ಕಸದ ನಿರ್ವಹಣೆಗೆ ಫ್ರಾನ್ಸ್‌ ಪ್ರವಾಸ; ಮನೆ ಗೆಲ್ಲದೆ ಮಾರು ಗೆಲ್ಲಲು ಹೊರಟ ಪರಮೇಶ್ವರ್‌!
COVER STORY

ಕಸದ ನಿರ್ವಹಣೆಗೆ ಫ್ರಾನ್ಸ್‌ ಪ್ರವಾಸ; ಮನೆ ಗೆಲ್ಲದೆ ಮಾರು ಗೆಲ್ಲಲು ಹೊರಟ ಪರಮೇಶ್ವರ್‌!

ಕಸದ ನಿರ್ವಹಣೆಯಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ಹೀಗೇ ಮುಂದುವರಿದರೆ ಸಿಟ್ಟಿಗೆದ್ದ ಜನ ಕಸದ ಬುಟ್ಟಿಗಳ ಸಮೇತ ಬಿಬಿಎಂಪಿ ಕಚೇರಿಗಳಿಗೆ ನುಗ್ಗುವ ದಿನಗಳೂ ದೂರವಿಲ್ಲ.

ಕಸದ ವೈಜ್ಞಾನಿಕ ನಿರ್ವಹಣೆಯ ಬಗ್ಗೆ ಅಧ್ಯಯನ ನಡೆಸಲು ಬೆಂಗಳೂರು ಅಭಿವೃದ್ಧಿ ಸಚಿವ ಡಾ. ಜಿ. ಪರಮೇಶ್ವರ್‌ ಫ್ರಾನ್ಸ್‌ ಪ್ರವಾಸ ಹೊರಟಿದ್ದಾರೆ. ಈ ಹಿಂದೆ ಹಲವು ಬಾರಿ ಬಿಬಿಎಂಪಿ ತ್ಯಾಜ್ಯ ನಿರ್ವಹಣೆಗಾಗಿ ಅಧಿಕಾರಿಗಳು ಹಾಗೂ ಪೌರಕಾರ್ಮಿಕರಿಗೆ ದೇಶದ ವಿವಿಧ ರಾಜ್ಯಗಳ ಹಾಗೂ ವಿದೇಶಗಳ ಪ್ರವಾಸ ಮಾಡಿಸಿದೆ. ಈಗ ಕಸದ ಅಧ್ಯಯನಕ್ಕಾಗಿ ಅಭಿವೃದ್ಧಿ ಸಚಿವರು ಫ್ರಾನ್ಸ್‌ನತ್ತ ಮುಖ ಮಾಡಿದ್ದಾರೆ.

ಫ್ರಾನ್ಸ್‌ ಮಾತ್ರವಲ್ಲ ಸಿಂಗಪುರ, ಕೊಯಮತ್ತೂರು ಎಂದು ಬೆಂಗಳೂರಿನ ಕಸದ ನಿರ್ವಹಣೆಗೆ ಬಿಬಿಎಂಪಿ ವತಿಯಿಂದ ಈಗಾಗಲೇ ಹಲವು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಪ್ರವಾಸ ನಡೆದಿದೆ. ಆದರೆ, ಬೆಂಗಳೂರಿನ ಕಸದ ಸಮಸ್ಯೆ ಇನ್ನೂ ಪೂರ್ತಿಯಾಗಿ ಬಗೆಹರಿದಿಲ್ಲ. ಇಂದಿಗೂ ರಸ್ತೆ ಬದಿಗಳಲ್ಲಿ, ಖಾಲಿ ನಿವೇಶನಗಳಲ್ಲಿ ಕಸ ಸುರಿಯುವುದು ಬೆಂಗಳೂರಿನ ಹಲವು ಭಾಗಗಳಲ್ಲಿ ನಿಂತಿಲ್ಲ.

