‘ರಿಮೋಟ್ ಕಂಟ್ರೋಲ್’ ಹಿಡಿತದಲ್ಲಿ ನ್ಯಾ. ದೀಪಕ್ ಮಿಶ್ರಾ ಇದ್ದಂತಿತ್ತು: ಏನಿದರ ಅರ್ಥ? 
COVER STORY

‘ರಿಮೋಟ್ ಕಂಟ್ರೋಲ್’ ಹಿಡಿತದಲ್ಲಿ ನ್ಯಾ. ದೀಪಕ್ ಮಿಶ್ರಾ ಇದ್ದಂತಿತ್ತು: ಏನಿದರ ಅರ್ಥ? 

“ರಾಜಕೀಯವಾಗಿ ಪಕ್ಷಪಾತಿಗಳಾಗಿರುವ ನ್ಯಾಯಮೂರ್ತಿಗಳ ಆಯ್ಕೆ ಮತ್ತು ಆಯ್ದ ಕೆಲವು ಬೆಂಚುಗಳಿಗೆ ವಿಶೇಷ ಪ್ರಕರಣಗಳನ್ನು ಹಸ್ತಾಂತರಿಸುವ ಸೂಕ್ಷ್ಮತೆಗಳು ಗ್ರಹಿಕೆಗೆ ಸಿಗುತ್ತವೆ,” - ನ್ಯಾ. ಜೋಸೆಫ್‌

ಸುಪ್ರಿಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಬಗ್ಗೆ ಅವರ ಸಹವರ್ತಿ, ನಿವೃತ್ತ ನ್ಯಾಯಮೂರ್ತಿ ಕುರಿಯನ್‌ ಜೋಸೆಫ್‌ ಸ್ಫೋಟಕ ಮಾತೊಂದನ್ನು ಬಾಯ್ಬಿಟ್ಟಿದ್ದಾರೆ. ‘ಟೈಮ್ಸ್‌ ಆಫ್‌ ಇಂಡಿಯಾ’ ಜತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, ನ್ಯಾ. ಮಿಶ್ರಾ ಅವರನ್ನು ಹೊರಗಿನಿಂದ ನಿಯಂತ್ರಿಸಲಾಗುತ್ತಿತ್ತು ಮತ್ತು ಅವರು ಪ್ರಕರಣಗಳನ್ನು ರಾಜಕೀಯ ತಾರತಮ್ಯದಿಂದ ನ್ಯಾಯಮೂರ್ತಿಗಳಿಗೆ ಹಸ್ತಾಂತರಿಸುತ್ತಿದ್ದರು ಎಂದು ನಮಗೆ ಅನಿಸಿದ್ದರಿಂದ ‘ವಿವಾದಿತ ಪತ್ರಿಕಾಗೋಷ್ಠಿ’ ನಡೆಸಬೇಕಾಯಿತು ಎಂದಿದ್ದಾರೆ.

ನಿವೃತ್ತ ನ್ಯಾ. ಜಸ್ತಿ ಚೆಲಮೇಶ್ವರ್‌, ಹಾಲಿ ಮುಖ್ಯ ನ್ಯಾ. ರಂಜನ್‌ ಗೊಗೋಯಿ ಮತ್ತು ನ್ಯಾ. ಮದನ್‌ ಬಿ. ಲೊಕೂರ್‌ ಅವರ ಜತೆ ಸೇರಿ ಪತ್ರಿಕಾಗೋಷ್ಠಿ ನಡೆಸಿದ ಹಿನ್ನೆಲೆಯ ಬಗ್ಗೆ ಅವರು ಇದೇ ವೇಳೆ ಮಾತನಾಡಿದ್ದಾರೆ. “ಕೆಲವು ನ್ಯಾಯಮೂರ್ತಿಗಳ ಪೀಠಗಳಿಗೆ ಪ್ರಕರಣಗಳನ್ನು ಹಸ್ತಾಂತರಿಸುವಾಗ ಸುಪ್ರಿಂ ಕೋರ್ಟ್‌ನಲ್ಲಿ ಹೊರಗಿನ ಪ್ರಭಾವಗಳು ಕೆಲಸ ಮಾಡುತ್ತಿದ್ದವು ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. ಸುಪ್ರಿಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳಿಗೆ ನೇಮಿಸಲಾಗುತ್ತಿದ್ದ ನ್ಯಾಯಮೂರ್ತಿಗಳ ನೇಮಕದಲ್ಲೂ ಈ ರೀತಿಯ ನಿದರ್ಶನಗಳಿವೆ,” ಎಂದಿದ್ದಾರೆ.

