‘ಅಮಿತ್‌ ಶಾ ಬಿಜೆಪಿಗೆ ಡಿ.6ರ ಕಹಿ’:  ಯುವ ಸಂಸದೆ ರಾಜೀನಾಮೆ, ರಥಯಾತ್ರೆಗೆ ಕೋರ್ಟ್ ತಡೆ... 
COVER STORY

‘ಅಮಿತ್‌ ಶಾ ಬಿಜೆಪಿಗೆ ಡಿ.6ರ ಕಹಿ’: ಯುವ ಸಂಸದೆ ರಾಜೀನಾಮೆ, ರಥಯಾತ್ರೆಗೆ ಕೋರ್ಟ್ ತಡೆ... 

ಉತ್ತರ ಪ್ರದೇಶದಲ್ಲಿ ಸಂಜೆ ಹೊತ್ತಿಗೆ ರಾಜೀನಾಮೆಯ ಬೆಳವಣಿಗೆ ನಡೆಯುವ ಮುಂಚೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಸಂಬಂಧಿಸಿದ ಮತ್ತೊಂದು ಬೆಳವಣಿಗೆಗೆ ಕೋಲ್ಕತ್ತಾ ಸಾಕ್ಷಿಯಾಯಿತು.

ಕೇಂದ್ರದಲ್ಲಿ ಮಿತ್ರಕೂಟದ ಸಹಾಯದಿಂದ ಅಧಿಕಾರದಲ್ಲಿರುವ ಭಾರತೀಯ ಜನತಾ ಪಾರ್ಟಿಗೆ ಡಿ. 6, 2018 ಒಳ್ಳೆಯ ದಿನವಾಗಿ ಕಾಣಿಸುತ್ತಿಲ್ಲ.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇದೇ ದಿನ 25 ವರ್ಷಗಳ ಹಿಂದೆ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಲಾಗಿತ್ತು. ಬಿಜೆಪಿ ಹಿರಿಯ ನಾಯಕರೇ ಆರೋಪಿಗಳಾಗಿರುವ ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ದೇಶದಲ್ಲಿ ಧಾರ್ಮಿಕ ಕಂದಕವನ್ನು ದೊಡ್ಡ ಮಟ್ಟದಲ್ಲಿ ಸೃಷ್ಟಿಸಿ, ಅನೇಕ ಸಾಮಾಜಿಕ- ರಾಜಕೀಯ ಬೆಳವಣಿಗೆಗಳಿಗೆ ಕಾರಣವಾದ ಈ ಘಟನೆಯ ಕಹಿ ನೆನಪನ್ನು ಇಂದು ದೇಶ ಮಾಡಿಕೊಂಡಿತ್ತು.

ಕಾಕತಾಳೀಯ ಎಂಬಂತೆ ಇವತ್ತೇ ಪಕ್ಷದ ಯುವ ಸಂಸದೆಯೊಬ್ಬರು ಆತ್ಮವಲೋಕನಕ್ಕೆ ಆಸ್ಪದ ಮಾಡಿಕೊಟ್ಟು ರಾಜೀನಾಮೆ ಸಲ್ಲಿಸಿದ್ದಾರೆ. “ಬಿಜೆಪಿ ದೇಶವನ್ನು ಒಡೆಯುತ್ತಿದೆ,’’ ಎಂಬ ಗಂಭೀರ ಆರೋಪ ಮಾಡಿರುವ ಉತ್ತರ ಪ್ರದೇಶದ ಮೀಸಲು ಕ್ಷೇತ್ರದ ಸಂಸದೆ ಸಾವಿತ್ರಿಭಾಯಿ ಪುಲೆ ತಮ್ಮ ಹೊಣೆಗಾರಿಕೆಯಿಂದ ಹಿಂದೆ ಸರಿದಿದ್ದಾರೆ.

