ಕೆರೆಗೆ ಪೈಪ್‌ ಇಡುವವರು ಜನರೇ ಇರಬಹುದು; ಮೊದಲು ‘ನಲ್ಲಿಕಟ್ಟೆ’ಯಲ್ಲಿ ಕುಳಿತವರು ಯಾರು ನೋಡಿ...
COVER STORY

ಕೆರೆಗೆ ಪೈಪ್‌ ಇಡುವವರು ಜನರೇ ಇರಬಹುದು; ಮೊದಲು ‘ನಲ್ಲಿಕಟ್ಟೆ’ಯಲ್ಲಿ ಕುಳಿತವರು ಯಾರು ನೋಡಿ...

ಇವತ್ತಿಗೆ ಏಡ್ಸ್‌ ನಿಯಂತ್ರಣಕ್ಕಾಗಿ ಸಂಸ್ಥೆಯೊಂದಿದೆ ಎಂಬುದೇ ಮರೆತು ಹೋಗಿದೆ. ಜಾಹೀರಾತುಗಳು ಪೂರ್ತಿ ನಿಂತಿವೆ. ಜಾಗೃತಿ ಕಾರ್ಯಕ್ರಮಗಳಿಗೆ ಅಂತ್ಯ ಹಾಡಲಾಗಿದೆ. ಹಾಗಂತ ತಳಮಟ್ಟದಲ್ಲಿ ಪರಿಸ್ಥಿತಿಗಳೇನಾದರೂ ಬದಲಾಯಿತಾ? ಇಲ್ಲ.

ದಕ್ಷಿಣ ಕರ್ನಾಟಕದ ಕೇಂದ್ರಭಾಗ ಬೆಂಗಳೂರಿನಲ್ಲಿ ನೆಲೆನಿಂತ ಬಹುತೇಕ ಮಾಧ್ಯಮಗಳಿಗೆ ಉತ್ತರ ಕರ್ನಾಟಕ ಎಂದರೆ ಅಷ್ಟಕಷ್ಟೇ. ಅಲ್ಲೊಮ್ಮೆ ಇಲ್ಲೊಮ್ಮೆ ಋಣಾತ್ಮಕ ಕಾರಣಗಳಿಗೆ ಈ ಭಾಗದ ಸಮಸ್ಯೆಗಳು ಮಾಧ್ಯಮಗಳನ್ನು ಆವರಿಸಿಕೊಂಡಿದ್ದು ಬಿಟ್ಟರೆ, ಮತ್ಯಾವತ್ತೂ ಅಗತ್ಯದ ಕಾರಣಕ್ಕೆ ಸುದ್ದಿಯಾಗಿದ್ದೇ ಇಲ್ಲ. ಟ್ರಾಲ್‌ ಪೇಜ್‌ಗಳು, ರಿಯಾಲಿಟಿ ಶೋಗಳಿಗೆ ಸೀಮಿತ. ಇದೀಗ ಏಡ್ಸ್‌ ಪೀಡಿತ ಮಹಿಳೆಯ ಆತ್ಮಹತ್ಯೆ ಮತ್ತು ಅದರಿಂದ ಕೆರೆ ನೀರನ್ನು ಖಾಲಿ ಮಾಡುತ್ತಿರುವ ಗ್ರಾಮಸ್ಥರ ಕಾರಣಕ್ಕೆ ಉತ್ತರ ಕರ್ನಾಟಕ ಮತ್ತೆ ಸುದ್ದಿಕೇಂದ್ರಕ್ಕೆ ಬಂದಿದೆ, ರಾಷ್ಟ್ರಮಟ್ಟದಲ್ಲಿ.

ಆಗಿದ್ದಿಷ್ಟೇ. ನವೆಂಬರ್‌ 29ರಂದು 36 ವರ್ಷದ ಮಹಿಳೆಯೊಬ್ಬರು ಎಚ್‌ಐವಿ ಸೋಂಕಿತ ಮಹಿಳೆಯೊಬ್ಬರು ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಮೊರಬ ಗ್ರಾಮದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕೆರೆಯ ನೀರನ್ನೇ ಊರಿನ ಬಳಕೆಗೆ ಉಪಯೋಗಿಸುತ್ತಿದ್ದುದರಿಂದ, ನೀರಿಗೆ ಬಿದ್ದ ಆಕೆಗಿಂತ, ಆಕೆಗಿದ್ದ ಕಾಯಿಲೆ ಮುಖ್ಯವಾಯಿತು. ನಮಗೂ ಏಡ್ಸ್‌ ತಗುಲಬಹುದು ಎಂದು ಗ್ರಾಮಸ್ಥರು ಭಯ ಬಿದ್ದರು. ಅವರನ್ನು ಮನವರಿಕೆ ಮಾಡುವ ಪ್ರಯತ್ನಗಳು ವಿಫಲವಾದವು.

