ಅಖ್ಲಾಕ್‌ ಪ್ರಕರಣದ ತನಿಖಾಧಿಕಾರಿ ಹತ್ಯೆ; ಕೊಲೆ ಹಿಂದಿರುವುದು ಬಜರಂಗ ದಳ?
COVER STORY

ಅಖ್ಲಾಕ್‌ ಪ್ರಕರಣದ ತನಿಖಾಧಿಕಾರಿ ಹತ್ಯೆ; ಕೊಲೆ ಹಿಂದಿರುವುದು ಬಜರಂಗ ದಳ?

ಜಾಗತಿಕ ಸುದ್ದಿಯಾಗಿದ್ದ ದಾದ್ರಿಯ ಮೊಹಮ್ಮದ್‌ ಅಖ್ಲಾಕ್‌ ಹತ್ಯೆ ಪ್ರಕರಣದ ಮೊದಲ ತನಿಖಾಧಿಕಾರಿಯೇ ಸುಬೋಧ್‌ ಕುಮಾರ್‌ ಸಿಂಗ್‌. ಅವರನ್ನು ದೊಂಬಿ ಗಲಾಟೆಯಲ್ಲಿ ಈಗ ಮುಗಿಸಲಾಗಿದೆ. ದೇಶ ಎತ್ತ ಸಾಗುತ್ತಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಇದು.

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಗೋ ಹತ್ಯೆಗೆ ಸಂಬಂಧಿಸಿದಂತೆ ನಡೆದ ಗಲಭೆಯಲ್ಲಿ ಉದ್ರಿಕ್ತರ ಗುಂಪು ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಒಬ್ಬರನ್ನು ಕೊಲೆ ಮಾಡಿದೆ. ಪ್ರತಿಯಾಗಿ ಪೊಲೀಸರ ಗುಂಡಿಗೆ ನಾಗರೀಕನೋರ್ವ ಸಾವನ್ನಪ್ಪಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ 27 ಜನರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. 60 ಅಪರಿಚಿತರ ಮೇಲೆಯೂ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದು, ನಾಲ್ಕು ಜನರನ್ನು ವಶಕ್ಕೆ ಪಡೆದಿದ್ದಾರೆ. ಗೋ ಹತ್ಯೆ ಬಗ್ಗೆ ದೂರು ನೀಡಿದ್ದ ಬಜರಂಗದಳದ ಯೋಗೇಶ್‌ರಾಜ್‌ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು ತಲೆಮರೆಸಿಕೊಂಡಿದ್ದಾರೆ. ಇನ್ನು ಗಲಭೆಯಲ್ಲಿ ಪಾಲ್ಗೊಂಡಿದ್ದ ಹೆಚ್ಚಿನವರು ಬಜರಂಗದಳಕ್ಕೆ ಸೇರಿದವರು ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

ಈ ಪ್ರಕರಣದ ತನಿಖೆಯನ್ನು ಉತ್ತರ ಪ್ರದೇಶ ಸರಕಾರ ಎಸ್ಐಟಿಗೆ ವಹಿಸಿದೆ. ಗಲಭೆ ವೇಳೆ ಸಾವಿಗೀಡಾದ ಪೊಲೀಸ್‌ ಅಧಿಕಾರಿ ಸುಬೋಧ್‌ ಕುಮಾರ್‌ ಸಿಂಗ್‌ರನ್ನು ಯಾಕೆ ಉಳಿದ ಪೊಲೀಸರು ಒಬ್ಬಂಟಿಯಾಗಿ ಬಿಟ್ಟು ತೆರಳಿದರು ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಹರಿದಾಡುತ್ತಿರುವ ವಿಡಿಯೋಗಳಲ್ಲಿ ಕಪ್ಪು ಟಾಟಾ ಸುಮೋ ವಾಹನದ ಬಾಗಿಲಿನಲ್ಲಿ ಅವರ ಹೆಣ ನೇತಾಡುತ್ತಿರುವುದು ಕಾಣಿಸಿದೆ. ಈ ವೇಳೆ ಸುತ್ತ ಮುತ್ತ ಗುಂಡು ಹಾರಿಸುತ್ತಿರುವ ಶಬ್ದವೂ ಕೇಳಿಸುತ್ತಿದೆ.

