ರತಿನಿಧಿಗಳು ಜಗಳ ಕಾಯ್ದು ಆಕೆಯನ್ನು ಜತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಮೊಬೈಲ್‌ ಪರ್ಸ್‌ ಕಸಿದುಕೊಂಡು ವಿಜು ಮನೆಯಲ್ಲಿ ಆಕೆಯನ್ನು ಕೂಡಿ ಹಾಕಿದ್ದಾರೆ. ಇದರಿಂದ ಬನವಾಸಿಯ ಬಸವೇಶ್ವರ ರೈಸ್‌ ಮಿಲ್‌ನಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದ್ದ ನಾಗಶ್ರೀ ಗಾಬರಿಗೆ ಒಳಗಾಗಿದ್ದಾರೆ. ಕೂಡಿ ಹಾಕಿದ ವೇಳೆ ಮಾನಸಿಕ ಕಿರುಕುಳ ನೀಡಿ, ತಾಯಿಯ ಸಾಲವನ್ನು ವಾಪಸ್‌ ನೀಡುವಂತೆ ನಿಂದಿಸಿದ್ದಾರೆ. ಕೊನೆಗೆ ಅಂದು ಆಕೆಯನ್ನು ಬಿಟ್ಟು ಕಳುಹಿಸಿದ್ದರು.

ನಾಗಶ್ರೀ ಒಂದು ವಾರದ ಬಳಿಕ ಅಂದರೆ ನವೆಂಬರ್‌ 21ರಂದು ಬನವಾಸಿ ಸಂತೆಗೆ ಹೋಗಿದ್ದರು. ಅಲ್ಲಿಗೂ ಬಂದ ಸುಶೀಲ, ನಿನ್ನಮ್ಮ ಸಾಲ ತೆಗೆದುಕೊಂಡು ಓಡಿ ಹೋಗಿದ್ದಾರೆ. ನೀನು ಸಾಲವನ್ನು ಕಟ್ಟು. ಎಲ್ಲಿಯಾದರೂ ಹೋಗಿ ಸಾಯಿ ಮೊದಲಾದ ಮಾತುಗಳನ್ನಾಡಿದ್ದಾರೆ. ಜತೆಗೆ ಕೈ ಹಿಡಿದು ಎಳೆದಾಡಿದ್ದಾರೆ. ಇದರಿಂದ ಮಾನಸಿಕವಾಗಿ ಜರ್ಝರಿತಗೊಂಡ ಆಕೆ ಅಂದೇ ರಾತ್ರಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.

ಈ ಕುರಿತು ಡಿಸೆಂಬರ್‌ 22ರಂದು ಬನವಾಸಿ ಠಾಣೆಯಲ್ಲಿ ಎಫ್‌ಐಆರ್ (ಸಂ. 0102/2018) ದಾಖಲಾಗಿದೆ. ಆದರೆ ದೂರು ದಾಖಲಾಗಿ ಎರಡು ವಾರ ಕಳೆದರೂ ಈ ಬಗ್ಗೆ ಪೊಲೀಸರು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಕನಿಷ್ಠ ಅರ್ಚನಾ ಅವರಿಗೆ ಸಾಲ ನೀಡಿದ ಮೈಕ್ರೋ ಫೈನಾನ್ಸ್‌ ಸಂಸ್ಥೆ ಯಾವುದು ಎಂಬುದರ ಪರಿಶೀಲನೆಗೂ ಪೊಲೀಸರು ಇಳಿದಿಲ್ಲ. ಕೇಳಿದರೆ ‘ತನಿಖೆ ನಡೆಯುತ್ತಿದೆ’ ಎಂಬ ಹಾರಿಕೆಯ ಉತ್ತರ ಬನವಾಸಿ ಪೊಲೀಸ್‌ ಠಾಣೆಯಿಂದ ಬಂದಿದೆ.

ನವೆಂಬರ್‌ 22ರಂದು ನಾಗಶ್ರೀ ಆತ್ಮಹತ್ಯೆಗೆ ಸಂಬಂಧಿಸಿದಂತೆ ಬನವಾಸಿ ಠಾಣೆಯಲ್ಲಿ ದಾಖಲಾದ ಪ್ರಥಮ ವರ್ತಮಾನ ವರದಿ. ದೂರಿನ ಸಾರಾಂಶ ಹೀಗಿದೆ...
ನವೆಂಬರ್‌ 22ರಂದು ನಾಗಶ್ರೀ ಆತ್ಮಹತ್ಯೆಗೆ ಸಂಬಂಧಿಸಿದಂತೆ ಬನವಾಸಿ ಠಾಣೆಯಲ್ಲಿ ದಾಖಲಾದ ಪ್ರಥಮ ವರ್ತಮಾನ ವರದಿ. ದೂರಿನ ಸಾರಾಂಶ ಹೀಗಿದೆ...
/ಸಮಾಚಾರ.

ಇದರ ವಿರುದ್ಧ ಇದೀಗ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಉತ್ತರ ಕನ್ನಡ ಜಿಲ್ಲಾ ಸಂಚಾಲಕ ಮಂಜುನಾಥ ಕುಮಾರ್‌ ಜಿ ಆಗೇರ ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿ ಮತ್ತು ಸಹಕಾರ ಸಂಘಗಳ ನಿಬಂಧಕರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಅವರು ಬಡ ಮುಗ್ಧ ಮಹಿಳೆಯರ ಸಾವಿಗೆ ಕಾರಣವಾಗುತ್ತಿರುವ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು ಮತ್ತು ಇವರಿಗೆ ಸಾಲ ನೀಡುತ್ತಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಜನರ ಮೇಲೆ ದೌರ್ಜನ್ಯ ನಡೆಸುವ ಮೈಕ್ರೋ ಫೈನಾನ್ಸ್‌ನ ಬೆಳವಣಿಗೆಗಳು ಜಿಲ್ಲೆಯ ಮಟ್ಟಿಗೆ ಹೊಸದಲ್ಲ ಎನ್ನುತ್ತಾರೆ ಮಂಜುನಾಥ ಆಗೇರ. 2017ರಿಂದಲೇ ಅವರು ಬಡ್ಡಿ ಹೆಸರಿನಲ್ಲಿ ಜನರ ರಕ್ತ ಹೀರುವ ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ಹೋರಾಟ ನಡೆಸಿಕೊಂಡು ಬಂದವರು. ಮೈಕ್ರೋ ಫೈನಾನ್ಸ್‌ಗಳ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅದೇ ವರ್ಷ ಅವರು ಜಿಲ್ಲಾಧಿಕಾರಿಗೆ ದೂರನ್ನು ನೀಡಿದ್ದರು. ದೂರಿನಲ್ಲಿ ಅವರು ಒಂದು ಸಂಘದ ಸದಸ್ಯರಾಗಿದ್ದವರನ್ನು ಇನ್ನೊಂದು ಸಂಘಕ್ಕೆ ಸೇರಿಸಿಕೊಂಡು ಸಾಲ ನೀಡುತ್ತಿದ್ದಾರೆ. ಈ ಮೂಲಕ ಸಂಘದ ಸದಸ್ಯರನ್ನು ಸಾಲದ ಕೂಪಕ್ಕೆ ತಳ್ಳುತ್ತಿದ್ದಾರೆ. ಸಂಘಗಳು ಕಾನೂನು ಉಲ್ಲಂಘಿಸುತ್ತಿವೆ ಎಂಬುದನ್ನು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಸಹಕಾರಿ ಸಂಘಗಳು ಉಪನಿಬಂಧಕರು ತನಿಖೆಯನ್ನು ನಡೆಸಿ ವರದಿ ಸಲ್ಲಿಸಿದ್ದರು. ಅದರಲ್ಲಿ ಹಲವು ವಿಚಾರಗಳು ಬೆಳಕಿಗೆ ಬಂದಿತ್ತು. ಧಾರವಾಡದ ಗ್ರಾಮೀಣ ಕೂಟ ಫೈನಾನ್ಸ್‌, ಕಿತ್ತೂರಿನ ಚೈತನ್ಯ ಇಂಡಿಯಾ ಫಿನ್ ಕ್ರೆಡಿಟ್‌ ಫೈನಾನ್ಸ್‌ ಲಿಮಿಟೆಡ್‌, ಆಂಧ್ರ ಪ್ರದೇಶ ಮೂಲದ ಎಸ್‌ಕೆಎಸ್‌ ಮೈಕ್ರೋಫೈನಾನ್ಸ್‌ (ಆಂಧ್ರ ಪ್ರದೇಶದಲ್ಲಿ ಮಹಿಳೆಯರ ಸರಣಿ ಸಾವಿಗೆ ಕಾರಣವಾದ ಇತಿಹಾಸ ಇದಕ್ಕಿದೆ), ಹಳಿಯಾಳದ ದಿಶಾ ಫೈನಾನ್ಸ್‌, ಮುತ್ತೂಟ್‌ ಫೈನಾನ್ಸ್‌ ಶೇಕಡಾ 26ರವರೆಗೆ ಜನರಿಂದ ಬಡ್ಡಿ ವಸೂಲಿ ಮಾಡುತ್ತಿರುವುದು ತಿಳಿದು ಬಂದಿತ್ತು. ಆದರೆ ಇವೆಲ್ಲಾ ಕನಿಷ್ಠ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಎನ್‌ಬಿಎಫ್‌ (ಬ್ಯಾಂಕೇತರ ಹಣಕಾಸು ಸಂಸ್ಥೆ) ಗಳೆಂದು ನೋಂದಣಿಯಾಗಿದ್ದವು. ಆದರೆ ಹೀಗೆ ನೋಂದಾವಣೆಯೂ ಆಗದ ಸಂಘದ ಕತೆ ಬೇರೆಯೇ ಇದೆ. ಅದರ ಹೆಸರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ರಿ. (ಎಸ್‌ಕೆಡಿಆರ್‌ಡಿಪಿ).

ಎಸ್‌ಕೆಡಿಆರ್‌ಡಿಪಿ’:

ಮಂಜುನಾಥ ಸ್ವಾಮಿಯ ಹೆಸರು ಮುಂದಿಟ್ಟುಕೊಂಡು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ನಡೆಸುವ ಸ್ವಸಹಾಯ ಸಂಘಗಳಿವು. ತನಿಖೆ ವೇಳೆ ಎಸ್‌ಕೆಡಿಆರ್‌ಡಿಪಿ ಆಗಿನ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನಿಂದ ಶೇಕಡಾ 14.50 ಬಡ್ಡಿ ದರದಲ್ಲಿ ಸಾಲ ಪಡೆದುಕೊಂಡು ಅದನ್ನು ಸಂಘದ ಸದಸ್ಯರಿಗೆ ನೀಡಿ ಶೇಕಡಾ 16.75 ಬಡ್ಡಿ ವಸೂಲಿ ಮಾಡುತ್ತಿರುವುದು ತಿಳಿದು ಬಂದಿತ್ತು. ಈ ಸಂದರ್ಭದಲ್ಲಿ ನಾವು ಬಿಸಿನೆಸ್‌ ಕರೆಸ್ಪಾಂಡೆನ್ಸ್‌ ಮಾದರಿಯನ್ನು ಅನುಸರಿಸುತ್ತಿದ್ದೇವೆ ಎಂದು ಎಸ್‌ಕೆಡಿಆರ್‌ಟಿಪಿ ಪ್ರತಿನಿಧಿಗಳು ಹೇಳಿದ್ದರು. ಆದರೆ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕರು ಸಹಕಾರ ಸಂಘಗಳ ಉಪ ನಿಬಂಧಕರಿಗೆ ಪತ್ರವನ್ನು ಬರೆದು ಇದಕ್ಕೆ ವ್ಯತಿರಿಕ್ತ ಉತ್ತರವನ್ನು ನೀಡಿದ್ದರು. ಬ್ಯಾಂಕ್‌ ಮತ್ತು ಸಂಘದ ನಡುವಿನ ‘ಒಪ್ಪಂದದ ಪ್ರಕಾರ ಎಸ್‌ಕೆಡಿಆರ್‌ಡಿಪಿ ಸ್ವಸಹಾಯ ಸಂಘಗಳಿಂದ ನೇರವಾಗಿ ಯಾವುದೇ ಬಡ್ಡಿಯಾಗಲಿ, ಉಳಿತಾಯದ ಹಣವಾಗಲಿ ತೆಗೆದುಕೊಳ್ಳುವಂತಿಲ್ಲ’ ಎಂದು ಲಿಖಿತವಾಗಿ ತಿಳಿಸಿದ್ದರು. ಈ ಮಾಹಿತಿಯ ಮೂಲಕ ಒಪ್ಪಂದವನ್ನು ಉಲ್ಲಂಘಿಸಿ ಎಸ್‌ಕೆಡಿಆರ್‌ಡಿಪಿ ಹಣ ವಸೂಲಿಗೆ ಇಳಿದಿದ್ದು ಬೆಳಕಿಗೆ ಬಂದಿತ್ತು.

2017ರ ಮಾರ್ಚ್‌ 4ರಂದು ಸಹಕಾರ ಸಂಘಗಳ ಉಪನಿಬಂಧಕರು ಜಿಲ್ಲಾಧಿಕಾರಿಗೆ ಸಲ್ಲಿಸಿದ ವರದಿ.
2017ರ ಮಾರ್ಚ್‌ 4ರಂದು ಸಹಕಾರ ಸಂಘಗಳ ಉಪನಿಬಂಧಕರು ಜಿಲ್ಲಾಧಿಕಾರಿಗೆ ಸಲ್ಲಿಸಿದ ವರದಿ.
/ಸಮಾಚಾರ.

