samachara
www.samachara.com
ರಫೇಲ್‌ ರನ್‌ವೇಯಲ್ಲಿ ಅಗಸ್ಟಾ ಲ್ಯಾಂಡಿಂಗ್‌: ಭಾರತಕ್ಕೆ ಬಂದಿಳಿದ ಮಧ್ಯವರ್ತಿ ಮಿಷಲ್!
COVER STORY

ರಫೇಲ್‌ ರನ್‌ವೇಯಲ್ಲಿ ಅಗಸ್ಟಾ ಲ್ಯಾಂಡಿಂಗ್‌: ಭಾರತಕ್ಕೆ ಬಂದಿಳಿದ ಮಧ್ಯವರ್ತಿ ಮಿಷಲ್!

ರಫೇಲ್‌ ಡೀಲ್‌ ವಿಚಾರದಲ್ಲಿ ಕಾಂಗ್ರೆಸ್‌ ಪಾಳಯದಿಂದ ಮುಜುಗರಕ್ಕೀಡಾಗುವ ಪ್ರಶ್ನೆಗಳನ್ನು ಎದುರಿಸುತ್ತಿರುವ ಬಿಜೆಪಿಗೆ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಎಂಬ ಹೊಸ ಅಸ್ತ್ರ ಸಿಕ್ಕಂತಾಗಿದೆ.

Team Samachara

ರಫೇಲ್‌ ಡೀಲ್‌ನಲ್ಲಿ ನಡೆದಿದೆ ಎನ್ನಲಾದ ಹಗರಣದ ವಿಚಾರ ಹಸಿ ಹಸಿಯಾಗಿರುವಾಗಲೇ ಯುಪಿಎ ಕಾಲದಲ್ಲಿ ನಡೆದ ಹಗರಣವೊಂದು ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದೆ.

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿಯ ಮಧ್ಯವರ್ತಿ ಎಂದುಕೊಳ್ಳಲಾಗಿರುವ ಬ್ರಿಟನ್‌ ಪ್ರಜೆ ಕ್ರಿಶ್ಚಿಯನ್‌ ಜೇಮ್ಸ್‌ ಮಿಷಲ್ ಭಾರತಕ್ಕೆ ಹಸ್ತಾಂತರವಾಗಿದ್ದಾರೆ. ಮಂಗಳವಾರ ಮಧ್ಯರಾತ್ರಿ ಅವರು ನವದೆಹಲಿಗೆ ಬಂದಿಳಿಯುತ್ತಿದ್ದಂತೆ ಪ್ರಕರಣಕ್ಕೆ ಮರುಜೀವ ಸಿಕ್ಕಿದೆ.

ಮಂಗಳವಾರ ಮಿಷಲ್‌ರನ್ನು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಗಿತ್ತು. ಅಲ್ಲಿಂದ ಅವರನ್ನು ಸಿಬಿಐ ತಂಡ ನವದೆಹಲಿಗೆ ಕರೆತಂದಿದೆ. ಅವರನ್ನು ಭಾರತಕ್ಕೆ ಹಸ್ತಾಂತರಿಸಬಹುದು ಎಂದು ನವೆಂಬರ್‌ನಲ್ಲಿ ಇಟಲಿಯ ಕ್ಯಾಸ್ಸೇಷನ್‌ ಕೋರ್ಟ್‌ (ಅತ್ಯುನ್ನತ ನ್ಯಾಯಾಲಯ) ತೀರ್ಪು ನೀಡಿತ್ತು. ಈ ತೀರ್ಪಿನ ಬೆನ್ನಿಗೆ ಅವರನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆಗಳು ಆರಂಭಗೊಂಡಿದ್ದವು. ಇದಕ್ಕಾಗಿ ವಾರದ ಮೊದಲೇ ಸಿಬಿಐ ತಂಡವೊಂದು ದುಬೈಗೆ ತೆರಳಿ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿತ್ತು. ಈ ತಂಡವೀಗ ಅವರನ್ನು ಭಾರತಕ್ಕೆ ಕರೆತಂದಿದೆ.

54 ವರ್ಷದ ಮಿಷಲ್‌ರನ್ನು ತನಗೆ ಹಸ್ತಾಂತರಿಸುವಂತೆ ಗಲ್ಫ್ ದೇಶಗಳಿಗೆ 2017ರಲ್ಲೇ ಭಾರತ ಮನವಿ ಮಾಡಿಕೊಂಡಿತ್ತು. ಅಗಸ್ಟಾ ವೆಸ್ಟ್‌ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಖರೀದಿ ಹಗರಣದ ತನಿಖೆ ನಡೆಸಿದ್ದ ಸಿಬಿಐ ಮತ್ತು ಇಡಿ (ಜಾರಿ ನಿರ್ದೇಶನಾಲಯ)ಯ ಶಿಫಾರಸ್ಸಿನ ಮೇಲೆ ಭಾರತ ಈ ಬೇಡಿಕೆಯನ್ನು ಇಟ್ಟಿತ್ತು.

ಏನಿದು ಹಗರಣ?

2009ರಲ್ಲಿ ಮನಮೋಹನ್‌ ಸಿಂಗ್‌ ಸರಕಾರ ಅಸ್ತಿತ್ವದಲ್ಲಿದ್ದಾಗ ಗಣ್ಯ ವ್ಯಕ್ತಿಗಳ ಪ್ರಯಾಣಕ್ಕೆ 12 ವಿವಿಐಪಿ ಹೆಲಿಕಾಪ್ಟರ್‌ಗಳ ಅಗತ್ಯವಿದೆ ಎಂದು ವಾಯು ಸೇನೆ ಪ್ರಸ್ತಾವನೆ ಸಲ್ಲಿಸಿತ್ತು. ಮರು ವರ್ಷವೇ ಈ ಪ್ರಸ್ತಾವನೆ ಮೇಲೆ ಡೀಲ್‌ನ್ನು ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪನಿಗೆ ನೀಡಲಾಗಿತ್ತು.

2010ರ ಫೆಬ್ರವರಿ 8ರಂದು ಈ ಡೀಲ್‌ಗೆ ಭಾರತ ಸರಕಾರ ಸಹಿ ಹಾಕಿತ್ತು. ಒಟ್ಟು 556.262 ಮಿಲಿಯನ್‌ ಯೂರೋ (3,600 ಕೋಟಿ ರೂಪಾಯಿ) ಮೊತ್ತದ ಡೀಲ್‌ ಇದಾಗಿತ್ತು.

ಬೆನ್ನಿಗೆ ಇದರಲ್ಲಿ ಹಗರಣ ನಡೆದಿದೆ ಎಂಬ ಆರೋಪಗಳು ಕೇಳಿ ಬಂದವು. ಅಗಸ್ಟಾ ವೆಸ್ಟ್‌ಲ್ಯಾಂಡ್‌ಗೆ ಡೀಲ್‌ ದೊರೆಯುವಂತೆ ಮಾಡಲು ತಾಂತ್ರಿಕ ನಿಯಮಗಳನ್ನು ಬದಲಾಯಿಸಲಾಗಿದೆ ಎಂಬುದು ಆರೋಪಗಳಲ್ಲಿ ಪ್ರಮುಖವಾಗಿತ್ತು. ಆರಂಭದಲ್ಲಿ 6,000 ಮೀಟರ್‌ ಎತ್ತರದಲ್ಲಿ ಹಾರುವ ಸಾಮರ್ಥ್ಯ ಇರುವ ಹೆಲಿಕಾಪ್ಟ್‌ರ್ಗಳಿಗೆ ಬೇಡಿಕೆ ಇಡಲಾಗಿತ್ತು. ಆದರೆ ಅಗಸ್ಟಾ ವೆಸ್ಟ್‌ಲ್ಯಾಂಡ್‌ಗೆ ಡೀಲ್‌ ಸಿಗಬೇಕು ಎಂಬ ಒಂದೇ ಕಾರಣಕ್ಕೆ ಇದನ್ನು 4,500 ಮೀಟರ್‌ಗಳಿಗೆ ಇಳಿಸಲಾಯಿತು. ಈ ರೀತಿಯ ತಾಂತ್ರಿಕ ಮಾರ್ಪಾಡುಗಳನ್ನು ಮಾಡಿ ಡೀಲ್‌ ಕುದುರುವಂತೆ ಮಾಡಲು ಲಂಚ ಪಾವತಿ ಮಾಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದವು.

ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾರ್ಚ್‌ 14, 2013ರಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿತ್ತು. ಐಎಎಫ್‌ ಮುಖ್ಯಸ್ಥ ಎಸ್‌.ಪಿ. ತ್ಯಾಗಿ ಮತ್ತು 12 ಮಂದಿ ಇತರರು ಹಾಗೂ ಕಂಪನಿಗಳನ್ನು ಇದರಲ್ಲಿ ಆರೋಪಿಗಳಾಗಿ ಹೆಸರಿಸಲಾಗಿತ್ತು. ಆರೋಪಿಗಳ ಪಟ್ಟಿಯಲ್ಲಿ ತ್ಯಾಗಿ ಕುಟುಂಬಸ್ಥರು ಮತ್ತು ಮಧ್ಯವರ್ತಿಗಳಾದ ಮಿಷಲ್‌, ಕಾರ್ಲೊ ಗೆರೋಸಾ ಮತ್ತು ಗೈಡೋ ಹಷ್ಕೆ ಹೆಸರುಗಳಿತ್ತು. ಇದೇ ಹೊತ್ತಿಗೆ ಲೇವಾದೇವಿ ಪ್ರತಿಬಂಧಕ ಕಾಯ್ದೆಯಡಿಯಲ್ಲಿ ‘ಇಡಿ’ಯೂ ಪ್ರಕರಣದ ತನಿಖೆಗೆ ಇಳಿಯಿತು.

ಇಡಿ ತನಿಖೆಯಲ್ಲಿ ಮಿಷಲ್‌ ತಮ್ಮ ದುಬೈ ಮೂಲದ ಗ್ಲೋಬಲ್‌ ಸರ್ವಿಸಸ್‌ ಸಂಸ್ಥೆ ಮೂಲಕ ದೆಹಲಿಯಲ್ಲಿರುವ ಮಾಧ್ಯವೊಂದಕ್ಕೆ ಹಣ ಪಾವತಿ ಮಾಡಿದ್ದು ತಿಳಿದು ಬಂದಿತ್ತು. ಈ ಹಣವನ್ನು ಮಿಷಲ್‌ಗೆ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಪಾವತಿ ಮಾಡಿತ್ತು. ಇದರಲ್ಲಿ ಇಬ್ಬರು ಭಾರತೀಯರೂ ಪಾಲುದಾರರಾಗಿದ್ದರು.

ಮುಂದೆ 2013ರ ಮಾರ್ಚ್‌ 25ರಂದು ಈ ಹೆಲಿಕಾಪ್ಟರ್‌ ಖರೀದಿ ಪ್ರಕ್ರಿಯೆಯಲ್ಲಿ ಹಗರಣ ನಡೆದಿದೆ ಎಂಬುದನ್ನು ಅಂದಿನ ರಕ್ಷಣಾ ಸಚಿವ ಎ.ಕೆ. ಆಂಟನಿ ಬಹಿರಂಗವಾಗಿ ಒಪ್ಪಿಕೊಂಡರು. ಬೆನ್ನಿಗೆ ದೇಶದಲ್ಲಿ ನಡೆಯುತ್ತಿದ್ದ ತನಿಖೆ ಮತ್ತು ವಿರೋಧ ಪಕ್ಷಗಳ ಆರೋಪದ ಮುಜುಗರದಿಂದ ತಪ್ಪಿಸಿಕೊಳ್ಳಲು ಯುಪಿಎ ಸರಕಾರ ಅನಿವಾರ್ಯವಾಗಿ ಒಪ್ಪಂದದಿಂದ ಹಿಂದೆ ಸರಿಯಿತು. ಜನವರಿ 1, 2014ರಲ್ಲಿ ಇಟಲಿ ಮೂಲದ ಪಿನ್ಮೆಕ್ಕಾನಿಕಾ ಕಂಪನಿಯ ಉಪ ಸಂಸ್ಥೆ ಬ್ರಿಟನ್‌ನ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಜತೆಗಿನ ‘12 ಎಡಬ್ಲ್ಯೂ-101 ವಿವಿಐಪಿ’ ಹೆಲಿಕಾಪ್ಟರ್‌ ಖರೀದಿಯ ಒಪ್ಪಂದವನ್ನು ಸರಕಾರ ರದ್ದುಗೊಳಿಸಿತು.

ಇದಾದ ನಂತರವೂ ಪ್ರಕರಣದ ತನಿಖೆಯನ್ನು ಮುಂದುವರಿಸಿದ ಸಿಬಿಐ ಒಟ್ಟಾರೆ ಡೀಲ್‌ನಲ್ಲಿ ಸುಮಾರು 398.21 ಮಿಲಿಯನ್‌ ಯೂರೋ (ಅಂದಾಜು 2,666 ಕೋಟಿ ರೂಪಾಯಿ) ನಷ್ಟವಾಗಿದೆ ಎಂದು ಆರೋಪಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸರಣಿ ಬೆಳವಣಿಗೆಗಳು ನಡೆದವು. 8 ಏಪ್ರಿಲ್‌ 2016ರಲ್ಲಿ ಭಾರತದ ರಾಜಕಾರಣಿಗಳು, ಅಧಿಕಾರಿಗಳು ಮತ್ತು ವಾಯುಸೇನೆ ಅಧಿಕಾರಿಗಳಿಗೆ ಲಂಚ ನೀಡಿದ್ದಕ್ಕಾಗಿ ಇಟಲಿ ನ್ಯಾಯಾಲಯ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಾರ್ಯನಿರ್ವಹಣಾಧಿಕಾರಿಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿತು.

ಇಲ್ಲಿ ಇಡಿ ಜೂನ್‌ 2016ರಲ್ಲಿ ಮಿಷಲ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿತು. ಇದರಲ್ಲಿ ಮಿಷಲ್‌ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪನಿಯಿಂದ 30 ಮಿಲಿಯನ್‌ ಯೂರೋ (ಸುಮಾರು 225 ಕೋಟಿ ರೂ.) ಹಣವನ್ನು ಲಂಚದ ರೂಪದಲ್ಲಿ ಪಡೆದಿದ್ದಾರೆ ಎಂದು ಇದರಲ್ಲಿ ಸ್ಪಷ್ಟವಾಗಿ ಹೇಳಿತ್ತು. ಈ ಹಣ, ಭಾರತದಲ್ಲಿ 12 ಹೆಲಿಕಾಪ್ಟರ್‌ ಡೀಲ್‌ ಕುದಿರಿಸಿದ್ದಕ್ಕಾಗಿ ಸಲ್ಲಿಸಲಾದ ಕಿಕ್‌ಬ್ಯಾಕ್ ಹಣ ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.

2016 ರ ಡಿಸೆಂಬರ್‌ನಲ್ಲಿ ಬಂಧಿತರಾಗಿದ್ದ ಮಾಜಿ ಐಎಎಫ್‌ ಮುಖ್ಯಸ್ಥ ಎಸ್‌.ಪಿ. ತ್ಯಾಗಿ
2016 ರ ಡಿಸೆಂಬರ್‌ನಲ್ಲಿ ಬಂಧಿತರಾಗಿದ್ದ ಮಾಜಿ ಐಎಎಫ್‌ ಮುಖ್ಯಸ್ಥ ಎಸ್‌.ಪಿ. ತ್ಯಾಗಿ
/ದಿ ವೀಕ್‌

2016ರ ಡಿಸೆಂಬರ್‌ ಹೊತ್ತಿಗೆ ಅಖಾಡಕ್ಕಿಳಿದ ಸಿಬಿಐ, ಮಾಜಿ ವಾಯುಸೇನೆ ಮುಖ್ಯಸ್ಥ ಎಸ್‌ಪಿ ತ್ಯಾಗಿ ಮತ್ತು ಅವರ ಕುಟುಂಬಸ್ಥರು, ವಕೀಲರನ್ನು ಬಂಧಿಸಿತು. 2017ರ ಸೆಪ್ಟಂಬರ್‌ಲ್ಲಿ ತ್ಯಾಗಿ ಮತ್ತು ಇತರ 9 ಜನರ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌ ಕೂಡ ಸಲ್ಲಿಸಿದೆ.