“ರಾಜಕೀಯವಾಗಿ ಪಕ್ಷಪಾತಿಗಳಾಗಿರುವ ನ್ಯಾಯಮೂರ್ತಿಗಳ ಆಯ್ಕೆ ಮತ್ತು ಆಯ್ದ ಕೆಲವು ಬೆಂಚುಗಳಿಗೆ ವಿಶೇಷವಾಗಿ ಪ್ರಕರಣಗಳನ್ನು ಹಸ್ತಾಂತರಿಸುವ ಸೂಕ್ಷ್ಮತೆಗಳು ಗ್ರಹಿಕೆಗೆ ಸಿಗುತ್ತವೆ,” ಎಂದು ನ್ಯಾ. ಜೋಸೆಫ್‌ ವಿವರಿಸಿದ್ದಾರೆ. ನಮಗೆ ಸಿಜೆಐ ಅವರನ್ನು ಹೊರಗಿನಿಂದ ನಿಯಂತ್ರಿಸುತ್ತಿದ್ದಾರೆ ಎಂದು ಅನಿಸಿದಾಗ ನಾವು ನಾಲ್ವರು ಅವರು ಭೇಟಿಯಾದೆವು. ಸುಪ್ರೀಂ ಕೋರ್ಟ್‌ನ ಸ್ವಾತಂತ್ರ್ಯ ಮತ್ತು ಗೌರವವನ್ನು ಕಾಪಾಡುವಂತೆ ಅವರಲ್ಲಿ ಕೇಳಿಕೊಂಡೆವು, ಪತ್ರ ಬರೆದೆವು. ಆದರೆ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದರಿಂದ ನಾವು ಪತ್ರಿಕಾಗೋಷ್ಠಿ ನಡೆಸಬೇಕಾಯಿತು ಎಂದು ಹೇಳಿದ್ದಾರೆ.

ಜನವರಿ 12ರಂದು ನಡೆದಿದ್ದ ಐತಿಹಾಸಿಕ ನಾಲ್ವರು ಸುಪ್ರಿಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳ ಪತ್ರಿಕಾಗೋಷ್ಠಿ.
ಜನವರಿ 12ರಂದು ನಡೆದಿದ್ದ ಐತಿಹಾಸಿಕ ನಾಲ್ವರು ಸುಪ್ರಿಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳ ಪತ್ರಿಕಾಗೋಷ್ಠಿ.
/ದಿ ವೈರ್‌

ಪತ್ರಿಕಾಗೋಷ್ಠಿಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಎಚ್‌. ಲೋಯಾ ಸಾವಿನ ಕುರಿತು ತನಿಖೆಗೆ ಆಗ್ರಹಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಅರುಣ್‌ ಮಿಶ್ರಾ ಪೀಠಕ್ಕೆ ವರ್ಗಾಯಿಸುವ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದರು. ಮುಂದೆ ಅರುಣ್‌ ಮಿಶ್ರಾ ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು.

ಇನ್ನು ಈ ಪತ್ರಿಕಾಗೋಷ್ಠಿ ನಡೆಸುವುದು ಚೆಲಮೇಶ್ವರ್‌ ಅವರ ಆಲೋಚನೆಯಾಗಿತ್ತು. ಇದಕ್ಕೆ ಉಳಿದವರೆಲ್ಲರೂ ಬೆಂಬಲಿಸಿದೆವು ಅಷ್ಟೇ ಎಂದು ಅವರು ವಿವರಿಸಿದ್ದಾರೆ.