ದೇಶದಲ್ಲಿ ಹಣವನ್ನು ಜನರ ಅಭಿವೃದ್ದಿಗೆ ಬಳಸುವುದು ಬಿಟ್ಟು, ಪ್ರತಿಮೆ ಸ್ಥಾಪನೆಗೆ ಬಳಸಲಾಗುತ್ತಿದೆ ಎಂದು ದೂರಿರುವ ಸಾವಿತ್ರಿ ಬಾಯಿ ಪುಲೆ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. 
ದೇಶದಲ್ಲಿ ಹಣವನ್ನು ಜನರ ಅಭಿವೃದ್ದಿಗೆ ಬಳಸುವುದು ಬಿಟ್ಟು, ಪ್ರತಿಮೆ ಸ್ಥಾಪನೆಗೆ ಬಳಸಲಾಗುತ್ತಿದೆ ಎಂದು ದೂರಿರುವ ಸಾವಿತ್ರಿ ಬಾಯಿ ಪುಲೆ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. 
/ಎನ್‌ಡಿಟಿವಿ. 

ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳಿವೆ. ಕಳೆದ ನಾಲ್ಕೂವರೆ ವರ್ಷಗಳ ಆಡಳಿತ ಮತ್ತು ಅದಕ್ಕೆ ಎದುರಾಗಿರುವ ‘ಆಡಳಿತ ವಿರೋಧಿ ಅಲೆ’ಯನ್ನು ಬಿಜೆಪಿ ಹಾಗೂ ಅದರ ನಾಯಕರು ಎದುರಿಸುತ್ತಿದ್ದಾರೆ. ಹಿಂದುತ್ವದ ನೆಲೆಯಲ್ಲಿ ದೇಶದ ಮೂಡ್ ಸೆಟ್ ಮಾಡಲು ‘ರಾಮ ಮಂದಿರ ನಿರ್ಮಾಣ’ ವಿಚಾರವನ್ನು ಪಕ್ಷ ಮುನ್ನೆಲೆಗೆ ತಂದಿತಾದರೂ; ಅದೇ ವೇಳೆಗೆ ದೇಶದ ನಾಗರಿಕ ಪ್ರತಿನಿಧಿಗಳು ರೈತರ ಸಂಕಷ್ಟವನ್ನು ದಿಲ್ಲಿಗೆ ತಲುಪಿಸಿದರು.

ಒಂದು ಕಡೆ ವಿದೇಶ ಪ್ರವಾಸ, ಮತ್ತೊಂದು ಕಡೆ ಸೆಲಬ್ರಿಟಿಗಳ ಆರತಕ್ಷತೆ ನಡುವೆ ಕೇಂದ್ರದ ಆಡಳಿತ ಕಳೆದ 48 ಗಂಟೆಗಳ ಅವಧಿಯಲ್ಲಿ ಹೋಯ್ದಾಡುತ್ತಿತ್ತು. ಇಂತಹ ಸಮುಯದಲ್ಲಿ, ಸಾಮಾಜಿಕವಾಗಿ ತಳಸ್ಥರದಿಂದ ಬಂದ ಉತ್ತರ ಪ್ರದೇಶದ ಸಂಸದೆ ಪಕ್ಷ ತೊರೆದಿದ್ದಾರೆ. ರಾಷ್ಟ್ರೀಯ ಪಕ್ಷದಲ್ಲಿ ನಡೆದಿರುವ ಈ ಬೆಳವಣಿಗೆ ತನ್ನದೇ ಪರಿಣಾಮಗಳನ್ನು ಖಂಡಿತಾ ಹೊಂದಿರುತ್ತದೆ.

ಇದೇ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಕೇಂದ್ರ ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು ಸಾವಿತ್ರಿಭಾಯಿ ಫುಲೆ, “ಸಾರ್ವಜನಿಕವಾಗಿ ಪೊರಕೆ ಹಿಡಿದು ಕಸ ಗುಡಿಸುವುದು ಕೇವಲ ಪ್ರಚಾರದ ತಂತ್ರ. ದೇಶದ ಗಂಭೀರ ಸಮಸ್ಯೆಗಳನ್ನು ಜನರಿಂದ ಮರೆಮಾಚಲು ಸ್ವಚ್ಛತಾ ಅಭಿಯಾನವನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ” ಎಂದಿದ್ದರು. ಸ್ವಚ್ಚ ಭಾರತ ಅಭಿಯಾನದಂತಹ ಮೋದಿ ಸರಕಾರದ ಫ್ಲಾಗ್‌ಶಿಪ್ ಕಾರ್ಯಕ್ರಮವನ್ನು ಅವರು ಟೀಕಿಸಿದ್ದರು, ಜತೆಗೆ, ತಳ ಸಮುದಾಯಗಳ ಜತೆ ನಿಲ್ಲುವ ಅಗತ್ಯವನ್ನು ಒತ್ತಿ ಹೇಳಿದ್ದರು.

