samachara
www.samachara.com
ಕಾರ್ಪೊರೇಟ್ ಮಾಧ್ಯಮಗಳ ಕಾದಾಟ: ಕಳ್ಳತನದ ಅಸ್ತ್ರಕ್ಕೆ ಕಾಪಿರೈಟ್ ಪ್ರತ್ಯಸ್ತ್ರ!
COVER STORY

ಕಾರ್ಪೊರೇಟ್ ಮಾಧ್ಯಮಗಳ ಕಾದಾಟ: ಕಳ್ಳತನದ ಅಸ್ತ್ರಕ್ಕೆ ಕಾಪಿರೈಟ್ ಪ್ರತ್ಯಸ್ತ್ರ!

ಇದು ಕರ್ನಾಟಕದ ಎರಡು ಕಾರ್ಪೊರೇಟ್ ಮಾದ್ಯಮಗಳ ನಡುವೆ ಆರಂಭಗೊಂಡಿರುವ ‘ಕ್ಯಾಟ್‌ಫೈಟ್’. ಹಾಗಂತ ಇದನ್ನು ನಿರ್ಲಕ್ಷಿಸುವ ಹಾಗೆಯೂ ಇಲ್ಲ. ಯಾಕೆಂದರೆ ಇದು ಪ್ರಾದೇಶಿಕ ಸುದ್ದಿ ವಾಹಿನಿಗಳ ಭವಿಷ್ಯಕ್ಕೆ ಚಪ್ಪಡಿ ಎಳೆಯುವ ಸಾಧ್ಯತೆಯೂ ಇದೆ. 

ಪ್ರಶಾಂತ್ ಹುಲ್ಕೋಡು

ಪ್ರಶಾಂತ್ ಹುಲ್ಕೋಡು

ಕರ್ನಾಟಕದ ಸುದ್ದಿ ಮಾದ್ಯಮ ಲೋಕದಲ್ಲಿ ಮೊನ್ನೆ ನಡೆದಿದ್ದ ಹೊಸ ಬೆಳವಣಿಗೆಗೆ ಇದೀಗ ‘ಕಾಪಿರೈಟ್’ ತಿರುವು ಸಿಕ್ಕಿದೆ.

ಬೌದ್ಧಿಕ ಆಸ್ತಿಗಳನ್ನು ಕದ್ದ ಆರೋಪ ಹೊತ್ತ ನ್ಯೂಸ್ 18 ಸಂಸ್ಥೆ ಪ್ರತಿಕ್ರಿಯೆ ಭಾಗವಾಗಿ ಸುವರ್ಣ ನ್ಯೂಸ್ ವಿರುದ್ಧದ ಹಳೆಯ ಪ್ರಕರಣಕ್ಕೆ ಜೀವ ನೀಡಿದೆ. ಡಿ. 3ರಂದು ಬೆಂಗಳೂರಿನ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ನಾಲ್ವರು ಉದ್ಯೋಗಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ.

ದೂರಿನ ಪ್ರತಿ ನ್ಯಾಯಾಲಯಕ್ಕೆ ಹೋದ ನಂತರ ಸುವರ್ಣ ನ್ಯೂಸ್ ಚಾನಲ್‌/ ಏಷಿಯಾನೆಟ್ ನ್ಯೂಸ್‌ ನೆಟ್ವರ್ಕ್‌ ಪ್ರೈ. ಲಿ. ಸಂಸ್ಥೆ ಹೆಸರನ್ನು ಐದನೇ ಆರೋಪಿಯಾಗಿ ತನಿಖಾಧಿಕಾರಿ ಸೇರಿಸಿದ್ದಾರೆ. ತಾಂತ್ರಿಕ ದೋಷದಿಂದಾಗಿ ಸಂಸ್ಥೆಯ ಹೆಸರನ್ನು ಆರೋಪಿಯಾಗಿ ಆರಂಭದಲ್ಲಿಯೇ ಸೇರಿಸಲು ಸಾಧ್ಯವಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.