“ಸುಪ್ರಿಂ ಕೋರ್ಟ್‌ನಲ್ಲಿ ಎಲ್ಲವೂ ಅನುಕ್ರಮದಂತೆ ಇರಲಿಲ್ಲ, ಈ ಕಾರಣಕ್ಕೆ ನಾವು ಇದನ್ನು ಸಿಜೆಐ ಅವರ ಗಮನಕ್ಕೆ ತರಲು ಯತ್ನಿಸಿದೆವು. ಎಲ್ಲವೂ ಅನುಕ್ರಮದಲ್ಲಿ ಇಲ್ಲ, ಇದನ್ನು ಸರಿದಾರಿಗೆ ತರಲು ನೀವು ಕ್ರಮ ಕೈಗೊಒಳ್ಳಬೇಕು ಎಂದು ಹೇಳಿದೆವು. ಆದರೆ ನಮ್ಮ ಪ್ರಯತ್ನಗಳು ವಿಫಲವಾದವು. ಸುಪ್ರೀಂ ಕೋರ್ಟ್‌ ತನ್ನ ಸಮಚಿತ್ತತೆಯನ್ನು ಕಾಪಾಡಿಕೊಳ್ಳಬೇಕು ಎಂದು ನಾವೆಲ್ಲರೂ ನಂಬುತ್ತೇವೆ. ಮುಕ್ತ ನ್ಯಾಯಾಂಗವಿಲ್ಲದೆ ಪ್ರಜಾಪ್ರಭುತ್ವವು ಬದುಕುಳಿಯುವುದಿಲ್ಲ,” ಎಂದವರು ತಿಳಿಸಿದ್ದಾರೆ.

ಸಂದರ್ಶನದಲ್ಲಿ ನ್ಯಾಯಮೂರ್ತಿಗಳ ಆಯ್ಕೆಯಲ್ಲಿ ಅಲ್ಪಸಂಖ್ಯಾತರ ಪರಿಗಣನೆ ಮತ್ತು ಅರ್ಹತೆಯ ಬಗ್ಗೆಯೂ ಅವರು ಮಾತುಗಳನ್ನಾಡಿದ್ದಾರೆ. ಯಾರೇ ಆಗಲಿ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾಗಿ ವರ್ಷಗಟ್ಟಲೆ ಕೆಲಸ ಮಾಡಿದರೆ ಅವರು ಸಮುದಾಯ, ಧರ್ಮ, ಸಂಸ್ಕೃತಿ ಎಲ್ಲಾ ರೀತಿಯ ತಾರತಮ್ಯಗಳಿಂದ ಹೊರ ಬರುತ್ತಾರೆ. ಅವರ ಗುರಿ ನ್ಯಾಯ ಮಾತ್ರವೇ ಆಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ವಿವಿಧ ಸಮುದಾಯಗಳು, ಸಂಸ್ಕೃತಿ ಮತ್ತು ಧರ್ಮಕ್ಕೆ ಸೇರಿದವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಾತಿನಿಧ್ಯ ನೀಡಬೇಕಾಗುತ್ತದೆ ಎಂದು ನ್ಯಾ. ಜೋಸೆಫ್‌ ಪ್ರತಿಪಾದಿಸಿದ್ದಾರೆ. ಬಡವರು ಮತ್ತು ತುಳಿತಕ್ಕೊಳಗಾದ ಸಮುದಾಯದವರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಸಂವಿಧಾನದಲ್ಲೂ ಇದಕ್ಕೆ ಅವಕಾಶವಿದೆ. ನಾನು ಇದನ್ನು ಸಾಂವಿಧಾನಿಕ ಸಹಾನುಭೂತಿ ಎಂದು ಕರೆಯುತ್ತೇನೆ. ಯಾವುದೇ ಪ್ರಕರಣ ವಿಚಾರಣೆಯನ್ನು ನಿರ್ಧರಿಸುವಾಗ ಮತ್ತು ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವಾಗ ಈ ಸಹಾನುಭೂತಿ ಇರಬೇಕು ಎಂದವರು ಮನಬಿಚ್ಚಿ ಮಾತನಾಡಿದ್ದಾರೆ.

ನ್ಯಾ. ಜೋಸೆಫ್‌ ಮಾತು ಮುಗಿಸುತ್ತಿದ್ದಂತೆ ನ್ಯಾಯಾಂಗ ವಲಯದಲ್ಲಿ ಅವರ ಮಾತುಗಳೀಗ ಚರ್ಚೆಗೆ ಗ್ರಾಸವಾಗಿವೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನೆ ಹೊರಗಿನ ಶಕ್ತಿಗಳು ನಿಯಂತ್ರಿಸುತ್ತಿದ್ದವು ಎಂಬುದು ವಿವಾದದ ಸ್ವರೂಪ ಪಡೆದುಕೊಂಡಿದೆ. ಆದರೆ ಇಲ್ಲಿ ನಿಯಂತ್ರಿಸುತ್ತಿದ್ದವರು ಯಾರು ಎಂಬುದನ್ನು ಅವರು ಮಾತ್ರ ಬಿಡಿಸಿ ಹೇಳಿಲ್ಲ, ಅಷ್ಟೆ.