ಆರಂಭದಲ್ಲಿ ಸಿಂಗ್‌ ಕಲ್ಲು ತೂರಾಟದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ಆದರೆ ಹಣೆಗೆ ಸಮೀಪ ಅವರ ತಲೆಗೆ ಗುಂಡು ತಾಗಿದ್ದು ಇದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ವರದಿ ಹೇಳಿದೆ.

ಆಗಿದ್ದೇನು?

ಸೈನಾ ಪೊಲೀಸ್‌ ಠಾಣೆ ವ್ಯಾಪ್ತಿಗೆ ಸೇರಿದ ಚಿಂಗ್ರವತಿ ಹೊರಠಾಣೆ ಹತ್ತಿರದಲ್ಲಿದ್ದ ಅರಣ್ಯ ಪ್ರದೇಶದಲ್ಲಿ 25 ಗೋವುಗಳ ಕಳೇಬರಗಳು ಪತ್ತೆಯಾಗಿತ್ತು. ಇದರ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಸ್ಥಳೀಯ ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಈ ಬಗ್ಗೆ ವಿಚಾರಿಸಲೆಂದು ಮೂವರ ಜತೆ ಸಿಂಗ್‌ ಅಲ್ಲಿಗೆ ತೆರಳಿದ್ದರು.

ಈ ವೇಳೆ ಪೊಲೀಸರ ವಾಹನ ತಡೆದು ನೆರೆದಿದ್ದ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದಾರೆ. ಜತೆಗೆ ನಾಡ ಬಂದೂಕಿನಿಂದ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಮೊದಲ ಬಾರಿಗೆ ದುಷ್ಕರ್ಮಿಗಳು ಪೊಲೀಸ್‌ ಇನ್ಸ್‌ಪೆಕ್ಟರ್‌ ಮೇಲೆ ದಾಳಿ ನಡೆಸಿದ್ದರು. ಇದರಲ್ಲಿ ಅವರಿಗೆ ಗಾಯವಾಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಪುನಃ ದಾಳಿ ಮಾಡಿದ ಗುಂಪು ಅವರನ್ನು ಕೊಂದು ಹಾಕಿತು ಎಂದು ಕಾರು ಚಾಲಕ ರಾಮ್‌ ಅಸ್ರೆ ಹೇಳಿದ್ದಾರೆ. ನಾನು ಗುಂಪು ನೋಡಿ ಅಲ್ಲಿಂದ ಕಾಲ್ಕಿತ್ತೆ. ಸಿಂಗ್‌ ಅವರಿಗೆ ಜನರು ಏನು ಮಾಡಿದ್ದಾರೆ ಎಂದು ತಕ್ಷಣಕ್ಕೆ ತಿಳಿಯಲಿಲ್ಲ ಎಂದಿದ್ದಾರೆ.

ಸುಮಾರು 400 ಜನರು ಒಟ್ಟಾಗಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಪೊಲೀಸರು ಸ್ಥಳಕ್ಕೆ ತೆರಳುವ ವೇಳೆ ಗಲಭೆಕೋರರ ಗುಂಪು ಇನ್‌ಸ್ಪೆಕ್ಟರ್‌ ಸುತ್ತ ನೆರೆದಿತ್ತು. ನಂತರ ಗಾಳಿಯಲ್ಲಿ ಗುಂಡು ಹಾರಿಸಿ, ಲಾಠಿ ಚಾರ್ಜ್‌ ನಡೆಸಿ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡರು. ಆದರೆ ಅಷ್ಟೊತ್ತಿಗಾಗಲೇ ಸಿಂಗ್‌ ಪ್ರಾಣಪಕ್ಷಿ ಹಾರಿಹೋಗುವ ಹಂತ ತಲುಪಿತ್ತು. ಕ್ಷೀಣವಾಗಿ ಉಸಿರಾಡುತ್ತಿದ್ದ ಅವರನ್ನು ಆಸ್ಪತ್ರೆಯತ್ತ ಕೊಂಡೊಯ್ಯಲಾಯಿತಾದರೂ ಮಾರ್ಗಮಧ್ಯದಲ್ಲಿ ಅವರು ಅಸುನೀಗಿದ್ದಾರೆ.

ಉದ್ರಿಕ್ತರಿಂದ ಸೈನಾ ಪೊಲೀಸ್‌ ಠಾಣೆಗೆ ಬೆಂಕಿ.
ಉದ್ರಿಕ್ತರಿಂದ ಸೈನಾ ಪೊಲೀಸ್‌ ಠಾಣೆಗೆ ಬೆಂಕಿ.
/ಝೀನ್ಯೂಸ್‌

ಇದೇ ವೇಳೆ ಇನ್ನೊಂದು ಗುಂಪು ಸೈನಾ ಪೊಲೀಸ್‌ ಠಾಣೆಗೆ ಬೆಂಕಿ ಹಾಕಿದ್ದಲ್ಲದೆ ಅಲ್ಲಿದ್ದ ಸಿಂಗ್‌ ಅವರ ಕಾರಿಗೂ ಬೆಂಕಿ ಹಾಕಿದೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಿಂಗ್‌ ಕುಟುಂಬಕ್ಕೆ 40 ಲಕ್ಷ ರೂಪಾಯಿ ಪರಿಹಾರ ಮತ್ತು ಸರಕಾರಿ ಉದ್ಯೋಗ ನೀಡುವುದಾಗಿ ಹೇಳಿದ್ದಾರೆ.

ಯಾರು ಈ ಸುಬೋಧ್‌ ಕುಮಾರ್‌ ಸಿಂಗ್‌?

ಜಾಗತಿಕ ಸುದ್ದಿಯಾಗಿದ್ದ ದಾದ್ರಿಯ ಮೊಹಮ್ಮದ್‌ ಅಖ್ಲಾಕ್‌ ಹತ್ಯೆ ಪ್ರಕರಣದ ಮೊದಲ ತನಿಖಾಧಿಕಾರಿಯೇ ಸುಬೋಧ್‌ ಕುಮಾರ್‌ ಸಿಂಗ್‌. 2015ರ ಸೆಪ್ಟೆಂಬರ್ 28ರಂದು ಫ್ರಿಡ್ಜ್‌ನಲ್ಲಿ ದನದ ಮಾಂಸ ಇಟ್ಟಿದ್ದಾರೆ ಎಂಬ ಆರೋಪದ ಮೇಲೆ ಹಿಂದೂಗಳ ಗುಂಪೊಂದು ಅವರನ್ನು ಹತ್ಯೆ ಮಾಡಿತ್ತು. ಇದರ ತನಿಖೆ ಕೈಗೆತ್ತಿಕೊಂಡಿದ್ದ ಸಿಂಗ್‌ ಪ್ರಮುಖ ಸಾಕ್ಷ್ಯಗಳನ್ನೆಲ್ಲಾ ಕಲೆ ಹಾಕಿದ್ದರು. ನಂತರ ಅವರನ್ನು ಅಲ್ಲಿಂದ ವರ್ಗಾವಣೆ ಮಾಡಲಾಗಿತ್ತು. ಮುಂದೆ ಬೇರೊಬ್ಬರು ಅಧಿಕಾರಿ ಇವರು ಸಂಗ್ರಹಿಸಿದ ಸಾಕ್ಷ್ಯಗಳನ್ನು ಇಟ್ಟುಕೊಂಡು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು.

ತಮ್ಮ ತಂದೆಯ ಸಾವಿನ ನಂತರ ಮಾತನಾಡಿರುವ ಸಿಂಗ್‌ ಪುತ್ರ ಅಭಿಷೇಕ್‌, “ನಾನು ಉತ್ತಮ ಪ್ರಜೆಯಾಗಬೇಕು ಎಂದು ನನ್ನ ತಂದೆ ಬಯಸುತ್ತಿದ್ದರು. ಅವರು ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಹಿಂಸೆಯನ್ನು ಪ್ರಚೋದಿಸುವುವವರಲ್ಲ. ಈ ಹಿಂದೂ ಮುಸ್ಲಿಂ ವಿವಾದದಲ್ಲಿ ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ. ನಾಳೆ ಇನ್ಯಾರ ತಂದೆ ಜೀವ ಕಳೆದುಕೊಳ್ಳುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.

ಹೀಗೆ ಸಮಾಜದ ಕೋಮು ಹಿಂಸಾಚಾರದ ವಿರುದ್ಧ ನಿಂತಿದ್ದ ಅಧಿಕಾರಿಯೊಬ್ಬರನ್ನು ಅದೇ ಕೋಮುಶಕ್ತಿಗಳು ಬಲಿ ಪಡೆದಿವೆ. ಇದು ದೇಶ ಸಾಗುತ್ತಿರುವ ಹಾದಿಗೆ ಹೇಗಿದೆ ಎಂಬುದಕ್ಕೆ ಲಭ್ಯವಾಗಿರುವ ಮತ್ತೊಂದು ಸಾಕ್ಷಿ.