Also read: ‘ತನಿಖಾ ಪತ್ರಿಕೋದ್ಯಮ ಹೆಸರಿನಲ್ಲಿ’: ಸುವರ್ಣ ನ್ಯೂಸ್, ನ್ಯೂಸ್ 18 ಕನ್ನಡ ಫೈಟ್‌ನ ಅಂತರಾಳ!

ನ. 29ರಂದು ಸುವರ್ಣ ನ್ಯೂಸ್‌ನ ಕಾರ್ಯಾಚರಣೆ ವಿಭಾಗದ ಉಪಾಧ್ಯಕ್ಷ, ನ್ಯೂಸ್ 18 ಕನ್ನಡ ಸಂಸ್ಥೆಯೂ ಸೇರಿದಂತೆ ಅದರ ಐವರು ಸಿಬ್ಬಂದಿಗಳ ವಿರುದ್ಧ ದೂರು ದಾಖಲಿಸಿದ್ದರು.

ಅಸ್ತ್ರ- ಪ್ರತ್ಯಸ್ತ್ರ:

‘ಸುವರ್ಣ ನ್ಯೂಸ್’ ಚಾನಲ್ ಎಂಪಿ ರಾಜೀವ್ ಚಂದ್ರಶೇಖರ್ ಒಡೆತನದ ಸುದ್ದಿ ವಾಹಿನಿ. ಸದ್ಯ ಕರ್ನಾಟಕದ ಸುದ್ದಿ ವಾಹಿನಿ ಮಾರುಕಟ್ಟೆಯಲ್ಲಿ 2-3ನೇ ಸ್ಥಾನಗಳಿಗಾಗಿ ಹುಟ್ಟಿದ ದಿನದಿಂದಲೂ ಹೋರಾಟ ನಡೆಸಿಕೊಂಡು ಬರುತ್ತಿದೆ. ಇತ್ತೀಚೆಗೆ ಅರಂಭಗೊಂಡ ನ್ಯೂಸ್ 18 ಕನ್ನಡ ಅವತರಣಿಕೆ, ಮಾರುಕಟ್ಟೆಯಲ್ಲಿ ಸುವರ್ಣ ನ್ಯೂಸ್ ಇರುವ ಸ್ಥಾನಗಳಿಗಾಗಿ ಪೈಪೋಟಿಗೆ ಇಳಿದಿದೆ.

ಅದರ ಭಾಗವಾಗಿಯೇ ಸುವರ್ಣ ನ್ಯೂಸ್‌ನಲ್ಲಿ ‘ಎರವಲು ಸೇವೆ’ ಸಲ್ಲಿಸುತ್ತಿದ್ದ ಪತ್ರಕರ್ತರನ್ನು ನ್ಯೂಸ್ 18 ತನ್ನ ಸಿಬ್ಬಂದಿಗಳನ್ನಾಗಿ ನೇಮಕ ಮಾಡಿಕೊಂಡಿತ್ತು. ಅವರು ಸುವರ್ಣ ನ್ಯೂಸ್ ಬಿಟ್ಟು ಬಂದರೂ ನಿತ್ಯ ‘ಮಾಹಿತಿ ಕದಿಯುತ್ತಿದ್ದರು’ ಎಂದು ನ. 29ರ ದೂರಿನಲ್ಲಿ ಆರೋಪಿಸಲಾಗಿತ್ತು.

