samachara
www.samachara.com
‘ಆಲ್‌ ಇಸ್ ನಾಟ್ ವೆಲ್’: ಸಿಎನ್‌ಎನ್‌ ಕಚೇರಿ ತಾತ್ಕಾಲಿಕ ಸ್ಥಗಿತಕ್ಕೆ ಹುಸಿ ಬಾಂಬ್ ನೆಪ
COVER STORY

‘ಆಲ್‌ ಇಸ್ ನಾಟ್ ವೆಲ್’: ಸಿಎನ್‌ಎನ್‌ ಕಚೇರಿ ತಾತ್ಕಾಲಿಕ ಸ್ಥಗಿತಕ್ಕೆ ಹುಸಿ ಬಾಂಬ್ ನೆಪ

ಮಾಧ್ಯಮ ಸಂಸ್ಥೆಯೊಂದು; ಅಮೆರಿಕಾದಂಥ ರಾಷ್ಟ್ರದಲ್ಲಿ ಬಾಂಬ್‌ ಬೆದರಿಕೆಗೆ ಗುರಿಯಾಗುತ್ತಿರುವ ಈ ಬೆಳವಣಿಗೆ ಮಾರುಕಟ್ಟೆಯಲ್ಲಿ ಹೊಚ್ಚ ಹೊಸದು. ಥ್ಯಾಂಕ್ಸ್‌ ಟು ವಿಲಕ್ಷಣ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌!

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಆಳುವ ಸರಕಾರವೊಂದರ ವಿರೋಧಿಗಳು ಯಾವ ಮಟ್ಟದ ಬೆದರಿಕೆಯನ್ನು ಎದುರಿಸಬಹುದು ಎಂಬುದಕ್ಕೆ ‘ಸಿಎನ್‌ಎನ್‌’ ಮಾಧ್ಯಮ ಸಂಸ್ಥೆ ಹೊಸ ಉದಾಹರಣೆಯಾಗಿ ಕಾಣಿಸುತ್ತಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಬಹಿರಂಗ ಸಮರ ಸಾರಿರುವ ಕೇಬಲ್‌ ನ್ಯೂಸ್‌ ನೆಟ್ವರ್ಕ್‌ (ಸಿಎನ್‌ಎನ್‌) ಇದೀಗ ಬಾಂಬ್‌ ಬೆದರಿಕೆಯನ್ನೂ ಎದುರಿಸಬೇಕಾಗಿ ಬಂದಿದೆ.

ಆಗಿದ್ದಿಷ್ಟೇ; ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ (ಅಮೆರಿಕಾದ ಕಾಲಮಾನ) ಸಿಎನ್‌ಎನ್‌ನ ನ್ಯೂಯಾರ್ಕ್‌ ಕಚೇರಿ ‘ಟೈಮ್‌ ವಾರ್ನರ್‌ ಸೆಂಟರ್‌’ಗೆ ಬಾಂಬ್‌ ಸ್ಫೋಟದ ಬೆದರಿಕೆಯ ಕರೆ ಬಂತು. ಕರೆ ಮಾಡಿದಾತ ಕಟ್ಟಡದಲ್ಲಿ ಐದು ಡಿವೈಸ್‌ಗಳಿರುವುದಾಗಿ ಹೇಳಿದ್ದ. ಫೋನ್‌ ಮೂಲಕ ಬಾಂಬ್‌ ಸ್ಫೋಟದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಕಚೇರಿಯ ಸೈರನ್‌ಗಳು ಮೊಳಗಿದವು. ಕ್ಷಣ ಮಾತ್ರದಲ್ಲಿ ಎಲ್ಲರೂ ಕಚೇರಿ ಬಿಟ್ಟು ತೆರಳಿದರು. 10.30ಕ್ಕೆ ಸ್ಥಳಕ್ಕೆ ಬಂದ ಪೊಲೀಸರು ಬಾಂಬ್‌ಗಾಗಿ ಹುಡುಕಾಟ ನಡೆಸಿದರು. ರಸ್ತೆಗಳನ್ನು ಬಂದ್‌ ಮಾಡಿ, ಬಾಂಬ್‌ ನಿಷ್ಕ್ರಿಯ ದಳವನ್ನು ಕಟ್ಟಡದ ಹೊರಗೆ ಸಿದ್ಧವಾಗಿ ನಿಲ್ಲಿಸಿ ಪರಿಶೀಲನೆ ನಡೆಸಲಾಯಿತು. ಈ ಪ್ರಕ್ರಿಯೆ ಸುಮಾರು 90 ನಿಮಿಷಗಳ ಕಾಲ ನಡೆಯಿತು.