ಘಟನೆ ಬೆನ್ನಿಗೇ ಗ್ರಾಮಸ್ಥರು ಕೆರೆಯ ನೀರನ್ನು ಕುಡಿಯುವುದಿಲ್ಲ ಎಂದು ನಿರ್ಧರಿಸಿದಾಗ ಗ್ರಾಮ ಪಂಚಾಯಿತಿಯವರು ತಜ್ಞರಿಂದ ಕೆರೆಯ ನೀರನ್ನು ಪರೀಕ್ಷೆಗೆ ಒಳಪಡಿಸಿದರು. ಪರೀಕ್ಷೆಯಲ್ಲಿ ‘ನೀರಿನಲ್ಲಿ ಯಾವುದೇ ಕಲುಷಿತ ಅಂಶಗಳಿಲ್ಲ, ಕುಡಿಯಲು ಯೋಗ್ಯ’ ಎಂಬ ವರದಿ ಬಂತು. ಇದನ್ನು ಗ್ರಾಮಸ್ಥರ ಮುಂದಿಡಲಾಯಿತು. ಆದರೆ ಗ್ರಾಮಸ್ಥರು ತಮ್ಮ ಪಟ್ಟು ಬಿಡಲಿಲ್ಲ.

ಕೊನೆಗೆ ಗ್ರಾಮಸ್ಥರ ಬೇಡಿಕೆಗೆ ತಲೆಬಾಗಿದ ಸ್ಥಳೀಯ ಗ್ರಾಮ ಪಂಚಾಯತಿ ಕೆರೆಯ ನೀರನ್ನು ಖಾಲಿ ಮಾಡುವ ತೀರ್ಮಾನಕ್ಕೆ ಬಂತು. 36 ಎಕರೆ ವಿಸ್ತೀರ್ಣದ ಬೃಹತ್‌ ಕೆರೆಯಲ್ಲಿ ಊರಿಗೆ ಎರಡು ವರ್ಷಕ್ಕೆ ಬೇಕಾಗುವಷ್ಟು ನೀರಿತ್ತು. ಹೀಗಿದ್ದೂ ಸುಮಾರು 20 ಪಂಪುಗಳನ್ನು ಕೆರೆಗೆ ಇಳಿಸಿ ನೀರನ್ನು ಹೊರತೆಗೆಯುವ ಕಾರ್ಯ ಈಗ ಸಾಗಿದೆ. ಇವತ್ತಿಗೆ ಈ ಕೆಲಸ ಆರಂಭಿಸಿ ವಾರ ಕಳೆದಿದೆ. ಆದರೆ ಕೆರೆಯ ನೀರು ಅರ್ಧ ಮಾತ್ರ ಖಾಲಿಯಾಗಿದೆ. ಇನ್ನೂ ಪಂಪ್‌ಗಳು ಚಾಲೂ ಆಗಿದ್ದು ನೀರು ಹೊರ ಹೋಗುತ್ತಲೇ ಇದೆ.

ಈ ಸುದ್ದಿಯನ್ನು ಡಿಸೆಂಬರ್‌ 4ರಂದೇ ‘ದಿ ಹಿಂದೂ’ ಪತ್ರಿಕೆ ವರದಿ ಮಾಡಿತ್ತು. ಇದೀಗ ಈ ವಿಚಾರ ರಾಷ್ಟ್ರೀಯ ಮಟ್ಡದಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ. ಹೆಚ್ಚು ಕಡಿಮೆ ಎಲ್ಲಾ ಪ್ರಮುಖ ಮಾಧ್ಯಮಗಳು ಈ ಕುರಿತು ವರದಿ ಮಾಡಿವೆ.

