420 ಅಲ್ಲ; ಜಿ-20; ಅರ್ಜೆಂಟೀನಾ ಭೇಟಿಯಲ್ಲಿ ಸಿಕ್ಕ ಜರ್ಸಿ ಎದುರಿಸಿದ ಪ್ರತಿರೋಧ & ಪ್ರಶ್ನೆಗಳು!
COVER STORY

420 ಅಲ್ಲ; ಜಿ-20; ಅರ್ಜೆಂಟೀನಾ ಭೇಟಿಯಲ್ಲಿ ಸಿಕ್ಕ ಜರ್ಸಿ ಎದುರಿಸಿದ ಪ್ರತಿರೋಧ & ಪ್ರಶ್ನೆಗಳು!

ಪ್ರತಿರೋಧ ಎನ್ನುವುದು ಸಾಮಾಜಿಕ ಜಾಲತಾಣಗಳ ಟ್ರೋಲ್‌ಗೆ ಸೀಮಿತಗೊಂಡಿದೆ. ಭಾರತದ ‘ಪ್ರಜಾಪ್ರಭುತ್ವದ ಸೌಂದರ್ಯ’ ಇಷ್ಟಕ್ಕೇ ಸೀಮಿತಗೊಂಡಿರುವುದು ವಿಪರ್ಯಾಸವಲ್ಲದೆ ಮತ್ತೇನೂ ಅಲ್ಲ.

ಕಳೆದ ವಾರಾಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿದೇಶದಲ್ಲಿದ್ದರು. 2014ರಲ್ಲಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಅವರು ಹೆಚ್ಚು ಕಡಿಮೆ ದೊಡ್ಡ ಸಮಯ ವಿದೇಶ ಪ್ರವಾಸ- ಭೇಟಿಗಳಲ್ಲಿ ಕಳೆಯುತ್ತಿದ್ದಾರೆ. ‘ಈ ಮೂಲಕ ದೇಶದ ಪ್ರಗತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ’ ಎಂದು ಅವರ ಬೆಂಬಲಿಗರು ಹೇಳಿದರೂ, ದೊಡ್ಡ ಸಂಖ್ಯೆಯ ಸಾಮಾನ್ಯ ಜನ ನಂಬಲು ತಯಾರಿಲ್ಲ. ಅವರು ನಂಬದೆ ಹೋಗುವುದು ಮಾತ್ರವಲ್ಲ, ಮೀಮ್ಸ್‌ಗಳ ರೂಪದಲ್ಲಿ ಮೋದಿಯವರ ಪ್ರತಿ ನಡೆಯನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿದ್ದಾರೆ.

ಜಿ-20 ಶೃಂಗಸಭೆಯ ಹಿನ್ನೆಲೆಯಲ್ಲಿ ಶನಿವಾರ ಪ್ರಧಾನಿ ಮೋದಿ ಅರ್ಜೆಂಟೀನಾದಲ್ಲಿದ್ದರು. ಈ ಸಮಯದಲ್ಲಿ ಫೀಫಾದ ಅಧ್ಯಕ್ಷ ಗಿಯಾನ್ನಿ ಇನ್ಫಾಂಟಿನೊ ಭೇಟಿ ಮಾಡಿ ಅವರಿಂದ ನೀಲಿ ಬಣ್ಣದ ಜರ್ಸಿಯೊಂದನ್ನು ಕಾಣಿಕೆಯಾಗಿ ಸ್ವೀಕರಿಸಿದ್ದಾರೆ.

ಜರ್ಸಿ ಕೈಗೆ ಬರುತ್ತಿದ್ದಂತೆ ಫೂಟ್ಬಾಲ್‌ ನೆನಪು ಮಾಡಿಕೊಂಡ ಮೋದಿ, ಟ್ವೀಟ್ ಕೂಡ ಮಾಡಿದ್ದರು.

ಟ್ವೀಟ್‌ ಹಾಗೂ ಫೊಟೋವನ್ನು ಬಳಸಿಕೊಂಡು ಈ ಕುರಿತಾದ ಸುದ್ದಿಯನ್ನು ಜನರ ಮುಂದಿಡಲು ಮುಖ್ಯ ವಾಹಿನಿ ಮಾಧ್ಯಮಗಳು ಮರೆಯಲಿಲ್ಲ. ಟೈಮ್ಸ್‌ ನೌ ವರದಿಯಲ್ಲಿ, ‘’ಅರ್ಜೆಂಟೀನಾದ ಫೂಟ್ಬಾಲ್ ಆಟಗಾರರಿಗೆ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಲಿಯೋನಲ್ ಮೆಸ್ಸಿ, ಪೌಲೋ ದ್ಯಬಲಾ ತರಹದ ಆಟಗಾರರ ಮನಸೋಲುವಂತಹ ಆಟದ ಕೌಶಲ್ಯ ಭಾರತೀಯರಿಗೆ ಅಚ್ಚುಮೆಚ್ಚು...” ಎಂಬ ಅಭಿಪ್ರಾಯವನ್ನು ಇದೇ ವರದಿ ಹಿನ್ನೆಲೆಯಲ್ಲಿ ವ್ಯಕ್ತಪಡಿಸಿತ್ತು.

