‘ಪಾಸಿಟಿವ್ ನ್ಯೂಸ್’: ಕೊಡಗು ಸಂತ್ರಸ್ಥರಿಗೆ ಮನೆ; ದೇಶದಲ್ಲಿಯೇ ಮೊದಲ ಪ್ರಯೋಗ
COVER STORY

‘ಪಾಸಿಟಿವ್ ನ್ಯೂಸ್’: ಕೊಡಗು ಸಂತ್ರಸ್ಥರಿಗೆ ಮನೆ; ದೇಶದಲ್ಲಿಯೇ ಮೊದಲ ಪ್ರಯೋಗ

‘ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ’ ಕೊಡಗಿನ ಸಂತ್ರಸ್ಥರಿಗೆ ತಲಾ 9.85 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಎರಡು ಬೆಡ್ ರೂಂಗಳ ಮನೆ ನಿರ್ಮಾಣ ಮಾಡಿಕೊಡಲಿದೆ.

ಕೊಡಗು ಜಿಲ್ಲೆಯ ಭೂ ಕುಸಿತ ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸುವಲ್ಲಿ ತೀರಾ ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಕೊನೆಗೂ ರಾಜ್ಯ ಸರ್ಕಾರ ಮನೆಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದೆ ಮತ್ತು ಅದು ಭರವಸೆಯ ವಾತಾವರಣವನ್ನು ಜಿಲ್ಲೆಯಲ್ಲಿ ಮೂಡಿಸಿದೆ.

ಸರ್ಕಾರದ ಆಹ್ವಾನದ ಮೇರೆಗೆ ಜಿಲ್ಲೆಯ ಭೂ ಕುಸಿತ ಸಂತ್ರಸ್ಥರಿಗಾಗಿ ವಿವಿಧ ಕಂಪೆನಿಗಳು 6 ಮನೆಗಳ ಮಾದರಿಗಳನ್ನು ರಾಜ್ಯ ಸರ್ಕಾರದ ಅನುಮೋದನೆಗೆ ಕಳಿಸಿಕೊಟ್ಟಿದ್ದವು. ಇದರಲ್ಲಿ ರಾಜ್ಯ ಸರ್ಕಾರದ ಅಧೀನದ ‘ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ’ ತಯಾರಿಸಿಕೊಟ್ಟ ಮನೆಯ ಮಾದರಿ ಆಯ್ಕೆಯಾಗಿದೆ. ವಿನೂತನ ತಂತ್ರಜ್ಞಾನ ಬಳಸಿ ನಿರ್ಮಿಸಲಾಗುವ ಈ ಮನೆಯ ಮಾದರಿ ಮೆಚ್ಚುಗೆಗೆ ಪಾತ್ರವಾಗಿದ್ದು, ಖಾಸಗಿ ಕಂಪೆನಿಗಳ ಪೈಪೋಟಿಯ ನಡುವೆಯೂ ಸರ್ಕಾರಿ ಸ್ವಾಮ್ಯ ಸಂಸ್ಥೆ ನಿರ್ಮಾಣದ ಮಾದರಿ ಆಯ್ಕೆಯಾಗಿದೆ.

ಇಂದು ಸಂತ್ರಸ್ಥರ ಮನೆಗಳ ನಿರ್ಮಾಣಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಿದ್ದು, ಜಿಲ್ಲೆಯ ವಿವಿಧೆಡೆ 840 ಸಂತ್ರಸ್ಥರಿಗಾಗಿ ಈ ಮನೆಗಳು ನಿರ್ಮಾಣಗೊಳ್ಳಲಿವೆ.