ಯಾವಾಗ ನ್ಯೂಸ್ 18 ಸಂಸ್ಥೆಯ ಕನ್ನಡ ಅವತರಣಿಕೆಯ ಹೆಸರನ್ನೂ ದೂರು ಒಳಗೊಂಡಿತೋ, ಮುಖೇಶ್ ಅಂಬಾನಿ ಒಡೆತನದ ಸಮೂಹ ಸಂಸ್ಥೆಯ ಆಡಳಿತ ಮಂಡಳಿ ಪ್ರತ್ಯಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. “ಕೆಲವು ದಿನಗಳ ಹಿಂದೆ ನ್ಯೂಸ್ 18 ತಮಿಳು ವಾಹಿನಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಸಂದರ್ಶನವನ್ನು ನಡೆಸಿತ್ತು. ಇದರ ದೃಶ್ಯಾವಳಿಗಳನ್ನು ಸುವರ್ಣ ನ್ಯೂಸ್ ಬಳಸಿಕೊಂಡಿತ್ತು. ಜತೆಗೆ, ಕೆಲವು ತಿಂಗಳ ಹಿಂದೆ ನ್ಯೂಸ್ 18 ಸಮೂಹ ಸಂಸ್ಥೆಗಳ ಭಾಗವಾಗಿರುವ ‘ಹಿಸ್ಟರಿ ಟಿವಿ 18’ಯ ಕಾರ್ಯಕ್ರಮವೊಂದನ್ನು ಸುವರ್ಣ ನ್ಯೂಸ್ ಬಳಸಿಕೊಂಡಿತ್ತು. ಆ ವಿಚಾರದಲ್ಲಿ ಈ ಹಿಂದೆಯೇ ಪತ್ರ ಸಂವಾದ ನಡೆದಿತ್ತು. ಇದೀಗ ಅದನ್ನೂ ಸೇರಿಸಿ ದೂರು ನೀಡಲಾಯಿತು,’’ ಎಂದು ನ್ಯೂಸ್ 18 ಸಂಸ್ಥೆಯ ಮೂಲಗಳು ಮಾಹಿತಿ ನೀಡುತ್ತವೆ.

ನ್ಯೂಸ್ 18 ಸಂಸ್ಥೆಯ ಕಾನೂನು ವಿಭಾಗದ ಹಿರಿಯ ವ್ಯವಸ್ಥಾಪಕ ಸಲ್ಲಿಸಿದ ದೂರಿನಲ್ಲಿ ನಮೂದಿಸಿದ ಸುವರ್ಣ ನ್ಯೂಸ್ ಚಾನಲ್‌ ಸಿಬ್ಬಂದಿಗಳ ಹೆಸರು ಹೀಗಿದೆ. 
ನ್ಯೂಸ್ 18 ಸಂಸ್ಥೆಯ ಕಾನೂನು ವಿಭಾಗದ ಹಿರಿಯ ವ್ಯವಸ್ಥಾಪಕ ಸಲ್ಲಿಸಿದ ದೂರಿನಲ್ಲಿ ನಮೂದಿಸಿದ ಸುವರ್ಣ ನ್ಯೂಸ್ ಚಾನಲ್‌ ಸಿಬ್ಬಂದಿಗಳ ಹೆಸರು ಹೀಗಿದೆ. 

ಬೆಲ್ಲದ ಅಚ್ಚಿನಿಂದ ಆಚೆಗೆ:

ಯಾವಾಗ ನ್ಯೂಸ್ 18 ಎಫ್‌ಐಆರ್ ಗೆತಿರುಗೇಟು ನೀಡಿತೋ ಸುವರ್ಣ ನ್ಯೂಸ್ ಚಾನಲ್‌ ಕಡೆಯಿಂದ ಇನ್ನೊಂದಿಷ್ಟು ವಿಡಿಯೋ ಕ್ಲಿಪ್ಪಿಂಗ್‌ಗಳು ಅನಧಿಕೃತವಾಗಿ ಹೊರಬಿದ್ದಿವೆ. ಈ ಹಿಂದೆ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಸುವರ್ಣ ನ್ಯೂಸ್‌ನಲ್ಲಿದ್ದಾಗ ನಿರೂಪಿಸಿದ ಕಾರ್ಯಕ್ರಮಗಳನ್ನು ನ್ಯೂಸ್ 18 ಕನ್ನಡದಲ್ಲಿ ಹೊಸತು ಎಂಬಂತೆ ಬಿತ್ತರಿಸಿದ್ದಾರೆ ಎಂಬ ಹೋಲಿಕೆಯನ್ನು ಅವು ಮುಂದಿಡುತ್ತಿವೆ.