“ಇದು ನಿಜಕ್ಕೂ ದುರದೃಷ್ಟಕರ ಸಂಗತಿ. ನೀರಿಂದ ಹೆಚ್ಐವಿ ಹರಡುವುದಿಲ್ಲವೆಂದು ಎಷ್ಟು ಹೇಳಿದರೂ ಕೇಳಿಸಿಕೊಳ್ಳದ ಜನರು ಕೆರೆಯನ್ನೇ ಬರಿದಾಗಿಸಲು ಆರಂಭಿಸಿದ್ದಾರೆ,” ಎನ್ನುತ್ತಾರೆ ಧಾರವಾಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ. ‘ವಿಜಯ ಕರ್ನಾಟಕ’ದ ಜತೆ ಮಾತನಾಡಿರುವ ಅವರು ಮೂಢ ನಂಬಿಕೆಗಳ ಬಗ್ಗೆ ಕುಪಿತರಾಗಿದ್ದರು.

ಹಾಗಿದ್ದರೆ ಇದರಲ್ಲಿ ತಪ್ಪು ಯಾರದ್ದು?

ಏಡ್ಸ್‌ ನಿಯಂತ್ರಣ ಸಂಸ್ಥೆ

ಕರ್ನಾಟಕವೂ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿ ಏಡ್ಸ್‌ ನಿಯಂತ್ರಣ ಸಂಸ್ಥೆ ಎಂಬುದೊಂದಿದೆ. ‘ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣ ಸಂಸ್ಥೆ’ಯನ್ನು 1992ರಲ್ಲೇ ಸ್ಥಾಪನೆ ಮಾಡಲಾಗಿದೆ. ಏಡ್ಸ್‌ ಹರಡದಂತೆ ತಡೆಯುವುದು, ಹರಡಿದವರಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮತ್ತು ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಇದರ ಪ್ರಮುಖ ಜವಾಬ್ದಾರಿಗಳು.

ಇಂಥಹದ್ದೊಂದು ಸಂಸ್ಥೆಯನ್ನು ಆರಂಭಿಸಿ 26 ವರ್ಷಗಳು ಕಳೆದಿದ್ದಲ್ಲದೆ ಇವತ್ತಿಗೆ ನಾಲ್ಕನೇ ಹಂತದ ‘ರಾಷ್ಟ್ರೀ ಏಡ್ಸ್‌ ನಿಯಂತ್ರಣ ಕಾರ್ಯಕ್ರಮ’ವನ್ನು ಸಂಸ್ಥೆ ಮುನ್ನಡೆಸುತ್ತಿದೆ. ಆದರೆ ಆಳದಲ್ಲಿ ಇದರಿಂದ ಆದ ಪರಿಣಾಮಗಳೆಷ್ಟು ಎಂಬುದಕ್ಕೆ ಉತ್ತರ ಕರ್ನಾಟಕ ಭಾಗದತ್ತ ಕಣ್ಣಾಡಿಸಬೇಕು.

ಇವತ್ತಿಗೂ ಉತ್ತರ ಕರ್ನಾಟಕ ಹಲವು ಭಾಗಗಳಲ್ಲಿ ದೇವದಾಸಿ ಎಂಬ ಅನಿಷ್ಟ ಪದ್ಧತಿ ಜೀವಂತವಾಗಿದೆ. ಇವರು ಕಾಲವಾಗುವ ಮೊದಲು ಶೇಕಡಾ 90ರಷ್ಟು ಜನರು ಏಡ್ಸ್‌ ರೋಗಕ್ಕೆ ತುತ್ತಾಗಿರುತ್ತಾರೆ ಎಂಬುದನ್ನು ಅಧ್ಯಯನಗಳು ಹೇಳುತ್ತವೆ. ಇವರನ್ನು ಉದ್ಧಾರ ಮಾಡುತ್ತೀನಿ ಎಂದು ಹೊರಟ ನಟಿಮಣಿ, ರಾಜಕಾಣಿಗಳು ಇವತ್ತು ಜನರಿಗೇ ಮರೆತು ಹೋಗಿದ್ದಾರೆ. ಇವತ್ತಿಗೂ ದೇವದಾಸಿ ಪದ್ದತಿ ಜಾರಿಯಲ್ಲಿರುವ ಹಳ್ಳಿಗಳಲ್ಲಿ ಇಂತಹ ನೂರಾರು ಎಚ್‌ಐವಿ ಸೋಂಕಿತ ಮಹಿಳೆಯರು ಕಾಣ ಸಿಗುತ್ತಾರೆ. ಇಂತಹವರ ಕುರಿತು ಸದಾಭಿಪ್ರಾಯ ರೂಪಿಸಲು ಹಾಗೂ ಕಾಯಿಲೆ ಕುರಿತು ಸಾಮಾಜಿಕ ಅರಿವು, ಹೊಣೆಗಾರಿಕೆ ಮೂಡಿಸಲು ‘ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣ ಸಂಸ್ಥೆ’ ಮಾಡಿದ ವೆಚ್ಚದ ಸ್ಯಾಂಪಲ್‌ ಇಲ್ಲಿದೆ.