ಇದೀಗ ಮಹತ್ವದ ಬೆಳವಣಿಗೆಯಲ್ಲಿ ಪ್ರಕರಣದ ಮೂವರು ಮಧ್ಯವರ್ತಿಗಳಲ್ಲಿ ಒಬ್ಬರಾದ ಮಿಷಲ್‌ ಭಾರತಕ್ಕೆ ಹಸ್ತಾಂತರವಾಗಿದ್ದಾರೆ. ಗೈಡೋ ಹಷ್ಕೆ ಮತು ಕಾರ್ಲೊ ಗೆರೋಸಾ ತಲೆ ಮರೆಸಿಕೊಂಡಿದ್ದಾರೆ. ಇಬ್ಬರ ವಿರುದ್ಧವೂ ಇಡಿ ಮತ್ತು ಸಿಬಿಐ ಎರಡೂ ಸಂಸ್ಥೆಗಳ ಮನವಿ ಮೇರೆಗೆ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಿವೆ. ಭಾರತದಲಿ ಇಬ್ಬರ ಮೇಲೂ ಜಾಮೀನು ರಹಿತ ವಾರಂಟ್‌ ಜಾರಿಯಲ್ಲಿದೆ. ಆದರೆ ಅವರು ಮಾತ್ರ ಇನ್ನೂ ಸಿಕ್ಕಿಲ್ಲ.

ಈ ಡೀಲ್‌ ಕುದುರಲು ಅಗಸ್ಟಾ ವೆಸ್ಟ್‌ಲ್ಯಾಂಡ್‌ ಸುಮಾರು 423 ಕೋಟಿ ರೂಪಾಯಿ ಕಿಕ್‌ಬ್ಯಾಕ್‌ ನೀಡಿದ ಆರೋಪ ಎದುರಿಸುತ್ತಿದೆ. ಅದರಲ್ಲಿ ಹೆಚ್ಚಿನ ಹಣವನ್ನು ಇದೇ ಮಿಷಲ್‌ ನಿರ್ವಹಣೆ ಮಾಡಿದ್ದಾನೆ ಎನ್ನಲಾಗಿದ್ದು ವಿಚಾರಣೆ ವೇಳೆ ಆತನ ನೀಡಲಿರುವ ಮಾಹಿತಿಗಳು ಪ್ರಾಮುಖ್ಯತೆ ಪಡೆಯಲಿವೆ.

ಕಾಂಗ್ರೆಸ್‌ಗೆ ಮುಖಭಂಗ:

ಈ ಬೆಳವಣಿಗೆ ರಫೇಲ್‌ ಡೀಲ್ ಸಂಬಂಧ ಕೇಂದ್ರ ಸರಕಾರವನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್‌ನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲಿದೆ ಎಂದುಕೊಳ್ಳಲಾಗಿದೆ. “ ಮಿಷಲ್‌ ಹಸ್ತಾಂತರ ಭಾರತದ ರಾಜತಾಂತ್ರಿಕ ಗೆಲುವು,” ಎಂದು ಈಗಾಗಲೇ ಬಿಜೆಪಿ ಬಾಯಿ ಬಡಿದುಕೊಳ್ಳಲು ಆರಂಭಿಸಿದೆ. ಜತೆಗೆ ‘ಇದು ಕಾಂಗ್ರೆಸ್‌ಗೆ ಭಾರಿ ಸಮಸ್ಯೆ ತಂದೊಡ್ಡಲಿದೆ’ ಎಂದು ಬಿಜೆಪಿ ವಕ್ತಾರ ಜಿವಿಎಲ್‌ ನರಸಿಂಹ ರಾವ್‌ ಹೇಳಿದ್ದಾರೆ.

ಈಗಾಗಲೇ ರಫೇಲ್‌ ಡೀಲ್‌ ವಿಚಾರದಲ್ಲಿ ಕಾಂಗ್ರೆಸ್‌ ಪಾಳಯದಿಂದ ಮುಜುಗರಕ್ಕೀಡಾಗುವ ಪ್ರಶ್ನೆಗಳನ್ನು ಎದುರಿಸುತ್ತಿರುವ ಬಿಜೆಪಿ, ಅದೇ ದಾಳವನ್ನು ಕಾಂಗ್ರೆಸ್‌ ಪಕ್ಷದ ವಿರುದ್ಧ ಅಗಸ್ಟಾ ವೆಸ್ಟ್‌ಲ್ಯಾಂಡ್‌ ವಿಚಾರದಲ್ಲಿ ಉರುಳಿಸಲು ಮುಂದಾಗಿದೆ.

ಚಿತ್ರ ಕೃಪೆ: ಇಂಡಿಯನ್‌ ಎಕ್ಸ್‌ಪ್ರೆಸ್‌