ಪ್ರಾಕೃತಿಕ ವಿಕೋಪ ತಂದಿಟ್ಟ ದುರಂತ,  ನೆಲಕಚ್ಚಿದ ಕೊಡಗು ಪ್ರವಾಸೋದ್ಯಮ
COVER STORY

ಪ್ರಾಕೃತಿಕ ವಿಕೋಪ ತಂದಿಟ್ಟ ದುರಂತ, ನೆಲಕಚ್ಚಿದ ಕೊಡಗು ಪ್ರವಾಸೋದ್ಯಮ

ಎರಡು ದಶಕಗಳಿಂದ ನಿರಂತರವಾಗಿ ಬೆಳೆಯುತ್ತಿದ್ದ ಕೊಡಗಿನ ಪ್ರವಾಸೋದ್ಯಮವನ್ನು ನಂಬಿ ನೂರಾರು ಹೋಂ ಸ್ಟೇಗಳು, ಹೋಟೆಲ್‌ಗಳು ಇಲ್ಲಿ ತಲೆ ಎತ್ತಿದ್ದವು. ಇವೆಲ್ಲಾ ಇದೀಗ ಜನರಿಲ್ಲದೆ ಭಣಗುಡುತ್ತಿವೆ.

ಕಳೆದ ಎರಡು ದಶಕಗಳಿಂದ ಗಣನೀಯ ಬೆಳವಣಿಗೆ ದಾಖಲಿಸಿದ್ದ ಕೊಡಗಿನ ಪ್ರವಾಸೋದ್ಯಮ ಇದೀಗ ನೆಲಕಚ್ಚಿದೆ. ಇದಕ್ಕೆ ಕಾರಣ ಆಗಸ್ಟ್‌ನಲ್ಲಿ ಸುರಿದ ಮಹಾಮಳೆ ಹಾಗೂ ಭೀಕರ ಭೂಕುಸಿತ. ಇವುಗಳ ನೇರ ಪರಿಣಾಮವೀಗ ಇಲ್ಲಿನ ಜನರ ಮೇಲೆ ಬೀಳುತ್ತಿದೆ.

ಎರಡು ದಶಕಗಳಿಂದ ನಿರಂತರವಾಗಿ ಬೆಳೆಯುತ್ತಿದ್ದ ಕೊಡಗಿನ ಪ್ರವಾಸೋದ್ಯಮವನ್ನು ನಂಬಿ ನೂರಾರು ಹೋಂ ಸ್ಟೇಗಳು, ಹೋಟೆಲ್‌ಗಳು ಇಲ್ಲಿ ತಲೆ ಎತ್ತಿದ್ದವು. ಇದರಿಂದಲೇ ಸಾವಿರಾರು ಜನರು ಬದುಕು ಕಟ್ಟಿಕೊಂಡಿದ್ದರು. ಆದರೆ ಇದೀಗ ಪ್ರಾಕೃತಿಕ ದುರಂತದ ನಂತರ ಜಿಲ್ಲೆಯತ್ತ ಪ್ರವಾಸಿಗರು ಬರುವುದು ಕಡಿಮೆಯಾಗಿದ್ದು ಜನರು ಹಣಕಾಸಿನ ಮುಗ್ಗಟ್ಟು ಅನುಭವಿಸುತ್ತಿದ್ದಾರೆ.

ಒಂದು ಕಾಲದಲ್ಲಿ ಕಾಫಿ, ಭತ್ತ ಹಾಗೂ ಇತರ ಕೃಷಿ ಉತ್ಪನ್ನಗಳ ದರ ಕುಸಿತವಾದಾಗ ಇಲ್ಲಿಯ ಜನರನ್ನು ಸಂಜೀವಿನಿಯಂತೆ ಕೈ ಹಿಡಿದದ್ದೇ ಪ್ರವಾಸೋದ್ಯಮ. ಇದರ ನಡುವೆಯೂ ಕೃಷಿ ನಂಬಿಕೊಂಡು ಒಂದಷ್ಟು ಜನರು ಜೀವನ ಸಾಗಿಸುತ್ತಿದ್ದರು. ಆದರೆ ಭೀಕರ ಮಳೆ ಭೂ ಕುಸಿತದಿಂದಾಗಿ ಕೊಡಗಿನಲ್ಲಿ ಸಾವಿರಾರು ಜನರು ಸಂತ್ರಸ್ಥರಾಗಿದ್ದಾರೆ. ಸುಮಾರು 2,500 ಎಕರೆಗಳಷ್ಟು ಕಾಫಿ ತೋಟ ಭೂ ಕುಸಿತದಿಂದಾಗಿ ಸಂಪೂರ್ಣ ನಾಶವಾಗಿದೆ. ಕೊಡಗಿನ ಕಾಫಿ ಬೆಳೆಯ ವಿಸ್ತೀರ್ಣ ಸುಮಾರು ಒಂದು ಲಕ್ಷ ಹೆಕ್ಟೇರ್‌ಗಳಿಗೂ ಅಧಿಕವಾಗಿರುವುದರಿಂದ ಇದೇನು ಲೆಕ್ಕಕ್ಕೆ ಬರುವುದಿಲ್ಲ. ಆದರೆ ಮಳೆಯಿಂದಾಗಿ ಈ ಬಾರಿ ಸುಮಾರು ಶೇಕಡಾ 50 ರಷ್ಟು ಕಾಫಿ ಬೆಳೆಯೇ ನಾಶವಾಗಿದೆ. ಇದೀಗ ಅತ್ತ ಬೆಳೆಯೂ ಇಲ್ಲ, ಇತ್ತ ಪ್ರವಾಸೋದ್ಯಮವೂ ಇಲ್ಲ ಎಂಬಂತಾಗಿದೆ ಕೊಡಗಿನವರ ಪರಿಸ್ಥಿತಿ.

“ಪತ್ರಿಕೆ ಹಾಗೂ ಟಿವಿ ಮಾಧ್ಯಮದಲ್ಲಿ ಭೂ ಕುಸಿತದ ನಂತರ ಪ್ರಕಟಿಸಿದ ಅತಿರಂಜಿತ ವರದಿಗಳಿಂದಾಗಿಯೇ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಕೊಡಗಿಗೆ ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಹೀಗಿರುವಾಗ ಟಿವಿ ಚಾನೆಲ್ ಗಳಲ್ಲಿ ಕೊಡಗು ಮುಳುಗಿಯೇ ಹೋಯ್ತು, ಕೊಚ್ಚಿಕೊಂಡೇ ಹೋಯಿತು ಎಂದು ಅತಿರಂಜಿತವಾಗಿ ವರದಿ ಮಾಡಿದ ಕಾರಣ ಪ್ರವಾಸಿಗರು ಬರಲು ಹಿಂದೇಟು ಹಾಕುತ್ತಿದ್ದಾರೆ,” ಎಂದು ಅಳಲು ತೋಡಿಕೊಳ್ಳುತ್ತಾರೆ ಗೋಣಿಕೊಪ್ಪಲಿನ ಹೋಂ ಸ್ಟೇ ಮಾಲೀಕರಾದ ಅಂಜಪರವಂಡ ಚಂಗಪ್ಪ.

ಕೊಡಗಿನ ಖ್ಯಾತ ಚಾರಣ ಪ್ರದೇಶ ಮಂದಲ್‌ಪಟ್ಟಿ
ಕೊಡಗಿನ ಖ್ಯಾತ ಚಾರಣ ಪ್ರದೇಶ ಮಂದಲ್‌ಪಟ್ಟಿ
/ಕೂರ್ಗ್‌ ಟೂರಿಸಂ

ಈ ಸಮಸ್ಯೆ ನಿವಾರಣೆಗೆ ‘ಕೊಡಗು ಹೋಂ ಸ್ಟೇ ಮತ್ತು ಟೂರಿಸಂ ಅಸೋಸಿಯೇಷನ್’ ಮತ್ತು ಪ್ರವಾಸೋದ್ಯಮ ಇಲಾಖೆಯವರು ಜಿಲ್ಲೆಯ ಗಣ್ಯ ವ್ಯಕ್ತಿಗಳಿಂದ 30 ಸೆಕೆಂಡ್‌ಗಳ ಕಿರುಚಿತ್ರ ತಯಾರಿಸಿ ‘ಕೊಡಗು ಸಹಜ ಸ್ಥಿತಿಗೆ ಮರಳಿದೆ’ ಎಂದು ಪ್ರವಾಸಿಗರನ್ನು ಅಹ್ವಾನಿಸುವ ವಿಡಿಯೋಗಳನ್ನು ವಾಟ್ಸ್‌ಅಪ್, ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರಾದರೂ ಇದು ನಿರೀಕ್ಷಿತ ಫಲ ನೀಡಿಲ್ಲ. ಮಳೆ ನಿಂತ ನಂತರ ನೂರಾರು ಕುತೂಹಲಿಗಳು, ಪ್ರವಾಸಿಗರು ಭೂಕುಸಿತದ ಸ್ಥಳಗಳಿಗೆ ಭೇಟಿ ನೀಡಿ ಸೆಲ್ಫೀ ತೆಗೆಸಿಕೊಳ್ಳುವಲ್ಲಿ ಆಸಕ್ತಿ ತೋರಿದರಾದರೂ ಹೋಂ ಸ್ಟೇಗಳು ಖಾಲಿಯೇ ಇವೆ.