ಹೀಗೆ, ಅಸಲಿ ಸುದ್ದಿ ಜನರನ್ನು ತಲುಪುತ್ತಿದ್ದಾಗಲೇ, ಮೋದಿ ಟೀಕಾಕಾರ ಟ್ರಾಲ್‌ ಪೇಜ್‌ಗಳು 'ಕೈ’ಚಳಕ ತೋರಿಸಿದವು. ‘ಜಿ20 ‘ಎಂದು ಟೀ- ಶರ್ಟ್‌ ಮೇಲಿನ ಅಕ್ಷರವನ್ನು ತಿದ್ದಿ ‘420’ ಎಂದು ಬದಲಿಸಿ ಹರಿಯಬಿಟ್ಟವು. ಇದನ್ನು ಕೊನೆಗೆ ಗುರುತಿಸಿದ- ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳ ಪತ್ತೆ ಹಚ್ಚುವ- ‘ಆಲ್ಟ್‌ ನ್ಯೂಸ್’ ವೆಬ್‌ಸೈಟ್, ಚಿತ್ರ ನಕಲಿ ಎಂದು ಅಸಲಿ ಚಿತ್ರದ ಜತೆ ವರದಿ ಮಾಡಿತು.

ಇಷ್ಟೊಂದು ಚುರುಕಾಗಿ ಯಾಕೆ ದೇಶದ ಪ್ರಧಾನಿಯೊಬ್ಬರು ವಿದೇಶದಲ್ಲಿ ತೆಗೆಸಿಕೊಂಡ ಒಂದು ಚಿತ್ರ ತನ್ನದೇ ದೇಶದಲ್ಲಿ ವಿರೂಪಗೊಂಡು ಜನರನ್ನು ತಲುಪುತ್ತಿದೆ? ಇದು ಉದ್ದೇಶ ಪೂರ್ವಕ ಸುಳ್ಳು ಸುದ್ದಿ ಹರಡುವ ಕೆಲವೇ ಜನರ ಮಿತಿನಾ ಅಥವಾ ರಾಜಕೀಯ ಪ್ರತಿರೋಧದ ರೂಪನಾ? ಉತ್ತರ ಕಂಡುಕೊಳ್ಳುವ ಅಗತ್ಯವಿದೆ.

ಹಾಗೆ ನೋಡಿದರೆ ಇಂತಹದ್ದೊಂದು ಕಿತಾಪತಿಯ ತಿರುಚುವಿಕೆ, ಸುಳ್ಳು ಹರಡುವ ಸಂಸ್ಕೃತಿಯನ್ನು ಭಾರತದಲ್ಲಿ ಬೆಳೆಸಿದ್ದೇ ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳು. ಇದಕ್ಕೆ ಸಾಕಷ್ಟು ಸಾಕ್ಷ್ಯಗಳು ಕಣ್ಣೆದುರಿವೆ. ನೆಹರೂ ಜತೆಗಿರುವ ಅವರ ಸಹೋದರಿಯನ್ನು ಗರ್ಲ್‌ಫ್ರೆಂಡ್‌ ಎಂದು ಕರೆದ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥರು, ಟಿಪ್ಪುವಿಗೆ ಇನ್ಯಾರದ್ದೋ ಫೋಟೋ ಹಾಕುವ ಅನಂತ್‌ ಕುಮಾರ್‌ ಹೆಗಡೆಯಂತ ಸಚಿವರು ಜತೆಗೆ ಇದೇ ಬಿಜೆಪಿ ಪರ ನಿಂತಿರುವ ‘ಪೋಸ್ಟ್‌ಕಾರ್ಡ್‌’ನಂಥ ವ್ಯವಸ್ಥಿತ ಸುಳ್ಳು ಹರಡುವ ಜಾಲತಾಣಗಳೇ ಇದಕ್ಕೆ ಉದಾಹರಣೆ. ಇನ್ನು ಬಿಜೆಪಿಯ ಟ್ರೋಲ್‌ ಆರ್ಮಿಗಳ ಬಗ್ಗೆ ಪುಸ್ತಕಗಳೇ ಬಂದಿವೆ. ಇದೀಗ ಅದೇ ತಂತ್ರವನ್ನು ವಿರೋಧಿಗಳೂ ಬಿಜೆಪಿ ವಿರುದ್ಧ ಪ್ರಯೋಗಿಸುತ್ತಿದ್ದಾರೆ. ಪರಿಣಾಮ ವಾಟ್ಸಾಪ್‌ನಿಂದ ಹಿಡಿದು ಸಾಮಾಜಿಕ ಜಾಲತಾಣಗಳವರೆಗೆ ‘ಫೇಕ್‌ ನ್ಯೂಸ್‌’ ಕಾರ್ಖಾನೆಗಳು ಬೆಳೆದಿವೆ. ಇದನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಫೇಸ್‌ಬುಕ್‌ ಮತ್ತು ವಾಟ್ಸಾಪ್‌ ಮೇಲಿಂದ ಮೇಲೆ ಜಾಹೀರಾತುಗಳನ್ನು ನೀಡುತ್ತಲೇ ಇವೆ.