ವಿಶೇಷ ಮನೆಗಳು

ರಾಜೀವ್ ಗಾಂಧಿ ವಸತಿ ನಿಗಮ ನಿರ್ಮಿಸಲಿರುವ ಈ ಮನೆಗಳ ವಿಶೇಷತೆ ಏನೆಂದರೆ, ಇವುಗಳ ಮೇಲೆ ಅಪಾರ ಪ್ರಮಾಣದ ಮಣ್ಣು ಬಿದ್ದರೂ ಇವು ಕುಸಿಯುವುದಿಲ್ಲ. ಇತರ ಸಾಂಪ್ರದಾಯಿಕ ತಾರಸಿ ಮನೆಗಳ ನಿರ್ಮಾಣದಲ್ಲಿ ಪಿಲ್ಲರ್‌ಗಳನ್ನು ಬಳಸಿದರೆ ಇದರಲ್ಲಿ ಪಿಲ್ಲರ್ ಇರುವುದಿಲ್ಲ. ಬದಲಿಗೆ ಆರ್‌ಸಿಸಿ ಛಾವಣಿಗೆ ಬಳಸಲಾಗುವ ಕಬ್ಬಿಣದ ಕಂಬಿಗಳನ್ನು ಗೋಡೆಯಿಂದ ನೆಲದವರೆಗೂ ಇಳಿಯಬಿಡುತ್ತಾರೆ. ಅಂದರೆ 40 ಅಡಿ ಕಬ್ಬಿಣದ ರಾಡನ್ನು ತುಂಡರಿಸದೇ ಹಾಗೆಯೇ ಬಾಗಿಸಿ, ನೆಲದಿಂದ ಆರ್‌ಸಿಸಿವರೆಗೆ ಬಳಸಲಾಗಿರುತ್ತದೆ. ಇದರಿಂದ ಮನೆ ಹೆಚ್ಚು ಗಟ್ಟಿ ಮುಟ್ಟಾಗಿ ಇರಲಿದ್ದು ಯಾವುದೇ ಭಾಗದಿಂದ ಒತ್ತಡ ಬಿದ್ದರೂ ಅದನ್ನು ತಾಳಿಕೊಳ್ಳುವ ಸಾಮರ್ಥ್ಯ ಮನೆಗೆ ಇರಲಿದೆ.

ರಾಜೀವ್ ಗಾಂಧಿ ವಸತಿ ನಿಗಮ ಈಗಾಗಲೇ ಈ ತಂತ್ರಜ್ಞಾನದಲ್ಲಿ ಕನಕಪುರ ಹಾಗೂ ಇತರೆಡೆಗಳಲ್ಲಿ ಸಿಂಗಲ್ ಬೆಡ್ ರೂಮಿನ ಮನೆಗಳನ್ನು ನಿರ್ಮಿಸಿದ್ದು, ಇದೀಗ ಕೊಡಗಿನ ಸಂತ್ರಸ್ಥರಿಗೆ ತಲಾ 9.85 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಎರಡು ಬೆಡ್ ರೂಂಗಳ ಮನೆ ನಿರ್ಮಾಣ ಮಾಡಲಾಗುತ್ತಿದೆ. ‘ಇದು ದೇಶದಲ್ಲೇ ಮೊದಲ ಪ್ರಯತ್ನ ಎನ್ನುತ್ತಾರೆ’ ಪುರ್ವಸತಿ ವಿಭಾಗದ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಕೆ. ಜಗದೀಶ್.

‘ಪಾಸಿಟಿವ್ ನ್ಯೂಸ್’: ಕೊಡಗು ಸಂತ್ರಸ್ಥರಿಗೆ ಮನೆ; ದೇಶದಲ್ಲಿಯೇ ಮೊದಲ ಪ್ರಯೋಗ

ಇಲ್ಲಿಯವರೆಗೆ ದೇಶದಲ್ಲಿ ಸಂತ್ರಸ್ಥರಿಗೆ ಸಿಂಗಲ್ ಬೆಡ್ ರೂಮಿನ ಮನೆಗಳನ್ನು ಮಾತ್ರ ನಿರ್ಮಿಸಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಎರಡು ಬೆಡ್ ರೂಂಗಳ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಅಷ್ಟೇ ಅಲ್ಲ ಈ ಮನೆಗಳ ಮೇಲ್ಛಾವಣಿಯನ್ನು ಸಮತಟ್ಟಾಗಿ ನಿರ್ಮಿಸಲಾಗುತ್ತಿದ್ದು, ಅಗತ್ಯ ಬಿದ್ದರೆ ಫಲಾನುಭವಿಗಳು ಮುಂದಿನ ದಿನಗಳಲ್ಲಿ ಇದರ ಮೇಲೆ ಇನ್ನೊಂದು ಅಂತಸ್ತು ನಿರ್ಮಿಸಿಕೊಳ್ಳಬಹುದಾಗಿದೆ.