ಹಾಗಂತ, ಇದು ಪತ್ರಕರ್ತರ ವೃತ್ತಿಪರತೆಯ ಕೊರತೆಯ ಪ್ರಕರಣವಾಗಿ ಮಾತ್ರವೇ ಉಳಿದಂತೆ ಕಾಣಿಸುತ್ತಿಲ್ಲ. ಕನ್ನಡದ ಸುದ್ದಿ ವಾಹಿನಿಗಳು ಹಲವು ವಿಚಾರಗಳಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಾಹಿನಿಗಳ ದೃಶ್ಯಾವಳಿಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಇಂತಹ ಸಮಯದಲ್ಲಿ ‘ಹಿಸ್ಟರಿ ಟಿವಿ’ಯಂತಹ ವಾಹಿನಿಗಳ ಕಾರ್ಯಕ್ರಮದ ದೃಶ್ಯಾವಳಿ ಬಳಸಿಕೊಂಡು ಲಾಭ ಮಾಡಿಕೊಂಡಿದ್ದೀರಿ ಎಂದು ದೂರು ದಾಖಲಿಸಿರುವುದು ಮಾರುಕಟ್ಟೆ ಎದುರಿಸಬೇಕಿರುವ ಹೊಸ ಸವಾಲನ್ನು ಸ್ಪಷ್ಟಗೊಳಿಸುತ್ತಿದೆ.

ಕಾಪಿರೈಟ್‌ ಎಂಬ ಸಂಗತಿಯನ್ನು ಪಕ್ಕಕ್ಕಿಟ್ಟು ಬೇರೆ ವಾಹಿನಿಗಳ ದೃಶ್ಯಗಳನ್ನು ತೋರಿಸಲು ಇವತ್ತು ಅವಕಾಶ ಇಲ್ಲ ಅನ್ನುವುದಾದರೆ, ಕನ್ನಡದ ಸುದ್ದಿ ವಾಹಿನಿಗಳಿಗೆ ಉಳಿಯುವುದು ಅರ್ಧ ಗಂಟೆ ನ್ಯೂಸ್ ಬುಲೆಟಿನ್ ಹಾಗೂ ಪ್ರಾಯೋಜಿತ ಫೋನ್‌- ಇನ್ ಕಾರ್ಯಕ್ರಮಗಳಷ್ಟೆ 24 ಗಂಟೆ ತುಂಬಬೇಕಾಗುತ್ತದೆ. ಈಗಾಗಲೇ ವಿಶೇಷ ಕಾರ್ಯಕ್ರಮಗಳ ಹೆಸರಿನಲ್ಲಿ ಪ್ರಸಾರವಾಗಿರುವ ಕಾರ್ಯಕ್ರಮಗಳನ್ನು ತೆಗೆದರೆ ಪ್ರತಿ ವಾಹಿನಿಯ ಮೇಲೂ ಇಂತಹದ್ದೇ ದೂರು ದಾಖಲಿಸಲು ಅವಕಾಶ ಇದೆ. ತಮಾಷೆಯ ಸಂಗತಿ ಏನೆಂದರೆ, ತೆಲಗು ಸಿನೆಮಾ ಕ್ಷೇತ್ರವೇನಾದರೂ ಮನಸ್ಸು ಮಾಡಿದರೆ, ಕನ್ನಡ ಸುದ್ದಿ ವಾಹಿನಿಗಳು ಈವರೆಗೆ ಬಳಸಿರುವ ಅವುಗಳ ಬಿಜಿಎಂ (ಬ್ಯಾಕ್‌ಗ್ರೌಂಡ್ ಮ್ಯೂಸಿಕ್‌)ಗಾಗಿ ಸಾವಿರಾರು ಕೋಟಿ ದಾವೆ ಹೂಡಬಹುದು. ಅಷ್ಟರ ಮಟ್ಟಿಗೆ ಅವಲಂಬಿತ ಉದ್ಯಮ ನಡೆಸುತ್ತಿರುವ ಪ್ರಾದೇಶಿಕ ಮಾರುಕಟ್ಟೆಯಲ್ಲಿ ಬೃಹತ್ ಮಾದ್ಯಮ ಜಾಲವೊಂದು ಕಾಪಿರೈಟ್ ಅಸ್ತ್ರ ಬಳಸಿದೆ ಎಂಬುದನ್ನು ಗಮನಾರ್ಹ.