ಬೆಂಗಳೂರಿನ ಕಸ ಬೀದಿಗೆ ಬೀಳಲು ಕಾರಣ ಹುಡುಕ ಹೊರಟರೆ ಸಮಸ್ಯೆಯ ಮೂಲ ಆರಂಭವಾಗುವುದು ಮನೆಗಳಿಂದ. ಮನೆ ಮನೆಗಳಿಂದ ಕಸ ಸಂಗ್ರಹಿಸುವ ವ್ಯವಸ್ಥೆಯನ್ನು ಬಿಬಿಎಂಪಿ ಅಚ್ಚುಕಟ್ಟಾಗಿ ನಿರ್ವಹಿಸಿದರೆ ಕಸದ ಸಮಸ್ಯೆ ಅರ್ಧದಷ್ಟು ಕಡಿಮೆಯಾದಂತೆ. ಆದರೆ, ಮನೆ ಮನೆಗಳಿಂದ ಕಸ ಸಂಗ್ರಹದಲ್ಲೇ ಬಿಬಿಎಂಪಿ ಸೋಲುತ್ತಿದೆ. ಎಲ್ಲಾ ವಾರ್ಡ್‌ಗಳಲ್ಲೂ ಮನೆ ಮನೆಗಳಿಂದ ಕಸ ಸಂಗ್ರಹ ಹಾಗೂ ಬೀದಿ ಗುಡಿಸುವ ವ್ಯವಸ್ಥೆಯನ್ನು ಇನ್ನೂ ಬಿಬಿಎಂಪಿ ಪೂರ್ತಿಯಾಗಿ ಜಾರಿಗೆ ತರಲು ಸಾಧ್ಯವಾಗಿಲ್ಲ. ಹೀಗಾಗಿ ರಸ್ತೆ, ಖಾಲಿ ನಿವೇಶನಗಳು ಕಸ ತುಂಬಿಕೊಂಡು ಕೊಳೆಯುತ್ತಿವೆ.

ಮೇರೆ ಮೀರಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಪ್ರತಿದಿನ 6000 ಟನ್‌ಗೂ ಹೆಚ್ಚು ಕಸ ಉತ್ಪಾದನೆಯಾಗುತ್ತದೆ. ಆದರೆ, ಈ ಪ್ರಮಾಣದ ಕಸದ ನಿರ್ವಹಣೆಗೆ ಇಡೀ ಬೆಂಗಳೂರಿನಲ್ಲಿ ಮೂಲದಲ್ಲಿ ಕಸ ಸಂಗ್ರಹವನ್ನು ವ್ಯವಸ್ಥಿತವಾಗಿ ಜಾರಿಗೆ ತರಲು ಸಾಧ್ಯವಾಗಿಲ್ಲ. ಹಲವು ಕಡೆಗಳಲ್ಲಿ ಅಧಿಕಾರಿಗಳೂ ಈ ಬಗ್ಗೆ ಗಂಭೀರವಾಗಿಲ್ಲ. ಘನತ್ಯಾಜ್ಯ ನಿರ್ವಹಣೆಯ ಹೊಣೆಯನ್ನು ತಳಮಟ್ಟದಲ್ಲಿ ಕಿರಿಯ ಆರೋಗ್ಯ ನಿರೀಕ್ಷಕರಿಗೆ ವಹಿಸಲಾಗಿದೆ. ಆದರೆ, ಎಲ್ಲಾ ಕಡೆಯೂ ತ್ಯಾಜ್ಯ ಸಂಗ್ರಹಣೆಯ ವ್ಯವಸ್ಥೆ ಏಕರೂಪವಾಗಿಲ್ಲ.