ಮನೆ ನಿರ್ಮಾಣದ ತಂತ್ರಜ್ಞಾನದ ಕುರಿತು ಮಾಹಿತಿ ನೀಡಿದ ಯೋಜನಾ ನಿರ್ದೇಶಕ ಹೆಚ್. ಶ್ರೀನಿವಾಸ್, “ಇಡೀ ಮನೆಯ ಕಾಂಕ್ರೀಟ್‌ ಗೋಡೆ 5 ರಿಂದ 6 ಇಂಚಿನಷ್ಟು ದಪ್ಪ ಇರಲಿದೆ. ಇದಕ್ಕೆ ಯಾವುದೇ ಕಲ್ಲು ಮತ್ತು ಇಟ್ಟಿಗೆಯನ್ನು ಬಳಸುತ್ತಿಲ್ಲ. ಇಡೀ ಮನೆಯೇ ಕಾಂಕ್ರೀಟಿನ ಕೋಶದಂತಿದ್ದು, ಮೊನೊಲಿಥಿಕಲ್‌ನಂತೆ ಸಂಪೂರ್ಣ ಭೂಕಂಪ ನಿರೋಧಕವಾಗಿದೆ. ಮನೆಗಳ ನಿರ್ಮಾಣಕ್ಕೆ ಸಂಪೂರ್ಣವಾಗಿ ಇತರ ಕಾಂಕ್ರೀಟ್ ನಿರ್ಮಾಣಕ್ಕೆ ಬಳಸುವಂತೆಯೇ ಕಬ್ಬಿಣದ ಮೌಲ್ಡ್‌ಗಳನ್ನು ಬಳಸಲಾಗುವುದು. ಈ ಮೌಲ್ಡ್‌ಗಳನ್ನು ಬಿಚ್ಚಿದ ಕೂಡಲೇ ಮನೆ ನಿರ್ಮಾಣ ಮುಗಿಯುತ್ತದೆ. ಈ ಮನೆಯ ನಿರ್ಮಾಣಕ್ಕೆ ಕೇವಲ 20 ದಿನ ತಗುಲಲಿದೆ,” ಎಂದಿದ್ದಾರೆ.

ಮನೆಯ ಕಾಂಕ್ರೀಟ್ ಗೋಡೆಗಳ ನಿರ್ಮಾಣದ ಸಂದರ್ಭದಲ್ಲೇ ವಿದ್ಯುತ್ ಸಂಪರ್ಕವನ್ನು ಹಾಗೂ ನೀರಿನ ಪೈಪ್‌ಗಳನ್ನೂ ಅಳವಡಿಸುವುದರಿಂದ ವೆಚ್ಚವೂ ಕಡಿಮೆಯಾಗಲಿದ್ದು, ಶೀಘ್ರವಾಗಿ ಮನೆ ನಿರ್ಮಾಣಗೊಳ್ಳಲಿದೆ ಎಂದು ಅವರು ವಿವರ ನೀಡಿದ್ದಾರೆ. ಮನೆಯ ಕಿಟಕಿಗಳಿಗೆ ಅಲ್ಯುಮೀನಿಯಂ ಮತ್ತು ಬಾಗಿಲುಗಳಿಗೆ ಪರಿಸರ ಸ್ನೇಹಿ ಮರ ಬಳಸಲಾಗುವುದು ಎಂದು ವಿವರಿಸಿದ್ದಾರೆ.

ಈ ಮಾದರಿಯ ಭೂಕಂಪ ನಿರೋಧಕ ಮನೆಗಳನ್ನು ವಿಶ್ವದಾದ್ಯಂತ ನಿರ್ಮಿಸಲಾಗುತ್ತಿದ್ದು, ರಾಜೀವ್ ವಸತಿ ನಿಗಮ 2012 ರಿಂದ ರಾಜ್ಯದಲ್ಲಿ ಸುಮಾರು 3,500 ಮನೆಗಳನ್ನು ನಿರ್ಮಿಸಿದೆ. ಆಂಧ್ರ ಪ್ರದೇಶದ ವಸತಿ ನಿಗಮವು ಅಲ್ಲಿ ಇಂತಹ 4 ಲಕ್ಷ ಮನೆಗಳನ್ನು ನಿರ್ಮಿಸಿದೆ. ಇದೀಗ ಕೊಡಗು ಸಂತ್ರಸ್ತರಿಗಾಗಿ ಇದೇ ಮಾದರಿಯ ಮನೆಗಳು ನಿರ್ಮಾಣಗೊಳ್ಳಲಿವೆ.

ಸರ್ಕಾರ ಈ ಮನೆಗಳನ್ನು ನಿಗದಿತ ಸಮಯದಲ್ಲಿ ಸಂತ್ರಸ್ಥರಿಗೆ ಹಸ್ತಾಂತರಿಸಿದರೆ ಅವರ ಮೊಗದಲ್ಲಿ ಮಂದಹಾಸ ಮೂಡಲಿದೆ.