ಆದರೆ, ಹುಡಕಾಟದ ನಂತರ ಸಿಕ್ಕಿದ್ದು ಏನೂ ಇಲ್ಲ. ಅಷ್ಟಕ್ಕೂ ಇದೊಂದು ಹುಸಿ ಬಾಂಬ್‌ ಬೆದರಿಕೆ ಕರೆಯಾಗಿತ್ತು ಅಷ್ಟೇ. ಕೆಲವೇ ಕ್ಷಣಗಳಲ್ಲಿ “ನ್ಯೂಯಾರ್ಕ್‌ ಪೊಲೀಸ್‌ ಇಲಾಖೆ ಎಲ್ಲವೂ ಸರಿ ಇದೆ ಎಂಬ ಸಂದೇಶವನ್ನು ನೀಡಿದ್ದು ಎಲ್ಲಾ ಸಿಬ್ಬಂದಿಗಳು ಕಟ್ಟಡದ ಒಳಗೆ ತೆರಳಲು ಅವಕಾಶ ನೀಡಿದ್ದಾರೆ,” ಎಂದು ಸಿಎನ್‌ಎನ್‌ ಅಂತರಾಷ್ಟ್ರೀಯ ಅಧ್ಯಕ್ಷ ಜೆಫ್‌ ಝುಕರ್‌ ಘೋಷಿಸಿದರು.

ಕಾರ್ಯಕ್ರಮ ಪ್ರಸಾರಕ್ಕೆ ತಡೆ:

ಆದರೆ ಹೇಳಿ ಕೇಳಿ ಬಾಂಬ್‌ ಬೆದರಿಕೆಗೆ ಗುರಿಯಾಗಿದ್ದು ಸಿಎನ್‌ಎನ್‌ ನ್ಯೂಯಾರ್ಕ್‌ ಕಚೇರಿ. ಬಾಂಬ್‌ ಬೆದರಿಕೆ ಬಂದಾಗ ಡಾನ್‌ ಲೆಮನ್‌ ‘ಸಿಎನ್‌ಎನ್‌ ಟುನೈಟ್‌’ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಬೆದರಿಕೆ ಬಂದು ಸೈರನ್‌ ಮೊಳಗಿದಾಗ ಕಾರ್ಯಕ್ರಮದ ಮಧ್ಯದಲ್ಲಿ ಜಾಹೀರಾತು ಪ್ರಸಾರವಾಗುತ್ತಿತ್ತು. ಹೀಗಾಗಿ ಕಚೇರಿ ಬಿಟ್ಟು ತೆರಳುವಾಗ ಸಿಬ್ಬಂದಿ ರೆಕಾರ್ಡಿಂಗ್‌ ಕಾರ್ಯಕ್ರಮವನ್ನು ಲೈವ್‌ ನೀಡಿ ಹೊರ ಬಂದರು. ಅರ್ಧಗಂಟೆ ಈ ಕಾರ್ಯಕ್ರಮ ಪ್ರಸಾರವಾಯಿತು. ಇದಾದ ಬಳಿಕ ಬೇರೆ ಕಾರ್ಯಕ್ರಮವನ್ನು ಪ್ರಸಾರ ಮಾಡಬೇಕಾದ ಅನಿವಾರ್ಯತೆ ವಾಹಿನಿಗೆ ಸೃಷ್ಟಿಯಾಯಿತು. ಆದರೆ ಕಚೇರಿ ಒಳಗೆ ತೆರಳುವಂತಿಲ್ಲ. ಅದರಲ್ಲೂ ಸಿಎನ್‌ಎನ್‌ ಅಂತಾರಾಷ್ಟ್ರೀಯ ವಾಹಿನಿ ಬೇರೆ. ನಿರೂಪಕ ಲೆಮನ್‌ ರಸ್ತೆಯಲ್ಲೇ ನಿಂತುಕೊಂಡು ಸ್ಕೈಪ್‌ ಮೂಲಕ ತಮ್ಮ ಕಾರ್ಯಕ್ರಮ ನಡೆಸಿಕೊಟ್ಟರು. ವಾಹಿನಿ ಪ್ರಸಾರ ತಂತ್ರಜ್ಞಾನದ ಸಹಾಯದಿಂದ ಸುಸೂತ್ರವಾಗಿ ಮುಂದುವರಿಯಿತು.

ಇಂತಹ ಘಟನೆಗಳು ವಿರಳಾತಿವಿರಳ. ಅದರಲ್ಲೂ ಸುದ್ದಿ ವಾಹಿನಿಗಳು ಕಚೇರಿ ಕಳೆದುಕೊಂಡು ಬೀದಿಗೆ ಬಿದ್ದು ನೇರ ಪ್ರಸಾರ ನೀಡಿದ ಉದಾಹರಣೆಗಳು ಕೆಲವೇ ಕೆಲವು ಸಿಗುತ್ತವೆ. ಚೆನ್ನೈ ಪ್ರವಾಹದ ಸಂದರ್ಭದಲ್ಲಿ ‘ದಿ ಹಿಂದೂ’ ಪತ್ರಿಕೆ ನೂರಾರು ವರ್ಷಗಳ ನಂತರ ಮೊದಲ ಬಾರಿಗೆ ಸ್ಥಳಗಿತಗೊಂಡಿತ್ತು. ಇತ್ತೀಚೆಗೆ ಕೊಡಗು ಪ್ರವಾಹದ ಸಂದರ್ಭದಲ್ಲಿ ಇಲ್ಲಿನ ಸ್ಥಳೀಯ ಪತ್ರಿಕೆ ‘ಶಕ್ತಿ’ಯ ಕಚೇರಿಯೇ ಮುಳುಗಿ ಕೆಲವು ದಿನ ಪತ್ರಿಕೆಯನ್ನು ನಿಲ್ಲಿಸಬೇಕಾಯಿತು. ನೇಪಾಳದ ಭೂಕಂಪದ ಸಮಯದಲ್ಲಿ ಸ್ಥಳೀಯ ವಾಹಿನಿ ಬೀದಿಯಲ್ಲೇ ನಿಂತು ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಿಕೊಂಡಿತ್ತು. ಇದೀಗ ಸಿಎನ್‌ಎನ್‌ ಅಂತಹ ಸವಾಲನ್ನು ಎದುರಿಸಿದೆ.