ಇದೇ ಸಂದರ್ಭದಲ್ಲಿ ದೌರ್ಜನ್ಯದಿಂದ ಸಾಲ ವಸೂಲಿ ಮಾಡುತ್ತಾರೆ ಎಂಬ ಬಗ್ಗೆ ನೂರಾರು ದೂರುಗಳು ಬಂದಿರುವುದಾಗಿಯೂ ಆ ದೂರುಗಳನ್ನು ಆರ್‌ಬಿಐ ಬೆಂಗಳೂರು ಕಚೇರಿಗೆ ಕಳುಹಿಸಿಕೊಡಲಾಗಿದೆ ಎಂದು ಸಹಾಕಾರಿ ಸಂಘಗಳ ಉಪನಿಬಂಧಕರು ತಮ್ಮ ವರದಿಯಲ್ಲಿ ಹೇಳಿದ್ದರು. ಜತೆಗೆ ಮೈಕ್ರೊಫೈನಾನ್ಸ್‌ಗಳಿಗೆ ಅದರಲ್ಲೂ ಪ್ರಮುಖವಾಗಿ ಎಸ್‌ಕೆಡಿಆರ್‌ಡಿಪಿಗೆ ಸಾಲ ವಸೂಲಿಯಲ್ಲಿ ದೌರ್ಜನ್ಯ ಮತ್ತು ಮಿತಿಗಿಂತ ಹೆಚ್ಚು ಬಡ್ಡಿ ವಸೂಲಿ ಮಾಡುವ ಬಗ್ಗೆ ದೂರುಗಳು ಬಂದಿವೆ ಎಂಬುದನ್ನು ಗಮನಕ್ಕೆ ತಂದಿದ್ದರು. ಮತ್ತು ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆಯನ್ನೂ ನೀಡಿದ್ದರು. ಇದನ್ನು ಪಾಲಿಸದಿದ್ದಲ್ಲಿ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಸೂಚನೆ ನೀಡಿದ್ದರು.

ಆದರೆ ಮುಂದೆ ದೂರುಗಳು ಬಂದ ಬಗ್ಗೆ ಹಾಗೂ ಈ ಬಗ್ಗೆ ಕಾನೂನು ಕ್ರಮ ತೆಗೆದಿಕೊಂಡ ಬಗ್ಗೆ ಯಾವುದೇ ಮಾಹಿತಿಗಳಿಲ್ಲ.

ಈ ಎಲ್ಲಾ ಬೆಳವಣಿಗೆಗಳು ನಡೆದು ವರ್ಷ ಕಳೆದಿದೆ. ಆದರೆ “ಇಂದಿಗೂ ಧರ್ಮಸ್ಥಳದ ಸ್ವಸಹಾಯ ಸಂಘಗಳಿಗೆ ಬ್ಯಾಂಕ್‌ ಖಾತೆ ಇಲ್ಲ. ಮತ್ತು ಹೆಚ್ಚಿನ ಬಡ್ಡಿ ಹಣದ ವಸೂಲಿ ಮುಂದುವರಿದಿದ್ದು, ಈ ಹಣ ಮತ್ತು ಉಳಿತಾಯ ಹಣ ಅವರ ಖಾತೆಯಲ್ಲೂ ಜಮೆಯಾಗಿಲ್ಲ. ಈ ಲೋಪದಿಂದಾಗಿ ಬ್ಯಾಂಕ್‌ಗಳು ನೀಡಿದ ಹಣ ಸ್ವಸಹಾಯ ಸಂಘಗಳಿಗೆ ಮಾತ್ರ ಉಪಯೋಗವಾಗಿದೆ ಎಂಬುದಕ್ಕೆ ಖಾತರಿಯಿಲ್ಲ. ಇದರಲ್ಲಿ ಮೇಲ್ನೋಟಕ್ಕೆ ಬ್ಯಾಂಕ್‌ಗಳೂ ಶಾಮೀಲಾಗಿವೆ,” ಎನ್ನುತ್ತಾರೆ ಮಂಜುನಾಥ ಅಗೇರ. ಈ ಬಗ್ಗೆ ಅವರು ಜಿಲ್ಲಾಧಿಕಾರಿಗೆ ದೂರನ್ನೂ ನೀಡಿದ್ದು, ಪರಿಣಾಮ ಬೀರದಿದ್ದಲ್ಲಿ ಹೈಕೋರ್ಟ್‌ ಮೊರೆ ಹೋಗುತ್ತೇನೆ ಎಂಬುದನ್ನೂ ಡಿಸಿ ಗಮನಕ್ಕೆ ತಂದಿದ್ದಾರೆ. ಸರಕಾರದ ಚುಕ್ಕಾಣಿ ಹಿಡಿದವರ ಗಮನಕ್ಕಿಷ್ಟು...

Join Smachara Official. CLICK HERE

Also read: ಧರ್ಮಸ್ಥಳದ ‘ಮೀಟರ್ ಬಡ್ಡಿ ಬೆಟ್ಟ’ ಮತ್ತು 30 ಸಾವಿರ ಕೋಟಿ ವ್ಯವಹಾರದ ಒಡಲಾಳದ ಕತೆ!