ಎಷ್ಟೆಂದರೂ ಇದು ಕ್ಯಾಟ್‌ಫೈಟ್:

ಈ ಹಿಂದೆ, ಬಿಗ್‌ ಬಾಸ್ ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ ಗುಂಡ್ಕಲ್‌ಗೆ ಸ್ಪರ್ಧಿಯಾಗಿದ್ದ ನಟಿ ಮಾಳವಿಕ ಮುತ್ತಿಕ್ಕುವ ವಿಡಿಯೋವೊಂದು ವೈರಲ್ ಆಗಿತ್ತು. ಈ ಕುರಿತು ನಟ ಸುದೀಪ್ ಸುದೀರ್ಘ ಪತ್ರಿಕಾಗೋಷ್ಠಿ ನಡೆಸಿ ಸಮಜಾಯಿಷಿ ನೀಡಿದ್ದರು. ‘ಪರಮ್ ಹಾಗೂ ಮಾಳವಿಕ ಬೆಂಬಲಕ್ಕೆ ನಿಂತಿದ್ದ’ ಸುದೀಪ್, ತಾನು ಹೇಳುತ್ತಿರುವುದು ತಪ್ಪಿದ್ದರೆ ಕ್ಷಮಿಸಿ ಎಂದು ಕೇಳಿಕೊಂಡಿದ್ದರು. ಇವತ್ತಿಗೆ ಈ ಘಟನೆಯನ್ನು ಜನ ಕೂಡ ಮರೆತಿದ್ದಾರೆ. ಅದರ ವಿಡಿಯೋ ತುಣುಕುಗಳೂ ಕೂಡ ಅಂತರ್ಜಾಲದಿಂದ ಮಾಯವಾಗಿವೆ. ಇದೇ ಕಾಪಿರೈಟ್ ಅಸ್ತ್ರವನ್ನು ನ್ಯೂಸ್ 18 ಸಂಸ್ಥೆ ಅಂದು ಬಳಸಿದ ಪರಿಣಾಮ ಅದು.

ಇದೀಗ ಸುದ್ದಿ ವಾಹಿನಿ ವಿಚಾರದಲ್ಲಿ ಇದೇ ಕಾಪಿರೈಟ್‌ ಅಸ್ತ್ರವನ್ನು ನ್ಯೂಸ್ 18 ಪ್ರಯೋಗಿಸಿದೆ. ದೂರು ಕೂಡ ದಾಖಲಾಗಿರುವ ಹಿನ್ನೆಲೆಯಲ್ಲಿ ಪತ್ರಕರ್ತರು ಗಮನಿಸಬೇಕಿರುವ ಪ್ರಮುಖ ಅಂಶ ಏನೆಂದರೆ; ಎರಡೂ ಪ್ರಕರಣಗಳಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿರುವುದು ಪತ್ರಕರ್ತರು ಹಾಗೂ ಸಂಸ್ಥೆಗಳು. ದೂರು ನೀಡಿದವರು ಆಡಳಿತ ವಿಭಾಗದವರು. ಅಷ್ಟೆ ಹೊರತು ಮಾಲೀಕರ ಸ್ಥಾನದಲ್ಲಿರುವವರ ಹೆಸರು ಮುನ್ನೆಲೆಗೆ ಬಂದಿಲ್ಲ. ಕೆಳಹಂತದಲ್ಲಿಯೇ ನಡೆಯುವ ಈ ಕಾದಾಟದ ತಾರ್ಕಿಕ ಅಂತ್ಯವನ್ನು ಸದ್ಯಕ್ಕೆ ನಿರೀಕ್ಷಿಸುವ ಹಾಗೆಯೂ ಇಲ್ಲ. ಆದರೆ, ‘ಕದಿಯುವ’ ಅಥವಾ ‘ಕಾಪಿ ರೈಟ್ ಉಲ್ಲಂಘಿಸುವ’ ಸಂಗತಿಯನ್ನು ಔದ್ಯಮಿಕ ಪೈಪೋಟಿಯ ಒತ್ತಡಕ್ಕೆ ಬಿದ್ದಿರುವ ಪತ್ರಕರ್ತರು ಎಚ್ಚರಿಕೆ ಗಂಟೆಯಾಗಿ ಸ್ವೀಕರಿಸಬೇಕಿದೆ.