“ನಾನು ಮೀಸಲು ಕ್ಷೇತ್ರದಿಂದ ಆರಿಸಿ ಬಂದಿರುವ ಜನಪ್ರತಿನಿಧಿ. ನಾನು ಪೊರಕೆ ಹಿಡಿದ ಮಾತ್ರಕ್ಕೆ ಆ ಪ್ರದೇಶ ಸ್ವಚ್ಛವಾಗುತ್ತದೆಯೇ? ಸಮಾಜದ ಸ್ವಚ್ಛತೆಗಿಂತ ಮೊದಲು ನಿಜವಾಗಿ ಕಾರ್ಯಾಂಗ ಮತ್ತು ಶಾಸಕಾಂಗದ ಮನಸ್ಸುಗಳು ಸ್ವಚ್ಛವಾಗಬೇಕು” ಎನ್ನುವ ಮೂಲಕ ಸಂಸದೆ ಪುಲೆ ಅಂದೇ ತಮ್ಮ ಬದ್ಧತೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದರು.

ಉತ್ತರ ಪ್ರದೇಶದಲ್ಲಿ ಸಂಜೆ ಹೊತ್ತಿಗೆ ರಾಜೀನಾಮೆಯ ಬೆಳವಣಿಗೆ ನಡೆಯುವ ಮುಂಚೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಸಂಬಂಧಿಸಿದ ಮತ್ತೊಂದು ಬೆಳವಣಿಗೆಗೆ ಕೋಲ್ಕತ್ತಾ ಸಾಕ್ಷಿಯಾಯಿತು. ಸಂಸದರೂ ಆಗಿರುವ ಅಮಿತ್ ಶಾ ಪಶ್ಚಿಮ ಬಂಗಾಳದಲ್ಲಿ ನಡೆಸಲು ಉದ್ದೇಶಿದ್ದ ‘ರಥ ಯಾತ್ರೆ’ಗೆ ಕೋಲ್ಕತ್ತಾ ಹೈಕೋರ್ಟ್‌ ತಡೆ ನೀಡಿತು. ಮಮತಾ ಬ್ಯಾನರ್ಜಿ ನೇತೃತ್ವದ ಸರಕಾರ, ‘ಕೋಮು ಸಂಘರ್ಷಕ್ಕೆ ಅನುವು ಮಾಡಿಕೊಡುವ ಸಾಧ್ಯತೆ ಇರುವುದರಿಂದ ರಥ ಯಾತ್ರೆಗೆ ಅನುಮತಿ ನಿರಾಕರಿಸಲಾಗಿದೆ’ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.

ರಥ ಯಾತ್ರೆ ಸುತ್ತ ಕಳೆದ ಮೂರ್ನಾಲ್ಕು ದಿನಗಳಿಂದ ಪಶ್ಚಿಮ ಬಂಗಾಳದಲ್ಲಿ ಬೆಳವಣಿಗೆಗಳು ನಡೆಯಲು ಶುರುವಾಗಿದ್ದವು. ಇದೀಗ ನ್ಯಾಯಾಲದ ತೀರ್ಪಿನಿಂದಾಗಿ ನಾಳೆಯಿಂದ ಆರಂಭವಾಗಬೇಕಿದ್ದ ಅಮಿತ್ ಶಾ ರಥಯಾತ್ರೆಗೆ ತಡೆ ಬಿದ್ದಿದೆ. ಇದು ಬಿಜೆಪಿಯ ನಡೆಗಳಿಗೆ ತನ್ನೊಳಗೇ ವಿರೋಧವೊಂದು ಹುಟ್ಟಿರುವುದು ಹಾಗೂ ಹೊರಗೆಯೂ ಪ್ರತಿರೋಧ ಕಾಣಿಸುತ್ತಿರುವುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಅಂದಹಾಗೆ, ಬಾಬ್ರಿ ಮಸೀದಿ ಧ್ವಂಸದ ವಿಧ್ವಂಸಕ ಘಟನೆಗೆ 25 ವರ್ಷ ಇವತ್ತೇ ತುಂಬಿರುವುದು ಕಾಕತಾಳೀಯ ಇರಬಹುದು.