“ಒಂದು ಕಾಲದಲ್ಲಿ ಅವರು ಮಾಡುತ್ತಿದ್ದರು. ಈಗ ನಮ್ಮ ಸರದಿ. ಇಷ್ಟಕ್ಕೂ ಅವರ ಹಾಗೆ ನಾವು ಸಮಾಜ ಒಡೆಯುವ ಸುಳ್ಳು ಸುದ್ದಿ ಹರಡುತ್ತಿಲ್ಲ. ಬದಲಿಗೆ ರಾಜಕೀಯ ಪ್ರತಿರೋಧವಾಗಿ ಅಸ್ತ್ರ ಬಳಸುತ್ತಿದ್ದೇವೆ,’’ ಎನ್ನುತ್ತಾರೆ ಕಾಂಗ್ರೆಸ್ ಪರ ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡುತ್ತಿರುವವರೊಬ್ಬರು.

ಇದೊಂದು ರೀತಿಯಲ್ಲಿ ಸಮಜಾಯಿಷಿ ಮತ್ತು ರಾಜಕೀಯ ಪ್ರತಿರೋಧ ಎನ್ನುವ ಮೂಲಕ ಸೌದ್ಧಾಂತಿಕ ಸಮರ್ಥನೆಯ ದಾಟಿಯಲ್ಲಿದೆ. ಇವರುಗಳು ಈ ಹೊತ್ತಲ್ಲಿ ಇದೇ ಸಾಮಾಜಿಕ ಜಾಲತಾಣಗಳ ಮೂಲಕ ಹುಟ್ಟಿಕೊಂಡ ‘ಯೆಲ್ಲೋ ವೆಸ್ಟ್‌’ ಎಂಬ ಹೋರಾಟವೊಂದು ಫ್ರಾನ್ಸ್‌ನಲ್ಲಿ ಸರಕಾರವನ್ನೇ ನಡುಗಿಸಿದ್ದನ್ನು ಗಮನಿಸಬೇಕಿದೆ. ಅನಿವಾರ್ಯವಾಗಿ ಪ್ರತಿಭಟನಾಕಾರರ ಮುಂದೆ ಮಂಡಿಯೂರಿದ ಸರಕಾರ ತೈಲ ದರ ಹೆಚ್ಚಳವನ್ನೇ ಕೈ ಬಿಟ್ಟಿತು. ಹಲವು ವರ್ಷಗಳ ಹಿಂದೆ ಅರಬ್‌ ದೇಶಗಳ ರಾಜಕೀಯವನ್ನೇ ನಡುಗಿಸಿ ಹಾಕಿದ ‘ಅರಬ್‌ ಸ್ಪ್ರಿಂಗ್‌’ ಹಿಂದೆ ಇದೇ ಸಾಮಾಜಿಕ ಜಾಲತಾಣಗಳು ಕೆಲಸ ಮಾಡಿದ್ದವು. ಅಲ್ಲೆಲ್ಲಾ ಆನ್‌ಲೈನ್ ವೇದಿಕೆಯ ಆಲೋಚನೆಗಳು ಕಾರ್ಯರೂಪಕ್ಕಿಳಿದರೆ ಭಾರತದಲ್ಲಿ ಮಾತ್ರ ಈಗಲೂ ಮೀಮ್ಸ್‌, ಟ್ರಾಲಿಂಗ್ ಮತ್ತು ಇತ್ತೀಚೆಗೆ ಫೇಕ್‌ ನ್ಯೂಸ್‌ಗಳ ಸುತ್ತ ಗಿರಕಿ ಹೊಡೆಯುತ್ತಿದೆ. ಇದರಿಂದ ಪ್ರತಿರೋಧದ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳು ಸುಳ್ಳಿನ ನೆಲೆಯಲ್ಲೇ ಸತ್ಯದ ಹುಸಿ ಹುಡುಕಾಟ ನಡೆಸುವ ನಿರಂತರ ಪ್ರಕ್ರಿಯೆ ಆಗುವ ಅಪಾಯವಿದೆ.