ಏಡ್ಸ್‌ ಕುರಿತ ಜಾಗೃತಿ ಕಾರ್ಯಕ್ರಮಕ್ಕಾಗಿ 2014-15ರಲ್ಲಿ ಖರ್ಚು ಮಾಡಿದ ಹಣ
ಏಡ್ಸ್‌ ಕುರಿತ ಜಾಗೃತಿ ಕಾರ್ಯಕ್ರಮಕ್ಕಾಗಿ 2014-15ರಲ್ಲಿ ಖರ್ಚು ಮಾಡಿದ ಹಣ
/ಸಮಾಚಾರ. 

ದಾಖಲೆಗಳು ಹೇಳುವಂತೆ, ಸಂಸ್ಥೆಗೆ 2009ರಲ್ಲೇ ನೀಡುತ್ತಿದ್ದ ಹಣ ಸುಮಾರು 24 ಕೋಟಿ ರೂಪಾಯಿ. 2014 – 15ರಲ್ಲಿ ಈ ಮೊತ್ತ 100 ಕೋಟಿ ರೂಪಾಯಿಗಳನ್ನೂ ದಾಟಿತ್ತು. ಆ ವರ್ಷ 107.39 ಕೋಟಿ ರೂಪಾಯಿಗಳನ್ನು ಯೂನಿಸೆಫ್‌, ಕೇಂದ್ರ ಸರಕಾರ, ರಾಜ್ಯ ಸರಕಾರಗಳು ಈ ಸಂಸ್ಥೆಗೆ ನೀಡಿ ಏಡ್ಸ್‌ ತಡೆಗಟ್ಟಲು ಕೆಲಸ ಮಾಡುವ ಹೊಣೆಯನ್ನು ನೀಡಿದ್ದವು. ಇದರಲ್ಲಿ ಜಾಗೃತಿ ಕಾರ್ಯಕ್ರಮವೊಂದಕ್ಕೇ ಸಂಸ್ಥೆ 7.93 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿತ್ತು.

ಇವತ್ತಿಗೆ ಏಡ್ಸ್‌ ನಿಯಂತ್ರಣಕ್ಕಾಗಿ ಸಂಸ್ಥೆಯೊಂದಿದೆ ಎಂಬುದೇ ಮರೆತು ಹೋದಂತಾಗಿದೆ. ಜಾಹೀರಾತುಗಳು ಪೂರ್ತಿ ನಿಂತಿವೆ. ಜಾಗೃತಿ ಕಾರ್ಯಕ್ರಮಗಳಿಗೆ ಅಂತ್ಯ ಹಾಡಲಾಗಿದೆ. ಹಾಗಂಥ ತಳಮಟ್ಟದಲ್ಲಿ ಪರಿಸ್ಥಿತಿಗಳೇನಾದರೂ ಬದಲಾಯಿತಾ? ಇಲ್ಲ. ಅದಕ್ಕೆ ಉದಾಹರಣೆಯಾಗಿ ಧಾರವಾಡದ ಮೊರಬ ಗ್ರಾಮ ಕಣ್ಣ ಮುಂದಿದೆ. ಇಲ್ಲಿ ನೀರು ಕಾಲಿ ಮಾಡಿದ ಜನರು ಮೌಢ್ಯವನ್ನೇ ಪಾಲಿಸುತ್ತಿರಬಹುದು. ಆದರೆ ಅದಕ್ಕೆ ಕಾರಣ ದೂರದ ರಾಜಧಾನಿಯಲ್ಲಿ ನಲ್ಲಿ ಓಪನ್ ಮಾಡಿಕೊಂಡು ಕುಳಿತ ಜನ.