“ಬೀದಿಯಲ್ಲಿ ಕಸ ಎಸೆದರೆ ದಂಡ, ಜೈಲು ಶಿಕ್ಷೆ ಎಂದು ಹೆದರಿಸುವ ಬಿಬಿಎಂಪಿ ಮನೆ ಮನೆಗಳಿಂದ ಸರಿಯಾಗಿ ಕಸ ಸಂಗ್ರಹಿಸಲು ವಿಫಲವಾಗಿದೆ. ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿಸಿದರೂ ಕಸ ಸಂಗ್ರಹಣೆಯ ವ್ಯವಸ್ಥೆ ಸರಿಯಾಗಿಲ್ಲದಿರುವುದರಿಂದ ಕಸವನ್ನು ರಸ್ತೆಯ ಮೂಲೆಗೆ ಸುರಿಯುವುದು ಅನಿವಾರ್ಯವಾಗಿದೆ. ಮನೆ ಮನೆಗಳಿಂದ ಕಸ ಸಂಗ್ರಹ ಮಾಡದಿದ್ದರೆ ಕಸವನ್ನು ಏನು ಮಾಡಬೇಕು” ಎಂಬ ಪ್ರಶ್ನೆ ನಂದಿನಿ ಬಡಾವಣೆಯ ಕೃಷ್ಣಪ್ಪ ಅವರದ್ದು.

ನಂದಿನಿ ಬಡಾವಣೆಯ ಖಾಲಿ ನಿವೇಶನವೊಂದರಲ್ಲಿ ಬಿದ್ದಿರುವ ಕಸದ ರಾಶಿ
ನಂದಿನಿ ಬಡಾವಣೆಯ ಖಾಲಿ ನಿವೇಶನವೊಂದರಲ್ಲಿ ಬಿದ್ದಿರುವ ಕಸದ ರಾಶಿ

“ಒಣ ಕಸವನ್ನು ವಾರಗಟ್ಟಲೆ ಇಟ್ಟುಕೊಳ್ಳಬಹುದು ಅಥವಾ ಪ್ಲಾಸ್ಟಿಕ್‌ ಪ್ರತ್ಯೇಕವಾಗಿಸಿ ಗುಜುರಿಗೆ ಹಾಕಬಹುದು. ಆದರೆ, ಹಸಿ ಕಸ ಒಂದು ದಿನ ಬಿಟ್ಟರೆ ಕೊಳೆಯಲು ಆರಂಭಿಸುತ್ತದೆ. ಮೂರು ದಿನ ಬಿಟ್ಟರೆ ಹುಳುಗಳು ಉತ್ಪತ್ತಿಯಾಗುತ್ತವೆ. ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದರೂ ಎರಡು ದಿನ ಕಸ ಸಂಗ್ರಹ ನಡೆಯುತ್ತದೆ. ಮತ್ತೆ ಕಸದ ಗಾಡಿ ನಾಪತ್ತೆಯಾಗುತ್ತವೆ. ಬಿಬಿಎಂಪಿಯ ಸಹಾಯ ಆಪ್‌ ಮೂಲಕ ದೂರು ದಾಖಲಿಸಿದರೂ ಸಮಸ್ಯೆ ಬಗೆ ಹರಿಯುತ್ತಿಲ್ಲ” ಎನ್ನುತ್ತಾರೆ ಅವರು.

ಕೇವಲ ನಂದಿನಿ ಬಡಾವಣೆ ಮಾತ್ರವಲ್ಲ ನಗರದ ಹಲವು ಕಡೆಗಳಲ್ಲಿ ಹಾಗೂ ಹೊರ ವಲಯಗಳಲ್ಲಿ ಇದೇ ಸಮಸ್ಯೆ ಇದೆ. ಹೊರ ವಲಯಗಳಲ್ಲಿ ಕಸ ಸಂಗ್ರಹಣೆಯ ವ್ಯವಸ್ಥೆಯ ಸಮಸ್ಯೆ ಇರುವುದನ್ನು ಖುದ್ದು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆಯ ವಿಶೇಷ ಆಯುಕ್ತ ರಂದೀಪ್‌ ಅವರೇ ಒಪ್ಪಿಕೊಳ್ಳುತ್ತಾರೆ.

ನಗರದ ಹೊರ ವಲಯಗಳಲ್ಲಿ ಮನೆ ಮನೆಗಳಿಂದ ಕಸ ಸಂಗ್ರಹಣೆ ಸಮಸ್ಯೆ ಇರುವ ಬಗ್ಗೆ ದೂರುಗಳು ನನ್ನ ಗಮನಕ್ಕೂ ಬಂದಿವೆ. ಮನೆ ಮನೆಗಳಿಂದ ಕಸ ಸಂಗ್ರಹಣೆಯ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಸ್ಥಳೀಯ ಮಟ್ಟದಲ್ಲಿ ಕಸ ನಿರ್ವಹಣೆಯ ಹೊಣೆ ಅವರದ್ದೇ. ‘ಬಿಬಿಎಂಪಿ ಸಹಾಯ’ ಆಪ್‌ನಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಹೀಗಾಗಿ ಕಸದ ನಿರ್ವಹಣೆಗೆಂದು ಪ್ರತ್ಯೇಕ ಆಪ್‌ ರೂಪಿಸುತ್ತಿದ್ದೇವೆ.
- ಡಿ. ರಂದೀಪ್, ವಿಶೇಷ ಆಯುಕ್ತ, ಘನತ್ಯಾಜ್ಯ ನಿರ್ವಹಣೆ

ಮನೆ ಮನೆಗಳಿಂದ ಕಸ ಸಂಗ್ರಹಣೆಯ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು ಬೆಂಗಳೂರು ಅಭಿವೃದ್ಧಿ ಸಚಿವರು ಮೊದಲು ಸರಿಯಾಗಿ ಬೆಂಗಳೂರಿನ ಪ್ರವಾಸ ಮಾಡಬೇಕಿದೆ. ಬೆಂಗಳೂರಿನ ಹೊರ ವಲಯಗಳಿಗೆ ಹಾಗೂ ಕಸ ವಿಲೇವಾರಿಯ ಯಾರ್ಡ್‌ಗಳಿಗೆ ದಿಢೀರ್‌ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕಿದೆ. ಸಿಂಗಪುರ, ಫ್ರಾನ್ಸ್‌ ಪ್ರವಾಸಗಳಿಂದ ಸರಕಾರದ ಲೆಕ್ಕದಲ್ಲಿ ವಿದೇಶಿ ಪ್ರವಾಸ ಮಾಡುವುದಕ್ಕಿಂತ ಮೊದಲು ಬೆಂಗಳೂರು ಪ್ರವಾಸ ಮಾಡುವ ಕಡೆಗೆ ಅಭಿವೃದ್ಧಿ ಸಚಿವರು ಗಮನ ಹರಿಸಬೇಕಿದೆ.

ಬೆಂಗಳೂರಿನಲ್ಲಿ ಎಲ್ಲೆಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿಸಂಘಗಳು ಕಸದ ನಿರ್ವಹಣೆಯ ವಿಚಾರದಲ್ಲಿ ಸಹಭಾಗಿಯಾಗಿವೆಯೋ ಅಲ್ಲಿ ಮಾತ್ರ ಕಸದ ನಿರ್ವಹಣೆ ಆಗುತ್ತಿದೆ.ಉಳಿದ ಭಾಗಗಳಲ್ಲಿ ಕಸ ಸಂಗ್ರಹಣೆ ಸರಿಯಾಗಿ ನಡೆಯುತ್ತಿಲ್ಲ. ಕಸ ರಸ್ತೆಗೆ ಎಸೆದರೆ ಕ್ರಿಮಿನಲ್‌ ಪ್ರಕರಣದಾಖಲಿಸುತ್ತೇವೆ ಎಂದು ಹೆಸರಿಸುವ ಸರಕಾರ ಮನೆ ಮನೆಗಳಿಂದ ಕಸ ಸಂಗ್ರಹಣೆಯ ವ್ಯವಸ್ಥೆಯ ಬಗ್ಗೆ ಗಂಭೀರವಾಗಿಲ್ಲ.ಮನೆಗಳಿಂದ ಕಸವನ್ನೂ ಸಂಗ್ರಹಿಸದೆ ರಸ್ತೆಗೂ ಚೆಲ್ಲದೆ ಜನ ಕಸ ಮನೆಯಲ್ಲಿಟ್ಟುಕೊಂಡು ಏನು ಮಾಡಬೇಕು? 
- ಎನ್‌.ಎಸ್‌. ರಮಾಕಾಂತ್‌, ಘನತ್ಯಾಜ್ಯ ನಿರ್ವಹಣೆಯ ತಜ್ಞರ ಸಮಿತಿ ಸದಸ್ಯ

ಮೂಲದಲ್ಲಿ ಕಸ ಸಂಗ್ರಹಣೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಸೋಲುತ್ತಿರುವುದಂತೂ ನಿಜ. ಫ್ಲೆಕ್ಸ್‌ ತೆರವುಗೊಳಿಸುವಂತೆ ಹೈಕೋರ್ಟ್‌ ಬಿಬಿಎಂಪಿಯನ್ನು ತರಾಟೆಗೆ ತೆಗದುಕೊಂಡಾಗ ರಾತ್ರೋರಾತ್ರಿ ಫ್ಲೆಕ್ಸ್‌ಗಳ ತೆರವು ಕಾರ್ಯಾಚರಣೆ ನಡೆದಿತ್ತು. ಅದೇ ರೀತಿ ರಸ್ತೆ ಗುಂಡಿ ಮುಚ್ಚಲೂ ಬಿಬಿಎಂಪಿಗೆ ಹೈಕೋರ್ಟ್‌ನಿಂದಲೇ ತೀರ್ಥ ಬರಬೇಕಾಯಿತು. ಈಗ ಕಸದ ನಿರ್ವಹಣೆಯ ಬಗ್ಗೆಯೂ ಮತ್ತೆ ಹೈಕೋರ್ಟ್‌ ಮಧ್ಯಪ್ರವೇಶಿಸುವವರೆಗೂ ಅಧಿಕಾರಿಗಳು ಈ ವಿಷಯದಲ್ಲಿ ಗಂಭೀರವಾಗುವಂತೆ ಕಾಣುತ್ತಿಲ್ಲ. ಆದರೆ, ಬೆಂಗಳೂರಿನ ಕಸದ ಸಮಸ್ಯೆ ಫ್ಲೆಕ್ಸ್‌ ಮತ್ತು ರಸ್ತೆ ಗುಂಡಿ ಸಮಸ್ಯೆಗಿಂತಾ ಭಿನ್ನವಾದುದು. ಏಕೆಂದರೆ ಪ್ರತಿ ದಿನವೂ ಮನೆ ಮನೆಗಳಲ್ಲಿ ಕಸ ಉತ್ಪಾದನೆ ಆಗುತ್ತಲೇ ಇರುತ್ತದೆ.

ಕಸವನ್ನು ರಸ್ತೆಗೂ ಚೆಲ್ಲುವಂತಿಲ್ಲ, ಮನೆ ಮನೆಗಳಿಂದ ಕಸವೂ ಸಂಗ್ರಹವಾಗುತ್ತಿಲ್ಲ ಎಂದರೆ ನಗರದ ನಾಗರಿಕರಿಗೆ ಉಳಿದಿರುವುದು ಒಂದೇ ಆಯ್ಕೆ. ಕಸವನ್ನು ಬಿಬಿಎಂಪಿ ಕಚೇರಿಯ ಮುಂದೆ ತಂದು ಸುರಿಯುವುದು. ಹಿಂದೆ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದಾಗ ಜನ ಬಿಂದಿಗೆಗಳೊಂದಿಗೆ ಜಲಮಂಡಳಿ ಕಚೇರಿಗಳಿಗೆ ನುಗ್ಗುತ್ತಿದ್ದಂತೆ, ಕಸದಿಂದ ಸಿಟ್ಟಿಗೆದ್ದ ಜನ ಕಸದ ಬುಟ್ಟಿಗಳ ಸಮೇತ ಬಿಬಿಎಂಪಿ ಕಚೇರಿಗಳಿಗೆ ನುಗ್ಗುವ ದಿನಗಳೂ ದೂರವಿಲ್ಲ.