“ಮೊದಲು ಪ್ರತಿನಿತ್ಯ ಪ್ರವಾಸಿಗರು ಬರುತ್ತಿದ್ದರು. ವಾರಾಂತ್ಯಗಳಲ್ಲಿ ರೂಂ ಖಾಲಿ ಉಳಿಯುವ ಪ್ರಸಂಗಗಳೇ ಇರುತ್ತಿರಲಿಲ್ಲ. ಈಗ ಮಾತ್ರ ವಾರಂತ್ಯದಲ್ಲೂ ರೂಂ ಖಾಲಿ ಉಳಿಯುತ್ತಿದೆ,” ಎಂದು ಅಳಲು ತೋಡಿಕೊಳ್ಳುತ್ತಾರೆ ಮಡಿಕೇರಿ ನಗರದ ಹೊರವಲಯದ ಹೋಂ ಸ್ಟೇ ಮಾಲೀಕರಾದ ಜ್ಯೋತಿ ಉದಯ್. ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ದಸರಾ ಸಂದರ್ಭದಲ್ಲೂ ಹೋಂ ಸ್ಟೇ ಖಾಲಿ ಇತ್ತು ಎನ್ನುತ್ತಾರೆ ಅವರು.

ಒಂದು ಅಂದಾಜಿನ ಪ್ರಕಾರ ಮಡಿಕೇರಿ ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿ ಹೋಟೆಲ್ ಹಾಗೂ ಹೋಂ ಸ್ಟೇ ಮಾಲೀಕರಿಗೆ ದಸರಾ ಸೀಸನ್‌ ಒಂದರಲ್ಲೇ ಸುಮಾರು 1.5 ಕೋಟಿ ರೂಪಾಯಿ ನಷ್ಟವಾಗಿದೆ ಎಂಬುದು ರಾಜ್ಯ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಜಿ ಕುಮಾರ್ ಪುಷ್ಕರ್ ಅವರ ಲೆಕ್ಕಾಚಾರ. ಕಳೆದ ವಾರ ಜಿಲ್ಲೆಗೆ ಭೇಟಿ ನೀಡಿದ ಅವರು ಪ್ರವಾಸಿ ಕೇಂದ್ರಗಳಿಗೆ ತೆರಳಲು ಮೂರು ಬಸ್‌ಗಳನ್ನು ಇಲಾಖೆ ವತಿಯಿಂದ ಓಡಿಸಲಾಗುತ್ತಿದೆ. ಪ್ರವಾಸಿಗರನ್ನು ಸೆಳೆಯಲು ಇಲಾಖೆ ಎಲ್ಲ ಪ್ರಯತ್ನವನ್ನೂ ಮಾಡುತ್ತಿದ್ದು, ಜಿಲ್ಲಾಡಳಿತ ಕೊಡಗು ಉತ್ಸವ ಏರ್ಪಡಿಸಿದರೆ ಸಹಯೋಗ ನೀಡುವುದಾಗಿಯೂ ಭರವಸೆ ನೀಡಿದ್ದಾರೆ.

ಕಳೆದ ಮಾರ್ಚ್ 31 ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಜಿಲ್ಲೆಗೆ ಸುಮಾರು 18 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದು ಪ್ರವಾಸೋದ್ಯಮ ಇಲಾಖೆಯೇ ನೀಡಿರುವ ಅಂಕಿ ಅಂಶ. ಮಡಿಕೇರಿಗೆ ಸರಾಸರಿ ದಿನಕ್ಕೆ 3 ಸಾವಿರ ಪ್ರವಾಸಿಗರು ಆಗಮಿಸುತ್ತಾರೆ. ಕಳೆದ ವರ್ಷದ ವಾರಾಂತ್ಯಗಳಲ್ಲಿ ಈ ಸಂಖ್ಯೆ 5 ರಿಂದ 8 ಸಾವಿರಕ್ಕೂ ಏರುತಿತ್ತು. ದೀರ್ಘ ರಜೆ ಇದ್ದ ಸಮಯದಲ್ಲಿ ಸಂಜೆ ಹೊತ್ತು ರಾಜಾಸೀಟು ರಸ್ತೆಯಲ್ಲಿ ಕಾಲಿಡುವುದಕ್ಕೂ ಸ್ಥಳವಿರುತ್ತಿರಲಿಲ್ಲ. ಆ ದಿನಗಳು ಮತ್ತೆ ಬರಲಿ ಎಂದು ಇಲ್ಲಿನ ಜನರು ಆಶಿಸುತ್ತಿದ್ದಾರೆ.

ಚಿತ್ರ ಕೃಪೆ: ಟ್ರಾವೆಲ್‌ ನೋಟ್ಸ್‌