ಹಾಗಂಥ ಸಿಎನ್‌ಎನ್‌ಗೆ ಬಾಂಬ್‌ ಬೆದರಿಕೆಗಳು ಇದು ಹೊಸದೇನೂ ಅಲ್ಲ. ಇದೇ ರೀತಿ ಅಕ್ಟೋಬರ್‌ನಲ್ಲೊಮ್ಮೆ ನ್ಯೂಯಾರ್ಕ್‌ ಕಚೇರಿಯನ್ನು ಖಾಲಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಪ್ಯಾಕ್‌ ಮಾಡಿದ ಸ್ಫೋಟಕ ವಸ್ತುವೊಂದು ಕಚೇರಿಯಲ್ಲಿ ಪತ್ತೆಯಾಗಿತ್ತು. ಇದನ್ನು ನ್ಯೂಯಾರ್ಕ್ ಮೇಯರ್‌ ಭಯೋತ್ಪಾದನಾ ಚಟುವಟಿಕೆ ಎಂದು ಕರೆದಿದ್ದರು.

ಇದೇ ಸಮಯದಲ್ಲಿ ಈ ರೀತಿಯ ಸುಧಾರಿತ ಸ್ಫೋಟಕಗಳನ್ನು ಪ್ರಮುಖ ಡೆಮಾಕ್ರಾಟಿಕ್‌ ಪಕ್ಷದ ರಾಜಕಾರಣಿಗಳು, ಅವರಿಗೆ ದೇಣಿಗೆ ನೀಡುವ ಗಣ್ಯರಿಗೆ ಕಳುಹಿಸಿ ಕೊಡಲಾಗಿತ್ತು. ಅದೃಷ್ಟಕ್ಕೆ ಇದರಲ್ಲಿ ಯಾವುದೂ ಸ್ಫೋಟಗೊಂಡಿರಲಿಲ್ಲ. ಮತ್ತು ಯಾರಿಗೂ ಗಾಯವೂ ಆಗಿರಲಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸೀಸರ್‌ ಸಯೋಕ್‌ ಎಂಬ 56 ವರ್ಷದ ವ್ಯಕ್ತಿ ಬಂಧಿತನಾಗಿದ್ದು ಸದ್ಯ ಅಮೆರಿಕಾ ಜೈಲಿನಲ್ಲಿದ್ದಾನೆ. ಈತನ ವಿಚಾರಣೆ ನಡೆಯುತ್ತಿದ್ದು ಅಪರಾಧ ಸಾಬೀತಾದರೆ 48 ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಈತ ಜೈಲಿನಲ್ಲಿರುವಾಗಲೇ ಸಿಎನ್‌ಎನ್‌ ಮಗದೊಂದು ಹುಸಿ ಬಾಂಬ್‌ ಕರೆಗೆ ಸಾಕ್ಷಿಯಾಗಿದೆ.

ಅಮೆರಿಕಾದಲ್ಲಿ ಪತ್ರಕರ್ತರು ದಿನ ನಿತ್ಯದ ಚಟುವಟಿಕೆಯಲ್ಲಿ ಹಲವು ರೀತಿಯ ಬೆದರಿಕೆಗಳಿಗೆ ಗುರಿಯಾಗುತ್ತಿರುತ್ತಾರೆ. ಕೆಲವರು ಜೀವ ತೆತ್ತಿದ್ದೂ ಇದೆ. ಆದರೆ ಮಾಧ್ಯಮ ಸಂಸ್ಥೆಯೊಂದು ಅದೂ ಅಮೆರಿಕಾದಂಥ ರಾಷ್ಟ್ರದಲ್ಲಿ ಬಾಂಬ್‌ ಬೆದರಿಕೆಗೆ ಗುರಿಯಾಗುತ್ತಿರುವ ಈ ಬೆಳವಣಿಗೆ ಮಾತ್ರ ಹೊಚ್ಚ ಹೊಸದು. ಥ್ಯಾಂಕ್ಸ್‌ ಟು ವಿಲಕ್ಷಣ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌.